

ನಿಷ್ಠಾವಂತ ಹಾಗೂ ಚತುರ ಸಂಘಟಕರಾಗಿದ್ದ ಲಾಲಕೃಷ್ಣ ಆಡ್ವಾಣಿಯವರಿಗೆ ಜನಸಂಘದಲ್ಲೂ, ನಂತರ ಭಾರತೀಯ ಜನತಾ ಪಕ್ಷದಲ್ಲೂ ಅಟಲ್ ಬಿಹಾರಿ ವಾಜಪೇಯಿಯವರ ನಂತರ ಎರಡನೆಯ ಸ್ಥಾನದ ಸ್ಥಿತಿ ದಶಕಗಳ ಕಾಲ ನಡೆದುಕೊಂಡು ಬಂತು. ಆದರೆ, ಆಡ್ವಾಣಿ ನಡೆಸಿದ ರಾಮ ರಥಯಾತ್ರೆ ರಾಜಕೀಯ ಚಿತ್ರಣವನ್ನೇ ಬದಲಿಸಿತು.
ಹದಿನೆಂಟು ವರ್ಷಗಳು ಉರುಳಿಹೋದವು. ಕುರುವಂಶದ ಚಿತ್ರಣ ಹದಿನೆಂಟೇ ದಿನಗಳಲ್ಲಿ ಪೂರ್ಣವಾಗಿ ಬದಲಾಗಿಹೋಯಿತಂತೆ. ಆದರೆ ಕೆಲವೊಂದು ಬದಲಾವಣೆಗಳಿಗೆ ತಿಂಗಳುಗಳು, ವರ್ಷಗಳು ಬೇಕಾಗುತ್ತವೆ. ಅದು ಭಾನುವಾರ, ಜುಲೈ 2, 2017ರ ಸಂಜೆ, ಅಂದಿನ ರಾಷ್ಟ್ರಪತಿಗಳ ಕುರಿತಾದ ‘ಪ್ರಣಬ್ ಮುಖರ್ಜೀ: ಎ ಸ್ಟೇಟ್ಸ್ಮ್ಯಾನ್’ ಕೃತಿಯ ಲೋಕಾರ್ಪಣೆ ಕಾರ್ಯಕ್ರಮ, ರಾಷ್ಟ್ರಪತಿ ಭವನದಲ್ಲೇ. ಸಹಜವಾಗಿಯೇ ಅದು ಸರ್ಕಾರದ; ಆಡಳಿತ ಪಕ್ಷ ಹಾಗೂ ವಿರೋಧ ಪಕ್ಷಗಳ ಪ್ರಮುಖರ, ದೇಶದ ಸಾಂಸ್ಕೃತಿಕ ಹಾಗೂ ವೈಚಾರಿಕ ನಾಯಕರ ಒಡ್ಡೋಲಗ. ಹಿರಿಯ ಬಿಜೆಪಿ ನಾಯಕ, ಮಾಜಿ ಗೃಹಮಂತ್ರಿ ಎಲ್.ಕೆ. ಆಡ್ವಾಣಿ ನಿಧಾನವಾಗಿ ಸಭಾಂಗಣ ಪ್ರವೇಶಿಸಿದರು, ಮತ್ತೂ ನಿಧಾನವಾಗಿ ಖಾಲಿ ಆಸನವೊಂದರತ್ತ ಹೆಜ್ಜೆಹಾಕಿದರು. ಅವರ ಹೆಜ್ಜೆಗಳ ದಿಕ್ಕನ್ನು ಗಮನಿಸಿ, ಅವು ತಮ್ಮತ್ತಲೇ ಬರುತ್ತಿವೆ ಎಂದು ಗುರುತಿಸಿದ ಮೂವರು ಬಿಜೆಪಿ ನಾಯಕರು ತಂತಮ್ಮ ಆಸನಗಳಿಂದ ಎದ್ದು, ದೂರದೂರಕ್ಕೆ ಹೊರಟುಹೋಗುತ್ತಾರೆ ಎಂದು ಕಂಡವರು ಹೇಳುತ್ತಾರೆ. ಆಡ್ವಾಣಿಯವರ ಹೆಜ್ಜೆಗಳು ಸ್ಥಗಿತಗೊಳ್ಳುತ್ತವೆ, ಕಣ್ಣುಗಳಲ್ಲಿ ನೀರು ಜಿನುಗುತ್ತದೆ ಅಂತಲೂ ಕಂಡವರು ಹೇಳುತ್ತಾರೆ. ಅದು ನೋವಿನ ಕಣ್ಣೀರು.
1999ರ ಆನಂದಬಾಷ್ಪ 2017ರಲ್ಲಿ ವ್ಯಥೆಯ ಕಣ್ಣೀರಾಗಿ ಬದಲಾಗಿಹೋಗಿದಕ್ಕೆ ಕಾರಣವೇನು? ಆ ಹದಿನೆಂಟು ವರ್ಷಗಳಲ್ಲಿ ನಡೆದದ್ದಾದರೂ ಏನು?
ಆಡ್ವಾಣಿಯವರು ಉತ್ತಮ ಸಂಘಟಕ ಎನ್ನುವುದರಲ್ಲಿ ಎರಡು ಮಾತಿಲ್ಲ. ಪ್ರತಿಭೆಗಳನ್ನು ಗುರುತಿಸಿ ಬೆಳೆಸಿ, ಸೂಕ್ತ ಜವಾಬ್ದಾರಿಯನ್ನು ಅವರ ಹೆಗಲಿಗೆ ಹಾಕಿ, ಅವರಿಂದ ಪಕ್ಷ ಹಾಗೂ ದೇಶದ ಉನ್ನತಿಯ ಕಾರ್ಯಗಳನ್ನು ಸಾಧಿಸುವುದು, ಶಿಷ್ಯರು ಯಶಸ್ಸು ಕಂಡಾಗ ಅವರನ್ನು ಪೂರ್ಣಮನಸ್ಸಿನಿಂದ ಅಭಿನಂದಿಸುವುದು ನಿಜವಾದ ನಾಯಕನ ಗುಣ. ಅದು ಆಡ್ವಾಣಿಯರಲ್ಲಿ ಹೇರಳವಾಗಿತ್ತು. ಜತೆಗೆ, ಅವರದು ಭಾವುಕ ಮನೋಭಾವವಾದ ಕಾರಣ ಹೃದಯಕ್ಕಾದ ಹರ್ಷ ಆನಂದಬಾಷ್ಪವಾಗಿ ಹೊರಚಿಮ್ಮುವುದೂ ಸಹಜವೇ ಆಗಿತ್ತು. ಅದೇ ಭಾವುಕ ಮನೋಭಾವ ಹೃದಯಕ್ಕಾದ ನೋವನ್ನು ಕಣ್ಣೀರಾಗಿಯೂ ಹೊರಹರಿಸಿಬಿಡುತ್ತದೆ.
ನಿಷ್ಠಾವಂತ ಹಾಗೂ ಚತುರ ಸಂಘಟಕರಾಗಿದ್ದ ಆಡ್ವಾಣಿಯವರಿಗೆ ಜನಸಂಘದಲ್ಲೂ, ನಂತರ ಭಾರತೀಯ ಜನತಾ ಪಕ್ಷದಲ್ಲೂ ಅಟಲ್ ಬಿಹಾರಿ ವಾಜಪೇಯಿಯವರ ನಂತರ ಎರಡನೆಯ ಸ್ಥಾನದ ಸ್ಥಿತಿ ದಶಕಗಳ ಕಾಲ ನಡೆದುಕೊಂಡು ಬಂತು. ಆದರೆ, ಅಯೋಧ್ಯೆಯಲ್ಲಿ ರಾಮಜನ್ಮಸ್ಥಳ ಮಂದಿರದ ನಿರ್ವಣಕ್ಕಾಗಿ ಹಿಂದೂಗಳಲ್ಲಿ ಜಾಗೃತಿ ಮೂಡಿಸಲು ಮತ್ತು ಆ ಮೂಲಕ ಅಧಿಕ ಸಂಖ್ಯೆಯ ಹಿಂದೂಗಳನ್ನು ಬಿಜೆಪಿಯತ್ತ ಸೆಳೆಯಲು ಸೆಪ್ಟೆಂಬರ್ 25- ಅಕ್ಟೋಬರ್ 31, 1990ರ ಆವಧಿಯಲ್ಲಿ ಆಡ್ವಾಣಿಯವರು ಕೈಗೊಂಡ ರಥಯಾತ್ರೆ ಪಕ್ಷದ ನಾಯಕತ್ವದ ವಾಸ್ತವಗಳನ್ನು ನಾಟಕೀಯವಾಗಿ ಬದಲಾಯಿಸಿಬಿಟ್ಟಿತು. ಬಿಜೆಪಿಯ ಪರವಾದ, ಅಷ್ಟೇ ವಿರೋಧಿಗಳೂ ಆದ ಭಾರತೀಯರ ಅಭಿಪ್ರಾಯದಲ್ಲಿ ಹಾಗೂ ಪಕ್ಷದ ಕಾರ್ಯಕರ್ತರ ಮನಸ್ಸಿನಲ್ಲಿ ವಾಜಪೇಯಿ ಹಿನ್ನೆಲೆಗೆ ಸರಿದು ಅವರ ಸ್ಥಾನದಲ್ಲಿ ಆಡ್ವಾಣಿಯವರು ಪಕ್ಷದ ನೇತಾರರಾಗಿ, ಆ ಮೂಲಕ ಮುಂದಿನ ಚುನಾವಣೆಗಳಲ್ಲಿ ಬಿಜೆಪಿಯ ಪ್ರಧಾನಮಂತ್ರಿ ಅಭ್ಯರ್ಥಿಯಾಗಿ ಆಡ್ವಾಣಿಯವರು ಪ್ರತಿಷ್ಠಾಪಿತರಾದರು.
ಮುಂದಿನ ಆರೇ ತಿಂಗಳಲ್ಲಿ ಕೇಂದ್ರದಲ್ಲಿ ಎರಡು ಸರ್ಕಾರಗಳು ಉರುಳಿ, ಚುನಾವಣೆಗಳು ಘೊಷಣೆಯಾಗಿಯೇಬಿಟ್ಟಾಗ, ಮುಂದಿನ ಪ್ರಧಾನಮಂತ್ರಿ ಆಡ್ವಾಣಿ ಎನ್ನುವುದು ಬಹುತೇಕ ಸಿದ್ಧವಾದಂತೇ ಆಗಿಬಿಟ್ಟಿತು. ‘ಸರ್ಕಾರ್ ಗಿರೇಗಿ, ಮಗರ್ ಮಸ್ಜಿದ್ ನಹೀ ಗಿರೇಗಿ’ ಎಂದು ಘೊಷಿಸಿದ ಆಗಿನ ಪ್ರಧಾನಮಂತ್ರಿ ವಿ.ಪಿ. ಸಿಂಗ್ ಸಹಜವಾಗಿಯೇ ತಮಗೆ ಹೊರಗಿನಿಂದ ಬೆಂಬಲ ನೀಡಿದ್ದ ಬಿಜೆಪಿಯ ವಿಶ್ವಾಸವನ್ನು ಕಳೆದುಕೊಂಡು, ಹೊರನಡೆದರೆ, ಲೋಕಸಭೆಯಲ್ಲಿ ಕೇವಲ ನಲವತ್ತನಾಲ್ಕು ಸದಸ್ಯರನ್ನು ಇಟ್ಟುಕೊಂಡು, ‘ಯಾರ್ಯಾರದೋ’ ಬೆಂಬಲದ ಬೆನ್ನುಹತ್ತಿದ ಹೊಸ ಪ್ರಧಾನಿ ಚಂದ್ರಶೇಖರ್ ಅವರ ಗುಳಿಬಿದ್ದ ಕೆನ್ನೆಗಳೇನೋ ತುಂಬತೊಡಗಿದ್ದು ನಿಜ. ಆದರೆ ಪ್ರಧಾನಮಂತ್ರಿಯಾಗಿ ಮುಂದುವರಿಯಲು ಅವು ಸಾಕಾಗಿರಲಿಲ್ಲ. ಹೊರಗಿನ ಬೆಂಬಲ ಹಳ್ಳಹಿಡಿಯುತ್ತ ಹೋಗಿ ಮೂರೇ ತಿಂಗಳಲ್ಲಿ ಆ ‘ಸಮಾಜವಾದಿ’ ಕೈಚೆಲ್ಲಿದರು. ಆಗ ಚುನಾವಣೆಗಳು ಘೊಷಣೆಯಾದಾಗ ಮುಂದಿನ ಪ್ರಧಾನಿ ಎಲ್.ಕೆ. ಆಡ್ವಾಣಿ ಎನ್ನುವುದು ಸರಿಸುಮಾರು ಖಚಿತವೇ ಆಗಿಬಿಟ್ಟಿತು. ಆದರೆ ಆ ಚಿತ್ರವನ್ನು ಬದಲಾಯಿಸಿದ್ದು ಚುನಾವಣೆಗಳ ನಡುವೆಯೇ ಘಟಿಸಿದ ರಾಜೀವ್ ಗಾಂಧಿ ಹತ್ಯೆ. ಆಡ್ವಾಣಿಯವರಿಗೆ ಕೈಗೆ ಬಂದ ತುತ್ತು ಬಾಯಿಗಿಲ್ಲದಂತಾಯಿತು. ಆದಾಗ್ಯೂ, ಪಿ.ವಿ. ನರಸಿಂಹರಾವ್ ಪ್ರಧಾನಮಂತ್ರಿತ್ವದ ಅಲ್ಪಸಂಖ್ಯಾತ ಕಾಂಗ್ರೆಸ್ ಸರ್ಕಾರ ಹಿಂದಿನ ಎರಡು ಸರ್ಕಾರಗಳ ಹಾದಿಯನ್ನೇ ಹಿಡಿಯಬಹುದೆಂಬ ಸ್ಥಿತಿಯೂ ದಿನನಿತ್ಯದ ಆತಂಕವಾಯಿತು. ಮುಂದಿನ ಚುನಾವಣೆಗಳನ್ನು ಇನ್ನಷ್ಟು ಹತ್ತಿರಕ್ಕೆಳೆಯಲು ಆಡ್ವಾಣಿ ಮತ್ತು ಇತರ ಬಿಜೆಪಿ ನಾಯಕರು ಮತ್ತೆ ಮೊರೆಹೋದದ್ದು ಅಯೋಧ್ಯೆಯ ರಾಮಜನ್ಮಭೂಮಿಗೆ. ಅದು ಅತಿರೇಕಕ್ಕೆ ಹೋಗಿ, ಡಿಸೆಂಬರ್ 6, 1992ರಂದು ವಿವಾದಿತ ಕಟ್ಟಡ ಕುಸಿದಾಗ ಬಿಜೆಪಿ ನಾಯಕತ್ವದಲ್ಲಿ ಮತ್ತೆ ಬದಲಾವಣೆ ಅನಿವಾರ್ಯವಾಯಿತು. ಬಾಬ್ರಿ ಕಟ್ಟಡದ ಕೆಡಹುವಿಕೆಯ ಆಪಾದನೆ ಆಡ್ವಾಣಿಯವರ ಮೇಲೂ ಬಂದು, ಅವರು ನ್ಯಾಯಿಕ ತನಿಖೆ ಎದುರಿಸುವುದು 1993ರಲ್ಲೇ ಆರಂಭವಾಯಿತು. ಮುಂದೆ 2020ರಲ್ಲಿ ನ್ಯಾಯಾಲಯ ಆಡ್ವಾಣಿಯವರನ್ನು ದೋಷಮುಕ್ತಗೊಳಿಸುವ ಹೊತ್ತಿಗೆ ಸರಯೂ ನದಿಯಲ್ಲಿ ಅದೆಷ್ಟು ನೀರು ಹರಿದುಹೋಯಿತು! ಆಡ್ವಾಣಿಯವರ ರಾಜಕೀಯ ಬದುಕಿನಲ್ಲಿ, ಬಿಜೆಪಿಯ ಚುನಾವಣಾ ನಕಾಶೆಯಲ್ಲಿ, ರಾಷ್ಟ್ರರಾಜಕಾರಣದಲ್ಲಿ ಅದೆಂತಹ ಬದಲಾವಣೆಯಾಗಿಹೋಯಿತು!
ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಜಯಶಾಲಿಯಾಗಿ, ಆಡ್ವಾಣಿಯವರು ಪ್ರಧಾನಮಂತ್ರಿಯಾದರೂ, ಬಾಬ್ರಿ ಪ್ರಕರಣದ ತನಿಖೆಯಲ್ಲಿ ಅವರು ದೋಷಿಯೆಂದು ತೀರ್ವನವಾಗಿ ಅವರು ರಾಜೀನಾಮೆ ಕೊಡಬೇಕಾದ ಸನ್ನಿವೇಶ ಉಂಟಾದರೆ ಅದು, ಅವರಿಗಾಗಲೀ, ಬಿಜೆಪಿಗಾಗಲೀ ಒಳ್ಳೆಯ ಹೆಸರು ತರುವುದಿಲ್ಲ ಎನ್ನುವುದು ಪಕ್ಷದಲ್ಲೇ ಸಾರ್ವತ್ರಿಕವಾಯಿತು. ಇದನ್ನು ಸ್ವತಃ ಅರಿತ ಆಡ್ವಾಣಿ, ಮುಂದಿನ ಬಿಜೆಪಿ ಪ್ರಧಾನಮಂತ್ರಿ ಅಭ್ಯರ್ಥಿ ತಾವಲ್ಲ, ವಾಜಪೇಯಿ ಎಂದು 1995ರಲ್ಲಿ ಮುಂಬೈನ ಆಜಾದ್ ಮೈದಾನದಲ್ಲಿ ಪಕ್ಷಕ್ಕೂ, ದೇಶಕ್ಕೂ ಸಾರಿಬಿಟ್ಟರು. ಅದರಂತೆ ವಾಜಪೇಯಿ 1996ರಲ್ಲಿ ಹದಿಮೂರು ದಿನಗಳು, 1998-99ರಲ್ಲಿ ಹದಿಮೂರು ತಿಂಗಳು ಮತ್ತು ನಂತರ ಐದು ವರ್ಷಗಳ ಪೂರ್ಣಾವಧಿಗೆ ಪ್ರಧಾನಮಂತ್ರಿಯಾದರು. ಆ ಸ್ಥಾನವನ್ನು ಅವರು 2004ರಲ್ಲಿ ಕಳೆದುಕೊಂಡದ್ದು ಅನಿರೀಕ್ಷಿತ. ಚುನಾವಣಾ ರಾಜಕಾರಣದಲ್ಲಿ ಈ ಬಗೆಯ ಮೇಲುಕೆಳಗಾಟ ಸಹಜ. ಆದರೆ ಅದಕ್ಕೆ ಆಡ್ವಾಣಿಯವರು ಪ್ರತಿಕ್ರಿಯಿಸಿದ ಬಗೆ ಅವರನ್ನು ಹತ್ತಿರದಿಂದ ಕಂಡಿದ್ದವರಿಗೆ ಅಸಹಜವಾಗಿದ್ದಂತೆ ಕಾಣುತ್ತದೆ. ಅದನ್ನು ನಿಮ್ಮ ಮುಂದೆ ಸಂಕ್ಷಿಪ್ತವಾಗಿ ಚಿತ್ರಿಸುತ್ತೇನೆ.
ಕಾಂಗ್ರೆಸ್ ಮತ್ತು ಗಾಂಧಿ ಪರಿವಾರದ ಆರ್ಥಿಕ ಭ್ರಷ್ಟಾಚಾರದ ವಿರುದ್ಧ ಬಿಜೆಪಿ 1987ರಲ್ಲೇ ಯುದ್ಧ ಸಾರಿತ್ತು. ಆ ಯುದ್ಧದಲ್ಲಿ ಬಿಜೆಪಿ ಪಾಳಯದ ದಂಡನಾಯಕರಾಗಿದ್ದವರು ಲಾಲ್ಕೃಷ್ಣ ಆಡ್ವಾಣಿಯವರೇ ಮತ್ತು ಅವರ ಪ್ರಮುಖ ಅಸ್ತ್ರ ರಾಜೀವ್ ಮತ್ತು ಸೋನಿಯಾ ಗಾಂಧಿ ಸ್ವಿಸ್ ಬ್ಯಾಂಕ್ಗಳಲ್ಲಿ ಅಗಾಧ ಪ್ರಮಾಣದಲ್ಲಿ ಕಳ್ಳಹಣ ಇಟ್ಟಿದ್ದಾರೆಂಬ ಆರೋಪ. ಈ ಆರೋಪದ ಪರವಾಗಿ ಆಡ್ವಾಣಿಯವರಲ್ಲದೆ ಇತರ ಬಿಜೆಪಿ ನಾಯಕರು ಹಲವಾರು ವಿಶ್ವಸನೀಯವೆನಿಸುವಂತಹ ಆಧಾರಗಳನ್ನು ದೇಶದ ಮುಂದಿಡುತ್ತ ಬಂದದ್ದೂ ಉಂಟು. ಇದೆಲ್ಲವನ್ನೂ ಮರೆತು ಆಡ್ವಾಣಿಯವರು 2004-14ರ ಯುಪಿಎ ಆಡಳಿತಾವಧಿಯಲ್ಲಿ ಸೋನಿಯಾರಿಗೆ ಹತ್ತಿರವಾದರು. ಅಷ್ಟೇ ಅಲ್ಲ, ಆ ಕಾಂಗ್ರೆಸ್ ನಾಯಕಿ ವಿರುದ್ಧ ತಾವೂ ಸೇರಿದಂತೆ ಬಿಜೆಪಿ ನಾಯಕರುಗಳು ಮಾಡಿದ ಭ್ರಷ್ಟಾಚಾರ ಹಾಗೂ ಸ್ವಿಸ್ ಬ್ಯಾಂಕ್ನಲ್ಲಿ ಕಳ್ಳಹಣ ಇಟ್ಟಿದ್ದಾರೆಂಬ ಆರೋಪಗಳೆಲ್ಲ ಸತ್ಯದೂರ ಎಂದವರು 2011ರಲ್ಲಿ ಸಾರ್ವಜನಿಕವಾಗಿಯೇ ಹೇಳಿಕೆ ನೀಡಿಬಿಟ್ಟರು. ಕಾಂಗ್ರೆಸ್ ವಿರುದ್ಧ ಬಿಜೆಪಿ ಸಾಗಿಸಿಕೊಂಡು ಬಂದಿದ್ದ ಹೋರಾಟದ ಬೇರನ್ನೇ ಕತ್ತರಿಸುವ ಕೃತ್ಯ ಇದು.
ಆಡ್ವಾಣಿ ಹೀಗೇಕೆ ಮಾಡಿದರು? ಇದಕ್ಕೆ ಅವರು ಮತ್ತು ಸೋನಿಯಾ ಗಾಂಧಿ ಉತ್ತರಿಸದ ಹೊರತು ನಮಗೆ ಉತ್ತರ ದೊರೆಯುವುದಿಲ್ಲ. ಆದರೆ ಕೆಲ ಸಾಂರ್ದಭಿಕ ಸಾಕ್ಷ್ಯಾಧಾರಗಳ ಮೇಲೆ ಊಹೆಯೊಂದನ್ನು ಮಾಡುವ ಅವಕಾಶ ನಮಗಿದೆ. ಡಿಸೆಂಬರ್ 6, 1992ರಂದು ಉದ್ರಿಕ್ತ ಕರಸೇವಕರು ವಿವಾದಿತ ಕಟ್ಟಡದ ಮೂರೂ ಗುಮ್ಮಟಗಳನ್ನು ಕೆಡವಿದರಷ್ಟೇ. ಈ ಕೃತ್ಯಕ್ಕೆ ಪೂರ್ವಯೋಜನೆ ರೂಪಿಸಿದ, ಕಟ್ಟಡದ ಧ್ವಂಸಕ್ಕೆ ಪ್ರಚೋದನೆ ನೀಡಿದ ಆಪಾದನೆ ಆಡ್ವಾಣಿಯವರ ಮೇಲೂ ಬಂತು ಮತ್ತು ಆ ಕುರಿತಾಗಿ ನ್ಯಾಯಿಕ ವಿಚಾರಣೆ 1993ರಲ್ಲೇ ಆರಂಭವಾಗಿತ್ತು. ವಿವಾದಿತ ಸ್ಥಳದಲ್ಲಿ ಹಲವಾರು ಗುಪ್ತ ಕ್ಯಾಮೆರಾಗಳನ್ನು ಆಳವಡಿಸುವ ವ್ಯವಸ್ಥೆಯನ್ನು ಆಗಿನ ಕಾಂಗ್ರೆಸ್ ನೇತೃತ್ವದ ಸಮಿಶ್ರ ಸರ್ಕಾರದಲ್ಲಿ ರಕ್ಷಣಾಮಂತ್ರಿಯಾಗಿದ್ದ ಶರದ್ ಪವಾರ್ ಮಾಡಿದ್ದರು ಎನ್ನಲಾಗುತ್ತದೆ. ಹೀಗಾಗಿ ಡಿಸೆಂಬರ್ 6ರ ಆ ಇಡೀ ಘಟನೆ ಚಿತ್ರೀಕರಣಗೊಂಡು ರಕ್ಷಣಾ ಇಲಾಖೆಯ ಕೈಸೇರಿತು ಎಂಬ ಮಾತೂ ಇದೆ. ಅದನ್ನು ಬೇಕೆಂದಾಗ ನ್ಯಾಯಾಲಯಕ್ಕೆ ಸಲ್ಲಿಸಿ ಆಡ್ವಾಣಿಯವರನ್ನು ಇಕ್ಕಟ್ಟಿಗೆ ಸಿಲುಕಿಸುವ ಅವಕಾಶ ಸೋನಿಯಾರಿಗಿತ್ತು ಎಂದೂ ಹೇಳಲಾಗುತ್ತದೆ. ಈ ಇಕ್ಕಟ್ಟನ್ನು ನಿವಾರಿಸಿಕೊಳ್ಳಲೆಂದೇ ಆಡ್ವಾಣಿಯವರು ಸೋನಿಯಾರಿಗೆ ಹತ್ತಿರವಾಗಿರಬೇಕು, ಭ್ರಷ್ಟಾಚಾರ ವಿಷಯದಲ್ಲಿ ಕಾಂಗ್ರೆಸ್ ನಾಯಕಿಯ ಪರವಾಗಿ ಹೇಳಿಕೆ ಕೊಟ್ಟಿರಬಹುದು. ಈ ಊಹೆಗೆ ಇಂಬುಗೊಡುವುದು ಹತ್ತುವರ್ಷಗಳ ಯುಪಿಎ ಆಡಳಿತಾವಧಿಯಲ್ಲಿ ವಿವಾದಿತ ಕಟ್ಟಡ ಧ್ವಂಸದ ಕುರಿತಾದ ನ್ಯಾಯಿಕ ಪ್ರಕ್ರಿಯೆ ಮುಂದೆ ಸಾಗಲೇ ಇಲ್ಲ ಎಂಬ ವಿಷಯ. ಒಟ್ಟಿನಲ್ಲಿ, ತಮ್ಮ ಸೋನಿಯಾ-ಪರ ನಿಲುವುಗಳಿಂದ ಆಡ್ವಾಣಿಯವರು ಬಿಜಿಪಿಯ ಕಾಂಗ್ರೆಸ್-ವಿರೋಧದ ಬುಡವನ್ನೇ ಕತ್ತರಿಸಲು ಹೊರಟರು. ಪ್ರತಿಯಾಗಿ ಬಿಜೆಪಿ ಅವರ ರಾಜಕೀಯ ಭವಿಷ್ಯದ ಬುಡವನ್ನೇ ಕತ್ತರಿಸಿಹಾಕಿತು.
2014ರ ಲೋಕಸಭಾ ಚುನಾವಣೆಗಳಲ್ಲಿ ಆಡ್ವಾಣಿ ಬಯಸಿದ ಗುಜರಾತ್ನ ಗಾಂಧಿನಗರ ಕ್ಷೇತ್ರವನ್ನು ಅವರಿಗೆ ನಿರಾಕರಿಸಿ ಅವರ ಬಗ್ಗೆ ತನ್ನ ನಿಲುವನ್ನು ಬಿಜೆಪಿ ಅವರಿಗೇ ಮನವರಿಕೆ ಮಾಡಿಕೊಟ್ಟಿತು. ಇದು ಮುಂದುವರಿದು ಮೂರು ವರ್ಷಗಳ ನಂತರ ರಾಷ್ಟ್ರಪತಿ ಭವನದಲ್ಲಿ ಆಡ್ವಾಣಿಯವರ ಕಣ್ಣಲ್ಲಿ ನೀರು ತರಿಸಿತು. ಇಲ್ಲಿ ಮತ್ತೊಬ್ಬ ಹಿರಿಯ ನಾಯಕ, ಮಾಜಿ ವಿದೇಶಾಂಗ ಜಸ್ವಂತ್ ಸಿಂಗ್ರ ಬಗೆಗೂ ಒಂದು ಮಾತು ಹೇಳಬೇಕು. 2005ರಲ್ಲಿ ಆಡ್ವಾಣಿ ಮಾಡಿದ್ದನ್ನೇ ಸಿಂಗ್ ನಾಲ್ಕು ವರ್ಷಗಳ ನಂತರ ಇನ್ನೂ ದೊಡ್ಡದಾಗಿ ಮಾಡಿದರು. 2009ರಲ್ಲಿ ಪ್ರಕಟಿಸಿದ, ದೇಶವಿಭಜನೆ ಬಗೆಗಿನ ತಮ್ಮ ‘ಒಜ್ಞಿ್ಞಜ: ಐಛಜಿಚ-ಕಚ್ಟಠಿಜ್ಚಿಜಿಟ್ಞ ಐಛಛಿಟಛ್ಞಿಛಛ್ಞಿ್ಚ’ ಕೃತಿಯಲ್ಲಿ ಜಿನ್ನಾರನ್ನು ‘ಸೆಕ್ಯೂಲರ್’ ಮನೋಭಾವದವರೆಂದು ಬಿಂಬಿಸಿದ್ದಲ್ಲದೆ ದೇಶವಿಭಜನೆಯಲ್ಲಿ ಅವರು ಪ್ರಮುಖ ದೋಷಿ ಅಲ್ಲವೆಂಬಂತೆಯೂ ಚಿತ್ರಿಸಿದರು. ಮುಂದುವರಿದು ಅವರು, ‘ದೋಷದ ಮುಳ್ಳು’ ಜವಾಹರ್ಲಾಲ್ ನೆಹರುರತ್ತ ತಿರುಗುವಂತೆ ಮಾಡಿದರು. ಹೀಗಾಗಿ ಅವರು ಏಕಕಾಲದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ಗಳೆರಡರಿಂದಲೂ ನಿಂದನೆಗೊಳಗಾದರು. ಬಿಜೆಪಿ ಮುಂದಾಳುಗಳಿಂದ ಉಗ್ರ ಪ್ರತಿಕ್ರಿಯೆಯನ್ನೆದುರಿಸಿದ ಅವರಿಗೆ 2014ರ ಚುನಾವಣೆಗಳಲ್ಲಿ ಬಿಜೆಪಿಯ ಟಿಕೆಟ್ ಅನ್ನೇ ನಿರಾಕರಿಸಲಾಯಿತು, ಬಂಡೆದ್ದು ಸ್ವತಂತ್ರವಾಗಿ ಸ್ಪರ್ಧಿಸಹೊರಟ ಅವರನ್ನು ಪಕ್ಷದಿಂದ ಉಚ್ಚಾಟಿಸಲಾಯಿತು. ಅಲ್ಲಿಗೆ ಜಸ್ವಂತ್ ಸಿಂಗ್ರ ರಾಜಕೀಯ ನೇಸರ ಅಸ್ತಂಗತನಾದ. ಆಡ್ವಾಣಿಯವರಿಗಾದರೋ ಕಾಂಗ್ರೆಸ್ ಮತ್ತದರ ತಥಾಕಥಿತ ಪ್ರಗತಿಪರ ಪಕ್ಷಗಳು, ಅವುಗಳು ಸಾಕಿದ್ದ ಪತ್ರಕರ್ತರು ಮತ್ತು ವಿಚಾರವಾದಿಗಳಿಂದ ಒಂದಷ್ಟು ಸಾಂತ್ವನದ, ಕೆಲವೊಮ್ಮೆ ಬೆಂಬಲದ ಮಾತುಗಳೂ ಬಂದದ್ದುಂಟು. ಆದರೆ ಜಸ್ವಂತ್ ಸಿಂಗ್ ಅವರಿಗೆ ಅದೂ ಸಿಗಲಿಲ್ಲ. ಯಾಕೆಂದರೆ, ‘ದೇಶವಿಭಜನೆಗೆ ಜಿನ್ನಾ ಏಕೈಕವಾಗಿ ಕಾರಣರಲ್ಲ’ ಎಂದು ಹೇಳುತ್ತ ಅವರು ದೇಶವಿಭಜನೆಯ ಜವಾಬ್ದಾರಿಯನ್ನು ಜವಾಹರ್ಲಾಲ್ ನೆಹರುರತ್ತ ತಿರುಗಿಸಿದ್ದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ಸಾಧ್ಯವೇ ಇರಲಿಲ್ಲ. ಅದೇ ನಿಲುವು ಅದರ ಜತೆಗಿನ ಇತರೆಲ್ಲರದಾಗಿತ್ತು.
ಒಟ್ಟಿನಲ್ಲಿ ತಾವೇ ಕಟ್ಟಿ ಬೆಳೆಸಿದ ಪಕ್ಷಕ್ಕೆ ತಾವೇ ನೀಡಿದ್ದ ಸೈದ್ಧಾಂತಿಕ ಅಸ್ತಿಭಾರವನ್ನು ತಮ್ಮ ಕೈಯಾರೆ ಒಡೆಯವುದು ಸಂಘಟನಾತ್ಮಕ ದೃಷ್ಟಿಯಿಂದ ಅದೆಷ್ಟು ಅನುಚಿತ, ವೈಯಕ್ತಿಕ ನೆಲೆಯಲ್ಲಿ ಅದೆಷ್ಟು ಸ್ವಭವಿಷ್ಯಘಾತಕ ಎನ್ನುವುದು ಈ ಇಬ್ಬರು ಹಿರಿಯ ನಾಯಕರ ಬದುಕಿನಿಂದ ವೇದ್ಯವಾಗುತ್ತದೆ, ಇತರರಿಗೆ ಪಾಠವಾಗುತ್ತದೆ. ಇಲ್ಲದಿದ್ದರೆ ಇಂದಿನ ಆನಂದಬಾಷ್ಪ ನಾಳೆ ಕಣ್ಣೀರಾಗಬಹುದಾದ ಅಪಾಯವೂ ಎದುರಾಗಬಹುದು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)