ಮರ್ಕಟ ಮನವನು ಜಯಿಸುವುದೇ ನಿಜವಾದ ಸಾಧನೆ

Meditation
Published on
ಜಗತ್ತಿನ ಅತ್ಯದ್ಭುತ ಸೃಷ್ಟಿ ಯಾವುದು ಎಂದು ಕೇಳಿದರೆ ಅದು ಮನುಷ್ಯನ ಮನಸ್ಸು. ಅದು ಅದೃಶ್ಯ. ಆದರೆ ತನ್ನ ಇರುವಿಕೆಯನ್ನು ಸಕಾರಾತ್ಮಕ ಅಥವಾ ನಕಾರಾತ್ಮಕ ಭಾವನೆಗಳ ಮೂಲಕ ಮನಸ್ಸು ಅಭಿವ್ಯಕ್ತಗೊಳಿಸುತ್ತದೆ. ಮನುಷ್ಯನಿಗೆ ದೇವರು ಕೊಟ್ಟ ಅತ್ಯಂತ ಶಕ್ತಿಶಾಲಿ ಅಸ್ತ್ರವೆಂದರೆ ಮನಸ್ಸು. ಆದರೆ ಮನಸ್ಸನ್ನು ಹತೋಟಿಯಲ್ಲಿ ಇಟ್ಟುಕೊಳ್ಳುವುದು ಮನುಷ್ಯನ ಚಿಂತನೆಗೆ ಸಂಬಂಧಿಸಿದ ವಿಷಯ.

ಏಕಾಗ್ರ ಮನಸ್ಸು, ಚಂಚಲ ಮನಸ್ಸು, ಒಳ್ಳೆಯ ಆಲೋಚನೆ, ಕೆಟ್ಟ ಆಲೋಚನೆಯ ಮನಸ್ಸುಗಳನ್ನು ನಾವು ಕಾಣುತ್ತೇವೆ. ಅವು ಮನುಷ್ಯನ ನಡತೆಯ ಪ್ರತಿಬಿಂಬದಂತೆ ವರ್ತಿಸುತ್ತದೆ. ದೇಹ ಭೌತಿಕವಾದರೆ ಮನಸ್ಸು ಅಂತರ್ಯ. ಅದು ಆತ್ಮದ ಬಂಧು ಎನ್ನಬಹುದು. ಹಾಗಾಗಿ ಆತ್ಮಸಾಕ್ಷಿ, ಮನಃಸಾಕ್ಷಿಯಾಗಿ ವರ್ತಿಸಬೇಕು ಎಂದು ಹಿರಿಯರು ಬೋಧಿಸುವುದು.

ರಮಣ ಮಹರ್ಷಿಗಳು ತಮ್ಮ ಅಧ್ಯಾತ್ಮ ಬೋಧನೆಯಲ್ಲಿ ಮನಸ್ಸಿನ ಬಗ್ಗೆ ಸುಂದರವಾಗಿ ವರ್ಣಿಸಿದ್ದಾರೆ. ಮನಸ್ಸು ಎಲ್ಲಿದೆ ಎಂದು ಕೇಳಿದಾಗ ಎಲ್ಲರೂ ನಮ್ಮೊಳಗಿದೆ ಎಂದು ಹೇಳುತ್ತಾರೆ. ಆದರೆ ದೇಹದ ಒಳಗೆ ಎಲ್ಲಿ ಎಂದು ಕೇಳಿದಾಗ ಎದೆಯ ಭಾಗ ಮುಟ್ಟಿ ತೋರಿಸುತ್ತಾರೆ. ದೇಹದ ಇತರ ಯಾವುದೇ ಅಂಗಗಳಲ್ಲಿ ಮನಸ್ಸಿದೆ ಎಂದು ಯಾರೂ ಹೇಳುವುದಿಲ್ಲ. ಎಲ್ಲರೂ ಎದೆಯನ್ನೇ ಮುಟ್ಟಿ ತೋರಿಸುತ್ತೇವೆ. ರಮಣ ಮಹರ್ಷಿಗಳು ಈ ಸ್ಥಳದಲ್ಲೇ ಮನಸ್ಸು ನೆಲೆಸಿರುವುದು ಎಂದು ಹೇಳಿದ್ದಾರೆ. ಇದರಿಂದ ತಿಳಿಯುವುದೇನೆಂದರೆ ಮನುಷ್ಯನ ದೇಹಕ್ಕೂ ಮನಸ್ಸಿಗೂ ಒಂದು ಅವಿನಾಭಾವ ಸಂಬಂಧ ಇದೆ. ದೇಹ ಬಹಿರಂಗವಾದರೆ ಮನಸ್ಸು ಅಂತರಂಗ.

ಮನವೆಂಬ ಮರ್ಕಟನು ತನುವೆಂಬ ವೃಕ್ಷವನೇರಿ

ಇಂದ್ರಿಯಂಗಳೆಂಬ ಶಾಖೆಶಾಖೆಗೆ ಹಾರಿ

ವಿಷಯಂಗಳೆಂಬ ಹಣ್ಣು ಫಲಂಗಳ ಗ್ರಹಿಸಿ

ಭವದತ್ತ ಮುಖವಾಗಿ ಹೋಗುತ್ತಿದೆ ನೋಡಾ!

ಈ ಮನವೆಂಬ ಮರ್ಕಟನ

ನಿಮ್ಮ ನೆನಹೆಂಬ ಪಾಶದಲ್ಲಿ ಕಟ್ಟಿ

ಎನ್ನನುಳುಹಿಕೊಳ್ಳಯ್ಯ ಅಖಂಡೇಶ್ವರಾ

ಎಂಬ ವಚನ ‘ಜಡ ಶರೀರ ಇಂದ್ರಿಯ ಆಸೆಗಳನ್ನು ಅಪೇಕ್ಷಿಸುತ್ತದೆ. ಮನಸ್ಸು ಇಂದ್ರಿಯಗಳ ಆಮಿಷಕ್ಕೆ ಬಲಿಯಾಗದೆ ಆತ್ಮ ಪರಮಾತ್ಮ ಚೈತನ್ಯದೆಡೆ ವಾಲಬೇಕು, ಮಾಯೆಯ ಮನಸ್ಸಿಗೆ ಜ್ಞಾನದ ಅರಿವು ಮೂಡಿಸಬೇಕು, ಇಂದ್ರಿಯಗಳ ಪಾಶದಿಂದ ಬಿಡುಗಡೆಗೊಳಿಸಿ ಶಾಶ್ವತ ಸುಖವಾದ ಪರಮಾತ್ಮನನ್ನು ನೆನಯುವ ಪಾಶದಲ್ಲಿ ಕಟ್ಟಿ ಹಾಕಿ ಬದುಕನ್ನು ಉದ್ಧಾರ ಮಾಡಿಕೊಳ್ಳಬೇಕು’ ಎಂಬುದನ್ನು ತಿಳಿಸುತ್ತದೆ. ನಾವು ಮತ್ತು ನಮ್ಮ ಸುತ್ತಲಿನ ಪರಿಸರ ಶುಚಿಯಾಗಿ, ಸಮಾಜ ಶಾಂತವಾಗಿರಬೇಕು ಎಂದು ಸದಾ ಅಪೇಕ್ಷಿಸುತ್ತೇವೆ. ಬಹಿರಂಗದ ಶುಚಿತ್ವಕ್ಕೆ ಅಂತರಂಗದ ಶುಚಿತ್ವ ಅತಿ ಮುಖ್ಯ. ನಮ್ಮೊಳಗಿನ ಮನಸ್ಸು ಶುಚಿಯಾಗಿರಬೇಕು, ಮನ ಶುಚಿ ಇಲ್ಲದಿದ್ದರೆ ತನು ಶುಚಿಗೊಂಡರೂ ಪ್ರಯೋಜನವಾಗದು. ಮನುಷ್ಯನ ಮನಸ್ಸು ನಿರ್ಮಲವಾಗಿದ್ದರೆ ಎಲ್ಲವೂ ಸುಂದರವಾಗಿ ಕಾಣುತ್ತದೆ. ಮನಸ್ಸು ಎಂದರೆ ಪ್ರಜ್ಞೆ, ವಿವೇಚನೆ, ನಮ್ಮ ನಡೆ ನುಡಿಯಲ್ಲಿ ವರ್ತನೆಯಲ್ಲಿ ಮನಸ್ಸಿನ ಪ್ರಭಾವವಿದೆ. ಚಂಚಲ ಮನಸ್ಸು ಎಂದಿಗೂ ಒಳ್ಳೆಯದಲ್ಲ. ಮಕ್ಕಳಾಗಿದ್ದಾಗ ಇರುವ ಚಂಚಲ ಮನಸ್ಸು ಎಲ್ಲರಿಗೂ ಇಷ್ಟ. ಅದನ್ನು ಎಲ್ಲರೂ ಆನಂದಿಸುತ್ತಾರೆ. ಆದರೆ ಪ್ರೌಢಾವಸ್ಥೆಗೆ ಬಂದಾಗ ಮನಸ್ಸನ್ನು ಕೇಂದ್ರೀಕರಿಸಲು ಕಲಿಯಬೇಕು, ಏಕಾಗ್ರತೆ, ದೃಢ ಮನಸ್ಸು ಹೊಂದಬೇಕು. ಮನಸ್ಸಿನ ಮೇಲೆ ಹತೋಟಿ ಸಾಧಿಸಬೇಕು. ಇಲ್ಲವಾದರೆ ಪ್ರೌಢಾವಸ್ಥೆಯ ಸಮಯದಲ್ಲಿ ದುಶ್ಚಟಕ್ಕೆ ದಾಸನಾಗಿ ಸುಂದರ ಜೀವನವನ್ನು ನಮ್ಮ ಕೈಯಾರೆ ಕಳೆದುಕೊಳ್ಳಬೇಕಾಗುತ್ತದೆ.

ಮನಸ್ಸನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳುವುದು ಮನುಷ್ಯನ ನಿಜವಾದ ಜಯ. ಕೋಪದ ಕೈಗೆ ಮನಸ್ಸನ್ನು, ಬುದ್ಧಿಯನ್ನು ಕೊಡಬಾರದು. ತಾಳ್ಮೆ ಬೇಕು ಎಂದು ಹೇಳುತ್ತೇವೆ. ಹೌದು, ಮನಸ್ಸು ಎನ್ನುವುದು ಅತಿ ಸೂಕ್ಷ್ಮ, ಅದನ್ನು ಎಷ್ಟು ಜೋಪಾನವಾಗಿ ಹೇಗೆ ಉಪಯೋಗಿಸುತ್ತೇವೆ ಎನ್ನುವುದರ ಮೇಲೆ ಬದುಕು ನಿಂತಿದೆ. ಇತ್ತೀಚೆಗೆ ಪುಸ್ತಕವೊಂದನ್ನು ಓದುತ್ತಿದ್ದಾಗ ಮನಸ್ಸಿನ ಬಗ್ಗೆ ತಿಳಿಸುವ ಕಥೆ ಇತ್ತು. ಅದರಲ್ಲಿ ಒಬ್ಬ ಶಿಷ್ಯ ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತಿಸುವ ಕಲೆ ಕಲಿಯಲು ಗುರುವಿನ ಬಳಿ ಹೋಗಿದ್ದನಂತೆ. ಆಗ ಗುರುಗಳು ಆ ವಿದ್ಯೆಯನ್ನು ಆತನಿಗೆ ಒಂದು ಮಂತ್ರ ಮುಖೇನ ಕಲಿಸಿ ‘ಅಭ್ಯಾಸ ಮಾಡು, ಆದರೆ ಒಂದು ವಿಷಯವನ್ನು ನೆನಪಿ ನಲ್ಲಿಟ್ಟುಕೊ, ಈ ಮಂತ್ರವನ್ನು ಜಪಿಸುವಾಗ, ನೀವು ಮಂಗನ ಬಗ್ಗೆ ಯೋಚಿಸಬಾರದು!’ ಎಂದರಂತೆ. ಶಿಷ್ಯ ‘ಇದೇನು ಮಹಾ, ಬಲು ಸುಲಭ’ ಎಂದುಕೊಂಡು ತಾಮ್ರವನ್ನು ಚಿನ್ನವನ್ನಾಗಿ ಪರಿವರ್ತಿಸಲು ಅಭ್ಯಾಸ ಮಾಡಲು ಶುರುಮಾಡಿದ, ಆದರೆ ಪ್ರತಿ ಬಾರಿ ಧ್ಯಾನಕ್ಕೆ ಕುಳಿತಾಗ ಅವನ ಮನಸ್ಸಿಗೆ ಮೊದಲು ಬಂದದ್ದು ಕೋತಿ! ಅವನು ಅದನ್ನು ಮನಸ್ಸಿನಿಂದ ಓಡಿಸಲು ಎಷ್ಟು ಪ್ರಯತ್ನಿಸಿದರೂ ಅದು ಅವನಲ್ಲಿಯೇ ಉಳಿಯಿತು.

ಪ್ರತಿ ಕ್ಷಣ ನಮ್ಮ ಮನಸ್ಸಿಗೆ ಬರುವ ಆಲೋಚನೆಗಳು, ಆಸೆಗಳು, ಭಾವನೆಗಳು, ನಿರ್ಧಾರಗಳ ಮೇಲೆ ಗಮನವಿರಬೇಕು. ಮನಸ್ಸು ಸಂಪೂರ್ಣವಾಗಿ ನಮ್ಮ ವಶದಲ್ಲಿರಬೇಕು. ಸಿಟ್ಟು, ದ್ವೇಷ, ಅಸೂಯೆ ಹೊಟ್ಟೆಕಿಚ್ಚಿನಂತಹ ಕಲ್ಮಶವು ಅದರಲ್ಲಿ ತುಂಬದಂತೆ ಕಾಪಾಡಿಕೊಳ್ಳಬೇಕು. ಮನಸ್ಸು ಸುಂದರ ಹೂದೋಟವಾಗಬೇಕೇ ಹೊರತು ಕಸ ತುಂಬಿದ ತೊಟ್ಟಿಯಾಗಬಾರದು. ಮನಸ್ಸನ್ನು ಕಲ್ಪವೃಕ್ಷವಾಗುವಂತೆ ರೂಪಿಸಿಕೊಳ್ಳಬೇಕು. ಮನಸ್ಸಿನ ಸಮತೋಲನ ಕಾಪಾಡಿಕೊಳ್ಳಲು ಧನಾತ್ಮಕ ಯೋಚನೆ, ಯೋಗ, ಧ್ಯಾನದಿಂದ ಸಾಧ್ಯ ಎನ್ನುವುದನ್ನು ಅರಿತುಕೊಳ್ಳಬೇಕು. ಹಾಗಾಗಿ ನಮ್ಮ ಸನಾತನ ಭಾರತೀಯ ಸಂಸ್ಕೃತಿಯಲ್ಲಿ ಯೋಗ ಸಾಧನೆಗೆ ಹೆಚ್ಚಿನ ಪ್ರಾಮುಖ್ಯತೆ ಲಭಿಸಿದೆ.

ಏಕಾಗ್ರತೆ ಹೊಂದಿರದ ಮನಸ್ಸನ್ನು ಚಂಚಲ ಮನಸ್ಸು ಅಥವಾ ಮರ್ಕಟ ಮನಸ್ಸನು ಎಂದು ಕರೆಯುತ್ತಾರೆ. ಕಪಿಗೆ ಚಪಲತೆ ಸಹಜಂ ಎಂದು ಕವಿ ರನ್ನ ತನ್ನ ಒಂದು ಕವನದಲ್ಲಿ ತಿಳಿಸುತ್ತಾನೆ. ಈ ಮರ್ಕಟ ಮನಸ್ಸು ಸುಮ್ಮನೆ ಕೂತಲ್ಲಿ ಕುಳಿತುಕೊಳ್ಳುವುದಿಲ್ಲ. ಇದಕ್ಕೆ ಒಳ್ಳೆಯ ಉದಾಹರಣೆಯಾಗಿ ಒಂದು ಕಥೆ ಇದೆ. ಮಂಗಗಳ ಉಪವಾಸದ ಹಾಡನ್ನು ನಾವು ಎಳವೆಯಲ್ಲಿ ಕಲಿತಿದ್ದೆವು. ಅದನ್ನು ಮಕ್ಕಳಿಗೆ ಹಿರಿಯರು ಆಗಾಗ ಹೇಳುತ್ತಿರುತ್ತಾರೆ.

ಬಾಳೆಯ ತೋಟದ ಪಕ್ಕದ ಕಾಡಿನಲ್ಲಿ ವಾಸಿಸುತ್ತಿದ್ದ ಮಂಗಗಳು ಒಟ್ಟಿಗೆ ಸೇರುತ ಒಂದು ಉಪವಾಸವ ಮಾಡಿದವಂತೆ. ಏನೂ ತಿನ್ನದೆ ಕೂತಿದ್ದ ಮಂಗಗಳಿಗೆ ನಾಳೆಯ ತಿಂಡಿಯನ್ನು ಇಂದೇ ಹುಡುಕಿಡುವ ಆಲೋಚನೆ ಬಂದು ಪಕ್ಕದ ಬಾಳೆ ತೋಟಕ್ಕೆ ಹಾರಿದವಂತೆ. ಆ ಬಾಳೆಹಣ್ಣುಗಳನ್ನು ನೋಡಿ ಆಸೆ ಹುಟ್ಟಿ ಹಣ್ಣುಗಳನ್ನು ಕೊಯ್ದು ಅದನ್ನು ಸುಲಿದು ಇಡೋಣ, ನಾಳೆ ಉಪವಾಸ ಮುಗಿದೊಡನೆ ತಿನ್ನಬಹುದು ಎಂದು ಸುಲಿದು ಕೈಯಲ್ಲಿ ಇಟ್ಟುಕೊಂಡಿದ್ದವಂತೆ. ಆಗ ಮತ್ತೊಂದು ಮಂಗ ‘ಕೈಯ್ಯಲ್ಲೇಕೆ, ಬಾಯೊಳಗಿಟ್ಟರೆ ಆಗದೆ?’ ಎಂದಿತಂತೆ. ಎಲ್ಲವೂ ಬಾಯೊಳಗೆ ಇಟ್ಟುಕೊಂಡವು. ಜಗಿದೇ ಬಿಡುವ ಎಂದು ಮತ್ತೊಂದು ಕಪಿ ಅಂದಾಗ ಎಲ್ಲ ಮಂಗಗಳೂ ಬಾಳೆ ಹಣ್ಣು ಜಗಿದು ತಿಂದೇ ಬಿಟ್ಟವಂತೆ. ಹೀಗೆ ಅವುಗಳ ಉಪವಾಸ ಮುಗಿಯಿತು. ಕೋತಿಗಳ ಉಪವಾಸದ ಬಗ್ಗೆ ಹಾಸ್ಯವಾಗಿ ತಿಳಿಸಿದರೂ ಮನಸ್ಸನ್ನು ಏಕಾಗ್ರತೆಯಿಂದ ಇಟ್ಟುಕೊಳ್ಳುವುದನ್ನು ಇದು ಕಲಿಸುತ್ತದೆ. ಮನೋಬಲದ ಬಗ್ಗೆ ತಿಳಿಸುತ್ತದೆ.

ಮಹಾಭಾರತದಲ್ಲೂ ಅರ್ಜುನನು ಬಿಲ್ವಿದ್ಯೆ ಕಲಿಯುವ ಸಂದರ್ಭ ಆಚಾರ್ಯ ದ್ರೋಣರು ಎಲ್ಲಾ ಶಿಷ್ಯಂದಿರಲ್ಲಿ ‘ಮರದ ಮೇಲೆ ಏನು ಕಾಣುತ್ತಿದೆ’ ಎಂದು ಕೇಳಿದಾಗ ಎಲ್ಲರೂ ಅವರ ಮನಸ್ಸಿಗೆ ತೋಚಿದ್ದನ್ನು ಹೇಳಿದರು. ಆದರೆ ಅರ್ಜುನ ಮಾತ್ರ ‘ತಲುಪಬೇಕಾದ ಗುರಿ ಮಾತ್ರ ಕಾಣುತ್ತಿದೆ’ ಎಂದು ತಿಳಿಸಿದ್ದ. ಇದರಿಂದ ತಿಳಿಯುವುದೇನೆಂದರೆ ಒಂದು ವಿಚಾರಕ್ಕೆ ಕೇಂದ್ರೀಕರಿಸದೆ ಅನೇಕ ವಿಚಾರಗಳತ್ತ ಮನಸ್ಸನ್ನು ಬದಲಾಯಿಸುತ್ತಾ ಹೋದಾಗ ಯಾವ ಕೆಲಸವನ್ನೂ ಸಮರ್ಪಕವಾಗಿ ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಯಾವುದೇ ವಿಷಯದಲ್ಲಿ ಇವರು ಪೂರ್ಣವಾದ ಮಾಹಿತಿಪಡೆಯಲಾರರು ಅಥವಾ ಸೂಕ್ತ ನಿರ್ಧಾರವನ್ನೂ ಕೈಗೊಳ್ಳಲಾರರು. ಪರಿಣಾಮ, ಮನಸ್ಸು ಪ್ರಕ್ಷುಬ್ಧಗೊಂಡು, ಆತಂಕ, ಚಂಚಲತೆಯಿಂದಾಗಿ ಜೀವನದಲ್ಲಿ ಏನನ್ನೂ ಸಾಧಿಸಲಾರರು. ಇಂತಹವರು ನಂಬಿಕೆಗೂ ಅನರ್ಹರಾಗುತ್ತಾರೆ.

ಅನೇಕ ಬಾರಿ ನಾವು ಹೇಳುವುದಿದೆ. ‘ನೋಡಿದ ಹಾಗೆ ಆತ ಇಲ್ಲ. ರೂಪಕ್ಕೂ ಆತನ ಮನಸ್ಸಿಗೂ ಸಂಬಂಧವೇ ಇಲ್ಲ. ನೋಡಲು ಮುಗ್ಧನಂತೆ ಕಂಡರೂ ವರ್ತನೆ ವ್ಯಾಘ್ರನಂತೆ’ ಎನ್ನುವುದಿದೆ. ಹೌದಲ್ಲವೇ, ಎಷ್ಟೋ ಬಾರಿ ಇಂತಹ ಅನುಭವಗಳನ್ನು ಪಡೆದಿರುತ್ತೇವೆ. ನೋಡಲು ಒಳ್ಳೆಯವರಂತೆ ಕಂಡು, ಕುತಂತ್ರ ಮಾಡಿ ಮೋಸ ಮಾಡುವ ಮನಸ್ಸುಳ್ಳವರನ್ನು ಅನೇಕ ನಿದರ್ಶನಗಳಲ್ಲಿ ನೋಡಿದ್ದೇವೆ. ಹೀಗೆ ಮೋಸ ಹೋದವರ ಬಗ್ಗೆ ಪತ್ರಿಕೆಗಳಲ್ಲೇ ಅನೇಕ ಬಾರಿ ವರದಿಗಳೂ ಬಂದಿವೆ. ಅಂಗುಲಿಮಾಲನ ಕಥೆ ನೆನಪು ಮಾಡಿಕೊಳ್ಳೋಣ. ಕೊಲೆಗಾರನಾಗಿದ್ದ ಅಂಗುಲಿಮಾಲನನ್ನು ಗೌತಮ ಬುದ್ಧನು ಪರಿವರ್ತಿಸಿದ ಬಗೆ ಆ ಕಥೆಯಲ್ಲಿದೆ. ಬಳಿಕ ಅಂಗುಲಿಮಾಲ ಬುದ್ಧನ ಶಿಷ್ಯನಾಗಿ ಆತನ ತತ್ವಾದರ್ಶಗಳನ್ನು ಜನರಿಗೆ ತಿಳಿಸಲು ಶ್ರಮಿಸುತ್ತಾನೆ. ಕೊಳಕು ಮನಸ್ಸನ್ನು ಶುಭ್ರ ಮಾಡಿಕೊಳ್ಳಬಹುದು ಎನ್ನುವುದು ಇದರ ಸಂದೇಶ.

ಮನಸ್ಸು ಮಾಡಿದರೆ ಏನನ್ನು ಬೇಕಾದರೂ ಸಾಧಿಸಬಹುದು. ಒಂದು ಸಮಾಜವನ್ನು ಕಟ್ಟಲು ಮನಸ್ಸು ಬೇಕು, ಅಂತೆಯೇ ಕೆಡವಲು ಕೂಡ ಹತಾಶೆಯ ಮನೋಭಾವ ಇದ್ದರೆ ಸಾಕು. ಹಾಗಾಗಿ ಜಗತ್ತಿನ ಅನೇಕ ಯುದ್ಧ, ಅಶಾಂತಿಗಳಿಗೆ ವಿಚಲಿತ ಮನಸ್ಸು, ಮನಸ್ಥಿತಿಗಳೇ ಕಾರಣ. ಮನಸ್ಸು ಮಂದಿರವಾಗಬೇಕು. ನಾವು ಹೇಗೆ ನಮ್ಮ ದೇವಾಲಯವನ್ನು, ಮನೆಯಲ್ಲಿನ ದೇವರಿಡುವ ಜಾಗವನ್ನು ಶುಚಿಯಾಗಿ ಇಟ್ಟುಕೊಳ್ಳುತ್ತೇವೆಯೋ ಅಂತೆಯೇ ಮನೋಮಂದಿರವನ್ನು ಶುಚಿಯಾಗಿ ಇಟ್ಟುಕೊಳ್ಳಬೇಕು. ದೈಹಿಕ ಮತ್ತು ಮಾನಸಿಕ ಶುದ್ಧತೆ ಕಾಪಾಡಿಕೊಳ್ಳುವ ನಿಟ್ಟಿನಲ್ಲಿ ಮಹಾತ್ಮಾ ಗಾಂಧೀಜಿ ಅನುಸರಿಸುತ್ತಿದ್ದ ಮೂರು ಕೋತಿಗಳ ಸೂತ್ರ-ತತ್ವವನ್ನು ಅಳವಡಿಸಿಕೊಳ್ಳಬೇಕು. ಕೆಟ್ಟದ್ದನ್ನು ನೋಡದ, ಕೆಟ್ಟದ್ದನ್ನು ಕೇಳದ ಮತ್ತು ಕೆಟ್ಟದ್ದನ್ನು ಮಾತನಾಡದ ಮೂರು ಬುದ್ಧಿವಂತ ಕೋತಿಗಳ ಪ್ರತಿಮೆಯನ್ನು ಗಾಂಧೀಜಿ ಹೊಂದಿದ್ದರು. ಅವರು ಆ ತತ್ವದಲ್ಲೇ ಬದುಕನ್ನು ಸಾಗಿಸಿದರು. ಅಹಿಂಸೆಯನ್ನು ಪರಿಪಾಲಿಸಿದರು. ‘ಮನಸ್ಸಿನ ನಿಯಂತ್ರಣ’ ಎಂಬುದು ಹೊರಗಿನವರಿಂದ, ಔಷಧಿ ಅಥವಾ ಚಿಕಿತ್ಸೆಯಿಂದ ಸಾಧ್ಯವಿಲ್ಲ, ಅದನ್ನು ಸ್ವತಃ ಅಭ್ಯಾಸ ಮಾಡಬೇಕು. ಯೋಗ, ಧ್ಯಾನಗಳ ಮೂಲಕ ಮನಸ್ಸನ್ನು ಶುದ್ಧ, ನಿರ್ಮಲವಾಗಿ ಇರಿಸಿಕೊಳ್ಳಬೇಕು. ಆವೇಗ, ದುಗುಡ, ಆತಂಕ, ಅನಿಶ್ಚಿತತೆಯ ಈ ಸಾಮಾಜಿಕ ವಾತಾವರಣವನ್ನು ಹೋಗಲಾಡಿಸಿ ಶಾಂತಿ, ಸೌಹಾರ್ದತೆಯ ಬದುಕು ರೂಪಿಸಿಕೊಳ್ಳಬೇಕಾದರೆ ಮೊದಲು ಚಂಚಲ ಮನವನ್ನು ನಿಗ್ರಹಿಸಬೇಕು. ಅಂತರಂಗವನ್ನು ಅರಿತುಕೊಳ್ಳಬೇಕು. ಭಗವಾನ್ ಮಹಾವೀರರು ‘ಮನಸ್ಸನ್ನು ಗೆದ್ದವನು ಜಗತ್ತನ್ನು ಗೆಲ್ಲುತ್ತಾನೆ’ ಎಂದಿದ್ದಾರೆ. ಹಾಗಾಗಿ ನಮ್ಮ ಮನಸ್ಸನ್ನು, ಅಂತಃಸಾಕ್ಷಿಯನ್ನು ಗೆಲ್ಲುವ ಕಡೆ ಚಿತ್ತ ಹರಿಸೋಣ. ಒಳ್ಳೆಯ ವಿಚಾರಗಳನ್ನು ಅರಿತು ಸನ್ಮಾರ್ಗದಲ್ಲಿ ಮುನ್ನಡೆಯೋಣ. ಒಳ್ಳೆಯ ಹವ್ಯಾಸ, ಆಲೋಚನೆ, ದೃಷ್ಟಿಕೋನ ಬೆಳೆಸಿಕೊಂಡು ಸಮಾಜವನ್ನು ಧನಾತ್ಮವಾಗಿ ಬಲಪಡಿಸುವ ಕಾರ್ಯ ನಮ್ಮಿಂದಾಗಲಿ.

(ಲೇಖಕರು ಶ್ರೀಕ್ಷೇತ್ರ ಧರ್ಮಸ್ಥಳದ ಧರ್ವಧಿಕಾರಿಗಳು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net