

ಮತ್ತೆ ಶಾಲೆಗಳು ಪ್ರಾರಂಭವಾಗಿವೆ. ಮಕ್ಕಳು ಖುಷಿಯಿಂದ ಹೊಸಾ ಯೂನಿಫಾರಂನಲ್ಲಿ ಶಾಲೆಗೆ ಹೊರಟಿದ್ದಾರೆ. ಅದನ್ನು ನೋಡುವುದೇ ಒಂದು ಚೆಲುವಾದ ಅನುಭವ. ಅವರ ಸಂಭ್ರಮ ನನ್ನನ್ನು ಎಪ್ಪತ್ತೆಂಟು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತಿದೆ.
ನಾನು ಹುಟ್ಟಿದ್ದು, ಅರೆಮಲೆನಾಡಿನ ಒಂದು ಸಣ್ಣ ಹಳ್ಳಿಯಲ್ಲಿ. ನನಗೆ ಐದು ವರ್ಷ ತುಂಬಿದಾಗ ಶಾಲೆಗೆ ಹೋಗುವ ವರಾತ ನಮ್ಮ ಅಮ್ಮನದ್ದು. ನಮ್ಮ ತಾತ ಇಷ್ಟು ಬೇಗ ಮೊಮ್ಮಗ ಶಾಲೆಗೆ ಹೋಗುವುದು ಬೇಡ. ಮಾಸ್ತರರು ಅವನನ್ನು ಹೊಡೆದರೆ ತಡೆಯುವವರು ಯಾರು? ಎಂದು ಹಠ ಮಾಡುತ್ತಾರೆ.
ನಾನಂತೂ ಶಾಲೆಗೆ ಹೋಗುವುದೇ ಸೈ ಅಂತ ಸಿದ್ಧವಾಗಿ ನಿಂತಿದ್ದೇನೆ. ಕಾರಣ ಶಾಲೆಯ ಮೇಲಿನ ಪ್ರೀತಿ ಅಲ್ಲ, ಶಾಲೆಗೆ ಹೋದರೆ ನಿನಗೆ ಕಿತ್ತಲೆ ತೊಳೆ ಪೆಪ್ಪರಮೆಂಟು ಕೊಡಿಸುತ್ತೇನೆ ಎಂದಿದ್ದಳಲ್ಲ..... ಹೆಗಲಿಗೆ ಒಂದು ಬ್ಯಾಗು, ನನಗಿಂತ ಬ್ಯಾಗೇ ದೊಡ್ಡದು. ಅದರಲ್ಲಿ ಸ್ಲೇಟು ಮತ್ತು ಕೈಚೀಲದಲ್ಲಿದ್ದ ಡಬ್ಬಿಯಲ್ಲಿ ಎಲ್ಲ ಬಣ್ಣದ ಬಳಪಗಳು...
ನಮ್ಮೂರಲ್ಲಿ ಶಾಲೆಗೆ ಪ್ರತ್ಯೇಕ ಕಟ್ಟಡ ಇರಲಿಲ್ಲ. ಹಾಳುಬಿದ್ದ ಆಸ್ಪತ್ರೆ ಕಟ್ಟಡದಲ್ಲಿ ಶಾಲೆ ನಡೆಯುತ್ತಾ ಇತ್ತು. ರಂಗಪ್ಪ ಅಂತ ಮೇಷ್ಟ್ರು, ತುಂಬಾ ಮುದ್ದಿನಿಂದ ಮಕ್ಕಳಿಗೆ ಅಕ್ಷರ ಕಲಿಸುತ್ತಿದ್ದರು. ನಾವೆಲ್ಲಾ ಕೋರಸ್ಸಲ್ಲಿ ‘ಒಂದಾ ಒಂದ್ಲೆ ಒಂದು’ ಎಂದು ಗಂಟಲು ಹರಿಯುವಂತೆ ಬೊಬ್ಬೆ ಹಾಕುತ್ತಿದ್ದೆವು. ನಾವು ಒಂದನೇ ಕ್ಲಾಸಿನ ಹುಡುಗರಿಗೆ ಉದ್ದ ಉದ್ದದ ಮಣೆಗಳು. ಒಂದು ಮಣೆಯ ಮೇಲೆ ಆರು ಜನ ಹುಡುಗರು. ಹುಡುಗಿಯರಿಗೆ ಪ್ರತ್ಯೇಕ ಮಣೆ. ಕರೀ ಹಲಗೆ ಗೋಡೆಗೆ ಒರಗಿಸಿ ಇಟ್ಟಿರುತ್ತಿದ್ದರು. ಮಾಸ್ತರರು ಇರದಿದ್ದಾಗ ಬೋರ್ಡಿನ ಹಿಂದಿನ ಜಾಗ ನಮ್ಮ ಆಟದಮನೆ ಆಗುತ್ತಾ ಇತ್ತು. ಸ್ಲೇಟನ್ನು ಗೋಡೆಗೆ ಒರಗಿಸಿಟ್ಟು ಸ್ಲೇಟಿನ ಮೇಲೆ ಬಳಪದ ತುಂಡು ಉರುಳಿಸುವುದು. ಉರುಳುರುಳುತ್ತಾ ಬಳಪ ಇನ್ನೊಬ್ಬರ ಬಳಪ ತಾಗಿದರೆ ಆ ಬಳಪ ನಾವು ಗೆದ್ದ ಹಾಗೆ! ನಮ್ಮ ಮಾಸ್ತರ ವಿಷಯ ಹೇಳಿದೆನಲ್ಲ? ಎತ್ತರದ ವ್ಯಕ್ತಿ. ಬಿಳೀ ಪಂಚೆ. ಮೇಲೆ ಪಪ್ಪಳಿ ಅಂಗಿ. ಅದರ ಮೇಲೆ ಕರೀಕೋಟು. ಮಧ್ಯಕ್ಕೆ ಚಿತಿತಲೆ ತೆಗೆದು ಬಾಚಿಕೊಂಡರೆ ತುಂಬಾ ಚೆನ್ನಾಗಿ ಕಾಣುತ್ತಿದ್ದರು. ನಮಗೆ ರಾಮಾಯಣ ಭಾರತದ ಕತೆ ಹೇಳುತ್ತಿದ್ದರು. ‘ನೀವೂ ಹೇಳಿ’ ಎಂದು ಪೋ›ತ್ಸಾಹಿಸುತ್ತಿದ್ದರು. ನಾವು ಕಾಗಕ್ಕ ಗುಬ್ಬಕ್ಕನ ಕಥೆ ಹೇಳಿದರೆ ಭೇಷ್ ಎಂದು ಬೆನ್ನುತಟ್ಟುತ್ತಿದ್ದರು.
ನಮ್ಮ ತರಗತಿಯ ಕಪ್ಪು ಹಲಗೆ ಬಣ್ಣ ಕಳೆದುಕೊಂಡು ಮಾಸ್ತರು ಬರೆದ ಅಕ್ಷರ ನಮಗೆ ಕಾಣುತ್ತಿರಲಿಲ್ಲ. ‘ಮಕ್ಕಳೇ ಸಾಯಂಕಾಲ ಎಲ್ಲಾದರೂ ತೊಂಡೆ ಸೊಪ್ಪು ಸಿಕ್ಕರೆ ತನ್ನಿ’ ಎನ್ನುವರು. ನಾನಾಗಲೇ ನಾಕನೇ ಕ್ಲಾಸಿನಲ್ಲಿದ್ದೆನಲ್ಲ! ಹಿತ್ತಲು ಹಿತ್ತಲು ಅಲೆದು ನಾವು ತೊಂಡೆ ಸೊಪ್ಪು ತರುತ್ತಿದ್ದೆವು. ಆ ಸೊಪ್ಪಿಗೆ ಇದ್ದಿಲು ಸೇರಿಸಿ ಕುಟ್ಟಿ ಗಟ್ಟಿ ರಸ ಮಾಡಿಕೊಳ್ಳುತ್ತಿದ್ದರು. ಆ ಲೇಹ್ಯವನ್ನು ಬೋರ್ಡಿಗೆ ಬಳಿಯುತ್ತಿದ್ದೆವು.
ನನಗೆ ಈಗ ಹತ್ತು ಮಗ್ಗಿಗಳು ಬಾಯಿಗೆ ಬರುತ್ತಿದ್ದವು. ಅಕ್ಷರ ಕೂಡಿಸಿ ಕೂಡಿಸಿ ಓದಿ ಮಾಸ್ತರಿಂದ ಶಭಾಷ್ಗಿರಿ ಗಿಟ್ಟಿಸುವುದು ಎಲ್ಲ ಹುಡುಗರ ಆಸೆ. ತಪ್ಪಾಗಿ ಮಗ್ಗಿ ಹೇಳಿದರೆ ಬೇರೆ ಹುಡುಗರು ನಮ್ಮ ಮೂಗು ಹಿಡಿದು ಕಪಾಳಕ್ಕೆ ಹೊಡೆಯುತ್ತಿದ್ದರು. ತುಂಬಾ ಅವಮಾನ ಆಗುತ್ತಿದ್ದುದು ಹುಡುಗಿಯರು ನಮ್ಮ ಕೆನ್ನೆಗೆ ಹೊಡೆದಾಗ. ದೇವರೇ ಹಾಗಾಗದಿರಲಿ ಎಂದು ದೇವರುಗಳನ್ನು ಬೇಡಿಕೊಳ್ಳುತ್ತಿದ್ದೆವು. ನಮ್ಮ ಕ್ಲಾಸಲ್ಲಿ ರಂಗಣ್ಣ ಅಂತ ಇದ್ದ. ಅವರ ತಂದೆ ಹನುಮಂತನ ಗುಡಿ ಪೂಜಾರಿ. ಹಾಗಾಗಿ ಹನುಮಂತನೊಂದಿಗೆ ರಂಗಣ್ಣನಿಗೆ ಬಹಳ ಸಲಿಗೆ. ಅವನು ಹೇಳಿದ ಹಾಗೆ ಹನುಮಂತ ಕೇಳುತ್ತಾನೆ ಎಂದು ನಾವು ನಂಬಿದ್ದೆವು. ‘ಅಯ್ಯಾ ರಂಗಣ್ಣ ಪರೀಕ್ಷೆಯಲ್ಲಿ ನಮಗೆ ಥಟ್ಟನೆ ಉತ್ತರ ಹೊಳೆಯುವಂತೆ ಹನುಮಪ್ಪನನ್ನು ಬೇಡಿಕೋ’ ಎಂದು ಅವನನ್ನು ಬೇಡಿಕೊಳ್ಳುತ್ತಿದ್ದೆವು. ಹನುಮಪ್ಪನ ಮಹಿಮೆ ದೊಡ್ಡದು. ಪರೀಕ್ಷೆಯಲ್ಲಿ ನಾವೆಲ್ಲಾ ಪಾಸಾದೆವು. ಫೇಲಾದವನು ನಮ್ಮ ರಂಗಣ್ಣ ಮಾತ್ರ!
ಶಾಲೆಯ ಮುಂದಿನ ಕೈದೋಟದಲ್ಲಿ ನಾವು ಹೂವಿನ ಗಿಡ, ತರಕಾರಿ ಬೆಳೆಯುತ್ತಿದ್ದೆವು. ಅದರಲ್ಲಿ ರಂಗಣ್ಣ ಪಳಗಿದವನು. ಬೀಜ ತೋರಿಸಿದರೆ ಸಾಕು ಅದು ಇಂಥದೇ ಬಳ್ಳಿಯ ಬೀಜ ಎಂದು ಅವನು ಹೇಳಬಲ್ಲವನಾಗಿದ್ದ. ಅಂಥ ರಂಗಣ್ಣ ಪರೀಕ್ಷೆಯಲ್ಲಿ ಫೇಲಾದದ್ದು ನನಗೆ ತುಂಬಾ ವಿಚಿತ್ರ ಅನ್ನಿಸಿತು. ನವರಾತ್ರಿ ಬಂದರೆ ಶಾಲೆಯಲ್ಲಿ ಸರಸ್ವತಿ ಹಬ್ಬ. ಟೇಬಲ್ ಮೇಲೆ ಕುರ್ಚಿ. ಕುರ್ಚಿಯ ಮೇಲೆ ವೀಣೆ ನುಡಿಸೋ ಶಾರದಮ್ಮನ ಪಠ-ಅವಳು ಪುಸ್ತಕ ಓದುತ್ತಿದ್ದರೆ ಚೆನ್ನಾಗಿತ್ತು ಎಂದು ನನಗೆ ಅನ್ನಿಸುತ್ತಿತ್ತು. ಶಾರದಾಪೂಜೆಗೆ ಪುಸ್ತಕ ಇಡುತ್ತಿದ್ದೆವು. ಹತ್ತು ದಿನ ಅವನ್ನು ಮುಟ್ಟುವಂತಿಲ್ಲ. ಯಾವ ಪುಸ್ತಕ ನಮ್ಮ ತಲೆ ತಿನ್ನುತ್ತಿತ್ತೊ ಅದನ್ನೆ ಪೂಜೆಗೆ ಇಡುತ್ತಿದ್ದೆವು. ಹತ್ತು ದಿನ ಅದನ್ನು ಓದುವುದು ತಪ್ಪುವುದಲ್ಲ!
ಮಾಧ್ಯಮಿಕ ಶಾಲೆಗೆ ಬಂದ ಮೇಲೆ ನಾವು ಎಬಿಸಿಡಿ ಕಲಿತದ್ದು. ಆಗ ಹೆಡ್ ಮಾಸ್ತರರೇ ಇಂಗ್ಲಿಷ್ ಕಲಿಸುತ್ತಿದ್ದರು. ಇಂಗ್ಲಿಷ್ ಕಲಿಸುವುದು ಹೆಡ್ ಮಾಸ್ತರರ ಗೌರವಕ್ಕೆ ಸರಿಯಾದದ್ದು ಎಂದು ನಾವೆಲ್ಲಾ ತಿಳಿದಿದ್ದೆವು. ಹಲವು ಹನ್ನೊಂದು ಜಾತಿಯ ಹುಡುಗರು ಒಟ್ಟಿಗೆ ಓದುತ್ತಿದ್ದೆವು. ನಾವು ಬೇರೆ ಬೇರೆ ಎಂದು ಯಾವತ್ತೂ ಅಂದುಕೊಂಡಿರಲಿಲ್ಲ. ಗಾಂಧಿ ಜಯಂತಿಯಂದು ನಾವು ಬೆಳಗಾ ಬೆಳಿಗ್ಗೆ ಶಾಲೆಯ ಬಯಲಲ್ಲಿ ಸೇರುತ್ತಿದ್ದೆವು. ಎಲ್ಲರೂ ರಾಷ್ಟ್ರಧ್ವಜ ಹಿಡಿದು ಹಳ್ಳಿಯ ಕೇರಿಕೇರಿಯಲ್ಲಿ ಪ್ರಭಾತಪೇರಿ ಹೋಗುತ್ತಿದ್ದೆವು. ಕೆಲವರು ನಮಗೆ ಆರತಿ ಮಾಡುತ್ತಿದ್ದರು.
ನಾವು ಎಳೆಯರು/ ನಾವು ಗೆಳೆಯರು/ ಹೃದಯ ಹೂವಿನ ಹಂದರ/ ನಾಳೆ ನಾವೇ ನಾಡ ಹಿರಿಯರು/ ನಮ್ಮ ಕನಸಿದು ಸುಂದರ!
ಇದು ಪ್ರಭಾತ್ಪೇರಿಯಲ್ಲಿ ನಾವು ಹಾಡುತ್ತಿದ್ದ ಹಾಡು! ನನಗೆ ತರಗತಿಯಲ್ಲಿ ಉಜ್ಜಯನಪ್ಪ ಮಾಸ್ತರು ಹೇಳಿಕೊಟ್ಟ ಲೆಕ್ಕ ಮರೆತು ಹೋಗಿದೆ, ಆದರೆ ‘ನಾವು ಎಳೆಯರು..’ ಎಂಬ ಹಾಡು ಮಾತ್ರ ಮರೆತಿಲ್ಲ.
ನಾನೇನು ತುಂಬ ಬುದ್ಧಿವಂತ ವಿದ್ಯಾರ್ಥಿ ಆಗಿರಲಿಲ್ಲ. ಆವರೇಜ್ ಸ್ಟೂಡೆಂಟ್ ಅಷ್ಟೇ. ಆದರೆ, ಶಾಲೆಗೆ ಹೋಗುವುದು ಅಂದರೆ ಯಾವಾಗಲೂ ಖುಷಿ. ಸ್ನೇಹಿತರು ಸಿಗುತ್ತಾರೆ ಅಂತ ಶಾಲೆಗೆ ತಪ್ಪದೇ ಶಿಸ್ತಾಗಿ ಹೋಗುತ್ತಿದ್ದೆ. ಸ್ಕೂಲ್ ಲೈಫ್ ನಿಜಕ್ಕೂ ಗೋಲ್ಡನ್ ಲೈಫ್. ಹೋಮ್ರ್ಕ್ ಕೇಳಿದಾಗ ಟೀಚರ್ಸ್ ಕಂಡರೆ ಭಯವಾಗುತ್ತಿತ್ತು. ಮನೆಯಲ್ಲಿ ನನ್ನ ಅಕ್ಕನೇ ನನಗೆ ಒಂಥರಾ ಟೀಚರ್ ಆಗಿದ್ದರು. ನನ್ನನ್ನು ಓದಿಸುತ್ತಿದ್ದರು. ಹಾಗೂಹೀಗೂ ಮಾಡಿ ಜಸ್ಟ್ ಪಾಸ್ ಆಗಿಬಿಡುತ್ತಿದ್ದೆ. ನನಗೆ ಇಂಗ್ಲೀಷ್ ಮತ್ತು ಗಣಿತ ಅಂದರೆ ಇಷ್ಟವಾಗುತ್ತಿರಲಿಲ್ಲ. ಹತ್ತನೇ ತರಗತಿ ಓದುವಾಗ ಗಣಿತ ಟೀಚರ್, ಕಾರಂತರು ಅಂತಿದ್ದರು. ಅವರು ಪ್ರಮೇಯಗಳನ್ನೆಲ್ಲ ಪಾಸ್ ಆಗುವಷ್ಟು ಹೇಳಿಕೊಟ್ಟಿದ್ದರು. ಆದರೆ, ಇಂಗ್ಲೀಷ್ ಅಂತೂ ಸ್ಕೂಲ್, ಕಾಲೇಜ್ ಮಾತ್ರವಲ್ಲ ಈಗಲೂ ನನಗೆ ತಲೆಬಿಸಿಯೇ ...
ನಮ್ಮ ಶಿಕ್ಷಣಕ್ಕೂ ಇವತ್ತಿನ ಮಕ್ಕಳ ಶಿಕ್ಷಣಕ್ಕೂ ತುಂಬ ವ್ಯತ್ಯಾಸವಿದೆ. ಇವತ್ತು ಶಿಕ್ಷಣದಲ್ಲಿ ತಂತ್ರಜ್ಞಾನ ತುಂಬಾ ಪ್ರಾಮುಖ್ಯತೆ ವಹಿಸಿದೆ. ಆನ್ಲೈನ್ ತರಗತಿಗಳು ಹೆಚ್ಚಾಗಿವೆ. ನನ್ನ ಊರಲ್ಲಿ ಕಷ್ಟದಲ್ಲಿರುವ ಕಾರಣ ಮೊಬೈಲ್ ಖರೀದಿಸಲು ಆಗಿಲ್ಲ, ಹೀಗಾಗಿ ಓದಲಾಗುತ್ತಿಲ್ಲ ಎಂದ ಕೆಲವರಿಗೆ ನಾನೇ ಮೊಬೈಲ್ ಕೂಡ ಕೊಡಿಸಿದ್ದೇನೆ. ಈಗಿನ ಮಕ್ಕಳಿಗೆ ಶೈಕ್ಷಣಿಕವಾಗಿ ಭಾರ ಹೆಚ್ಚಾಗಿದೆ. ನಾವು ಶಿಕ್ಷಣದ ಜತೆಗೆ ಕ್ರೀಡೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲೂ ತೊಡಗುತ್ತಿದ್ದೆವು. ಆದರೆ, ಈಗಿನ ಮಕ್ಕಳಿಗೆ ಶೇಕಡಾ 90ಕ್ಕಿಂತ ಹೆಚ್ಚು ಮಾರ್ಕ್ಸ್ ಪಡೆಯಬೇಕು ಎಂಬ ಒತ್ತಡವಿದೆ. ನಾವೆಲ್ಲಾ ಪಾಸ್ ಆದರೆ ಸಾಕು, ಅದೇ ಫಸ್ಟ್ ಕ್ಲಾಸ್ ಪಡೆದಷ್ಟು ಖುಷಿಪಡುತ್ತಿದ್ದೆವು. ಈಗ ಶಿಕ್ಷಣದ ವಿಷಯದಲ್ಲಿ ಮಾತ್ರ ಸ್ಪರ್ಧಾತ್ಮಕ ಮನೋಭಾವ ಹೆಚ್ಚಿದೆ. ಮಕ್ಕಳು, ಶಿಕ್ಷಕರು, ಪೋಷಕರು, ವಿದ್ಯಾಸಂಸ್ಥೆಗಳು, ಸಮಾಜ ಹೀಗೆ ಎಲ್ಲರೂ ಅಂಕಗಳ ಹಿಂದೆ ಬಿದ್ದಿದ್ದಾರೆ.
ಏನೇ ಓದಿದರೂ ಸ್ವಂತ ಅನುಭವದಲ್ಲಿ ಉಪಯೋಗಕ್ಕೆ ಬರಬೇಕು. ಪ್ರಾಕ್ಟಿಕಲಿ ಜೀವನದಲ್ಲಿ ಅದರಿಂದ ಉಪಯೋಗವಾಗಬೇಕು. ಮಕ್ಕಳಿಗೆ ಮಾರ್ಕ್ಸ್ಗಿಂತ ಹೆಚ್ಚಾಗಿ ಕಾನ್ಪಿಡೆನ್ಸ್ ಬೇಕು. ನನ್ನ ಪತ್ನಿ ಪ್ರಗತಿ ನನಗೆ ತದ್ವಿರುದ್ಧ. ನಾನು ಆವರೇಜ್ ಸ್ಟೂಡೆಂಟ್ ಆಗಿದ್ದರೆ, ಅವರು ರ್ಯಾಂಕ್ ಸ್ಟೂಡೆಂಟ್ ಆಗಿದ್ದರು. ಈಗ ನನ್ನ ಮಗನೂ ಬೆಳಿಗ್ಗೆ ಎದ್ದ ತಕ್ಷಣ ಸ್ಕೂಲ್ಗೆ ಹೋಗಬೇಕು ಅಂತ ಬ್ಯಾಗ್ ಹಿಡಿದುಕೊಂಡು ನಿಲ್ಲುತ್ತಾನೆ. ನಾನು ಪ್ರಗತಿ ಬಳಿ ಯಾವಾಗಲೂ ಹೇಳುತ್ತಿರುತ್ತೇನೆ, ‘ಮಗ ರಣವಿತ್ ಶೆಟ್ಟಿ ಓದಿನ ವಿಷಯದಲ್ಲಿ ಮಾತ್ರ ನಿನ್ನಂತಾಗಲಿ, ಉಳಿದ ಎಲ್ಲ ವಿಷಯದಲ್ಲೂ ನನ್ನಂತೆಯೇ ಇರಲಿ ಎಂದು...’
ನಾನು ಮೊದಲು ಸರ್ಕಾರಿ ಶಿಶುವಿಹಾರದಲ್ಲಿ ಅಭ್ಯಾಸ ಮಾಡಿದೆ. ತದನಂತರ ಪ್ರಾಥಮಿಕ ಶಿಕ್ಷಣವನ್ನು ಸಲ್ಲಾ ಮೇರಿಸ್ ಶಾಲೆಯಲ್ಲಿ, ಪ್ರೌಢಶಿಕ್ಷಣವನ್ನು ಶ್ರೀ ವಿದ್ಯಾಪೀಠ ಶಾಲೆ (ಎಸ್ವಿವಿ)ಯಲ್ಲಿ ಮತ್ತು ಪದವಿ ಪೂರ್ವ ಶಿಕ್ಷಣವನ್ನು ಕಲ್ಪತರು ಪಿಯು ಕಾಲೇಜಿನಲ್ಲಿ ಮುಗಿಸಿದೆ. ನನ್ನ ಬಾಲ್ಯವನ್ನು ಬಹುತೇಕ ತಿಪಟೂರಿನಲ್ಲಿಯೇ ಕಳೆದಿದ್ದೇನೆ. ನಂತರ ಇಂಜಿನಿಯರಿಂಗ್ ಮಾಡಲು ಬೆಂಗಳೂರು ಕಡೆ ಮುಖ ಮಾಡಿದೆ. ಬೆಂಗಳೂರಿನ ಬಿಎನ್ಎಸ್ ಕಾಲೇಜಿನಲ್ಲಿ ಇಂಜಿನಿಯರಿಂಗ್ ಮುಗಿಸಿದೆ.
ಬಾಲ್ಯ ಎಂದೊಡನೆ, ಬಾಲ್ಯಸ್ನೇಹಿತರಾದ ನಂದಕುಮಾರ್, ಹರೀಶ್, ಆರತಿರಾಯ್ ಕಣ್ಣ ಮುಂದೆ ಬಂದು ನಿಲ್ಲುತ್ತಾರೆ. ನಂದಕುಮಾರ್ ವಕೀಲ ವೃತ್ತಿ ಮಾಡುತ್ತಿದ್ದಾನೆ. ಹರೀಶ್ ವ್ಯಾಪಾರಸ್ಥನಾಗಿದ್ದಾನೆ. ಆರತಿರಾಯ್ ಬಿಎಸ್ಎನ್ಎಲ್ನಲ್ಲಿ ಉದ್ಯೋಗಿಯಾಗಿದ್ದರು, ಈಗ ನಿವೃತ್ತಿ ಹೊಂದಿದ್ದಾರೆ. ಹೀಗೆ ಹೆಸರು ಹೇಳುತ್ತಾ ಹೋದರೆ ದೊಡ್ಡ ಸ್ನೇಹಿತರ ಬಳಗವೇ ಇದೆ. ನನಗೆ ಇಡೀ ಶಾಲೆಯ ಮಂದಿಯೆಲ್ಲ ಸ್ನೇಹಿತರಾಗಿದ್ದರು. ಆಗ ಯಾರ ಮನೆಯಲ್ಲೂ ಸ್ಕೂಟರ್ ಅಥವಾ ಕಾರು ಇರಲಿಲ್ಲ. ಎಲ್ಲರನ್ನೂ ಅವರವರ ಪಾಲಕರು ಎತ್ತಿನಗಾಡಿಯಲ್ಲಿ ಶಿಶುವಿಹಾರಕ್ಕೆ ಬಿಡುತ್ತಿದ್ದರು. ಈಗ ಐಷಾರಾಮಿ ಕಾರಿನಲ್ಲಿ ಹೋದರೂ ಆ ಎತ್ತಿನಗಾಡಿಯ ಮಜಾ ಸಿಗುವುದಿಲ್ಲ, ಬಿಡಿ. ಸೈಕಲ್ ಏರಿ ಸ್ನೇಹಿತರ ಜತೆಗೂಡಿ ಶಾಲೆಗೆ ಹೋಗುತ್ತಿದ್ದದ್ದು, ಬರುತ್ತಿದ್ದದ್ದು, ನೆನೆಸಿಕೊಂಡರೆ ಈಗಲೂ ಮಂದಹಾಸ ಮೂಡುತ್ತದೆ. ಶಾಲೆ ಬಿಡುವುದನ್ನೇ ಕಾಯುತ್ತಿದ್ದೆ. ನಂತರ ಸ್ನೇಹಿತರೊಂದಿಗೆ ಕೂಡಿ ಕಬಡ್ಡಿ, ಕ್ರಿಕೆಟ್ ಆಡುತ್ತಿದ್ದೆ. ಮನೆಗೆ ಹೋದ ಬಳಿಕ ನಾಟಕಗಳನ್ನು ಕಲಿಯುತ್ತಿದ್ದೆವು. ನಮ್ಮ ಬಾಲ್ಯದಲ್ಲಿ ಪಾಠ-ಆಟ ಎಲ್ಲವೂ ಇತ್ತು. ಈಗಿನ ಮಕ್ಕಳು ಬರೀ ಶಿಕ್ಷಣಕ್ಕೆ ಸೀಮಿತವಾಗಿದ್ದಾರೆ.
ಇಂಜಿನಿಯರಿಂಗ್ ನಾಲ್ಕನೇ ಸೆಮಿಸ್ಟರ್ವರೆಗೂ ನಾನು ಸೈಕಲ್ನಲ್ಲಿ ಕಾಲೇಜಿಗೆ ಹೋಗುತ್ತಿದ್ದೆ. ಅನಂತರ ಲೂನಾ ಸ್ಕೂಟರ್ ಖರೀದಿ ಮಾಡಿದೆ. ಪ್ರಥಮ ಪಿಯುಸಿ ಅವಧಿಯಲ್ಲಿ ತುರ್ತು ಪರಿಸ್ಥಿತಿಯ ವಿರುದ್ಧ ಹೋರಾಟ ನಡೆಸಿ ಜೈಲು ಸೇರಿದೆ. ಆಗಿನಿಂದ ನಮ್ಮ ಹೋರಾಟದ ಜೀವನ ಆರಂಭವಾಯಿತು. ಈಗ ರಾಷ್ಟ್ರೀಯ ಶಿಕ್ಷಣ ನೀತಿ (ಎನ್ಇಪಿ) ಜಾರಿಯಾಗಿದ್ದು, ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿಯಾಗಲಿದೆ. ಮಕ್ಕಳ ನಿಜವಾದ ಖುಷಿ ಹಾಗೂ ಸಂತೋಷಕ್ಕೆ ಅವಕಾಶ ಕಲ್ಪಿಸಲಿದೆ.
ನನಗೆ ಎರಡನೇ ತರಗತಿವರೆಗೂ ಶಾಲೆಗೆ ಹೋಗಲು ಅಷ್ಟು ಇಷ್ಟವಾಗುತ್ತಿರಲಿಲ್ಲ, ಮನೆಯಲ್ಲಿ ಅಮ್ಮನ ಜತೆ ಇರಬೇಕು ಅಂತನ್ನಿಸುತ್ತಿತ್ತು. ನಂತರ ಹೈಸ್ಕೂಲ್ಗೆ ಬಂದಾಗ ಶಾಲೆಗೆ ಹೋಗೋದೇ ಒಂಥರಾ ಖುಷಿ. ಹಾಗೇ ವರ್ಷದಿಂದ ವರ್ಷಕ್ಕೆ ಏನಾದರೂ ಕಲಿಯುವ ಆಸಕ್ತಿ ಇರುತ್ತಿತ್ತು. ಹೋದ ವರ್ಷಕ್ಕಿಂತ ಈ ವರ್ಷ ಚೆನ್ನಾಗಿ ಓದಬೇಕು ಅಂತ ಅಥವಾ ಕೈಬರಹ ಚೆನ್ನಾಗಿರಬೇಕು ಅಂತ ಯೋಚಿಸುತ್ತಿದ್ದೆ. ನಾನು ಆವರೇಜ್ ಸ್ಟೂಡೆಂಟೇ ಆದರೂ ಶಿಕ್ಷಕರ ಅಚ್ಚುಮೆಚ್ಚಿನ ವಿದ್ಯಾರ್ಥಿನಿಯಾಗಿದ್ದೆ. 95ರಷ್ಟು ಅಂಕ ಪಡೆಯದಿದ್ದರೂ 80ಕ್ಕಿಂತ ಕಡಿಮೆಯಂತೂ ಆಗುತ್ತಿರಲಿಲ್ಲ. ನಾನು ಸಹಪಾಠಿಗಳಿಗಿಂತ ಹೆಚ್ಚಾಗಿ ಟೀಚರ್ಸ್ ಜತೆಯಲ್ಲೇ ಇರುತ್ತಿದ್ದೆ. ನಾಟಕ, ಹಾಡು, ಕ್ರೀಡೆ ಅಂತ ತುಂಬ ಆಕ್ಟಿವ್ ಆಗಿರುತ್ತಿದ್ದೆ. ಎರಡು ವರ್ಷ ಸ್ಕೂಲ್ ಲೀಡರ್ ಆಗಿದ್ದೆ.
ನನಗೆ ಕನ್ನಡ ಅಚ್ಚುಮೆಚ್ಚಿನ ವಿಷಯ. ಕನ್ನಡದಲ್ಲಿ 125ಕ್ಕೆ 124 ಅಂಕಗಳನ್ನು ಪಡೆದಿದ್ದೆ. ವಿಜ್ಞಾನ, ಗಣಿತ ವಿಷಯಗಳಲ್ಲೂ ಚೆನ್ನಾಗಿ ಮಾರ್ಕ್ಸ್ ತೆಗೆದುಕೊಂಡಿದ್ದೆ. ನನಗೆ ಕಾಲೇಜ್ನಲ್ಲಿ ನೆಚ್ಚಿನ ಲೆಕ್ಚರರ್ ಅಂದರೆ ಡಾ. ಗೀತಾ ರಾಮಾನುಜಂ. ನ್ಯಾಷನಲ್ ಕಾಲೇಜ್ನಲ್ಲಿ ಪಿಯುಸಿ ಓದುತ್ತಿದ್ದಾಗ ಅವರು ಲಾಜಿಕ್ ತರಗತಿಗಳನ್ನು ತೆಗೆದುಕೊಳ್ಳುತ್ತಿದ್ದರು. ಈಗಲೂ ಅವರೊಂದಿಗೆ ಸಂಪರ್ಕದಲ್ಲಿದ್ದೇನೆ. ಅವರ ಜತೆ ಐದಾರು ನಾಟಕಗಳನ್ನು, ಒಂದೊಂದು ಟೆಲಿಫಿಲಂ ಮತ್ತು ಟೆಲಿಪ್ಲೇ ಮಾಡಿದ್ದೇನೆ. ನನಗೆ ಕಾಲೇಜಿನಲ್ಲಿ ಫೇವರಿಟ್ ಜಾಗ ಲೈಬ್ರರಿ. ಓದುವ ಹವ್ಯಾಸ ಈಗಲೂ ಮುಂದುವರಿದಿದೆ. ಬೆಳಗ್ಗೆ ಎದ್ದ ತಕ್ಷಣ ಯಾವುದಾದರೂ ಪುಸ್ತಕ ತೆಗೆದುಕೊಂಡು ಎರಡು ಪುಟಗಳನ್ನಾದರೂ ಓದಿಯೇ ಮುಂದಿನ ಕೆಲಸ ಮಾಡುವುದು. ಮಗಳು ಅಶ್ಮಿತಾಳನ್ನು ಮುಂದಿನ ವರ್ಷದಿಂದ ಶಾಲೆಗೆ ಸೇರಿಸಬೇಕು. ಆಕೆ ಈಗ ಕನ್ನಡ ವರ್ಣಮಾಲೆ ಕಲಿಯುತ್ತಿದ್ದಾಳೆ. ಓದುವುದು, ಬರೆಯುವುದನ್ನು ಗಮನವಿಟ್ಟು ಮಾಡುತ್ತಾಳೆ...