ತ್ಯಾಗ ಮತ್ತು ಸೇವೆ: ಮನೋಲ್ಲಾಸ ಅಂಕಣ..

Sacrifice
Published on

| ಡಾ.ವಿ.ಎಚ್.ಮೂಲಿಮನಿ

ಮಹಾಭಾರತದಲ್ಲಿ ಒಂದು ಕತೆ ಬರುತ್ತದೆ. ಧರ್ಮರಾಯ ಮಾಡಿದ ರಾಜಸೂಯ ಯಾಗವನ್ನು ಎಲ್ಲರೂ ಹೊಗಳುತ್ತಾರೆ. ಆಗ ಒಂದು ಅಳಿಲು ಬಂದು ಅಷ್ಟೊಂದು ಲಕ್ಷ ಜನ ಉಂಡು ಒಗೆದಿದ್ದ ಎಲೆಯ ಮೇಲೆ ಹೊರಳುತ್ತದೆ. ಏನೂ ವ್ಯತ್ಯಾಸವಾಗುವುದಿಲ್ಲ. ಏನು ಮಹಾಯಜ್ಞವೋ ಎಂದುಕೊಳ್ಳುತ್ತದೆ. ಇದು ಪಾಂಡವರ ಕಿವಿಗೆ ಬೀಳುತ್ತದೆ. ಧರ್ಮರಾಯ ಅದನ್ನು ಏತಕ್ಕೆ ಹಾಗೆಂದಿತೆಂದು ಕೇಳುತ್ತಾನೆ.

ಅಳಿಲು ತನ್ನ ಕತೆ ಹೇಳುತ್ತದೆ. ‘ಹಿಂದೆ ತಂದೆ- ತಾಯಿ, ಒಬ್ಬ ಚಿಕ್ಕಮಗ ಗುಡಿಸಲಿನಲ್ಲಿ ವಾಸಿಸುತ್ತಿದ್ದರು. ಅವರು ಬಹಳ ಬಡವರು. ಆದರೆ, ಮನಸ್ಸಿನಿಂದ ಬಡವರಲ್ಲ. ಒಂದು ದಿನ ಭಿಕ್ಷಾಟನೆಯಿಂದ ತಂದಿದ್ದ ಕಾಳಿನಿಂದ ರೊಟ್ಟಿಗಳನ್ನು ತಯಾರಿಸಿದರು. ಸರಿಯಾಗಿ ಮೂರು ರೊಟ್ಟಿಗಳಾದವು. ಇನ್ನೇನು ತಿನ್ನಬೇಕೆನ್ನುವಷ್ಟರಲ್ಲಿ ಹಸಿದ ಬೈರಾಗಿಯೊಬ್ಬ ಗುಡಿಸಲಿನ ಮುಂದೆ ಬಂದು ಭಿಕ್ಷೆಗಾಗಿ ಕೈ ಒಡ್ಡಿದ. ಮೊದಲು ಯಜಮಾನ ತನ್ನ ಭಾಗದ ರೊಟ್ಟಿಯನ್ನು ಕೊಟ್ಟ. ಅದು ಅವನ ಹಸಿವನ್ನು ತಣಿಸಲಿಲ್ಲ. ನಂತರ ಮನೆಯ ಒಡತಿಯೂ ತನ್ನ ರೊಟ್ಟಿ ಕೊಟ್ಟಳು. ಅದರಿಂದಲೂ ಅವನ ಹೊಟ್ಟೆ ತುಂಬಲಿಲ್ಲ. ಕಡೆಗೆ ಆ ಚಿಕ್ಕ ಹುಡುಗನೂ ತನ್ನ ರೊಟ್ಟಿ ಕೊಟ್ಟುಬಿಟ್ಟ. ಅದನ್ನು ತಿಂದ ಮೇಲೆ ಬೈರಾಗಿಗೆ ತೃಪ್ತಿಯಾಯ್ತು. ಆಶೀರ್ವದಿಸಿ ಹೊರಟ. ಅವನು ಉಂಡ ಎಲೆಯನ್ನು ಹೊರಗೆ ಹಾಕಿ ಮೂವರೂ ನೀರು ಕುಡಿದು ಮಲಗಿದರು. ಬೆಳಗ್ಗೆ ಮೂವರೂ ಸ್ವರ್ಗ ಸೇರಿದ್ದರು. ಅಲ್ಲಿ ಎಸೆದಿದ್ದ ಎಂಜಲೆಲೆಯ ಮೇಲೆ ಕೊಂಚ ಹಿಟ್ಟು ಮೆತ್ತಿಕೊಂಡಿತ್ತು. ಅದರ ಮೇಲೆ ನಾನು ಹೊರಳಿದೆ. ನನ್ನ ಶರೀರವೆಲ್ಲಾ ಚಿನ್ನವಾಯಿತು. ಆದರೆ, ನನ್ನ ಬಾಲವೊಂದು ಹಾಗೆಯೇ ಉಳಿಯಿತು.

ಅಲ್ಲಿಂದ ಮುಂದೆ ಅನೇಕ ಯಜ್ಞ ಯಾಗಗಳು ನಡೆದಾಗಲೆಲ್ಲ ಹೋಗಿ ಎಂಜಲೆಲೆಯ ಮೇಲೆ ಹೊರಳಿದೆ. ಉಳಿದ ಬಾಲ ಮತ್ತೆ ಚಿನ್ನವಾಗಲೇ ಇಲ್ಲ. ಧರ್ಮರಾಯನ ಯಜ್ಞದ ಪ್ರಸಿದ್ಧಿಯನ್ನು ಕೇಳಿ ಇಲ್ಲಿ ಬಂದರೂ ನನ್ನ ಒಂದು ರೋಮವೂ ಹೊಂಬಣ್ಣಕ್ಕೆ ತಿರುಗಲಿಲ್ಲ. ಹೀಗಾಗಿ ಇದೇನು ಮಹಾಯಜ್ಞವೆಂದು ಭಾವನೆ’ ಎಂದಿತು. ಧರ್ಮರಾಯನ ಅಹಂ ಇಳಿದು ಬೆಕ್ಕಸಬೆರಗಾಗಿ ನಿಂತ. ಧರ್ಮರಾಯನ ಯಾಗವು ತಪಸ್ವಿಯ ಅತಿಥಿಸೇವೆಗೆ ಹೇಗೆ ಸರಿಯಾದೀತು? ಆ ತಪಸ್ವಿಯಂತೆ ದಾನ ಮಾಡುವುದು ನಮ್ಮ ಧ್ಯೇಯವಾಗಿರಬೇಕು. ಜಗತ್ತಿನ ಕಲ್ಯಾಣಕ್ಕಾಗಿ ದಧೀಚಿ ಋಷಿಯು ತನ್ನ ಬೆನ್ನೆಲುಬನ್ನೇ ತೆಗೆದು ದೇವತೆಗಳಿಗೆ ನೀಡಿದ. ಜಗತ್ತಿನ ಕಲ್ಯಾಣಕ್ಕಾಗಿಯೇ ಶಂಕರನು ವಿಷವನ್ನು ಸೇವಿಸಿದ. ನಮ್ಮ ಎಲ್ಲ ಋಷಿ-ಮುನಿಗಳು, ದೇವ-ದೇವತೆಯರು ಪರೋಪಕಾರದ ಸಂದೇಶ ನೀಡಿರುವರು.

ಮಹಾಕವಿ ಭಾಸ ಒಂದು ಮಾತು ಹೇಳುತ್ತಾನೆ - ‘ಕಲಿತ ವಿದ್ಯೆ ಕಾಲಾಂತರದಲ್ಲಿ ಮರೆತುಹೋಗುತ್ತದೆ. ಆಳವಾದ ಬೇರುಳ್ಳ ಮರವೂ ಒಂದು ದಿನ ಉರುಳುತ್ತದೆ. ನದಿ-ಕೊಳಗಳ ನೀರೂ ಬತ್ತಿ ಹೋಗುತ್ತದೆ. ಆದರೆ, ಮಾನವನು ಮಾಡಿದ ದಾನ, ಹೋಮ-ನೇಮಗಳು ಮಾತ್ರ ಬೆನ್ನಿಗೆ ಬರುತ್ತವೆ.’ ತ್ಯಾಗವು ನಮ್ಮ ಜೀವನದ ಅವಿಭಾಜ್ಯ ಅಂಗವಾಗಬೇಕು.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net