ಸಂಸ್ಕೃತಿಯಿಂದಲೇ ಸಮಸ್ಯೆಗಳ ನಿವೃತ್ತಿ

Culture
Published on
ಭಾರತೀಯ ಸಂಸ್ಕೃತಿಯಲ್ಲಿ ಸಂತ, ಅವತಾರಪುರುಷ, ತ್ಯಾಗಿ, ಸಂನ್ಯಾಸಿ ಸಮಾಜದ ಆದರ್ಶಪ್ರಾಯರಾಗಿದ್ದಾರೆಯೇ ಹೊರತು ಕೇವಲ ಅಧಿಕಾರ, ಶ್ರೀಮಂತಿಕೆ ಅಷ್ಟೇಕೆ ವಿದ್ವತ್ತಿಗೆ ಹೆಸರಾದ ವ್ಯಕ್ತಿ ಈ ಸಾಲಿನಲ್ಲಿ ನಿಲ್ಲಲಿಲ್ಲ. ಮನಸ್ಸಿಗೆ ಪ್ರಿಯವಾದದ್ದೆಲ್ಲಾ ಶ್ರೇಯಸ್ಕರವಲ್ಲ ಮತ್ತು ಶ್ರೇಯಸ್ಕರವಾದದ್ದೆಲ್ಲಾ ಪ್ರಿಯವಾಗಿರಬೇಕೆಂತಲೂ ಇಲ್ಲ ಎಂಬ ಎಚ್ಚರಿಕೆಯನ್ನು ಕಠೋಪನಿಷತ್ ಸಾರಿದೆ.

ಇಪ್ಪತ್ತನೇ ಶತಮಾನದ ಮಹಾನ್ ಯುರೋಪಿಯನ್ ಚಿಂತಕರಲ್ಲೊಬ್ಬರಾದ, History of Indian Philosophy ಎಂಬ ಐದು ಸಂಪುಟಗಳಲ್ಲಿ ಭಾರತೀಯ ತತ್ವಶಾಸ್ತ್ರವನ್ನು ಜಗತ್ತಿಗೆ ಪರಿಚಯಿಸಿದ ಮರ್ಸಿಯಾ ಎಲಿಯೋಡ್ ಅವರು ಭಾರತೀಯ ಯೋಗದ ಬಗ್ಗೆ ಪ್ರಸ್ತಾಪಿಸುತ್ತಾ, ಬೇರೆಲ್ಲಿಯೂ ಕಾಣಿಸದ ಶ್ರದ್ಧೆ ಮತ್ತು ಆಸ್ಥೆಗಳಿಂದ ಭಾರತವು ಮನುಷ್ಯನ ವಿವಿಧ ಹಂತಗಳ ಬೆಳವಣಿಗೆ, ಉದ್ಧಾರ-ಪರಿಪೂರ್ಣತೆಗಳ ಅಧ್ಯಯನ ಮತ್ತು ಅನುಷ್ಠಾನಕ್ಕಾಗಿ ತನ್ನನ್ನು ಸಮರ್ಪಿಸಿಕೊಂಡಿದೆ ಎಂದು ಹೇಳುತ್ತಾರೆ. ಈ ಭಾವನೆಯನ್ನೇ ವಿವೇಕಾನಂದರು ಅದೆಷ್ಟು ಸಲ ಅದೆಷ್ಟು ರೀತಿಯಲ್ಲಿ ವ್ಯಕ್ತಪಡಿಸಿದರೋ! ಅದೆಷ್ಟು ದೈತ್ಯ ಪ್ರತಿಭೆಗಳು ಮತ್ತು ತಪೋನಿರತರು ಇದಕ್ಕಾಗಿ ಜೀವನವನ್ನೇ ಮುಡಿಪಾಗಿಟ್ಟರು ಎಂಬುದನ್ನು ಉಪನಿಷತ್ತುಗಳ ಮೇಲಿನ ಸ್ವಾಮಿ ರಂಗನಾಥಾನಂದಜೀಯವರ ಲೇಖನಗಳು ಹಾಗೂ ಪುಸ್ತಕಗಳನ್ನು ನೋಡಿದರೆ ತಿಳಿದೀತು. ಈ ವಿಸõತ ತತ್ವಗಳನ್ನು ನಾವು ಉಪನಿಷತ್ತುಗಳಲ್ಲಿ ಕಂಡರೆ ಅವುಗಳ ಪ್ರಾಯೋಗಿಕ ಅನುಷ್ಠಾನವನ್ನು ರಾಮಾಯಣ ಮತ್ತು ಮಹಾಭಾರತಗಳಲ್ಲಿ ಕಾಣುತ್ತೇವೆ.

ಇವುಗಳಲ್ಲಿ ಪ್ರಧಾನವಾಗಿ ಕಾಣುವ ಅಂಶವೇ ಮನಸ್ಸನ್ನು ರಚನಾತ್ಮಕ ಹಾಗೂ ಪ್ರೇರಣೆಗಳ ಉಗ್ರಾಣವನ್ನಾಗಿಯೂ ನಕಾರಾತ್ಮಕ ಚಿಂತನೆಗಳಿಗೆ ನಿಷೇಧ ಪ್ರದೇಶವನ್ನಾಗಿಯೂ ಮಾಡಿಕೊಳ್ಳುವುದು ಹೇಗೆ ಅಥವಾ ಶ್ರದ್ಧೆಯಿಂದ ಉತ್ಸುಕರಾಗಿ ಮಾಡಬೇಕಾದ ಕಾರ್ಯಗಳಾವುವು ಮತ್ತು ನಿರಾಸಕ್ತಿಯಿಂದ ಬೆನ್ನು ತಿರುಗಿಸಬೇಕಾದ್ದು ಯಾವುದೆರೆಡೆಗೆ ಎಂಬುದರ ಯುಕ್ತಾಯುಕ್ತ ವಿವೇಚನಾಶಕ್ತಿ ಮನುಷ್ಯನ ಉದ್ಧಾರದ ಮೊದಲ ಮೆಟ್ಟಿಲು ಎಂಬ ವಿಷಯ. ವೈಯಕ್ತಿಕ ನೆಲೆಯಲ್ಲಿ ನೆಪೋಲಿಯನ್ ಮೊದಲಾದ ವೀರರೆ ಆಗಲಿ ಅಥವಾ ಸಾರ್ವತ್ರಿಕ ಹಂತದಲ್ಲಿ ಕೆಲಕಾಲ ಮೆರೆದು ನಲುಗಿದ ರೋಮನ್ ಚಕ್ರಾಧಿಪತ್ಯವೇ ಆಗಲಿ ಕೊನೆಗೆ ಪಶ್ಚಾತ್ತಾಪದ ಕಣ್ಣೀರಿನಲ್ಲಿ ಕೈತೊಳೆಯಬೇಕಾಯ್ತು ಏಕೆ ಎಂಬ ಪ್ರಶ್ನೆಗೆ ಉತ್ತರ- ಅವು ಈ ಪ್ರಜ್ಞೆಯನ್ನು ಕಳೆದುಕೊಂಡು History of Indian Philosophy ಅಥವಾ whimsical ಆಗಿದ್ದಕ್ಕೆ ಎನ್ನುವುದೇ. ಅರ್ಜುನ ಯುದ್ಧ ಮಾಡುವುದಿಲ್ಲ ಎಂದದ್ದು ಕೂಡ ಈ whimsical ಸ್ಥಿತಿಯಲ್ಲೇ! ಮಹತ್ವದ ನಿರ್ಧಾರ ತೆಗೆದುಕೊಳ್ಳುವಾಗ ಪರಿಪೂರ್ಣ ಜ್ಞಾನಿಯ ಮಾರ್ಗದರ್ಶನ ಅತಿಮುಖ್ಯ. ಅದು live ವ್ಯಕ್ತಿಯ ರೂಪದಲ್ಲೇ ಇರಬಹುದು ಇಲ್ಲವೇ ಅವನ ಬರಹರೂಪವೂ ಆಗಬಹುದು. ಇಂತಹ ಮಾರ್ಗದರ್ಶಕ ಸೂತ್ರಗಳನ್ನೇ ಶಾಸ್ತ್ರ ಎಂದು ಕರೆಯುವುದು. ಭಗವದ್ಗೀತೆ ಇಂತಹ ಶಾಸ್ತ್ರಗಳಲ್ಲಿ ಒಂದು. ಕೃಷ್ಣ ನಿರ್ಭಿಡೆಯಿಂದ ಅರ್ಜುನನಿಗೆ ಎಚ್ಚರಿಸಿದ್ದು ಹೀಗೆ. ಯಾರು ಶಾಸ್ತ್ರದ ವಿಧಿಯನ್ನು ಪಕ್ಕಕ್ಕಿಟ್ಟು ಮನಬಂದಂತೆ ನಡೆದುಕೊಳ್ಳುವರೋ ಅವನಿಗೆ ಕಾರ್ಯಸಿದ್ಧಿ ಆಗಲಾರದು. ಹಾಗಾದರೆ ಇಲ್ಲಿ ಮನುಷ್ಯನ ಸಹಜಸ್ವಭಾವ, ಅವನ ಪ್ರಕೃತಿ ಲೆಕ್ಕಕ್ಕೇ ಇಲ್ಲವೆ? ಅವನ ಮೇಲೆ ಏನನ್ನೋ ಹೇರಿದಂತಾಗುವುದಿಲ್ಲವೇ ಎಂಬ ಪ್ರಶ್ನೆ ಏಳಬಹುದು. ಯಾವುದನ್ನೂ ಬಲವಂತವಾಗಿ ಹೇರದೇ ಪ್ರತಿಯೊಂದನ್ನು ಅವರವರ ಆಯ್ಕೆಗೇ ಬಿಟ್ಟಿರುವ ಏಕಮೇವ ಸಂಸ್ಕೃತಿ ಸನಾತನ ಸಂಸ್ಕೃತಿ ಇಲ್ಲವೇ ಭಾರತೀಯ ಸಂಸ್ಕೃತಿ. ‘ದೇವರು’ ಎಂಬ ವ್ಯಾಖ್ಯೆಯಿಂದ ಹಿಡಿದು ಆಹಾರ, ವಿಹಾರ ಎಲ್ಲದರಲ್ಲೂ ವೈಯಕ್ತಿಕ ಆಯ್ಕೆಯನ್ನೇ ಪೋ›ತ್ಸಾಹಿಸಿದೆ ಈ ಸಂಸ್ಕೃತಿ. ವ್ಯಕ್ತಿಯ ಆಯ್ಕೆ ಆಚರಣೆಗಳು ಅಥವಾ ವ್ಯಷ್ಟಿ ಹಿತ ಸಮಷ್ಟಿ ಹಿತಕ್ಕೆ ಧಕ್ಕೆ ತರುವಂತಿರಬಾರದು ಎಂಬುದು ಮಾತ್ರ ಇಲ್ಲಿ ಸಾರ್ವತ್ರಿಕ ನಿಯಮ, ಇದೇ ಸ್ವಭಾವ ಸಹಜವಾದ ಪ್ರಕೃತಿಗೆ ಇರಬೇಕಾದ ಸಂಸ್ಕಾರ ಅಥವಾ ಶಿಸ್ತಿನ ಚೌಕಟ್ಟು; ಸ್ವಾತಂತ್ರ್ಯ ಮತ್ತು ಜವಾಬ್ದಾರಿಗಳ ಸಂಗಮ. ಇದೇ ಧರ್ಮ. ಆಧುನಿಕಯುಗದ ಪ್ರಜಾಪ್ರಭುತ್ವದ ಮೈಲಿಗಲ್ಲಾದ ಹಕ್ಕು ಮತ್ತು ಕರ್ತವ್ಯಗಳ ಹಿಂದಿನ ತತ್ವವೂ ಇದೇ. ಭೋಗಲಾಲಸೆ ಎಂಬ ಸಾರ್ವತ್ರಿಕ ಮಾನವ ಸಹಜ ಆಕಾಂಕ್ಷೆಯನ್ನು ಸಾರ್ವತ್ರಿಕ ಹಿತದ ಚೌಕಟ್ಟಿಗೆ ತಂದಾಗ ಅದು ‘ವಿವಾಹ’ ಎಂಬ ವ್ಯವಸ್ಥೆಯಾಗಿ ಪರಿವರ್ತಿತವಾಗುತ್ತದೆ. ಭೋಗಲಾಲಸೆ ಪ್ರಕೃತಿ ಮತ್ತು ವಿವಾಹ ಸಂಸ್ಕೃತಿ. ಹೀಗೆಯೇ ಅನಾದಿಕಾಲದಿಂದ ಪ್ರತಿ ಪ್ರಕೃತಿಯನ್ನು ಸಂಸ್ಕೃತಿಯನ್ನಾಗಿ ಪರಿವರ್ತಿಸಿ ವೈಯಕ್ತಿಕ ಆಸೆ ಆಕಾಂಕ್ಷೆಗಳನ್ನು ಹಾಗೂ ಸಾರ್ವತ್ರಿಕ ಹಿತಾಸಕ್ತಿಗಳನ್ನು ಏಕಕಾಲದಲ್ಲಿ ಸಾಧಿಸಿದ ಮೊಟ್ಟ ಮೊದಲ ಜನಾಂಗ ಭಾರತೀಯ ಜನಾಂಗ.

ಈ ‘ಸಂಸ್ಕೃತಿ’ಗೆ ವಿರುದ್ಧವಾದದ್ದು ‘ವಿಕೃತಿ’. ಇದನ್ನು ರಾಮಾಯಣದ ಒಂದು ಘಟನೆಯನ್ನೇ ಉದಾಹರಣೆಯಾಗಿ ತೆಗೆದುಕೊಂಡು ವಿವರಿಸಲಿಚ್ಛಿಸುತ್ತೇನೆ. ಶೂರ್ಪನಖಿ ತಾನಾಗಿ ಇಷ್ಟಪಟ್ಟು ರಾಮನನ್ನು ಮೋಹಿಸಿದಳು. ಮತ್ತೆ ಮತ್ತೆ ತನ್ನನ್ನು ಸ್ವೀಕರಿಸುವಂತೆ ಬಲವಂತಪಡಿಸಿದಳು. ರಾಮ ಅವಳನ್ನು ಅಷ್ಟೇ ತೀವ್ರವಾಗಿ ನಿರಾಕರಿಸಿದ. ಆ ಕಡೆ ತಂಗಿಯಿಂದ ಪ್ರಚೋದಿಸಲ್ಪಟ್ಟು ರಾವಣ ಸೀತೆಯನ್ನು ಹೊತ್ತೊಯ್ಯಲು ನಿರ್ಧರಿಸಿದ. ಸೀತೆ ಅವನಿಗೆ ಯಾವ ರೀತಿಯಲ್ಲೂ ಸಂಬಂಧಿಸಿದವಳಲ್ಲ. ಆ ಕಾರಣಕ್ಕಾಗಿ ಮಾರೀಚನ ಸಹಾಯ ಬಯಸಿದ. ಮಾರೀಚ ಸುತಾರಾಂ ಒಪ್ಪದಿದ್ದಾಗ ಅವನನ್ನೇ ಕೊಂದು ಹಾಕುವುದಾಗಿ ಗರ್ಜಿಸಿದ. ‘ಸಾವೇ ನಿಶ್ಚಯವಾದ ಮೇಲೆ ನಿನ್ನಂಥವನ ಕೈಯಲ್ಲಿ ಸಾಯುವುದಕ್ಕಿಂತ ರಾಮನ ಕೈಯಲ್ಲೇ ಸಾಯುತ್ತೇನೆ’ ಎಂದು ಜಿಂಕೆಯ ಪಾತ್ರ ವಹಿಸಲು ಸಿದ್ಧನಾದ. ರಾಮನ ಹೊರತು ಮತ್ತೊಬ್ಬನ ಕಡೆ ಕಣ್ಣೆತ್ತಿಯೂ ನೋಡದ ಸೀತೆಯನ್ನು ಬಲಾತ್ಕಾರದಿಂದ ಸೆಳೆದೊಯ್ದ. ರಾವಣನ ನಡೆ ಮಾರೀಚನ ವಿಷಯದಲ್ಲಾಗಲಿ, ಸೀತೆಯ ವಿಷಯದಲ್ಲಾಗಲಿ ‘ಸಂಸ್ಕೃತಿ’ಯ ವೈರುಧ್ಯ. ಇಂಥ ಪ್ರವೃತ್ತಿಯನ್ನು ‘ವಿಕೃತಿ’ ಎಂದು ಕರೆಯುತ್ತೇವೆ. ರಾವಣನ ವಿಕೃತಿಯಿಂದ ಅವನ ಅಹಂಕಾರಕ್ಕೆ ತಾತ್ಕಾಲಿಕವಾದ ಜಯ ಸಿಕ್ಕಿತಾದರೂ ಅದೇ ಅವನಿಗೆ ಮುಳುವಾಯಿತು. ಇನ್ನು ಮಾರೀಚನಂತೂ ಸತ್ತೇಹೋದ. ಸೀತೆ ಕಣ್ಣೀರಿನಲ್ಲಿ ಕೈತೊಳೆಯಬೇಕಾಯ್ತು. ರಾವಣನ ವಿಕೃತಿಯಿಂದ ಎಷ್ಟೋ ಜನ ವಿನಾಕಾರಣ ಮೃತ್ಯುವನ್ನಪ್ಪುವಂತಾಯ್ತು. ಒಬ್ಬ ವ್ಯಕ್ತಿ ಶಾಸ್ತ್ರಸಮ್ಮತವಾದ ಜೀವನಸೂತ್ರ ಅನುಸರಿಸದೆ ಕೇವಲ ಮನಸ್ಸಿನಲ್ಲಿ ಅನ್ನಿಸಿದ್ದನ್ನು ಮಾಡುವುದಕ್ಕೆ ಹೊರಟಿದ್ದಕ್ಕಾಗಿ ದುರಂತಗಳ ಸರಮಾಲೆಯೇ ಅನುಸರಿಸಿತು. ರಾಮನ ಸಂಸ್ಕೃತಿಪೂರ್ಣ ನಡವಳಿಕೆ ಇಲ್ಲಿಯವರೆಗೆ ಅವನಿಗೇ ಪರಿಚಯವೇ ಇಲ್ಲದ ಹಲವಾರು ಶಕ್ತಿಗಳು, ಸಹಾಯ, ಬೆಂಬಲಗಳು ದೊರಕುವಂತೆ ಮಾಡಿ ಅವನನ್ನು ಗೆಲ್ಲಿಸಿದವು. ಸಂಸ್ಕೃತಿ ವಿಕೃತಿಯನ್ನು ಮೆಟ್ಟಿನಿಲ್ಲುವ ಪರಿ ಹೀಗೆ. ಅಂತಿಮ ಜಯ ಸಂಸ್ಕೃತಿಯದ್ದೇ! ಈ ಸಂದೇಶವನ್ನೇ ಭಾರತ ಜಗತ್ತಿಗೆ ಕೊಡಬಯಸಿದ್ದು.

ಪ್ರತಿ ಮನುಷ್ಯನ ಪ್ರಕೃತಿ ವಿಕೃತಿಯೆಡೆಗೆ ಎಳೆಯಲ್ಪಡುವುದು ಬಹಳ ಸುಲಭ. ಆದರೆ ಸಂಸ್ಕೃತಿಯೆಡೆಗೆ ಹೊರಳುವುದಕ್ಕೆ ಮತ್ತು ಸುಸಂಸ್ಕೃತವಾಗುವುದಕ್ಕೆ ಬಹಳ ಪ್ರಯತ್ನ ಬೇಕು. ಇಚ್ಛಾಶಕ್ತಿ ಬೇಕು! ಅದೇ ಅವನ ಜೀವನದ ಗುರಿಯಾಗಬೇಕು. ಅವನ ಆದರ್ಶವೂ ಉನ್ನತ ಸಂಸ್ಕೃತಿಯ ಅದ್ಭುತ ಉದಾಹರಣೆಯೇ ಆದ ವ್ಯಕ್ತಿಯಾಗಬೇಕು. ಆದ್ದರಿಂದಲೇ ಭಾರತೀಯ ಸಂಸ್ಕೃತಿಯಲ್ಲಿ ಸಂತ, ಅವತಾರಪುರುಷ, ತ್ಯಾಗಿ, ಸಂನ್ಯಾಸಿ ಸಮಾಜದ ಆದರ್ಶಪ್ರಾಯರಾಗಿದ್ದಾರೆಯೇ ಹೊರತು ಕೇವಲ ಅಧಿಕಾರ, ಶ್ರೀಮಂತಿಕೆ ಅಷ್ಟೇಕೆ ವಿದ್ವತ್ತಿಗೆ ಹೆಸರಾದ ವ್ಯಕ್ತಿ ಈ ಸಾಲಿನಲ್ಲಿ ನಿಲ್ಲಲಿಲ್ಲ. ಮನಸ್ಸಿಗೆ ಪ್ರಿಯವಾದದ್ದೆಲ್ಲಾ ಶ್ರೇಯಸ್ಕರವಲ್ಲ ಮತ್ತು ಶ್ರೇಯಸ್ಕರವಾದದ್ದೆಲ್ಲಾ ಪ್ರಿಯವಾಗಿರಬೇಕೆಂತಲೂ ಇಲ್ಲ ಎಂಬ ಎಚ್ಚರಿಕೆಯನ್ನು ಕಠೋಪನಿಷತ್ ಸಾರಿದೆ. ಶ್ರೇಯಸ್ಕರವಾದದ್ದೇ ಪ್ರಿಯವಾಗುವಂತೆ ಮನಸ್ಸಿಗೆ ತರಬೇತಿ ಕೊಡಬೇಕಾದ ದೊಡ್ಡ ಸವಾಲು ಮನುಷ್ಯನ ಮುಂದಿದೆ. ಸಣ್ಣ ವಯಸ್ಸಿನಲ್ಲಿ ಕೊಟ್ಟ ಸಂಸ್ಕಾರಗಳು ಪ್ರತಿಯೊಬ್ಬನಲ್ಲಿ ಸುಲಭವಾಗಿ ಸ್ವೀಕೃತವಾಗುತ್ತವೆ ಮತ್ತು ಶಾಶ್ವತವಾಗಿ ನಿಲ್ಲುತ್ತವೆ ಕೂಡ. ಆದ್ದರಿಂದಲೇ ಶಿಕ್ಷಣದ ಪ್ರಾರಂಭಿಕ ಹಂತದಲ್ಲಿ ಕಥೆಗಳ ಅಥವಾ ಮತ್ತಾವುದೇ ಮಾಧ್ಯಮದ ಮೂಲಕ ಮಕ್ಕಳಿಗೆ ನೈತಿಕ ಪ್ರಜ್ಞೆಯನ್ನು ಮೂಡಿಸಬೇಕಾದ್ದೆ ಜಾಣ್ಮೆ. ಸ್ವಾತಂತ್ರ್ಯಪೂರ್ವದಲ್ಲಿ ಅಂದಿನ ಶಿಕ್ಷಣ ನೀತಿ ಇದನ್ನು ಪ್ರಬಲವಾಗಿ ಅನುಷ್ಠಾನಿಸಿತ್ತು.

ಕೃಷ್ಣರಾಜ ಒಡೆಯರ್ ಮಹಾರಾಜರಾಗಿದ್ದ ಕಾಲ. ಮಾಸ್ತಿ ವೆಂಕಟೇಶ್ ಅಯ್ಯಂಗಾರ್ ಅವರು ಈ ಘಟನೆಯನ್ನು ಒಂದೆಡೆ ನಿರೂಪಿಸಿದ್ದಾರೆ. ಬರಗಾಲದಿಂದ ದೇಶ ತತ್ತರಿಸಿತ್ತು. ಮಹಾರಾಜರು ಎಲ್ಲ ಕಡೆ ಗಂಜಿಕೇಂದ್ರಗಳನ್ನು ತೆರೆದು ಯಾರಿಗೂ ಒಂದುಹೊತ್ತು ಊಟಕ್ಕೆ ತೊಂದರೆಯಾಗದಂತೆ ನೋಡಿಕೊಂಡಿದ್ದರು. ಅವೆಲ್ಲದರ ಉಸ್ತುವಾರಿ ಅಧಿಕಾರಿಗಳದ್ದೇ ಆಗಿತ್ತು. ಅಂಥ ಗಂಜಿಕೇಂದ್ರಕ್ಕೆ ಮಹಾರಾಜರು ಒಮ್ಮೆ ಭೇಟಿ ಕೊಟ್ಟಿದ್ದರು. ಮಧ್ಯಾಹ್ನದ ಸಮಯ. ಹಳ್ಳಿಯ ಸಾಮಾನ್ಯ ವ್ಯಕ್ತಿಯೊಬ್ಬ ಗಂಜಿ ಕುಡಿದು ಅಲ್ಲಿಯೇ ಕುಳಿತಿದ್ದ ಮಹಾರಾಜರನ್ನು ಸಮೀಪಿಸಿ ಕೈಮುಗಿದು ವಿನೀತನಾಗಿ ಕೇಳಿಕೊಂಡ, ‘ಸ್ವಾಮಿ! ದುಡಿಯುವುದಕ್ಕೆ ಏನಾದರೂ ಕೆಲಸಕೊಡಿ’. ‘ಕೆಲಸ ಎಲ್ಲಿ ತರೋದಪ್ಪ! ಮಳೆಯೇ ಇಲ್ಲ. ಎಲ್ಲಾ ಕಡೆ ಬರಗಾಲ ಬಂದ್ಬಿಟ್ಟಿದೆ’ ಎಂದು ಹೇಳಿ ಅಷ್ಟಕ್ಕೇ ಸುಮ್ಮನಾಗದೇ, ‘ಏಕೆ? ನಿನಗೇನು ತೊಂದರೆ? ಗಂಜಿ ಕೇಂದ್ರದವರು ಏನಾದ್ರೂ ತೊಂದರೆ ಕೊಡ್ತಾ ಇದ್ದಾರೇನು’ ಎಂದು ಕೇಳಿದರು. ಅದಕ್ಕೆ ಅವನು, ‘ನಿಮ್ಮ ದಯೆಯಿಂದ ಅಂಥದ್ದೇನೂ ಇಲ್ಲ. ಅವರು ಹೊಟ್ಟೆತುಂಬ ಕೊಡ್ತಾ ಇದ್ದಾರೆ. ಆದರೆ ರೆಟ್ಟೆ ಇನ್ನೂ ಗಟ್ಟಿ ಇರೋವಾಗ ಪುಕ್ಕಟೆ ತಿನ್ನಬಾರದಲ್ಲ ಅಯ್ಯಾ’ ಎಂದ. ಅದು ಬರಗಾಲ! ಅಂಥ ಕಾಲದಲ್ಲಿ ಪ್ರಜೆಗಳ ಯೋಗಕ್ಷೇಮ ನೋಡಿಕೊಳ್ಳಬೇಕಾದ್ದು ರಾಜನ ಕರ್ತವ್ಯ. ಅವರು ಅದನ್ನು ಮಾಡಿಯೂ ಇದ್ದಾರೆ. ಬಡವರು ಬಂದು ಹೊಟ್ಟೆ ತುಂಬಿಸಿಕೊಂಡು ಹೋದರಾಯಿತು ಅಷ್ಟೇ. ಅವರು ಅಲ್ಲಿ ಅದಕ್ಕಾಗಿ ಏನೂ ದುಡಿಯಬೇಕಿಲ್ಲ. ಸರ್ಕಾರ ಅವರಿಂದ ಅದನ್ನು ಬಯಸಿಯೂ ಇಲ್ಲ. ಆದರೂ ಆ ಬಡವನಿಗೆ ಒಳಗೊಳಗೇ ಅಳುಕು. ಇನ್ನೂ ರೆಟ್ಟೆ ಗಟ್ಟಿಯಾಗಿದೆ.

ದುಡಿದು ತಿನ್ನುವುದಕ್ಕೆ ಶಕ್ತಿ ಇದೆ. ಹಾಗಿದ್ದಾಗ ಅವರು ಕೊಡ್ತಾರೆ ಅಂದಮಾತ್ರಕ್ಕೆ ನಾವು ನಾಚಿಕೆ ಬಿಟ್ಟು ತೊಗೊಳ್ಳುವುದು ಹೇಗೆ? ಅದು ಸರಿಯಲ್ಲ. ಅವರು ಕೊಟ್ಟರೂ ನಾವು ತೆಗೆದುಕೊಳ್ಳಬಾರದು. ಇದು ಸಂಸ್ಕೃತಿ. ಶೂರ್ಪನಖಿ ತಾನಾಗಿಯೇ ವರಿಸಲು ಮುಂದೆ ಬಂದರೂ ರಾಮ ಅದನ್ನು ಸ್ಪಷ್ಟವಾಗಿ ನಿರಾಕರಿಸಿದನಲ್ಲ; ಹಾಗೆ. ಈ ಹಳ್ಳಿಯ ಬಡವ ತನ್ನ ಮಟ್ಟದಲ್ಲಿ ಅದ್ಭುತವಾದ ಸಂಸ್ಕಾರವನ್ನೇ ಮೆರೆದಿದ್ದಾನೆ. ಮಹಾನ್ ಆರ್ಥಿಕ ತಜ್ಞರಂತೆ ಆತ ದೇಶದ ಪ್ರಗತಿಗಾಗಿ ಕೊಡುಗೆ ನೀಡಿರಲಿಕ್ಕಿಲ್ಲ. ಆದರೆ, ನಿಸ್ಸಂದೇಹವಾಗಿ ಆತನೂ ರಾಷ್ಟ್ರ ನಿರ್ಮಾಣ ಕಾರ್ಯದಲ್ಲಿ ಪೂರಕ ಶಕ್ತಿಯಂತೆ ಕಾರ್ಯನಿರ್ವಹಿಸಿದವ. ದೇಶದ ಖಜಾನೆಗೆ (Ex.chequer) ಹೊರೆಯಾಗದವ. ಈ ಸಾಮಾನ್ಯ ಹಳ್ಳಿಯ ನಿರಕ್ಷರಸ್ಥ ಮನುಷ್ಯನ ಸಂಸ್ಕೃತಿಯೊಡನೆ ಸಮಕಾಲೀನ ಸಮಾಜದ ಎಷ್ಟೋ ಮಿಲಿಯಗಟ್ಟಲೇ ಶಿಕ್ಷಿತ, ಪದವೀಧರ, ಪ್ರಜ್ಞಾವಂತರೆನಿಸಿಕೊಂಡವರ ಭ್ರಷ್ಟಾಚಾರ ಹಾಗೂ ವಿಕೃತ ಮನಸ್ಥಿತಿಯನ್ನು ಹೋಲಿಸಿ ನೋಡಿ. ಪೊಲೀಸನ ಭಯದಿಂದ ನಾವೆಲ್ಲಾ ಸಭ್ಯರಾಗಿದ್ದೇವೆ. ಇಲ್ಲದಿದ್ದಲ್ಲಿ ನಾವ್ಯಾರೂ ರಾತ್ರಿ ಹೊತ್ತು ಮನೆಯಲ್ಲಿ ಮಲಗುತ್ತಿರಲಿಲ್ಲ. ದಿಢೀರ್ ಶ್ರೀಮಂತರಾಗುವೆಡೆ ಪ್ರಯತ್ನಶೀಲರಾಗುತ್ತಿದ್ದೆವು ಎನ್ನಿಸುತ್ತದೆ. ಇದಕ್ಕೆಲ್ಲಾ ಕಾರಣ ಸಾಂಸ್ಕೃತಿಕ ಚಟುವಟಿಕೆ ಎಂದರೆ ನೃತ್ಯ, ಸಂಗೀತ, ಕೋಲಾಟಗಳಷ್ಟೇ ಅಲ್ಲ. ಅವುಗಳು ತಿಳಿಸುವ ಅರುಹುವ ಮೌಲ್ಯಗಳ ಅನುಸಂಧಾನ, ಅನುಷ್ಠಾನ ಎಂದು ಮರೆತಿರುವುದು. ರೆಟ್ಟೆ ಗಟ್ಟಿ ಇರುವವರೆಗೂ ಪುಕ್ಕಟೆ ತಿನ್ನಬಾರದು ಎನ್ನುವುದನ್ನು ಮರೆತಿರುವುದು. ಶಿಕ್ಷಣ ವ್ಯವಸ್ಥೆ ಇವುಗಳನ್ನೆಲ್ಲಾ ಗಮನಿಸಬೇಕು.

(ಲೇಖಕರು ಖ್ಯಾತ ಪ್ರವಚನಕಾರರು, ಗದಗ ಮತ್ತು ವಿಜಯಪುರ ರಾಮಕೃಷ್ಣ-ವಿವೇಕಾನಂದ ಆಶ್ರಮದ ಅಧ್ಯಕ್ಷರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net