

ಭಾರತ, ಈಜಿಪ್ಟ್, ಮೆಸೊಪೊಟೇಮಿಯಾ ಹಾಗೂ ಗ್ರೀಸ್ ದೇಶಗಳ ಹಾಗೂ ಇಂಕಾ ಮತ್ತು ಮಾಯನ್ ಪ್ರಾಚೀನ ನಾಗರೀಕತೆಗಳನ್ನು ಅವಲೋಕಿಸಿದಾಗ ಕಂಡುಬರುವ ಒಂದು ಮುಖ್ಯ ವಿಷಯವೆಂದರೆ, ಅಲ್ಲಿಯ ಜನರು ನೈಸರ್ಗಿಕ ಶಕ್ತಿಗಳ ಸುತ್ತಮುತ್ತ ತಮ್ಮ ದೇವರುಗಳನ್ನು ರೂಪಿಸಿಕೊಂಡಿದ್ದು, ಅವರು ನಿಸರ್ಗದ ಆರಾಧಕರಾಗಿದ್ದರು. ಅವರ ಆಧ್ಯಾತ್ಮಿಕೆಯು ನಿಸರ್ಗದ ಶಕ್ತಿಗಳೆಡೆಗೆ ಭಯ-ಭಕ್ತಿ ಹಾಗೂ ನಿಸರ್ಗದ ನಿಯಮಗಳಿಗೆ ವಿಧೇಯತೆ ಇವುಗಳಿಗೆ ಸೀಮಿತವಾಗಿತ್ತು. ಆದರೆ, ಆ ಕಾಲದಲ್ಲಿಯೂ ಕೆಲವರಾದರೂ ದೇವರು, ಆಧ್ಯಾತ್ಮಿಕತೆಗಳನ್ನು ಸಾಮಾಜಿಕ ಅವಶ್ಯಕತೆ, ಚೌಕಟ್ಟುಗಳಿಂದ ವಿಮುಕ್ತಿಗೊಳಿಸಿ ಅತೀಂದ್ರಿಯ ಅನುಭವಗಳೆಡೆಗೆ ಕೊಂಡೊಯ್ಯಲು ಬಯಸಿದ ಕ್ರಾಂತಿಕಾರಿಗಳಿದ್ದರೆಂಬುದು ನನ್ನ ಅಭಿಮತ.
ಕಾಲಕ್ರಮೇಣ ಋಷಿ-ಮುನಿಗಳು, ದೇವದೂತರು ಅಥವಾ ಪ್ರವಾದಿಗಳಿಂದ ಬೋಧಿಸಲ್ಪಟ್ಟ ಹೊಸ ಮತ-ಧರ್ಮಗಳ ಉದಯದೊಂದಿಗೆ ದೇವರು ಮತ್ತು ಆಧ್ಯಾತ್ಮಿಕತೆಗಳಿಗೆ ಸಂಬಂಧಿಸಿದ ವಿಚಾರಧಾರೆಗಳು ಹೊಸ ರೂಪಗಳನ್ನು ಪಡೆದುಕೊಂಡವು. ಸನಾತನ ಧರ್ಮ ಅಥವಾ ಹಿಂದೂ ಧರ್ಮ, ಬೌದ್ಧ ಮತ್ತು ಜೈನ ಧರ್ಮಗಳು, ಅಂತೆಯೇ ಝೆೊರಾಷ್ಟಿ›ಯನ್ ಮತ್ತು ಯಹೂದಿ ಧರ್ಮಗಳು ಬಹು ಹಿಂದಿನವುಗಳು. ತದನಂತರ ಟಾವೋ, ಷಿಂಟೋ, ಕ್ರೈಸ್ತ, ಇಸ್ಲಾಂ ಮತ್ತು ಸಿಖ್ ಧರ್ಮಗಳ ಉದಯವಾಯಿತು. ಎಲ್ಲಾ ಧರ್ಮಗಳೂ ಅವು ಉದಯವಾದ ಪ್ರದೇಶ ಮತ್ತು ಕಾಲಗಳ ಅವಶ್ಯಕತೆಗಳಿಗೆ ಅನುಗುಣವಾಗಿ ತಮ್ಮ ರೂಪ-ರೇಷೆಗಳನ್ನು ಪಡೆದುಕೊಂಡಿವೆಯೆಂದು ಹೇಳಬಹುದು. ಕೆಲವು ದಶಕಗಳ ಹಿಂದಿನವರೆಗೆ, ಬಹುತೇಕ ಜನರು ಒಂದಲ್ಲ ಒಂದು ಮತದ ಅನುಯಾಯಿಗಳಾಗಿ ತಮ್ಮನ್ನು ತಾವು ಗುರುತಿಸಿಕೊಳ್ಳುತ್ತಿದ್ದುದು ಸರ್ವೆ ಸಾಮಾನ್ಯ.
ಆದರೆ, ಇತ್ತೀಚೆಗಿನ ದಿನಗಳಲ್ಲಿ ಈ ಪ್ರವೃತ್ತಿಯು ಬದಲಾಗಿದ್ದು, ತಾವು ಯಾವುದೇ ಮತದ ಅನುಯಾಯಿಗಳಲ್ಲ ಎಂದು ಭಾವಿಸುವವರ ಅಥವಾ ಹೇಳಿಕೊಳ್ಳುವವರ ಸಂಖ್ಯೆಯು ಕ್ರಮೇಣ ಬೆಳೆಯುತ್ತಿದೆ. ಇಂತಹವರ ಪೈಕಿ ನಾಸ್ತಿಕರಿರಬಹುದು, ಆಜ್ಞೇಯತಾವಾದಿ (ಚಜ್ಞಟಠಠಿಜ್ಚಿಠ) ಗಳಿರಬಹುದು ಅಥವಾ ಆಧ್ಯಾತ್ಮವಾದಿಗಳೂ ಇರಬಹುದು. ಈ ಗುಂಪಿನ ಜನರನ್ನು ಆಂಗ್ಲ ಭಾಷೆಯಲ್ಲಿ ನನ್ಸ್ (ಘಟ್ಞಛಿಠ), ಎಂದರೆ, ಯಾವ ಮತಕ್ಕೂ ಸೇರದವರು ಎಂದು ಕರೆಯುತ್ತಾರೆ. ಈ ಹೊಸ ಪೀಳಿಗೆಯ ಜನರಲ್ಲಿ ದೇವರು ಹಾಗೂ ಆಧ್ಯಾತ್ಮಿಕತೆಗಳ ಬಗ್ಗೆ ತಮ್ಮದೇ ಆದ ವಿಭಿನ್ನ ವಿಚಾರಧಾರೆಯಿದ್ದು, ಅದು ಯಾವುದೇ ಸಂಘಟಿತ ಮತದ ತತ್ತ್ವಗಳಿಗೆ ಹೊಂದಿಕೆಯಾಗುವುದಿಲ್ಲ. ಇಂತಹ ಹೊಸ ಪೀಳಿಗೆಯನ್ನು ಝೆಡ್ ಪೀಳಿಗೆ (Generation Z) ಎಂದು ಕರೆಯುವುದಿದೆ!
ಝೆಡ್ ಪೀಳಿಗೆಯ ಬಹುತೇಕ ಮಂದಿ 1990 ರಿಂದ 2010 ರ ಅವಧಿಯಲ್ಲಿ ಹುಟ್ಟಿದವರು. ಅತಿ ತ್ವರಿತ ತಂತ್ರಜ್ಞಾನದ ಪ್ರಗತಿ ಮತ್ತು ಅಗಾಧ ಪ್ರಮಾಣದ ಮಾಹಿತಿಯು ಲಭ್ಯವಿರುವ ಸನ್ನಿವೇಶದಲ್ಲಿ ಬೆಳೆದ ಇವರು, ದೇವರು ಮತ್ತು ಮತ-ಧರ್ಮಗಳ ಬಗ್ಗೆ ಹಿಂದಿನವರಿಗಿಂತ ಬಹು ವಿಭಿನ್ನವಾಗಿ ಯೋಚಿಸುತ್ತಾರೆ. ಇವರು ದೇವರು ಮತ್ತು ಆಧ್ಯಾತ್ಮಿಕತೆಗಳೊಂದಿಗೆ ತಮ್ಮದೇ ಆದ ಸಂಬಂಧವನ್ನು ರೂಪಿಸಿಕೊಂಡಿರುತ್ತಾರೆ. ಇವರ ಪೈಕಿ ಹಲವರು ಮತ-ಧರ್ವರ್ುಗಳನ್ನು ಅಲ್ಲಗೆಳೆಯದೇ ಇರುವವರೂ ಇದ್ದಾರೆ. ಆದರೆ, ಇವರು ತಮ್ಮ ಆಧ್ಯಾತ್ಮಿಕ ಅನ್ವೇಷಣೆಯಲ್ಲಿ ತೆರೆದ ಮನಸ್ಸಿನಿಂದ ಯೋಚಿಸುವವರಾಗಿದ್ದು, ವಿಶಾಲದೃಷ್ಟಿಯ ಸಾರಸಂಗ್ರಹಿ (eclectic) ಮನೋಭಾವನೆಚಿುನ್ನು ತಳೆದಿರುತ್ತಾರೆ. ಇವರು ಆಧ್ಯಾತ್ಮಿಕತೆಯೆಂದರೆ ಒಬ್ಬ ವ್ಯಕ್ತಿಯ ವೈಯಕ್ತಿಕ ಪಯಣ ಎಂದು ನಂಬಿದ್ದು, ಜೀವನದ ಅರ್ಥ-ಉದ್ದೇಶಗಳನ್ನು ತಮ್ಮ ಅನುಭವಗಳ ಆಧಾರದಲ್ಲಿಯೇ ಕಂಡುಕೊಳ್ಳುವುದಲ್ಲದೆ, ತಮ್ಮ ಸುತ್ತಮುತ್ತಣ ಜಗತ್ತಿನೊಂದಿಗೆ ತಮ್ಮನ್ನು ತಾವು ಹೇಗೆ ಅರ್ಥಪೂರ್ಣವಾಗಿ ಜೋಡಿಸಿಕೊಳ್ಳಬಹುದೆಂಬುದರ ಅನ್ವೇಷಣೆಯೂ ಇವರ ಆಧ್ಯಾತ್ಮಿಕತೆಯ ಒಂದು ಮುಖ್ಯ ಭಾಗವಾಗಿರುತ್ತದೆ. ಯಾವುದೇ ಸಾಮಾಜಿಕ ಕಟ್ಟಳೆಗಳ ಅಥವಾ ಪೂರ್ವಾಗ್ರಹ ಪೀಡಿತ ವಿಚಾರಗಳ ನಿರ್ಬಂಧವಿಲ್ಲದೆ ಯೋಚಿಸಿ, ಪ್ರತಿ ವ್ಯಕ್ತಿಯೂ ತನ್ನ ಮಾರ್ಗವನ್ನು ತಾನೇ ಕಂಡುಕೊಳ್ಳಬೇಕೆಂಬುದು ಇವರ ಧೋರಣೆಯಾಗಿರುತ್ತದೆ.
2. ಸಾವಧಾನತೆ ಮತ್ತು ಕ್ಷೇಮ (Mindfulness and Wellness) ಇವರು ದೈಹಿಕ ಮತ್ತು ಮಾನಸಿಕ ಕ್ಷೇಮವನ್ನು ಸಾಧಿಸಲು ಯೋಗ, ಧ್ಯಾನ ಮತ್ತು ಆತ್ಮಾವಲೋಕನಗಳನ್ನು ತಮ್ಮ ಆಧ್ಯಾತ್ಮಿಕ ಸಾಧನೆಯಲ್ಲಿ ಸೇರಿಸಿಕೊಳ್ಳುತ್ತಾರೆ.
3. ಅಂಕೀಯ ಆಧ್ಯಾತ್ಮಿಕತೆ (Digital Spirituality) ತಂತ್ರಜ್ಞಾನದೊಂದಿಗೆ ಆಳವಾಗಿ ಬೆಸೆದುಕೊಂಡಿರುವ ಈ ವ್ಯಕ್ತಿಗಳು, ಆಧ್ಯಾತ್ಮಿಕ ಅನ್ವೇಷಣೆ ಮತ್ತು ಆ ಕುರಿತ ವಿಮರ್ಶೆಗಾಗಿ ಅಂಕೀಯ ವೇದಿಕೆಗಳು (digital platforms) ಮತ್ತು ಸಾಮಾಜಿಕ ಮಾಧ್ಯಮಗಳನ್ನು (social media) ಬಳಸಿಕೊಳ್ಳುತ್ತಾರೆ ಹಾಗೂ ಜಗತ್ತಿನೆಲ್ಲೆಡೆಯಲ್ಲಿರುವ ಸಮಾನ ಮನಸ್ಕರೊಡನೆ ಸಂಪರ್ಕ ಬೆಳೆಸಿಕೊಳ್ಳುತ್ತಾರೆ.
4. ಸಾಮಾಜಿಕ ನ್ಯಾಯ (Social Justice) ಇವರಲ್ಲಿ ಸಾಮಾಜಿಕ ಹಾಗೂ ಪರಿಸರ ಪ್ರಜ್ಞೆಗಳು ಪ್ರಬಲವಾಗಿದ್ದು, ಆ ಕುರಿತು ಆಳವಾದ ಕಳಕಳಿ-ಜವಾಬ್ದಾರಿಗಳನ್ನು ಹೊಂದಿರುತ್ತಾರೆ. ಈ ವಿಷಯಗಳಲ್ಲಿ ಸಮಾಜದ ಮೇಲೆ ಗುಣಾತ್ಮಕ ಪ್ರಭಾವವನ್ನು ಬೀರಬೇಕೆಂಬ ಆಶಯ ಹಾಗೂ ಕ್ರಿಯಾಶೀಲತೆಗಳು ಇವರ ಆಧ್ಯಾತ್ಮಿಕತೆಯ ಒಂದು ಭಾಗವಾಗಿರುತ್ತವೆ.
5. ಸಂಪ್ರದಾಯಗಳನ್ನು ಪ್ರಶ್ನಿಸುವ ಮನೋಭಾವನೆ (Questioning Traditions) ಆಧ್ಯಾತ್ಮಿಕ ರಂಗದಲ್ಲಿ ಪಾರದರ್ಶಕತೆ ಮತ್ತು ಸರ್ವರ ಕ್ಷೇಮ ದೃಷ್ಟಿಯಿರಬೇಕೆಂದು ಬಯಸುವ ಇವರು, ತದ್ವಿರುದ್ಧವಾದ ಸಾಂಪ್ರದಾಯಿಕ ಕಟ್ಟಳೆಗಳು ಮತ್ತು ಅವುಗಳನ್ನು ಜಾರಿಗೊಳಿಸುವ ಅಧಿಕಾರಸ್ಥ ವ್ಯಕ್ತಿ-ಸಂಸ್ಥೆಗಳನ್ನು ಪ್ರಶ್ನಿಸಲು ಹಾಗೂ ಅವರ ವಿರುದ್ಧ ಹೋರಾಟ ನಡೆಸಲು ಹಿಂಜರಿಯುವುದಿಲ್ಲ.
ಒಟ್ಟಿನಲ್ಲಿ ಹೇಳುವುದಾದರೆ, ಝೆಡ್ ಪೀಳಿಗೆಯವರಿಗೆ ಆಧ್ಯಾತ್ಮಿಕತೆಯು ನಿಂತ ನೀರಲ್ಲ. ಕಾಲ ಕಳೆದಂತೆ ಬದಲಾಗುವ ಸಾಮಾಜಿಕ ಸನ್ನಿವೇಶಗಳಿಗನುಗುಣವಾಗಿ, ಆಧ್ಯಾತ್ಮಿಕತೆಯ ಅರ್ಥ ಮತ್ತು ಅನುಷ್ಠಾನಗಳು ಬದಲಾಗಬೇಕು. ಆಧ್ಯಾತ್ಮಿಕತೆಯು ವ್ಯಕ್ತಿಯ ವೈಯಕ್ತಿಕ ಜೀವನಕ್ಕೆ ಸಂಬಂಧಿಸಿದ ವಿಷಯವಾದರೂ, ಅದು ಸಮಾಜದ ಕ್ಷೇಮಕ್ಕೆ ನೆರವಾಗಬೇಕು. ಏಕೆಂದರೆ, ಯಾವ ವ್ಯಕ್ತಿಯೂ ಸಮಾಜವನ್ನು ಸಂಪೂರ್ಣವಾಗಿ ಬಿಟ್ಟು ಬದುಕಲು ಸಾಧ್ಯವಿಲ್ಲ. ಹೀಗೆ ಸಮಾಜ ಕ್ಷೇಮವನ್ನು ಸಾಧಿಸಲು ಹೊರಟ ಅಧ್ಯಾತ್ಮವಾದಿಯ ಆಧ್ಯಾತ್ಮಿಕತೆಯು ಕ್ರಮೇಣ ವಿಕಸನಗೊಳ್ಳುತ್ತಾ ಹೆಚ್ಚೆಚ್ಚು ಚೈತನ್ಯ ಮತ್ತು ವೈವಿಧ್ಯತೆಯನ್ನು ಪಡೆದುಕೊಳ್ಳುತ್ತದೆ. ವಿವಿಧ ವ್ಯಕ್ತಿಗಳ ಆಧ್ಯಾತ್ಮಿಕ ಸಾಧನೆ ಮತ್ತು ಅನುಭವಗಳಲ್ಲಿರುವ ವೈವಿಧ್ಯತೆಯು ಝೆಡ್ ಪೀಳಿಗೆಯವರ ವೈಶಿಷ್ಟ್ಯವಾಗಿರುತ್ತದೆ. ಇಂತಹ ಹೊಸ ಪೀಳಿಗೆಯ ಯುವಜನರಿಗೆ, ಜಗತ್ತಿನಲ್ಲಿ ಇಂದು ಪ್ರಚಲಿತವಿರುವ ಯಾವ ಆಧ್ಯಾತ್ಮಿಕ ತತ್ವವು ರುಚಿಸಬಹುದು? ಈ ಬಗ್ಗೆ ಆಳವಾಗಿ ಯೋಚಿಸಿದಾಗ, ನನಗೆ ಅನಿವಾರ್ಯವಾಗಿ ಹೊಳೆದ ವಿಷಯವೆಂದರೆ, ಸನಾತನ ಧರ್ಮದ ವೈವಿಧ್ಯಮಯ ವೇದಾಂತ ವಿಚಾರಧಾರೆ. ಏಕೆಂದರೆ, ಇದರಲ್ಲಿ ಪ್ರಶ್ನೆಗಳನ್ನು ಕೇಳಲು ಇರುವ ಸ್ವಾತಂತ್ರ್ಯದ ಜತೆಗೆ, ತನ್ನ ಅನುಭವಗಳ ಆಧಾರದಲ್ಲಿಯೇ ಸತ್ಯಾನ್ವೇಷಣೆ ನಡೆಸುವ ವಿಪುಲ ಅವಕಾಶಗಳಿದ್ದು, ಜಗತ್ತಿನ ಹಿನ್ನೆಲೆಯಲ್ಲಿರುವ ದಿವ್ಯತೆಯ ಏಕತ್ವದ ಆಧಾರದಲ್ಲಿ ಸಾಮಾಜಿಕ ಸಮಾನತೆ ಸಾಧಿಸಲು ಮುಕ್ತ ಆಹ್ವಾನವಿದೆ!
ಇಂದಿನ ಯುವಪೀಳಿಗೆಗೆ ಸನಾತನ ಧರ್ಮದ ಅತ್ಯುನ್ನತ ಜ್ಞಾನಭಂಡಾರಗಳಾದ ಉಪನಿಷತ್ತುಗಳನ್ನು ಅವರ ಪರಿಭಾಷೆಯಲ್ಲೇ ಪರಿಚಯಿಸುವುದು ಅತ್ಯಂತ ಅಗತ್ಯ. ಈ ಗ್ರಂಥಗಳ ಸರ್ವಶ್ರೇಷ್ಠ ಬೋಧನೆಯೆಂದರೆ, ಯಾವುದೇ ಭೇದ - ತಾರತಮ್ಯಗಳಿಲ್ಲದೆ ಸಕಲ ಸೃಷ್ಟಿಯ ಏಕತ್ವವನ್ನು ಸಾರಿರುವುದು. ಸಾಮಾಜಿಕ ನ್ಯಾಯ ಮತ್ತು ಸಮಾನತೆಗಳ ಬಗ್ಗೆ ಪ್ರಾಮಾಣಿಕ ಕಳಕಳಿಯಿರುವ ಯುವಜನರಿಗೆ ಈ ತತ್ತ್ವವು ಸಂಪೂರ್ಣ ಮಾನ್ಯವಾಗುದರಲ್ಲಿ ಯಾವುದೇ ಸಂದೇಹವಿಲ್ಲ. ನಮ್ಮ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೆ ಅಲ್ಲದೆ, ದೇಶ-ವಿದೇಶಗಳ ಯುವಜನರಿಗೆ ನಾನು ಉಪನಿಷತ್ತುಗಳ ತತ್ತ್ವಗಳನ್ನು ಬೋಧಿಸುವಾಗ, ಅವರು ಅತಿ ಉತ್ಸಾಹದಿಂದ ಆಲಿಸಿ, ಸ್ವಾಗತಿಸುವುದನ್ನು ನನ್ನ ಸ್ವಂತ ಅನುಭವದಿಂದ ಕಂಡುಕೊಂಡಿದ್ದೇನೆ.
ದೇವರೆಂದರೆ ಪರಿಪೂರ್ಣ ನಿಸ್ವಾರ್ಥ ಪ್ರೇಮವಲ್ಲದೆ ಮತ್ತೇನೂ ಅಲ್ಲ; ಆಧ್ಯಾತ್ಮಿಕತೆಯೆಂದರೆ ನಿಸ್ವಾರ್ಥ ಸೇವೆಯೇ, ಎಂದು ತಿಳಿಸಿದಾಗ, ಝೆಡ್ ಪೀಳಿಗೆಯ ಯುವಜನರು ಅದನ್ನು ಸಂತೋಷದಿಂದ ಅಂಗೀಕರಿಸುವುದನ್ನು ನಾನು ಕಂಡಿದ್ದೇನೆ.
ನಾವು ದೇವರು ಮತ್ತು ಅಧ್ಯಾತ್ಮಗಳನ್ನು ಸಾಂಪ್ರದಾಯಿಕ ಕಂದಾಚಾರಗಳ ಕಟ್ಟಳೆಯಿಂದ ವಿಮುಕ್ತಿಗೊಳಿಸಿ, ಉಪನಿಷತ್ತುಗಳ ಜ್ಞಾನಪ್ರಕಾಶದೊಂದಿಗೆ ಆಧುನಿಕ ಪರಿಭಾಷೆಯಲ್ಲಿ ಇಂದಿನ ಪೀಳಿಗೆಯ ಜನರಿಗೆ ಬೋಧಿಸಿದರೆ, ಸನಾತನ ಧರ್ಮವು ಸದಾ ನಿತ್ಯನೂತನವಾಗಿಯೇ ಉಳಿಯುವುದರಲ್ಲಿ ಯಾವ ಸಂಶಯವೂ ಇಲ್ಲ!
(ಲೇಖಕರು ಸಾಮಾಜಿಕ ಹಾಗೂ ಆಧ್ಯಾತ್ಮಿಕ ಗುರುಗಳು)