

| ಚಿದಂಬರ ಮುನವಳ್ಳಿ
ಆಸ್ಟ್ರೇಲಿಯಾ ದೇಶದ ಕಾರ್ಖಾನೆಯೊಂದರ ಸಂಸ್ಕರಣಾ ಘಟಕದ ಶೈತ್ಯಾಗಾರದಲ್ಲಿ ಉಷ್ಣತಾಮಾನ ಶೂನ್ಯಕ್ಕಿಂತ ಕಡಿಮೆ ಇರುತ್ತಿತ್ತು. ಅಲ್ಲಿ ಕೆಲಸ ಮಾಡುವ ವ್ಯಕ್ತಿಗಳು ವಿಶೇಷವಾಗಿ ತಯಾರಿಸಿದ ಬೆಚ್ಚಗಿನ ಉಡುಪು ಧರಿಸಿಯೇ ಒಳಗೆ ಹೋಗುತ್ತಿದ್ದರು. ಒಳಗಿನ ಉಷ್ಣತಾಮಾನ ನಿರಂತರವಾಗಿ ಒಂದೇ ಸಮನಾಗಿ ಉಳಿಯುವಂತೆ ಅದರ ಪ್ರವೇಶದ್ವಾರ ಯಾವತ್ತೂ ಮುಚ್ಚಿರುತ್ತಿತ್ತು. ಅದನ್ನು ತೆರೆದರೂ ತನ್ನಿಂದ ತಾನೇ ಮುಚ್ಚಿಕೊಳ್ಳುವಂತೆ ರೂಪಿಸಲಾಗಿತ್ತು. ಒಳಗೆ ಹೋದ ವ್ಯಕ್ತಿ ಬಾಗಿಲು ತೆರೆದು ಹೊರಬರಲು ಅನುಕೂಲವಾಗಲು ಅವನಿಗೊಂದು ಬೀಗದ ಕೈ ಕೊಡಲಾಗುತ್ತಿತ್ತು.
ಒಂದು ದಿನ ಸಾಯಂಕಾಲ ಎಲ್ಲ ಸಿಬ್ಬಂದಿ ಕೆಲಸ ಮುಗಿಸಿ ಮನೆಗೆ ತೆರಳಿದ್ದರು. ಆ ಕಾರ್ಖಾನೆಯ ಜನರಲ್ ಮ್ಯಾನೇಜರ್ ಎಂದಿನಂತೆ ಎಲ್ಲ ವಿಭಾಗಗಳ ಕಡೆಗೆ ಕಣ್ಣು ಹಾಯಿಸುತ್ತ ಆ ಶೈತ್ಯಾಗಾರದ ಬಾಗಿಲು ತೆರೆದು ಒಳಗೆ ಇಣುಕಿದರು. ಯಾವುದೋ ಮೂಲೆಯೊಂದರಲ್ಲಿ ವಿದ್ಯುದ್ದೀಪ ಇನ್ನೂ ಯಾಕೆ ಉರಿಯುತ್ತಿದೆ ಎಂದು ನೋಡುತ್ತ ಸ್ವಲ್ಪ ಮುಂದೆ ಸರಿಯುವುದೇ ತಡ ಆ ಸ್ವಯಂಚಾಲಿತ ಬಾಗಿಲು ಮುಚ್ಚಿಕೊಂಡುಬಿಟ್ಟಿತು. ಬಾಗಿಲು ತೆರೆದು ಹೊರಗೆ ಬರಲು ಅವರ ಹತ್ತಿರ ಕೀಲಿ ಕೈ ಇರಲಿಲ್ಲ. ಸಾದಾ ಉಡುಪಿನಲ್ಲಿದ್ದ ಅವರಿಗೆ ಅತೀವ ಚಳಿಯಾಗಿ ನಡುಗಹತ್ತಿದರು. ಜೋರಾಗಿ ಕೂಗಿದರು. ಒಂದೇ ಸಮ ಬಾಗಿಲು ಬಡಿಯಹತ್ತಿದರು. ಯಾರಿಗೂ ಕೇಳಿಸಲಿಲ್ಲ. ರಕ್ತ ಹೆಪ್ಪುಗಟ್ಟತೊಡಗಿತು. ಪ್ರಜ್ಞೆ ತಪ್ಪಿ ಕೆಳಗೆ ಬಿದ್ದರು. ಅರ್ಧ ಗಂಟೆಯಾಗಿರಬಹುದು ವ್ಯಕ್ತಿಯೊಬ್ಬ ಹೊರಗಿನಿಂದ ಬಾಗಿಲು ತೆರೆದು ಅವರನ್ನು ನೋಡಿ ಧಾವಿಸಿ ಎತ್ತಿ ಹೊರಗೆ ತಂದು ಕೈ ಕಾಲು ತಿಕ್ಕಿ ಉಪಚರಿಸಿದ.
ಸ್ವಲ್ಪ ಸಮಯದಲ್ಲಿ ಅವರಿಗೆ ಪ್ರಜ್ಞೆ ಬಂತು. ಎದ್ದು ಕುಳಿತು, ‘ನನ್ನ ಜೀವ ಉಳಿಸಲು ದೇವರಾಗಿ ಬಂದ ನೀನಾರು?’ ಎಂದರು. ‘ಸರ್, ನಾನು ಇಲ್ಲಿಯ ಭದ್ರತಾ ಸಿಬ್ಬಂದಿ. ಸಮವಸ್ತ್ರ ತೆಗೆದಿಟ್ಟು ಇನ್ನೇನು ಮನೆಗೆ ಹೊರಡುವವನಿದ್ದೆ. ಕೇವಲ ನಿಮಗಾಗಿ ಕಾಯುತ್ತಿದ್ದೆ. ನೀವು ದಿನಾಲೂ ಬೆಳಗ್ಗೆ ಕಾರ್ಖಾನೆ ಪ್ರವೇಶಿಸುವಾಗ ಎಲ್ಲ ಗಾರ್ಡ್ಗಳಿಗೆ ಗುಡ್ ಮಾರ್ನಿಂಗ್ ಹೇಳುತ್ತೀರಿ. ಸಂಜೆ ಹೋಗುವಾಗ ಗುಡ್ ನೈಟ್ ಹೇಳಿಯೇ ಹೋಗುತ್ತೀರಿ. ನಿಮ್ಮಿಂದ ಸಂಜೆಯ ಗುಡ್ ನೈಟ್ ಕೇಳಿಯೇ ಹೋಗಬೇಕೆಂದು ಕಾಯುತ್ತ ನಿಂತಿದ್ದೆ. ನೀವು ಬರುವುದು ತಡವಾದ್ದರಿಂದ ಹುಡುಕಿಕೊಂಡು ಬಂದೆ. ದೊಡ್ಡ ಅವಘಡ ತಪ್ಪಿತು’ ಎಂದು ಕಣ್ಣೀರೊರೆಸುತ್ತ ಹೇಳಿದ. ಯಾವ ಅಂತಸ್ತನ್ನೂ ನೋಡದೆ ಬೇರೆಯವರನ್ನು ಗೌರವಿಸಿದರೆ ಅವರೂ ನಮ್ಮನ್ನು ಪ್ರೀತಿಸುತ್ತಾರೆ. ಯಾವ ದಿನ ನಾವು ಜನರನ್ನು ಗೌರವಿಸುವುದರಲ್ಲಿ ಮೊದಲಿಗರಾಗುವುದಿಲ್ಲವೋ ಅಂದಿನಿಂದ ನಮಗೆ ಯಾರ ಸಹಾಯವೂ ದೊರೆಯುವುದಿಲ್ಲ. ಡಿವಿಜಿಯವರು ‘ಬಂಧುಮತಿ ಲೋಕದಲಿ ಮನ್ ದೃಷ್ಟಿ ಪರಮದಲಿ ಹೊಂದಿರಲಿಹುದು ಪುಣ್ಯ - ಮಂಕುತಿಮ್ಮ’ ಎಂದು ಹೇಳಿದ್ದಾರೆ. ನಮ್ಮನ್ನು ಕಷ್ಟಕಾಲದಲ್ಲಿ ಕಾಯುವುದು ಗೌರವ ಕೊಟ್ಟು ಪಡೆದ ಸ್ನೇಹರೂಪಿ ಆ ಪುಣ್ಯವಲ್ಲದೆ ಮತ್ತಿನ್ನೇನು?
(ಲೇಖಕರು ಹವ್ಯಾಸಿ ಬರಹಗಾರರು)