

1. ಅಭ್ಯಂಗ: ನಿತ್ಯವೂ ಅಭ್ಯಂಗ ಸ್ಥಾನವನ್ನು ಅಂದರೆ ಎಣ್ಣೆಯ ಮಸಾಜ್ ಮಾಡುವುದರಿಂದ ಮುಪ್ಪು ದೂರವಾಗುತ್ತದೆ, ಸುಸ್ತು ಕಡಿಮೆಯಾಗುತ್ತದೆ ಮತ್ತು ವಾತ ಸಂಬಂಧಿ ರೋಗಗಳು ಅಂದರೆ ಮುಖ್ಯವಾಗಿ ದೇಹದಲ್ಲಿ ಸವಕಳಿಯಿಂದ ಉಂಟಾಗುವ ತೊಂದರೆಗಳು ಬರುವುದು ತಪ್ಪುತ್ತದೆ. ಒಳ್ಳೆಯ ನಿದ್ದೆ ಬರಲು, ಚರ್ಮದ ಕಾಂತಿ ಹೆಚ್ಚಲು, ಇಂದ್ರಿಯಗಳ ಶಕ್ತಿ ಹೆಚ್ಚಲು ಕೂಡ ಇದು ಸಹಕಾರಿ. ಗಾಣದಲ್ಲಿ ತಯಾರಿಸಿದ ಎಳ್ಳೆಣ್ಣೆ ಲಭ್ಯವಿದ್ದರೆ ಅದರಿಂದ ಮಸಾಜ್ ಮಾಡಿಕೊಳ್ಳುವುದು ಹೆಚ್ಚು ಪ್ರಯೋಜನಕಾರಿ. ಬದಲಿಗೆ ಕೊಬ್ಬರಿ ಎಣ್ಣೆಯನ್ನು ಬಳಸಬಹುದು. ದಿನಚರ್ಯುಯಲ್ಲಿ ಅಂದರೆ ನಿತ್ಯವೂ ಮಾಡಬೇಕಾದ ಕೆಲಸಗಳಲ್ಲಿ ಅಭ್ಯಂಗವನ್ನು ಆಯುರ್ವೆದ ಸೇರಿಸಿದೆ. ಅದರಲ್ಲಿಯೂ ವಿಶೇಷವಾಗಿ ಚಳಿಗಾಲದಲ್ಲಿ ಅಭ್ಯಂಗ ಸ್ನಾನವನ್ನು ಮಾಡಿಕೊಳ್ಳಲೇಬೇಕು. ಚಳಿಗಾಲದಲ್ಲಿ ಇದನ್ನು ಮಾಡುವುದರಿಂದ ಆಗುವ ಲಾಭಗಳು ನೂರಾರು.
2. ವ್ಯಾಯಾಮ: ವ್ಯಾಯಾಮ ನಮ್ಮ ದಿನಚರಿಯ ಅವಿಭಾಜ್ಯ ಅಂಗ ಆಗಲೇಬೇಕು. ಇಲ್ಲದೇ ಹೋದರೆ ಒಂದಲ್ಲ ಒಂದು ದೈಹಿಕ ಸಮಸ್ಯೆ ಬಂದೇ ಬರುತ್ತದೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅದರಲ್ಲೂ ಚಳಿಗಾಲದಲ್ಲಿ ವ್ಯಾಯಾಮ ಮಾಡಲೇಬೇಕು ಎಂದು ಆಯುರ್ವೆದ ಹೇಳುತ್ತದೆ. ಇದರಿಂದ ದೇಹದ ಶಕ್ತಿ ಇನ್ನೂ ಚೆನ್ನಾಗಿ ಹೆಚ್ಚಲು ಸಾಧ್ಯವಾಗುತ್ತದೆ.
3. ಬಿಸಿಲ ಸ್ನಾನ: ಇತ್ತೀಚೆಗೆ ಬಹಳಷ್ಟು ಜನ ವಿಟಮಿನ್ ಡಿ ಯ ಕೊರತೆಯನ್ನು ಅನುಭವಿಸುತ್ತಿರುತ್ತಾರೆ. ಅದರಲ್ಲಿಯೂ ಚಳಿಗಾಲದಲ್ಲಿ ಈ ಸಮಸ್ಯೆ ಇನ್ನೂ ಹೆಚ್ಚು. ಹಾಗಾಗಿ ಚಳಿಗಾಲದಲ್ಲಿ ಕನಿಷ್ಠ 20 ನಿಮಿಷವಾದರೂ ಬಿಸಿಲಿಗೆ ಮೈಯ್ಯೊಡ್ಡುವ ರೂಢಿಯನ್ನು ಮಾಡಿಕೊಳ್ಳಬೇಕು. ಇದರಿಂದ ಮನಸ್ಸಿಗೆ ಸುಖದ ಅನುಭವವಾಗುವುದರ ಜೊತೆಗೆ ದೇಹದ ಆರೋಗ್ಯವೂ ಹೆಚ್ಚುತ್ತದೆ.
4. ನಿದ್ದೆ: ಚಳಿಗಾಲದಲ್ಲಿ ಸೂರ್ಯಾಸ್ತ ಬೇಗ ಆಗುವುದರಿಂದ ರಾತ್ರಿಯ ಊಟವನ್ನು ಎಷ್ಟು ಸಾಧ್ಯವೋ ಅಷ್ಟು ಬೇಗ ಮಾಡಿ. ರಾತ್ರಿ ತಡ ಮಾಡದೇ ಬೇಗ ನಿದ್ದೆ ಮಾಡಿ. ಬೆಳಿಗ್ಗೆ ಬೇಗ ಎದ್ದು ವ್ಯಾಯಾಮ ಮಾಡಬೇಕು. ಚಳಿಗಾಲದಲ್ಲಿ ಹಗಲು ನಿದ್ದೆಯನ್ನು ಮಾಡಲೇಬಾರದು. ಮಾಡಿದರೆ ಕಫಕ್ಕೆ ಸಂಬಂಧಿಸಿದ ಹಲವು ರೀತಿಯ ಕಾಯಿಲೆಗಳು ಬರಲು ಮತ್ತು ಮಧುಮೇಹ, ಬೊಜ್ಜಿನಂತಹ ತೊಂದರೆಗಳು ಹೆಚ್ಚಾಗಲು ಕಾರಣವಾಗುತ್ತದೆ.
5. ಕೊಬ್ಬು: ಕೊಬ್ಬು ಹೆಚ್ಚಿರುವ ಆಹಾರವನ್ನು ಜಾಸ್ತಿ ಸೇವಿಸಲು ಇದು ಸಕಾಲ. ಏಕೆಂದರೆ ನಮ್ಮ ಜೀರ್ಣಶಕ್ತಿ ಈ ಕಾಲದಲ್ಲಿ ತುಂಬಾ ಹೆಚ್ಚಾಗಿರುತ್ತದೆ. ಆದರೆ ಸೂರ್ಯಸ್ತವಾದ ನಂತರ ಯಾವುದೇ ರೀತಿಯಲ್ಲಿ ಜೀರ್ಣಕ್ಕೆ ಕಷ್ಟವಾದ ಆಹಾರ ಪದಾರ್ಥಗಳನ್ನು ಸೇವಿಸದೇ ಇರುವುದು ಒಳ್ಳೆಯದು. ಜೀರ್ಣಶಕ್ತಿ ಎಷ್ಟೇ ಹೆಚ್ಚಿದ್ದರೂ ಸಂಸ್ಕರಿಸಿದ ಆಹಾರಗಳು ಮತ್ತು ಅತಿಯಾಗಿ ಕರಿದ ಪದಾರ್ಥಗಳನ್ನು ಸೇವಿಸುವುದು ಸರಿಯಲ್ಲ. ಇದರಿಂದ ಕಫ ದೋಷದಲ್ಲಿ ವಿಕೃತಿಯಾಗಿ ವಿವಿಧ ರೀತಿಯ ತೊಂದರೆಗಳು ಖಂಡಿತ ಆಗುತ್ತವೆ.
6. ನೀರು: ತೇವಾಂಶದ ಕೊರತೆ ಇರುವ ಕಾರಣ ಚಳಿಗಾಲದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನೀರನ್ನು ಸೇವಿಸಬೇಕಾಗುತ್ತದೆ. ಕಫ, ಅಲರ್ಜಿಯಂತಹ ತೊಂದರೆಗಳನ್ನು ಅನುಭವಿಸುತ್ತಿರುವವರು ಬಿಸಿ ನೀರನ್ನು ಹೆಚ್ಚಾಗಿ ಸೇವಿಸಬೇಕು. ಜೀರಿಗೆ, ಶುಂಠಿ, ಕಾಳುಮೆಣಸು, ಧನಿಯಾ, ಕರಿಬೇವು, ಸೋಂಪು, ಲವಂಗ ಮುಂತಾದ ಸಾಂಬಾರ ಪದಾರ್ಥಗಳನ್ನು ಹಾಕಿ ಕಷಾಯ ಪುಡಿ ಮಾಡಿಟ್ಟುಕೊಂಡು ಅದನ್ನು ಬಿಸಿನೀರಿಗೆ ಹಾಕಿ ಸೇವಿಸುವುದು ಇನ್ನೂ ಒಳ್ಳೆಯದು.