ಮನೆ ರಿಪೇರಿ ಕೆಲ್ಸ ಮಾತ್ರ ಯಾರಿಗೂ ಬೇಡ್ರಪ್ಪ- ಶೌಚಗೃಹ ಕೆಡವಿ ಅರ್ಧಕ್ಕೆ ಕೈಬಿಟ್ರೆ ಹೇಗಾಗಿರ್ಬೇಡ ನಮ್‌ ಸ್ಥಿತಿ?

manekattinodu
Published on

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್‌…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ…

| ಶಿವಮೊಗ್ಗ ರಮೇಶ್​, ಮೈಸೂರು

ಮನೆಯನ್ನೇನೋ ಕಟ್ಟಿಸಿಬಿಡಬಹುದು. ಆದರೆ ಮನೆಯಲ್ಲಿದ್ದುಕೊಂಡೇ ಅದರ ರಿಪೇರಿ ಕೆಲಸ ಮಾತ್ರ... ಅಬ್ಬಾ... ಅದನ್ನು ಅನುಭವಿಸಿಯೇ ತಿಳಿಯಬೇಕು. ಶಿವಮೊಗ್ಗದಲ್ಲಿರುವ ನನ್ನ ತಂದೆಯ 75 ವರ್ಷ ಹಳೆಯ ಮನೆ ಶೌಚಗೃಹ ಯಾವ ಣದಲ್ಲೂ ಕುಸಿದು ಬೀಳುವ ಹಂತದಲ್ಲಿತ್ತು. ಅದನ್ನು ಕೆಡವಿ ಪೂರ್ಣ ಹೊಸದಾಗಿ ಕಟ್ಟಿಸೋಣವೆಂದು ಒಬ್ಬ ಕಂಟ್ರಾಕ್ಟರ್​ ಜತೆ ಮಾತುಕತೆಯಾಗಿ ಕೆಲಸಕ್ಕೆ ಕೈ ಹಾಕಿದೆ.

"15-20 ದಿನಗಳಲ್ಲಿ ಕೆಲಸ ಪೂರ್ಣವಾಗುತ್ತದೆ' ಎಂದು ಆಶ್ವಾಸನೆ ಕೊಟ್ಟರು. ಅಷ್ಟು ದಿನ ಶೌಚಕ್ಕೆ ಎಲ್ಲಿ ಹೋಗುವುದು? ಮುಜುಗರ ಶುರುವಾಯಿತು. ಅದನ್ನು ಹೇಗೋ ಸಂಭಾಳಿಸುವಷ್ಟರಲ್ಲಿ ಕಂಟ್ರಾಕ್ಟರ್​ ಶೌಚಾಲಯದ ಅರ್ಧ ಕೆಲಸ ಮುಗಿಸಿದ್ದ. "ಅಡುಗೆಮನೆ, ದೇವರಕೋಣೆ ಕೆಲಸವನ್ನೂ ಇದರ ಜತೆಗೇ ಮುಗಿಸಿಬಿಡಿ ಸಾರ್​. ಒಂದೂವರೆ ತಿಂಗಳಲ್ಲಿ ಮುಗಿಸಿಬಿಡೋಣ' ಎಂದು ಹೇಳಿ ಅದಕ್ಕೂ ಕೈಹಾಕಿದ.

ಶೌಚದ ಸಮಸ್ಯೆ ಕಾಡುತ್ತಿರುವ ಮಧ್ಯೆಯೇ ಅಡುಗೆ ಎಲ್ಲಿ ಮಾಡುವುದು ಎಂಬ ಪ್ರಶ್ನೆ ಧುತ್ತನೆ ಎದುರಿಗೆ ನಿಂತಿತು. ಒಂದು ಕಡೆ ಇಡೀ ಮನೆ ಧೂಳುಮಯ. ಈ ಚಿಂತೆ ಸಾಲದು ಎಂಬಂತೆ ಕರೊನಾ ಕಾಟ ಶುರುವಾಯಿತು. ಮನೆ ರಿಪೇರಿ ಕೆಲಸ ವೇಗ ಕಳೆದುಕೊಂಡಿತು. ಲಾಕ್​ಡೌನ್​ ೂಷಣೆಯಾಗಿದ್ದರಿಂದ ಕೆಲಸಗಾರರು ಸರಿಯಾಗಿ ಕೆಲಸಕ್ಕೇ ಬರುತ್ತಿರಲಿಲ್ಲ. ಅಂಗಡಿಗಳು ಮುಚ್ಚಿದ್ದರಿಂದ ಅಗತ್ಯ ವಸ್ತುಗಳೂ ಸಿಗುತ್ತಿರಲಿಲ್ಲ. ಒಂದೂವರೆ ತಿಂಗಳಿನಲ್ಲಿ ಕೆಲಸ ಮುಗಿಸಿ ಕೊಡುವುದಾಗಿ ಹೇಳಿದ್ದ ಕಂಟ್ರಾಕ್ಟರ್​, ಮನೆಯ ರಿಪೇರಿ ಕೆಲಸ ಮುಗಿಸಲು 5 ತಿಂಗಳು ತೆಗೆದುಕೊಂಡ. ಅಷ್ಟೊತ್ತಿಗೆ ನಾನು ಹೈರಾಣಾಗಿ ಹೋಗಿದ್ದೆ. ಯಾಕಾದರೂ ರಿಪೇರಿ ಕೆಲಸಕ್ಕೆ ಕೈಹಾಕಿದೆನೋ ಎಂದು ಗೊಣಗಾಡಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net