ಹಕ್ಕು ಪತ್ರ ನೋಂದಣಿ ಆಗದಿದ್ದರೆ ಆಸ್ತಿ ಪರಭಾರೆಗೆ ತೊಂದರೆಯಾಗುತ್ತದೆಯೆ?

NYAYA
Published on
ನಮ್ಮ ಅಜ್ಜಿಗೆ ಅವರ ತಂದೆಯಿಂದ ಜಮೀನು ಬಂದಿತ್ತು. ನಮ್ಮ ಅಜ್ಜಿ 2010ರಲ್ಲಿ ತೀರಿಕೊಂಡರು. ಅವರಿಗೆ ನಮ್ಮ ತಾಯಿ ಒಬ್ಬಳೇ ಹೆಣ್ಣು ಮಗಳು ಮತ್ತು ಇಬ್ಬರು ಗಂಡು ಮಕ್ಕಳು. ನಂತರ ನಮ್ಮ ತಾಯಿಯ ಅಣ್ಣಂದಿರು ಆ ಜಮೀನನ್ನು ನಮ್ಮ ತಾಯಿಯ ಹೆಸರಿಗೇ ಖಾತೆ ಮಾಡಿಸಿದ್ದಾರೆ. ಇದಕ್ಕೆ ಒಂದು ಸಾವಿರ ರೂಗಳ ಮುದ್ರಾಂಕದ ಹಕ್ಕು ಬಿಟ್ಟ ಪತ್ರ ಮಾಡಿಕೊಟ್ಟಿದ್ದಾರೆ. ಆದರೆ ಈ ಹಕ್ಕು ಬಿಟ್ಟ ಪತ್ರ ನೋಂದಣಿ ಆಗಿಲ್ಲ. ಇದರಿಂದ ಮುಂದೆ ಆಸ್ತಿ ಪರಭಾರೆ ಮಾಡಲು ಬ್ಯಾಂಕಿನಲ್ಲಿ ಸಾಲ ಇತ್ಯಾದಿ ಮಾಡಲು ತೊಂದರೆ ಇದೆಯೇ? ಇದಕ್ಕೆ ಇರುವ ಸೂಕ್ತ ಮಾರ್ಗವೇನು ?

ಉತ್ತರ: ನೂರು ರೂಪಾಯಿಗಿಂತ ಹೆಚ್ಚಿನ ಮೌಲ್ಯದ ಸ್ಥಿರಾಸ್ತಿಯಲ್ಲಿ ಹಕ್ಕು ಬಿಡುಗಡೆ ಮಾಡುವುದಾದರೆ, ಅದಕ್ಕೆ ಸಂಬಂಧಿಸಿದ ಪತ್ರ ನೋಂದಣಿಯಾಗಲೇಬೇಕು. ಇಲ್ಲವಾದಲ್ಲಿ ಆ ಪತ್ರ ಸಿಂಧುವಾಗುವುದಿಲ್ಲ. ನಿಮ್ಮ ಸೋದರ ಮಾವಂದಿರ ತಲಾ ಮೂರನೇ ಒಂದು ಭಾಗದ ಹಕ್ಕು ಹಾಗೇ ಉಳಿದಿರುತ್ತದೆ. ಅವರಾಗಲೀ, ಅವರ ಮಕ್ಕಳಾಗಲೀ ಯಾವಾಗಲಾದರೂ ತಮ್ಮ ಹಕ್ಕನ್ನು ಕೇಳಬಹುದು. ಮೇಲಾಗಿ ನಿಮ್ಮ ತಾಯಿಗೇ ಸಂಪೂರ್ಣ ಹಕ್ಕು ಬಂದಿರುವುದಿಲ್ಲ. ಹೀಗಾಗಿ ಕೂಡಲೇ ನಿಮ್ಮ ತಾಯಿ ಅವರ ಅಣ್ಣಂದಿರನ್ನು ಕರೆಯಿಸಿ ನೋಂದಾಯಿತ ಹಕ್ಕು ಬಿಡುಗಡೆ ಪತ್ರ ಮಾಡಿಸಿಕೊಳ್ಳುವುದು ಒಳ್ಳೆಯದು. ಖಾತೆ ಪಹಣಿ ನಿಮ್ಮ ತಾಯಿಯ ಹೆಸರಿನಲ್ಲಿ ಆಗಿರುವ ಮಾತ್ರಕ್ಕೆ ನಿಮ್ಮ ತಾಯಿಯೇ ಸಂಪೂರ್ಣ ಆಸ್ತಿಯ ಮಾಲೀಕಳು ಆಗುವುದಿಲ್ಲ.

(ನ್ಯಾಯದೇವತೆ ಅಂಕಣದ ಹಿಂದಿನ ಪ್ರಶ್ನೋತ್ತರಗಳನ್ನು ನೋಡಲು vijayavani.net ಕ್ಲಿಕ್ಕಿಸಿ. ಅಲ್ಲಿ ಅಂಕಣ ಕಾಲಮ್‌ನಲ್ಲಿ ನ್ಯಾಯದೇವತೆ ಎಂದು ಇದ್ದು ಅದರ ಮೇಲೆ ಕ್ಲಿಕ್‌ ಮಾಡಿದರೆ ಎಲ್ಲವೂ ಲಭ್ಯ.)

ಸೂಚನೆ: ಕಾನೂನಿಗೆ ಸಂಬಂಧಿಸಿದ ನಿಮ್ಮ ಪ್ರಶ್ನೆಗಳನ್ನು susheelasarathi@yahoo.co.in ಅಥವಾ lalitha.vijayavani@gmail.com ಗೆ ಕಳುಹಿಸಬಹುದು. (ಕೋರ್ಟ್‌ಗಳಲ್ಲಿ ಇತ್ಯರ್ಥಕ್ಕೆ  ಬಾಕಿ ಇರುವ ಪ್ರಕರಣಗಳಿಗೆ ಸಂಬಂಧಿಸಿದ ಪ್ರಶ್ನೆಗಳನ್ನು ದಯವಿಟ್ಟು ಕೇಳಬೇಡಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net