

ದೇವಾಲಯಗಳೆಂದರೆ ಕೆಲ ಆಚರಣೆಗಳಿಗಷ್ಟೇ ಸೀಮಿತವಲ್ಲ. ಅವು ನಮ್ಮ ಸಂಸ್ಕೃತಿಯ ಅಂತಃಸತ್ವವನ್ನು ಜಾಗೃತಗೊಳಿಸುವಂಥ ಕಾರ್ಯವನ್ನು ನಿರಂತರ ಮಾಡಬೇಕು. ಸಂಸ್ಕೃತಿ ಮೇಲಿನ ಆಕ್ರಮಣವನ್ನು ತಡೆದು, ಆಧ್ಯಾತ್ಮಿಕ, ಸಾಂಸ್ಕೃತಿಕ ಶಕ್ತಿಕೇಂದ್ರಗಳಾಗಿ ರೂಪುಗೊಳ್ಳಬೇಕು. ಭಕ್ತಜನರಿಗೆ ಭರವಸೆಯನ್ನು, ನೈತಿಕ ಸ್ಥೈರ್ಯವನ್ನು ತುಂಬುವ ಮೂಲಕ ಪರಿವರ್ತನೆಯ ತಾಣಗಳಾಗಬೇಕು.
‘ಗುಜರಾತಿನ ಸೋಮನಾಥ ದೇವಾಲಯ ಲಕ್ಷಾಂತರ ಭಕ್ತರ ಶ್ರದ್ಧಾಕೇಂದ್ರ ಮಾತ್ರವಲ್ಲ, ಈ ದೇಶದ ಅಸ್ಮಿತೆಯ ಪ್ರಮುಖ ಭಾಗ. ಹಾಗಾಗಿ, ಈ ದೇವಾಲಯದ ಸಂಪೂರ್ಣ ಜೀಣೋದ್ಧಾರ ನಡೆಯಬೇಕು’ ಎಂದು ಸರ್ದಾರ್ ವಲ್ಲಭಬಾಯಿ ಪಟೇಲ್ ಗಾಂಧೀಜಿ ಅವರಿಗೆ ಪತ್ರ ಬರೆದರು. ಸೋಮನಾಥ ದೇವಸ್ಥಾನ ಪುನರ್ ನಿರ್ಮಾಣ ಆಗಬೇಕು ಎಂದು ಹಲವು ಬಾರಿ ಹೇಳಿದ್ದ ಗಾಂಧೀಜಿ ಪಟೇಲರ ಪತ್ರ ಓದುತ್ತಿದ್ದಂತೆ, ‘ಮಂದಿರದ ಜೀಣೋದ್ಧಾರ ಆಗಲಿ. ಆದರೆ, ಅದಕ್ಕೆ ಯಾವುದೇ ಕಾರಣಕ್ಕೂ ಸರ್ಕಾರದ ಹಣ ಬಳಕೆ ಆಗಕೂಡದು’ ಎಂದರು. ಪಟೇಲರು ಬೇರೆ ಮಾರ್ಗವಿಲ್ಲದೆ ಗಾಂಧೀಜಿಯವರ ಈ ವಿಚಿತ್ರ ಷರತ್ತನ್ನು ಒಪ್ಪಿಕೊಂಡು, ಮಂದಿರ ಪುನರುಜ್ಜೀವನದ ಹೊಣೆಯನ್ನು ಹೊತ್ತುಕೊಂಡರು ಮತ್ತು ಸಾರ್ವಜನಿಕರ ನೆರವಿನಿಂದಲೇ ಮತ್ತೆ ಸೋಮನಾಥ ಮಂದಿರ ಭವ್ಯವಾಗಿ ತಲೆಯೆತ್ತಿ ನಿಂತಿತು.
ಜೀಣೋದ್ಧಾರಗೊಂಡ ಸೋಮನಾಥ ದೇವಾಲಯವನ್ನು ಆಗಿನ ಪ್ರಧಾನಿ ಜವಾಹರಲಾಲ್ ನೆಹರು ಅವರ ತೀವ್ರ ವಿರೋಧ ಮತ್ತು ಅಡ್ಡಿಯ ನಡುವೆಯೂ ಆಗಿನ ರಾಷ್ಟ್ರಪತಿ ಡಾ.ಬಾಬು ರಾಜೇಂದ್ರ ಪ್ರಸಾದ್ ಅವರು 1951ರ ಮೇ 11ರಂದು ಉದ್ಘಾಟಿಸಿ, ದೇಶಕ್ಕೆ ಮಹತ್ವದ ಸಂದೇಶ ರವಾನಿಸಿದರು. ‘ಮಂದಿರ ಉದ್ಘಾಟನೆ ಸರ್ಕಾರಿ ಕಾರ್ಯಕ್ರಮವಲ್ಲ. ನೀವು ಅದಕ್ಕಾಗಿ ಹೋಗುವ ಅಗತ್ಯವಿಲ್ಲ’ ಎಂದು ಖಾರವಾಗಿ ಹೇಳಿದ್ದ ನೆಹರು ಅವರಿಗೆ ತೀಕ್ಷ ್ಣವಾಗಿಯೇ ಪ್ರತ್ಯುತ್ತರ ಕೊಟ್ಟಿದ್ದ ರಾಜೇಂದ್ರ ಪ್ರಸಾದರು, ‘ನಾನು ನನ್ನ ಧರ್ಮವನ್ನು ನಂಬುತ್ತೇನೆ ಮತ್ತು ನನ್ನನ್ನು ಇದರಿಂದ ಪ್ರತ್ಯೇಕಗೊಳಿಸಲು ಸಾಧ್ಯವಿಲ್ಲ’ ಎಂದಿದ್ದರು.
ಕಾಶಿ ವಿಶ್ವನಾಥ ಮಂದಿರದ ಸ್ಥಿತಿಯೂ ಭಿನ್ನವಾಗಿರಲಿಲ್ಲ. 1669ರಲ್ಲಿ ಔರಂಗಜೇಬ್ ಕಾಶಿ ವಿಶ್ವನಾಥ ಮಂದಿರವನ್ನು ಧ್ವಂಸಗೊಳಿಸಿದಾಗ, ಇಡೀ ದೇಶಕ್ಕೆ ನೋವಾಗಿತ್ತು. ಇಂದೋರ್ನ ರಾಣಿ ಅಹಲ್ಯಾಬಾಯಿ ಹೋಳ್ಕರ್ 1777-1780ರ ಅವಧಿಯಲ್ಲಿ ಕಾಶಿ ವಿಶ್ವನಾಥ ದೇವಾಲಯವನ್ನು ಪುನರ್ನಿರ್ವಣ ಮಾಡುವ ಮೂಲಕ, ಪರಂಪರೆಯನ್ನು ಜೀವಂತವಾಗಿ ಇರಿಸಿದರು. ಮುಂದೆ, ಗ್ವಾಲಿಯರ್ನ ಮಹಾರಾಣಿ ಬೈಜಾಬಾಯಿ ಈ ಮಂದಿರದ ಮುಖ್ಯಮಂಟಪವನ್ನು ಕಟ್ಟಿಸಿದರು. ಅಹಲ್ಯಾಬಾಯಿ ಹೋಳ್ಕರ್ ಮತ್ತು ಮಹಾರಾಣಿ ಬೈಜಾಬಾಯಿ ಮಂದಿರ ಜೀಣೋದ್ಧಾರಗೊಳಿಸಿರದಿದ್ದರೆ, ಇಂದು ಕಾಣುವಷ್ಟು ದೇವಾಲಯವೂ ಇರುತ್ತಿರಲಿಲ್ಲವೇನೋ.
ಶ್ರೀರಾಮ ಜನ್ಮಭೂಮಿ ಅಯೋಧ್ಯೆಯ ಚರಿತ್ರೆಯಂತೂ ಗೊತ್ತಿರುವಂಥದ್ದೇ. ಐದು ಸಾವಿರ ವರ್ಷಗಳ ನಿರಂತರ ಹೋರಾಟ, ಪ್ರಯತ್ನ, ಬಲಿದಾನಗಳ ನಂತರ ಬಾಲರಾಮ ಭವ್ಯ ಮಂದಿರದಲ್ಲಿ ವಿರಾಜಮಾನನಾಗಿದ್ದಾನೆ.
ಹೀಗೆ ಸಂಸ್ಕೃತಿಯ ವಿರುದ್ಧದ, ಅದರಲ್ಲೂ ಸನಾತನ ಪರಂಪರೆ ವಿರುದ್ಧದ ಹೋರಾಟವನ್ನು ಭಾರತ ಶತಮಾನಗಳಿಂದಲೂ ಎದುರಿಸಿಕೊಂಡೇ ಬರುತ್ತಿದೆ. ಮತ್ತು ಈ ದೀರ್ಘ ಹೋರಾಟದಲ್ಲಿ ಹತಾಶರಾಗದೆ, ಕೈಚೆಲ್ಲದೆ ಧೀರೋದಾತ್ತದಿಂದ ಸಂಘರ್ಷ ನಡೆಸಿ, ವಿಜಯದ ಅಧ್ಯಾಯವನ್ನು ಬರೆದಿದೆ. ಮಹತ್ವದ ಶ್ರದ್ಧಾಕೇಂದ್ರಗಳನ್ನು ಉಳಿಸಿಕೊಳ್ಳಲು ನಡೆಸಿದ ಹೋರಾಟವು ದೇಶದ ಸಾಂಸ್ಕೃತಿಕ, ಆಧ್ಯಾತ್ಮಿಕ ಬೇರುಗಳನ್ನು ಮತ್ತಷ್ಟು ಗಟ್ಟಿಗೊಳಿಸಿತು ಹಾಗೂ ಮುಂದಿನ ಪೀಳಿಗೆಗಳಿಗೆ ಸಂಸ್ಕೃತಿ ರಕ್ಷಣೆಯ ಜವಾಬ್ದಾರಿಯನ್ನು ವರ್ಗಾಯಿಸಿತು.
ದೊಡ್ಡ ದೊಡ್ಡ ಶ್ರದ್ಧಾಕೇಂದ್ರಗಳನ್ನು ಉಳಿಸಿಕೊಂಡಿದ್ದೇವೆ, ಅವು ಸನಾತನ ಸಂಸ್ಕೃತಿಯ ಮೌಲ್ಯಗಳನ್ನು ಇನ್ನಷ್ಟು ಬಲವಾಗಿ ಪ್ರತಿಪಾದಿಸುತ್ತಿವೆ ಎಂಬುದು ಸಮಾಧಾನದ ಸಂಗತಿಯೇ. ಆದರೆ, ಇದರ ಇನ್ನೊಂದು ಮುಖ್ಯ ಆಯಾಮವನ್ನೂ ಗಮನಿಸಬೇಕಿದೆ. ಅದೇನೆಂದರೆ, ದೇಶದ ಸಣ್ಣ ಸಣ್ಣ ಗ್ರಾಮಗಳಲ್ಲಿ ಅಥವಾ ತಾಲೂಕು ಕೇಂದ್ರಗಳಲ್ಲಿ ಸಾವಿರಾರು ದೇವಾಲಯಗಳು ಇಂದಿಗೂ ಪಾಳು ಬಿದ್ದಿವೆ. ಸಾವಿರಾರು ದೇವಾಲಯಗಳು ಜೀಣೋದ್ಧಾರಕ್ಕೆ ಕಾಯುತ್ತಿವೆ. ಅಷ್ಟಕ್ಕೂ, ದೇವಸ್ಥಾನಗಳೆಂದರೆ ಬರೀ ಪೂಜೆ, ಅರ್ಚನೆಗೆ ಸೀಮಿತವಾದ ಸ್ಥಳಗಳಲ್ಲ. ಕೆಲ ವರ್ಷಗಳ ಹಿಂದಿನ ಸ್ಥಿತಿಯನ್ನು ಕಣ್ಣು ಮುಂದೆ ತಂದುಕೊಳ್ಳಿ. ಆಯಾ ಗ್ರಾಮದಲ್ಲಿನ ಪ್ರಮುಖ ದೇವಾಲಯವೆಂದರೆ, ಅದರೊಂದಿಗೆ ಶ್ರದ್ಧೆ, ಆಳವಾದ ನಂಬಿಕೆ, ನೈತಿಕ ಭಯ, ಒಳ್ಳೆಯ ಮಾರ್ಗದಲ್ಲೇ ಸಾಗಬೇಕೆಂಬ ವಿವೇಕ ಹೀಗೆ ಎಲ್ಲ ಭಾವಗಳು ಮಿಳಿತವಾಗಿದ್ದವು. ನೆಲಮೂಲದ ಸಂಸ್ಕೃತಿ, ಪರಂಪರೆಯನ್ನು ಕಾಪಾಡುತ್ತ, ಶಕ್ತಿಕೇಂದ್ರಗಳೂ ಆಗಿದ್ದವು. ಅಷ್ಟೇ ಅಲ್ಲ, ಅವು ಸಮಾಧಾನದ ಕೇಂದ್ರಗಳೂ ಆಗಿದ್ದವು. ದೇವಾಲಯವೊಂದು ತನ್ನೊಂದಿಗೆ ಪುಟ್ಟ ಜಗತ್ತನ್ನೇ ಸೃಷ್ಟಿಸಿಕೊಂಡಿತ್ತು. ನಿರಂತರವಾಗಿ ನಡೆಯುವ ಧಾರ್ವಿುಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಒಳ್ಳೆಯ ತರಂಗಗಳನ್ನು (ಗುಡ್ ವೈಬ್ಸ್) ಸದಾ ಕಾಪಿಡುತ್ತಿದ್ದವು. ದೇವಸ್ಥಾನದ ಅರ್ಚಕರು ಸ್ಥಳೀಯರಿಗೆ ಬುದ್ಧಿಮಾತು ಹೇಳುತ್ತಿದ್ದರು, ಸಣ್ಣಪುಟ್ಟ ಕಲಹ, ಮನಸ್ತಾಪಗಳು ಪೊಲೀಸ್ ಠಾಣೆ- ಕೋರ್ಟ್ ಮೆಟ್ಟಿಲು ಹತ್ತದಂತೆ ಮಾಡಿ ಅಲ್ಲೇ ಬಗೆಹರಿಸುತ್ತಿದ್ದರು. ನೈತಿಕ ಮಾರ್ಗದರ್ಶನ ನೀಡುತ್ತ, ಒಳಿತಿನೆಡೆಗೆ ಕೊಂಡೊಯ್ಯುತ್ತಿದ್ದರು. ವಾರಕ್ಕೊಮ್ಮೆ ನಡೆಯುವ ವಿಶೇಷ ಪೂಜೆ, ಭಜನೆಯು ಮನಸುಗಳ ವಿಭಜನೆಯನ್ನು ತಡೆದು, ಶ್ರದ್ಧೆಯನ್ನು ಬೆಸೆಯುತ್ತಿತ್ತು. ಜತೆಗೆ ಊರವರು ಒಂದೆಡೆ ಸೇರುವುದರಿಂದ ಸಾಮಾಜಿಕ ಮಿಲನ ಸಾಧ್ಯವಾಗಿ, ಚರ್ಚೆಗಳು ರಂಗೇರುತ್ತಿದ್ದವು. ಬಡವರಿಗೆ ನೆರವು ಒದಗಿಸಿ, ಅನ್ನದಾನವೂ ನಡೆಯುತ್ತಿತ್ತು. ವರ್ಷಕ್ಕೊಮ್ಮೆ ನಡೆಯುವ ಜಾತ್ರೆಯಲ್ಲಿ ಬಲೂನ್, ಮಿಠಾಯಿ ಮಾರಲು ಪಕ್ಕದ ಹಳ್ಳಿಗಳಿಂದಲೂ ಜನರು ಬಂದು, ಒಂದಿಷ್ಟು ಆದಾಯ ಮಾಡಿಕೊಳ್ಳುತ್ತಿದ್ದರು. ಊರಿನ ಜನ ಜಾತ್ರೆಯ ಅವಧಿಗೆಂದೆ ಹೊಸ ಬಟ್ಟೆ ಹಾಗೂ ಇನ್ನಿತರ ಖರೀದಿಗೆ ಹಣ ಸೇರಿಸಿ ಇಡುತ್ತಿದ್ದರು. ಇದೆಲ್ಲವೂ ಬೆಸೆಯುವ ವಿಶಿಷ್ಟ ಕೊಂಡಿಯನ್ನು ಗಮನಿಸಿ. ನಂಬಿಕೆ, ಬಾಂಧವ್ಯ, ಭರವಸೆ, ಶ್ರದ್ಧೆ, ಅಸಾಧಾರಣ ಭಕ್ತಿ, ಆರಾಧನೆ, ಆಚರಣೆಗಳು, ಧಾರ್ವಿುಕ ಕಾರ್ಯಕ್ರಮ, ಸಾಂಸ್ಕೃತಿಕ ಚಟುವಟಿಕೆ, ಸ್ಥಳೀಯ ಆರ್ಥಿಕತೆ... ಅಬ್ಬಬ್ಬಾ ಒಂದು ದೇವಾಲಯವೆಂದರೆ ಅಗಾಧ ಅಷ್ಟೇ ವಿಶಿಷ್ಟವಾದ ಲೋಕ.
ಮತ್ತೊಂದು ಮುಖ್ಯ ಅಂಶವನ್ನು ಇಲ್ಲಿ ಗಮನಿಸಬೇಕು. ಹಿಂದೆಲ್ಲ ಯಾವುದೋ ಶೋಕಿಗಾಗಿ, ಒಣಪ್ರತಿಷ್ಠೆಗಾಗಿ ದೇವಾಲಯಗಳನ್ನು ನಿರ್ವಿುಸುತ್ತಿರಲಿಲ್ಲ. ದೇವರ ಸಾನಿಧ್ಯ ಗೋಚರವಾದ ಅಥವಾ ಅನುಭವವಾದ ಸ್ಥಳಗಳಲ್ಲಿ ಮಾತ್ರ ವಿಷಯತಜ್ಞರ, ಪರಿಣಿತರ ಮಾರ್ಗದರ್ಶನ, ಸಹಕಾರ ಪಡೆದು ದೇವಾಲಯಗಳನ್ನು ನಿರ್ವಿುಸಲಾಗುತ್ತಿತ್ತು. ಹೀಗಾಗಿ ಇವು ತಮ್ಮದೇ ಶಕ್ತಿವಲಯವನ್ನು, ಪ್ರಭಾವಳಿಯನ್ನು ಹೊಂದಿದ್ದವು. ಇತ್ತೀಚಿನ ವರ್ಷಗಳಲ್ಲಿ ಪಾಳುಬಿದ್ದ ದೇವಾಲಯಗಳ ಸಂಖ್ಯೆ ಹೆಚ್ಚುತ್ತಿದೆ. ಇದರಿಂದ ಮುಖ್ಯವಾಗಿ, ಮೇಲೆ ಪಟ್ಟಿ ಮಾಡಲಾದ ಉಪಯೋಗಗಳು ಜನಸಮುದಾಯದಿಂದ ದೂರವಾಗುವುದು ಮಾತ್ರವಲ್ಲದೆ, ಆರಾಧನೆ, ಆಚರಣೆ ನಿಂತುಹೋದ ಫಲವಾಗಿ ಗ್ರಾಮಗಳು ಅಥವಾ ಆಯಾ ಪ್ರದೇಶಗಳು ಸಮಸ್ಯೆಗೆ ಸಿಲುಕುತ್ತವೆ. ಮತ್ತೊಂದೆಡೆ, ಅಸ್ತಿತ್ವದಲ್ಲಿರುವ ದೇವಾಲಯಗಳು ಕಮಿಟಿಗಳ ಒಳಜಗಳ, ರಾಜಕೀಯ ಪ್ರತಿಷ್ಠೆಯಿಂದ ಕಳೆಗುಂದುತ್ತಿವೆ.
್ಞ್ರಾಮೀಣ ಭಾರತದಲ್ಲಿ ಪಾಳುಬಿದ್ದ ದೇವಾಲಯಗಳನ್ನು ಅಥವಾ ಜೀಣೋದ್ಧಾರಕ್ಕೆ ಕಾದಿರುವ ಮಂದಿರಗಳನ್ನು ಮತ್ತೆ ಶಕ್ತಿಕೇಂದ್ರಗಳಾಗಿಸಲು ಏನು ಮಾಡಬಹುದು? ಈ ಮೂಲಕ ಇಡೀ ಸಮೂಹದ ಶಕ್ತಿ ಹೇಗೆ ಹೆಚ್ಚಿಸಬಹುದು? ಎಂಬ ಪ್ರಶ್ನೆಯನ್ನು ಆರ್ಟ್ ಆಫ್ ಲಿವಿಂಗ್ ಸಂಸ್ಥಾಪಕ ಮತ್ತು ಸ್ಪೂರ್ತಿಯುತ ಆಧ್ಯಾತ್ಮಿಕ ನಾಯಕ ಶ್ರೀ ಶ್ರೀ ರವಿಶಂಕರ್ ಗುರೂಜಿ ಅವರ ಸಮ್ಮುಖದಲ್ಲಿ ಇಟ್ಟಾಗ, ಅವರು ನೀಡಿದ ಉತ್ತರ ಮಹತ್ವಪೂರ್ಣವೂ, ಸಮುದಾಯದ ಕಣ್ಣು ತೆರೆಸುವಂಥದ್ದೂ ಆಗಿದೆ.
ಶ್ರೀ ಶ್ರೀ ರವಿಶಂಕರ್ ಗುರೂಜಿ ಹೇಳಿದ್ದು (ಅವರ ಮಾತುಗಳಲ್ಲೇ)-
‘‘ಒಂದು ಸಲ ನಮ್ಮ ಹೆಲಿಕಾಪ್ಟರ್ ತುರ್ತು ಲ್ಯಾಂಡಿಂಗ್ ಆಗಬೇಕಿತ್ತು. ಕುಗ್ರಾಮವೊಂದರಲ್ಲಿ ಹೆಲಿಕಾಪ್ಟರ್ ತುರ್ತು ಭೂಸ್ಪರ್ಶ ಮಾಡಿದ ಕೆಲವೇ ಹೊತ್ತಲ್ಲಿ, ಆ ಹಳ್ಳಿಯ ಜನರು ಜಮಾಯಿಸಿದರು. ಸುತ್ತಮುತ್ತಲೂ ಬರೀ ಗುಡಿಸಲುಗಳಿದ್ದವು. ಒಂದು ಹಂಚಿನ ಮನೆಯೂ ಇರದಂಥ ಬಡತನ. ನಿಮ್ಮ ಗ್ರಾಮಕ್ಕಾಗಿ ಏನು ಬೇಕು ಎಂದು ಕೇಳಿದರೆ ಅವರು ಹೇಳಿದ್ದು, ‘ಊರಿನ ದೇವಾಲಯಕ್ಕೆ ಗೋಪುರ ಮಾಡಿಕೊಡಿ, ದೇವಾಲಯ ರಿಪೇರಿ ಮಾಡಿಸಿಕೊಡಿ’ ಎಂದು. ಅವರ್ಯಾರು ತಮಗಾಗಿ ಮನೆ ಅಥವಾ ಇತರ ಸವಲತ್ತುಗಳನ್ನು ಕೇಳಲಿಲ್ಲ. ಅಂದರೆ, ಆ ದೈವಪ್ರಜ್ಞೆ, ಧರ್ಮದ ಬಗೆಗಿನ ಶ್ರದ್ಧೆ ನಮ್ಮ ದೇಶದಲ್ಲಿ ಜೀವಂತವಾಗಿದೆ. ಹೊಸ ಹೊಸ ದೇವಸ್ಥಾನಗಳು ನಿರ್ವಣವಾಗುತ್ತಿವೆ. ಆದರೆ, ಇತ್ತೀಚಿನ ವರ್ಷಗಳಲ್ಲಿ ದೇವಾಲಯದ ಹೆಸರಿನಲ್ಲಿ ಎರಡು-ಮೂರು ಕಮಿಟಿ ಮಾಡಿಕೊಂಡು ಅವರವರಲ್ಲೇ ಗುದ್ದಾಡುತ್ತಿದ್ದಾರೆ. ಹಾಗಾಗಿ, ದೇವರಿಗಾಗಿ ದೇವಸ್ಥಾನವೋ ಅಥವಾ ನಮ್ಮ ಅಹಂಕಾರಕ್ಕಾಗಿ ದೇವಸ್ಥಾನವೋ ಎಂಬುದನ್ನು ಪ್ರಶ್ನಿಸಿಕೊಳ್ಳಬೇಕಿದೆ. ದೇವಸ್ಥಾನ ಸಾಂಸ್ಕೃತಿಕ ಕೇಂದ್ರವಾಗಿ ಸೀಮಿತವಾಗದೆ ದುಡ್ಡು ಮಾಡುವ ಕೇಂದ್ರವಾಗುತ್ತಿರುವುದು ಕಳವಳಕಾರಿ. ದೊಡ್ಡ ದೇವಸ್ಥಾನ ಕಟ್ಟಿ, ದೊಡ್ಡ ಮೂರ್ತಿಯನ್ನು ಪ್ರತಿಷ್ಠಾಪಿಸಿದರೆ ಅಲ್ಲಿ ಹೆಚ್ಚು ಜನ ಬರುತ್ತಾರೆ ಎಂಬ ಭ್ರಮೆಯಲ್ಲಿ ಕೆಲವರಿದ್ದಾರೆ. ಈ ಅಪಸವ್ಯಗಳನ್ನೆಲ್ಲ ದೂರ ಮಾಡಿ ದೇವಸ್ಥಾನಗಳಲ್ಲಿ ಧ್ಯಾನ, ಭಜನೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯುವಂತೆ ಮಾಡಬೇಕು.
ದೇವಸ್ಥಾನಕ್ಕೆ ಹೋದವರು ಒಂದಷ್ಟು ಹೊತ್ತು ಕೂತು ಬರಬೇಕು ಎಂದು ಹೇಳುತ್ತಾರೆ. ಕೂರುವುದು ಎಂದರೆ ಧ್ಯಾನ, ಜಪವನ್ನು ಮಾಡಿ ಮನಸ್ಸನ್ನು ಶಾಂತಗೊಳಿಸುವುದು. ದೈನಂದಿನ ಕಾರ್ಯದೊತ್ತಡದಿಂದ ನಿರಾಳವಾಗಲು, ಮನಸ್ಸನ್ನು ಶಾಂತ ಮಾಡಿ, ನಮ್ಮನ್ನು ನಾವು ಅರಿಯಲೆಂದು
ದೇವಾಲಯಗಳಿಗೆ ಹೋಗುವುದು. ಈಗ, ಅಲ್ಲಿಯೂ ಗಡಿಬಿಡಿ, ತರಾತುರಿ. ತೆಂಗಿನ ಕಾಯಿ ಒಡೆಸಿ, ಪ್ರಸಾದ ತೆಗೆದುಕೊಂಡು ಓಡ್ತಾ ಇರೋದೆ! ಪ್ರಾರ್ಥನೆಯಾದರೂ ಸರಿಯಾಗಿ ಮಾಡುತ್ತೇವೆಯೋ ಇಲ್ಲವೋ ಎಂಬುದನ್ನು ಅವಲೋಕಿಸಿಕೊಳ್ಳಬೇಕಿದೆ. ಸಮಸ್ಯೆ ಬಂದಾಗ ಮಾತ್ರ ಪ್ರಾರ್ಥನೆ ಮಾಡುತ್ತೇವೆ. ಇಲ್ಲದಿದ್ದರೆ ಕಾಟಾಚಾರಕ್ಕೆ ದೇವಸ್ಥಾನಕ್ಕೆ ಹೋಗಿಬರುತ್ತೇವೆ. ಹಾಗಾಗಬಾರದು. ಹಿಂದುಗಳು ಅನ್ಯ ಧರ್ಮಗಳಿಗೆ ಮತಾಂತರವಾಗುತ್ತಿದ್ದಾರೆ. ಏಕೆಂದರೆ, ಅಲ್ಲಿ ಅವರಿಗೆ ಪಾದ್ರಿಗಳು ಭರವಸೆಯ ಮಾತುಗಳನ್ನು ಹೇಳುತ್ತಾರೆ. ಇತರ ಆಮಿಷಗಳೂ ಇರುತ್ತವೆ ಎಂಬುದು ಬೇರೆ ವಿಷಯ. ಆದರೆ, ನಮ್ಮ ದೇವಾಲಯಗಳು ಕೂಡ ಹೀಗೆ ಭರವಸೆ ತುಂಬುವ ತಾಣಗಳಾಗಬೇಕು. ಗೋವಾದ ಹಲವು ದೇವಾಲಯಗಳಲ್ಲಿ ಪೂಜೆಯಾದ ಬಳಿಕ ಅಲ್ಲಿನ ಅರ್ಚಕರು ಭಕ್ತರಿಗೆ ಭರವಸೆಯ ಮಾತುಗಳನ್ನು ಹೇಳುತ್ತಾರೆ, ‘ಪ್ರಾರ್ಥನೆ ಮಾಡಿಕೊಳ್ಳಿ, ಆ ತಾಯಿ ನಿಮ್ಮ ಸಮಸ್ಯೆಗಳನ್ನು ಪರಿಹರಿಸುತ್ತಾಳೆ’ ಎಂದು. ಅದು ಜನರಲ್ಲಿ ಸ್ಥೈರ್ಯವನ್ನು ಉಂಟುಮಾಡುತ್ತದೆ. ಇಂತಹ ಅನೇಕ ಸುಧಾರಣೆಗಳು ಆಗಬೇಕಿದೆ. ಉದಾಹರಣೆಗೆ, ಶ್ರೀರಾಮಕೃಷ್ಣ ಆಶ್ರಮದಲ್ಲಿ ಪೂಜೆ ಮತ್ತು ಭಜನೆಯಲ್ಲಿ ಜನರು ತಲ್ಲೀನರಾಗಿ ಪಾಲ್ಗೊಳ್ಳುತ್ತಾರೆ. ಉಳಿದೆಡೆಯೂ, ಇಂಥ ವಾತಾವರಣ ಸೃಷ್ಟಿಯಾಗಬೇಕು. ಹೊಸ ಹೊಸ ದೇವಾಲಯಗಳನ್ನು ನಿರ್ವಿುಸುವುದಕ್ಕಿಂತ ಈಗಿರುವ ಮಂದಿರಗಳನ್ನೇ ಚೆನ್ನಾಗಿ ನಿರ್ವಹಿಸಿಕೊಂಡು ಹೋಗಬೇಕು. ದೇವಸ್ಥಾನದ ಹೆಸರಲ್ಲಿ ಗುಂಪುಗಾರಿಕೆ, ಗೊಂದಲ ನಡೆಯಬಾರದು. ಈ ಬಗೆಯ ಸುಧಾರಣೆಗಳು ಆಗಬೇಕಾದ ಅಗತ್ಯವಿದೆ’.
ಹೌದು, ಸಾಮೂಹಿಕ ಸಂಕಲ್ಪದಿಂದ ಈ ಸುಧಾರಣೆಗಳತ್ತ ಸಾಗಬೇಕಿದೆ. ಸಮಸ್ಯೆ ಮತ್ತು ಪರಿಹಾರ ಎರಡನ್ನೂ ಸ್ಪಷ್ಟವಾಗಿ ತಿಳಿಸಿದ್ದಾರೆ. ಇನ್ನಾದರೂ, ಒಳಜಗಳ, ಗುಂಪುಗಾರಿಕೆ, ಪ್ರತಿಷ್ಠೆಗೆ ಅಂತ್ಯ ಹಾಡಬೇಕಿದೆ. ದೇವಾಲಯಗಳ ಮುಖೇನ ಅಧ್ಯಾತ್ಮದ ಬೇರುಗಳು ಆಳಕ್ಕೆ ಇಳಿಯಬೇಕು. ಜನರ ಬದುಕಿನಲ್ಲಿ ಅಧ್ಯಾತ್ಮದ ಮೌಲ್ಯಗಳು ಪ್ರಮುಖ ಪಾತ್ರ ವಹಿಸಬೇಕು. ಆಗ ಅಂತರಂಗ ಸ್ವಚ್ಛವಾಗುತ್ತದೆ. ಬಾಹ್ಯ ಪ್ರಪಂಚ ಸುಂದರವಾಗಿ ಕಾಣುತ್ತದೆ. ‘ಇಡೀ ಪ್ರಪಂಚವೇ ಕುಟುಂಬ, ಎಲ್ಲರಿಗೂ ಒಳಿತಾಗಲಿ’ ಎಂಬ ಸನಾತನ ಸಂಸ್ಕೃತಿಯ ಆಶಯ ಈಡೇರುತ್ತದೆ. ಇನ್ನಾದರೂ, ದೇವಸ್ಥಾನ ಪ್ರವೇಶಿಸುವ ಮುನ್ನ ನಮ್ಮ ಮನಸ್ಸನ್ನು ಶಾಂತಿ-ಶ್ರದ್ಧೆಯಿಂದ ತುಂಬಿಕೊಳ್ಳೋಣ. ಪಾಳುಬಿದ್ದ ದೇವಾಲಯಗಳಿಗೆ ಮತ್ತೆ ಶಕ್ತಿ ತುಂಬುವ ಮೂಲಕ ಸಂಸ್ಕೃತಿಯ ಉತ್ಕರ್ಷ ಸಾಕಾರಗೊಳಿಸೋಣ.
(ಲೇಖಕರು ‘ವಿಜಯವಾಣಿ’ ಸಹಾಯಕ ಸುದ್ದಿ ಸಂಪಾದಕರು)