

ತುಳಸಿದಾಸರಿಗೆ ಆ ಕ್ಷಣಕ್ಕೆ ಪರಿಸ್ಥಿತಿಯ ಅರಿವಾಯಿತು. ‘ನೀನು ಸದ್ಯಕ್ಕೆ ನಿನ್ನ ಪತಿಯನ್ನು ಸೇರುವುದು ಸಾಧ್ಯವಿಲ್ಲ. ಇನ್ನೊಂದು ತಿಂಗಳು ತಾಳ್ಮೆಯಿಂದಿದ್ದರೆ ನಾನೇ ನಿನ್ನನ್ನು ನಿನ್ನ ಪತಿಯ ಹತ್ತಿರ ಕಳಿಸಿಕೊಡುವೆ’ ಎಂದರು. ತುಳಸಿದಾಸರ ಮೇಲೆ ಅಪಾರ ನಂಬಿಕೆಯನ್ನಿಟ್ಟುಕೊಂಡ ಅವಳು ಅವರ ಮಾತಿನಂತೆ ಮನೆಗೆ ಮರಳಿದಳು.
ತುಳಸಿದಾಸರು ಒಂದು ತಿಂಗಳುಗಳ ಕಾಲ ಅವಳಿಗೆ ಬದುಕಿನ ಶ್ರೇಷ್ಠತೆ, ಅಗತ್ಯತೆ ಕುರಿತು ವಿವರಿಸಿದರು. ಹುಟ್ಟಿನ ಅಕಸ್ಮಿಕವನ್ನು, ಸಾವಿನ ಅನಿವಾರ್ಯತೆಯನ್ನು ಮನದಟ್ಟು ಮಾಡಿದರು. ಮನುಷ್ಯನ ಅಂತರಂಗದಲ್ಲಿ ಅಂತರ್ಗತವಾಗಿರುವ ಅಂತಃಶಕ್ತಿಯ ಅಗಾಧತೆಯನ್ನು ಅನಾವರಣಗೊಳಿಸಿದರು. ಮನುಷ್ಯನಾಗಿ ಹುಟ್ಟಿಬಂದ ಬಳಿಕ ಮಾಡಬೇಕಾದ ನಮ್ಮದೇ ಕರ್ತವ್ಯ, ಜವಾಬ್ದಾರಿಗಳನ್ನು ತಿಳಿಸಿದರು.
ನಂತರದ ದಿನಗಳಲ್ಲಿ ಕೆಲವರು ಅವಳಿಗೆ ‘ನಿನ್ನ ಗಂಡ ಸಿಕ್ಕನೇನು?’ ಎಂದು ಕೇಳಿದರು. ಅವಳು ಮಂದಸ್ಮಿತಳಾಗಿ, ‘ನನ್ನ ಗಂಡ ನನ್ನಲ್ಲಿಯೇ ಇದ್ದಾನೆ ಎಂಬ ಸಂಗತಿ ಅರ್ಥವಾಗಿದೆ. ಹಾಗಾಗಿ ಅವನನ್ನು ನಾನೀಗ ಹೊರಗೆ ಹುಡುಕುವ ವ್ಯರ್ಥಪ್ರಯತ್ನವನ್ನು ಬಿಟ್ಟುಬಿಟ್ಟಿದ್ದೇನೆ. ನನ್ನಲ್ಲಿಯೇ ಅವನನ್ನು ಕಾಣುವ, ದೈನಂದಿನ ಬದುಕಿನ ನೆನಹಿನಲ್ಲಿ ಹಾಸುಹೊಕ್ಕಾಗಿಸುವ ಪ್ರಯತ್ನದಲ್ಲಿರುವೆ’ ಎಂದು ಹೇಳಿದಳು.
ಮನಸ್ಸನ್ನು ವಿಕಾರಗೊಳಿಸುವ ಸಂಗತಿಗಳನ್ನು ವಸ್ತುನಿಷ್ಠವಾಗಿ ವಿಶ್ಲೇಷಿಸುವುದನ್ನು ನಮ್ಮ ನಡೆಯನ್ನಾಗಿಸಿಕೊಳ್ಳಬೇಕು. ಮನಸ್ಸಿನಲ್ಲಿ ತುಂಬಿಕೊಂಡಿರುವ ಸಲ್ಲದ ಅರ್ತಾಕ ವಿಷಯಗಳನ್ನು ಪ್ರಜ್ಞಾವಂತ ಆಲೋಚನೆಯ ಮೂಸೆಯೊಳಗೆ ಹಾಯಿಸಿ ಪರಿಶುದ್ಧಗೊಳಿಸಬೇಕು. ಆತ್ಮವಿಶ್ವಾಸದಿಂದ ಎಲ್ಲವನ್ನೂ ಎದುರಿಸುವ ಎದೆಗಾರಿಕೆಯನ್ನು ನಮ್ಮದಾಗಿಸಿಕೊಳ್ಳಬೇಕು. ಇಂದ್ರಿಯಗಳ ಇಚ್ಛೆಗೆ ಮನಸ್ಸನ್ನು ಆಧೀನವಾಗದಂತೆ ಎಚ್ಚರವಹಿಸಬೇಕು. ಹಲವು ದಿಕ್ಕಿಗೆ ಎಳೆಯುವ ಚಿತ್ತವೃತ್ತಿಗಳಿಗೆ ಒಂದಷ್ಟು ಅಂಕುಶ ಹಾಕಬೇಕು. ಅನಗತ್ಯ ಭಾವಸಂಕೋಲೆಗಳ ಯಮಭಾರದಲ್ಲಿ ಬಂಧಿಯಾಗದೆ ಹೊಸ ಎಚ್ಚರದಲ್ಲಿ ಬದುಕನ್ನು ಮುನ್ನಡೆಸಬೇಕು. ಇಂಥದೊಂದು ಅರಿವಿನ ಹಣತೆಯನ್ನು ಹಚ್ಚಿದಾಗ ಬದುಕು ಸುಂದರವಾಗಬಲ್ಲದು.
(ಲೇಖಕರು ಅಧ್ಯಾಪಕರು)