

| ಆರ್.ತುಳಸಿಕುಮಾರ್ ಬೆಂಗಳೂರು
ಸಹಕಾರ ತತ್ವದಿಂದ ಯುವಜನರ ಸ್ವಾವಲಂಬಿ ಜೀವನಕ್ಕೆ ಪಾಂಚಜನ್ಯ ಊದುವ ಮೂಲಕ ನಿರುದ್ಯೋಗಿಗಳ ಕೈಗೆ ಕೆಲಸ ನೀಡುವ ಕಾಯಕ ಪಾಠ ತಿಳಿಸುವಲ್ಲಿ ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ (ಎಫ್ಪಿಒ) ನಿರತವಾಗಿದ್ದು, ರೂಪುಗೊಂಡ ಎರಡೇ ವರ್ಷದಲ್ಲಿ ಸಾಧನೆಯ ಮೆಟ್ಟಿಲು ಏರಿದೆ. ಪುತ್ತೂರಿನ ಸುತ್ತಲಿರುವ ಹತ್ತಾರು ಗ್ರಾಮಗಳಲ್ಲಿರುವ ಹಳ್ಳಿಹೈದರನ್ನು ಕೃಷಿಕರಾಗಲು ಪ್ರೇರೇಪಿಸಿದೆ. ಅಷ್ಟೇ ಅಲ್ಲ, ಆತ್ಮನಿರ್ಭರ ಭಾರತ ನಿರ್ವಣದ ಪರಿಕಲ್ಪನೆಯನ್ನು ಕಾರ್ಯರೂಪಕ್ಕಿಳಿಸಿ ನಿಜ ಅರ್ಥದಲ್ಲಿ ಗ್ರಾಮಾಭಿವೃದ್ಧಿಯಲ್ಲಿ ತೊಡಗಿಸಿಕೊಂಡಿದೆ.
50 ಲಕ್ಷ ರೂ. ವಹಿವಾಟು: ಕೃಷಿಯಲ್ಲಿ ಪರಾಗಸ್ಪರ್ಶಕ್ಕೆ ಮಹತ್ವದ ಸ್ಥಾನ ಇದೆ. ಜತೆಗೆ ಜೇನು ಕೃಷಿ ಕೈಗೊಂಡಲ್ಲಿ ಹೆಚ್ಚು ಲಾಭದಾಯಕ. ಆದರೆ, ದಕ್ಷಿಣಕನ್ನಡ ಜಿಲ್ಲೆಯಲ್ಲಿ ಸಿಗುವ ನೈಸರ್ಗಿಕ ಜೇನನ್ನು ಸದ್ಬಳಕೆ ಮಾಡಿಕೊಳ್ಳದೆ ವ್ಯರ್ಥವಾಗುತ್ತಿರುವುದನ್ನು ಅಲ್ಲಿಯ ಕೆಲ ಕೃಷಿಕರು ಗಮನಿಸಿ ಜೇನು ಕೃಷಿ ಸಂರಕ್ಷಣೆಗೆ ಪಣತೊಟ್ಟಿದ್ದು, ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ ಜನ್ಮತಾಳಲು ಕಾರಣವಾಯಿತು. ಆರಂಭದಲ್ಲಿ 100 ಮಂದಿ ಸೇರಿ ಸ್ವಂತ ಹಣ ಹೂಡಿ ಜೇನಿನಿಂದ ಉಪ ಉತ್ಪನ್ನಗಳನ್ನು ಮೌಲ್ಯವರ್ಧನೆಗೆ ಒಳಪಡಿಸಿದಾಗ ಕೈತುಂಬಾ ಹಣ ಸೇರಿತು. ಇದನ್ನು ಇನ್ನಿತರ ರೈತರಿಗೂ ತಿಳಿಹೇಳಿ ಅವರನ್ನೂ ಸಹಕಾರ ತತ್ವಕ್ಕೆ ಒಳಪಡಿಸಿದಾಗ ಪುತ್ತೂರು ಜತೆಗೆ ಸುಳ್ಯ, ಕಡಬ ತಾಲೂಕುಗಳಲ್ಲಿ 10 ಜೇನು ಕೃಷಿ ಕ್ಲಸ್ಟರ್ಗಳು ರಚನೆಗೊಂಡವು. ಸಂಸ್ಕರಿತ ಉತ್ಪನ್ನಗಳಿಗೆ ಬೇಡಿಕೆ ಹೆಚ್ಚಿದಂತೆಲ್ಲ ಎಫ್ಪಿಒ ವಹಿವಾಟು ಎರಡೇ ವರ್ಷದಲ್ಲಿ 50 ಲಕ್ಷ ರೂ. ಗಡಿ ದಾಟಿದೆ. ಈಗ ಕರ್ನಾಟಕದಾಚೆಗೂ ವ್ಯಾಪಾರ ಹಿಗ್ಗಿಸುವ ಯೋಜನೆ ರೂಪಿಸಲಾಗಿದೆ. ಸ್ಥಳೀಯ ಮಹಿಳೆಯರಿಗೆ ಹಲಸಿನ ಹಣ್ಣಿನ ಸಂಸ್ಕರಿತ ಉತ್ಪನ್ನಗಳಿಗೆ ಮಾರುಕಟ್ಟೆ ಕಲ್ಪಿಸಿಕೊಡಲಾಗಿದೆ ಎನ್ನುತ್ತಾರೆ ಗ್ರಾಮಜನ್ಯ ಪದಾಧಿಕಾರಿಗಳು.
ಪುತ್ತೂರು ಸುತ್ತಮುತ್ತಲಿನ ಪ್ರದೇಶದಲ್ಲಿ ಜೇನು ಕೃಷಿಗೆ ಹೇಳಿಮಾಡಿಸಿದ ವಾತಾವರಣ ಇದೆ. ಇದನ್ನು ಸ್ವಉದ್ಯೋಗವನ್ನಾಗಿ ಮಾರ್ಪಡಿಸಲು ಹಿರಿ-ಕಿರಿ ಕೃಷಿಕರು ಒಟ್ಟಾಗಿ ಎಫ್ಪಿಒ ರಚಿಸಿಕೊಂಡು ಜೇನು ಉತ್ಪನ್ನದ ಮೌಲ್ಯವರ್ಧನೆ ಮೂಲಕ ಡಜನ್ಗೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದೇವೆ. ಸದಸ್ಯ ಕೃಷಿಕರಿಗೆ ಹೆಚ್ಚಿನ ಲಾಭಾಂಶ ನೀಡುತ್ತಿರುವ ಕಾರಣ ನಮ್ಮ ಎಫ್ಪಿಒ ಯಶಸ್ವಿಯಾಗಿ ನಡೆಯುತ್ತಿದೆ. | ರಾಜೇಶ್ ಸುವರ್ಣ ಸಿಇಒ, ಗ್ರಾಮಜನ್ಯ ರೈತ ಉತ್ಪಾದಕ ಕಂಪನಿ
ಇದನ್ನೂ ಓದಿ: ಅಪಾರ್ಟ್ಮೆಂಟ್ನ 11ನೇ ಮಹಡಿಯಿಂದ ಕೆಳಕ್ಕೆ ಬಿದ್ದ ಯುವತಿ ಸ್ಥಳದಲ್ಲೇ ಸಾವು! ಪದವೀಧರರ ಕೈಹಿಡಿದ ಜೇನು ಕೃಷಿ: ಕೋವಿಡ್ ಸಂದರ್ಭದಲ್ಲಿ ಪುತ್ತೂರಿನ ಹಲವು ಮಂದಿ ಬೆಂಗಳೂರಿನಲ್ಲಿ ವಿವಿಧ ಉದ್ಯೋಗದಲ್ಲಿ ತೊಡಗಿಸಿಕೊಂಡಿದ್ದರು. ಸಾಂಕ್ರಾಮಿಕ ತೀವ್ರತೆ ಹಿನ್ನೆಲೆಯಲ್ಲಿ ಬಹುತೇಕ ಮಂದಿ ತವರಿಗೆ ವಾಪಸಾದರು. ಇವರಲ್ಲಿ ಹೆಚ್ಚಿನವರು ಎಫ್ಪಿಒ ಸೇರಿ ಉದ್ಯೋಗ ಕಂಡುಕೊಂಡರು. ಈಗ 60ಕ್ಕೂ ಹೆಚ್ಚು ಮಂದಿ ಜೇನು ಕೃಷಿಯಲ್ಲಿ ತೊಡಗಿಸಿಕೊಂಡು ಸ್ವಉದ್ಯೋಗದಲ್ಲಿ ಸಾರ್ಥಕ ಬದುಕು ಕಟ್ಟಿಕೊಂಡಿದ್ದಾರೆ. ಒಟ್ಟು ಸದಸ್ಯರಲ್ಲಿ ಶೇ.40 ಪದವೀಧರರಿದ್ದಾರೆ ಎನ್ನುತ್ತಾರೆ ಎಫ್ಪಿಒ ಸಿಇಒ ರಾಜೇಶ್.
ಇದನ್ನೂ ಓದಿ: ಒಂದೇ ಮನೆಯ ನಾಲ್ವರನ್ನು ಕೊಂದಿದ್ದ ಅಪ್ಪ-ಮಗನ ಬಂಧನ
ಕಾರ್ಖಾನೆ ಸ್ಥಾಪಿಸುವ ಗುರಿ: ಗ್ರಾಮಜನ್ಯ ಎಫ್ಪಿಒ ಯಶಸ್ವಿಯಾಗಿ ನಡೆಯುತ್ತಿರುವ ಕಾರಣ ಅತ್ಯಾಧುನಿಕ ಸಂಸ್ಕರಣಾ ಕೇಂದ್ರ ಸ್ಥಾಪಿಸುವತ್ತ ಚಿತ್ತ ಹರಿಸಿದೆ. ವ್ಯವಸ್ಥಿತವಾಗಿ ಉತ್ಪನ್ನಗಳನ್ನು ಗ್ರಾಹಕರಿಗೆ ತಲುಪಿಸಲು ಆನ್ಲೈನ್ ಮೂಲಕವೂ ಮಾರಾಟಕ್ಕೆ ಚಿಂತನೆ ನಡೆಸಿದೆ. ಜತೆಗೆ ರಾಜ್ಯದಲ್ಲೇ ಪ್ರಥಮ ಎನಿಸಿದ ಜೇನು ಕೃಷಿಯ ಪರಿಕರ, ಉಪಕರಣಗಳ ತಯಾರಿಕೆಯ ಯೋಜಿತ ಕಾರ್ಖಾನೆ ಸ್ಥಾಪಿಸುವ ಗುರಿ ಹೊಂದಿದೆ.