

ಯೋಗ್ಯತೆ ಇದ್ದವರಿಗೆಲ್ಲ ಯೋಗ ಇರುವುದಿಲ್ಲ.
ನಮ್ಮ ರಾಬಿನ್ ಉತ್ತಪ್ಪ ಕ್ರಿಕೆಟ್ ಜೀವನದ ಬಗ್ಗೆ ಅವಲೋಕಿಸುವಾಗ ಈ ಮಾತು ಎಷ್ಟು ನಿಜ ಅನ್ನಿಸಿಬಿಡುತ್ತದೆ.
ಕೇವಲ ಕನ್ನಡಿಗ ಎಂಬ ಅಭಿಮಾನದಿಂದ ಹೇಳುವುದಲ್ಲ. ಉತ್ತಪ್ಪ ನಿಜಕ್ಕೂ ಅದ್ಭುತ ಕ್ರಿಕೆಟಿಗ. ಅವರ ಬ್ಯಾಟಿಂಗ್ ನೋಡುವುದೇ ಚೆಂದ, ಸೊಗಸು.. ಕ್ರಿಕೆಟ್ ಮೈದಾನದಲ್ಲಿ ಚಿನಕುರಳಿ. ಸದಾ ಹಸನ್ಮುಖಿ. ಅಪಾರ ಆತ್ಮವಿಶ್ವಾಸದ ಆಟಗಾರ. ಎಂಥ ಸವಾಲುಗಳಿರಲಿ, ತಾವೇ ಮುಂದಾಗಿ ಮುನ್ನುಗ್ಗುವವರು. ಅಳುಕೆನ್ನುವುದು ಅವರ ಮುಖಭಾವದಲ್ಲಿರಲಿ, ಸನಿಹಕ್ಕೂ ಸುಳಿಯದು. ನಿಜಕ್ಕೂ ಭಾರತೀಯ ಕ್ರಿಕೆಟ್ನಲ್ಲಿ, ಭಾರತದ ಪರ ಕ್ರಿಕೆಟ್ನಲ್ಲಿ ದೊಡ್ಡ ಸಾಧನೆ ಮಾಡಬಲ್ಲ ಎಲ್ಲ ಯೋಗ್ಯತೆ ಇದ್ದಂಥ ಆಟಗಾರ. ಆದರೆ, ಯೋಗವೆನ್ನುವುದು ಅವರ ಹಣೆಯಲ್ಲಿ ಬರೆದಿರಲಿಲ್ಲ.
ಅದೇ ವಿಷಾದದಿಂದ ಉತ್ತಪ್ಪ ಮೊನ್ನೆ ಎಲ್ಲ ಬಗೆಯ ಕ್ರಿಕೆಟ್ನಿಂದ ನಿವೃತ್ತರಾದರು. ಅದೃಷ್ಟವೆನ್ನುವುದು ಸ್ವಲ್ಪ ಮಟ್ಟಿಗೆ ಕೈಹಿಡಿದಿದ್ದರೂ ಅವರು ವೃತ್ತಿಜೀವನದಲ್ಲಿ ಏನೆಲ್ಲ ಆಗಬಹುದಿತ್ತು? ಎಷ್ಟೆಲ್ಲ ಎತ್ತರಕ್ಕೇರಬಹುದಿತ್ತು? ಎಷ್ಟೊಂದು ಸಾಧನೆ ಮಾಡಬಹುದಿತ್ತು? ದಾಖಲೆಗಳ ಸರದಾರ ಅನ್ನಿಸಿಕೊಳ್ಳಬಹುದಿತ್ತು? ಅದ್ಯಾವುದೂ ಕೈಗೆಟುಕದ ನಿರಾಸೆಯಿಂದ, ಪಾಲಿಗೆ ಬಂದಿದ್ದೇ ಪಂಚಾಮೃತ ಎಂಬ ಅಲ್ಪತೃಪ್ತಿಯಿಂದ ಬದಿಗೆ ಸರಿದುಹೋದರು. ಅಪಾತ್ರರಿಗೆ ವಿಪರೀತ ಅವಕಾಶ ಕೊಡುವುದು, ಪಾತ್ರರಿಗೆ ಅವಕಾಶ ವಂಚನೆ ಮಾಡುವುದು ಎರಡೂ ದ್ರೋಹ. ಆದರೆ, ತಂಡ ಕ್ರೀಡೆಗಳಲ್ಲಿ ಯಾವಾಗಲೂ ಇಂಥ ಅನ್ಯಾಯಗಳು ಆಗುತ್ತಿರುತ್ತವೆ. ಕೆಲವೊಮ್ಮೆ ತಪು್ಪ ಗ್ರಹಿಕೆಗಳಿಂದ, ಹಲವೊಮ್ಮೆ ಅಧಿಕಾರಸ್ಥರ ಸ್ವಾರ್ಥಕಾರಣದಿಂದ ಕೆಲವರಿಗೆ ಪದೇಪದೇ ಅವಕಾಶ ದೊರಕುತ್ತಿರುತ್ತದೆ. ಕೆಲವರಿಗೆ ಸಾಮರ್ಥ್ಯ ನಿರೂಪಿಸುವುದಕ್ಕೆ ಸಣ್ಣಪುಟ್ಟ ಅವಕಾಶಗಳನ್ನೂ ನಿರಾಕರಿಸಲಾಗುತ್ತದೆ.
2007ರಲ್ಲಿ ಭಾರತ ಚೊಚ್ಚಲ ಟಿ20 ವಿಶ್ವಕಪ್ ಗೆದ್ದ ಐತಿಹಾಸಿಕ ಸಂದರ್ಭವನ್ನೊಮ್ಮೆ ನೆನಪಿಸಿಕೊಳ್ಳೋಣ. ಮಹೇಂದ್ರ ಸಿಂಗ್ ಧೋನಿ ಪ್ರಪ್ರಥಮ ಬಾರಿಗೆ ಪೂರ್ಣ ಪ್ರಮಾಣದ ನಾಯಕರಾಗಿ ರಂಗಪ್ರವೇಶ ಮಾಡಿದ್ದ ಟೂರ್ನಿ ಅದು. ಭಾರತ ಪಾಕಿಸ್ತಾನವನ್ನು ಒಮ್ಮೆ ಲೀಗ್ನಲ್ಲಿ ಹಾಗೂ ಮತ್ತೊಮ್ಮೆ ಫೈನಲ್ನಲ್ಲಿ ಭರ್ಜರಿಯಾಗಿ ಸೋಲಿಸಿ ಚಾಂಪಿಯನ್ ಪಟ್ಟಕ್ಕೇರಿತ್ತು. ಬೌಲ್ಔಟ್ನಲ್ಲಿ ಫಲಿತಾಂಶ ನಿರ್ಣಯವಾದ ಲೀಗ್ ಪಂದ್ಯದಲ್ಲಿ ಭಾರತದ ಗೆಲುವಿನ ರೂವಾರಿಯಾಗಿ ಹೊರಹೊಮ್ಮಿದ್ದು ನಮ್ಮ ರಾಬಿನ್ ಉತ್ತಪ್ಪ. ಆ ದಿನ ಭಾರತೀಯ ಬ್ಯಾಟಿಂಗ್ ಪರದಾಟದಲ್ಲಿದ್ದಾಗ ಅದ್ಭುತ ಆಟವಾಡಿ ಅರ್ಧ ಶತಕ ಬಾರಿಸಿದ್ದ ಉತ್ತಪ್ಪ, ಬಳಿಕ ಬೌಲ್ಔಟ್ನಲ್ಲೂ ವೀರೇಂದ್ರ ಸೆಹ್ವಾಗ್, ಹರ್ಭಜನ್ ಸಿಂಗ್ ಬಳಿಕ ಭಾರತದ ಪರ ಮೂರನೆಯವರಾಗಿ ಪಾಕಿಸ್ತಾನವನ್ನು ಬೌಲ್ಔಟ್ ಮಾಡಿ ಗೆಲುವು ತಂದುಕೊಟ್ಟಿದ್ದರು. ಆದರೆ, ಉತ್ತಪ್ಪ ವೃತ್ತಿಜೀವನದಲ್ಲಿ ಈ ಟ್ರೋಫಿ ಸಾಧನೆಯೇ ಮೊಟ್ಟ ಮೊದಲ ಹಾಗೂ ಕೊಟ್ಟಕೊನೆಯ ಮೇರುಸಾಧನೆಯಾಗಿ ಉಳಿದುಹೋಯಿತು.
2007ರ ಟಿ20 ವಿಶ್ವಕಪ್ ತಂಡದಲ್ಲಿದ್ದ ಹೆಚ್ಚಿನವರು ಭಾರತ 2011ರಲ್ಲಿ ಏಕದಿನ ವಿಶ್ವಕಪ್ ಗೆದ್ದಾಗಲೂ ತಂಡದಲ್ಲಿದ್ದರು. ಕೆಲವರು ಟೆಸ್ಟ್ ತಂಡದ ಭಾಗವಾಗಿಯೂ ಉನ್ನತ ಸಾಧನೆ ಮಾಡಿದರು. ಆದರೆ, ಉತ್ತಪ್ಪ 2007 ರಿಂದ 2011ರ ನಡುವೆ ನಾನಾ ಕಾರಣಗಳಿಗೆ ಅವಕಾಶವಂಚಿತರಾಗಿ ಮುಖ್ಯವಾಹಿನಿಯಿಂದ ಹೊರಗುಳಿದುಬಿಟ್ಟರು. ಸ್ಪೋಟಕ ಬ್ಯಾಟ್ಸ್ಮನ್, ಚುರುಕಿನ ಫೀಲ್ಡರ್, ಉಪಯುಕ್ತ ವಿಕೆಟ್ಕೀಪರ್ ಎಲ್ಲವೂ ಆಗಿದ್ದ ಉತ್ತಪ್ಪ ಆಧುನಿಕ ಕ್ರಿಕೆಟ್ ಬಯಸುವ ಸಮಗ್ರ ಪ್ಯಾಕೇಜ್ ಆಗಿದ್ದರೂ, ಟೀಮ್ ಇಂಡಿಯಾ ಅವರನ್ನು ಉಪೇಕ್ಷಿಸಿಬಿಟ್ಟಿತು.
ಉತ್ತಪ್ಪ ಕ್ರಿಕೆಟ್ನ ಮೂರೂ ಮಾದರಿಗೆ ಹೊಂದುವಂಥ, ಏಕಪ್ರಕಾರವಾಗಿ ಪ್ರಭಾವ ಬೀರುವಂಥ ವಿರಳ ತಳಿಯ ಬ್ಯಾಟ್ಸ್ಮನ್. ಯಾವುದೇ ಪಿಚ್ ಇರಲಿ, ಎಂಥ ಘಟಾನುಘಟಿ ಬೌಲರ್ಗಳೇ ಇರಲಿ, ನಿರ್ಭೀತ ಬ್ಯಾಟಿಂಗ್ ಮಾಡು ವುದು ಉತ್ತಪ್ಪ ಛಾತಿ. ಪಾಕಿಸ್ತಾನ, ಆಸ್ಟ್ರೇಲಿಯಾ ತಂಡವೇ ಇರಲಿ ಅಥವಾ ತಮಿಳುನಾಡು, ಮುಂಬೈನಂಥ ರಣಜಿ ಎದುರಾಳಿಗಳೇ ಆಗಲಿ ಉತ್ತಪ್ಪ ಬ್ಯಾಟಿಂಗ್ ಮಾಡುವಾಗ ಅದೇ ಆತ್ಮವಿಶ್ವಾಸ, ಲವಲವಿಕೆ. ಇಂಥ ಬ್ಯಾಟಿಂಗ್ ಶೈಲಿ ಅವರಿಗೆ ಸಿದ್ಧಿಸಿದ್ದು ತಾಂತ್ರಿಕ ನಿಪುಣತೆಯಿಂದ. ತಮ್ಮ ಆಟದಲ್ಲಿ, ಹೊಡೆತಗಾರಿಕೆಯಲ್ಲಿ ಪ್ರತೀ ಬಾರಿ ನಾವೀನ್ಯಕ್ಕೆ ತುಡಿಯುವ ಪ್ರಯೋಗಶೀಲತೆಯಿಂದ. ಟಿ20 ಕ್ರಿಕೆಟ್ನಲ್ಲಿ ಈಗಿನ ಆಟಗಾರರು ಪ್ರಯತ್ನಿಸುತ್ತಿರುವ ಅನೇಕ ಹೊಸ ಬಗೆಯ ಹೊಡೆತಗಳನ್ನು ಉತ್ತಪ್ಪ 2007, 08, 09ರಲ್ಲೇ ಪ್ರಯೋಗಿಸಿದ್ದರು. ಇಂಥ ಆಟಗಾರನಿಗೆ ಭಾರತ ತಂಡದಲ್ಲಿ ಕಾಯಂ ಆಟಗಾರನೆನಿಸುವ ಯೋಗ ಸಿಗಲಿಲ್ಲ ಎನ್ನುವುದೇ ದುರಂತ. ಇವತ್ತಿನ ದಿನಮಾನದಲ್ಲಿ ಚುರುಕಾಗಿ ರನ್ ಓಡುವ, ಹೊಡಿಬಡಿ ಬ್ಯಾಟ್ ಬೀಸುವ ಆಟಗಾರರು ಟಿ20 ಮಾದರಿಗೆ ಸೈ ಎಂದು ಬ್ರಾ್ಯಂಡ್ ಆಗಿಬಿಡುತ್ತಾರೆ. ಇಂಥ ಹೆಚ್ಚಿನ ಆಟಗಾರರಿಗೆ ದೀರ್ಘ ಇನಿಂಗ್ಸ್ ಆಡುವ ಛಾತಿಇರುವುದಿಲ್ಲ. ಆದರೆ, ರಾಬಿನ್ ಉತ್ತಪ್ಪ ಕ್ರಿಕೆಟ್ನ ಅವಶ್ಯಕತೆಗೆ ತಕ್ಕಂತೆ ಬ್ಯಾಟಿಂಗ್ ಶೈಲಿ ಬದಲಿಸಬಲ್ಲ ಕೌಶಲ ಹೊಂದಿದ್ದರು.
ಟಿ20ಯ ಸ್ಪೋಟಕತೆ, ಏಕದಿನಕ್ಕೆ ಬೇಕಾದ ಇನಿಂಗ್ಸ್ ಕಟ್ಟುವ ಶೈಲಿ, ಟೆಸ್ಟ್ ಮಾದರಿ ಬಯಸುವ ತಾಂತ್ರಿಕ ನೈಪುಣ್ಯ ಎಲ್ಲವೂ ಅವರಲ್ಲಿತ್ತು. ಆರಂಭಿಕ, ಮಧ್ಯಮ ಕ್ರಮಾಂಕ, ಫಿನಿಶರ್ ಹೀಗೆ ಯಾವ ಪಾತ್ರಕ್ಕೂ ಅವರು ಸೂಕ್ತರಿದ್ದರು. ಕನಿಷ್ಠ ಒಂದು ಟೆಸ್ಟ್ ಪಂದ್ಯದಲ್ಲಾದರೂ ಅವಕಾಶ ದೊರೆತಿದ್ದರೆ ಅವರ ಪ್ರತಿಭೆಗೆ ನ್ಯಾಯ ದೊರೆತಂತಾಗುತ್ತಿತ್ತು. ರಣಜಿ ಕ್ರಿಕೆಟ್ನಲ್ಲಿ ಕರ್ನಾಟಕದ ಪರ ದೊಡ್ಡ ದೊಡ್ಡ ಶತಕ ಬಾರಿಸಿರುವ, ಪ್ರಥಮ ದರ್ಜೆ ಹಾಗೂ ಸೀಮಿತ ಓವರ್ ಹಾಗೂ ಟಿ20 ಸೇರಿ ಒಟ್ಟಾರೆ 38 ಶತಕ, 127 ಅರ್ಧಶತಕ, 23 ಸಾವಿರಕ್ಕೂ ಅಧಿಕ ರನ್ ಬಾರಿಸಿರುವ ಉತ್ತಪ್ಪ ಟೀಮ್ ಇಂಡಿಯಾ ಪರ ಸೂಕ್ತ ಅವಕಾಶಗಳನ್ನೇ ಪಡೆಯಲಿಲ್ಲ.
ಓರ್ವ ಪ್ರತಿಭಾವಂತ ಆಟಗಾರ ಯಶಸ್ವಿ ಕ್ರಿಕೆಟಿಗನಾಗುವ ರೂಪಾಂತರ ಒಂದು ದಿನ, ಒಂದು ಇನಿಂಗ್ಸ್, ಒಂದು ಶತಕದಿಂದ ಆಗುವಂಥದ್ದಲ್ಲ. ಇದರಲ್ಲಿ ಆಟಗಾರನ ಪ್ರತಿಭೆ, ಸಾಮರ್ಥ್ಯದ ಜೊತೆಗೆ ಟೀಮ್ ಮ್ಯಾನೇಜ್ವೆುಂಟ್ನ ಬೆಂಬಲವೂ ದೊಡ್ಡ ಪಾತ್ರ ವಹಿಸುತ್ತದೆ. ದೊಡ್ಡ ಕನಸುಗಳನ್ನು ಕಟ್ಟಿಕೊಂಡು ಅವಕಾಶಗಳ ನಿರೀಕ್ಷೆಯಲ್ಲಿರುವ ಆಟಗಾರರು ಹತಾಶರಾಗದಂತೆ, ನೇಪಥ್ಯಕ್ಕೆ ಸರಿದುಹೋಗದಂತೆ ಸಂರಕ್ಷಿಸಿಕೊಳ್ಳುವ ಕೆಲಸ ಟೀಮ್ ಮ್ಯಾನೇಜ್ವೆುಂಟ್ಗಳಿಂದ ಆಗಬೇಕು. ಆದರೆ, ಭಾರತ ತಂಡದಲ್ಲಿ ರವೀಂದ್ರ ಜಡೇಜಾ, ಮುರಳಿ ವಿಜಯ್, ಸುರೇಶ್ ರೈನಾ, ಶಿಖರ್ ಧವನ್, ಕೇದಾರ್ ಜಾಧವ್, ಶ್ರೇಯಸ್ ಅಯ್ಯರ್, ಶುಭಮಾನ್ ಗಿಲ್ ಮೊದಲಾದ ಆಟಗಾರರಿಗೆ ಸಿಕ್ಕಷ್ಟು ಅವಕಾಶ ಉತ್ತಪ್ಪ, ಮನೀಷ್ ಪಾಂಡೆಯಂಥ ಆಟಗಾರರಿಗೆ ಯಾವತ್ತೂ ಸಿಗಲೇ ಇಲ್ಲ. ಕೆಲವೊಮ್ಮೆ ಆಟಗಾರರ ಪ್ರವರ್ಧಮಾನದ ಕಾಲಘಟ್ಟದ ಪೈಪೋಟಿಯೂ ಯೋಗ್ಯರಿಗೆ ಅವಕಾಶಗಳನ್ನು ನಿರಾಕರಿಸಿಬಿಡುತ್ತದೆ. ಉತ್ತಪ್ಪ 2006ರಲ್ಲೇ ಏಕದಿನ ಪದಾರ್ಪಣೆ ಮಾಡಿ ಗಮನ ಸೆಳೆದರೂ, ಸೂಪರ್ಸ್ಟಾರ್ಗಳಿಂದ ತುಂಬಿತುಳುಕುತ್ತಿದ್ದ ಭಾರತ ತಂಡದ ಆರಂಭಿಕ, ಮಧ್ಯಮ, ಕೆಳಕ್ರಮಾಂಕದಲ್ಲಿ ಎಲ್ಲೂ ಒಂದು ಕಾಯಂ ಸ್ಥಾನ ಸಂಪಾದಿಸಲು ವಿಫಲರಾದರು.
ಕೆಲವು ಆಟಗಾರರಿರುತ್ತಾರೆ... ಅವರು ಉತ್ತಮವಾಗಿ ಆಡಿದ ದಿನ ತಂಡಕ್ಕೆ ಗೆಲುವು ಗ್ಯಾರಂಟಿ. ಬೇಗನೆ ಔಟಾಗಿ ಹೋದಂಥ ಸಂದರ್ಭದಲ್ಲೂ ಅವರು ಕಳಪೆ ಆಟಕ್ಕೆ ಓವರ್ಗಳನ್ನು ವ್ಯರ್ಥ ಮಾಡಿರುವುದಿಲ್ಲ. ಒಂದಷ್ಟು ಇನಿಂಗ್ಸ್ಗಳಲ್ಲಿ ವಿಫಲರಾದರೆಂದು ಡ್ರಾಪ್ ಮಾಡಬಹುದಾದಂಥ ಆಟಗಾರರಲ್ಲ ಅವರು. ಆದರೆ, ಉತ್ತಪ್ಪ ಫಾಮ್ರ್ ಕಳೆದುಕೊಂಡಾಗ ಅವರಿಗೆ ರಾಜ್ಯ ತಂಡದಲ್ಲೂ ಬೆಂಬಲ ಸಿಗಲಿಲ್ಲ. ವಿರಾಟ್ ಕೊಹ್ಲಿ ಶತಕವಿಲ್ಲದೆ ಸಾವಿರ ದಿನ ಅಂತಾರಾಷ್ಟ್ರೀಯ ಕ್ರಿಕೆಟ್ ಆಡಿದರು. ಆದರೆ, ಎಲ್ಲರಿಗೂ ಇಂಥ ಅದೃಷ್ಟ, ಬೆಂಬಲ ಇರುವುದಿಲ್ಲ. ಉತ್ತಪ್ಪ- ವಿರಾಟ್ ಕೊಹ್ಲಿ ಹೋಲಿಕೆ ಸಮಂಜಸವಲ್ಲ ಎಂದು ಕೆಲವರು ಹೇಳಬಹುದು. ಆದರೆ, ಕರ್ನಾಟಕ ತಂಡಕ್ಕೆ ಉತ್ತಪ್ಪ ಕೊಡುಗೆ, ದೆಹಲಿ ರಣಜಿ ತಂಡಕ್ಕೆ ಕೊಹ್ಲಿ ನೀಡಿರುವ ಕೊಡುಗೆಗಿಂತ ಬಹಳ ದೊಡ್ಡದು. 2013-14 ಮತ್ತು 2014-15ರಲ್ಲಿ ಸತತ ಎರಡು ವರ್ಷ ಕರ್ನಾಟಕ ಒಟ್ಟೊಟ್ಟಿಗೆ ರಣಜಿ ಟ್ರೋಫಿ, ವಿಜಯ್ ಹಜಾರೆ ಟ್ರೋಫಿ, ಇರಾನಿ ಟ್ರೋಫಿಗಳ ತ್ರಿಬಲ್ ಸಾಧನೆ ಮಾಡಿದಾಗ ಉತ್ತಪ್ಪ ಪಾತ್ರ ಬಹಳ ಮಹತ್ವದ್ದು. ಆದರೆ, ಉತ್ತಪ್ಪಗೆ ಅಗತ್ಯವಿದ್ದಾಗ ರಾಜ್ಯ ತಂಡ ಅವರ ಬೆನ್ನಿಗೆ ನಿಲ್ಲಲಿಲ್ಲ. ಹದಿನೈದು ವರ್ಷ ಕಾಲ ರಾಜ್ಯ ರಣಜಿ ತಂಡದ ಭಾಗವಾಗಿದ್ದ, ಹಲವು ಯಶಸ್ವಿ ಅಭಿಯಾನಗಳ ಹಿಂದಿನ ಶಕ್ತಿಯಾಗಿದ್ದ ಉತ್ತಪ್ಪ ಕರ್ನಾಟಕವನ್ನು ತೊರೆದು ಅನ್ಯ ರಾಜ್ಯಕ್ಕೆ ವಲಸೆ ಹೋಗುವ ಪ್ರಸಂಗವೊಂದು ಬರುತ್ತದೆ ಎಂದು ಊಹೆ ಮಾಡುವುದೂ ಸಾಧ್ಯವಿರಲಿಲ್ಲ. ಆದರೆ, ಅದೂ ನಡೆದುಹೋಯಿತು. ಐಪಿಎಲ್ನಲ್ಲೂ ಆರ್ಸಿಬಿಯಂಥ ತವರಿನ ತಂಡದ ಬೆಂಬಲ ಸಿಗಲಿಲ್ಲ. 2014ರಲ್ಲಿ ಕೋಲ್ಕತ ನೈಟ್ರೈಡರ್ಸ್ ಪರ ಟ್ರೋಫಿ ಗೆದ್ದರೂ, ತಂಡದಿಂದ ತಂಡಕ್ಕೆ ಅಲೆದಾಟ ತಪ್ಪಲಿಲ್ಲ.
ಪಶ್ಚಾತ್ತಾಪ, ವಿಷಾದಗಳಿಲ್ಲದ ಜೀವನವೇ ಇಲ್ಲ. ಆ ರೀತಿ ಆಗಿದ್ದಿದ್ದರೆ, ಈ ರೀತಿ ಆಗದಿದ್ದಿದ್ದರೆ ಎಂಬ ಚಡಪಡಿಕೆಗಳು ಎಲ್ಲರ ಜೀವನದಲ್ಲೂ ಇರಲೇಬೇಕು. ಆದರೆ, ವಿಧಿಲಿಖಿತವೆನ್ನುವುದು ಪ್ರತಿಯೊಬ್ಬರ ಪಾಲಿನ ನಂಟು-ಗಂಟಿನ ತೂಕವನ್ನು ಇಷ್ಟೇ ಎಂದು ಅಳತೆ ಮಾಡಿ ಬರೆದುಬಿಟ್ಟಿರುತ್ತದೆ. ಉತ್ತಪ್ಪರಂಥ ಪ್ರತಿಭಾವಂತನಿಗೆ ಇನ್ನಷ್ಟು ಅವಕಾಶ ದೊರೆತಿದ್ದರೆ, ಇನ್ನೂ ಎಂಥೆಂಥ ಪ್ರತಾಪಗಳಿಗೆ ಸಾಕ್ಷಿಯಾಗಬಹುದಿತ್ತು ಎಂಬುದು ಕೊನೆಗೆ ಉಳಿದುಕೊಳ್ಳುವ ಕನವರಿಕೆಯಷ್ಟೇ. ಏಕೆಂದರೆ, ರಾಬಿನ್ ಉತ್ತಪ್ಪ ಯೋಗದಲ್ಲಿ ಬರೆದಿದ್ದು ಒಂದು ವಿಶ್ವಕಪ್ ಟ್ರೋಫಿ, ಎರಡು ಐಪಿಎಲ್ ಟ್ರೋಫಿ ಮಾತ್ರ. ಅದೇ ವಿಷಾದ, ದೊರೆತಷ್ಟೇ ಅವಕಾಶದಲ್ಲಿ ಅವರು ಅಭಿಮಾನಿಗಳಿಗೆ ತಂದುಕೊಟ್ಟ ಸಂತೋಷಕ್ಕೆ ತೃಪ್ತಿ ಪಟ್ಟುಕೊಂಡು ಮುಂದಿನ ಜೀವನದಲ್ಲಿ ಅವರಿಗೆ ಅವಕಾಶಗಳ ಹೆಬ್ಬಾಗಿಲು ತೆರೆಯಲಿ ಎಂದು ಆಶಿಸಬಹುದಷ್ಟೇ.
ಹರುಷವೊಂದೆ ಯಾರಿಗುಂಟು ಹೇಳು ಜಗದಲಿ
ಹೂವು ಮುಳ್ಳು ಎರಡು ಉಂಟು ಬಾಳ ಲತೆಯಲಿ
ವಿನೋದವಾಗಲಿ, ವಿಷಾದವಾಗಲಿ
ಅದೇನೇ ಬಂದರೂ ಅವನ ಕಾಣಿಕೆ (ಚಿ. ಉದಯಶಂಕರ್)
(ಲೇಖಕರು ‘ವಿಜಯವಾಣಿ’ ಡೆಪ್ಯೂಟಿ ಎಡಿಟರ್)