ಆಂತರಿಕ ಶುದ್ಧಿಗೆ ಪ್ರೇರಕ ರಂಜಾನ್, ಉಪವಾಸ ವ್ರತ

Ramzan
Published on

ಆರ್ಥಿಕವಾಗಿ ಸಬಲರಾಗಿರುವ ಎಲ್ಲ ಮುಸಲ್ಮಾನರು ಜಕಾತ್ ನೀಡಿದರೆ ದೇವನು ಸಂತೃಪ್ತನಾಗುತ್ತಾನೆ. ಮತ್ತು ಜಕಾತ್ ನೀಡುವವನ ಸಂಪತ್ತು ಬೆಳೆಯುತ್ತ ಹೋಗುತ್ತದೆ. ಜಕಾತ್ ಪಾವತಿಯಿಂದ ಸಮುದಾಯದಲ್ಲಿ ಕ್ರಮೇಣವಾಗಿ ಆರ್ಥಿಕ ಸಮಾನತೆ ಕಾಣಬಹುದಾಗಿದೆ. ರಂಜಾನ್ ತಿಂಗಳಿನಲ್ಲಿ ದಾನ-ಧರ್ಮ ಮಾಡಿದರೆ ಇಮ್ಮಡಿ ಪುಣ್ಯ ಪಡೆಯುವುದರ ಜತೆಗೆ ಸಮೃದ್ಧಿ ಸಹ ಕಾಣುತ್ತೇವೆ.

ಸಕಾಲಿಕ
ವಿಶ್ವಾದ್ಯಂತ ಹರಡಿರುವ ಇಸ್ಲಾಮ್ ಧರ್ಮವು ಅವಲಂಬಿಸಿರುವ ಐದು ಅಚಲ ಸ್ತಂಭಗಳೆಂದರೆ; ಕಲಿಮ, ನಮಾಜ್, ಉಪವಾಸ ವ್ರತ, ಜಕಾತ್ ಮತ್ತು ಹಜ್ಜ್ ಯಾತ್ರೆ. ಒಬ್ಬ ಸತ್ಯನಿಷ್ಠ ಮುಸಲ್ಮಾನನು ಈ ಪಂಚಕರ್ಮಗಳನ್ನು ಕಡ್ಡಾಯವಾಗಿ ತನ್ನ ಜೀವನದಲ್ಲಿ ಪಾಲಿಸಬೇಕು. ಈ ಐದು ಕರ್ಮಗಳಲ್ಲಿ ಯಾವ ಕರ್ಮವನ್ನೂ ಅಲಕ್ಷಿಸುವಂತಿಲ್ಲ. ಒಂದು ವೇಳೆ ಅಲಕ್ಷಿಸಿದರೆ ಅವನು ಪರಿಪೂರ್ಣ ಮುಸಲ್ಮಾನ ಆಗಲು ಸಾಧ್ಯವಿಲ್ಲ. ಮೊದಲನೆಯ ಅಥವಾ ಮೂಲಕರ್ಮವೇ ‘ಕಲಿಮ’ ಆಗಿದೆ. ಆ ಕಲಿಮವು ಅರಬಿ ಭಾಷೆಯಲ್ಲಿ ಹೀಗಿದೆ; ‘ಲಾ ಇಲಾಹ ಇಲ್ ಲಲ್​ಲಾಹ್ ಮುಹಮದುರ್ ರಸೂ ಲಿಲ್ ಲಾಹ್’ ಅರ್ಥಾತ್ ‘ಅಲಾಹನ ಹೊರತು ಅನ್ಯ ಆರಾಧ್ಯನಿಲ್ಲ. ಪ್ರವಾದಿ ಮುಹಮ್ಮದ್ (ಸ) ಅವನ ಸಂದೇಶವಾಹಕರಾಗಿದ್ದಾರೆ’. ಈ ಪಂಚಕರ್ಮಗಳಲ್ಲಿ ಜಕಾತ್ ಮತ್ತು ಹಜ್ಜ್ ಯಾತ್ರೆಯು ಆರ್ಥಿಕವಾಗಿ ಸಬಲವಾಗಿರುವ ಮುಸಲ್ಮಾನರಿಗೆ ಕಡ್ಡಾಯವಾಗಿದೆ. ಅರ್ಥಾತ್ ಬಡ ಮುಸಲ್ಮಾನರಿಗೆ ಇದರಿಂದ ವಿನಾಯಿತಿ ಅಥವಾ ರಿಯಾಯಿತಿ ನೀಡಲಾಗಿದೆ.

ರಂಜಾನ್ ತಿಂಗಳಿನ ಮೂವತ್ತು ದಿನದ ಉಪವಾಸವು ನಮಾಜಿನ ನಂತರ ಮಹತ್ವಪೂರ್ಣವಾದ ಕಡ್ಡಾಯ ಕರ್ಮವಾಗಿದೆ. ಸೂರ್ಯೋದಯದಿಂದ ಸೂರ್ಯಾಸ್ತದವರೆಗೂ ಅನ್ನ, ಪಾನೀಯ ಸೇವನೆಗಳಿಂದ ದೂರ ಉಳಿಯುವುದು ಪ್ರಮುಖ ಷರತ್ತಾಗಿದೆ. ಉಪವಾಸವು ಅನೇಕ ಪ್ರಯೋಜನಗಳನ್ನು ಹೊಂದಿದ್ದು ಮನುಷ್ಯನಲ್ಲಿ ತಾಳ್ಮೆ, ಸೈರಣೆ, ಪುನರುತ್ಥಾನದ ಚಿಂತನೆ, ಆಧ್ಯಾತ್ಮಿಕತೆ, ಸತ್ಯನಿಷ್ಠೆ, ಸತ್ಕರ್ಮದಂತಹ ಅನೇಕ ಗುಣವಿಶೇಷಗಳನ್ನು ಬೆಳೆಸುತ್ತದೆ. ಉಪವಾಸದ ಸ್ಥಿತಿಯಲ್ಲಿ ಮನುಷ್ಯನು ಹಸಿವೆಯಿಂದ ಬಳಲುತ್ತಿರುವ ಬಡವರ, ನಿರ್ಗತಿಕರ, ಅನಾಥರ ಸ್ಥಿತಿಗತಿಯನ್ನು ಅರಿಯುತ್ತಾನೆ. ಇದರಿಂದ ಬಡವರ ಬಗ್ಗೆ ಅವನಲ್ಲಿ ಕನಿಕರ ಮೂಡುತ್ತದೆ. ಉಪವಾಸಿಗನ ಇಂತಹ ಸತ್ಕರ್ಮಕ್ಕಾಗಿ ಇಹಲೋಕದಲ್ಲಿ ಮಾತ್ರವಲ್ಲ ಪರಲೋಕದಲ್ಲೂ ಸೂಕ್ತ ಪ್ರತಿಫಲವನ್ನು ನೀಡಲಾಗುವುದು. ಇದು ಅಲ್ಲಾಹನ ವಾಗ್ದಾನವಾಗಿದೆ. ನಿಸ್ಸಂದೇಹವಾಗಿಯೂ ಅವನ ಇಹಪರದ ಜೀವನ ಸಾರ್ಥಕವಾಗುತ್ತದೆ.

ಅನ್ನ-ನೀರು ತ್ಯಜಿಸಿ ಕೇವಲ ದೈಹಿಕವಾಗಿ ಉಪವಾಸ ಆಚರಿಸಿದರೆ ಅದು ಪರಿಪೂರ್ಣವಾಗಲಾರದು. ಮಾನಸಿಕವಾಗಿಯೂ, ಆಧ್ಯಾತ್ಮಿಕವಾಗಿಯೂ ಉಪವಾಸ ವ್ರತವನ್ನು ಆಚರಿಸಬೇಕು. ಉಪವಾಸ ಆಚರಿಸುವವರು ಅಂತರಂಗವನ್ನು ಶುದ್ಧಗೊಳಿಸಿಕೊಳ್ಳಬೇಕು. ಪ್ರವಾದಿ ಮುಹಮ್ಮದ್ (ಸ) ಅವರು ಉಪವಾಸದ ಮೂಲೋದ್ದೇಶದ ಕಡೆಗೆ ಈ ರೀತಿ ಗಮನ ಹರಿಸಿದ್ದಾರೆ; ‘ಸುಳ್ಳು ಆಡುವುದನ್ನು, ಸುಳ್ಳು ವ್ಯವಹಾರ ಮಾಡುವುದನ್ನು ಬಿಡದಿದ್ದರೆ ಅಂಥ ವ್ಯಕ್ತಿಯನ್ನು ಆಹಾರ, ಪಾನೀಯಗಳಿಂದ ಬಿಡಿಸಬೇಕೆಂಬ ಆಪೇಕ್ಷೆಯೂ ಅಲ್ಲಾಹನಿಗೆ ಇಲ್ಲವೇ ಇಲ್ಲ’. ಇದೇ ವಿಷಯ ಕುರಿತು ಪ್ರವಾದಿಗಳ ಇನ್ನೊಂದು ವಚನ ಹೀಗಿದೆ; ‘ಅನೇಕ ಮಂದಿ ಉಪವಾಸಿಗರ ಪಾಲಿಗೆ ಉಪವಾಸದಿಂದ ಹಸಿವೆ, ತೃಷೆಗಳ ವಿನಾ ಇನ್ನೇನೂ ಬರುವುದಿಲ್ಲ’. ನಿಜದಲ್ಲಿ ಉಪವಾಸ ಇದ್ದಾಗ ಅತ್ಯಧಿಕ ಪುಣ್ಯಕಾರ್ಯಗಳನ್ನೂ, ಸತ್ಕರ್ಮಗಳನ್ನೂ ನಿರ್ವಹಿಸಬೇಕು.

ಚಿಕ್ಕ ಮಕ್ಕಳು, ವೃದ್ಧರು, ಪ್ರಯಾಣಿಕರು, ಬಾಣಂತಿಯರು, ಮುಟ್ಟು ಹೊಂದಿದ ಸ್ತ್ರೀಯರು ಹೊರತುಪಡಿಸಿ ಪ್ರೌಢಾವಸ್ಥೆಗೆ ತಲುಪಿದ ಎಲ್ಲ ಮುಸಲ್ಮಾನ ಪುರುಷ ಹಾಗೂ ಮಹಿಳೆಯರು ಉಪವಾಸ ವ್ರತವನ್ನು ಕಡ್ಡಾಯವಾಗಿ ಆಚರಿಸಲೇಬೇಕು. ದಿವ್ಯಗ್ರಂಥ ‘ಕುರಾನ್’ನಲ್ಲಿ ಪ್ರಸ್ತಾಪವಾಗಿರುವ ಇದು ದೇವರ ಆಜ್ಞೆಯಾಗಿದೆ. ರಂಜಾನ್ ಮಾಸದ ಉಪವಾಸ ವ್ರತದ ಮಹತ್ವ ತಿಳಿಯಲು ಇದರ ಹಿನ್ನೆಲೆಯನ್ನೂ ಅರಿಯಬೇಕಾಗಿದೆ. ಇಸ್ಲಾಮ್ ಧರ್ಮದ ಇತರ ಆದೇಶಗಳಂತೆಯೇ ಉಪವಾಸದ ಆದೇಶಗಳು ಸಹ ಹಂತಹಂತವಾಗಿ ಜಾರಿಗೊಳಿಸಲ್ಪಟ್ಟವು. ಪ್ರವಾದಿಗಳು ಆರಂಭದಲ್ಲಿ ತನ್ನ ಅನುಯಾಯಿಗಳಾದ ಮುಸಲ್ಮಾನರಿಗೆ ಪ್ರತಿ ತಿಂಗಳಿನಲ್ಲಿ ಮೂರು ದಿನಗಳನ್ನು ಉಪವಾಸ ವ್ರತ ಆಚರಿಸಲು ಆದೇಶಿಸಿದ್ದರು. ಆದರೆ, ಆ ಉಪವಾಸ ಕಡ್ಡಾಯವಾಗಿರಲಿಲ್ಲ. ಆನಂತರ ಹಿಜರಿ ಶ.ಕ. ಎರಡರಲ್ಲಿ ರಂಜಾನ್ ತಿಂಗಳ ಉಪವಾಸದ ಆಜ್ಞೆ ನೀಡಲಾಯಿತು. ಇದರಲ್ಲಿ ಉಪವಾಸವಿರಲು ಶಕ್ತರಾಗಿದ್ದಾಗ್ಯೂ ಉಪವಾಸವಿರದವರು ಪ್ರತಿಯೊಂದು ದಿನದ ಉಪವಾಸದ ಬದಲಿಗೆ ಒಬ್ಬ ಬಡವನಿಗೆ ಊಟ ಕೊಡಬೇಕೆಂದು ರಿಯಾಯಿತಿಯನ್ನಿರಿಸಲಾಯಿತು. ಆ ಬಳಿಕ ಇನ್ನೊಂದು ಆಜ್ಞೆಯು ಬಂದು, ಅದರ ಪ್ರಕಾರ ಮೊದಲಿದ್ದ ಆ ರಿಯಾಯಿತಿ ತೆಗೆದುಹಾಕಲಾಯಿತು. ಆದರೆ ರೋಗಿ, ಪ್ರಯಾಣಿಕ, ಗರ್ಭೀಣಿ, ಹಾಲುಣಿಸುವ ತಾಯಿ ಮತ್ತು ತೀರಾ ಅಶಕ್ತರಾದ ವೃದ್ಧರಿಗೆ ಈ ರಿಯಾಯಿತಿಯನ್ನು ಹಾಗೆಯೇ ಉಳಿಸಲಾಯಿತು. ನೆಪವು ದೂರವಾದೊಡನೆ ರಂಜಾನ್​ನಲ್ಲಿ ಲೋಪಗೊಂಡಷ್ಟೇ ದಿನಗಳ ಉಪವಾಸ ಆಚರಿಸಬೇಕೆಂದು ಆದೇಶಿಸಲಾಯಿತು.

ಕುರಾನಿನ ಎರಡನೇ ಅಧ್ಯಾಯವಾದ ‘ಅಲ್ ಬಕರ’ (ಸೂಕ್ತ 183-1874)ದಲ್ಲಿ ಉಪವಾಸ ವ್ರತ ಕುರಿತು ಹೀಗೆ ಆದೇಶಿಸಲಾಗಿದೆ. ‘ಓ ಸತ್ಯವಿಶ್ವಾಸಿಗಳೇ ಗತ ಪ್ರವಾದಿಗಳ ಅನುಯಾಯಿಗಳಿಗೆ ಹೇಳಿರುವಂತೆಯೇ, ನಿಮಗೂ ಉಪವಾಸ ವ್ರತವನ್ನು ನಿರ್ಬಂಧಗೊಳಿಸಲಾಗಿದೆ. ಇದರಿಂದ ನಿಮ್ಮಲ್ಲಿ ‘ತಕ್ವಾ’ದ (ಧರ್ಮನಿಷ್ಠೆಯ) ಗುಣವಿಶೇಷವುಂಟಾಗುವುದೆಂದು ಆಶಿಸಲಾಗಿದೆ. ಕೆಲವೇ ಎಣಿಕೆಯ ದಿನಗಳ ಉಪವಾಸ ವ್ರತವದು. ನೀವೆಲ್ಲಾದರೂ ರೋಗಿಯಾಗಿದ್ದರೆ ಅಥವಾ ಪ್ರಯಾಣದಲ್ಲಿದ್ದರೆ ಇತರ ದಿನಗಳಲ್ಲಿ ಅಷ್ಟೇ ಸಂಖ್ಯೆಯನ್ನು ಪೂರ್ತಿಗೊಳಿಸಿಕೊಳ್ಳಬೇಕು. (ಉಪವಾಸವಿರದಿದ್ದರೆ ‘ಫಿದಿಯ’ ಅಂದರೆ ಪ್ರಾಯಶ್ಚಿತವನ್ನು ಕೊಡಬೇಕು) ಒಂದು ದಿನದ ಉಪವಾಸದ ಫಿದಿಯವು ಓರ್ವ ಬಡವನಿಗೆ ಆಹಾರ ನೀಡುವುದಾಗಿದೆ ಮತ್ತು ತನ್ನ ಇಚ್ಛೆಯಿಂದ ಇನ್ನಷ್ಟು ಸತ್ಕಾರ್ಯ ಮಾಡಿದರೆ ಅದು ಅವನಿಗೆ ಇನ್ನೂ ಉತ್ತಮ. ಆದರೆ, ನೀವು ಅರಿಯುವವಾಗಿದ್ದರೆ ಉಪವಾಸವಿರುವುದೇ ನಿಮಗೆ ಅತ್ಯುತ್ತಮ’.

ಉಪವಾಸ ಕುರಿತು ಪ್ರವಾದಿಗಳ ಈ ವಚನ ಗಮನಾರ್ಹವಾದದ್ದು, ‘ಉಪವಾಸವು ಗುರಾಣಿಯಂತಿದೆ’ (ಗುರಾಣಿ ಶತ್ರುವಿನ ಆಕ್ರಮಣದಿಂದ ತನ್ನನ್ನು ರಕ್ಷಿಸಿಕೊಳ್ಳಲಿಕ್ಕಾಗಿರುತ್ತದೆ) ಅದೇ ರೀತಿಯಲ್ಲಿ ಉಪವಾಸವೂ ಶೈತಾನಿನ ಆಕ್ರಮಣದಿಂದ ರಕ್ಷಿಸಿಕೊಳ್ಳಲಿಕ್ಕಾಗಿರುತ್ತದೆ. ಆದ್ದರಿಂದ ಉಪವಾಸವಿರುವಾತನು (ಈ ಗುರಾಣಿಯನ್ನು ಉಪಯೋಗಿಸಬೇಕು) ಜಗಳ, ಗಲಾಟೆಯಿಂದ ದೂರವಿರಬೇಕು. ಆತನನ್ನು ಯಾರಾದರೂ ಬೈದಾಗ ಅಥವಾ ಅವನೊಡನೆ ಜಗಳಕ್ಕೆ ಬಂದಾಗ, ‘ಸಹೋದರ ನಾನು ಉಪವಾಸವಿದ್ದೇನೆ’ (ನಿನ್ನಂತೆಯೇ ನಾನು ವರ್ತಿಸುವೆನೆಂದು ನೀನು ಆಶಿಸಬೇಡ) ಎಂದು ತಪ್ಪಿಸಿಕೊಳ್ಳಬೇಕು.

ಪವಿತ್ರ ಮಾಸ ರಂಜಾನಿನ ಪ್ರಮುಖ ಕರ್ಮವೆಂದರೆ ಜಕಾತ ಅಥವಾ ಧಾರ್ವಿುಕ ತೆರಿಗೆಯನ್ನು ಸಂದಾಯ ಮಾಡುವುದು. ದೇವಗ್ರಂಥ ಕುರಾನ್​ನಲ್ಲಿ 33 ಕಡೆ ಜಕಾತಿನ ಪ್ರಸ್ತಾಪವಿದೆ. ‘ವ ಅಖಿಮ್ ಉಸ್-ಸಲಾತಾ, ವ ಆತುಜ್ ಜಕಾತಾ’ ಅರ್ಥಾತ್, ‘ನಮಾಜ್ ಸಂಸ್ಥಾಪಿಸಿರಿ ಹಾಗೂ ಜಕಾತ್ ನೀಡಿರಿ’. ಕುರಾನ್ ಗ್ರಂಥದಲ್ಲಿ ಎಲ್ಲೆಲ್ಲಿ ನಮಾಜಿನ ಪ್ರಸ್ತಾಪ ಇದೆಯೋ, ಅಲ್ಲಲ್ಲಿ ಜಕಾತಿನ ಪ್ರಸ್ತಾಪವೂ ಇದೆ. ಆರ್ಥಿಕವಾಗಿ ಸಬಲರಾದ ಎಲ್ಲ ಮುಸಲ್ಮಾನರು ತನ್ನ ಸಂಪತ್ತು ಅಥವಾ ಆದಾಯದಲ್ಲಿ ಪ್ರತಿವರ್ಷವೂ ಒಂದು ನಿರ್ದಿಷ್ಟ ಪಾಲನ್ನು ದೇವಮಾರ್ಗದಲ್ಲಿ ಖರ್ಚು ಮಾಡಬೇಕು, ಅಂದರೆ ಬಡವರಲ್ಲಿ ಹಣ ಹಂಚಬೇಕು. ಆ ಹಣದಿಂದ ಬಡವರು ಸಹ ಹಬ್ಬ ಆಚರಿಸಲು ಸಾಧ್ಯವಾಗುತ್ತದೆ.

ಒಟ್ಟಿನಲ್ಲಿ ಶ್ರೀಮಂತ ಮುಸಲ್ಮಾನರು ಉಪವಾಸಕ್ಕೆ ನೀಡುವಷ್ಟು ಪ್ರಾಮುಖ್ಯವನ್ನು ಜಕಾತ್ ಪಾವತಿಗೂ ನೀಡಬೇಕು. ಖಂಡಿತವಾಗಿಯೂ ಅಲ್ಲಾಹನು ಇದರಿಂದ ಸಂತುಷ್ಟನಾಗುತ್ತಾನೆ ಹಾಗೂ ಸೂಕ್ತ ಪ್ರತಿಫಲವನ್ನೂ ದಯಪಾಲಿಸುತ್ತಾನೆ. ಪ್ರವಾದಿಗಳ ಒಬ್ಬ ಒಡನಾಡಿ ಹಜರತ್ ಅಬ್​ಬಾಸ್ ಹೀಗೆ ಉಲ್ಲೇಖಿಸಿದ್ದಾನೆ; ‘ಸ್ವತಃ ಪ್ರವಾದಿವರ್ಯರು ರಂಜಾನ್ ಮಾಸದಲ್ಲಿ ಇತರ ದಿನಗಳಿಗಿಂತಲೂ ಅಧಿಕ ಕರುಣಾಳುವೂ, ಪ್ರೇಮಮಯಿಯೂ ಆಗಿ ಕಾಣುತ್ತಿದ್ದರು. ಅವರ ಮನೆಯ ಬಾಗಿಲಿನಿಂದ ಯಾವ ಯಾಚಕನೂ ಬರಿಗೈಯಿಂದ ಹೋಗುತ್ತಿರಲಿಲ್ಲ.’

ವಾಸ್ತವದಲ್ಲಿ ಜಕಾತ್ ಎಂಬುದು ಒಂದು ವಿಶಿಷ್ಟ ರೀತಿಯ ದೇಣಿಗೆ ಆಗಿದೆ. ಜಕಾತ್ ನೀಡುವಾತನು ಜಕಾತ್ ನೀಡುವ ಮುನ್ನ ಅದರ ಮಹತ್ವ, ಉದ್ದೇಶ ಮತ್ತು ಸದ್ಬಳಕೆಯನ್ನು ಅರಿಯಬೇಕು. ಶರೀಯತ್ (ಧರ್ಮಶಾಸ್ತ್ರ) ನಿಗದಿಪಡಿಸಿದ ಆದೇಶವನ್ನು ತಿಳಿದುಕೊಳ್ಳಬೇಕು. ಈ ದೇಣಿಗೆಯನ್ನು ಹತ್ತಿರದ ಬಡ ಸಂಬಂಧಿಕರನ್ನೂ, ಇತರ ಬಡವರನ್ನೂ ಹಾಗೂ ಧಾರ್ವಿುಕ ಶಿಕ್ಷಣ ನೀಡುತ್ತಿರುವ ಸಂಸ್ಥೆಗಳಿಗೂ (ಅರ್ಥಾತ್ ಮದರಸಗಳಿಗೆ) ನೀಡಬೇಕು. ಈ ನಿಟ್ಟಿನಲ್ಲಿ ತಿಳಿಯಬೇಕಾದ ಒಂದು ಮುಖ್ಯ ಅಂಶವೆಂದರೆ-ಜಕಾತ್ ಹಣವನ್ನು ಯಾವುದೇ ಮಸೀದಿಗಾಗಲಿ, ಮಸೀದಿಯ ನಿರ್ವಣಕ್ಕಾಗಲಿ ಬಿಲ್​ಕುಲ್ ನೀಡುವಂತಿಲ್ಲ. ಅಲ್ಲಾಹನದೇ ಮನೆಯಾದ ಮಸೀದಿಗೆ ಜಕಾತ್ ನೀಡುವುದು ತಪ್ಪು. ಅದೇ ರೀತಿ ಸ್ವೀಕರಿಸುವುದು ತಪ್ಪು. ಮಸೀದಿಗೆ ನೀಡುವ ಬದಲು ಅಲ್ಲಾಹನದೇ ಸೃಷ್ಟಿ ಬಡಜನಾಂಗಕ್ಕೆ ನೀಡುವುದು ಧರ್ಮವಾಗಿದೆ. ಕರುಣಾನಿಧಿಯೂ ಆದ ದಯಾಮಯನು ಆದ ಅಲ್ಲಾಹನ ನಾಮದಿಂದ ಬಡಜನಾಂಗಕ್ಕೆ ಜಕಾತ್ ನೀಡಿದರೆ ಅಲ್ಲಾಹನ ಬಯಕೆಯೂ, ಆಕಾಂಕ್ಷೆಯೂ ಪೂರೈಸಿದಂತಾಗುತ್ತದೆ.

ರಂಜಾನ್ ತಿಂಗಳಿನಲ್ಲಿ ನಾವು ಆಚರಿಸಿದ ಕ್ರಿಯೆ-ಕರ್ಮಗಳು ಸದಾ ಅನುಷ್ಠಾನಕ್ಕೆ ಬರಬೇಕು. ಜಕಾತ್ ನೀಡಿದ ವ್ಯಕ್ತಿ ಸದಾ ಕೊಡುಗೈದಾನಿಯಾಗಿರಬೇಕು. ರಂಜಾನ್ ತಿಂಗಳಿನ ಉಪವಾಸ ಆಚರಿಸುವ ಸಂದರ್ಭದಲ್ಲಿ ಒಳ್ಳೆಯ ಗುಣಗಳು ಮೂಡುತ್ತವೆ. ಅವು ರಂಜಾನ್ ತಿಂಗಳಿಗೆ ಮಾತ್ರ ಮೀಸಲು ಆಗದೆ ಸದಾ ಚಾಲ್ತಿಯಲ್ಲಿರಬೇಕು. ಉಪವಾಸ ವ್ರತದ ಸ್ಥಿತಿಯಲ್ಲಿ ಕಾಪಾಡಿಕೊಂಡಿದ್ದ ದೇವಭಯ, ಸತ್ಯನಿಷ್ಠೆ, ಪ್ರಾಮಾಣಿಕತೆ, ಸತ್ಯಸಂಧತೆ, ಸತ್ಕರ್ಮ, ನೈತಿಕತೆ, ಮಾನವೀಯತೆ, ಸಜ್ಜನಿಕೆ, ಸಾತ್ವಿಕತೆ ಸದಾ ಮುಂದುವರಿಯಬೇಕು. ಪುಣ್ಯಗಳಿಕೆಯ ಉದ್ದೇಶದಿಂದ ರಂಜಾನ್ ತಿಂಗಳಿನಲ್ಲಿ ಮಾತ್ರ ಸತ್ಯನಿಷ್ಠ, ಧರ್ಮನಿಷ್ಠನಾಗಿ ಮುಂಬರುವ 11 ತಿಂಗಳುಗಳ ಕಾಲ ಮಾಮೂಲಿನಂತೆ ನಡೆದುಕೊಂಡರೆ ಏನು ಪ್ರಯೋಜನ? ರಂಜಾನ್ ತಿಂಗಳಿನ ಶ್ರದ್ಧೆ, ಶ್ರಮ, ಭಕ್ತಿ ಶಾಶ್ವತವಾಗಿರಬೇಕು. ಉಪವಾಸ ಕೇವಲ ಹೊಟ್ಟೆಯ ಉಪವಾಸವಾಗಬಾರದು- ಉಪವಾಸಿಗನ ಅಂಗಾಂಗವೂ ಉಪವಾಸದ ರೂಪವನ್ನು ತಾಳಬೇಕು. ಮನಸ್ಸು ಒಳ್ಳೆಯದನ್ನೇ ಬಯಸಬೇಕು. ಕಣ್ಣು ಒಳಿತನ್ನೇ ಕಾಣಬೇಕು. ನಾಲಿಗೆ ಸತ್ಯವನ್ನೇ ನುಡಿಯಬೇಕು. ಕೈಗಳು ಸತ್ಕಾರ್ಯವನ್ನೇ ಎಸಗಬೇಕು. ವರ್ತನೆಯಲ್ಲಿ ನೈತಿಕತೆ, ಒಳ್ಳೆಯತನ ಇರಬೇಕು. ಕಾಲುಗಳು ಹಿತದೆಡೆಗೆ ಸಾಗಬೇಕು ಮಾತ್ರವಲ್ಲ ದುರ್ವರ್ಗದಿಂದ ದೂರ ಉಳಿಯಬೇಕು. ಇಂತಹ ಗುಣವಿಶೇಷಗಳಿಂದ ಅವನು ಪುಣ್ಯಪುರುಷನಾಗುತ್ತಾನೆ ಮತ್ತು ಸಾಮಾಜಿಕ ಕಳಕಳಿ ಹೊಂದಿದವನಾಗುತ್ತಾನೆ.

(ಲೇಖಕರು ನಿವೃತ್ತ ಪ್ರಾಧ್ಯಾಪಕರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net