ಚೆನ್ನೈ: ಬ್ಯಾಂಕ್ ಬ್ಯಾಲೆನ್ಸ್ನಲ್ಲಿ ಕೋಟಿ ರೂಪಾಯಿಯನ್ನು ನೋಡಬೇಕು ಎಂದರೆ ಸಂಪಾದನೆ ಅಂಥ ದೊಡ್ಡ ಮಟ್ಟದಲ್ಲೇ ಇರಬೇಕು. ಆದರೆ ಇಲ್ಲಿ ಕೆಲವರು ದುಡಿಯದೇ ಕೋಟ್ಯಧಿಪತಿಗಳಾಗಿದ್ದಾರೆ. ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿ ಕೋಟಿಗಟ್ಟಲೆ ಹಣ ಇರುವುದು ಕಂಡುಬಂದಿದೆ.
ತಮಿಳುನಾಡಿನ ಮೂವರು ಹೀಗೊಮ್ಮೆ ಕೋಟ್ಯಧಿಪತಿ ಎನಿಸಿಕೊಂಡಿದ್ದಾರೆ. ಇಲ್ಲಿನ ಫಾರ್ಮಸಿಯೊಂದರಲ್ಲಿ ಕೆಲಸ ಮಾಡುವ ಮೊಹಮ್ಮದ್ ಇದ್ರಿಸ್ ಎಂಬಾತ ತನ್ನ ಗೆಳೆಯನಿಗೆ 2 ಸಾವಿರ ರೂ. ಟ್ರಾನ್ಸ್ಫರ್ ಮಾಡುತ್ತಿದ್ದಂತೆ ಕೋಟ್ಯಧಿಪತಿ ಆಗಿದ್ದಾನೆ. ಅರ್ಥಾತ್, ಅ.6ರಂದು 2 ಸಾವಿರ ರೂ. ಕಳುಹಿಸಿ ಬ್ಯಾಲೆನ್ಸ್ ಚೆಕ್ ಮಾಡಿದಾಗ ಖಾತೆಯಲ್ಲಿ 753 ಕೋಟಿ ರೂ. ಇರುವುದು ಕಂಡುಬಂದಿದೆ.
ಕೋಟಕ್ ಮಹಿಂದ್ರ ಬ್ಯಾಂಕ್ನಲ್ಲಿನ ಇವರ ಖಾತೆಯಲ್ಲಿ ಈ ಹಣ ಕಂಡುಬಂದಿದ್ದು, ಅಚ್ಚರಿಗೊಂಡ ಇವರು ಈ ವಿಷಯವನ್ನು ಬ್ಯಾಂಕ್ ಗಮನಕ್ಕೆ ತಂದಿದ್ದರು. ಬಳಿಕ ಬ್ಯಾಂಕ್ನವರು ಇವರ ಖಾತೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದಾರೆ.
ಅಂದಹಾಗೆ ತಮಿಳುನಾಡಿನಲ್ಲಿ ಇದು ಮೊದಲ ಪ್ರಕರಣವೇನಲ್ಲ. ಈಗಾಗಲೇ ಇನ್ನಿಬ್ಬರಿಗೂ ಇದೇ ರೀತಿ ಕೋಟಿಗಟ್ಟಲೆ ಹಣ ಖಾತೆಯಲ್ಲಿ ಜಮೆ ಆಗಿರುವುದು ಕಂಡುಬಂದಿದೆ. ಬ್ಯಾಲೆನ್ಸ್ ಚೆಕ್ ಮಾಡಿಕೊಂಡಿದ್ದ ಅವರಿಗೂ ಅಚ್ಚರಿ ಉಂಟಾಗಿತ್ತು.
ತಮಿಳುನಾಡು ಮರ್ಕಂಟೈಲ್ ಬ್ಯಾಂಕ್ನಲ್ಲಿ ಕಾತೆ ಹೊಂದಿರುವ ಚೆನ್ನೈನ ರಾಜಕುಮಾರ್ ಎಂಬವರ ಖಾತೆಯಲ್ಲಿ 9 ಸಾವಿರ ಕೋಟಿ ರೂ. ಇರುವುದು ಕಂಡುಬಂದಿತ್ತು. ಆದರೆ ಕೂಡಲೇ ಎಚ್ಚೆತ್ತ ಬ್ಯಾಂಕ್ ತಕ್ಷಣ ಆ ಮೊತ್ತವನ್ನು ವಾಪಸ್ ಪಡೆದುಕೊಂಡಿತ್ತು. ಇನ್ನೊಂದು ಪ್ರಕರಣದಲ್ಲಿ ತಂಜಾವೂರಿನ ಗಣೇಶನ್ ಎಂಬವರ ಖಾತೆಯಲ್ಲಿ 756 ಕೋಟಿ ರೂ. ಇರುವುದು ಕಂಡುಬಂದಿತ್ತು.