

ಮಹಾಶೀರ್ಷ ಮುದ್ರೆಯು ಧ್ಯಾನಸ್ಥ ಭಂಗಿಯಲ್ಲಿ ಮಾಡುವ ಕೈ ಸನ್ನೆಗಳಲ್ಲಿ ಒಂದಾಗಿದೆ. ರಕ್ತಪರಿಚಲನೆಯನ್ನು ಸುಧಾರಿಸಲು, ಒತ್ತಡವನ್ನು ನಿವಾರಿಸಲು ಮತ್ತು ಸೈನಸ್ಗಳಲ್ಲಿ ಲೋಳೆಯ ದಟ್ಟಣೆಯನ್ನು ತೊಡೆದುಹಾಕಲು ಸಹ ಇದನ್ನು ಬಳಸಲಾಗುತ್ತದೆ. ಮಹಾಶೀರ್ಷ ಮುದ್ರೆಯು ಕಣ್ಣುಗಳು, ಕುತ್ತಿಗೆ, ಬೆನ್ನು ಮತ್ತು ಸೊಂಟದ ಒತ್ತಡದ ಪರಿಣಾಮಗಳನ್ನು ಎದುರಿಸಲು ಸಹಾಯ ಮಾಡುತ್ತದೆ, ಮಹಾ ಶೀರ್ಷಾ ಎಂದರೆ ದೊಡ್ಡ ತಲೆ. ಮುಖ್ಯವಾಗಿ ತಲೆನೋವಿನ ನಿಯಂತ್ರಣಕ್ಕೆ ಇರುವ ಮುದ್ರೆಯಾಗಿದೆ. ಮುಖ್ಯವಾಗಿ ಸೈನಸೈಟಸ್, ಮೈಗ್ರೇನ್ ತಲೆನೋವಿನ ನಿಯಂತ್ರಣಕ್ಕೆ ಈ ಮುದ್ರೆ ಸಹಕಾರಿಯಾಗಿದೆ. ಇಲ್ಲಿ ವ್ಯಾನ ಮುದ್ರೆ ಹಾಗೂ ಸೂರ್ಯ ಮುದ್ರೆ ಜೊತೆಯಲ್ಲಿ ಮಾಡಬೇಕು.
ವ್ಯಾನ ಮುದ್ರೆಯಿಂದ ಚಿಂತೆ, ಶ್ರಮ, ನಿದ್ರಾಹೀನತೆ, ತಲೆಭಾರ ಇತ್ಯಾದಿ ನಿಯಂತ್ರಣವಾಗುತ್ತದೆ. ವ್ಯಾನ ಮುದ್ರೆಯಲ್ಲಿ ವಾಯು ಮತ್ತು ಆಕಾಶ ತತ್ವಗಳ ಅಗ್ನಿಯೊಂದಿಗೆ ಜೊತೆಯಾಗಿ ಮನಸ್ಸು ಸ್ಥಿಮಿತಕ್ಕೆ ಬರುತ್ತದೆ. ವಾಯು ನಾಳಗಳ ಕಾರ್ಯ ಬಲಗೊಳ್ಳುತ್ತದೆ. ಶಿರಸ್ಸಲ್ಲಿ ಉಂಟಾಗುವ ಜಡತ್ವ ಹೋಗಲಾಡಿಸುತ್ತದೆ. ಬಿಸಿಲಿನಲ್ಲಿ ಇದ್ದು ಬಂದಾಗ ಕೆಲವೊಮ್ಮೆ ಉಂಟಾಗುವ ತಲೆನೋವಿನ ನಿಯಂತ್ರಣಕ್ಕೆ ಈ ವ್ಯಾನ ಮುದ್ರೆ ಸಹಕಾರಿಯಾಗುತ್ತದೆ. ಹಾಗೆಯೇ ಸೂರ್ಯ ಮುದ್ರೆಯಲ್ಲಿ ಪೃಥ್ವಿ ತತ್ವವು ಕಡಿಮೆ ಆಗಿ ಅಗ್ನಿ ತತ್ವವು ಹೆಚ್ಚುತ್ತದೆ. ಶರೀರದ ಶಾಖ ಹೆಚ್ಚುತ್ತದೆ. ಅಗ್ನಿ ತತ್ವದಿಂದ ಜೀರ್ಣ ಶಕ್ತಿ ಹೆಚ್ಚಿ ಅಜೀರ್ಣದಿಂದ ಉಂಟಾಗುವ ತಲೆನೋವನ್ನು ಈ ಮುದ್ರೆಯ ಅಭ್ಯಾಸದಿಂದ ನಿವಾರಿಸಬಹುದು. ಇತ್ತೀಚಿನ ಆಧುನಿಕ ಜೀವನ ಶೈಲಿಯ ವಿಧಾನದಲ್ಲಿ ಬಹಳಷ್ಟು ಮಂದಿಗೆ ಮೈಗ್ರೇನ್, ಸೈನಸ್ ತಲೆನೋವಿನ ಸಮಸ್ಯೆ ಕಾಡುತ್ತಿರುವುದು ಕಂಡುಬರುತ್ತದೆ. ಇಲ್ಲಿ ವೈಜ್ಞಾನಿಕವಾಗಿ ದೃಢಪಟ್ಟಂತಹ ಯೋಗ ಮುದ್ರೆಗಳು ನರಮಂಡಲವನ್ನು ಸಚೇತನಗೊಳಿಸಿ, ದೇಹದಲ್ಲಿ ಶಕ್ತಿ ಸಂಚಾರ ಸುಗಮಗೊಳಿಸುತ್ತದೆ.
ವಿಧಾನ: ತೋರು ಬೆರಳು ಮತ್ತು ಮಧ್ಯ ಬೆರಳ ಅಗ್ರಭಾಗವನ್ನು ಹೆಬ್ಬೆರಳಿನ ತುದಿಗೆ ರ್ಸ³ಸಿ. ಉಂಗುರ ಬೆರಳನ್ನು ಹೆಬ್ಬೆರಳ ಬುಡದಲ್ಲಿ ಮೃದುವಾಗಿ ಒತ್ತಿ ಹಿಡಿಯಿರಿ. ಕಿರು ಬೆರಳು ನೇರವಾಗಿರಲಿ. ಸುಮಾರು 6 ನಿಮಿಷದಂತೆ ದಿವಸಕ್ಕೆ ಮೂರು ಬಾರಿ ಅಭ್ಯಾಸ ಮಾಡಿ. (ತಲೆನೋವು ಬರುವ ಸಂದರ್ಭದಲ್ಲಿ ಈ ಮುದ್ರೆ ಮಾಡಿ). ಮಹಾ ಶೀರ್ಷಾ ಮುದ್ರೆಯಲ್ಲಿ ಇಷ್ಟ ದೇವರು ಅಥವಾ ಯಾ ಓಂ ಹೂಂ ಸಃ ಎಂದು 108 ಬಾರಿ ಮಂತ್ರ ಪಠಿಸಿ. ಮುದ್ರೆಯನ್ನು ಎರಡೂ ಕೈಯಲ್ಲಿ ಅಭ್ಯಾಸ ಮಾಡಬೇಕು. ಕೊನೆಯಲ್ಲಿ 10 ನಿಮಿಷ ಪ್ರಾಣ ಮುದ್ರೆ ಅಭ್ಯಾಸ ಮಾಡಿ. ಕಿರುಬೆರಳು ಮತ್ತು ಉಂಗುರ ಬೆರಳಿನ ತುದಿಗಳನ್ನು ಹೆಬ್ಬೆರಳಿನ ತುದಿಗೆ ಜೋಡಿಸಿ. ಉಳಿದ ಬೆರಳುಗಳು ನೇರವಾಗಿರಲಿ.
ಪ್ರಯೋಜನ: ಈ ಮುದ್ರೆಯಲ್ಲಿ ಸ್ವಲ್ಪ ಹೊತ್ತು ಕಣ್ಣು ಮುಚ್ಚಿ ಕುಳಿತರೆ ಮನಸ್ಸಿನಲ್ಲಿ ನಡೆಯುವ ಎಲ್ಲ ಆಲೋಚನೆಗಳು ಕಡಿಮೆಯಾಗುವುದರ ಜೊತೆಗೆ ಕಣ್ಣಿನ ಆಯಾಸವೂ ಕಡಿಮೆಯಾಗುತ್ತದೆ. ಸೈನಸ್ ನೋವನ್ನು ಗುಣಪಡಿಸಲು ಮಹಾಶೀರ್ಷ ಮುದ್ರೆಯನ್ನು ಅಭ್ಯಾಸ ಮಾಡಬಹುದು. ಸೈನಸ್ ಸಹ ತಲೆನೋವು ಉಂಟುಮಾಡಬಹುದು. ಈ ಮುದ್ರೆಯನ್ನು ಅಭ್ಯಾಸ ಮಾಡುವುದರಿಂದ ಸೈನಸ್ನಿಂದ ಉಂಟಾಗುವ ತಲೆನೋವಿನಿಂದಲೂ ಪರಿಹಾರ ದೊರೆಯುತ್ತದೆ. ಬೇರೆ ಬೇರೆ ಕಾರಣಗಳಿಂದ ಬರುವ ಅತಿಯಾದ ತಲೆನೋವನ್ನು ಈ ಮುದ್ರೆಯ ನಿಯಮಿತ ಅಭ್ಯಾಸದಿಂದ ನಿಯಂತ್ರಿಸಬಹುದು.
ಆದ್ದರಿಂದ ಅಜೀರ್ಣ, ತಲೆಭಾರ, ಶಿರಸ್ಸಲ್ಲಿ ಉಂಟಾಗುವ ಒತ್ತಡದಿಂದ ಬರುವ ತಲೆನೋವನ್ನು ಈ ವ್ಯಾನ ಸೂರ್ಯಮುದ್ರೆ (ಮಹಾಶೀರ್ಷ ಮುದ್ರೆ) ಯಿಂದ ಸರಿಪಡಿಸಬಹುದು. ತಲೆನೋವಿನ ನಿಯಂತ್ರಣಕ್ಕೆ ಈ ಮುದ್ರೆ ರಾಮಬಾಣವಾಗಿದೆ.