

ಭಾರತೀಯ ಪುಣ್ಯ ಪೃಥ್ವಿಯಲ್ಲಿ ಹಲವಾರು ಧರ್ಮಗಳು ಉದಯಿಸಿ ಮಾನವರ ಉದ್ಧಾರ, ಸಮಾಜದ ಪ್ರಗತಿ ಹಾಗೂ ಆಧ್ಯಾತ್ಮಿಕ ಉನ್ನತಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿವೆ. ಧರ್ಮಗಳ ಸಮನ್ವಯ ಸಂಗಮವಾಗಿರುವ ಈ ನೆಲದಲ್ಲಿ ವೀರಶೈವ ಧರ್ಮವೂ ತನ್ನ ನಿಜದ ಅರಿವು ಮತ್ತು ಆಚಾರ ಹಾಗೂ ಅನುಭಾವದ ಮುಖೇನ ಇಡೀ ಜಗತ್ತಿನಲ್ಲಿ ತನ್ನ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ. ಇದು ಮಾನವನನ್ನು ಮಹಾದೇವನನ್ನಾಗಿ ಪರಿವರ್ತಿಸುವ ಮಹಾಶಕ್ತಿಯನ್ನು ಹೊಂದಿದ್ದು, ಸಾಮಾಜಿಕ ಸಂವೇದನೆಯ ಜಂಗಮ ತತ್ವವನ್ನು ಎತ್ತಿ ಹಿಡಿಯುವುದರೊಂದಿಗೆ ಅದರ ಸಮಷ್ಠಿ ಸಿದ್ಧಾಂತವನ್ನು ಸಹ ಅನಾವರಣಗೊಳಿಸಿಕೊಂಡಿದೆ. ವೀರಶೈವ ಧರ್ಮದ ಸಂಸ್ಥಾಪಕರಾದ ಶ್ರೀ ಜಗದ್ಗುರು ಪಂಚಪೀಠಾಚಾರ್ಯರು ಜನತೆಯ ಅಭಿವೃದ್ಧಿ ಮತ್ತು ವಿಶ್ವಕಲ್ಯಾಣಕ್ಕಾಗಿ ತಮ್ಮ ಬದುಕನ್ನು ಸಮರ್ಪಿಸಿಕೊಂಡು ಅದರಲ್ಲಿ ಜಯಶೀಲತೆಯನ್ನು ಸಾಧಿಸಿ ಇಡೀ ಜಗತ್ತಿಗೆ ಧರ್ಮ ದುಂದುಭಿಯನ್ನು ಮೊಳಗಿಸಿದ್ದಾರೆ. ವೀರಶೈವ ಧರ್ಮದ ಪಂಚಪೀಠಗಳ ಪರಂಪರೆಯಲ್ಲಿ ಅನೇಕ ಜಗದಾಚಾರ್ಯರು ತಾವು ನಡೆದ ಧರ್ಮದ, ಸತ್ಯದ ಮಾರ್ಗದಲ್ಲಿ ಭಕ್ತರನ್ನು ಮುನ್ನಡೆಸಿ ಜನಜನಿತರಾಗಿದ್ದಾರೆ. ಅವರು ದೇಶದ ತುಂಬೆಲ್ಲಾ ಸಂಚರಿಸಿ ಧಾರ್ವಿುಕ ಸಂಸ್ಕಾರ ಮತ್ತು ಸಾಮಾಜಿಕ ಪ್ರಜ್ಞೆಯ ಪ್ರಖರವನ್ನು ಬೆಳಗಿಸಿ, ಜನಮಾನಸದಲ್ಲಿ ಈಗಲೂ ಚಿರಸ್ಥಾಯಿಯಾಗಿದ್ದಾರೆ.
ಇಂಥ ಪರಂಪರೆಯ ಆಧ್ಯಾತ್ಮಿಕ ಮಹಾಬೆಳಗನ್ನು ಬೆಳಗಿದ ಪಂಚಪೀಠಗಳಲ್ಲಿ ಒಂದಾದ ಶ್ರೀಶೈಲದ ಶ್ರೀಮದ್ ಗಿರಿರಾಜ ಸೂರ್ಯಸಿಂಹಾಸನ ಪೀಠ ಮತ್ತು ಶ್ರೀ ಜಗದ್ಗುರುಗಳವರು ಲೋಕ ವಿಖ್ಯಾತರಾಗಿ ಜಗತ್ ಕಲ್ಯಾಣವನ್ನು ಸಾಧಿಸಿದ್ದಾರೆ. ಶ್ರೀ ಪೀಠದ ಎಲ್ಲಾ ಜಗದ್ಗುರುಗಳವರು ಸಮಸ್ತ ಜನತೆಯ ಬದುಕಿಗೆ ಭವ್ಯತೆಯ ಬೆಳಕಾಗಿ ಅರಿವಿನ ದೀವಿಗೆಯಾಗಿ ಆಧ್ಯಾತ್ಮಿಕ ಪ್ರಭೆಯನ್ನು ಪ್ರಜ್ವಲಿಸಿದ್ದಾರೆ. ಜ್ಞಾನ ವೈರಾಗ್ಯ ಹಾಗೂ ತಪಸ್ಸಿನ ಬಲದಿಂದ ಪ್ರಭಾವ ಬೀರಿದ ಶ್ರೀ ಪೀಠದ ಇತಿಹಾಸ ಮತ್ತು ಪರಂಪರೆ ಸದಾ ವಿರಾಜಮಾನವಾಗಿದೆ. ಶ್ರೀಶೈಲ ಪೀಠದ ಶ್ರೀ ಜಗದ್ಗುರು ಧೇನುಕರ್ಣ ಶಿವಾಚಾರ್ಯ ಭಗವತ್ಪಾದರು, ಶ್ರೀಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು, ಶ್ರೀಜಂಗಮ ಮಲ್ಲಿಕಾರ್ಜುನ ಶಿವಾಚಾರ್ಯ ಭಗವತ್ಪಾದರು, ಶ್ರೀ ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಹಾಗೂ ಶ್ರೀ ಉಮಾಪತಿ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಇನ್ನೂ ಮುಂತಾದವರ ಕರ್ತೃತ್ವ ಶಕ್ತಿ ಮತ್ತು ಸತ್ಕಾ›ಂತಿಗಳ ಫಲವಾಗಿ ಶ್ರೀ ಪೀಠದ ಕೀರ್ತಿ ಮುಗಿಲೆತ್ತರಕ್ಕೆ ತಲೆ ಎತ್ತಿದೆ.
ಇಂಥ ಚಾರಿತ್ರಿಕ ಪೀಠ ಪರಂಪರೆಗೆ ಶ್ರೀಶೈಲದ ಸ್ಪೂರ್ತಿಯ ಸೆಲೆಯಾಗಿ ನಿಂತು ತಮ್ಮ ಹತ್ತು-ಹಲವು ಸಮಾಜೋ-ಧಾರ್ವಿುಕ ರಚನಾತ್ಮಕ ಕಾರ್ಯಗಳ ಮುಖೇನ ಭಕ್ತರ ಬದುಕಿಗೆ ಹೊಂಬೆಳಕು ನೀಡುತ್ತಿರುವ ಬಹುಮುಖ ಪ್ರತಿಭಾ-ಪಾಂಡಿತ್ಯ ಸಂಪನ್ನರು, ಶ್ರೇಷ್ಠ ಬರಹಗಾರರು, ಪ್ರಸಿದ್ಧ ಅಂಕಣಕಾರರು ಹಾಗೂ ಬಹುಮುಖಿ ಚಿಂತಕರೂ ಆದ ಶ್ರೀಮದ್ ಗಿರಿರಾಜ ಸೂರ್ಯ ಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ಡಾ. ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರು ಕೇವಲ ಹನ್ನೆರಡು ವರ್ಷದಲ್ಲಿ ನೂರಾರು ವರ್ಷಗಳ ಸಾಧನೆ-ಸಿದ್ಧಿಯನ್ನು ಸಾಧಿಸುವ ಮುಖೇನ, ಅವರು ಮಾಡಿದ ಗುರುತರ ರಚನಾತ್ಮಕ ಕಾರ್ಯಗಳು ಸಮಾಜ ಹಾಗೂ ಭಕ್ತ ಸಮೂಹಕ್ಕೆ ಸಂತೋಷ ತಂದಿವೆ. ಶ್ರೀ ಜಗದ್ಗುರುಗಳವರ ಕಾಲದಲ್ಲಿ ಹಿಂದೆಂದೂ ನಡೆಯದೇ ಇರುವ ಅಭಿವೃಧಿ್ಧ ಕಾರ್ಯಗಳು ನಡೆಯುತ್ತಿರುವುದು ಸ್ತುತ್ಯರ್ಹವಾದದ್ದು. ಅವರು ಮಾಡುತ್ತಿರುವ ಒಂದೊಂದು ರಚನಾತ್ಮಕ ಕಾರ್ಯವು ಸಹ ಅನುಪಮ, ಅಸಾಧಾರಣ ಹಾಗೂ ಆದರ್ಶವಾದುದು.
ಶ್ರೀ ಸನ್ನಿಧಿಯವರು ವೀರಶೈವ ಧರ್ಮದಲ್ಲಿ ಧಾರ್ವಿುಕ ಮತ್ತು ಸಾಮಾಜಿಕ ಸಂಘಟನೆ ಬಹುಮುಖ್ಯ ಎಂಬುದನ್ನು ಮನಗಂಡು ಇಂದಿನ ಯುವ ಪೀಳಿಗೆಗೆ ಹಾಗೂ ಮಹಿಳಾ ಸಮೂಹಕ್ಕೆ ಸಂಸ್ಕಾರ-ಸಂಸ್ಕೃತಿ ಶಿಕ್ಷಣ ಸಾಹಿತ್ಯವನ್ನು ಬಿತ್ತುವ ಮುಖೇನ ತಮ್ಮ ಕ್ರಿಯಾ ಶಕ್ತಿಯನ್ನು ಇಮ್ಮಡಿಗೊಳಿಸಿಕೊಂಡಿದ್ದಾರೆ. ಸಮಾಜೋತ್ಕರ್ಷಕ್ಕಾಗಿ ಸದಾ ಇಷ್ಟಲಿಂಗ ಮಹಾಪೂಜೆ ಹಾಗೂ ತಪೋನುಷ್ಠಾನವನ್ನು ಹಮ್ಮಿಕೊಂಡು ತಮ್ಮ ಅಂತರಂಗದ ಆತ್ಮಚೇತನವನ್ನು ಅನಿಕೇತನಗೊಳಿಸಿಕೊಂಡಿದ್ದಾರೆ.
ಸುದೀರ್ಘ ಧರ್ಮ ಸಾಹಸ ಪಾದಯಾತ್ರೆ ಕೈಗೊಂಡು ಶ್ರೀಪೀಠದ ಪೂರ್ವಾಚಾರ್ಯರ ಸಂಕಲ್ಪಗಳನ್ನು ಸಾಕಾರಗೊಳಿಸುತ್ತಾ ಸಾಹಿತ್ಯ ಸಂಸ್ಕೃತಿಯನ್ನು ಸಂವರ್ಧಿಸುತ್ತ, ಶಾಂತಿ, ಸಮೃದ್ಧಿಯನ್ನು ಸರ್ವರಿಗೆ ನೀಡುತ್ತ ಶ್ರೀ ಜಗದ್ಗುರು ಪಂಚಪೀಠಾಚಾರ್ಯರು - ಬಸವಾದಿ ಶರಣರ ವಿಚಾರಧಾರೆಗಳನ್ನು ಧಾರೆ ಎರೆಯುತ್ತಾ ತಮ್ಮ ಬದುಕಿನ ಸಾರ್ಥಕತೆಯನ್ನು ಕಂಡುಕೊಂಡಿದ್ದಾರೆ.
ಶ್ರೀ ಜಗದ್ಗುರುಗಳು ಕಾಶಿಯಲ್ಲಿ ಅತ್ಯಂತ ಶ್ರದ್ಧೆ-ನಿಷ್ಠೆಯಿಂದ ಸಂಸ್ಕೃತ, ವೇದ, ಆಗಮೋಪನಿಷತ್ತುಗಳನ್ನು ಅಧ್ಯಯನ ಮಾಡಿ, ಸ್ನಾತಕೋತ್ತರ ಪದವಿ, ಪಿಎಚ್.ಡಿ ಪದವಿ ಹಾಗೂ ಮೂರು ಸುವರ್ಣ ಪದಕಗಳನ್ನು ತಮ್ಮದಾಗಿಸಿಕೊಂಡು ಬಹುಭಾಷಾ ಪಂಡಿತರಾಗಿ ಘನ ವಿದ್ವಾಂಸರಾಗಿ ತಮ್ಮ ಪೂಜನೀಯ ವಿದ್ವತ್ಪೂರ್ಣ ವ್ಯಕ್ತಿತ್ವವನ್ನು ಅನಾವರಣಗೊಳಿಸಿಕೊಂಡಿದ್ದಾರೆ.
ಹಿಪ್ಪರಗಿ ಹಿರೇಮಠ ಅದರ ಜೊತೆಗೆ ಯಡೂರು ಶ್ರೀ ಕಾಡಸಿದ್ಧೇಶ್ವರ ಮಠದ ಪಟ್ಟಾಧ್ಯಕ್ಷರಾಗಿ ಧರ್ಮ, ಸಮಾಜ, ಶಿಕ್ಷಣ, ಸಾಹಿತ್ಯ ಹಾಗೂ ಕೃಷಿ ರಂಗಗಳಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡು ಅವುಗಳನ್ನು ಕಾರ್ಯಾನುಷ್ಠಾನಗೊಳಿಸುವ ಮುಖೇನ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂಧ್ರಪ್ರದೇಶ ಹಾಗೂ ಇತರೆ ರಾಜ್ಯಗಳ ಭಕ್ತರ ಬಾಳಿಗೆ ಭಾಗ್ಯೋದಯವಾಗಿದ್ದಾರೆ.
ಪ್ರವಾಹ ಸಂತ್ರಸ್ತರ ರಕ್ಷಣೆ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯ ಸಾಧನೆಗೈದ ಸಾಧಕರಿಗೆ ತಮ್ಮ ಅಮೃತ ಹಸ್ತಗಳಿಂದ ನೀಡುವ ವಿಶ್ವಚೇತನ ಪ್ರಶಸ್ತಿ ಹಾಗೂ ಜನೋಪಯೋಗಿ ಕಾರ್ಯಗಳು ಇಡೀ ದೇಶದಲ್ಲಿಯೇ ತನ್ನ ಘನತೆ ಗೌರವವನ್ನು ಹೆಚ್ಚಿಸಿಕೊಂಡಿವೆ. ಶ್ರೀಶೈಲ ಜಗದ್ಗುರುಗಳಾಗಿ ನಿರ್ವಹಿಸುತ್ತಿರುವ ಕಾರ್ಯಗಳಂತೂ ತುಂಬಾ ಮೌಲಿಕವಾಗಿ ವೈವಿಧ್ಯಪೂರ್ಣವಾಗಿ ಜನಮನ್ನಣೆಗಳಿಸಿಕೊಂಡಿರುವವು. ಕೃಷ್ಣೆಯ ಆರ್ಭಟಕ್ಕೆ ನೆಲೆ ಕಳೆದುಕೊಂಡ ಸಂತ್ರಸ್ತರಿಗೆ ತಮ್ಮ ಪೀಠದ ಚಿನ್ನವನ್ನು ಮಾರಿ ಮನೆ ನಿರ್ವಿುಸಿಕೊಟ್ಟದ್ದು, ಮುಸ್ಲಿಂ ಯುವಕನಿಗೆ ಲಿಂಗದೀಕ್ಷೆ ಹಾಗೂ ವೀರಶೈವ ಧಮೋಪದೇಶ ನೀಡಿದ್ದು ಚಾರಿತ್ರಿಕ ದಾಖಲೆಯಾಗಿದೆ.
ಶ್ರೀಶೈಲ ಪೀಠದ ಶ್ರೀ ಜಗದ್ಗುರುಗಳಿಗೂ ಮತ್ತು ನಮ್ಮ ಉಜ್ಜಯಿನಿ ಪೀಠದ ಜಗದ್ಗುರುಗಳಿಗೂ ಅವಿನಾಭಾವ ಸಂಬಂಧ ನಿರಂತರವಾದದ್ದು. ಮಹಾತಪಸ್ವಿ ಉಜ್ಜಯಿನಿ ಜಗದ್ಗುರು ಸಿದ್ಧಲಿಂಗ ಶಿವಾಚಾರ್ಯ ಭಗವತ್ಪಾದರು ವಾಗೀಶ ಪಂಡಿತಾರಾಧ್ಯರಿಗೆ ಶ್ರೀಶೈಲ ಜಗದ್ಗುರುತ್ವದ ಆಶೀರ್ವಾದ ಮಾಡಿದ್ದು ಐತಿಹಾಸಿಕ. ಆನಂತರದಲ್ಲಿ ಶ್ರೀಶೈಲ ಪೀಠದ ವ್ಯಾಜ್ಯ ಕೋರ್ಟ್ ಕಟ್ಟೆಯನ್ನು ಏರಿದ ಸಂದರ್ಭದಲ್ಲಿ ನಮ್ಮ ಪೀಠದ ಜಗದ್ಗುರುಗಳಾದ ಶ್ರೀ ಸಿದ್ಧೇಶ್ವರ ಶಿವಾಚಾರ್ಯ ಭಗವತ್ಪಾದರು ಶ್ರೀಶೈಲ ಪೀಠಕ್ಕೆ ದಯಮಾಡಿಸಿ ಶ್ರೀಶೈಲ ಪೀಠದ ಶ್ರೀ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವತ್ಪಾದರೊಂದಿಗೆ ರ್ಚಚಿಸಿ ಪೀಠದ ನೀತಿ ನಿಬಂಧನೆಗಳನ್ನು ಹಾಗೂ ಧರ್ಮ ಸಂವಿಧಾನವನ್ನು ನ್ಯಾಯಾಲಯಕ್ಕೆ ಸಾಕ್ಷಿ ಮುಖೇನ ಅನಾವರಣಗೊಳಿಸುವ ಮೂಲಕ ಅದು ಪುತ್ರ ವರ್ಗದ ಪರಂಪರೆಯ ಪೀಠವಲ್ಲ ಎಂಬುದನ್ನು ಸಾಬೀತುಪಡಿಸಿದ ವಿಶಿಷ್ಟ ಶಕ್ತಿ ತುಂಬಾ ಅದ್ವಿತೀಯವಾದದ್ದು.
ದಾವಣಗೆರೆಯಲ್ಲಿ ಪೀಠದ ಪ್ರಸ್ತುತ ಶ್ರೀ ಜಗದ್ಗುರುಗಳಿಗೆ ಉತ್ತರಾಧಿಕಾರತ್ವ ಘೊಷಣೆಯ ಸಂದರ್ಭದಲ್ಲಿ ನಾವೊಬ್ಬರೇ ಉಪಾಚಾರ್ಯರಾಗಿ ಉಪಸ್ಥಿತರಿದ್ದು ಅವರನ್ನು ಅಭಿನಂದಿಸಿದ್ದು ವಿಶೇಷ. ನಾವು ಮೈಸೂರಿನಲ್ಲಿ ವ್ಯಾಸಂಗ ಮಾಡುತ್ತಿರುವ ಸಂದರ್ಭದಲ್ಲಿ ಶ್ರೀ ಜಗದ್ಗುರುಗಳು ಕಾಶಿಯಿಂದ ದಯಮಾಡಿಸಿ ನಮ್ಮ ಜೊತೆ ಆಂಗ್ಲಭಾಷೆಯನ್ನು ಅಭ್ಯಾಸ ಮಾಡುವ ಸಮಯದಲ್ಲಿ ಅವರ ಮತ್ತು ನಮ್ಮ ಮಧ್ಯೆ ಇದ್ದ ಅನನ್ಯ ಪ್ರೀತಿ, ವಿಶ್ವಾಸ, ಆತ್ಮೀಯತೆ ಈಗಲೂ ಅಜರಾಮರ. ನಮ್ಮ ಪೀಠದ ಜಗದ್ಗುರುಗಳಾದ ಶ್ರೀ ಮರುಳಸಿದ್ಧ ಶಿವಾಚಾರ್ಯ ಭಗವತ್ಪಾದರು ಲಿಂಗೈಕ್ಯರಾದ ಸಂದರ್ಭದಲ್ಲಿ ಪೀಠಕ್ಕೆ ದಯಮಾಡಿಸಿ ಉತ್ತರೋತ್ತರ ಕ್ರಿಯೆಗಳನ್ನು ನೆರವೇರಿಸಿ ಜನ ಸಮೂಹಕ್ಕೆ ಸಮಾಧಾನ ನೀಡಿದ್ದು ಮತ್ತು ನಮಗೆ ಆತ್ಮಸ್ಥೈರ್ಯ ತುಂಬಿದ್ದು, ಲಿಂಗೈಕ್ಯ ಜಗದ್ಗುರುಗಳವರ ಮೃತ್ಯುಪತ್ರವನ್ನು ಸ್ವತಃ ಓದಿ ನಮ್ಮ ಉತ್ತರಾಧಿಕಾರತ್ವ ಘೊಷಣೆ ಮಾಡಿದ್ದು ಮರೆಯಲಾಗದ ಮತ್ತೊಂದು ವಿಶೇಷ ಘಟನೆಯಾಗಿದೆ.
ಮುಕ್ತಿಮಂದಿರ ಧರ್ಮ ಕ್ಷೇತ್ರದ ಸಮಸ್ಯೆ ಪರಿಹರಿಸುವಲ್ಲಿ ರಂಭಾಪುರಿ ಜಗದ್ಗುರುಗಳವರ ಅಪೇಕ್ಷೆಯಂತೆ ಪೀಠದ ಸುಪರ್ದಿಗೆ ವಹಿಸುವ ದಾಖಲೆಗೆ ಉಜ್ಜಯಿನಿ ಹಾಗೂ ಶ್ರೀಶೈಲ ಜಗದ್ಗುರುಗಳವರು ಸಾಕ್ಷಿತ್ವದ ರುಜುವಾತು ನೀಡಿದ್ದು ಅತ್ಯಂತ ಮಹತ್ವವಾದದ್ದು. ಸ್ವಹಿತಾಸಕ್ತಿಗಳು ಮತ್ತು ಪೂರ್ವಾಗ್ರಹಪೀಡಿತರು ಉಜ್ಜಯಿನಿ ಪೀಠದ ಬಗ್ಗೆ ಊಹಾಪೋಹಗಳ ಹೇಳಿಕೆಗಳನ್ನು ನೀಡುತ್ತಿರುವ ಸಂದರ್ಭದಲ್ಲಿ ಸೇಡಂ, ದಾವಣಗೆರೆ ಹಾಗೂ ಹುಬ್ಬಳ್ಳಿ ನಗರಗಳಲ್ಲಿ ಶ್ರೀರಂಭಾಪುರಿ, ಶ್ರೀ ಕಾಶೀ ಜಗದ್ಗುರುಗಳವರ ಜೊತೆಗೂಡಿ ಶ್ರೀಶೈಲ ಜಗದ್ಗುರುಗಳವರು ನಿರ್ವಹಿಸಿದ ಪಾತ್ರ ಅಮೋಘವಾದದ್ದು. ಮತ್ತೊಂದು ವಿಶೇಷ ಸಂದರ್ಭದಲ್ಲಿ ಶ್ರೀಶೈಲ ಜಗದ್ಗುರುಗಳವರು ಅಖಿಲ ಭಾರತ ವೀರಶೈವ ಮಹಾ ಸಭಾಧ್ಯಕ್ಷರಾದ ಡಾ. ಶಾಮನೂರು ಶಿವಶಂಕರಪ್ಪನವರೊಂದಿಗೆ ಉಜ್ಜಯಿನಿಗೆ ಆಗಮಿಸಿ ನಮ್ಮ ಪೀಠದ ಬಗ್ಗೆ ಗೌರವ ಘನತೆಯನ್ನು ಎತ್ತಿ ಹಿಡಿಯುವ ಮುಖೇನ ನಮಗೆ ಸಮಾಧಾನವನ್ನು ನೀಡಿದ್ದು ಮರೆಯಲಾಗದ ಮತ್ತೊಂದು ಸಂಗತಿಯಾಗಿದೆ.
ಶ್ರೀಶೈಲ ಪೀಠ ಪರಂಪರೆಯ ಪೂರ್ವಾಚಾರ್ಯರ ಕೃಪೆ, ಪಂಚಪೀಠಗಳ ಮಾರ್ಗದರ್ಶನ, ಭಕ್ತರ ಪ್ರಾಂಜಲ ಸೇವಾಭಾವ ಹಾಗೂ ಸರ್ಕಾರದ ಸಹಕಾರ ಎಲ್ಲಾ ಕಾರ್ಯಗಳಿಗೆ ಸ್ಪೂರ್ತಿಯಾಗಿ ಶ್ರೀ ಜಗದ್ಗುರುಗಳ ಕ್ರಿಯಾ ಮತ್ತು ಜ್ಞಾನ ಶಕ್ತಿಯ ಪ್ರಭಾವ ಅವರೊಂದು ಮಹಾನ್ ಶಕ್ತಿಯೆಂದು ತೋರಿಸಿಕೊಟ್ಟಿದೆ. ಶ್ರೀಶೈಲ ಮಲ್ಲಿಕಾರ್ಜುನ ಮತ್ತು ಭ್ರಮರಾಂಬೆಯ ಕೃಪೆಯಿಂದ ಆಯುರಾರೋಗ್ಯ ಸಂಪನ್ನರಾಗಿ ಹೆಚ್ಚಿನ ಕಲ್ಯಾಣ ಕಾರ್ಯಗಳನ್ನು ಮಾಡುವಂತಾಗಲಿ ಎಂಬ ಆಶಯದಿಂದ ಶ್ರೀ ಜಗದ್ಗುರುಗಳನ್ನು ಹೃದಯಪೂರ್ವಕ ಅಭಿನಂದಿಸುತ್ತೇವೆ.