

ಇಂಗ್ಲಿಷ್ನಲ್ಲಿ Mercenaries ಎಂದು ಕರೆಯಲಾಗುವ, ಕನ್ನಡದಲ್ಲಿ ಕೂಲಿ ಸೇನೆ ಎಂದು ಕರೆಯಬಹುದಾದ ವ್ಯಾಗ್ನರ್ ಗ್ರೂಪ್ನ ಮಾಲಿಕ ಮತ್ತು ನಾಯಕ ಯೆವ್ಗೆನಿ ಪ್ರಿಗೋಝಿನ್ ಶನಿವಾರ, ಜೂನ್ 24ರಂದು ಮಾಸ್ಕೋ ನಗರದತ್ತ ದಂಡೆತ್ತಿ ಹೊರಟು, ಅಧ್ಯಕ್ಷ ವ್ಲಾದಿಮೀರ್ ಪುತಿನ್ ಅವರನ್ನು ಪದಚ್ಯುತಗೊಳಿಸುವುದಾಗಿ ಘೊಷಿಸಿ ಜಗತ್ತಿನಾದ್ಯಂತ ಸುದ್ದಿಯಾದ. ಆದರೆ, ಇದೇ ಸೋಮವಾರ, ಜುಲೈ 10ರಂದು ಅದೇ ಪ್ರಿಗೋಝಿನ್ ಅದೇ ಮಾಸ್ಕೋದಲ್ಲಿ ಅದೇ ಪುತಿನ್ ಮುಂದೆ ಮೂರು ಗಂಟೆ ಕೂತು ಕುಶಲೋಪರಿ ನಡೆಸಿದ ಸುದ್ದಿ ಇದೇ ಜಗತ್ತನ್ನು ಹೊಸದೊಂದು ವಾಸ್ತವವೊಂದಕ್ಕೆ ಮುಖಾಮುಖಿಯಾಗಿಸಿದೆ. ಜೂನ್ 24ರ ಬೆಳಗಿನಿಂದ ಸಂಜೆಯವರೆಗೆ ಪ್ರಳಯಾಂತಕ ಪ್ರಿಗೋಝಿನ್ ಆಡಿದ್ದೆಲ್ಲಾ ನಾಟಕ, ಅದರ ಚಿತ್ರಕಥೆ ತಯಾರಿಸಿದ್ದು ಪರಮಚತುರ ಪುತಿನ್, ರಂಗಸಜ್ಜಿಕೆ ಮಾಡಿದ್ದು ಲಫಂಗ ಲ್ಯೂಕಶೆಂಕೋ, ನಾಟಕದಲ್ಲಿ ಬಣ್ಣಗೆಟ್ಟದ್ದು ಬೈಡನ್ ಮುಖ, ಸಿಐಎಗೆ ಸಂಚಕಾರವಾದದ್ದು ಬರೋಬ್ಬರಿ 6.2 ಬಿಲಿಯನ್ ಡಾಲರ್ಗಳು (51,000 ಕೋಟಿ ರೂಪಾಯಿ) ಎಂದು ಆರಂಭದ ದಿನಗಳಲ್ಲೇ ಎದ್ದ ‘ಸಂಚು ಸಿದ್ಧಾಂತ’ಕ್ಕೆ ಪುಷ್ಟಿ ದೊರೆತಿದೆ.
ರಷ್ಯಾ- ಯೂಕ್ರೇನ್ ಯುದ್ಧದ ಬಗ್ಗೆ ಕಳೆದ 16 ತಿಂಗಳುಗಳಿಂದಲೂ ಕೇಳುತ್ತಿದ್ದವರಲ್ಲಿ ಹೆಚ್ಚಿನವರಿಗೆ ಜೂನ್ 24ರವರೆಗೂ ವ್ಯಾಗ್ನರ್ ಗ್ರೂಪ್ ಎಂಬ ಕೂಲಿ ಸೇನೆಯ ಬಗ್ಗೆ ತಿಳಿದಿರಲಿಲ್ಲ. ಆದರೆ, ವಾಸ್ತವವೆಂದರೆ ಯೂಕ್ರೇನ್ನಲ್ಲಿ ರಷ್ಯಾದ ಸಮರವನ್ನು ನಡೆಸುತ್ತಿದುದೇ ಕಾಸಿಗಾಗಿ ಕತ್ತಿ ಎತ್ತುವ ಈ ಕೂಲಿ ಸೈನಿಕರೇ. ಹಾಗಿದ್ದರೆ ಈ ಬಗೆಯ ಕೂಲಿ ಸೈನಿಕರು ಏಕಾಏಕಿ ಉದ್ಭವಿಸಿದರೇ? ಹಾಗೇನೂ ಇಲ್ಲ. ಮಾನವ ನಾಗರಿಕತೆಯ ಆರಂಭದಿಂದಲೂ ಇವರು ಹುಟ್ಟಿ, ಕಾದಾಡಿ, ಸಾಯುತ್ತಿದ್ದಾರೆ ಎಂದು ಇತಿಹಾಸ ಹೇಳುತ್ತದೆ. ಇನ್ನೂ ಅಚ್ಚರಿಯ ವಿಷಯವೆಂದರೆ ಏಳು ಶತಮಾನಗಳ ಹಿಂದಿನವರೆಗೂ ಎಲ್ಲೆಲ್ಲೂ ಎಲ್ಲ ಯುದ್ಧಗಳನ್ನೂ ಮಾಡುತ್ತಿದ್ದವರು ಇವರೇ! ಫ್ರೆಂಚ್ ಅರಸ ಏಳನೆಯ ಚಾರ್ಲ್ಸ್ 13ನೇ ಶತಮಾನದಲ್ಲಿ ತನ್ನ ದೇಶಕ್ಕೊಂದು ಖಾಯಂ ಸೇನೆಯನ್ನು ಕಟ್ಟುವ ಕ್ರಾಂತಿಕಾರಕ ರಕ್ಷಣಾನೀತಿಯನ್ನು ರೂಪಿಸುವವರೆಗೆ ಯಾವ ದೇಶದಲ್ಲೂ ಖಾಯಂ ಸೇನೆ ಎನ್ನುವುದು ಇರಲೇ ಇಲ್ಲ. ಅನಂತರವೂ ಆ ಫ್ರೆಂಚ್ ಅರಸನ ಮಾದರಿಯನ್ನು ಅನುಸರಿಸಲು ಮತ್ತೆ ನಾಲ್ಕು ಶತಮಾನಗಳನ್ನು ತೆಗೆದುಕೊಂಡಿತು.
ಹೊಟ್ಟೆಪಾಡಿಗಾಗಿ ಅಥವಾ ಪ್ರಾಣವನ್ನು ಪಣಕ್ಕಿಟ್ಟು ದಿಢೀರ್ ಶ್ರೀಮಂತರಾಗಬಯಸುವ ಜನರನ್ನು ತಮ್ಮ ಪರವಾಗಿ ಹೋರಾಡಲು ಬಳಸಿಕೊಳ್ಳಬಹುದು ಎಂದು ಪ್ರಾಚೀನ ಈಜಿಪ್ಟ್ನ ಅರಸರೇ ಕಂಡುಕೊಂಡಿದ್ದರು. ಕ್ರಿ.ಪೂ. 13ನೇ ಶತಮಾನದಲ್ಲಿ ಫೆರೋ 2ನೇ ರಾಮೆಸೆಸ್ ಬಡ ನುಬಿಯಾ ಮರಳುಗಾಡಿನ (ಇಂದಿನ ಪೂರ್ವ ಲಿಬಿಯಾ) 11 ಸಾವಿರ ನಿವಾಸಿಗಳನ್ನು ಸೇರಿಸಿ ತನ್ನ ಸಾಮ್ರಾಜ್ಯದ ಗಡಿರಕ್ಷಣೆಗಾಗಿ ಬಳಸಿದನಂತೆ. ಅದೇ ಸಂಪ್ರದಾಯವು ನಂತರದ ದಿನಮಾನಗಳಲ್ಲಿ ನೆರೆಯ ಯೂರೋಪ್ ಮತ್ತು ಮಧ್ಯಪ್ರಾಚ್ಯಕ್ಕೂ ಹರಡಿತು. ಗ್ರೀಕರು ಕೂಲಿ ಸೈನಿಕರನ್ನು ಬಳಸಿಕೊಳ್ಳುವುದರ ಜತೆ ತಾವೂ ಕೂಲಿ ಸೈನಿಕರಾಗಿ ಹೋರಾಡುತ್ತಿದ್ದರು. ಪ್ರಾಚೀನ ಗ್ರೀಕ್ ನಗರ ರಾಜ್ಯಗಳ ಸೈನಿಕರೆಲ್ಲರೂ ಇಂತಹವರೇ. ನಂತರ ಕೂಲಿ ಸೈನಿಕರನ್ನು ಬಳಸಿ ಪ್ರಾಚೀನ ಜಗತ್ತಿನ ಅತ್ಯಂತ ವಿಶಾಲ ಸಾಮ್ರಾಜ್ಯವನ್ನು ಕಟ್ಟಿದ್ದು ರೋಮನ್ನರು. ಅವರ ಈ ತಂತ್ರವನ್ನೇ ರೋಮ್ ಪ್ರತಿಸ್ಪರ್ಧಿ ಸಾಮ್ರಾಜ್ಯ ಮುಖ್ಯವಾಗಿದ್ದ ಕಾರ್ಥೇಜ್ (ಇಂದಿನ ಟ್ಯುನೀಸಿಯಾ) ರೋಮನ್ನರ ವಿರುಧ್ಧವೇ ಕ್ರಿ.ಪೂ. 264-46ರ ದೀರ್ಘ ಆವಧಿಯಲ್ಲಿ ನಡೆದ ಪ್ಯೂನಿಕ್ ಯುದ್ಧಗಳಲ್ಲಿ ಅನುಸರಿಸಿತು. ಅದರ ಬಹು ಪ್ರಸಿದ್ಧ ಅರಸ ಹ್ಯಾನಿಬಾಲ್ ರೋಮನ್ನರನ್ನು ಏಮಾರಿಸಲು ದಾಳಿಗೆ ಮೆಡಿಟರೇನಿಯನ್ ಸಮುದ್ರದ ನೇರ ಹಾಗೂ ಹತ್ತಿರದ ದಾರಿಯನ್ನು ಬಿಟ್ಟು ಇಂದಿನ ಅಲ್ಜೀರಿಯಾ, ಮೊರಾಕ್ಕೋಗಳ ತೀರದಲಿ ಪಶ್ಕೆ ಸಾಗಿ, ಜಿಬ್ರಾಲ್ಟ್ರ್ ಜಲಸಂಧಿಯನ್ನು್ನ ದಾಟಿ ಇಡೀ ಸ್ಪೇನ್ನ ಉದ್ದಕ್ಕೂ ನಡೆದು, ಪಿರನೀಸ್ ಪರ್ವತಗಳನ್ನು ಹತ್ತಿಳಿದು, ಫ್ರಾನ್ಸ್ನ ಸಮುದ್ರ ದಂಡೆಯಲ್ಲಿ ಸಾಗಿ ಉತ್ತರ ದಿಕ್ಕಿನಿಂದ ರೋಮ್ ನಗರದ ಮೇಲೆ ಎರಗುವ ಪ್ರಯಾಸಕರ ದುಸ್ಸಾಹಸ ಕೈಗೊಂಡದ್ದು ಕೂಲಿ ಸೈನಿಕರ ಸಹಾಯದಿಂದಲೇ.
ಖಾಯಂ ಸೇನೆಯನ್ನು ಕಟ್ಟಿಕೊಳ್ಳುವುದಕ್ಕಿಂತ ಹೀಗೆ ಕೂಲಿ ಸೈನಿಕರನ್ನು ಕೂಡಿಸಿಕೊಳ್ಳುವುದು ಆರ್ಥಿಕ, ಸಾಮಾಜಿಕ ಹಾಗೂ ರಾಜಕೀಯವಾಗಿ ಅನುಕೂಲಕರ ಎನ್ನುವುದು ಅಂದಿನ ದಿನಗಳ ಸ್ವೀಕೃತ ಮೌಲ್ಯವೇ ಆಗಿತ್ತು. ವರ್ಷಪೂರ್ತಿ ಖಾಯಂ ಸೈನ್ಯವನ್ನು ಇಟ್ಟುಕೊಂಡು ಸಾಕುವುದಕ್ಕಿಂತಲೂ ಆಗೊಮ್ಮೆ ಈಗೊಮ್ಮೆ ಕೂಲಿ ಸೈನಿರನ್ನು ಕರೆದುಕೊಂಡು ಹೋಗಿ ಕಾದಾಡುವುದು ಕಡಿಮೆ ಖರ್ಚಿನದಾಗಿರುತ್ತಿತ್ತು. ಆಹಾರಧಾನ್ಯಗಳ ಕೊರತೆ ಇದ್ದ ಆ ದಿನಗಳಲ್ಲಿ ತನ್ನ ಜನ ಕೃಷಿಯಲ್ಲಿ ಮತ್ತದಕ್ಕೆ ಪೂರಕವಾದ ವೃತ್ತಿಗಳಲ್ಲಿ ತೊಡಗಿ ಅಗತ್ಯ ವಸ್ತುಗಳನ್ನು ನಿರಂತರವಾಗಿ ಉತ್ಪಾದಿಸುತ್ತಿರುವುದು ತನ್ನ ಅರ್ಥವ್ಯವಸ್ಥೆಗೆ ಅತ್ಯಗತ್ಯ ಎಂದು ಎಲ್ಲ ರಾಜ್ಯಗಳೂ ತಿಳಿಯುತ್ತಿದ್ದವು. ತಮ್ಮ ಜನರನ್ನು ಈ ಅಗತ್ಯ ವೃತ್ತಿಗಳಿಂದ ದೂರ ಒಯ್ದು ಯುದ್ಧರಂಗದಲ್ಲಿ ತಿಂಗಳುಗಟ್ಟಲೆ ಅಥವಾ ವರ್ಷಗಟ್ಟಲೆ ತೊಡಗಿಸಿ ತಮ್ಮ ರಾಜ್ಯಗಳ ಅರ್ಥವ್ಯವಸ್ಥೆಗಳನ್ನು ಹಾಳುಗೆಡವಿಕೊಳ್ಳಲು ಯಾವ ಅರಸೊತ್ತಿಗೆಯೂ ತಯಾರಿರುತ್ತಿರಲಿಲ್ಲ. ಅಲ್ಲದೆ, ತನ್ನ ನಾಡು ಸಂಪದ್ಭರಿತವಾಗಿದ್ದರೆ ಆಗೊಮ್ಮೆ ಈಗೊಮ್ಮೆ ನಡೆಯುವ ಕಾಳಗಗಳಿಗೆ ಕಣ ಕೊಟ್ಟು ಕೂಲಿ ಸೈನಿಕರನ್ನು ಕೂಡಿಸಿಕೊಳ್ಳುವುದೂ ಸುಲಭವೆನಿಸಿತ್ತು. ಪೂರ್ತಿ ಸಂಬಳ ನೀಡಲಾಗದಿದ್ದರೆ ಯುದ್ಧದಲ್ಲಿ ಗೆದ್ದ ಮೇಲೆ ಸೋತ ರಾಜ್ಯವನ್ನು ಲೂಟಿ ಮಾಡಲು ಕೂಲಿ ಸೈನಿಕರನ್ನು ಬಿಟ್ಟರೂ ಆಗುತ್ತಿತ್ತು! ಜತೆಗೆ ಸಂಸಾರ, ಪ್ರೀತಿಪಾತ್ರರು ಎಂಬ ಬಂಧನಕ್ಕೊಳಗಾದ ಪ್ರಜೆಗಳಿಗಿಂತಲೂ ಇಂತಹ ಯಾವುದೇ ಮೋಹಕ್ಕೊಳಗಾಗದ, ಹೊಟ್ಟೆಪಾಡೇ ಮುಖ್ಯವೆನಿಸಿದ, ಬದುಕಿ ಉಳಿದರೆ ಸೋತ ರಾಜ್ಯದಲ್ಲಿ ಒಂದಷ್ಟು ಲೂಟಿ ಮಾಡಿಕೊಂಡು, ಸಿಕ್ಕಿದರೆ ಒಂದು ಹೆಣ್ಣನ್ನೂ ಹೊತ್ತುಕೊಂಡು ಹುಟ್ಟೂರಿಗೆ ಹಿಂತಿರುಗಿ ಸಾಂಸಾರಿಕ ಬದುಕು ಕಟ್ಟಿಕೊಳ್ಳುವ ಯೋಚನೆ ಮಾಡಿದರಾಯಿತು ಎಂದುಕೊಳ್ಳುವ ಕೂಲಿ ಸೈನಿಕರೇ ಹೆಚ್ಚು ನಿಷ್ಠೆಯಿಂದ ಹಾಗೂ ಕಲಿತನದಿಂದ ಕಾದಾಡುತ್ತಿದ್ದರು. ಇನ್ನು ಸಾಮಾಜಿಕವಾಗಿ ಹೇಳುವುದಾದರೆ ತಮ್ಮ ಜನ ರಣರಂಗದಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿ ಮಡಿದುಹೋಗದೇ ಇನ್ನಾರೋ ಗುರುತು ಪರಿಚಯ ಇಲ್ಲದ ಪರದೇಶಿಗಳು ಸತ್ತರೆ ಪ್ರಜೆಗಳಲ್ಲಿ ಅರಸನ ಬಗ್ಗೆ ಯಾವುದೇ ಬೇಸರ ಉಂಟಾಗುತ್ತಿರಲಿಲ್ಲ, ಯುದ್ಧವನ್ನು ವಿರೋಧಿಸಿ ನಾಗರಿಕರು ದಂಗೆಯೇಳುವ ಪ್ರಸಂಗವೂ ಒದಗುತ್ತಿರಲಿಲ್ಲ.
ಆದರೆ, ಕೂಲಿ ಸೇನೆ ಕೆಲವೊಮ್ಮೆ ಅಪಾಯಕರವಾಗುವ ಸಾಧ್ಯತೆಯೂ ಇರುತ್ತಿತ್ತು. ನಿರೀಕ್ಷಿಸಿದಷ್ಟು ಅಥವಾ ಆಮಿಷ ಒಡ್ಡಿದ್ದಷ್ಟು ಧನಕನಕ ಸೋತ ರಾಜ್ಯದಲ್ಲಿ ಸಿಗದೇ ಹೋದಾಗ ನಿರಾಶರಾದ ಕೂಲಿ ಸೈನಿಕರು ತಾವು ಯಾರಿಗಾಗಿ ಹೋರಾಡಿದ್ದರೂ ಆ ರಾಜ್ಯದ ಮೇಲೇ ಮುಗಿಬಿದ್ದು ಲೂಟಿ ಮಾಡುವ ಸಾಧ್ಯತೆಯೂ ಇತ್ತು. ಹಾಗೇನಾದರೂ ಆದರೆ ಅವರನ್ನು ತಡೆಯುವ ನಿಷ್ಠಾವಂತ ಸೈನಿಕರು ಅಗತ್ಯ ಸಂಖ್ಯೆಯಲ್ಲಿ ಇರುತ್ತಿಲ್ಲದ ಕಾರಣ ವಿಜಯಿ ರಾಜ್ಯ ತಾನೇ ವಿನಾಶಕ್ಕೊಳಗಾದದ್ದೂ ಉಂಟು. ಕಪ್ಪು ಸಮುದ್ರದ ಉತ್ತರದತ್ತ ಕೂಲಿ ಸೈನಿಕರನ್ನು ಕಟ್ಟಿಕೊಂಡು ಹೋಗಿ ಜಯಶಾಲಿಯಾದ ಬೈಜಾಂಟೈನ್ ಸಾಮ್ರಾಜ್ಯ ಅದೇ ಕೂಲಿ ಸೈನಿಕರ ಆಕ್ರೋಶಕ್ಕೆ ಬಲಿಯಾದುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು. ಸೋತ ನಾಡುಗಳಲ್ಲಿ ಹೆಚ್ಚೇನೂ ಸಿಗದಾಗ ಕೂಲಿ ಸೈನಿಕರು ಹಿಂದಕ್ಕೆ ಬಂದು ಭವ್ಯ ರಾಜಧಾನಿ ಕಾನ್ಸ್ಟಾಂಟಿನೋಪಲ್ ನಗರವನ್ನೇ ಲೂಟಿ ಮಾಡಿ ಹೊರಟುಹೋದರು! ಮತ್ತೆ, ಎಷ್ಟಾದರೂ ಅವರು ಕೂಲಿಗಾಗಿ ಕತ್ತಿ ಎತ್ತುವವರು. ಇವರು ಹೆಚ್ಚು ಹಣ ಕೊಡಲಿಲ್ಲ ಅಂದರೆ ಇವರನ್ನು ಬಿಟ್ಟು ಹೆಚ್ಚು ಹಣದ ಆಮಿಷ ಒಡ್ಡುವ ಇದಿರು ಪಾಳಯದವರನ್ನು ಕೂಡಿಕೊಳ್ಳಲು ಕೂಲಿ ಸೈನಿಕರಿಗೆ ಕಷ್ಟವೇನೂ ಆಗುತ್ತಿರಲಿಲ್ಲ.
ಇಷ್ಟಾಗಿಯೂ, ಖಾಯಂ ಸೇನೆಯನ್ನು ಸಾಕುವುದಕ್ಕಿಂತಲೂ ಕೂಲಿ ಸೈನಿಕರನ್ನು ಇಟ್ಟುಕೊಳ್ಳುವುದು ಸಾಮಾನ್ಯವಾಗಿ ಹೆಚ್ಚಿಗೆ ಅನುಕೂಲಕರವಾಗಿದ್ದರಿಂದ ಪ್ರಾಚೀನ ಮತ್ತು ಮಧ್ಯಯುಗದಲ್ಲಿ ಅದೇ ಸ್ವೀಕೃತ ಸಾಮರಿಕ ಮೌಲ್ಯವಾಗಿತ್ತು. ನಿಷ್ಠೆಯಿಂದ ಹೋರಾಡಿದ ವಿದೇಶಿ ಕೂಲಿ ಸೈನಿಕರಿಗೆ ರೋಮನ್ ಸಾಮ್ರಾಜ್ಯ ತನ್ನ ಪೌರತ್ವ ನೀಡಿ ತನ್ನಲ್ಲಿ ಒಂದಾಗಿಸಿಕೊಂಡದ್ದೂ ಉಂಟು. ಮಧ್ಯಯುಗದ ಪಶ್ಚಿಮ ಏಷ್ಯಾದಲ್ಲಿ ಧರ್ಮ ಜನರ ಜೀವನದ ಎಲ್ಲ ಮುಖಗಳನ್ನೂ ನಿಯಂತ್ರಿಸತೊಡಗಿದ್ದುದರಿಂದ ಕೂಲಿ ಸೈನಿಕರು ಧಾರ್ವಿುಕ ಕಟ್ಟಳೆಗಳನ್ನು ಮೀರಿ ತಮ್ಮದೇ ಅರಸನ ವಿರುದ್ಧ ಬಂಡೇಳಲು ಹಿಂಜರಿದ ಕಾರಣ ಯುದ್ಧಗಳಲ್ಲಿ ಅವರ ಬಳಕೆ ವ್ಯಾಪಕವಾಯಿತು. 7ನೇ ಮತ್ತು 8ನೇ ಶತಮಾನದಲ್ಲಿ ಅರೇಬಿಯಾ ಪರ್ಯಾಯದ್ವೀಪ ಸೇರಿದಂತೆ ಪಶ್ಚಿಮ ಏಷ್ಯಾದಲ್ಲಿ ಜರುಗಿದ ಅಂದಾಜು 150 ಯುದ್ಧಗಳಲ್ಲಿ ಹಣ ಹಾಗೂ ಹೆಣ್ಣುಗಳ ಆಮಿಷಕ್ಕೊಳಗಾದ ಕೂಲಿ ಸೈನಿಕರದೇ ಪ್ರಮುಖ ಪಾತ್ರ.
ಪಶ್ಚಿಮದ ಇಂಗ್ಲೆಂಡ್ ಮತ್ತು ಪೂರ್ವದ ಜರ್ವ್ಯಾನಿಕ್ ರಾಜ್ಯಗಳ ಜತೆ ದಕ್ಷಿಣದ ಸ್ಪೇನ್ ಕಡೆಯಿಂದ ಮುಂದೊಟ್ಟಿ ಬರುತ್ತಿದ್ದ ಮೊರಾಕ್ಕನ್ ಅರಬ್ಬರ ವಿರುದ್ಧ ನಿರಂತರವಾಗಿ ಕಾಡಾಡಬೇಕಾದಾಗ 3ನೇ ಚಾರ್ಲ್ಸ್ ಫ್ರಾನ್ಸ್ಗಾಗಿ 13ನೇ ಶತಮಾನದಲ್ಲಿ ಖಾಯಂ ಸೇನೆಯನ್ನೇನೋ ಕಟ್ಟಿದ. ಆದರೆ, ಅಂತಹ ನಿರಂತರ ಒತ್ತಡವಿಲ್ಲದ ಇತರ ಯೂರೋಪಿಯನ್ ರಾಷ್ಟ್ರಗಳು ಕೂಲಿ ಸೇನೆಯನ್ನೇ ನೆಚ್ಚಿಕೊಂಡು ಮುಂದೆ ಸಾಗಿದವು. ಅಮೆರಿಕಾ ಖಂಡಗಳು ಯೂರೋಪಿಯನ್ನರಿಗೆ ಪರಿಚಯವಾದ ಮೇಲೆ ಅಲ್ಲಿನ ಅಗಾಧ ಚಿನ್ನದ ಆಸೆಗಾಗಿ ಅದೆಷ್ಟೋ ಸ್ಪ್ಯಾನಿಷ್ ಮತ್ತು ಪೋರ್ಚುಗೀಸ್ ಲೂಟಿಗಾರರು ತಮ್ಮದೇ ಕೂಲಿ ಸೇನೆಗಳನ್ನು ಕಟ್ಟಿಕೊಂಡು ದಶಕಗಳ ಕಾಲ ಮಧ್ಯ ಅಮೆರಿಕಾದ ಅಜ್ಟೆಕ್ ಮತ್ತು ಮಾಯಾ ಸಾಮ್ರಾಜ್ಯಗಳು ಮತ್ತು ದಕ್ಷಿಣ ಅಮೆರಿಕಾದ ಇಂಕಾ ಸಾಮ್ರಾಜ್ಯದ ಮೇಲೆ ಬರ್ಬರ ದಾಳಿ ಎಸಗಿದರು. ಈ ಚಿನ್ನದಾಹಿ ಸೈತಾನರು 16ನೇ ಶತಮಾನದ ಮೊದಲರ್ಧ ಭಾಗದಲ್ಲೇ ಕೊಂದ ಅಮೆರಿಕನ್ ಮೂಲನಿವಾಸಿಗಳ ಸಂಖ್ಯೆ 8 ಕೋಟಿಯನ್ನು ದಾಟುತ್ತದೆ. ಅಂದು ಅದು ಬಲು ದೊಡ್ಡ ಸಂಖ್ಯೆ.
ಇತ್ತ ಯೂರೋಪ್ನಲ್ಲಿ 17ನೇ ಶತಮಾನದ ನಂತರ ಖಾಯಂ ಸೇನೆಗಳ ಮಹತ್ವ ಮತ್ತು ಅಗತ್ಯಗಳನ್ನು ವಿವಿಧ ಅರಸೊತ್ತಿಗೆಗಳು ಕಂಡುಕೊಂಡರೂ ಅವು ಸ್ಥಾಪಿಸಿದ್ದು ಪುಟ್ಟ ಸೇನೆಗಳು. ಯುದ್ಧದ ಸಂದರ್ಭ ಎದುರಾದಾಗ ದೊಡ್ಡ ಸಂಖ್ಯೆಯಲ್ಲಿ ಕೂಲಿ ಸೈನಿಕರನ್ನೇ ಕಲೆ ಹಾಕಿಕೊಳ್ಳುವುದು ಮುಂದುವರಿಯಿತು.
ಇಲ್ಲಿ ಮೊಘಲ್ ಸೇನೆಯ ಉಲ್ಲೇಖ ಅವಶ್ಯಕ. ಅದೂ ಹಲವು ಕಡೆಗಳಿಂದ ಒಟ್ಟುಗೂಡಿಸಿದ ಅಗಾಧ ಕೂಲಿ ಸೇನೆಯೇ. ಸುಬೇದಾರರು, ಅಧೀನ ರಾಜ/ನವಾಬರುಗಳು ಒದಗಿಸುತ್ತಿದ್ದ ತಮಗೆ ನಿಗದಿಯಾದ ಸಂಖ್ಯೆಯ ಸೈನಿಕರನ್ನೊಳಗೊಂಡ ಮೊಘಲ್ ಸೇನೆ ಯುದ್ಧಕ್ಕೆ ಹೊರಟರೆ ಒಂದು ನಗರವೇ ಚಲಿಸುತ್ತಿರುವಂತೆ ಕಾಣುತ್ತಿತ್ತು. ಅದರಲ್ಲಿ ಯುದ್ಧ ಮಾಡುವ ಸೈನಿಕರಲ್ಲದೆ, ಭಾರ ಹೊರುವ ಹಾಗೂ ಆಹಾರವಾಗುವ ಪ್ರಾಣಿಗಳು ಅಗಾಧ ಸಂಖ್ಯೆಯಲ್ಲಿರುತ್ತಿದ್ದವು. ಜತೆಗೆ ಅಗಸನಿಂದ ಕಮ್ಮಾರನವರೆಗೆ ವಿವಿಧ ಕೆಲಸಗಾರರು, ರಂಜಿಸುವ ಸಂಗೀತಗಾರರು ಮತ್ತು ನರ್ತಕಿಯರ ಜತೆ ಮನರಂಜಿಸಲು ಲಾಗ ಹಾಕುವ ದೊಂಬರೂ ಇರುತ್ತಿದ್ದರು! ಇನ್ನು ವೇಶ್ಯೆಯರೂ ಸಾಕಷ್ಟು ಸಂಖ್ಯೆಯಲ್ಲಿರುತ್ತಿದ್ದರು ಎನ್ನುವುದನ್ನು ನಾನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.
ತರಬೇತಿ ಪಡೆದ ಸೈನಿಕರನ್ನೊಳಗೊಂಡ ಖಾಯಂ ಸೇನೆಯನ್ನು ಹೊಂದುವ ಅಗತ್ಯವನ್ನು ಯೂರೋಪಿನ ರಾಷ್ಟ್ರಗಳಿಗೆ ಮನವರಿಕೆ ಮಾಡಿಸಿದ್ದು ವಸಾಹತೀಕರಣ. ಜನನಿಬಿಡ ಹಾಗೂ ಸಂಪದ್ಭರಿತ ಭಾರತ ಮತ್ತು ಇತರ ಪೌರ್ವಾತ್ಯ ನಾಡುಗಳ ಮೇಲೆ ಅಧಿಕಾರ ಸ್ಥಾಪಿಸಿದ ಮೇಲೆ ಬೃಹತ್ ಖಾಯಂ ಸೇನೆಯನ್ನು ನಿರ್ವಿುಸುವುದೂ, ಅವುಗಳನ್ನು ಸಾಕುವುದೂ ಬ್ರಿಟನ್ ಮತ್ತು
ಫ್ರಾನ್ಸ್ಗಳಿಗೆ ಸುಲಭವಾಯಿತು. ಆ ಸೇನೆಗಳಿಗೆ ಒಂದಲ್ಲಾಒಂದು ಕಡೆ ಸೆಣಸಾಡುವ ಜವಾಬ್ದಾರಿಯೂ ಯಾವಾಗಲೂ ಇರುತ್ತಿತ್ತು. ಈ ಎರಡು ಬಲಾಢ್ಯ ವಸಾಹತುಶಾಹಿ ರಾಷ್ಟ್ರಗಳ ನಡುವೆ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡು ಸಿಕ್ಕಿದೆಡೆ ಒಂದಷ್ಟು ನೆಲವನ್ನು ಗೆಬರಿಕೊಳ್ಳಲು ಉಳಿದ ಯೂರೋಪ್ ದೇಶಗಳೂ ತಮ್ಮಿಂದಾದಷ್ಟು ಸಾಮರ್ಥ್ಯಕ್ಕನುಗುಣವಾಗಿ ಖಾಯಂ ಸೇನೆಗಳನ್ನು ಕಟ್ಟಿಕೊಂಡವು.
ದ್ವಿತೀಯ ಮಹಾಯುದ್ಧದ ತರುವಾಯ ಬೃಹದ್ ರಾಷ್ಟ್ರಗಳ ನಡುವೆ ಶೀತಲ ಸಮರ ಆರಂಭವಾಗಿ ಅದು ಅಣ್ವಸ್ತ್ರ ಯುದ್ಧದ ಅಪಾಯ ಉಂಟು ಮಾಡಿದುದರ ಜತೆಗೆ ಜಗತ್ತಿನಾದ್ಯಂತ ದೇಶ ದೇಶಗಳ ನಡುವೆ ಗಡಿ ಘರ್ಷಣೆಗಳು ಸಾಮಾನ್ಯವಾಗತೊಡಗಿದ ಕಾರಣ ನಂಬಿಗಸ್ತ ಖಾಯಂ ಸೇನೆಗಳು ಎಲ್ಲ ದೇಶಗಳ ಪ್ರಥಮ ಅವಶ್ಯಕತೆಯಾದವು. ಹೀಗಾಗಿ, ಕೂಲಿ ಸೇನೆ ಇತಿಹಾಸ ಸೇರಿತು. ಎಷ್ಟು ಆಳವಾಗಿ ಸೇರಿಹೋಯಿತೆಂದರೆ ತೀರಾ ಇತ್ತೀಚಿನವರೆಗೂ ಅಂತಹದೊಂದು ಸಾಮಾನ್ಯವಾಗಿ ಸಾರ್ವತ್ರಿಕವಾಗಿ ಇರುತ್ತಿತ್ತು ಎನ್ನುವುದೂ ಪ್ರಸಕ್ತ ತಲೆಮಾರಿಗೆ ಮರೆತುಹೋಗುವಷ್ಟು! ಆದರೆ, ಶೀತಲ ಸಮರ ಅಂತ್ಯವಾಗಿ, ಬೃಹತ್ ರಾಷ್ಟ್ರಗಳು ತಂತಮ್ಮ ವಿರುದ್ಧ ನೇರವಾಗಿ ಕತ್ತಿ ಮಸೆಯುವ ಬದಲು ದಶಕಗಳಿಂದ ಜಗತ್ತಿನ ಮೂಲೆಮೂಲೆಗಳಲ್ಲಿ ಉಳಿಸಿದ್ದ ‘ಕೆಟ್ಟ ಕೆಲಸ’ಗಳನ್ನು ಕೈಗೆತ್ತಿಕೊಂಡಾಗ ಕೂಲಿ ಸೇನೆಗಳ ಅಗತ್ಯ ಅವುಗಳಿಗೆ ಮತ್ತೊಮ್ಮೆ ಎದುರಾಯಿತು. ಆಗ ಹುಟ್ಟಿಕೊಂಡದ್ದೇ ಅಮೆರಿಕಾದ ಬ್ಲ್ಯಾಕ್ ವಾಟರ್ಸ್ ಮತ್ತು ರಶಿಯಾದ ವ್ಯಾಗ್ನರ್ಸ್ ಗ್ರೂಪ್ ಕೂಲಿ ಸೇನೆಗಳು.
(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)