

ಡೊನಾಲ್ಡ್ ಟ್ರಂಪ್ 2025ರ ಜನವರಿ 20ರಂದು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ನಂತರದ ನಾಲ್ಕು ವರ್ಷಗಳಲ್ಲಿ ಜಗತ್ತಿನ ಇತಿಹಾಸವನ್ನು ಅವರು ಯಾವ ಬಗೆಯಲ್ಲಿ ನಿರ್ದೇಶಿಸಬಹುದು? ಈ ಪ್ರಶ್ನೆಗೆ ಉತ್ತರಿಸಲು ನಮಗೆ ಸಹಾಯಕವಾಗುವುದು ಮೂರು ಅಂಶಗಳು. ಒಂದು- 2017-21ರ ನಡುವಿನ ತಮ್ಮ ಮೊದಲ ಅವಧಿಯಲ್ಲಿ ಅವರು ಅನುಸರಿಸಿದ ನಿಲುವು-ನೀತಿಗಳು, ಎರಡು- ಈ ಚುನಾವಣಾ ಪ್ರಚಾರದಲ್ಲಿ ಅವರು ನೀಡಿದ ಹೇಳಿಕೆಗಳು, ಮೂರು-ಆ ಹೇಳಿಕೆಗಳಿಗೆ ಜಗತ್ತು ಪ್ರತಿಕ್ರಿಯಿಸಾರಂಭಿಸಿರುವ ಬಗೆ. ಈ ಮೂರು ಅಂಶಗಳು ಇಂದು ಜಗತ್ತು ಎದುರಿಸುತ್ತಿರುವ ಮುಖ್ಯ ಪ್ರಶ್ನೆಗಳಿಗೆ ಯಾವ ಬಗೆಯ ಸಮಾಧಾನಗಳ ಸಾಧ್ಯತೆಗಳನ್ನು ನಮಗೆ ತೋರಬಹುದು ಎಂದು ಪರಿಶೀಲಿಸೋಣ. ಈ ವಿಶ್ಲೇಷಣೆಯನ್ನು ಸದ್ಯಕ್ಕೆ ಅಮೆರಿಕ ಎದುರಿಸುತ್ತಿರುವ ಕಾನೂನುಬಾಹಿರ ವಲಸಿಗರ ಸಮಸ್ಯೆ, ರಷ್ಯಾ-ಯೂಕ್ರೇನ್ ಯುದ್ಧ, ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಲೋಕಕಂಟಕ ಚೀನಿ ನೀತಿಗಳಿಗಷ್ಟೇ ಸೀಮಿತಗೊಳಿಸೋಣ.
ಕರೊನಾ ಸಂಕ್ರಮಣ ಜಗತ್ತನ್ನು ಬಹುವಾಗಿ ಕಂಗೆಡಿಸಿತು. ಅದು ಹಾಳುಗೆಡವಿದ್ದ ಜಾಗತಿಕ ಅರ್ಥವ್ಯವಸ್ಥೆಗೆ ರಷ್ಯಾ-ಯೂಕ್ರೇನ್ ಯುದ್ಧ ಇನ್ನೊಂದು ಹೊಡೆತ ನೀಡಿತು. ಏಷ್ಯಾ ಮತ್ತು ಆಫ್ರಿಕಾಗಳಿಗೆ ಗೋಧಿ ಮತ್ತು ಅಡುಗೆ ಎಣ್ಣೆಯ ಪೂರೈಕೆ ಸ್ಥಗಿತಗೊಂಡು ಕೋಟ್ಯಂತರ ಜನ ಸಂಕಷ್ಟಕ್ಕೆ ಸಿಲುಕಿದರೆ ಯೂರೋಪಿಯನ್ ರಾಷ್ಟ್ರಗಳಿಗೆ ತೈಲ ಮತ್ತು ಅನಿಲ ಪೂರೈಕೆಯಲ್ಲಿ ವ್ಯತ್ಯಯವಾಗಿ ಅವೂ ಕಂಗೆಟ್ಟವು. ಇದರ ಹಿಂದೆಯೇ ಪಶ್ಚಿಮ ಏಷ್ಯಾದಲ್ಲಿ ರಕ್ತಪಾತದ ಮತ್ತೊಂದು ಸುತ್ತು ಆರಂಭವಾಯಿತು. ಇಷ್ಟೆಲ್ಲಕ್ಕೂ ಕಳೆದ ಸರಿಸುಮಾರು ಅರ್ಧ ಶತಮಾನದಲ್ಲಿ ಶ್ವೇತಭವನ ಪ್ರವೇಶಿಸಿದ ಡೆಮೋಕ್ರಾಟಿಕ್ ಅಧ್ಯಕ್ಷರುಗಳ ನೀತಿಗಳೇ ಬಹುಮಟ್ಟಿಗೆ ಕಾರಣ.
ವಿಯೆಟ್ನಾಂ ಯುದ್ಧದಿಂದ ಹೊರಬರುವ ದಾರಿಯಾಗಿ ರಿಪಬ್ಲಿಕನ್ ಅಧ್ಯಕ್ಷ ರಿಚರ್ಡ್ ನಿಕ್ಸನ್ 1971ರಲ್ಲಿ ಕಮ್ಯೂನಿಸ್ಟ್ ಚೀನಾಗೆ ಸ್ನೇಹಹಸ್ತ ಚಾಚಿದರೂ ತಮ್ಮ ಉದ್ದೇಶಸಾಧನೆಯಾದ ಮೇಲೆ ಆ ವಿಷಯದಲ್ಲಿ ಮುಂದುವರಿಯಲಿಲ್ಲ. ಅವರ ಉತ್ತರಾಧಿಕಾರಿ, ಅವರದೇ ಪಕ್ಷದ ಜೆರಾಲ್ಡ್ ಫೋರ್ಡ್ ಸಹ ಅದೇ ಮಿತಿಗೆ ಅಂಟಿಕೊಂಡರು. ಆದರೆ 1976ರಲ್ಲಿ ಆಯ್ಕೆಯಾದ ಡೆಮೋಕ್ರಾಟಿಕ್ ಅಧ್ಯಕ್ಷ ಜಿಮ್ಮಿ ಕಾರ್ಟರ್ 1979ರಲ್ಲಿ ಚೀನಾದೊಂದಿಗೆ ರಾಜತಾಂತ್ರಿಕ ಸಂಬಂಧಗಳನ್ನು ಸ್ಥಾಪಿಸಿದರು. ಅದು ಹಿಂದಿನ ವರ್ಷವಷ್ಟೇ ಚೀನಾದ ಅರ್ಥವ್ಯವಸ್ಥೆಯ ಉದಾರೀಕರಣವನ್ನು ಆರಂಭಿಸಿದ್ದ ದೆಂಗ್ ಷಿಯಾವೋ-ಪಿಂಗ್ರ ರೊಟ್ಟಿಯನ್ನು ತುಪ್ಪದಲ್ಲಿ ಬೀಳಿಸಿತು. ಜಾಗತಿಕ ಕೈಗಾರಿಕೋದ್ಯಮಿಗಳನ್ನು ಚೀನಾದತ್ತ ಸೆಳೆಯಲು ಅವರು ನೀಡಹೊರಟ ಕಡಿಮೆ ಕೂಲಿಯ ಕೆಲಸಗಾರರು, ಕಚ್ಚಾವಸ್ತುಗಳ ನಿರಂತರ ಪೂರೈಕೆ, ಮುಷ್ಕರರಹಿತ ವ್ಯವಸ್ಥೆ ಮುಂತಾದ ಸೌಲಭ್ಯಗಳಿಗಳಿಂದ ಚೀನಾ ಪ್ರವೇಶಿಸಲು ತುದಿಗಾಲಲ್ಲಿ ನಿಂತಿದ್ದ ಅಮೆರಿಕದ ಉದ್ಯಮಿಗಳಿಗೆ ಅಧ್ಯಕ್ಷ ಕಾರ್ಟರ್ರ ನೀತಿ ಸಹಾಯಕವಾಯಿತು. ಅವರೆಲ್ಲರೂ ನಾ ಮುಂದು ತಾ ಮುಂದು ಎಂದು ಕಾರ್ಖಾನೆಗಳನ್ನು ಚೀನಾಗೆ ವರ್ಗಾಯಿಸತೊಡಗಿದರು. ಪಶ್ಚಿಮದ ಇತರ ರಾಷ್ಟ್ರಗಳ ಕೈಗಾರಿಕೋದ್ಯಮಿಗಳೂ ಅದೇ ದಾರಿ ಹಿಡಿದರು. ಇದರ ಪರಿಣಾಮ ಅಗಾಧ. ‘‘ಚೀನಾ ಬಡದೇಶ. ಅಮೆರಿಕಕ್ಕೆ ‘ರಫ್ತು’ ಮಾಡಲು ನಮ್ಮಲ್ಲಿ ಯುವತಿಯರ ಹೊರತಾಗಿ ಬೇರೇನೂ ಇಲ್ಲ, ದಯವಿಟ್ಟು ನಮ್ಮಿಂದ ಹತ್ತು ಮಿಲಿಯನ್ ಯುವತಿಯರನ್ನು ಆಮದುಮಾಡಿಕೊಳ್ಳಿ’ ಎಂದು ಚೀನಿ ಸರ್ವಾಧಿಕಾರಿ ಮಾವೋ ಝೆದಾಂಗ್ 1973ರ ಫೆಬ್ರವರಿ 17ರಂದು ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಹೆನ್ರಿ ಕಿಸಿಂಜರ್ ಅವರಿಗೆ ವಿನಂತಿ ಮಾಡಿಕೊಂಡಿದ್ದುಂಟು. ಅಂತಹ ‘ಬಡ’ ಚೀನಾ ದೆಂಗ್ರ ಆರ್ಥಿಕ ಉದಾರೀಕರಣ ಮತ್ತದಕ್ಕೆ ಅಮೆರಿಕ ಸೇರಿ ಪಶ್ಚಿಮದ ದೇಶಗಳು ಸ್ಪಂದಿಸಿದ ಬಗೆಯಿಂದಾಗಿ ಹೊಸ ಶತಮಾನದ ಆರಂಭದ ಹೊತ್ತಿಗೆ ಜಗತ್ತಿನ ಮೂರನೆಯ ಅತಿದೊಡ್ಡ ಅರ್ಥವ್ಯವಸ್ಥೆಯಾಗಿ ಎದ್ದುನಿಂತಿತು. 2010ರ ಹೊತ್ತಿಗೆ ಜಪಾನ್ ಅನ್ನೂ ಹಿಂದೆಹಾಕಿ ಜಗತ್ತಿನ ಎರಡನೆಯ ಬೃಹತ್ ಅರ್ಥವ್ಯವಸ್ಥೆಯಾಯಿತು. ಅದರೊಂದಿಗೆ ತನ್ನೀ ಅಗಾಧ ಆರ್ಥಿಕ ಸಾಮರ್ಥ್ಯವನ್ನು ಸೇನಾಶಕ್ತಿಯಾಗಿ ಪರಿವರ್ತಿಸಿಕೊಳ್ಳಲು ಚೀನಾಗೆ ಹೆಚ್ಚು ಸಮಯ ಬೇಕಾಗಲಿಲ್ಲ. ಅದಕ್ಕೆ ಸಹಕಾರ ಒದಗಿಸಿದ್ದು ಮತ್ತೊಬ್ಬ ಡೆಮೋಕ್ರಾಟಿಕ್ ಅಧ್ಯಕ್ಷ ಬರಾಕ್ ಹುಸೇನ್ ಒಬಾಮ. ಅವರ ಅಧಿಕಾರಾವಧಿಯಲ್ಲೇ ಕರೊನಾ ವೈರಸ್ ಸೃಷ್ಟಿಸಿದ ಚೀನಾದ ಊಹಾನ್ ಇನ್ಸ್ಟಿಟ್ಯೂಟ್ ಆಫ್ ವೈರಾಲಜಿಗೆ ಅಮೆರಿಕದಿಂದ ಧನಸಹಾಯ ಒದಗಿದ್ದನ್ನೂ ಇಲ್ಲಿ ನೆನಪಿಸಿಕೊಳ್ಳಬಹುದು.
ಅದಾಗಲೇ ಚಾಲ್ತಿಯಲ್ಲಿದ್ದ ಅಫ್ಘನ್ ಮತ್ತು ಇರಾಕ್ ಯುದ್ಧಗಳ ಜತೆ ಪಶ್ಚಿಮ ಏಷ್ಯಾ ಮತ್ತು ಉತ್ತರ ಆಫ್ರಿಕಾದ ಹಲವಾರು ದೇಶಗಳಲ್ಲಿ ‘ಅರಬ್ ವಸಂತ’ದ ಹೆಸರಿನಲ್ಲಿ ಸರ್ಕಾರ ಬದಲಾವಣೆಗೆ ಇಂಬುಕೊಟ್ಟ ಒಬಾಮ ಸರ್ಕಾರ ಅಲ್ಲೆಲ್ಲ ಅರಾಜಕತೆಯನ್ನು ಸೃಷ್ಟಿಸಿತು. ಹೀಗೆ ಅಮೆರಿಕ ತನ್ನ ಗಮನವನ್ನು ಆ ವಲಯಕ್ಕಷ್ಟೇ ಸೀಮಿತಗೊಳಿಸಿದ್ದರಿಂದಾಗಿ ಪೂರ್ವ ಏಷ್ಯಾ ಮತ್ತು ಪಶ್ಚಿಮ ಪೆಸಿಫಿಕ್ ವಲಯದಲ್ಲಿ ಚೀನಾವನ್ನು ತಡೆಯುವವರೇ ಇಲ್ಲದಂತಾಯಿತು. ಜಪಾನ್, ತೈವಾನ್, ಫಿಲಿಪ್ಪೀನ್ಸ್ ವಿಯೆಟ್ನಾಂ ಮತ್ತು ಭಾರತಗಳಿಗೆ ಸೇನಾ ಬೆದರಿಕೆ ಒಡ್ಡತೊಡಗಿತು. ಜತೆಗೆ ತನ್ನ ‘ಬೆಲ್ಟ್ ಆಂಡ್ ರೋಡ್’ ಯೋಜನೆ ಮೂಲಕ ಜಗತ್ತಿನಾದ್ಯಂತ ಅಭಿವೃದ್ಧಿಶೀಲ ದೇಶಗಳಿಗೆ ವ್ಯರ್ಥ ಯೋಜನೆಗಳಿಗಾಗಿ ಹೆಚ್ಚಿನ ಬಡ್ಡಿದರದಲ್ಲಿ ಅಗಾಧ ಸಾಲ ನೀಡಿ ಅವರನ್ನು ತನ್ನ ಸಾಲಸಂಕೋಲೆಗೆ ಸಿಕ್ಕಿಸಿಕೊಳ್ಳುವ ದುರ್ವ್ಯವಹಾರವನ್ನೂ ಚೀನಾ ದೊಡ್ಡ ಪ್ರಮಾಣದಲ್ಲಿ ಆರಂಭಿಸಿತು.
ಚೀನಾದ ಈ ಎಲ್ಲ ಲೋಕಕಂಟಕ ಅಟ್ಟಹಾಸವನ್ನು ತಡೆಯುವ ಮೊದಲ ಪ್ರಯತ್ನ ಮಾಡಿದ್ದು ಡೊನಾಲ್ಡ್ ಟ್ರಂಪ್, 2017-21ರ ತಮ್ಮ ಮೊದಲ ಅಧಿಕಾರಾವಧಿಯಲ್ಲಿ. ಚೀನಿ ಆರ್ಥಿಕ ಸಾಮರ್ಥ್ಯವನ್ನು ಕುಗ್ಗಿಸಿದರೆ ಅದರ ಸೇನಾ ಅಟ್ಟಹಾಸವೂ ನಿಲ್ಲುತ್ತದೆಂದು ರ್ತಸಿದ ಟ್ರಂಪ್ ಆ ನಿಟ್ಟಿನಲ್ಲಿ ಕ್ರಮ ಕೈಗೊಂಡು ಚೀನಿ ವಸ್ತುಗಳ ಆಯಾತದ ಮೇಲೆ ಹೆಚ್ಚಿನ ಸುಂಕ ವಿಧಿಸಿದರು. ಆ ಕ್ರಮ ಫಲಕೊಟ್ಟು ಚೀನಿ ಆದಾಯ ಗಣನೀಯವಾಗಿ ಕುಸಿಯತೊಡಗಿತು. ಜತೆಗೆ, ಟ್ರಂಪ್ರ ಅಧಿಕ ಆಮದುಶುಲ್ಕದಿಂದ ಬಚಾವಾಗಲು ಹಲವಾರು ಅಮೆರಿಕನ್ ಉದ್ಯಮಿಗಳು ತಮ್ಮ ಕಾರ್ಖಾನೆಗಳನ್ನು ಚೀನಾದಿಂದ ಬೇರೆಡೆಗೆ ವರ್ಗಾಯಿಸಲು ತೊಡಗಿದರು. ಚೀನೀ ಅರ್ಥವ್ಯವಸ್ಥೆ ಇಳಿಜಾರಿನ ಹಾದಿಗಿಳಿಯಿತು. ಇದರಿಂದಾಗಿ ದೊಡ್ಡ ಹೊಡೆತ ಬಿದ್ದದ್ದು ಚೀನಿ ನವವಸಾಹತುಶಾಹಿ ಸಾಲಸಂಕೋಲೆಯ ಯೋಜನೆ ‘ಬೆಲ್ಟ್ ಆಂಡ್ ರೋಡ್’ಗೆ. ಜತೆಗೆ ಚೀನಾದ ಸೇನಾ ಅಟ್ಟಹಾಸಕ್ಕೂ ಸಹ. ಭಾರತ ಸೇರಿದಂತೆ ಚೀನಾದ ಸೇನಾದ ಸೇನಾ ಬೆದರಿಕೆಗಳಿಗೆ ತುತ್ತಾಗಿದ್ದ ಎಲ್ಲ ದೇಶಗಳಿಗೂ ಟ್ರಂಪ್ ಸರ್ಕಾರ ಬೆಂಬವಾಗಿ ನಿಂತಿತು. ಈ ಸಕಾರಾತ್ಮಕ ಬೆಳವಣಿಗೆಗಳಿಗೆ ತಾತ್ಕಾಲಿಕ ತಡೆ ತಂದದ್ದು ಮತ್ತೊಬ್ಬ ಡೆಮೋಕ್ರಾಟಿಕ್ ಅಧ್ಯಕ್ಷ ಜೋ ಬೈಡೆನ್. ಚೀನಾವನ್ನು ಓಲೈಸಲು ಹೋದ ಅವರು ಸದ್ಯ, ವರ್ಷ ಕಳೆಯುವುದಕ್ಕೂ ಮೊದಲೇ ಟ್ರಂಪ್ ಆರಂಭಿಸಿದ್ದ ಕ್ರಮಗಳ ವ್ಯಾವಹಾರಿಕತೆ ಅರಿತು ಅವುಗಳನ್ನು ನಿಧಾನವಾಗಿಯಾದರೂ ಮತ್ತೆ ಆರಂಭಿಸಿದರು. ಆದರೆ ಅಷ್ಟರಲ್ಲಿ ಚೀನಾಗೆ ಉಸಿರು ತೆಗೆದುಕೊಳ್ಳಲು ಅವಕಾಶ ಸಿಕ್ಕಿಯಾಗಿತ್ತು. ಆಸ್ಟ್ರೇಲಿಯಾ ಮತ್ತು ಬ್ರಿಟನ್ಗಳ ಜತೆಗೂಡಿ ಚೀನಾ ವಿರುದ್ಧ ಬೈಡೆನ್ ಕಟ್ಟಿದ ಅಖಿಓಖಿಖ ಕೂಟ ಅಷ್ಟೇನೂ ಪರಿಣಾಮಕಾರಿಯಾಗಿಲ್ಲ. ಕ್ವಾಡ್ ಸಹ ಈಗ ಹಲ್ಲು ಕಿತ್ತ ಹಾವು. ಈಗ ಟ್ರಂಪ್ ಮತ್ತೆ ಶ್ವೇತಭವನ ಪ್ರವೇಶಿಸಲಿದ್ದಾರೆ. ಆ ಹಾದಿಯಲ್ಲಿರುವಾಗಲೇ ಅವರು ಚೀನಾ ವಿರುದ್ಧ ಹಿಂದೆ ಮಾಡಿದ್ದನ್ನೇ ಮತ್ತೆ, ಇನ್ನೂ ದೊಡ್ಡದಾಗಿ, ಮಾಡುವ ಘೊಷಣೆ ಮಾಡಿದ್ದಾರೆ. ಚೀನಿ ಆಮದುಗಳ ಮೇಲೆ 60% ಆಮದುಸುಂಕ ವಿಧಿಸುವುದು ಅವರ ಯೋಜನೆಗಳಲ್ಲೊಂದು. ಡೊನಾಲ್ಡ್ ಟ್ರಂಪ್ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳಲು ಇನ್ನೂ ಸರಿಸುಮಾರು ಎರಡೂವರೆ ತಿಂಗಳುಗಳು ಬೇಕು. ಅಲ್ಲಿಯವರೆಗೆ ಬೈಡೆನ್ರದೇ ದರ್ಬಾರು. ಆದರೆ ಟ್ರಂಪ್ರ ಘೊಷಣೆಗಳು ಈಗಾಗಲೇ ಫಲ ನೀಡತೊಡಗಿವೆ! ಟ್ರಂಪ್ ವಿಧಿಸುತ್ತೇನೆ ಎಂದು ಬೆದರಿಸಿರುವ 60%ಕ್ಕೂ ಅಧಿಕ ಆಮದುಶುಲ್ಕದ ಹೊಡೆತದಿಂದ ತಪ್ಪಿಸಿಕೊಳ್ಳಲು ಅಮೆರಿಕನ್ ಉದ್ಯಮಿಗಳು ಚೀನಾದಲ್ಲಿ ತಮ್ಮ ಉತ್ಪಾದನೆಯನ್ನು ನಿಲ್ಲಿಸಿ ಅಥವಾ ತಗ್ಗಿಸಿ ಬೇರೆಡೆಗೆ ವರ್ಗಾಯಿಸುವ ಕೆಲಸ ಆರಂಭಿಸಿದ್ದಾರೆ. ಇದಕ್ಕೊಂದು ಗಮನಾರ್ಹ ಉದಾಹರಣೆ ಪಾದರಕ್ಷೆಗಳ ಉತ್ಪಾದನಾ ಸಂಸ್ಥೆ ಸ್ಟೀವ್ ಮ್ಯಾಡೆನ್. ವಾರ್ಷಿಕ ಮೂರು ಬಿಲಿಯನ್ ಡಾಲರ್ಗಳ ವ್ಯವಹಾರ ಹೊಂದಿರುವ ಅದು ಇದುವರೆಗೂ ತನ್ನ 70% ಉತ್ಪಾದನೆ ಮಾಡುತ್ತಿದ್ದುದು ಚೀನಾದಲ್ಲಿ. ಟ್ರಂಪ್ ಆಯ್ಕೆಯಾದ ಮೂರೇ ದಿನದಲ್ಲಿ ಅದು ಚೀನಾದಲ್ಲಿ ತನ್ನ ಉತ್ಪಾದನೆಯನ್ನು ಅರ್ಧಕ್ಕೆ ಇಳಿಸಿದೆ ಮತ್ತು ತನ್ನ ಉತ್ಪಾದನಾ ಘಟಕಗಳನ್ನು ವಿಯೆಟ್ನಾಂ, ಕಾಂಬೋಡಿಯಾ, ಬ್ರೆಝಿಲ್, ಮೆಕ್ಸಿಕೋ, ಭಾರತ ಮತ್ತಿತರ ದೇಶಗಳಿಗೆ ವರ್ಗಾಯಿಸುವ ತೀರ್ಮಾನ ತೆಗೆದುಕೊಂಡಿದೆ! ಚೀನಾದಿಂದ ಪಶ್ಚಿಮದ ಬಹುರಾಷ್ಟ್ರೀಯ ಉದ್ಯಮಿಗಳ ಪಲಾಯನದ ಆರಂಭ ಇದು.
ಇನ್ನು ರಷ್ಯಾ-ಯೂಕ್ರೇನ್ ಯುದ್ಧದತ್ತ ತಿರುಗೋಣ. ಮೂರು ಶತಮಾನಗಳವರೆಗೂ ಒಂದೇ ಆಗಿದ್ದ ಅವೆರಡು ದೇಶಗಳು 1991ರಲ್ಲಿ ಬೇರೆಯಾದರೂ 2014ರವರೆಗೂ ಮಧುರ ಸ್ನೇಹಸಂಬಂಧಗಳನ್ನು ಕಾಪಾಡಿಕೊಂಡಿದ್ದವು. ಅದನ್ನು ಹಾಳುಮಾಡಿದ್ದು ಬರಾಕ್ ಒಬಾಮ. ತಮ್ಮ ಉಪ ವಿದೇಶಾಂಗ ಕಾರ್ಯದರ್ಶಿ ವಿಕ್ಟೋರಿಯಾ ನ್ಯೂಲ್ಯಾಂಡ್ರನ್ನು ಕೀಯೆವ್ನಲ್ಲಿ ಪಿತೂರಿ ನಡೆಸಲು ಅಟ್ಟಿ, ಅಲ್ಲಿ ರಷ್ಯಾ-ಪರ ಸರ್ಕಾರವನ್ನು ಉರುಳಿಸಿ, ರಷ್ಯಾ-ವಿರೋಧಿ ಸರ್ಕಾರವನ್ನು ತಂದದ್ದೇ ಒಬಾಮ. ಇವರ ಕೃತ್ಯಗಳಿಂದ ಹುಮ್ಮಸ್ಸುಗೊಂಡ ಯೂಕ್ರೇನ್ನ ರಷ್ಯಾ-ವಿರೋಧಿ ಸರ್ಕಾರ ಅಮೆರಿಕ ನೇತೃತ್ವದ ನ್ಯಾಟೋ ಸೇನಾಕೂಟಕ್ಕೆ ಸೇರುವ ಕನಸು ಕಾಣತೊಡಗಿತು. 2016ರಲ್ಲಿ ಹಿಲರಿ ಕ್ಲಿಂಟನ್ ಆಯ್ಕೆಯಾಗಿದ್ದರೆ ಯೂಕ್ರೇನ್ನ ನ್ಯಾಟೋ ಬಯಕೆಗೆ ಇನ್ನಷ್ಟು ಬಲ ಬರುತ್ತಿತ್ತು. ಅದು ರಷ್ಯಾವನ್ನು ಇನ್ನಷ್ಟು ಕೆರಳಿಸುತ್ತಿದ್ದುದೂ ನಿಜ. ಆದರೆ ಟ್ರಂಪ್ ಆಯ್ಕೆಯಾದದ್ದರಿಂದ ಅದು ಸಾಧ್ಯವಾಗಲಿಲ್ಲ. ತಮ್ಮ ಅಧಿಕಾರದುದ್ದಕ್ಕೂ ಟ್ರಂಪ್ ಯೂಕ್ರೇನ್ನ ನ್ಯಾಟೋ ಕನಸಿಗೆ ತಣ್ಣೀರು ಎರಚುತ್ತಲೇ ಹೋದರು. ವ್ಲಾದಿಮೀರ್ ಪುತಿನ್ರನ್ನು ಕೆರಳಿಸಿ ಪೂರ್ವ ಯೂರೋಪ್ನಲ್ಲಿ ಅಶಾಂತಿಗೆ ದಾರಿಮಾಡಿಕೊಡುವುದು ಸರಿಯಲ್ಲ ಎಂದವರ ತರ್ಕ ಸರಿಯಾಗಿಯೇ ಇತ್ತು.
ಆದರೆ ನಾಲ್ಕು ವರ್ಷಗಳ ಹಿಂದೆ ಜೋ ಬೈಡೆನ್ ಶ್ವೇತಭವನ ಪ್ರವೇಶಿಸಿದ್ದೇ ಪರಿಸ್ಥಿತಿ ತಿರುವುಮುರುವಾಯಿತು. ಹೊಸ ಡೆಮೋಕ್ರಾಟಿಕ್ ಅಧ್ಯಕ್ಷರು ಹಿಂದೆ ಒಬಾಮ ಅರ್ಧಕ್ಕೆ ನಿಲ್ಲಿಸಿದ್ದನ್ನು ಮತ್ತೆ ಕೈಗೆತ್ತಿಕೊಂಡರು, ಯೂಕ್ರೇನ್ ಅಧ್ಯಕ್ಷ ವೊಲೊದಿಮೀರ್ ಝೆಲೆನ್ಸ್ಕಿಯವರ ನ್ಯಾಟೋ ಬಯಕೆಯನ್ನು ಪ್ರೋತ್ಸಾಹಿಸಿದರು. ಜತೆಗೆ, ರಷ್ಯಾದಿಂದ ವಿರೋಧವೇನಾದರೂ ಬಂದರೆ ಅದನ್ನು ನಿಭಾಯಿಸಲು ಅನುಕೂಲವಾಗಲೆಂದು ಮೂರು ಕಂತಿನಲ್ಲಿ ಯೂಕ್ರೇನ್ಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಿದರು. ಕೆರಳಿದ ಪುತಿನ್ 2022ರ ಫೆಬ್ರವರಿ 24ರಂದು ಯೂಕ್ರೇನ್ ಮೇಲೆ ಯುದ್ಧ ಸಾರಿದರು. ಯುದ್ಧನಿರತ ದೇಶವೊಂದು ಸದಸ್ಯವಾಗುವ ಅವಕಾಶ ನ್ಯಾಟೋ ನಿಯಮಗಳಲ್ಲಿ ಇಲ್ಲ. ಅಲ್ಲಿಗೆ ಯೂಕ್ರೇನ್ನ ನ್ಯಾಟೋ ಕನಸು ಅನಿರ್ದಿಷ್ಟ ಕಾಲದವರೆಗೆ ಮುಂದಕ್ಕೆ ಹೋದಂತಾಯಿತು. ಜತೆಗೆ ಯೂಕ್ರೇನ್ ಕಳೆದುಕೊಂಡದ್ದು? ಆ ದೇಶದ ಸುಮಾರು 18% ನೆಲ ಈಗ ರಷ್ಯಾದ ವಶವಾಗಿದೆ. ರಾಜಧಾನಿ ಕೀಯೆವ್ ಜತೆಗೆ ಎಲ್ಲ ಪ್ರಮುಖ ನಗರಗಳೂ ಭಾಗಶಃ ನಾಶವಾಗಿವೆ!
ಈಗ ಟ್ರಂಪ್ ಹೇಳುತ್ತಿದ್ದಾರೆ, ಕಳೆದುಕೊಂಡ ನೆಲವನ್ನು ಮರೆತು ಯೂಕ್ರೇನ್ ಶಾಂತಿಗೆ ಸಿದ್ಧವಾಗಬೇಕು ಎಂದು! ಬಿಬಿಸಿ ವಾರ್ತಾಸಂಸ್ಥೆ ಪ್ರಕಾರ ಈ ಸಂದೇಶವನ್ನು ಅಧ್ಯಕ್ಷ ಝೆಲೆನ್ಸ್ಕಿಯವರಿಗೆ ಸ್ಪಷ್ಟ ಮಾತುಗಳಲ್ಲಿ ತಲುಪಿಸಿದ್ದು ಟ್ರಂಪ್ರ ವರಿಷ್ಠ ಸಲಹೆಗಾರ ಬ್ರಯಾನ್ ಲಾಂಜ್. ಜತೆಗೆ ಯೂಕ್ರೇನ್ಗೆ ಸೇನಾಸಹಾಯವನ್ನೂ ನಿಲ್ಲಿಸುವ ಘೊಷಣೆಯನ್ನು ಟ್ರಂಪ್ ಮಾಡಿದ್ದಾರೆ. ಝೆಲೆನ್ಸ್ಕಿಯವರಿಗೆ ಯೂರೋಪಿಯನ್ ಯೂನಿಯನ್ ಇನ್ನೂ ಬೆಂಬಲವಾಗಿ ನಿಲ್ಲಬಹುದು. ಆದರೆ ಅದೆಷ್ಟು ದಿನ? ರಷ್ಯಾ ವಿರುದ್ಧ ಹೋರಾಡಲು ಯೂಕ್ರೇನ್ಗೆ ಇದುವರೆಗೆ 27 ದೇಶಗಳ ಯೂರೋಪಿಯನ್ ಒಕ್ಕೂಟ ಕೊಟ್ಟಿರುವುದು 131 ಬಿಲಿಯನ್ ಡಾಲರ್ಗಳಾದರೆ ಅಮೆರಿಕ ಒಂದೇ ನೀಡಿರುವುದು 174 ಬಿಲಿಯನ್ ಡಾಲರ್ಗಳ ಅಗಾಧ ಮೊತ್ತ! ಇದು ನಿಂತುಹೋದರೆ ಝೆಲೆನ್ಸ್ಕಿ ಇನ್ನೆಷ್ಟು ಕಾಲ ಯುದ್ಧ ಮುಂದುವರಿಸಲು ಸಾಧ್ಯ? ಇದು ಅವರಿಗೂ ಅರ್ಥವಾಗಿರುವಂತಿದೆ.
ಎಲಾನ್ ಮಸ್ಕ್ ಅವರನ್ನು ಗೋಗರೆದುಕೊಂಡು ಟ್ರಂಪ್ರೊಂದಿಗೆ ದೂರವಾಣಿಯಲ್ಲಿ ಮಾತಾಡುವ ಅವಕಾಶವನ್ನು ಝೆಲೆನ್ಸ್ಕಿ ಪಡೆದುಕೊಂಡರೇನೋ ನಿಜ. ಆದರೆ ಸ್ಪೀಕರ್ ಮೋಡ್ನಲ್ಲಿ ಏಳು ನಿಮಿಷ ಸಾಗಿದ ಆ ಸಂಭಾಷಣೆಯಲ್ಲಿ ನೆಮ್ಮದಿ ಉಂಟುಮಾಡುವುದೇನೂ ಯೂಕ್ರೇನ್ ಅಧ್ಯಕ್ಷರ ಕಿವಿಗೆ ಬೀಳಲಿಲ್ಲ ಎಂದು ಸಿಎನ್ಎನ್ ವರದಿ ಮಾಡಿದೆ. ಇನ್ನುಳಿದ 58 ದಿನಗಳಲ್ಲಿ ಬೈಡೆನ್ ಮತ್ತೇನಾದರೂ ಅನಾಹುತ ಮಾಡದಿದ್ದಲ್ಲಿ ಟ್ರಂಪ್ ಶ್ವೇತಭವನ ಪ್ರವೇಶಿಸುವ ಹೊತ್ತಿಗೆ ಆಗ್ನೇಯ ಯೂರೋಪ್ನಲ್ಲಿ ಯುದ್ಧ ನಿಂತಿರುತ್ತದೆ ಅಥವಾ ಅದಕ್ಕೆ ಕ್ಷಣಗಣನೆ ಆರಂಭವಾಗಿರುತ್ತದೆ. ಪಶ್ಚಿಮ ಏಷ್ಯಾ ಸಂಘರ್ಷ ಮತ್ತು ಭಾರತ-ಅಮೆರಿಕ ಸಂಬಂಧಗಳು ತಕ್ಕಮಟ್ಟಿಗೆ ಒಂದಕ್ಕೊಂದು ಸಂಬಂಧಿಸಿವೆ. ಇವುಗಳ ಮೇಲೆ ಟ್ರಂಪ್ ಆಡಳಿತಾವಧಿಯಲ್ಲಿ ಆಗಬಹುದಾದ ಪರಿಣಾಮವನ್ನು ಸರಣಿಯ ಅಂತಿಮ ಭಾಗದಲ್ಲಿ ಮುಂದಿನವಾರ ಪರಿಶೀಲಿಸೋಣ.