

ಗ್ರೇಟ್ಬ್ರಿಟನ್ ಇತಿಹಾಸದಲ್ಲೇ ಅತಿ ಹೆಚ್ಚು ದಾಳಿ ಕಂಡೂ ಚೆಕ್ಕು ಚೆದುರದೆ ಉಳಿದ ಕೋಟೆ ಎತ್ತರದ ಶಿಲಾಪರ್ವತದ ಮೇಲೆ ಕಟ್ಟಲಾಗಿರುವ ಎಡಿನ್ಬ್ರಾ ಕ್ಯಾಸಲ್. ಹನ್ನೆರಡನೆಯ ಶತಮಾನದಲ್ಲಿ ನಿರ್ಮಾಣ ಕಂಡ ಈ ಕೋಟೆ ಸ್ಕಾಟ್ಲ್ಯಾಂಡ್ ಇತಿಹಾಸದಲ್ಲೆ ರಕ್ತಸಿಕ್ತ ಚರಿತ್ರೆ ಬರೆದುಕೊಂಡಿದೆ. ಇದರ ಮೇಲೆ ಏರಿ ನಿಂತರೆ ಸಂಪೂರ್ಣ ಸ್ಕಾಟ್ ರಾಜಧಾನಿ ನೇರ ದೃಶ್ಯ ಒದಗಿಸುವ ಇದರ ಸ್ಥಳಾಯ್ಕೆಯೇ ಅದ್ಭುತ.
ಸತತ ಇಪ್ಪತ್ತಾರು ದಾಳಿಗಳನ್ನು ತಡೆದು ನಿಂತ ಇಂಥ ಇನ್ನೊಂದು ಬಲವಾದ ಕೋಟೆ ಇಂಗ್ಲೆಂಡ್ ಇತಿಹಾಸದಲ್ಲಿ ಸಿಗಲಾರದು. ಇದರ ನಿರ್ಮಾಣ ಕೂಡ ಅದ್ಭುತವಾಗಿದೆ. ಕಾರಣ ಇದರ ಉಪ್ಪರಿಗೆ ಏರಿ ನಿಂತರೆ ಸುತ್ತಮುತ್ತ ಮಾತ್ರವಲ್ಲ ಸಂಪೂರ್ಣ ಎಂಟೂ ದಿಕ್ಕೂ ನಿಚ್ಚಳ ನೋಟಕ್ಕೆ ದಕ್ಕುತ್ತದೆ. ನೆಲ, ಜಲ, ವಾಯು ಯಾವ ಮಾರ್ಗದಿಂದ ಯಾರೇ ಬಂದರೂ ಮೊದಲು ಮೇಲುಪ್ಪರಿಗೆಯ ಕಾವಲು ಗೋಪುರಕ್ಕೆ ದಕ್ಕುವಷ್ಟು ಉನ್ನತ ತಾಂತ್ರಿಕತೆ ಮೆರೆದ ಪರಿಣಾಮ, ಒಂದೇ ದಾಳಿ ಕೂಡ ಒಳಗಿದ್ದ ಆಗಿನ ರಾಜ ಪರಿವಾರವನ್ನು ಯಾಮಾರಿಸಲಾಗಲಿಲ್ಲ. ಹಾಗಾಗಿ ಎಡಿನ್ಬ್ರಾ ಕ್ಯಾಸಲ್ ಎಂದರೆ ಈಗಲೂ ಬ್ರಿಟಿಷರ ಹೆಮ್ಮೆ.
ಮೊದಲನೆಯ ಶತಮಾನದಿಂದಲೂ ಪಶ್ಚಿಮದ ಅಂತಾರಾಷ್ಟ್ರೀಯ ರಾಜಕೀಯದಲ್ಲಿ ಪ್ರಮುಖ ಕೇಂದ್ರವಾಗಿ ಪರಿಗಣಿಸಲ್ಪಟ್ಟ ಪರಿಣಾಮ ಕೆಳಮುಖವಾಗಿ ಚಲಿಸಲ್ಪಡುತ್ತಿದ್ದ ಇತರ ಯುರೋಪ ಮನೆತನಗಳಿಂದ ಮೊದಲ ಆಕ್ರಮಣಕ್ಕೆ ಈಡಾಗುತ್ತಿತ್ತು ಇಂಗ್ಲೆಂಡು. ಹಾಗಾಗಿ ಅತ್ಯುಗ್ರವಾದ ಹನ್ನೆರಡು ಆಕ್ರಮಣಗಳನ್ನು ತಡೆದೂ ಎಡಿನ್ಬ್ರಾ ಕ್ಯಾಸಲ್ ತನ್ನ ಜನ ರಕ್ಷಣೆ ಮಾಡಿದ ಖ್ಯಾತಿ ಹೊಂದಿದ್ದೂ ಅಲ್ಲದೆ ಪ್ರತಿ ಎರಡು ಜನ ಇಂಗ್ಲೆಂಡಿನ ಪ್ರವಾಸಿಗರಲ್ಲಿ ಒಬ್ಬಾತ ಈ ಕ್ಯಾಸಲ್ ಪ್ರವೇಶ ಮಾಡದೆ ಇರಲಾರ.
ಊರ ಮಧ್ಯದ ಕೋಟೆಯನ್ನು ತಲುಪಲು, ಯಾವ ಕಡೆಯಿಂದ ಬಂದರೂ ಏರು ದಾರಿಯ ಚೌಕಿಗಳ ಸುತ್ತ, ಬಿಯರ್ ಬಾರುಗಳ ದರಬಾರಿನ ಜೊತೆಗೆ ಪುರಾತನ ಸ್ಕಾಟ್ ನಗರಿ ನೆನಪಿಗೆ ಬರುವಂತೆ ಈಗಲೂ ಅದರ ಅಸ್ಮಿತೆಯನ್ನು ಕಾಯ್ದುಕೊಳ್ಳಲಾಗಿದೆ. ಒಳಗೂ ಏರುಮುಖದ ದಾರಿಯ ಎಲ್ಲ ಕಡೆಯಲ್ಲೂ ಸುರಕ್ಷತೆ. ಪುರಾತನ ಫಿರಂಗಿಗಳು ಮತ್ತದರ ಜಾಗದಲ್ಲಿ ಈಗಲೂ ಕೂತಿದ್ದು, ಸುತ್ತಲಿನ ಅಷ್ಟೂ ಸಮುದ್ರದ ದಂಡೆಗಳು ನಿಚ್ಚಳವಾಗಿ ಗೋಚರಿಸುತ್ತವೆ. ವರ್ಷಕ್ಕೆ ಏನಿಲ್ಲ ಎಂದರೂ ನಾಲ್ಕು ಲಕ್ಷ ಪ್ರವಾಸಿಗರು ಈ ಕ್ಯಾಸೆಲ್ಗೆ ಭೇಟಿ ಮಾಡುತ್ತಾರೆ. ವಿಶೇಷ ವಾಹನ ಇತ್ಯಾದಿ ಬೇರೇನೂ ಬೇಕಿಲ್ಲದ ಕಾಲುದಾರಿಯಲ್ಲಿ ಏರು ನಡಿಗೆ ಬೇಡುವ ಕಲ್ಲಿನ ದಾರಿ.
ಉಳಿದೆಲ್ಲಕ್ಕಿಂತ ಎತ್ತರದೆತ್ತರ ಗೋಡೆಗಳ ಜೊತೆಗೆ ವಿಪರೀತ ಎತ್ತರದ ಕಲ್ಲಿನ ಪರ್ವತದ ಮೇಲೆ ಅದಕ್ಕಿಂತ ದೊಡ್ಡ ದೊಡ್ಡ ಬಂಡೆಗಳನ್ನು ಏರಿಸಿ ಈ ನಿರ್ಮಾಣ ಮಾಡಿದ್ದಾರಲ್ಲ ಅದಿನ್ಯಾವ ಟೆಕ್ನಾಲಜಿ ಬಳಸಿದ್ದಾರೊ ಎನ್ನಿಸದಿರುವುದಿಲ್ಲ. ಮೂಲ ಎತ್ತರದ ಬುರುಜಿನ ಮೇಲಿನಿಂದ ಅಷ್ಟದಿಕ್ಕುಗಳ ಮೇಲೆ ನಿಗಾ ಇರಿಸಬಹುದು. ಅಂಥ ಎತ್ತರ, ದಿಕ್ಕುದೆಸೆ ಗುರುತಿಸಿ ಹಾಗೆ ನಿರ್ವಿುಸಿದ್ದರಿಂದಲೇ ಲಂಡನ್ ಇತಿಹಾಸದಲ್ಲಿ ಅದರ ಕಿಮ್ಮತ್ತೇ ಬೇರೆ ಆಗಿದೆ. ಎಡನ್ಬ್ರಾದಲ್ಲಿ ಬೇರೇನು ನೋಡುತ್ತಿರೋ ಇಲ್ಲವೋ ಆದರೆ ಇದನ್ನು ಮಾತ್ರ ಮಿಸ್ ಮಾಡುವಂತೆಯೇ ಇಲ್ಲ.
ಜೊತೆಗೆ ಎಲ್ಲ ಐದೈದು ನಿಮಿಷದ ಕಾಲುದಾರಿಯ ನೋಡಬೇಕಾದ ಹಲವು ಗ್ಯಾಲರಿಗಳು, ಪುರಾತನ ಕಾಯ್ದಿರಿಸಿದ ಸ್ಮಾರಕ ಕಟ್ಟಡಗಳು ಎಲ್ಲೆಡೆ ಹರಡಿಕೊಂಡಿವೆ. ಇದಕ್ಕೆಲ್ಲ ಒಂದಾದ ಮೇಲೊಂದರಂತೆ ನಡೆಯುತ್ತಲೇ ಸಾಗುವ ಅನಿವಾರ್ಯತೆ. ಒಳಗಡೆಗೆ ಮತ್ತೊಂದು ಪ್ರವೇಶಿಕೆಯ ಅಗತ್ಯ ಇದ್ದು ಗ್ರೇಟ್ ಹಾಲ್, ಇದು ಸಾಮಾನ್ಯವಾಗಿ ರಾಜ ದರಬಾರಿನ ಶೈಲಿಗೆ ನಿರ್ವಿುತ. ಏಕಕಾಲಕ್ಕೆ ಐನೂರು ಜನ ಸಭೆ ಸೇರಬಲ್ಲ ಅಚ್ಚುಕಟ್ಟಾದ ರಾಜಸಭಾಭವನ, ಅದರೊಳಗಡೆ ಇರುವ ರಾಯಲ್ ಪ್ಯಾಲೆಸ್, ಈ ಅರಮನೆಯಲ್ಲಿ ಈಗೀಗ ಸರ್ಕಾರದ ಹಿರಿಯ ಅಧಿಕಾರಿಗೆ ವಾಸಕ್ಕೆ ಅನುಕೂಲ ಮಾಡಿಕೊಡಲಾಗಿದೆ. ಮಾರ್ಗರೀಟಾಳ ಚಾಪೆಲ್, ಸ್ಕಾಟಿಷ್ ಆಭರಣಗಳ ಸಂಗ್ರಹಾಲಯ ಮತ್ತು ರಾಷ್ಟ್ರೀಯ ಯುದ್ಧ ವಸ್ತು ಸಂಗ್ರಹಾಲಯ.
ಇದರಲ್ಲಿ ಉಳಿದೆರಡನ್ನು ಬಿಟ್ಟರೂ ಪರವಾಗಿಲ್ಲ. ಆದರೆ ಈ ಯುದ್ಧ ವಸ್ತು ಸಂಗ್ರಹಾಲಯವನ್ನು ಬಿಟ್ಟರೆ ಈ ಕೋಟೆ ದರ್ಶಿಸಿದ್ದು ಲುಕ್ಸಾನಾಗುವುದರಲ್ಲಿ ಸಂಶಯವಿಲ್ಲ. ಅಲ್ಲಿರುವ ಮೊದಲ ಮಹಾಯುದ್ಧ ಬಿಡಿ ಈ ಹತ್ತು ಶತಮಾನದ ದಾಖಲೆ ಸಂಗ್ರಹವಿದೆಯಲ್ಲ ಆಗಿನ ಕಾಲದ ಯುದ್ಧ ಸಂಬಂಧಿ ವಸ್ತುಗಳನ್ನು ನೋಡಿದರೆ ಯಾಕಾದರೂ ಯುದ್ಧ ಮಾಡುತ್ತಿದ್ದರೋ ಎನ್ನಿಸದಿರಲಾರದು. ಅದರಲ್ಲೂ ಮೊದಲನೇ ಚಾರ್ಲ್ಸ್ ನೀಡಿದನೆನ್ನಲಾದ ವಜ್ರ ಖಚಿತ ಖಡ್ಗವನ್ನು ರಕ್ಷಣೆಯಲ್ಲಿ ಇಡಲಾಗಿದ್ದು, ಅದಕ್ಕಾಗೇ ಇರುವ ವೀಕ್ಷಣಾ ವ್ಯವಸ್ಥೆ ಅದ್ಭುತ. ಅದರ ಜೊತೆಗೆ ವಜ್ರ ಮತ್ತು ಬೆಲೆಬಾಳುವ ಕಲ್ಲುಗಳ ಸಹಿತ ಬಂಗಾರದ ಕೀರಿಟ ಮತ್ತೊಂದು ಆಕರ್ಷಣೆ.
350 ಮಿಲಿಯನ್ ವರ್ಷಗಳ ಹಿಂದೆ ಎರಕ ಹೊಯ್ದಂತೆ ಜ್ವಾಲಾಮುಖಿಯಿಂದ ನಿರ್ವಿುತವಾದ ಗಟ್ಟಿ ಬಂಡೆಯ ಮೇಲೆ ನಿರ್ವಿುತವಾಗಿ, 1100 ವರ್ಷ ದಾಖಲೆ ಇತಿಹಾಸದಲ್ಲಿ ಈ ಕೋಟೆ ಸ್ಕಾಟ್ರ ಜೀವನಾಡಿಯಾಗಿ ನಿಂತು ದೇಶ ಗೆದ್ದು ಕೊಟ್ಟ ದಾಖಲೆ ಹೊಂದಿದೆ. ಹಾಗಾಗೇ ಇದನ್ನು ‘ಹಾನರ್ಸ್ ಆಫ್ ಸ್ಕಾಟ್ಲ್ಯಾಂಡ್’ ಎಂದು ಕರೆಯುತ್ತಾರೆ ಅಭಿಮಾನದಿಂದ.
ಸಾಮಾನ್ಯವಾಗಿ ಒಂದೆರಡು ದಿನದಲ್ಲಿ ಎಡಿನಬರ್ಗ್ ಮುಗಿದರೆ ಅಲ್ಲಿಂದ ಸ್ಕಾಟ್ಲ್ಯಾಂಡ್ವರೆಗೂ ಹೈಲಾಂಡ್ ಟೂರ್ ಎಂದು ಹೊರಡುವುದಾದರೆ ಒಂದಿಷ್ಟು ಮಾಹಿತಿ ನಿಮ್ಮ ಕೈಗಿರಲೇಬೇಕು ಮತ್ತು ಎಡಿನ್ಬ್ರಾದಿಂದ ಹೊರಕ್ಕೆ ಹೊರಡುವ ಪಯಣ ಯಾವ ಕಾರಣಕ್ಕೂ ತೀರ ಲಂಡನ್ ಕಡೆಗಿನಷ್ಟು ಸುಲಭಕ್ಕೆ ಬಸ್ ಅಥವಾ ರೈಲಿನಲ್ಲಿ ಸಮಯಕ್ಕೆ ತಕ್ಕಂತೆ ಕ್ರಮಿಸಲು ಸಾಧ್ಯವಾಗುವುದಿಲ್ಲ. ಹಾಗಾಗಿ ಸ್ಥಳೀಯವಾಗಿ ನಿರ್ವಹಿಸುವ ಯೋಜಿತ ಪ್ರವಾಸದ ಭಾಗವಾಗಿ ಹೊರಡುವುದು ನನ್ನ ಆಯ್ಕೆಯಾಗಿತ್ತು. ಹಾಗಾಗಿ ಎಡಿನ್ಬ್ರಾದಿಂದ ಲಾಚೊನೆಸ್ವರೆಗಿನ ಪ್ರವಾಸವನ್ನು ಸ್ಥಳೀಯ ಗ್ರುಪ್ಟ್ರಾವೆಲ್ ಮೂಲಕ ಮಾಡಿದ್ದೆ.
ಅಲ್ಲದೆ ಈ ರಸ್ತೆಯಲ್ಲಿ ವಿಪರೀತ ಹಿಮಪಾತ, ಸರೋವರಗಳ ತುದಿಗಳು, ಕಣಿವೆಗಳು ಮತ್ತು ಅಲ್ಲಲ್ಲಿ ಆಗಾಗ ಚಿಕ್ಕದಾದ ದಾರಿ ಏರುಮುಖ ಸಂಚಾರ ಇರುವುದರಿಂದ ಕಡಿಮೆ ಸಾರ್ವಜನಿಕ ವಾಹನ ಸೌಲಭ್ಯದಲ್ಲಿ ಇಷ್ಟೆಲ್ಲ ನೋಡಲು ಸಾಕಾಗುವುದಿಲ್ಲ. ಬದಲಿಗೆ ಪ್ರವಾಸಿ ಗುಂಪಿನಲ್ಲಿ ಗೋವಿಂದ ಆಗುವುದು ವಾಸಿ. ಖರ್ಚು ತುಂಬ ಕಡಿಮೆ ಕೂಡ. ಅಲ್ಲದೆ ಬ್ಲಾಕ್ ಮೌಂಟೆನ್ ಅಥವಾ ರಾನ್ವೆಲ್ಲಿಸ್ನಂತಹ ಕಣಿವೆ ಪ್ರದೇಶ ಪರ್ವತ ನೋಡಲು ಇದೇ ದಾರಿ ಪಾದವರೆಗೂ ಪಯಣ ಬೆಳೆಸುವುದರಿಂದ ಸುಲಭ ಪ್ರವಾಸಕ್ಕಾಗಿ ಇದು ಸೂಕ್ತ. ಈ ಎಲ್ಲ ಸ್ಥಳದಲ್ಲಿ ಸರಿ ಸುಮಾರು ಮೈನಸ್ 2ರ ಆಸುಪಾಸಿನಲ್ಲಿ ಚಳಿಯೂ ಹಿಮಪಾತವೂ ನಡೆಯುತ್ತಲೇ ಇದ್ದಿದುರಿಂದ ಹೆಚ್ಚಿನ ಸಮಯ ಕಳೆಯಲು ಸಾಧ್ಯವಾಗಲಿಲ್ಲ. ಆದರೂ ವಿಪರೀತ ವೇಗದ ಹಿಮಗಾಳಿಯ ಮಧ್ಯೆ ಒಂದಷ್ಟು ಫೋಟೋ ಮಾಡುವುದು ಮರೆಯುತ್ತಿರಲಿಲ್ಲ.
ಎಡಿನ್ಬ್ರಾದಿಂದ ಲಾಚೋನೆಸ್ (ಸರೋವರ), ಬ್ಲಾಕ್ಗ್ಲೇನ್ (ಕಣಿವೆ) ಮೂಲಕ ಬೆನ್ನೇವಿಸ್, ಗ್ರೇಟ್ ಗ್ಲೇನ್ ಮಾರ್ಗವಾಗಿ ತುಂಬ ಚೆಂದ ಯೋಜಿತ ಹಳ್ಳಿ ಪೋರ್ಟ್ ಅಗುಸ್ಟಾ ತಲುಪಿದರೆ, ಯಾವ ಕಟ್ಟಡ ನೋಡಬೇಕು, ಎಲ್ಲಿ ನೋಡಬೇಕು ಎಲ್ಲಿ ಚಿತ್ರ ಕ್ಲಿಕ್ಕಿಸಬೇಕು ತಿಳಿಯದ ಅಯೋಮಯ ಸ್ಥಿತಿ. ಒಂದು ಸ್ಥಳ ಅಥವಾ ಹಳ್ಳಿಯನ್ನೂ ಇಷ್ಟು ಚೆಂದ ಅಥವಾ ಹೀಗೂ ಕಾಯ್ದುಕೊಳ್ಳಬಹುದೇ ಎನ್ನುವುದಕ್ಕೆ ಉದಾಹರಣೆಯಾಗಿ ಪೋರ್ಟ್ ಅಗುಸ್ಟಾವನ್ನು ಮರೆಯದೆ, ಸುಮ್ಮನೆ ರಸ್ತೆಯ ಮೇಲೆ ಸುತ್ತಾಡಿಯಾದರೂ ದೂರದಿಂದ ನೋಡಲೇಬೇಕು.
ಈ ಹೈಲಾಂಡ್ ಟೂರ್ ಅಥವಾ ಲಾಚೋನೆಸ್, ಇನ್ವರ್ನೆಸ್ ಟ್ರಿಪ್ ಎನ್ನುವ ದಿನವಿಡೀ ಸುತ್ತಾಟ ಏಡಿನ್ಬ್ರಾದಿಂದ ಬೆಳಗ್ಗೆ ಐದೂವರೆಗೆ ಶುರುವಾದರೂ ಕೊನೆಯಲ್ಲಿ ಒಯ್ದು ನಿಲ್ಲಿಸೋದು ಮತ್ತೊಂದು ಕೋಟೆ ಉರ್ಖಾರ್ಟ್ ಕ್ಯಾಸಲ್ ತುದಿಗೇನೆ. ಪ್ರತಿ ಊರು, ಹಳ್ಳಿ, ನಗರ ಏನೇ ಇರಲಿ ಇಲ್ಲಿನ ಎಲ್ಲ ಸಂಸ್ಕೃತಿ ಮತ್ತು ಇತಿಹಾಸ ಪ್ರವಾಸ ದಿನದ ಸ್ಥಳೀಯ ಔಟಿಂಗು ಎಲ್ಲ ತಳಕು ಹಾಕಿಕೊಂಡಿರೊದೇ ಈ ಕೋಟೆಗಳ ಸ್ಥಳ ಮತ್ತು ಕತೆಗಳ ಜೊತೆಯಲ್ಲಿ. ಮುಖ್ಯ ಲಂಡನ್ ಕಿಂಗ್ ಕ್ರಾಸ್ ರೈಲು ನಿಲ್ದಾಣದಿಂದ ನೇರವಾಗಿ ಏಡಿನ್ಬ್ರಾ ಹಗಲಿನ ಪ್ರವಾಸ ಮಾಡಿದಲ್ಲಿ ಅದರ ವಿವರಣೆ ಬರಹಕ್ಕೆ ದಕ್ಕದ ವಸ್ತು. ಅಷ್ಟು ಚೆಂದದ ಪಯಣ ವೇಗದ ದಾರಿಯ ಜತೆಯಲ್ಲಿ. ಅದೆಲ್ಲ ಮತ್ತೊಮ್ಮೆ ಬರೆಯುವೆ.
(ಲೇಖಕರು ಕತೆಗಾರರು)