

ಮನೆ ಕಟ್ಟುವವರ ಬಹುತೇಕ ಮಂದಿಯ ಕಷ್ಟ ದೇವರಿಗೇ ಪ್ರೀತಿ. ಒಬ್ಬೊಬ್ಬರದ್ದು ಒಂದೊಂದು ತೆರನಾದ ಎಕ್ಸ್‌ಪೀರಿಯನ್ಸ್…. ಅದಕ್ಕೇ ತಾನೆ ಮನೆ ಕಟ್ಟಿನೋಡು, ಮದುವೆ ಮಾಡಿ ನೋಡು ಎನ್ನುವುದು… ಹೀಗೆ ಮನೆ ಕಟ್ಟಿರುವವರ ಅನುಭವಗಳನ್ನು ಹಂಚಿಕೊಳ್ಳುವಂತೆ ವಿಜಯವಾಣಿ ನೀಡಿದ ಕರೆಗೆ ಬಂದಿದ್ದ ಪತ್ರಗಳ ಪೈಕಿ ಆಯ್ದ ಕೆಲವು ಪತ್ರಗಳನ್ನು ಇಲ್ಲಿ ದಿನವೂ ಪ್ರಕಟಿಸಲಾಗುತ್ತಿದೆ….
| ಕೆ.ಪಿ. ಸದಾಶಿವ ಭಟ್, ಮಂಗಳೂರು
46 ವರ್ಷಗಳ ಹಿಂದಿನ ಕಥೆಯಿದು. ಬಾಡಿಗೆ ಮನೆಯಲ್ಲಿದ್ದು ಅನುಭವಿಸಿದ ಕಿರುಕುಳಗಳಿಂದ ನನಗೂ ಸ್ವಂತ ಮನೆಯ ಕನಸು ಮನದಲ್ಲಿ ಮೂಡಿತ್ತು. ಅದೇ ಸಮಯಕ್ಕೆ ಹತ್ತಿರದಲ್ಲೆ ಎಂಟು ಸೆಂಟ್ಸ್ ಜಾಗ ಮಾರಾಟಕ್ಕಿತ್ತು. ಇದ್ದಬದ್ದ ಹಣ, ಚಿನ್ನ ಉಪಯೋಗಿಸಿಕೊಂಡು ಜಾಗವನ್ನೇನೋ ಖರೀದಿಸಿದೆ. ಮನೆ ಕಟ್ಟಲು ಅಗತ್ಯವಾಗಿದ್ದ ಮನೆಯ ನೀಲನೆ, ಅಂದಾಜು ವೆಚ್ಚಗಳನ್ನು ಮಾಡಿಸಿ, ಪ್ರಾರಂಭಿಕ ಪ್ರಮಾಣ ಪತ್ರಕ್ಕಾಗಿ ಪ್ರಾಧಿಕಾರಕ್ಕೆ ಅಜಿರ್ ಗುಜರಾಯಿಸಿದೆ. ಅವರು ಬರಹೇಳಿದಾಗಲೆಲ್ಲಾ ಅಲೆದರೂ ಕೆಲಸ ಆಗಲಿಲ್ಲ.
ಅಲ್ಲಿ ಯಾರಿಗೋ ಹಣ ಕೊಟ್ಟರೆ ಬೇಗನೆ ಪ್ರಮಾಣಪತ್ರ ದೊರಕುತ್ತೆ ಎಂಬ ಮಾಹಿತಿ ಸಿಕ್ಕಿತು. ದೇವರೇ! ಅಲ್ಲಿ ಎಷ್ಟು ಜನರಿಗೆ ಕೊಡಬೇಕೋ, ಏನು ಕಥೆಯೋ? ಮದುವೆಯ ಹಣ ಚಪ್ಪರಕ್ಕೇ ಆಯಿತು ಎಂಬ ಗಾದೆಯಂತೆ ಮೇಜಿಂದ ಮೇಜಿಗೆ ಹಣ ಕೊಡುತ್ತಾ ಹೋದರೆ, ಮನೆ ಕಟ್ಟಿದಂತೆಯೇ! ನೇರವಾಗಿ ಕಮಿಷನರ್ ಬಳಿಗೇ ಹೋಗಿ, ಎಲ್ಲಾ ವಿಷಯ ವಿವರಿಸಿ, "ನನ್ನ ಕೆಲಸ ಆಗಬೇಕಾದರೆ ಇಲ್ಲಿ ಯಾರಿಗೋ ಹಣ ಕೊಡಬೇಕಂತೆ, ನಾನೊಬ್ಬ ಶಾಲಾ ಶಿಕ. ಸಾಲ ಮಾಡಿ, ಚಿಕ್ಕದೊಂದು ಮನೆ ಕಟ್ಟಿಸಬೇಕೆಂದಿದ್ದೇನೆ. ನಾನೀಗ ಏನು ಮಾಡಬೇಕು? ಯಾರಿಗೆ ಹಣ ಕೊಡಬೇಕು? ನೀವೇ ಹೇಳಿ' ಎಂದೆ. ನನ್ನ ಮಾತು ಕೇಳಿ, ಗಲಿಬಿಲಿಗೊಂಡ ಅವರು "ನೀವೀಗ ಹೋಗಿ, ನಾನೀಗಲೇ ಬರುತ್ತೇನೆ' ಎಂದವರೇ ಜೀಪು ಹತ್ತಿ, ಸ್ಥಳಕ್ಕೆ ಆಗಮಿಸಿ ಪರಾಮರ್ಶಿಸಿ, ಆರಂಭಿಕ ಪ್ರಮಾಣಪತ್ರ ಬರೆದು ಕೊಟ್ಟು, ನೀವಿನ್ನು ಯಾವುದೇ ತೊಂದರೆಯಿಲ್ಲದೆ ಮನೆ ಕಟ್ಟಿಸಬಹುದು ಎಂದರು. ಆನಂತರದ ಪರವಾನಗಿ ಪಡೆಯಲು ಮುನಿಸಿಪಲ್ ಕಾರ್ಪೊರೇಷನ್ನಲ್ಲಿ ಓಡಾಡಿ ಸಾಕಾಯಿತು. ಅಲ್ಲಿಯೂ ಇದೇ ಸಮಸ್ಯೆ.
ಆ ಹೊತ್ತಿಗಾಗಲೇ ತಾಳ್ಮೆ ತಪ್ಪಿ, ರೋಷದಿಂದ ಹಾಗೇ ಆಗಲಿ ಎಂದು ಹೇಳಿ, ರಭಸದಿಂದ ಹೊರ ನಡೆದೆ. ಅವರಿಗೇನನ್ನಿಸಿತೋ ಏನೋ, ಹಿಂದೆಯೇ ಕರೆ ಕಳಿಸಿ ಕೂರಿಸಿ, ಸಂಬಂಧಿತ ಗುಮಾಸ್ತರನ್ನು ಕರೆದು, ಪರವಾನಗಿ ಕೊಡುವಂತೆ ಹೇಳಿದರು. ಮರುದಿನವೇ ಪರವಾನಗಿ ದೊರಕಿತು. ನಂತರದ ಕೆಲಸಗಳೆಲ್ಲಾ ಸರಾಗವಾಗಿ ನಡೆದು, ಸ್ವಂತದ್ದಾದ ಪುಟ್ಟ ಮನೆಯೊಂದು ತಲೆಯೆತ್ತಿದಾಗ, ಅದುವರೆಗೂ ನಾನು ಪಟ್ಟಿದ್ದ ಕಷ್ಟ, ಅನುಭವಿಸಿದ್ದ ಮಾನಸಿಕ ತುಮುಲಗಳೆಲ್ಲ ಕೊನೆಗೊಂಡು ಹೃದಯ ತುಂಬಿ ಬಂದಿತ್ತು.