ಸ್ನೇಹದ ಕಡಲು, ಪ್ರೀತಿಯ ಒಡಲು...

Friendship day
Published on
ಸ್ನೇಹದ ಜಾದುವೇ ಅದು. ಎಷ್ಟು ವರ್ಷಗಳಾದರೂ ಅದು ಹಳತಾಗುವುದಿಲ್ಲ; ನವನವೀನ. ಗೆಳೆತನಕ್ಕೆ ಜಾತಿಮತದ ಹಂಗಿಲ್ಲ. ನೋವಿರಲಿ, ನಲಿವಿರಲಿ ಸ್ನೇಹಿತರು ಮಾತ್ರ ಹೃದಯದ ಆಳವನ್ನು ಆರಿಯಬಲ್ಲರು. ಫ್ರೆಂಡ್​ಶಿಪ್ ಡೇ ಅಂಗವಾಗಿ, ಸ್ನೇಹದ ಸ್ಮರಣೀಯ ಕ್ಷಣಗಳ ಬಗ್ಗೆ ಬರೆಯಿರಿ ಎಂಬ ಆಹ್ವಾನಕ್ಕೆ ಓದುಗರಿಂದ ವ್ಯಾಪಕ ಸ್ಪಂದನೆ ವ್ಯಕ್ತವಾಗಿದೆ. ಸ್ನೇಹದ ಮಹತ್ವಕ್ಕೆ ಕನ್ನಡಿ ಹಿಡಿಯುವ ಕೆಲ ಬರಹಗಳು ಇಲ್ಲಿವೆ.

ದೇವದಾಸನಂತಾಗಿದ್ದೆ.. ಅಂಧಕಾರದಿಂದ ಹೊರತಂದ..

ನನ್ನ ಕುಚಿಕು ಗೆಳೆಯ ಕೃಷ್ಣ ಮತ್ತು ನನ್ನ ಸ್ನೇಹ ಆ ಯಾವ ಕೃಷ್ಣ ಸುಧಾಮನಿಗೂ ಕಡಿಮೆ ಇಲ್ಲದಂತಿದೆ. ಫೇಸ್​ಬುಕ್ ಮೂಲಕ ಪರಿಚಯವಾಗಿ ನನ್ನೆದೆಯಲ್ಲಿ ಒಲವಿನ ಹೂವು ಅರಳಿಸಿದ ದೂರದ ಬೆಂಗಳೂರಿನ ಹುಡುಗಿಯನ್ನು ಅವಳಿದ್ದಲ್ಲಿಗೆ ಹೋಗಿ ನಾನು ಮೊಟ್ಟಮೊದಲು ಭೇಟಿ ಮಾಡಿದ್ದು ಈ ನನ್ನ ಗೆಳೆಯ ಕೊಟ್ಟ (ಬಸ್ ಚಾರ್ಜ್) ದುಡ್ಡಿನಿಂದಲೇ ಎಂಬುದನ್ನು ಹೇಗೆ ಮರೆಯಲಿ. ಪ್ರೀತಿಗೆ ಜಾತಿ ಅಡ್ಡಿಯಾಗಿ ಆಕೆಯನ್ನು ನಾನು ಮದುವೆಯಾಗದೆ, ಆಕೆ ಮತ್ತೊಬ್ಬನ ಕೈ ಹಿಡಿದು ಹೋದಾಗ ಅಕ್ಷರಶಃ ದೇವದಾಸನಂತಾಗಿ ಹೋಗಿದ್ದ ಸಂದರ್ಭದಲ್ಲಿ ಆ ಗಾಢ ಅಂಧಕಾರದಿಂದ ನನ್ನನ್ನು ಹೊರತಂದು ಜ್ಞಾನೋದಯವನ್ನುಂಟು ಮಾಡಿದ.

| ಮಂಜುನಾಥ್ ಎಸ್ ಕಟ್ಟಿಮನಿ ವಿಜಯಪುರ

ನಿನ್ನ ದೋಸ್ತಿಯೇ ದೊಡ್ಡ ಆಸ್ತಿ...

ಗೆಳೆತನವೇ ಜೀವನದ ಸಿರಿತನ. ಸಂಕಷ್ಟದಲ್ಲಿ ಸಹಾಯಹಸ್ತ ಚಾಚಿ, ಹುಮ್ಮಸ್ಸಿನಿಂದ ಹುರಿದುಂಬಿಸಿ, ರಕ್ತಸಂಬಂಧಕ್ಕಿಂತ ಮಿಗಿಲಾಗಿ ಹಂಚಿಕೊಂಡಿರುವೆನು ಬಾಳಿನ ಸುಖದುಃಖದ ದಿನಗಳನ್ನು. ಗೆಳೆಯ ಬಂದು ಹೋಗೊಮ್ಮೆ ನನ್ನೂರಿಗೆ. ಮಕ್ಕಳಂತೆ ಕುಣಿದಾಡೋಣ ಮತ್ತೊಮ್ಮೆ ಹೊಲ ಗದ್ದೆಗಳಲ್ಲಿ. ನನ್ನಿಂದ ದೂರವಿದ್ದರೇನಂತೆ ನಿನ್ನ ನೆನಪೇ ನನ್ನ ದೈನಂದಿನ ಜೀವನದ ಜೀವಾಳ. ನಿನ್ನ ಜೊತೆಗಿನ ನಗು-ಅಳುವಿನ ಕ್ಷಣಗಳು, ಕಿಸೆಯಲ್ಲಿ ಕಾಸಿಲ್ಲದೆ ಊರೆಲ್ಲ ಸುತ್ತಾಡಿದ ನೆನಪುಗಳು, ಒಂದೇ ತಟ್ಟೆಯಲ್ಲಿ ಉಂಡ ಊಟದ ರುಚಿ ನಾ ಹೇಗೆ ಮರೆಯಲಿ ಗೆಳೆಯ. ನಾ ದಾರಿ ತಪ್ಪಿದಾಗ ನೀ ಬೈದು ತೋರಿಸಿದೆ ಮಾರ್ಗ, ಸಹಾಯವಾಯಿತು ನನಗೆ ಜೀವನದ ಸಾಧನೆಗೆ. ನಮ್ಮ ಸ್ನೇಹ ಅದ್ಭುತವಾದ ಭಾವನೆಗಳ ಸಮ್ಮಿಲನ, ಒಬ್ಬರನ್ನೊಬ್ಬರ ಮನಸ್ಸನ್ನು ಅರ್ಥ ಮಾಡಿಕೊಂಡ ಭವ್ಯ ಸಂಬಂಧ, ನಿರೀಕ್ಷೆ ಮೀರಿದ ಶಾಶ್ವತ ಸ್ನೇಹ ಗೆಳೆಯ ನಮ್ಮದು. ಹಣವೆಷ್ಟೇ ಸಂಪಾದಿಸಿದರೂ ನಿನ್ನ ಜೊತೆ ಕಳೆದ ಕ್ಷಣಗಳ ಬೆಲೆ ಬಹು ಅಮೂಲ್ಯ. ನಿನ್ನ ದೋಸ್ತಿ ನನ್ನ ಜೀವನದ ಅತಿ ದೊಡ್ಡ ಆಸ್ತಿ.

| ವಿನೋದಕುಮಾರ ಹಿರಿಯ ವೈಜ್ಞಾನಿಕ ಅಧಿಕಾರಿ, ಹೈದರಾಬಾದ್

ನೆನಪು ಮಾತ್ರ...

ನನ್ನ ಗೆಳೆಯ ಎನ್.ಸ್ವಾಮಿ ವಿಶಾಲ ಮನಸ್ಸಿನ ಸಖ.1990ರ ಏಪ್ರಿಲ್ ತಿಂಗಳಲ್ಲಿ ಬೆಂಗಳೂರಿನಲ್ಲಿ ನಡೆಯುತ್ತಿದ್ದ ಪಿಯುಸಿ ಪರೀಕ್ಷಾ ಮೌಲ್ಯಮಾಪನಕ್ಕೆ ತೆರಳಿದ್ದ ನಾನು ಆಕಸ್ಮಿಕವಾಗಿ ಬಿದ್ದು ಎರಡೂ ಕಾಲುಗಳನ್ನು ಮುರಿದುಕೊಂಡೆ. ಸುಮಾರಾಗಿ ನಡೆದಾಡುವಂತಾಗಲು ಮೂರು ತಿಂಗಳ ಆರೈಕೆ ಬೇಕಾಯಿತು. ಈ ಅವಧಿಯಲ್ಲಿ ತನ್ನ ಮನೆಯ ಕೆಲಸಕಾರ್ಯಗಳನ್ನು ಬದಿಗೊತ್ತಿ ಸದಾ ನನ್ನೊಂದಿಗಿದ್ದು ನನ್ನ ನೋವಿನ ಕ್ಷಣಗಳನ್ನು ಹಗುರಗೊಳಿಸಿದ ಮಿತ್ರನನ್ನು ಮರೆಯಲಾದೀತೆ? ನಾನು ಹೋಗುತ್ತಿದ್ದ ಎಲ್ಲಾ ಪ್ರವಾಸಗಳಲ್ಲೂ ನನ್ನೊಂದಿಗೆ ಬಂದು ಖುಷಿಪಡುತ್ತಿದ್ದ. ತೀರಾ ಆದರ್ಶವಾದಿ, ಪ್ರಾಮಾಣಿಕ ಮತ್ತು ನೇರ ನಡೆನುಡಿಯ ಗೆಳೆಯ ತನ್ನ ವೈಯಕ್ತಿಕ ನೋವುಗಳ ಕಡೆಗೆ ಗಮನ ನೀಡದೆ ಪರರ ನೋವಿಗೆ ಸದಾ ಸ್ಪಂದಿಸುತ್ತಿದ್ದ. ತನ್ನ ಅನಾರೋಗ್ಯವನ್ನು ನಗುನಗುತ್ತಲೇ ಮುಚ್ಚಿಟ್ಟ.ಈಗ ಅವನು ನನಗೆ ನೆನಪು ಮಾತ್ರ.

| ಮೋದೂರು ಮಹೇಶಾರಾಧ್ಯ ಹುಣಸೂರು

ಕಷ್ಟಕ್ಕಾಗುವವನೇ ನಿಜಸ್ನೇಹಿತ

ಹತ್ತು ವರ್ಷಗಳ ಹಿಂದೆ ಸುತ್ತೂರಿನ ಹಾಸ್ಟೆಲ್​ನಲ್ಲಿ ವಾಸವಿದ್ದಾಗ ನನಗೆ ಆರೋಗ್ಯ ಹದಗೆಟ್ಟು ಸಯಾಟಿಕ್ ಕಾಲು ನೋವಿನ ಸಮಸ್ಯೆಯಿಂದ ಬಳಲುತ್ತಿದ್ದೆ. ನಡೆಯುವುದಕ್ಕೂ ಆಗುತ್ತಿರಲಿಲ್ಲ. ಬದುಕೇ ಬೇಡವೆನಿಸಿತು. ಆಗ ನೆರವಿಗೆ ಬಂದದ್ದು ಕಷ್ಟಕ್ಕೆ ಸ್ಪಂದಿಸಿದ್ದು ಆತ್ಮೀಯ ಸ್ನೇಹಿತನಾದ ಎಚ್.ಡಿ. ಮಹೇಶ್. ಅವನೊಂದಿಗೆ ಅನಾರೋಗ್ಯದ ಸ್ಥಿತಿ ಮತ್ತು ಮಾನಸಿಕ ತೊಳಲಾಟ ಹಂಚಿಕೊಂಡೆ. ಕಷ್ಟ ಎಲ್ಲರಿಗೂ ಬರುತ್ತದೆ, ಅದನ್ನು ಧೈರ್ಯದಿಂದ ಎದುರಿಸಿ, ಛಲದಿಂದ ಬದುಕಬೇಕು ಎಂದು ಹೇಳಿದ. ಮೂರು ಬಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಸ್ವಂತ ಹಣದಿಂದ ಚಿಕಿತ್ಸೆ ಕೊಡಿಸಿದ. ನಮ್ಮ ಮನೆಗೆ ಬಂದು ಕುಟುಂಬಸ್ಥರಿಗೂ ಮಾತನಾಡಿ ನನ್ನ ಕಷ್ಟ ಸುಖಗಳಿಗೆ ಸ್ಪಂದಿಸಿದ.

| ಪರಶಿವಮೂರ್ತಿ ಎನ್.ಪಿ., ಸುತ್ತೂರು

ವೈರಿಗಳು ಗೆಳತಿಯರಾದೆವು...

ನನ್ನ ನಲ್ಮೆಯ ಗೆಳತಿಯ ಹೆಸರು ನೇತ್ರಾ. ನಾವು ಚಿಕ್ಕಂದಿನಿಂದಲೂ ಜೊತೆಯಾಗಿ ಬೆಳೆದ್ವಿ. ಆದರೆ, ನಾವು ಅವಾಗ ಅಷ್ಟು ಪ್ರೀತಿಯಿಂದ ಕೂಡಿರಲಿಲ್ಲ. ತಮಾಷೆ ಏನೆಂದರೆ, ನಾವು ಆಗ ಇಬ್ಬರೂ ವೈರಿಗಳು. ಕಾಲ ನಮ್ಮನ್ನು ಹೇಗೆ ಒಂದಾಗಿಸಿತು ಅಂದ್ರೆ ಒಬ್ಬ ಗುರುಗಳ ಸತ್ಸಂಗದ ಪ್ರಭಾವವು ನಮ್ಮ ಬದುಕಿನ ಯೋಚನೆ ಹಾಗೂ ಕಲ್ಪನೆಗಳ ದಿಕ್ಕನ್ನೇ ಬದಲಿಸಿತು. ನನ್ನ ಪ್ರತಿ ಕಷ್ಟ - ಸುಖಗಳಲ್ಲಿ ಹೆಗಲಿಗೆ ಹೆಗಲನ್ನು ಕೊಟ್ಟವಳು ಈ ಗೆಳತಿ. ನನ್ನ ಜೀವನದ ಪ್ರತಿ ಅಮೃತ ಗಳಿಗೆಯಲ್ಲಿ ಜೊತೆಯಾಗಿದ್ದವಳು. ನನ್ನ ಬದುಕಿನ ನೇತ್ರಗಳನ್ನು ಸರಿಯಾಗಿ ತೆರೆಸಿದವಳು ಈ ನನ್ನ ನೇತ್ರಾ.

| ನಂದಿನಿ

ಬಾಲ್ಯದ ಸವಿನೆನಪು

ಬಾಲ್ಯಮಿತ್ರರಾದ ನಾವು ನಿವೃತ್ತಿ ನಂತರ ಈಗ ಬೆಂಗಳೂರಿನಲ್ಲಿ ವಾಸ ಮಾಡುತ್ತಿದ್ದೇವೆ. 7ನೇ ತರಗತಿಯಿಂದ ನಾವು ಬಾಲ್ಯಮಿತ್ರರು. ನಾಲ್ವರು ಸರ್ಕಾರಿ ಕೆಲಸದಿಂದ ನಿವೃತ್ತರಾಗಿದ್ದೇವೆ. ಒಬ್ಬ ಮಿತ್ರ ವೈದ್ಯವೃತ್ತಿ ಮಾಡುತ್ತಿದ್ದಾನೆ. ತಿಂಗಳಿಗೊಮ್ಮೆ ಭೇಟಿಯಾಗಿ ಕುಶಲೋಪರಿ ವಿಚಾರಿಸಿಕೊಂಡು ನಮ್ಮ ಬಾಲ್ಯ ದಿನಗಳ ಸವಿನೆನಪುಗಳನ್ನು ಮೆಲುಕು ಹಾಕುತ್ತಾ ಬಾಂಧವ್ಯ ಮುಂದುವರಿಸಿದ್ದೇವೆ. ಬೇರೆ ಬೇರೆ ಊರುಗಳಲ್ಲಿ ಸೇವೆ ಸಲ್ಲಿಸಿ 45 ವರುಷಗಳ ನಂತರವೂ ನಮ್ಮ ಪ್ರೀತಿ,ವಿಶ್ವಾಸ ಕಡಿಮೆಯಾಗಿಲ್ಲ.

| ಮಲ್ಲಿಕಾರ್ಜುನ ಭಾವಿಕಟ್ಟಿ

ಯೇ ದೋಸ್ತಿ... ಹಮ್ ನಹಿ ತೋಡೆಂಗೆ..

ಯಾವ ಕ್ಷಣಗಳನ್ನು ನೆನಪು ಮಾಡೋದು? ಎಲ್ಲಾರೂ ಒಟ್ಟಿಗೇ ತಮಿಳುನಾಡು ಹೊರಟಾಗ ಬೇರೆ ಯಾವುದೋ ರೈಲನ್ನು ಹತ್ತಿ ಉತ್ತರಪ್ರದೇಶಕ್ಕೆ ಹೋಗಿದ್ದನ್ನು ಹೇಳೋದಾ? ಮತ್ತೊಬ್ಬನಿಗೆ ಅಪಘಾತ ಸಂಭವಿಸಿದಾಗ ಅವನನ್ನು ಉಳಿಸಿಕೊಳ್ಳಲು ಪಟ್ಟ ಕಷ್ಟವನ್ನು ನೆನಪು ಮಾಡೋದಾ? ನಾನು ಮತ್ತು ಸ್ನೇಹಿತ ಬೈಕ್​ನಲ್ಲಿ ಹೋಗುವಾಗ ಕಾಲೇಜು ಹುಡುಗಿಯನ್ನು ನೋಡುತ್ತಾ ಬ್ಯಾರಿಕೇಡ್​ಗೆ ಡಿಕ್ಕಿ ಹೊಡೆದು ನಾವು ಬಿದ್ದು ನಮ್ಮ ಹಿಂದೆ ಬರುತ್ತಿದ್ದ ಅಜ್ಜನನ್ನು ಬೀಳಿಸಿದ್ದ ಕಥೆ ಹೇಳೋದಾ? ಯಾವುದೆಂದು ಹೇಳಲಿ? ಕಷ್ಟ ಅಂತ ಬಂದಾಗ ಒಬ್ಬರಿಗೊಬ್ಬರು ಜೊತೆಯಾಗಿ ನಿಲ್ಲುತ್ತೇವೆ. ಎವರಿಡೇ ಈಸ್ ಫ್ರೆಂಡ್​ಶಿಪ್ ಡೇ. ಏ ದೋಸ್ತಿ ಹಮ್ ನಹಿ ತೋಡೆಂಗೆ...

| ಮಿಥುನ್ ಐರೋಡಿ

ಅಹಂಕಾರದಿಂದ ಆಪತ್ತು

ಅಂದು ನಾನು ಹಾಸ್ಟೆಲ್​ನಲ್ಲಿ ತಿಂಡಿ ತಂದಿಟ್ಟು ಹೊರಗಡೆ ಹೋದ ಸಂದರ್ಭ. ಒಬ್ಬ ಗೆಳೆಯ ತಿಂಡಿಯನ್ನು ನನ್ನ ಅನುಮತಿ ಇಲ್ಲದೆ ತಿಂದ. ಈ ಒಂದೇ ಕಾರಣಕ್ಕೆ ನಾನು ಅವನ ಭಾವನೆಯನ್ನು ಅರಿಯದೆ ಅಹಂಕಾರದಿಂದ ಮಾತನಾಡಿ, ತಿಂಡಿಯ ದುಡ್ಡು ಪಡೆದುಕೊಂಡೆ. ಆ ಕ್ಷಣವೇ ಸ್ನೇಹಕ್ಕೆ ಅಲ್ಪವಿರಾಮ ಬಿತ್ತು. ಈ ವಿಷಯ ಊಟದ ಸಭೆಯಲ್ಲಿ ಒಂದಾಗುವ ಗೆಳೆಯರೊಂದಿಗೆ ಚರ್ಚೆಯಾದಾಗ, ಅವನು ನನ್ನೊಂದಿಗಿದ್ದಾಗ ಮಾಡಿದ ಸಹಾಯ, ಮಾರ್ಗದರ್ಶನದ ನೆನಪುಗಳು ಅಹಂಕಾರದ ಗೋಡೆಗೆ ಅಪ್ಪಳಿಸಿ ಪಶ್ಚಾತ್ತಾಪಗೊಂಡೆ.

| ಶಿವರಾಜ ಎಂ.ಕೆ. ಗದಗ

ಮುಳುಗುವಾಗ ರಕ್ಷಿಸಿದಳು

ನಾನು ಕೇಂಬ್ರಿಜ್ ಪಬ್ಲಿಕ್ ಶಾಲೆಯಲ್ಲಿ ಓದುತ್ತಿರುವಾಗ ದೀಕ್ಷಿತ, ಹರ್ಷಿತಾ, ಐಶ್ವರ್ಯ ಎಂಬ ಸ್ನೇಹಿತರು ಇದ್ದರು. ನನಗೆ ಯಾವುದೇ ಕಷ್ಟವಿದ್ದರೂ ಅವರು ಕೂಡಲೇ ಪರಿಹರಿಸಿ ಬಿಡುತ್ತಿದ್ದರು. ಪ್ರವಾಸ ಹೋಗಿದ್ದಾಗ ಒಂದು ಸಲ ನಾನು ನೀರಲ್ಲಿ ಮುಳುಗಿ ಹೋದ ಸಂದರ್ಭದಲ್ಲಿ ಸ್ನೇಹಿತೆ ಐಶೂ ಬಂದು ನನನ್ನು ಉಳಿಸಿದ್ದಳು. ನಾನು ಐಶೂ ಇಬ್ಬರೂ ತುಂಬಾ ತುಂಟಾಟ ಮಾಡುತ್ತಿದ್ದೆವು. ರಚನಾ, ಐಶ್ವರ್ಯ, ದೀಕ್ಷಿತ ಹಾಗೂ ಹರ್ಷಿತಾ ಯಾವಾಗಲೂ ಒಟ್ಟಿಗೆ ಇರುತ್ತೇವೆ ಎಂದು ಇಡೀ ಶಾಲೆ ಹೇಳುತ್ತಿತ್ತು.

| ರಚನಾ ರಮೇಶ್

ಕುಚಿಕು ಗೆಳೆಯ

ನನಗಿಂತ ಒಂದು ವರ್ಷ ಮೊದಲೇ ಈ ಭುವಿಗೆ ಬಂದು ನನ್ನಿಂದ ಒಂದು ತರಗತಿ ಮುಂದಿದ್ದರೂ ನನ್ನ ಶೈಕ್ಷಣಿಕ ಬೆಳವಣಿಗೆಯಲ್ಲಿ ಮಹತ್ತರ ಪಾತ್ರ ವಹಿಸಿ, ನನ್ನ ಪ್ರತಿ ಹೆಜ್ಜೆಯಲ್ಲಿ, ನೋವು ನಲಿವಿನಲ್ಲಿ ಭಾಗಿಯಾಗಿ ಸಂಕಷ್ಟಗಳಲ್ಲಿ ಕೈ ಹಿಡಿದು ನಡೆಸಿದ ನನ್ನ ಬಾಲ್ಯದ ಆಪ್ತಮಿತ್ರ ಪ್ರಕಾಶ್. ಸರ್ಕಾರಿ ಕೆಲಸದ ನಿಮಿತ್ತ ವರ್ಗಾವಣೆ. ಎಲ್ಲೇ ಇರಲಿ ಹೇಗೇ ಇರಲಿ ವಾರಕ್ಕೆರಡು ಬಾರಿ ಫೋನಾಯಿಸಿ ವಿಚಾರಿಸುತ್ತಿದ್ದ. ತಾನು ತಡವಾಗಿ ಮದುವೆಯಾದರೂ ನನ್ನ ಮಗಳ ಹುಟ್ಟು ಹಬ್ಬದಂದು ಪ್ರತಿ ವರ್ಷ ದುಬಾರಿ ಬೆಲೆಯ ಬಟ್ಟೆ ಉಡುಗೊರೆ ನೀಡಿ ಸಂಭ್ರಮಿಸುತ್ತಿದ್ದ. ನನ್ನ ನಗುವಿನ ಹಿಂದಿನ ನೋವನ್ನು, ಮೌನದ ಹಿಂದಿನ ಮಾತನ್ನು, ಮುನಿಸಿನ ಹಿಂದಿನ ಕಕ್ಕುಲಾತಿಯನ್ನು ಕ್ಷಣಮಾತ್ರದಲ್ಲಿ ಅರಿತು ಸ್ಪಂದಿಸುತ್ತಿದ್ದ. ನನ್ನ ಅಭ್ಯುದಯದ ಮಜಲುಗಳಲ್ಲಿ ಈ ಕುಚಿಕು ಗೆಳೆಯನ ಪಾತ್ರ ಅತ್ಯಧಿಕ.

| ಕೆ.ಶ್ರೀನಿವಾಸ ರಾವ್. ಹರಪನಹಳ್ಳಿ

ಮರುಮಿಲನ

ಒಂದನೇ ತರಗತಿಯಿಂದ ಸಹಪಾಠಿಯಾಗಿದ್ದ ಭಾನುಮತಿ ವಿಶಾಲ ಮನೋಭಾವದ ಗೆಳತಿ. ಪಿಯುಸಿ ನಂತರ ಸಂಸಾರದ ಜವಾಬ್ದಾರಿಗಳಲ್ಲಿ ಕಳೆದು ಹೋಗಿದ್ದೆವು. 15 ವರ್ಷಗಳ ನಂತರ ಜಯನಗರದಲ್ಲಿ ನಡೆದುಕೊಂಡು ಹೋಗುತ್ತಿದ್ದಾಗ ಎದುರಾದಳು. ಪೋಸ್ಟ್ ಆಫೀಸಿನಲ್ಲಿ ವೃತ್ತಿನಿರತಳಾಗಿದ್ದಳು. ಮರುಜೀವಗೊಂಡ ಹಳೆಯ ಸ್ನೇಹ ಎರಡು ಕುಟುಂಬಗಳ ಸ್ನೇಹವಾಗಿ ಮುಂದುವರಿಯಿತು. ಪ್ರೀತಿ, ವಿಶ್ವಾಸ ಮರು ಹುಟ್ಟು ಪಡೆದುಕೊಂಡವು. ಅವಳ ಸಹನಾಶೀಲ ಪ್ರವೃತ್ತಿ ನನ್ನ ಮೇಲೆ ಅಪಾರ ಪ್ರಭಾವ ಬೀರಿದೆ.

| ಡಾ. ಉಮಾಮಹೇಶ್ವರಿ ಎನ್.

ಬೆಟ್ಟದಲ್ಲಿ ಹೊತ್ತುಕೊಂಡೇ ಸಾಗಿದರು...

ಜನವರಿಯಲ್ಲಿ ಉತ್ತರಾಖಂಡದ ಕೇದಾರ ಕಂಠ ಬೆಟ್ಟದ ಚಾರಣಕ್ಕೆ 4 ಸ್ನೇಹಿತರೊಡನೆ ಹೋಗಿದ್ದೆ. 6 ದಿನದ ಚಾರಣದಲ್ಲಿ ಮಂಜುಗಡ್ಡೆ ನಡುವೆ ಬೆಟ್ಟ ಏರುವುದು ಸುಲಭವಾಗಿರಲಿಲ್ಲ. 3 ದಿನದಿಂದ ಸರಿಯಾಗಿ ನಿದ್ದೆ, ಊಟವಿಲ್ಲದೆ ನನಗೆ ತುಂಬಾ ಸುಸ್ತು ಆಗಿತ್ತು. ಹುಮ್ಮಸ್ಸಿನಿಂದ ಬೆಟ್ಟ ಹತ್ತಿದ ನನಗೆ 3ನೇದಿನಕ್ಕೆ ಆರೋಗ್ಯದಲ್ಲಿ ಏರುಪೇರು ಆಗಿತ್ತು. 18 ಜನರ ಗುಂಪಿನಲ್ಲಿ ಎಲ್ಲರೂ ಮುಂದೆ ಸಾಗಿದ್ದರು. ನನ್ನ ಸಲುವಾಗಿ ಗೆಳೆಯರು ನಿಧಾನವಾಗಿ ಸಾಗುತ್ತಾ ಹಿಂದೆ ಉಳಿದು ದಾರಿ ತಪ್ಪಿದ್ದೆವು. ಅಂತಹ ಸಮಯದಲ್ಲೂ ಸ್ನೇಹಿತರು ನನ್ನನ್ನು ಹೊತ್ತುಕೊಂಡು 12 ತಾಸು ವಿಳಂಬವಾಗಿ ಗೈಡ್ ಸಹಾಯದಿಂದ ತಲುಪಬೇಕಾದ ಸ್ಥಳ ಮುಟ್ಟಿದರು. ಸ್ನೇಹಿತರಾದ ವಿನಯ್ ಜಡಿ, ಸಚಿನ್, ಶಿವಕುಮಾರ್, ಮನೀಷ್​ಗೆ ಚಿರಋಣಿ.

| ಆಕಾಶ ಚನ್ನಗೌಡರ

ತ್ರಿವರ್ಣ ಸಂಗಮ

ರಕ್ತ ಹಂಚಿಕೊಂಡು ಹುಟ್ಟದಿದ್ದರೂ ಒಂದೇ ತಾಯಿಯ ಮಕ್ಕಳಿಗಿಂತ ಮೀರಿದ ಬಾಂಧವ್ಯ ನಮ್ಮದು. ನನ್ನ ಕ್ರಿಶ್ಚಿಯನ್ ಗೆಳೆಯನ ಹೆಸರು ಸ್ಟೀಫನ್ ಸಿರೋಮನಿ. ಅವನನ್ನು ನಾನು ಕರೆಯುವುದು ‘ಮಿಟ್ಟು’ ಎಂದು. ಕ್ರಿಸ್ಮಸ್​ನಲ್ಲಿ ಶುಭಾಶಯ ಕೋರದೆ ಇರುವುದಿಲ್ಲ. ಕಷ್ಟ ಬಂದರೆ ಇವನ ಹಿತನುಡಿಗಳು ನನಗೆ ಸ್ಪೂರ್ತಿ. ದಾನ, ಧರ್ಮದಲ್ಲಿ ಮುಂದು. ನಮ್ಮಿಬ್ಬರ ಒಡನಾಟ ನೋಡಿ ಇತರ ಸ್ನೇಹಿತರು ‘ಲವರ್ಸ್’ ಅಂತ ಕರೀತಾರೆ. ನನ್ನ ಮುಸ್ಲಿಂ ಗೆಳೆಯನ ಹೆಸರು ಇಲಿಯಾಸ್. ಪ್ರೀತಿಯಿಂದ ‘ಅಂಜುಮ್ ಎಂದು ಕರೆಯುತ್ತೇನೆ. ಇವನು ಮೊದಲು ನನಗೆ ಮಾಲೀಕ. ನನ್ನ ಜೀವನ ಉತ್ತುಂಗಕ್ಕೆ ಏರಲು ಇವನೇ ಕಾರಣ. ರಂಜಾನ್, ಬಕ್ರೀದ್​ನಲ್ಲಿ ತನ್ನ ಜೊತೆ ನನಗೂ ಹೊಸಬಟ್ಟೆ ಖರೀದಿಸುವ ಗೆಳೆಯ. ನನಗೆ ಕಷ್ಟ ಬಂದರೆ ಸಮಾಧಾನಪಡಿಸುವ ಹಿತೈಷಿ. ಭಾರತದ ರಾಷ್ಟ್ರಧ್ವಜದ ಹಾಗೆ ನಾನು ಹಿಂದೂ ಕೇಸರಿ, ಸ್ಟೀಫನ್ ಕ್ರಿಶ್ಚಿಯನ್ ಶ್ವೇತವರ್ಣ, ಇಲಿಯಾಸ್ ಮುಸ್ಲಿಂ ಹಸಿರು ಬಣ್ಣ. ಮೂವರೂ ಸೇರಿದರೆ ಆಕಾಶದಲ್ಲಿ ಹಾರಾಡುತ್ತಿರುತ್ತೇವೆ....

| ಮಾರುತಿ ದೊಡ್ಡಮನಿ ಹುಬ್ಬಳ್ಳಿ

ಸುಮಿತ್ರಾ

ಶೆಟಗೇರಿಯಲ್ಲಿ ಎಸ್​ಎಸ್​ಎಲ್​ಸಿ ಮುಗಿಸಿ ಕಾಲೇಜು ಶಿಕ್ಷಣಕ್ಕಾಗಿ ಧಾರವಾಡದ ಅತ್ತೆ ಮನೆ ಸೇರಿದ ನನಗೆ ಎಲ್ಲವೂ ಹೊಸತು. ಕರಾವಳಿಯ ಅಂಕೋಲೆಗೂ ಧಾರವಾಡದ ಜನಜೀವನಕ್ಕೂ ಇರುವ ಅಂತರ ನನ್ನನ್ನು ಏಕಾಂಗಿಯನ್ನಾಗಿ ಮಾಡಿದಾಗ ಕರ್ನಾಟಕ ಕಾಲೇಜಿನಲ್ಲಿ ಪಿಯುಸಿ ಪ್ರಥಮ ವರ್ಷದಲ್ಲಿ ಗೆಳತಿಯಾಗಿ ಸಿಕ್ಕವಳೇ ಸುಮಿತ್ರಾ ಖೈರೆ. ಮಿತ್ರತ್ವಕ್ಕೆ ಆದರ್ಶಪ್ರಾಯಳಾಗಿದ್ದಳು. ಅವಳು ನನ್ನಂತೆ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡ ನೋವು ನಮ್ಮನ್ನು ಇನ್ನೂ ಹತ್ತಿರವಾಗಿಸಿತು. ನಾನು ಸ್ನಾತಕೋತ್ತರ ಪದವಿಯಲ್ಲಿ ಪ್ರಥಮ ಸ್ಥಾನ ಪಡೆದು ಚಿನ್ನದ ಪದಕ ಪಡೆದಾಗ ನನಗಿಂತಲೂ ಹೆಚ್ಚು ಸಂತಸಪಟ್ಟವಳು ಸುಮಿತ್ರಾ! ನನ್ನ ನೋವು ನಲಿವು ಎಲ್ಲದರಲ್ಲೂ ಒಂದಾಗಿರುವ ಸುಮಿತ್ರಾ ಈಗ ಮದುವೆಯಾಗಿ ಮುಂಬೈ ಸೇರಿದರೆ, ನಾನು ಮದುವೆಯಾಗಿ ದೆಹಲಿ ಸೇರಿದರೂ ಮಾನಸಿಕವಾಗಿ ಹತ್ತಿರವಾಗಿಯೇ ಇದ್ದೇವೆ.

| ನವ್ಯ ಶಿವದೇವ ಮೊಗಟಾ ನವದೆಹಲಿ

ವಾದ- ಪ್ರತಿವಾದದಲ್ಲಿ ಗೆಲುವು ಸ್ನೇಹಕ್ಕೆ!

ಜ್ಯೋತಿಷಿ, ಧಾರವಾಡ ಆಕಾಶವಾಣಿ ಕಾರ್ಯಕ್ರಮ ನಿರೂಪಕ ನವೀನಶಾಸ್ತ್ರೀ ಹಾಗೂ ವಿಜ್ಞಾನ ಬರಹಗಾರ ಹಾಗೂ ಶಿಕ್ಷಕ ಎಲ್.ಪಿ. ಕುಲಕರ್ಣಿ ಅವರ ಒಡನಾಟ ಸಿಕ್ಕಿದ್ದೆ ಬಹಳ ಲೇಟಾಗಿ. ಆದರೂ ಫೋನ್ ಹಾಗೂ ಸಾಮಾಜಿಕ ಜಾಲತಾಣದ ಮೂಲಕ ಆದ ಪರಿಚಯ ಇಪ್ಪತ್ತು ವರ್ಷದ ಹಳೆಯ ಸ್ನೇಹದಂತಿದೆ. ಎಲ್.ಪಿ. ಕುಲಕರ್ಣಿ ಬಾದಾಮಿಯವರು. ನವೀನ ಶಾಸ್ತ್ರಿ ಧಾರವಾಡದವರು. ನನ್ನದು ಧಾರವಾಡ ಜಿಲ್ಲೆಯ ಭೋಗೇನಾಗರಕೊಪ್ಪ ಗ್ರಾಮ. ಬರಹ, ಸಾಹಿತ್ಯ, ಅಧ್ಯಾತ್ಮ, ಪ್ರಚಲಿತ ವಿದ್ಯಮಾನಗಳ ಚರ್ಚೆ ಮೂಲಕ ವಾದ- ಪ್ರತಿವಾದ ಮಾಡಿದರೂ ಸ್ನೇಹವೇ ಗೆಲ್ಲುವಂತೆ ನೋಡಿಕೊಳ್ಳುತ್ತೇವೆ. ಫೋನ್​ನಲ್ಲಿ ಮಾತಾಡುವಾಗ ಶಾಸ್ತ್ರೀಗಳು ಹರಿ ಓಂ ಎಂದರೆ, ಕುಲಕರ್ಣಿ ಹರ ಓಂ ಎನ್ನುತ್ತಿದ್ದರು. ಒಂದು ಸಲ ಇವೆರಡೂ ಬೇಡ ಹರಿಹರಬ್ರಹ್ಮಾದಿ ಓಂ ಎನ್ನೋಣ ಎಂದಾಗ ಎಲ್ಲರೂ ಸೂಕ್ತ ಸಲಹೆ ಎಂದರು. ಸಮಾನ ಚಿಂತನೆ, ಒಳ್ಳೆಯ ಚರ್ಚೆ, ಯಾರೇ ಏನೇ ಸಂತಸ ಸುದ್ದಿ ಹಂಚಿಕೊಂಡರೂ ಅದು ತಮ್ಮದೇ ಸಂತಸ ಎಂದುಕೊಳ್ಳುವ ಸ್ನೇಹಮಯಿ ಮನಸುಗಳು ದೊರಕಿದ್ದೇ ಸೌಭಾಗ್ಯ.

| ಹನುಮಂತ ಮ.ದೇಶಕುಲಕರ್ಣಿ ಭೋಗೇನಾಗರಕೊಪ್ಪ

ಮಿತ್ರರೇ ಆಸರೆ

ಒಮ್ಮೆ ನಾನು ಹೃದಯ ಕಾಯಿಲೆಯಿಂದಾಗಿ ಆಸ್ಪತ್ರೆಗೆ ಸೇರಿದ್ದೆ. ನನ್ನ ಆರೈಕೆಗೆ ಪತ್ನಿ, ಮಗ ಬಿಟ್ರೆ ಎಲ್ಲದಕ್ಕೂ ಮಿತ್ರರೇ ಆಸರೆ. ನನ್ನ ಆರೈಕೆಯ ವೆಚ್ಚದ ಹೊಣೆ ಹೊತ್ತು ಮರುಜನ್ಮ ನೀಡಿದ ಆಪತ್ಭಾಂಧವರು. ಆ ಸಮಯದಲ್ಲೇ ನನ್ನ ಮಗನಿಗೆ ಬಿ.ಇ. ಪ್ರವೇಶಕ್ಕೆ ಶುಲ್ಕ ಕಟ್ಟುವುದಿತ್ತು. ಇದನ್ನರಿತ ಮಿತ್ರರು ನಮಗೇ ಗೊತ್ತಾಗದಂತೆ ಶುಲ್ಕ ಕಟ್ಟಿದ್ದರು. ನಮ್ಮವಯಸ್ಸಿನಲ್ಲಿ ಅಜಗಜಾಂತರವಿದ್ದರೂ ಸ್ನೇಹಕ್ಕೆ ಧಕ್ಕೆಯಾಗಿಲ್ಲ. ಒಂದೇ ಕುಟುಂಬದವರೆಂಬಂತೆ ಇದ್ದೇವೆ. ಕಷ್ಟಗಳಲ್ಲಿ ಹೆಗಲಿಗೆ ಹೆಗಲು ಕೊಡುವ ಮಿತ್ರರಾದ ರಾಮಕೃಷ್ಣ -ಅರುಣರು ನನಗೆ ‘ಅಶ್ವಿನಿ ದೇವತೆ’ಗಳು. ಮತ್ಸರವಿಲ್ಲದ ಮೈತ್ರಿ ಸಂಬಂಧ ನಮ್ಮದು.

| ಜಿ.ಎಚ್. ಸಂಕಪ್ಪ ಚನ್ನಗಿರಿ

ಹೆಲ್ಪ್ ಬೇಕಾದ್ರೆ ಕಾಲ್ ಮಾಡು ಮಗಾ...

ಕೆಲ ತಿಂಗಳ ಹಿಂದಿನ ಘಟನೆ. ಪತ್ರಿಕೋದ್ಯಮದಲ್ಲಿ ಆಂತರಿಕ ತರಬೇತಿ ಪಡೆಯಲು ಬೆಂಗಳೂರೆಂಬ ಮಹಾನಗರಕ್ಕೆ ಕಾಲಿಟ್ಟೆ. ಬೆಂಗಳೂರಿನ ರಸ್ತೆಗಳು, ಜೇಡರ ಬಲೆಯಂತಹ ದಾರಿಗಳು ಯಾವುದೋ ವಿಚಿತ್ರ ಲೋಕಕ್ಕೆ ಕರೆದೊಯ್ಯುವ ಮಾರ್ಗಗಳಂತೆ ಅನ್ನಿಸಿಬಿಟ್ಟಿತು. ಅದರಲ್ಲೂ ಆಫೀಸ್​ಗೆ ಸಮಯಕ್ಕೆ ಸರಿಯಾಗಿ ಅಲ್ಲಿಗೆ ತಲುಪಬಹುದಾ? ಎನ್ನಿಸಿತು. ತಕ್ಷಣವೇ ಗೂಗಲ್ ಮ್ಯಾಪ್​ಗಿಂತ ಬೇಗ ನೆನಪಾಗಿದ್ದು, ಪಿಯುಸಿಯಲ್ಲಿ ಒಟ್ಟಿಗೆ ಕಲಿತು ಈಗ ಬೆಂಗಳೂರಿನ ಕಾಲೇಜು ಸೇರಿರುವ ಗೆಳೆಯರು. ಫೋನ್ ಮಾಡಿದೆ. ಕೆಲವೇ ನಿಮಿಷಗಳಲ್ಲಿ ಅಲ್ಲಿ ಹಾಜರಾದರು. ನನ್ನ ಕತೆ ಕೇಳಿ, ಕ್ಲಾಸ್​ಗೆ ಚಕ್ಕರ್ ಹಾಕಿ ನನಗೆ ದಾರಿ ತೋರಿಸಲು ಬಂದರು. ಆಫೀಸ್ ಎದುರು ತಂದು ಬಿಟ್ಟರು. ಕೊನೆಗೆ ’ಆಲ್ ದ ಬೆಸ್ಟ್’ ಹೇಳಿ, ಏನಾದ್ರೂ ಹೆಲ್ಪ್ ಬೇಕಾದ್ರೆ ಕಾಲ್ ಮಾಡು ಮಗಾ.. ಎನ್ನುತ್ತಾ ಅಲ್ಲಿಂದ ಕಾಲ್ಕಿತ್ತರು.

| ಸಂಜಯ್ ಚಿತ್ರದುರ್ಗ ಎಸ್​ಡಿಎಂ ಕಾಲೇಜು ಉಜಿರೆ

ಆಟೋಗ್ರಾಫ್ ಚಿತ್ರದ ಪ್ರೇರಣೆ

ನಾವು 12 ಜನ ಸ್ನೇಹಿತರು ದಾವಣಗೆರೆಯ ಕಾಟನ್ ಮಿಲ್ ಕಾಲನಿಯಲ್ಲಿ ವಾಸವಾಗಿದ್ದೆವು. ಆಗ ನಮ್ಮೆಲ್ಲರಿಗೂ 14- 15 ವರ್ಷ ವಯಸ್ಸು. ನಂತರದ ದಿನಗಳಲ್ಲಿ ವಿದ್ಯಾಭ್ಯಾಸ, ತಂದೆಯ ನಿವೃತ್ತಿ ಹೀಗೇ ಹಲವು ಕಾರಣಗಳಿಂದ ಒಬ್ಬೊಬ್ಬರು ಒಂದೊಂದು ಕಡೆ ವಾಸ ಮಾಡುತ್ತಿದ್ದೆವು. ಆಟೋಗ್ರಾಫ್ ಚಿತ್ರ ನೋಡಿ ಪ್ರೇರೇಪಿತನಾಗಿ ನಾನು ಎಲ್ಲಾ ಸ್ನೇಹಿತರನ್ನು ಒಗ್ಗೂಡಿಸಲು ಪ್ರಯತ್ನಿಸಿ ಸಫಲನಾದೆ. ನನ್ನ ಅಣ್ಣನ ಮಗನ ಮದುವೆಗೆ ಎಲ್ಲರನ್ನೂ ಪತ್ತೆ ಹಚ್ಚಿ ಆಮಂತ್ರಣ ನೀಡಿದೆ. ಸುಮಾರು 30 ವರ್ಷಗಳ ನಂತರ ಎಲ್ಲರ ಸಮ್ಮಿಲನ ಆದಾಗ ಯಾರ ಬಾಯಲ್ಲೂ ಮಾತೇ ಬರುತ್ತಿಲ್ಲ. ಈ ಅಂತರದಲ್ಲಿ ಎಲ್ಲರೂ ಒಂದೊಂದು ರೀತಿ ಬದುಕನ್ನು ಕಟ್ಟಿಕೊಂಡಿದ್ದರು. ಲಾಯರ್, ಡಾಕ್ಟರ್, ಡ್ರೖೆವರ್, ವ್ಯಾಪಾರಿ, ಮ್ಯಾಜಿಸ್ಟ್ರೇಟ್... ಹೀಗೆ ಬೇರೆ ಬೇರೆ ಉದ್ಯೋಗ ಮಾಡುತ್ತಿದ್ದೇವೆ. ಈಗ ಎಲ್ಲರೂ ಸಂಪರ್ಕದಲ್ಲಿ ಇದ್ದೇವೆ. ಕಷ್ಟ ಸುಖಗಳಲ್ಲಿ ಭಾಗಿಯಾಗುತ್ತೇವೆ. ಕನಿಷ್ಠ ವರ್ಷಕ್ಕೆ ಒಂದು ಬಾರಿ ಒಟ್ಟಿಗೆ ಕುಟುಂಬ ಸದಸ್ಯರೊಂದಿಗೆ ಸೇರಿ ಸಂಭ್ರಮಿಸುತ್ತೇವೆ.

| ತ್ಯಾಮಗೊಂಡ್ಲು ಮಂಜು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net