

| ಪರಶುರಾಮ ಭಾಸಗಿ ವಿಜಯಪುರ
ಬೇಸಿಗೆಯಲ್ಲಿ ಎಲ್ಲರಿಗೂ ಬಹುಬೇಗ ನೆನಪಾಗುವುದು ನಿಂಬೆ. ಒಂದು ಲೋಟ ತಣ್ಣನೆಯ ಲಿಂಬೆ ಪಾನಕ ಹೀರಿದರೆ ಒಂಥರಾ ನೆಮ್ಮದಿ, ದೇಹಾರೋಗ್ಯಕ್ಕೂ ಹಿತ. ಆದರೆ, ಸದ್ಯ ಉತ್ತಮ ಬೆಲೆಯಲ್ಲಿ ಮಾರಾಟವಾಗುತ್ತಿರುವ ಲಿಂಬೆಗೆ ಇದೇ ರೀತಿ ಭವಿಷ್ಯದಲ್ಲೂ ಬೆಲೆ ಸಿಗುವ ನಂಬಿಕೆ ಇಲ್ಲ. ನೀರಿನ ಸೌಲಭ್ಯವಿಲ್ಲದೆ ಬೆಳೆಗಳು ಒಣಗುತ್ತಿದ್ದು ಉತ್ಪನ್ನ ಕುಂಠಿತಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿ ರೈತರ ನೆರವಿಗೆ ಧಾವಿಸಬೇಕಿದ್ದ ಇಂಡಿಯಲ್ಲಿ 2017ರಲ್ಲಿ ಸ್ಥಾಪಿತಗೊಂಡ ‘ನಿಂಬೆ ಅಭಿವೃದ್ಧಿ ಮಂಡಳಿ’ ಕೈಚೆಲ್ಲಿ ಕುಳಿತಿದೆ. ಕಾರಣ ರೈತರಿಗೆ ವರವಾಗಬೇಕಿದ್ದ ನಿಂಬೆ ಮಂಡಳಿಯೇ ಸಂಕಷ್ಟದಲ್ಲಿದ್ದು ಕಾಯಕಲ್ಪಕ್ಕೆ ಕಾದು ಕುಳಿತಿದೆ. ರಾಜ್ಯದಲ್ಲಿ 12,357 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಇದರಲ್ಲಿ ವಿಜಯಪುರ ಜಿಲ್ಲೆಯೊಂದರಲ್ಲೇ ಶೇ.58 (6814 ಹೆಕ್ಟೇರ್) ನಿಂಬೆ ಕೃಷಿ ಮಾಡಲಾಗುತ್ತಿದೆ. ಇಂಡಿ ತಾಲೂಕಿನಲ್ಲೇ 3994 ಹೆಕ್ಟೇರ್ ಪ್ರದೇಶದಲ್ಲಿ ನಿಂಬೆ ಬೆಳೆಯಲಾಗುತ್ತಿದೆ. ಇತ್ತೀಚಿನ ದಿನಗಳಲ್ಲಿ ನಿಂಬೆಗೆ ವಿದೇಶಗಳಲ್ಲಿ ಬೇಡಿಕೆ ಹೆಚ್ಚಾಗಿದೆ. ತೋಟಗಾರಿಕೆ ಇಲಾಖೆ ಮಾಹಿತಿ ಪ್ರಕಾರ ರಾಜ್ಯದಲ್ಲಿ ವಾರ್ಷಿಕ 2,74,814 ಟನ್ ನಿಂಬೆ ಉತ್ಪಾದನೆಯಾಗುತ್ತಿದೆ. ಪ್ರಸ್ತುತ ನಿಂಬೆ ಧಾರಣೆ ಒಂದು ಡಾಗ್ಗೆ (1000 ಹಣ್ಣಿನ ಒಂದು ಚೀಲ) 700-800 ರೂ. ಮಾರಾಟಗೊಳ್ಳುತ್ತಿದೆ. ಇಂಥ ಸಂದರ್ಭದಲ್ಲಿಯೇ ನೀರಿನ ಸಮಸ್ಯೆಯಿಂದ ಬೆಳೆ ಕುಂಠಿತಗೊಳ್ಳುತ್ತಿದೆ. ರೈತರಿಗೆ ನೆರವಾಗಬೇಕಿದ್ದ ಮಂಡಳಿ ಇದ್ದೂ ಇಲ್ಲದಂತಾಗಿದೆ. ಕಳೆದ ಐದು ವರ್ಷಗಳಿಂದ ಇಂಡಿ ಮಿನಿ ವಿಧಾನಸೌಧದಲ್ಲೇ ಕಾರ್ಯನಿರ್ವಹಿಸುತ್ತಿರುವ ಮಂಡಳಿಗೆ ತನ್ನದೇ ಆದ ಸ್ವಂತ ಕಟ್ಟಡವಿಲ್ಲ. ಸರ್ಕಾರ ಅನುದಾನ ನೀಡಿದರೂ ಸಮರ್ಪಕವಾಗಿ ಬಳಸಿಕೊಳ್ಳಲಾಗಿಲ್ಲ. ಸಕಾಲಕ್ಕೆ ಸಭೆಗಳಾದರೂ ನಿರ್ಣಯಗಳು ಮಾತ್ರ ಅನುಷ್ಟಾನಗೊಂಡಿಲ್ಲ. ಸಿಬ್ಬಂದಿ ಸಮರ್ಪಕವಾಗಿಲ್ಲ. ಹೀಗೆ ಸಾಕಷ್ಟು ಇಲ್ಲಗಳ ನಡುವೆಯೇ ಮಂಡಳಿ ಕಾರ್ಯಾಚರಿಸುತ್ತಿದೆ.
ಕಟ್ಟಡಕ್ಕಾಗಿ ಪ್ರಸ್ತಾವನೆ ಸಲ್ಲಿಕೆ: ಇಂಡಿ ಪಟ್ಟಣದ ವಸಂತ ನಗರ ಬಡಾವಣೆ ಸರ್ವೆ ನಂ. 529/1ರಲ್ಲಿ 3.13 ಎಕರೆ ಜಮೀನು ಗುರುತಿಸಲಾಗಿದ್ದು ಕಂದಾಯ ಇಲಾಖೆಯಿಂದ ಇನ್ನೂ ಹಸ್ತಾಂತರಗೊಂಡಿಲ್ಲ. ಜಿಲ್ಲಾಧಿಕಾರಿಗಳು 2022 ಫೆ. 22ರಂದು ಜಮೀನು ಹಸ್ತಾಂತರಕ್ಕೆ ಪ್ರಕಟಣೆ ಹೊರಡಿಸಿದ್ದು ಪ್ರಕ್ರಿಯೆ ಪ್ರಗತಿಯಲ್ಲಿದೆ. ಆಕ್ಷೇಪಣೆ ಸಲ್ಲಿಕೆಗೆ 30 ದಿನಗಳ ಕಾಲಾವಕಾಶ ನೀಡಲಾಗಿದ್ದು ಇದೀಗ ಅವಧಿಯೂ ಮುಗಿದಿದೆ. ಇನ್ನು ಕಟ್ಟಡ ನಿರ್ವಣಕ್ಕಾಗಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿ ಅಂದಾಜು 8 ಕೋಟಿ ರೂ.ಗಳಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಮೇ ಅಂತ್ಯಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ ಎನ್ನುತ್ತಾರೆ ವ್ಯವಸ್ಥಾಪಕ ನಿರ್ದೇಶಕ ಸಂತೋಷ ಸಪ್ಪಂಡಿ.
ನಿವೇಶನ ಹಸ್ತಾಂತರಕ್ಕೆ ಈಗಾಗಲೆ ಪ್ರಕಟಣೆ ಹೊರಡಿಸಿದ್ದು ವಾರದೊಳಗಾಗಿ ಪ್ರಕ್ರಿಯೆ ಮುಗಿಯಲಿದೆ. ಸ್ವಂತ ಕಟ್ಟಡಕ್ಕಾಗಿ ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಜೂನ್ ಅಂತ್ಯಕ್ಕೆ ಅನುಮೋದನೆ ಸಿಗುವ ಸಾಧ್ಯತೆ ಇದೆ. | ಸಂತೋಷ ಸಪ್ಪಂಡಿ ವ್ಯವಸ್ಥಾಪಕ ನಿರ್ದೇಶಕ ಹೊಸ ಬೋರ್ಡ್ ಆದ್ದರಿಂದ ಇನ್ನೂ ಸಮಸ್ಯೆಗಳಿವೆ. ಈ ಮೊದಲು ತೋಟಗಾರಿಕೆ ಸಚಿವರೇ ಮಂಡಳಿ ಅಧ್ಯಕ್ಷರಾಗಿದ್ದರು. ಇದೀಗ ಅಂದರೆ 2021ರಿಂದ ನಾನು ಅಧ್ಯಕ್ಷನಾಗಿದ್ದು, ಸಾಕಷ್ಟು ಕೆಲಸ ಮಾಡುತ್ತಿದ್ದೇವೆ. ಕಟ್ಟಡ, ಸಿಬ್ಬಂದಿ ಕೊರತೆ ಇರುವುದು ನಿಜ. ಕರೊನಾ ಕಾರಣದಿಂದ ಅನುದಾನ ಬಳಕೆಗೆ ಸಮಸ್ಯೆಯಾಗಿರಬಹುದು. ಇನ್ನೂ ಹೆಚ್ಚಿನ ಅನುದಾನವೂ ಬೇಕಿದೆ. ಶೀಘ್ರದಲ್ಲೇ ಜಾಗೆ ಹಸ್ತಾಂತರಿಸಿ ಕಟ್ಟಡ ಕಾಮಗಾರಿ ಕೈಗೊಳ್ಳಲಾಗುವುದು. | ಅಶೋಕ ಅಲ್ಲಾಪುರ ಮಂಡಳಿ ಅಧ್ಯಕ್ಷ
ಸದ್ಭಳಕೆಯಾಗದ ಅನುದಾನ: 2017-18ನೇ ಸಾಲಿನಲ್ಲಿ ಆರಂಭಗೊಂಡ ಲೀಮಬೆ ಅಭಿವೃದ್ಧಿ ಮಂಡಳಿಗೆ ಈವರೆಗೆ 440.00 ಕೋಟಿ ರೂ.ಅನುದಾನ ಬಿಡುಗಡೆ ಮಾಡಲಾಗಿದೆ. ಇದರಲ್ಲಿ 135.68 ಕೋಟಿ ರೂ. ಮಾತ್ರ ಬಳಕೆ ಮಾಡಲಾಗಿದೆ. ಇನ್ನುಳಿದ ಅನುದಾನ ಸಮರ್ಪಕವಾಗಿ ಬಳಸದೇ ಇರಲು ಸಿಬ್ಬಂದಿ ಕೊರತೆಯೇ ಕಾರಣ ಎನ್ನಲಾಗಿದೆ.ಈವರೆಗೆ 3 ಸಾಮಾನ್ಯಸಭೆ ನಡೆಸಲಾಗಿದೆ. ಒಟ್ಟು 22 ನಿರ್ಣಯಗಳನ್ನು ಕೈಗೊಳ್ಳಲಾಗಿದೆ. ಮಂಡಳಿಗೆ ಜಮೀನು ಹಸ್ತಾಂತರಗೊಳಿಸುವ ಪ್ರಕ್ರಿಯೆ ಹೊರತುಪಡಿಸಿ ಇನ್ನುಳಿದ ಎಲ್ಲ ನಿರ್ಣಯಗಳು ಅನುಷ್ಟಾನಗೊಂಡಿವೆ. ಪ್ರಮುಖವಾಗಿ ಬೇಕಾದ ಜಮೀನು ಮತ್ತು ಕಟ್ಟಡ ನಿರ್ವಣವೇ ಕಾರ್ಯಗತಗೊಳ್ಳದಿರುವುದು ಖೇದಕರ.