ಮಹಾನ್ ಪ್ರಾಕೃತಿಕ ದೇವಾಲಯ ಹಿಮಾಲಯ

Himalaya
Published on
ಮೊನ್ನೆ ಏಪ್ರಿಲ್ 22ಕ್ಕೆ ನನಗೆ ಸಂನ್ಯಾಸ ದೀಕ್ಷೆ ಆಗಿ 30 ವರ್ಷ ಸಂದಿತು. ತುಮಕೂರು ರಾಮಕೃಷ್ಣ ವಿವೇಕಾನಂದ ಆಶ್ರಮದ ಸ್ವಾಮಿ ವೀರೇಶಾನಂದ ಹಾಗೂ ನಾನು 1993ರ ಏಪ್ರಿಲ್ 22ಕ್ಕೆ ಒಟ್ಟಿಗೆ ದೀಕ್ಷೆಗೆ ಒಳಗಾದೆವು. ಅದರ ಸ್ಮರಣಾರ್ಥವಾಗಿ ಚತುರ್ಧಾಮ (ಚಾರಧಾಮ್ ಯಾತ್ರೆಯನ್ನು ಕೈಗೊಳ್ಳಲು ನಿರ್ಧರಿಸಿ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ, ಬದರಿನಾಥ ಯಾತ್ರೆ ಕೈಗೊಂಡಿದ್ದೆವು. ಸಂನ್ಯಾಸಕ್ಕಿಂತ ಮುಂಚೆ ಅಂದ್ರೆ 1988ರಲ್ಲಿ ನಾನು ಬದರಿನಾಥ್ ಯಾತ್ರೆ ಮಾಡಿದ್ದೆ. ಇದಲ್ಲದೆ, ಸಂನ್ಯಾಸಿಗಳು ಇನ್ನೂ ನಾಲ್ಕು ಕ್ಷೇತ್ರಗಳನ್ನು ಜೀವನದಲ್ಲೊಮ್ಮೆ ಸಂದರ್ಶಿಸುವ ವ್ರತವನ್ನು ಸಾಮಾನ್ಯವಾಗಿ ತೊಟ್ಟಿರುತ್ತಾರೆ. ಅವೇ ಬದರಿನಾಥ, ದ್ವಾರಕಾ, ಪುರಿ ಮತ್ತು ರಾಮೇಶ್ವರ. ವಿವೇಕಾನಂದರು ಕೂಡ ತಮ್ಮ ಪರಿವ್ರಾಜಕ ದಿನಗಳಲ್ಲಿ ಈ ಯಾತ್ರೆ ಕೈಗೊಂಡರಾದರೂ ಬದರಿ ಮತ್ತು ಪುರಿಗಳನ್ನು ಸಂದರ್ಶಿಸಲು ಆಗಲೇ ಇಲ್ಲ. ಮೊದಲು ಹೇಳಿದ ನಾಲ್ಕು ಕ್ಷೇತ್ರಗಳು ಬರುವುದೇ ಹಿಮಾಲಯದ ಮಡಿಲಲ್ಲಿ. 1988 ರಲ್ಲಿ ಹಿಮಾಲಯ ಯಾತ್ರೆ ಮಾಡಿದಾಗ ನಾನು ಅಷ್ಟಾಗಿ ಗಮನಿಸಿರಲಿಲ್ಲ ಅಂತ ಕಾಣುತ್ತೆ. ಆದರೆ, ಮೊನ್ನೆ ಯಾತ್ರೆಯಲ್ಲಿ ಹಿಮಾಲಯ ಎಂಬ ತ್ರಿವಿಕ್ರಮನ ದರ್ಶನ ನನ್ನನ್ನು ದಿš್ಮೂಢನನ್ನಾಗಿಸಿತು. ಅಬ್ಬ! ಸೃಷ್ಟಿಕರ್ತನ ಅಸೀಮತೆ, ಅಗಾಧತೆ, ಅದ್ಭುತಗಳ ಒಂದು ಇಣುಕು ನೋಟ ಸಿಗಬೇಕಾದರೆ ಹಿಮಾಲಯವನ್ನು ನೋಡಬೇಕು. ಅಮೆರಿಕದ ಗ್ರಾ್ಯಂಡ್ ಕ್ಯಾನಿಯನನ್ನು ನೋಡಿರುವ ನಾನು ಒಂದು ಸಲಕ್ಕೆ ಭಾವಿಸಿದ್ದು ಭಗವಂತ ಭಾರತಕ್ಕೆ ಕೊಟ್ಟಷ್ಟು ಸೌಭಾಗ್ಯವನ್ನು ಇನ್ನಾವ ದೇಶಕ್ಕೂ ಕೊಟ್ಟಿಲ್ಲ ಎಂದು. ಈ ಹಿಮಾಲಯ ನಮ್ಮ ಪಾಲಿಗೆ ಕೇವಲ ಒಂದು ಪರ್ವತ ಶ್ರೇಣಿ ಅಲ್ಲ. ಅದೊಂದು ವಿಸ್ಮಯಗಳ ವಿಶಿಷ್ಟ ತಾಣ. ಜರ್ಮನಿಯಲ್ಲಿ ಹುಟ್ಟಿ ಸ್ವಿಸ್ ಭಾಷೆಯಲ್ಲಿ ತನ್ನ ಸಾಹಿತ್ಯಕ ಕೃಷಿಯನ್ನು ಮಾಡಿ ‘ಸಿದ್ಧಾರ್ಥ’ ಮೊದಲಾದ ಕೃತಿಗಳಿಂದ ವಿಶ್ವಮಾನ್ಯರಾದ ನೋಬೆಲ್ ಪ್ರಶಸ್ತಿ ಪುರಸ್ಕೃತ ಹರ್ಮನ್ ಹಸ್ಸಿ ಭಾರತವನ್ನು ಕುರಿತು ಹೇಳುವ ಮಾತು ಸಾರ್ವಕಾಲಿಕ ಮಾನ್ಯವಾದದ್ದು. ಪೂರ್ವಗ್ರಹ ಎಂಬ ಅವೈಜ್ಞಾನಿಕ ದೃಷ್ಟಿಕೋನ ಯಾರಲ್ಲಿಲ್ಲವೋ ಅವರೆಲ್ಲಾ ಹೀಗೆಯೇ ಹೇಳಿರುವುದು ಗಮನೀಯ. ಅವರು ndia is not a country and something geographical; but the home and youth of the soul; everywhere and nowhere, the oneness of all times ಎನ್ನುತ್ತಾರೆ. ಒಂದೊಂದು ಪದವನ್ನೂ ದೀರ್ಘವಾಗಿ ಮನನ ಮಾಡಬೇಕಾದ ಅಂಶ. ಇತಿಹಾಸದ ಪುಸ್ತಕಗಳು ಭಾರತದ ಬಗ್ಗೆ ಹೇಳುವಾಗ ಇದನ್ನೆಲ್ಲಾ ಹೇಳುವುದು ಬಿಟ್ಟು ಅಡಗೋಲಜ್ಜಿ ಕಥೆಗಳನ್ನೇ ಹೇಳಿಕೊಂಡು ಬಂದಿದೆ. ಆದರೆ, ವೇದಗಳಿಂದ ಹಿಡಿದು ವಿವೇಕಾನಂದರವರೆಗೆ ಭಾರತದ ಚರಿತ್ರೆ ನಮಗೆ ಕಂಡಿದ್ದು ಹೀಗೆಯೇ. ಭಾರತ ಕೇವಲ ಒಂದು ಭೌಗೋಳಿಕ ಪ್ರದೇಶವಲ್ಲ. ಅದು ಜೀವಿಯೊಬ್ಬ ತನ್ನ ಸಾಮರ್ಥ್ಯಗಳನ್ನು, ಸಾಧ್ಯತೆಗಳನ್ನು ಇಂಗ್ಲಿಷಿನಲ್ಲಿ ಜಾನ್ ಕೀಟ್ಸ್ ಹೇಳಿದಂಥ (A thing of beauty is a joy for ever) ಅಲೌಕಿಕ ಸೌಂದರ್ಯ ಆನಂದದ ನೆಲೆ ಬೀಡು. ಸೌಂದರ್ಯೂಪಾಸನೆ ಸೌಂದರ್ಯ ವರ್ತನೆಗಳನ್ನು ಎಲ್ಲೆಲ್ಲೂ ಸದ್ಭಾವ, ಸನ್ನಡತೆ, ಸದ್ವಿಚಾರಗಳಿಂದ ಅನಾವರಣಗೊಳಿಸಿ ಜೀವನವನ್ನು ನಿತ್ಯೋತ್ಸವವನ್ನಾಗಿಸುವುದಕ್ಕೆ ಸಾಧಕವಾದ ಸತ್ಯಾರಾಧನೆ, ಸತ್ಯಾನ್ವೇಷಣೆಗಳನ್ನು ಸಮಷ್ಟಿ ಪ್ರಜ್ಞೆಯನ್ನಾಗಿಸಿ ’ಸತ್ಯಂ, ಶಿವಂ, ಸುಂದರಮ್ ಎಂಬ ತ್ರಿಪಾದ (tripod)ದ ಮೇಲೆ ಜೀವನವನ್ನು ಕಟ್ಟುವುದಕ್ಕೆ ಮಿಸಲಾಗಿಸಿಕೊಳ್ಳುವುದೇ home and youth of soul ಎನ್ನುವುದರ ಸೂಚಿತಾರ್ಥ. ಇವೆರಡೂ ಪದಗಳ ಒಟ್ಟು ಅರ್ಥ ಜೀವನೋತ್ಸಾಹ ಮತ್ತು ಸರ್ವತ್ರ ಮೈತ್ರಿಭಾವ. ಜೀವನದ ಬಗ್ಗೆ ಇಂತಹ ಆಶಾಭಾವನೆಯನ್ನೆ ಆಧ್ಯಾತ್ಮ ಎಂದು ಕರೆಯುವುದು. ಸ್ವಾಮಿ ವಿವೇಕಾನಂದರ ಪ್ರಕಾರ ನಿಜವಾದ ಆಧ್ಯಾತ್ಮಿಕ ವ್ಯಕ್ತಿ ಎಂದಿಗೂ ಜೋಲುಮೋರೆ ಹಾಕಿಕೊಂಡಿರುವುದಿಲ್ಲ. ಶ್ರೀ ರಾಮಕೃಷ್ಣರೂ ಹಾಗೆಯೇ ಹೇಳುತ್ತಿದ್ದರು. ಪ್ರತಿನಿತ್ಯ ನಡೆಯುವ ಸೃಷ್ಟಿಯ ಅಂಕೆಯಿಲ್ಲದ ಅಗಾಧತೆ, ಹುಬ್ಬೇರಿಸುವ ಬೃಹತ್ತತೆಗಳನ್ನು ತಿಳಿಯಲಿಚ್ಛಿಸಿದ ಭಾರತೀಯ ಋಷಿ ಈ ಎಲ್ಲದಕ್ಕೂ ಮೂಲಕಾರಣವಾದ ಶಕ್ತಿಯನ್ನು ಕರೆದಿದ್ದೇ ’ಆಶ್ಚರ್ಯವತ್’ ಎಂದು. ಹಾಗೆಯೇ ಅವಾšನಸ ಗೋಚರಮ್ - ವಾಕ್, ಮನಸ್ಸುಗಳಿಗೆ ಎಂದಿಗೂ ಎಟುಕಲಾರದ್ದು - ಎಂದು. ಭಾರತೀಯನ ಮನಸ್ಸುಗಳನ್ನು ಜೀವನದ ಅಲ್ಪ ವಿಷಯಗಳಿಂದ ವಿಮುಖಗೊಳಿಸಿ ಈ ಮಹಾನ್ ವಸ್ತುವಿನೆಡೆಗೆ ತಿರುಗುವಂತೆ ಸ್ಪೂರ್ತಿಗೊಳಿಸಿದ ಸಂಗತಿಗಳಲ್ಲಿ ಪ್ರಮುಖವಾದದ್ದೇ ಈ ಹಿಮಾಲಯ ಪರ್ವತ ಶ್ರೇಣಿ. ಮನುಷ್ಯನನ್ನು ಮೂಕನನ್ನಾಗಿಸುವ ಸೃಷ್ಟಿ ಅದು. ಒಮ್ಮೆ ಒಬ್ಬರು ವಿವೇಕಾನಂದರಿಗೆ ಬೇರೆಲ್ಲಾ ಜನಾಂಗಗಳಿಗಿಂತ ಭಾರತೀಯರಲ್ಲೇ ಆಧ್ಯಾತ್ಮಿಕ ಪ್ರವೃತ್ತಿ ಹೆಚ್ಚು ಏಕೆ ಎಂದು ಕೇಳಿದಾಗ, ಅವರು ಕೊಟ್ಟ ಉತ್ತರವು ‘ಏಕೆಂದರೆ ನಮ್ಮ ಮುಂದೆ ಹಿಮಾಲಯವಿದೆ’. ಹೌದು! ಹಿಮಾಲಯ ಧ್ಯಾನಸ್ಥ ಮಹಾದೇವ ಶಿವನನ್ನು ನೆನಪಿಗೆ ತರುತ್ತದೆ. ಇಡೀ ಪರ್ವತವೇ ಹಿಮಾಚ್ಛಾದಿತ ಶುಭ್ರ ಶ್ವೇತ ವರ್ಣ ‘ಕರ್ಪರಗೌರಂ ಕರುಣಾವತಾರಮ್. ಈ ಧವಳ ಪಂಕ್ತಿ ಕೆಲವೊಮ್ಮೆ ಬಂಗಾರದ ಬಣ್ಣಕ್ಕೂ ತಿರುಗುವುದುಂಟು. ಶಿವ ಗೌರಾಂಗ ಕೂಡ. ಧ್ರುವ ಪ್ರದೇಶಗಳನ್ನು ಬಿಟ್ಟರೆ ಇಷ್ಟು ದೊಡ್ಡ ಹಿಮರಾಶಿ ಭೂಮಿಯಲ್ಲಿ ಎಲ್ಲೂ ಇಲ್ಲ. ಭಾರತದ ಒಳ ನಾಡಿನಲ್ಲಿ ಕಾಶಿ, ರಾಮೇಶ್ವರ ಮೊದಲಾದ ಕ್ಷೇತ್ರಗಳಲ್ಲಿ ನೆಲೆಸಿರುವ ಶಿವನನ್ನು ಜ್ಯೋತಿರ್ಲಿಂಗಗಳಂತೆ ಆರಾಧಿಸುವುದು ಹಿಂದುಗಳಲ್ಲಿ ಒಂದು ವ್ರತ. ಸುಪ್ರಸಿದ್ಧ ಸೌರಾಷ್ಟ್ರೇ ಸೋಮನಾಥಂ ಚ.. ಈ ಶ್ಲೋಕದಲ್ಲಿ ಹನ್ನೆರಡು ಜ್ಯೋತಿರ್ಲಿಂಗಗಳು ಯಾವುವು ಎಂದು ತಿಳಿಸಲಾಗಿದೆ. ಆದರೂ ಹಿಮಾಲಯದ ಮಡಿಲಲ್ಲಿರುವ ಕೈಲಾಸ ಮಾನಸ ಸರೋವರವೇ ಶಿವನ ಸಾಕ್ಷಾತ್ ಆವಾಸ ಸ್ಥಾನ ಎಂದು ಪರಿಗಣಿಸಲಾಗಿದೆ. ಮಾನಸ ಸರೋವರದ ಯಾತ್ರೆ ಎಲ್ಲಾ ತೀರ್ಥಯಾತ್ರೆಗಳ ಅಂತಿಮ ಹಂತ.

ಕೃಷ್ಣ ಯಜುರ್ವೆದದಲ್ಲಿ ಶಿವನ ಕುರಿತ ಒಂದು ಮಂತ್ರ ಆಪಾತಾಳ ನಭಸ್ಥಲಾಂತ ಭುವನ ಬ್ರಹ್ಮಾಂಡಂ ಆವಿಸ್ಪುರತು.. ಪಾತಾಳದಿಂದ ನಭೋ ಲೋಕದವರೆಗೆ ಹರಡಿಕೊಂಡಿರುವ ಅವನ ತಾಣ ಹಿಮಾಲಯವಲ್ಲದೆ ಮತ್ತಾವುದಾದೀತು. ಭೂಲೋಕದ ಅತ್ಯಂತ ಎತ್ತರದ ಜಾಗವೇ ಅವನಿರಲು ಯೋಗ್ಯ. ವ್ಯಷ್ಟಿರೂಪಿ ಮನುಷ್ಯನಲ್ಲೂ ಅವನಿರುವುದು ಶರೀರದ ಅತ್ಯಂತ ಮೇಲ್ಭಾಗವಾದ ಸಹಸ್ರಾರದಲ್ಲಿ. ಬ್ರಹ್ಮರಂಧ್ರದಿಂದ ಸ್ವಲ್ಪ ಕೆಳಗೆ. ಹಿಮಾಲಯಗಳು ತನ್ನ ಒಡೆಯನ ಸ್ವಭಾವಕ್ಕನುಗುಣವಾಗಿ ಬೇಸಿಗೆಯಲ್ಲಿ ತನ್ನನ್ನೇ ಆಶ್ರಯಿಸಿರುವ ಬೃಹತ್ ನದಿಗಳು ಒಣಗದಂತೆ ನೋಡಿಕೊಳ್ಳುತ್ತವೆ. ಅಲ್ಲಿಂದ ಹರಿಯುವ ನದಿಗಳು ಇಡೀ ವರ್ಷ ನೀರನ್ನು ಹೊತ್ತು ತರುತ್ತದೆ. ಇಡೀ ಪ್ರಪಂಚದ ಕಾಲುಭಾಗ ಅಥವಾ 150 ಕೋಟಿಗೂ ಹೆಚ್ಚು ಜನ ತಮ್ಮ ಅಸ್ತಿತ್ವವನ್ನು ಉಳಿಸಿಕೊಂಡಿರುವುದು ಈ ಹಿಮಾಲಯಗಳ ಕೃಪೆಯಿಂದ. ಏಷ್ಯಾದ ಬೃಹತ್ ನದಿಗಳಾದ ಸಿಂಧೂ, ಗಂಗಾ, ಯಮುನಾ, ಬ್ರಹ್ಮಪುತ್ರ, ಯಾಂಕ್ಟೆ್ಸ, ಬರ್ವದ ಮಿಕಾಂಗ್ ಎಲ್ಲವೂ ಹುಟ್ಟುವುದು ಇಲ್ಲೆ. ಭಾರತದಲ್ಲಿ ಬೀಸುವ ಮಾನ್ಸೂನ್ ಮಾರುತಗಳನ್ನು ಮತ್ತು ಮಂಗೋಲಿಯಾದಿಂದ ಎದ್ದೆದ್ದು ಬರುತ್ತಿದ್ದ ಚಂಗೇಸ್ ಖಾನ್ ಮುಂತಾದ ಟಾರ್ಟರ್ ಜನಾಂಗದ ಬರ್ಬರ ದಾಳಿಗಳನ್ನು ತಡೆದು ಉಪಕರಿಸಿದ ಮಹಾನ್ ಪ್ರಾಕೃತಿಕ ಗೋಡೆ ಹಿಮಾಲಯಗಳು. ಭಾರತದ ಭೂಗೋಳಗಳನ್ನು ಪರಿಚಯಿಸುವಾಗಲೆಲ್ಲಾ ವೇದ ಕಾಲದಿಂದ ಬಳಸುವ ವಾಕ್ಯವೇ ‘ಆಸೇತು ಹಿಮಾಚಲ ಪರ್ಯಂತಂ’ ಎಂತಲೇ. ಅರ್ಥಾತ್ ರಾಮೇಶ್ವರದ ರಾಮಸೇತುವಿನಿಂದ ಉತ್ತರದಲ್ಲಿ ಹಿಮಾಲಯದವರೆಗೆ ಎಂದು. ಬಹಳಷ್ಟು ವೇದಗಳು ಹುಟ್ಟಿದ್ದೇ ಹಿಮಾಲಯದಲ್ಲಿ. ಈಗಲೂ ಯಾವ ಗುಹೆಗಳಲ್ಲಿ ವೇದವ್ಯಾಸರು ಗಣಪತಿಯಿಂದ ಮಹಾಭಾರತವನ್ನು ಬರೆಯಿಸಿದರೋ ವೇದಾಂತದ ಪ್ರಮುಖ ಭೂಮಿಕೆಯಾದ ಬ್ರಹ್ಮಸೂತ್ರಗಳನ್ನು ರಚಿಸಿದರೋ ಆ ಗುಹೆಯನ್ನು, ಶ್ರೀ ಶಂಕರರು ಬ್ರಹ್ಮ ಸೂತ್ರಗಳಿಗೆ ಭಾಷ್ಯವನ್ನು ಬರೆದ ಆ ಜಾಗವನ್ನು, ದ್ರೋಣಾಚಾರ್ಯರು ತಪಸ್ಸನ್ನು ಆಚರಿಸಿದ ಗುಹೆಯನ್ನು, ಕ್ರಿಯಾಯೋಗದ ಹಲವಾರು ಅಧ್ವರ್ಯುಗಳು ತಪಸ್ಸು ಮಾಡಿದ ಜಾಗವನ್ನು ಸ್ಪಷ್ಟವಾಗಿ ಗುರುತಿಸಲಾಗುತ್ತಿದೆ ಮತ್ತು ತಪೋನಿಷ್ಠ ಸಾಧಕರು ಸುತ್ತಮುತ್ತಲ ಪ್ರದೇಶಗಳಲ್ಲಿ ತಮ್ಮ ತಾಣವೊಂದನ್ನು ಆರಿಸಿಕೊಂಡು ಸಾಧನೆಗಳಲ್ಲಿ ತೊಡಗಿಸಿಕೊಂಡಿರುತ್ತಾರೆ. ಹಾಗೆ ಗುಹೆಯೊಂದರಲ್ಲಿ ಗಾಢ ಧ್ಯಾನದಲ್ಲಿ ಮುಳುಗಿದ್ದ ವ್ಯಕ್ತಿಯೊಬ್ಬರನ್ನು ನಾವು ಕಂಡೆವು ಕೂಡ. ನಾನು ಮೊದಲೇ ಹೇಳಿದಂತೆ ಹಿಮಾಲಯದ ಗಾಂಭೀರ್ಯವೇ ಮನುಷ್ಯನೊಬ್ಬನನ್ನು ತನಗೆ ಅರಿವಿಲ್ಲದೆಯೇ ಧ್ಯಾನಸ್ತನನ್ನಾಗಿಸುತ್ತದೆ. ಸ್ವಲ್ಪ ಸಂಸ್ಕಾರ ಇರಬೇಕಷ್ಟೇ. ಚಾರಧಾಮ್ಳಾದ ಗಂಗೋತ್ರಿ, ಯಮುನೋತ್ರಿ, ಕೇದಾರನಾಥ ಮತ್ತು ಬದರಿನಾಥಗಳ ಪ್ರವಾಸದುದ್ದಕ್ಕೂ ನಮ್ಮ ಪಕ್ಕದಲ್ಲೇ ನಿರಂತರ ಜತೆಗಿರುತ್ತಾಳೆ ಪಾವನಮಯಿ ಗಂಗೆ. ನನಗೆಷ್ಟೋ ಸಲ ಅನಿಸಿದ್ದುಂಟು. ಭಗವಂತ ನಮ್ಮ ದೇಶಕ್ಕೆ ಇನ್ನಾವ ಸೌಭಾಗ್ಯಗಳನ್ನೂ ಕೊಡುವುದು ಬೇಡ ಹಿಮಾಲಯ ಮತ್ತು ಗಂಗೆಗಳನ್ನು ಕೊಟ್ಟಿದ್ದಾನಲ್ಲಾ ಸಾಕು ಎಂದು. ಗಂಗೆಯ ಉಗಮ ಗಂಗೋತ್ರಿ ಎಂದು ಪ್ರತೀತಿ ಇದ್ದರೂ ಅದು ನಿಜವಾಗಿಯೂ ಹುಟ್ಟುವುದು ಗೋಮುಖ ಎಂಬ ಜಾಗದಲ್ಲಿ. ಅಲ್ಲಿ ಎರಡು ಕವಲುಗಳಾಗಿ ಒಡೆದು ಬದರಿನಾಥ ಕಡೆಗೆ ಅಲಕನಂದಾ ಎಂಬ ಹೆಸರಿನಿಂದಲೂ, ಗಂಗೋತ್ರಿಯ ಕಡೆಗೆ ಭಾಗೀರಥಿ ಎಂಬ ಹೆಸರಿನಿಂದಲೂ ಹರಿಯುತ್ತಾಳೆ. ಇವೆರಡೂ ಮತ್ತೆ ದೇವಪ್ರಯಾಗ ಎನ್ನುವಲ್ಲಿ ಸಂಗಮಿಸುತ್ತವೆ. ಈ ಮಧ್ಯೆ ಅಲಕನಂದಾ ತನ್ನ ಮಡಿಲಿಗೆ ಕೇದಾರನಾಥನಿಂದ ಹರಿದು ಬಂದ ಮಂದಾಕಿನಿಯನ್ನು ಕೂಡ ರುದ್ರಪ್ರಯಾಗದಲ್ಲಿ ಸೇರಿಸಿಕೊಂಡು ಗಾತ್ರದಲ್ಲಿ ಹಿಗ್ಗುತ್ತಾಳೆ. ಇದೇ ರೀತಿಯಲ್ಲಿ ಕರ್ಣಪ್ರಯಾಗ ಕೂಡ ಒಂದು ಸಂಗಮ. ಉದ್ದಕ್ಕೂ ಹಲವಾರು ಪ್ರಯಾಗಗಳು ನಿರ್ವಣವಾಗಿವೆ. ದೇವ ಪ್ರಯಾಗದಿಂದ ಆಚೆಗೆ ಕಲ್ಕತ್ತೆಯ ಸಮೀಪವಿರುವ ಗಂಗಾ ಸಾಗರದಲ್ಲಿ ಅದು ಲೀನವಾಗುವವರೆಗೂ ಅದಕ್ಕೆ ಗಂಗೆ ಎಂದೇ ಹೆಸರು. ಈ ಎಲ್ಲಾ ಪ್ರಯಾಗಗಳ ರಾಜನೇ ‘ಪ್ರಯಾಗರಾಜ್’ (ಅಲಹಾಬಾದ್). ಇಲ್ಲಿ ಗಂಗೆ, ಯಮುನೆ ಸಂಗಮಿಸುತ್ತಾರೆ. ‘ಗಂಗೆ’- ಭಾವುಕ ಭಾರತೀಯನಲ್ಲಿ ಇದೊಂದು ಮತ್ತೊಮ್ಮೆ ಮೈ ನವಿರೇಳಿಸುವ ಹೆಸರು. ಋಷಿಕೇಶದಲ್ಲಿ ಪ್ರಸ್ಥಭೂಮಿಯನ್ನು ಮುಟ್ಟಿ ಹಲವಾರು ಪ್ರಯಾಗಗಳ, ಕಾಶಿಯ ಮೂಲಕ ಕಲ್ಕತ್ತೆಯಲ್ಲಿ ಶಾಕ್ತರ ಮನೆ ಮಗಳಂತೆ ವಾತ್ಸಲ್ಯವನ್ನು ಉಣಿದು, ಗಂಭೀರವಾಗಿ ಸಾಗರವನ್ನು ಸೇರುವ ಈ ಲೋಕಪಾವನೆ ಭಾರತಮಾತೆಯ ಹೆಮ್ಮೆಯ ಪುತ್ರಿ. ವೇದವ್ಯಾಸ, ಶ್ರೀ ಶಂಕರ, ಶ್ರೀ ರಾಮಕೃಷ್ಣ, ಶ್ರೀ ವಿವೇಕಾನಂದ ಗಂಗೆಯ ಪ್ರಸ್ತಾವದಿಂದಲೇ ಪುಳಕಿತರಾಗುತ್ತಿದ್ದರು. ಪಾವಿತ್ರ್ಯಕ್ಕೆ ಇನ್ನೊಂದು ಹೆಸರೇ ಗಂಗೆ. ‘ಗಂಗಾವತರಣ’ ನಮಗೆಲ್ಲಾ ಗೊತ್ತಿರುವ ಒಂದು ಅದ್ಭುತ ಘಟನೆ. ದೇವಪ್ರಯಾಗದಲ್ಲಿ ಹಾಲೆಂಡ್ ದೇಶದ ಯುವತಿಯೊಬ್ಬಳು ನನಗೆ ಪರಿಚಯಕ್ಕೆ ಬಂದಳು. ಋಷಿಕೇಶದಲ್ಲಿ ಬಂದು ಹಲವಾರು ತಿಂಗಳಿಂದ ಅವಳು ವಾಸವಾಗಿದ್ದಾಳೆ. ಹೆಸರು ಆನ್ನ. ಅಲ್ಲೇನು ಮಾಡುವೆ? ಎಂದು ಕೇಳಿದಾಗ ವೇದೋಕ್ತವಾಗಿ ದೇವರ ಪೂಜೆ, ಹವನ, ಯೋಗ, ಧ್ಯಾನ, ಸಂಸ್ಕೃತ ಇವುಗಳನ್ನು ಕಲಿಯುತ್ತಿದ್ದೇನೆ ಎಂದು ಹೇಳಿದಳು. ಗಂಗೆಯನ್ನು ಕಂಡರೆ ಅವಳಿಗೆ ಪ್ರಾಣವಂತೆ. 2006 ರಲ್ಲಿ ಆಸ್ಟ್ರಿಯಾದ ಟಾಟನ್ ಡಾರ್ಫ ಎಂಬ ನಗರದಲ್ಲಿನ ‘ಕ್ರಿಯಾಯೋಗಾಶ್ರಮ’ದಲ್ಲಿ ನಾನು ಕೆಲವು ದಿನ ತಂಗಿದ್ದೆ. ಅಲ್ಲಿ ಇದೇ ವಯಸ್ಸಿನ ಮೂರು ನಾಲ್ಕು ಯುವಸಾಧಕಿಯರಿದ್ದರು. ಮಂಗಳಾನಂದ, ದಯಾ ಇವರಿಬ್ಬರ ಹೆಸರು ನೆನಪಿದೆ. ದಯಾ ಜರ್ಮನ್ ಹುಡುಗಿ. ಹೈಸ್ಕೂಲ್​ನಲ್ಲಿದ್ದಾಗ ಅವರ ಶಾಲೆಯಲ್ಲಿ ಗಂಗಾ ನದಿಯ ಬಗ್ಗೆ ಡಾಕ್ಯುಮೆಂಟರಿ ನೋಡಿ ಗಂಗೆಯ ಪೂರ್ಣಾವತಾರವನ್ನು ಕಣ್ತುಂಬಿಸಿಕೊಳ್ಳಬೇಕು ಎಂದು ಬಯಸಿ ಭಾರತಕ್ಕೆ ಓಡಿ ಬಂದಿದ್ದಳು. ಹಲವು ವರ್ಷ ಇಲ್ಲೇ ಕಳೆದು, ಬ್ರಹ್ಮಚಾರಿಣಿಯಾಗಿ ಸಾಧನಾ ಜೀವನಕ್ಕೆ ಬದ್ಧಳಾಗಿದ್ದಳು. ಗಂಗೆಯ ಅಲೌಕಿಕ ವೈಭವ ಸಾಗರದಾಚೆಗೂ ಹಬ್ಬಿ ಅದೆಷ್ಟು ಜನರನ್ನು ಆಕರ್ಷಿಸುತ್ತಿದೆಯೋ! ಇನ್ನೂ ಹಲವು ಉದಾಹರಣೆಗಳು ನನ್ನ ಕಣ್ಣ ಮುಂದೆಯೇ ಇವೆ!

ನನ್ನ ಮನಸ್ಸನ್ನು ಸೆಳೆದ ಮತ್ತೊಂದು ಪ್ರಮುಖ ಅಂಶವೇ ಭಾರತೀಯ ಜನಪದದಲ್ಲಿ ಹಾಸುಹೊಕ್ಕಾಗಿರುವ ಆಳವಾದ ಭಗವತ್ ಶ್ರದ್ಧೆ ಮತ್ತು ಭಕ್ತಿ ಭಾವಗಳು. ಗಂಗೋತ್ರಿ ಮತ್ತು ಬದರಿನಾಥಕ್ಕೆ ಮಾತ್ರ ಪೂರ್ಣ ಪ್ರಮಾಣದ ವಾಹನ ಸೌಕರ್ಯವಿದೆ ಎಂದು ಹೇಳಬಹುದು. ಕೇದಾರನಾಥ ಯಾತ್ರೆಯಲ್ಲಿ ಕೊನೆಯ ಹತ್ತು ಕಿಲೋ ಮೀಟರ್​ಗಳನ್ನು ಹೆಲಿಕಾಪ್ಟರ್​ನಿಂದ ಕ್ರಮಿಸಬಹುದು. ಇಲ್ಲದಿದ್ದಲ್ಲಿ ಹೋಗಿ ಬರುವ ಇಪ್ಪತ್ತು ಕಿಲೋಮಿಟರ್ ಕುದುರೆ ಸವಾರಿ ಇಲ್ಲವೇ ಕಾಲ್ನಡಿಗೆಯಲ್ಲಿ. ಯಮುನೋತ್ರಿಯಲ್ಲಿ ಈ ದೂರ ಸ್ವಲ್ಪ ಕಡಿಮೆ ಅಷ್ಟೇ. ಡೋಲಿ ಅನುಕೂಲ ನಾವು ಸ್ಥೂಲಶರೀರಿಗಳಲ್ಲದಿದ್ದಲ್ಲಿ ಮಾತ್ರ. ಪರ್ವತ ಪ್ರದೇಶದ ಕುದುರೆ ಸವಾರಿ ನಾವು ಅಂದುಕೊಂಡಂತೆ ಮೋಜಿನ ಕೆಲಸವೇನು ಅಲ್ಲ. ಆದರೆ, ಆ ಭಕ್ತ ಜನರ ಬತ್ತದ ಉತ್ಸಾಹ ಚಿಮ್ಮುವ ಸ್ಪೂರ್ತಿ ಲವಲವಿಕೆಯ ಮುಂದೆ ಸವಾಲುಗಳೇ ಸೋಲೊಪ್ಪಿ ಸೊಲ್ಲೆತ್ತದೆ ಮುದುರುತ್ತವೆ. ಸ್ಪೇನ್ ದೇಶದ ಮಹಿಳಾ ಪೊ›ಫೆಸರ್ ಒಬ್ಬಳು ನನ್ನ ಮುಂದೆ ಒಮ್ಮೆ ಹೇಳಿದ್ದುಂಟು, ‘ನಿಮ್ಮ ದೇಶದ ದೇವಾಲಯಗಳಲ್ಲಿ ನಮ್ಮಲ್ಲಿನ ಚರ್ಚುಗಳಂತೆ ಶಿಸ್ತು, ಸ್ವಚ್ಚತೆ ಅಷ್ಟೇನೂ ಕಂಡು ಬರುವುದಿಲ್ಲ. ಆದರೆ, ಅಲ್ಲಿ ಜೀವಕಳೆ ತುಂಬಿರುತ್ತದೆ. ಜನವೋ ಜನ. ನಮ್ಮಲ್ಲಿ ಎಲ್ಲವೂ ಇದೆ ಆದರೆ ಜನರೇ ಇಲ್ಲ, ಜೀವವೇ ಇಲ್ಲ’ ಎಂದು. ಆದರೆ, ನಮ್ಮ ಯಾತ್ರೆಯಲ್ಲಿ ಈ ಕೊರತೆ ಕಂಡುಬರಲೇ ಇಲ್ಲ.

ಹುಬ್ಬಳ್ಳಿಯ ’ಹಿಂದೂಸ್ಥಾನ್ ಯಾತ್ರಾ’ ಶಿಸ್ತು, ಸುವ್ಯವಸ್ಥೆಗೆ ಮತ್ತೊಂದು ಹೆಸರಾಗಿ ಬೆಳೆಯುತ್ತಿರುವುದು ಉತ್ತರ ಕರ್ನಾಟಕದ ಹೆಮ್ಮೆ. ಅದರ ನಿರ್ವತೃ ವಿಲಾಸ ಕುಮಾರ್ ದೇಸಾಯಿ ನಮ್ಮ ಆಶ್ರಮದಲ್ಲೇ ಬೆಳೆದ ಹುಡುಗ ಎನ್ನುವುದು ನಮ್ಮ ಹೆಮ್ಮೆಯೂ ಹೌದು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net