Woolly mammoth ಯಾನೆ ಉಣ್ಣೆಯ ಬೃಹದ್ಗಜದ ಕುರಿತು ನಾವು ಕೇಳಿದ್ದೇವೆ. ಹೆಸರೇ ಹೇಳುವಂತೆ ಈಗಿನ ಏಷಿಯನ್ ಆನೆಗಳ ಗಾತ್ರ ಅಂದರೆ ಅಜಮಾಸು ಹದಿಮೂರು ಅಡಿ ಎತ್ತರವಿದ್ದು ದೊಡ್ಡ ದಂತಗಳ ಜತೆಗೆ ಮೈ ಮೇಲೆ ಮೆತ್ತನೆಯ ಶಾಲನ್ನು ಹಾಸಿದಂತೆ ಬಿರುಗೂದಲನ್ನು ಹೊಂದಿದ್ದ ಈ ಬೃಹತ್ ಗಾತ್ರದ ಆನೆಗಳು ಅಂದಾಜು ಮೂರುಲಕ್ಷ ವರ್ಷಗಳ ಹಿಂದಿನಿಂದ ಹತ್ತು ಸಾವಿರ ವರ್ಷಗಳ ನಡುವಿನ ಸಮಯದಲ್ಲಿ ಭೂಮಿಯ ಮೇಲೆ ಬದುಕಿದ್ದವು. ಬೇಟೆಯ ಜತೆಗೆ ತಾಪಮಾನದ ಏರಿಕೆಯ ಪರಿಣಾಮದಿಂದ ಕಣ್ಮರೆಯಾಗಿ ಕಾಮಿಕ್ಸುಗಳಲ್ಲಿ, ಕಾರ್ಟೂನುಗಳಲ್ಲಷ್ಟೆ ನಾವುಗಳು ನೋಡಿ ಖುಷಿಪಡುತ್ತಿದ್ದ ಈ ಬೃಹದ್ಗಜಗಳನ್ನು ಪುನಃ ಭೂಲೋಕಕ್ಕೆ ಕರೆತರುವ ಪ್ರಯತ್ನವೊಂದು ಇದೀಗ ಸದ್ದಿಲ್ಲದೆ ನಡೆದಿದೆ; ಅದೂ ಕ್ರಿಸ್ಪರ್ ತಂತ್ರಜ್ಞಾನ ಬಳಸಿ.
ಅಮೇರಿಕದ ಡಲ್ಲಾಸ್ ಮೂಲದ ಕೋಲೊಸಲ್ ಅನ್ನುವ ಸಂಸ್ಥೆಯೊಂದು 2027ರಲ್ಲಿ ಉಣ್ಣೆಯ ಬೃಹದ್ಗಜವನ್ನು ಮರಳಿ ಪರಿಚಯಿಸುವ ಯೋಜನೆಗೆ ಆರವತ್ತು ಮಿಲಿಯನ್ ಡಾಲರ್ಗಳ ಆರ್ಥಿಕ ನೆರವನ್ನು ಕೆಲವು ದಿನಗಳ ಹಿಂದೆ ಘೊಷಿಸಿದೆ. ಈ ಯೋಜನೆಯ ಹಿಂದಿರುವ ವಿಜ್ಞಾನಿ ಜಾರ್ಜ್ ಚರ್ಚ್ ಹಾಕಿಕೊಂಡಿರುವ ಯೋಜನೆಯಂತೆ ಈಗಾಗಲೇ ದೊರಕಿರುವ ಬೃಹದ್ಗಜಗಳ ಪಳೆಯುಳಿಕೆಗಳಿಂದ ಅವುಗಳ ಡಿಎನ್ಎಗಳನ್ನು ಸಂಗ್ರಹಿಸಿ ಅವುಗಳ ವಂಶವಾಹಿಗಳನ್ನು ಕ್ರಿಸ್ಪರ್ ತಂತ್ರಜ್ಞಾನದ ಮೂಲಕ ಸಂಪಾದಿಸಿ ಉಣ್ಣೆಯ ಬೃಹದ್ಗಜದ ಭ್ರೂಣವೊಂದನ್ನು ತಯಾರಿಸಲಾಗುತ್ತದೆ. ಹೀಗೆ ತಯಾರಾದ ಭ್ರೂಣವನ್ನು ಬೃಹದ್ಗಜಗಳ ತೀರ ಹತ್ತಿರದ ಸಂಬಂಧಿಯಾಗಿರುವ ಏಷಿಯಾಟಿಕ್ ಆನೆಗಳ ಗರ್ಭದಲ್ಲಿ ಬೆಳೆಸಿ ಆ ಆನೆ ಜನ್ಮ ನೀಡುವ ಮರಿಯಾನೆಯು ಬೃಹದ್ಗಜಕ್ಕೆ ತೀರ ಹತ್ತಿರದ ಗುಣ ಮತ್ತು ಚಹರೆಯನ್ನುಳ್ಳ ಮರಿಗಜವಾಗಲಿದೆಯೆಂಬುದು ಅವರ ಸದ್ಯದ ಪ್ಲಾ್ಯನು. ಎಲ್ಲ ಓಕೆ ಬೃಹದ್ಗಜವೇ ಯಾಕೆ ಎಂಬ ಪ್ರಶ್ನೆ ಇಲ್ಲಿ ಹುಟ್ಟುವುದು ಸರಿಯೇ. ಇದಕ್ಕೂ ಒಂದು ಬಲವಾದ ಕಾರಣವುಂಟು.
ಅತಿ ಶೀತಲ ವಾತಾವರಣದಲ್ಲಿ ಮಣ್ಣು ಮತ್ತು ನೀರು ಮಿಳಿತವಾಗಿ ಹಿಮಮಣ್ಣಿನಲ್ಲಿ ಸ್ಥಿತಿಯಲ್ಲಿ ಅಸ್ತಿತ್ವದಲ್ಲಿರುವುದನ್ನು ಪರ್ವಫೋ›ಸ್ಟ್ (ಕಛ್ಟಿಞಚ್ಛ್ಟಠಠಿ) ಎಂದು ಹೇಳಲಾಗುತ್ತದೆ. ತಾಂತ್ರಿಕವಾಗಿ ಮರಳು, ಮಣ್ಣು ಮತ್ತು ನೀರಿನ ಈ ಮಿಶ್ರಣವು ಹಿಮದ ಸ್ಥಿತಿಯಲ್ಲಿ ನಿರಂತರವಾಗಿ ಎರಡು ವರ್ಷ ಅಥವಾ ಅದಕ್ಕಿಂತ ಹೆಚ್ಚು ಸಮಯ ಇದ್ದಲ್ಲಿ ಅದನ್ನು ಪರ್ವಫೋ›ಸ್ಟ್ ಎಂದು ಪರಿಗಣಿಸಲಾಗುತ್ತದೆ. ಪರ್ವಫೋ›ಸ್ಟ್ ಶೂನ್ಯದ ಆಸುಪಾಸಿನ ತಾಪಮಾನವಿರುವ ಸಾಗರದ ತಟದಲ್ಲಿ ಕಾಣಸಿಗುವುದು ಹೆಚ್ಚು. ಇಂತಹ ಅನುಕೂಲಕರ ಹವಾಮಾನವಿರುವ ಎಲ್ಲೆಡೆಯೂ ಇವುಗಳು ಕಂಡುಬರುವ ಸಾಧ್ಯತೆಯಿದ್ದರೂ ಜಾಗತಿಕವಾಗಿ ಇವು ಅತಿಹೆಚ್ಚಿನ ಪ್ರಮಾಣದಲ್ಲಿ ಉತ್ತರಧ್ರುವದ ಮಂಜಿನ ಅಡಿಯಲ್ಲಿ ಅಡಗಿ ಕುಳಿತಿವೆ. ಒಂದು ಅಂದಾಜಿನಂತೇ ಉತ್ತರ ಧ್ರುವದಲ್ಲಿ ಇಪ್ಪತ್ತೆರಡು ಮಿಲಿಯನ್ ಚದರ ಕಿಲೋಮೀಟರ್ ಜಾಗೆಯನ್ನು ಈ ಪರ್ವಫೋ›ಸ್ಟ್ ಆವರಿಸಿಕೊಂಡಿದೆ. ಹಲವು ಸಾವಿರ ವರ್ಷಗಳಿಂದ ತನ್ನ ಅಸ್ತಿತ್ವವನ್ನು ಉಳಿಸಿಕೊಂಡಿರುವ ಇವುಗಳ ದೊಡ್ಡ ಇನ್ನಿಂಗ್ಸ್ನ ಉತ್ತಮ ಉದಾಹರಣೆಯಂತಿರುವ ಉತ್ತರಧ್ರುವದ ಸೈಬೀರಿಯಾದ ಪರ್ವಫೋ›ಸ್ಟ್ ಆರೂವರೆ ಲಕ್ಷವರ್ಷಗಳಿಂದ ಅದೇ ಸ್ಥಿತಿಯಲ್ಲಿದೆ. ಉತ್ತರ ಧ್ರುವಕ್ಕೆ ಹೋಲಿಸಿದರೆ ಕಡಿಮೆ ಭೂಪ್ರದೇಶವನ್ನು ಹೊಂದಿರುವ ಕಾರಣಕ್ಕೆ ದಕ್ಷಿಣ ಧ್ರುವದಲ್ಲಿ ಹಿಮಮಣ್ಣಿನ ಪ್ರಮಾಣ ಕಡಿಮೆ. ಇಷ್ಟೆಲ್ಲ ವಿಶಿಷ್ಟಗಳ ಪರ್ವಫೋ›ಸ್ಟ್ ವಿಜ್ಜಾನಿಗಳ ಪಾಲಿಗೆ ಜೈವಿಕ ಬಾಂಬ್. ಅವರ ಈ ಅಭಿಪ್ರಾಯಕ್ಕೆ ಬಲವಾದ ಕಾರಣವೂ ಇದೆ. ಜಾಗತಿಕ ತಾಪಮಾನದ ಹೆಚ್ಚಳದ ಬಿಸಿಯು ಪರ್ವಫೋ›ಸ್ಟ್ಗೂ ತಟ್ಟಿದೆ. ವಿಜ್ಞಾನಿಗಳು ಗಮನಿಸಿದಂತೆ ಇಪ್ಪತ್ತನೆಯ ಶತಮಾನವೊಂದರಲ್ಲಿಯೇ ಇದರ ತಾಪಮಾನವು ಆರು ಡಿಗ್ರಿ ಸೆಂಟಿಗ್ರೇಡ್ನಷ್ಟು ಹೆಚ್ಚಿದೆ. ಶೂನ್ಯಕ್ಕಿಂತಲೂ ಕಡಿಮೆ ಅಂದರೆ ಋಣತಾಪದಲ್ಲಿರುವ ಈ ಹಿಮಮಣ್ಣಿನ ತಾಪಮಾನವು ಶೂನ್ಯದ ಹತ್ತಿರಕ್ಕೆ ಒಂದೊಂದು ಹೆಜ್ಜೆಯಿಡುತ್ತಿದ್ದಂತೆಯೇ ಇಲ್ಲಿ ಪರಿಸರ ತಜ್ಞರ ಮಂಡೆಬಿಸಿಯಾಗುತ್ತಿದೆ.
ಉತ್ತರಧ್ರುವದಲ್ಲಿ ಕಾಣಸಿಗುವ ಹಸಿರಿನಲ್ಲಿ ಪರ್ವಫೋ›ಸ್ಟ್ನ ಪಾತ್ರ ದೊಡ್ಡದಿದೆ. ಈ ಮಣ್ಣಿನಲ್ಲಿರುವ ಫಲವತ್ತತೆಯ ಪರಿಣಾಮ ಇಲ್ಲಿ ಕುರುಚಲು ಗಿಡಗಳು ಪೊದೆಗಳ ಜತೆಗೆ ಅಲ್ಲಲ್ಲಿ ಮರಗಿಡಗಳೂ ಬೆಳೆಯುತ್ತವೆ. ಬೇಸಿಗೆಯಲ್ಲಿ ಕರಗುವ ಮಂಜಿನ ಮೇಲ್ಪದರ ಮಣ್ಣಿನ ಸವಕಳಿಯಾಗದಂತೆ ಅದನ್ನು ಹಿಡಿದಿಟ್ಟುಕೊಳ್ಳುವ ಹಿಮ. ಈ ಹಿಮದ ಪದರದ ಮೇಲೆ ತೇಲುವ ನೀರು ಅಲ್ಲಲ್ಲಿ ಸರೋವರಗಳನ್ನು ನಿರ್ವಿುಸುತ್ತದೆ. ಈ ಸರೋವರಗಳನ್ನು ಹುಡುಕುತ್ತ ಪ್ರತಿವರ್ಷ ಪಕ್ಷಿಗಳ ದಂಡೇ ಬರುತ್ತದೆ. ಈ ಸರೋವರಗಳ ನೀರು ಅಲ್ಲಿನ ಸ್ಥಳೀಯ ಜೀವಸಂಕುಲದ ದಾಹ ತೀರಿಸುತ್ತದೆ. ಹೀಗಾಗಿ ಮಂಜಿನ ಮರುಭೂಮಿಯಲ್ಲೂ ಜೀವವೈವಿಧ್ಯವನ್ನು ಪರ್ವಫೋ›ಸ್ಟ್ ಕಾಪಿಡುತ್ತಿದೆ. ಇದೆಲ್ಲವುದರ ಜತೆಗೆ ಮತ್ತೊಂದು ದೊಡ್ಡ ಜವಾಬ್ದಾರಿಯನ್ನು ಪರ್ವಫೋ›ಸ್ಟ್ ಹೊತ್ತಿಕೊಂಡಿದ್ದು ಆ ವಿಷಯವೇ ಇದೀಗ ಆತಂಕಕ್ಕೆ ಕಾರಣವಾಗಿದೆ. ಹಲವು ಸಾವಿರ ವರ್ಷಗಳಿಂದ ಉತ್ತರ ಧ್ರುವದಲ್ಲಿನ ಮರಗಿಡಗಳ ಪಳೆಯುಳಿಕೆಯ ಜೈವಿಕ ತ್ಯಾಜ್ಯ ಈ ಪರ್ವಫೋ›ಸ್ಟ್ನ ಹಿಮಮಣ್ಣಿನ ನಡುವೆ ಹೂತು ಹೋಗಿವೆ. ಯಾವುದೇ ಜೈವಿಕ ತಾಜ್ಯ ಕೊಳೆಯುತ್ತಿದ್ದಂತೆಯೇ ಅದರಿಂದ ಮಿಥೇನ್ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗುತ್ತದೆ. ಆದರೆ, ಅತಿಶೀತಲ ತಾಪಮಾನದ ಪರ್ವಫೋ›ಸ್ಟ್ನ ಪದರಗಳಲ್ಲಿ ಹೂತು ಹೋಗಿರುವ ಕಾರಣಕ್ಕೆ ಈ ಜೈವಿಕ ತಾಜ್ಯದ ಖಜಾನೆ ತಾಜಾ ಸ್ಥಿತಿಯಲ್ಲೇ ಇದ್ದು ಜಾಗತಿಕ ತಾಪಮಾನದ ಹೆಚ್ಚಳವನ್ನುಂಟು ಮಾಡುವ ಅನಿಲಗಳ ಬಿಡುಗಡೆಯನ್ನು ತಡೆ ಹಿಡಿದಿವೆ. ಆದರೆ, ಇದೀಗ ಜಾಗತಿಕ ತಾಪಮಾನ ಹೆಚ್ಚಳದ ಪರಿಣಾಮದಿಂದ ಪರ್ವಫೋ›ಸ್ಟ್ ನಿಧಾನವಾಗಿ ಕರಗುವ ಲಕ್ಷಣಗಳು ಕಾಣುತ್ತಿದ್ದಂತೆಯೇ ಅದರ ಒಡಲಲ್ಲಿ ಬಚ್ಚಿಟ್ಟುಕೊಂಡಿರುವ ಜೈವಿಕ ತಾಜ್ಯ ಹೊರಬಂದು ಕೊಳೆತು ಮಿಥೇನ್ ಮತ್ತು ಇಂಗಾಲದ ಡೈ ಆಕ್ಸೈಡ್ ಬಿಡುಗಡೆಯಾಗಲು ಪ್ರಾರಂಭವಾಗುತ್ತದೆ. ಹಾಗಾದಲ್ಲಿ ಇಡೀ ಭೂಮಿಯಲ್ಲಿರುವ ಕಾಡನ್ನು ಎರಡು ಬಾರಿ ಸುಟ್ಟರೆ ಹೊರಹೊಮ್ಮುವಷ್ಟು ಹಸಿರುಮನೆ ಅನಿಲಗಳು ಬಿಡುಗಡೆಯಾಗಲಿವೆ ಎಂಬುದೊಂದು ಲೆಕ್ಕಾಚಾರ ಹೇಳುತ್ತದೆ. ವಿಜ್ಞಾನಿಗಳು ಅಂದಾಜಿಸಿದಂತೆ ಜಾಗತಿಕ ತಾಪಮಾನದ ಹೆಚ್ಚಳ ಇದೇ ರೀತಿ ಹೆಚ್ಚುತ್ತಿದ್ದರೆ 2100ರಷ್ಟರಲ್ಲಿ ಪರ್ವಫೋ›ಸ್ಟ್ನ ಕರಗುವ ಪ್ರಕ್ರಿಯೆ ದೊಡ್ಡ ಪ್ರಮಾಣದಲ್ಲಿ ಆರಂಭವಾಗಲಿದೆ. ಇದರ ಜತೆಗೆ ಅದರ ಹೊಟ್ಟೆಯಲ್ಲಿ ಬಂಧಿಯಾಗಿರುವ ಅನೇಕ ವೈರಸ್ಗಳು ಹೊರಬಂದು ದೊಡ್ಡ ಭಾನಗಡಿಯೇ ಆಗುವ ಅಪಾಯ ಕೂಡ ಇದೆ. ಹೀಗಾಗಿ ಪರ್ವಫೋ›ಸ್ಟ್ ಅನ್ನು ಕಾಪಿಡಲು ಹಸಿರುಮನೆ ಅನಿಲಗಳನ್ನು ನಿಯಂತ್ರಣದಲ್ಲಿಡುವುದೂ ಸೇರಿದಂತೆ ಅನೇಕ ಪ್ರಯತ್ನಗಳು ನಡೆಯುತ್ತಿವೆ. ಇಂತಹುದೇ ಪ್ರಯತ್ನಗಳಲ್ಲಿ ಉಣ್ಣೆಯ ಬೃಹದ್ಗಜವನ್ನು ಮರಳಿ ತರುವುದೂ ಒಂದು.
ಬೃಹದ್ಗಜಗಳು ಬದುಕಿದ್ದಾಗ ಚಳಿಗಾಲದಲ್ಲಿ ಬೀಳುವ ದಟ್ಟಹಿಮಗಳನ್ನು ಸರಿಸಿ ನಡುವೆ ದಾರಿಮಾಡಿಕೊಂಡು ಓಡಾಡುವ ಪರಿಣಾಮದಿಂದ ಶೀತಲ ಮಾರುತಗಳು ಪರ್ವಫೋ›ಸ್ಟ್ ತಲುಪಿ ಅದು ತಂಪಾಗಿರುತ್ತಿತ್ತು. ತದನಂತರ ಅದರ ಗೈರುಹಾಜರಿಯಲ್ಲಿ ಈ ದಟ್ಟಹಿಮದ ಪದರಗಳು ಪರ್ವಫೋ›ಸ್ಟ್ ಮೇಲೆ ಆವರಿಸುವ ಪರಿಣಾಮದಿಂದ ಅದು ಉಷ್ಣನಿರೋಧಕದಂತೇ ಕೆಲಸಮಾಡಿ ಪರ್ವಫೋ›ಸ್ಟ್ನ ತಾಪಮಾನ ಹೆಚ್ಚಾಗುವುದಕ್ಕೆ ಇದೂ ಒಂದು ಕಾರಣವೆಂದು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಹೀಗಾಗಿ, ಈ ಬೃಹದ್ಗಜಗಳನ್ನು ಮತ್ತೆ ಈ ಪ್ರದೇಶದಲ್ಲಿ ಪರಿಚಯಿಸಿ ಓಡಾಡಿಸಿ ಆ ಮೂಲಕ ಪರ್ವಫೋ›ಸ್ಟ್ ಉಳಿಸುವ ದೂರಾಲೋಚನೆ ಅದರ ಹಿಂದಿನ ಚಿಂತಕರ ಚಾವಡಿಯದ್ದು. ಹಲವು ಪರವಿರೋಧಗಳ ಚರ್ಚೆಯನ್ನು ಹುಟ್ಟುಹಾಕುತ್ತ ಸಾಗುತ್ತಿರುವ ಈ ಬ್ರಹದ್ಗಜಪ್ರಸವ ಫಲನೀಡಲಿದೆಯೇ ಎಂದು ಕಾಲವೇ ಹೇಳಲಿದೆ.
(ಲೇಖಕರು ವಿಜ್ಞಾನ, ತಂತ್ರಜ್ಞಾನ ಬರಹಗಾರರು)