ವೈರಾಣುಗಳ ಹಾವಳಿ ತಡೆಯ ನಡಾವಳಿ

Virus (1)
Published on
ವರ್ಷಂಪ್ರತಿ ಒಂದಲ್ಲ ಒಂದು ಬಗೆಯ ವೈರಾಣು ಜ್ವರಗಳು ಬಾಧಿಸುತ್ತಲೇ ಇರುತ್ತವೆ. ಸಾಮಾನ್ಯ ಶೀತಜ್ವರವು ಒಂದೆಡೆಯಾದರೆ ಡೆಂಘೀ ಜ್ವರ, ನಿಫಾ ಜ್ವರಗಳು ಜನರಲ್ಲಿ ಭೀತಿಯನ್ನು ಉಂಟು ಮಾಡುತ್ತವೆ. ಪ್ರಮಾಣ ಕಡಿಮೆಯೇ ಆದರೂ ಸಾವನ್ನು ತಂದೊಡ್ಡುವ ಸಂಭವ ಇರುವುದರಿಂದ ಡೆಂಘೀ ಜ್ವರಕ್ಕೂ ಮನುಷ್ಯರು ಹೆದರುತ್ತಾರೆ. ನಿಫಾ ಜ್ವರ ತೀರಾ ಬೆರಳೆಣಿಕೆಯ ಜನರಲ್ಲಷ್ಟೇ ಕಾಣಿಸಿಕೊಂಡರೂ ಒಬ್ಬರಿಂದ ಇನ್ನೊಬ್ಬರಿಗೆ ವೇಗವಾಗಿ ಹರಡುತ್ತ ಮರಣ ಪ್ರಮಾಣ ಪ್ರತಿಶತ ಐವತ್ತಕ್ಕಿಂತಲೂ ಹೆಚ್ಚಿರುವುದರಿಂದ ಯಾರಿಗೇ ಆದರೂ ಹೆದರಿಕೆ ಆಗುವುದು ಸಹಜ.

ನಮ್ಮ ವಾತಾವರಣದಲ್ಲೇ ಲಕ್ಷಾಂತರ ನಮೂನೆಯ ವೈರಾಣುಗಳು ಯಾವುದೇ ಉಪಟಳವನ್ನು ಮಾಡದೆಯೆ ಸ್ಥಿತವಾಗಿರುತ್ತವೆ. ಅವುಗಳಲ್ಲಿ ಯಾವುದೋ ಒಂದು ಕ್ರಿಯಾಶೀಲವಾಗಿ ಅನೇಕ ಜನರಿಗೆ ಹರಡಿ ಸಾಮಾನ್ಯ ಶೀತಜ್ವರವನ್ನು ಉಂಟುಮಾಡುತ್ತವೆ. ಇವುಗಳಿಂದ ವಿದೇಶಗಳಲ್ಲಿ ಜೀವಹಾನಿ ಆಗá-ವುದಿದ್ದರೂ ಭಾರತದಲ್ಲಿ ಆಗುವುದಿಲ್ಲ! ದೇಶದ ಜನರು ಪ್ರಾಕೃತಿಕವಾಗಿ ಇವುಗಳನ್ನು ಹೆಚ್ಚು ಸಾಮರ್ಥ್ಯದಿಂದ ಎದುರಿಸುವ ಶಕ್ತಿ ಪಡೆದಿರá-ವುದರಿಂದ ಆರೇಳು ದಿನಗಳ ಕಾಲ ಜ್ವರ, ಶೀತ, ಕೆಮ್ಮುಗಳು ತೊಂದರೆ ನೀಡಿ ಹಾಗೆಯೇ ಸುಮ್ಮನಾಗುತ್ತವೆ. ಜನರಲ್ಲಿ ಸಾಮೂಹಿಕ ರೋಗ ನಿರೋಧಕ ಶಕ್ತಿ ಬೆಳೆಯುತ್ತಿದ್ದಂತೆ ಈ ವೈರಾಣುಗಳು ಮಾಯ ವಾಗಿ ಬಿಡುತ್ತವೆ. ಮುಂದಿನ ವರ್ಷ ಬೇರೆಯದೇ ವೈರಾಣು ಕ್ರಿಯಾಶೀಲವಾಗುತ್ತದೆ. ಪ್ರತಿವರ್ಷವೂ ಬೇರೆಯದೇ ವಿಧದ ವೈರಾಣು ಕಾರ್ಯಪ್ರವೃತ್ತ ಆಗುವುದರಿಂದ ಪ್ರತಿರೋಧದ ಶಕ್ತಿ ಮನುಷ್ಯರಲ್ಲಿ ಮೊದಲೇ ಸಿದ್ಧವಾಗಿ ಇರುವುದಿಲ್ಲ. ಸಾಮಾನ್ಯ ಶೀತಜ್ವರಕ್ಕೆ ತೆಗೆದುಕೊಂಡ ಲಸಿಕೆಗಳೂ ವೈರಾಣುಗಳ ರೂಪಾಂತರದ ಕಾರಣದಿಂದ ದಾರಿತಪ್ಪಿ ಬಿಡುತ್ತವೆ. ಬಹಳಷ್ಟು ಜನರಿಗೆ ಹರಡಿ ಮತ್ತೆ ಜನಸಮೂಹದಲ್ಲಿ ರೋಗನಿರೋಧಕ ಶಕ್ತಿ ವ್ಯಾಪಕವಾಗಿ ಚುರುಕುಗೊಂಡಾಕ್ಷಣ ವೈರಾಣುಗಳು ಪರಾರಿಯಾಗುತ್ತವೆ. ಹಾಗಿದ್ದರೆ ವೈರಾಣುಗಳ ಹಾವಳಿಯಿಂದ ತಪ್ಪಿಸಿಕೊಳ್ಳುವುದು ಸಾಧ್ಯವಿಲ್ಲವೇ?

ಮನೆಯಲ್ಲಿ ತಾಯಿಗೆ ಸಾಮಾನ್ಯ ಶೀತಜ್ವರ ಬಂದಿದೆ ಎಂದಿಟ್ಟುಕೊಳ್ಳಿ. ಎಷ್ಟೇ ದೂರವಿಟ್ಟರೂ ತಾಯಿಯ ಜೊತೆಯಲ್ಲಿಯೇ ದಿನಪೂರ್ತಿ ಕಳೆಯವ ನಾಲ್ಕು ವರ್ಷದ ಮಗುವಿಗೆ ಜ್ವರವೇ ಹರಡದಿರುವುದನ್ನು ಅನೇಕ ಸಂದರ್ಭಗಳಲ್ಲಿ ಕಾಣುತ್ತೇವೆ. ಅಂತೆಯೇ ಪ್ರಬಲವಾಗಿ ಹರಡುವ ಗುಣವಿದ್ದರೂ ಮನೆಯಲ್ಲಿರುವ ಎಲ್ಲರಿಗೂ ಇಂತಹ ವೈರಾಣು ಜ್ವರಗಳು ಬರುವುದಿಲ್ಲ ಎಂಬ ವಾಸ್ತವವೂ ನಮ್ಮ ಕಣ್ಮುಂದಿದೆ. ಇದಕ್ಕೆ ತದ್ವಿರುದ್ಧವಾಗಿ ಸೂಕ್ಷ್ಮ ವೈರಾಣುಗಳಿಂದ ರಕ್ಷಿಸಿಕೊಳ್ಳಲು ದೇಹಪೂರ್ತಿ ಮುಚ್ಚಿಕೊಳ್ಳುವ ಪೋಷಾಕು ಧರಿಸಿದ ವೈದ್ಯರು ಹಾಗೂ ದಾದಿಯರ ದೇಹದೊಳಕ್ಕೆ ವೈರಾಣುಗಳು ಅದುಹೇಗೋ ನುಸುಳಿ ಅವರು ರೋಗಪೀಡಿತರಾಗಿ ಸಾವನ್ನಪ್ಪಿದ ಘಟನೆಗಳನ್ನು ಕೋವಿಡ್ ಸಮಯದಲ್ಲಿ ನೋಡಿದ್ದೇವೆ. ತಾಯಿಯ ಜೊತೆಯಲ್ಲೇ ಇದ್ದರೂ ಮಗುವಿಗೆ ಬರಲಿಲ್ಲ, ಸಂಪೂರ್ಣವಾಗಿ ದೇಹವನ್ನು ಮುಚ್ಚಿಟ್ಟರೂ ವೈದ್ಯಸಿಬ್ಬಂದಿಗೆ ಜ್ವರ ಬಂತು ಎಂಬ ಎರಡು ವಿಚಾರಗಳನ್ನು ವಿಮಶಿಸಿದಾಗ ರೋಗ ಉಂಟುಮಾಡುವ ವೈರಾಣುಗಳನ್ನು ಹೇಗೆ ತಡೆಯಬಹುದು ಎಂಬ ಚಿಕಿತ್ಸಾಮಾರ್ಗ ಗೋಚರವಾಗುತ್ತದೆ.

ನಮ್ಮ ಪರಿಸರದಲ್ಲಿ ಅನೇಕ ಬಗೆಯ ರೋಗಕಾರಕ ಸೂಕ್ಷ್ಮ ಜೀವಿಗಳು ಇದ್ದೇ ಇರುತ್ತವೆ. ತೆಂಗಿನಕಾಯಿಯನ್ನು ಒಡೆದಿಟ್ಟರೆ ಕಣ್ಣಿಗೆ ಕಾಣಿಸದ ಫಂಗಸ್ ಒಂದೆರಡು ದಿನದಲ್ಲಿ ಅದರಲ್ಲಿ ದಟ್ಟವಾಗಿ ತುಂಬಿ ಬರಿಗಣ್ಣಿಗೇ ದರ್ಶನ ನೀಡುತ್ತವೆ! ಇದೇ ವಾತಾವರಣದಿಂದ ಉಸಿರಾಡುವ ನಮ್ಮ ದೇಹದೊಳಕ್ಕೆ ಅನೇಕ ರೋಗಕಾರಕ ಜೀವಾಣುಗಳೂ ಪ್ರವೇಶಿಸುತ್ತವೆ. ಶರೀರ ಪ್ರಬಲವಾಗಿದ್ದರೆ ಬಂದ ದಾರಿಗೆ ಸುಂಕವಿಲ್ಲ ಎಂಬ ಮಾತಿನಂತೆ ಹಾಗೆಯೇ ಹೊರಬರುತ್ತವೆ. ಕೆಲವೊಮ್ಮೆ ಸೋಂಕಿನಿಂದಾಗಿ ಹಲ್ಲುಗಳನ್ನು ಕಳೆದುಕೊಂಡ ನಾಗರಹಾವು ಹೆಡೆಯೆತ್ತಿ ಬುಸುಗುಟ್ಟಿದರೆ ಜನರೆಲ್ಲ ಓಡಿಹೋಗುವಂತೆ ನಮ್ಮ ಶರೀರದ ಶಕ್ತಿಗುಂದಿದ್ದರೂ ಮನಸ್ಸು ಸದೃಡವಾಗಿದ್ದರೆ ವೈರಾಣುಗಳು ಕಾಲ್ತೆಗೆಯಬೇಕಾಗುತ್ತದೆ.

ನಮ್ಮ ದೇಹವನ್ನು ಬಲಯುತವಾಗಿ ಇಟ್ಟುಕೊಳ್ಳಲು ಆಯುರ್ವೆದವು ಹಲವಾರು ಕ್ರಮಗಳನ್ನು ತಿಳಿಹೇಳಿದೆ. ಸ್ವಚ್ಛ ಪರಿಸರ, ಸ್ವಚ್ಛ ಶರೀರ ಅತಿಮುಖ್ಯ. ರೋಗನಿರೋಧಕ ಶಕ್ತಿಯನ್ನು ಕಡಿಮೆಗೊಳಿಸುವ ಎಣ್ಣೆಯಲ್ಲಿ ಕರಿದ ತಿಂಡಿಪದಾರ್ಥ, ಜಂಕ್​ಫುಡ್, ಅತಿಶೀತಲ ಆಹಾರ ಪಾನೀಯ, ಎಂದೋ ಸಿದ್ಧಪಡಿಸಿ ಪೊಟ್ಟಣಗಳಲ್ಲಿ ತುಂಬಿಟ್ಟ ಆಹಾರ ವಸ್ತು, ಕೃತಕವಾಗಿ ಸಂರಕ್ಷಿಸಿಟ್ಟ ಹಣ್ಣು ತರಕಾರಿ, ರಾಸಾಯನಿಕಗಳಿಂದ ತುಂಬಿರುವ ಆಹಾರಧಾನ್ಯ ಹಾಗೂ ಬೇರೆಯದೇ ದೇಶದ ಜನರಿಗಾಗಿರುವ ನಮ್ಮದಲ್ಲದ ಪಿಜ್ಜಾ ಬರ್ಗರ್​ನಂತಹ ಆಹಾರಗಳನ್ನು ಬಿಡಬೇಕಾದುದು ಮೊದಲ ದೃಢ ಹೆಜ್ಜೆ. ಉತ್ತಮವಾದ ದಿನಚರ್ಯು, ಋತುಚರ್ಯು, ಆಹಾರ-ವಿಹಾರ, ಆಚಾರ-ವಿಚಾರಗಳೂ ಅತ್ಯವಶ್ಯಕ. ಅಡುಗೆಕೋಣೆಯಲ್ಲಿರುವ ಬಹುತೇಕ ಸಾಂಬಾರ ಪದಾರ್ಥಗಳಿಗೆ ಶೀತ, ಜ್ವರ, ವೈರಾಣುನಾಶಕ ಗುಣಗಳಿದ್ದು ಅಡುಗೆ ಮನೆಯಲ್ಲಿ ಅವುಗಳಿಗೆ ತುಸು ಹೆಚ್ಚಿನ ಪ್ರಾಧಾನ್ಯ ನೀಡಬೇಕು. ಅವುಗಳನ್ನು ಬಳಸಿ ಸಾರು, ಸಾಂಬಾರು, ತಂಬುಳಿಗಳನ್ನು ಮಾಡಬಹುದು. ಕೆಲಕಾಲ ಕಾಯಿಸಿ ಆರಿಸಿದ ನೀರು ಕುಡಿಯುವುದೂ ಪ್ರಯೋಜನಕಾರಿ. ನೆಲ್ಲಿಕಾಯಿಯನ್ನು ವಿವಿಧ ರೂಪದಲ್ಲಿ ಬಳಸಬಹುದು. ಅಮೃತಬಳ್ಳಿ, ನೆಲನೆಲ್ಲಿ ಮುಂತಾದ ಹಲವಾರು ಸಸ್ಯಗಳಿಗೆ ವೈರಾಣುನಾಶಕ ಗುಣಧರ್ಮಗಳಿದ್ದು ಸಸ್ಯೌಷಧಿಗಳೇ ಜ್ವರದ ಕಾಲದಲ್ಲಿ ಜನರಿಗೆ ಜೀವಾಮೃತ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net