ನಂಬಿಕೆ ಎಂಬ ಮಹಾಬೆಳಕು: ಮನೋಲ್ಲಾಸ

Meditation
Published on
| ರಾಮಸುಬ್ರಾಯ ಶೇಟ್ 
ಆತ ದೇವರ ನಂಬಿಕೆ ಇರದ ನಾಸ್ತಿಕನಾಗಿದ್ದ. ಅದೊಂದು ದಿನ ನವನಿರ್ವಣವಾದ ದೇವಾಲಯಕ್ಕೆ ಸ್ನೇಹಿತನು ಈತನನ್ನು ಕರೆದೊಯ್ದ. ದೇವಾಲಯದಲ್ಲಿ ವಿಗ್ರಹ ಸ್ಥಾಪನೆ, ಪ್ರಾಣಪ್ರತಿಷ್ಠೆ, ಹೋಮಹವನಾದಿಗಳು ನಡೆಯುತ್ತಿದ್ದವು. ಇದಕ್ಕೆ ನಾಸ್ತಿಕನು, ಯಾರು ಎಲ್ಲಿ ಕರೆದರೂ ದೇವರು ಬರುತ್ತಾನೆಯೇ? ದೇವರು ನಮ್ಮ ಸೇವಕನೇ? ಇಂತಹ ಅನೇಕ ಪ್ರಶ್ನೆಗಳನ್ನು ಕೇಳಿದ. ಆಗ ಸ್ನೇಹಿತನು, ‘ದೇವರು ಸರ್ವಾಂತರ್ಯಾಮಿ ಎಂದೂ, ಎಲ್ಲೆಡೆಯೂ ಆತನ ಅಸ್ತಿತ್ವವಿದೆ’ ಎಂದೂ ಹೇಳಿದನು.

ಮಂಗಳಾರತಿ, ತೀರ್ಥಪ್ರಸಾದ ವಿತರಣೆಯಾದ ಮೇಲೆ ತನ್ನ ಗುರುಗಳ ಬಳಿ ಕರೆದೊಯ್ದು ತನ್ನ ಸ್ನೇಹಿತನ ಸಂಶಯಗಳನ್ನು ಪರಿಹರಿಸಬೇಕೆಂದು ಕೇಳಿಕೊಂಡ.ಗುರುಗಳು ಈತನನ್ನು ಕೇಳಿದರು- ‘ಅಯ್ಯಾ ಗಾಳಿ ಎಲ್ಲ ಸ್ಥಳದಲ್ಲಿಯೂ ಇದೆ ಎಂದು ಒಪ್ಪುವೆಯಾ?’ ‘ಹೌದು’ ಎಂದ. ‘ಮತ್ತೆ ಅದು ಕಣ್ಣಿಗೆ ಕಾಣಿಸುವುದಿಲ್ಲ, ಹಿಡಿಯಲು ಬರುವುದಿಲ್ಲ, ಇದನ್ನು ಒಪ್ಪುವಿಯಾ?’ ಆಗ ನಾಸ್ತಿಕನು ಅದನ್ನು ಒಪ್ಪಿಕೊಂಡ. ಆಗ ಗುರುಗಳು ಆತನನ್ನು ಒಂದು ಕತ್ತಲೆಯಕೋಣೆಗೆ ಕಳುಹಿಸಿ ತುಸು ಸಮಯದ ನಂತರ ಹೊರಗೆ ಕರೆದುಕೊಂಡು ‘ಆ ಕೋಣೆಯಲ್ಲಿ ಯಾವುದಾದರೂ ವಸ್ತುವನ್ನು ಕಂಡಿದ್ದೀಯಾ?’ ಎಂದು ಕೇಳಿದರು. ಆತ ‘ಯಾವ ವಸ್ತುವೂ ಕಾಣಲಿಲ್ಲ’ ಎಂದ. ನಂತರ ಕೋಣೆಯಲ್ಲಿ ದೀಪವನ್ನು ಹೊತ್ತಿಸಿ ತೋರಿಸಿದಾಗ ಅಲ್ಲಿ ಎಂಟುಹತ್ತು ವಸ್ತುಗಳಿದ್ದುದು ಕಾಣಿಸಿತು.

ಗುರುಗಳು ಹೇಳಿದರು, ‘ನೋಡು, ಕೋಣೆಯಲ್ಲಿ ಕತ್ತಲಿದ್ದಾಗ ಯಾವ ವಸ್ತುವೂ ಕಾಣಲಿಲ್ಲ. ದೀಪವನ್ನು ಹೊತ್ತಿಸಿದ ಮೇಲೆ ವಸ್ತುಗಳು ಕಂಡವು. ಹಾಗೆಯೇ ನಾಸ್ತಿಕತೆ ಎಂಬ ಸಂಶಯದ ಕತ್ತಲೆ ಕವಿದಾಗ ಏನೂ ಕಾಣಿಸುವುದಿಲ್ಲ. ಅಂಥದರಲ್ಲಿ ಭಗವಂತನು ಸುಲಭವಾಗಿ ಕಾಣಿಸುವನೇ? ಭಗವಂತನನ್ನು ನೋಡಲು ಈ ಬಾಹ್ಯಚಕ್ಷುವಿಗೆ ಸಾಧ್ಯವಿಲ್ಲ. ಅದಕ್ಕೆ ಅಂತಃಚಕ್ಷು ಬೇಕಾಗುತ್ತದೆ. ಒಳಗಣ್ಣಿನಿಂದ ನೋಡುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕೆಂದರೆ ಅದು ಸುಲಭಸಾಧ್ಯವಿಲ್ಲ. ಮಹಾಮಹಾಋಷಿಗಳೂ ಅನೇಕ ವರ್ಷಗಳಿಂದ ಸಾಧನೆಗೈದರೂ ಆತನ ದರ್ಶನವಾಗುವುದು ಕಷ್ಟವಾಗುತ್ತದೆ ಮತ್ತು ನಮ್ಮ ಕಣ್ಣಿಗೆ ಕಾಣಿಸುವುದು ಮಾತ್ರ ಸತ್ಯ, ಅದಕ್ಕೆ ಮಾತ್ರ ಅಸ್ತಿತ್ವವಿದೆ, ಕಣ್ಣಿಗೆ ಕಾಣಿಸದೇ ಇರುವುದೆಲ್ಲ ಸುಳ್ಳು, ಅದು ಇಲ್ಲವೆಂಬ ವಾದ ಸುಳ್ಳೆಂಬುದು ಈಗ ನಿನಗೆ ಅರಿವಾಗಿದೆ. ಇನ್ನು ಭಗವಂತನು ಖಂಡಿತವಾಗಿಯೂ ಭಕ್ತರಸೇವಕನೇ ಹೌದು. ಶ್ರೀಕೃಷ್ಣನು ಪಾರ್ಥನ ರಥದ ಸಾರಥಿಯಾಗಿ ಸೇವೆಗೈದುದೇ ಇದಕ್ಕೆ ನಿದರ್ಶನ. ಆದ್ದರಿಂದ ನಮ್ಮ ನಂಬಿಕೆ, ನಮ್ಮ ಭಾವನೆಗಳೇ ಎಲ್ಲದಕ್ಕೂ ಮುಖ್ಯವೇ ಹೊರತು ಪ್ರತಿಯೊಂದನ್ನೂ ಒರೆಹಚ್ಚಿ ನೊಡಲು ಸಾಧ್ಯವಿಲ್ಲ’ ಎಂದಾಗ, ನಾಸ್ತಿಕನಿಗೆ ಸಂಪೂರ್ಣ ಅರಿವುಂಟಾಯಿತು. ಗುರುಗಳಿಗೆ ವಂದಿಸಿದನು. ಹೀಗೆ ಜೀವನದಲ್ಲಿ ಆಶಾವಾದಿಯಾಗಿ, ಸೇವೆಯಲ್ಲಿ ತೊಡಗಿಸಿಕೊಂಡು, ಸಾರ್ಥಕತೆಯನ್ನು ಪಡೆಯೋಣ.

(ಲೇಖಕರು ನಿವೃತ್ತ ಉಪನ್ಯಾಸಕರು ಮತ್ತು ಗಮಕಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net