ಗೊಂಬೆ ಪಾಠ: ಕಲಿಕೆಗೆ ಆಸಕ್ತಿ ತುಂಬುವ ಗೊಂಬೆಗಳು

Putani 1
Published on

| ಭಾರತಿ ಎ. ಕೊಪ್ಪ

ಅಮ್ಮ ನನಗೆ ಪುಟ್ಟದೊಂದು ಗೊಂಬೆ ತಂದ್ಕೊಡೆ

ಗೊಂಬೆ ಜೊತೆ ಆಡುವೆ, ಆಡಿ ಪಾಡಿ ನಲಿಯುವೆ

ಎಂಬ ಶಿಶುಗೀತೆ ಮಕ್ಕಳ ಬಾಯಲ್ಲಿ ಸದಾ ಉಲಿಯುತ್ತಿರುತ್ತದೆ. ಮಕ್ಕಳ ಆಟಿಕೆಗಳ ಲೋಕದಲ್ಲಿ ಗೊಂಬೆಗಳಿಗೆ ಮೊದಲ ಪ್ರಾಧಾನ್ಯತೆ. ‘ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು’ ಎಂಬಂತೆ ಗೊಂಬೆಗಳು ಕೇವಲ ಆಟಿಕೆಗಳಾಗಿರದೆ ಜೀವನ ಪಾಠವನ್ನು ಕಲಿಸುವುದರ ಜತೆಗೆ ಶೈಕ್ಷಣಿಕ ಹಂತದಲ್ಲೂ ತನ್ನದೇ ಛಾಪು ಮೂಡಿಸಿದೆ. ‘ಗೊಂಬೆ ಹೇಳುತೈತೆ.... ಮತ್ತೆ ಹೇಳುತೈತೆ ನೀನೆ ರಾಜಕುಮಾರ’ ಎಂಬಂತೆ ಮಕ್ಕಳ ಕನಸನ್ನು ಗರಿಗೆದರಿಸುತ್ತವೆ. ತೊಟ್ಟಿಲ ಕಂದನಿಂದ ಹಿಡಿದು, ಬಾಲ್ಯಾವಸ್ಥೆಯ ಪ್ರತಿ ಮಗುವೂ ಗೊಂಬೆಗಳನ್ನು ಆಪ್ತಮಿತ್ರನಂತೆ, ಕುಟುಂಬದ ಸದಸ್ಯನಂತೆ ಪ್ರೀತಿಸುತ್ತದೆ. ಕೆಲವು ಮಕ್ಕಳಿಗಂತೂ ಊಟ, ತಿಂಡಿ, ಆಟ, ನಿದ್ರೆ ಎಲ್ಲದಕ್ಕೂ ಗೊಂಬೆಗಳೇ ಸಂಗಾತಿಯಾಗಿರುತ್ತವೆ. ಗೊಂಬೆಗಳ ಕೃತಕ ಚಲನವಲನದಲ್ಲಿ ಜೀವಂತಿಕೆಯನ್ನು ಕಾಣುವ, ನಿಷ್ಕಲ್ಮಶವಾಗಿ ಅವುಗಳೊಂದಿಗೆ ಸ್ನೇಹ-ಪ್ರೀತಿ ಬೆಳೆಸಿಕೊಳ್ಳುವ ಮಕ್ಕಳ ಮನಸ್ಸಿನೊಂದಿಗೆ ಗೊಂಬೆಗಳು ಅವಿನಾಭಾವ ಸಂಬಂಧ ಹೊಂದಿವೆ.

ಗೊಂಬೆಗಳ ಇತಿಹಾಸ: ಮಕ್ಕಳ ಬೆಳವಣಿಗೆಯಲ್ಲಿ ಉತ್ತಮ ಒಡನಾಡಿಯಾಗಿರುವ ಗೊಂಬೆಗಳ ಬಳಕೆ ಯಾವಾಗ ಪ್ರಾರಂಭವಾಯಿತು ಎಂಬುದಕ್ಕೆ ನಿಖರ ಆಧಾರಗಳು ಸಿಗುವುದಿಲ್ಲ. ಆದರೆ 14ನೇ ಶತಮಾನದಲ್ಲಿ ಟಾಯ್ ಎಂಬ ಪದ ಬಳಕೆಯಲ್ಲಿತ್ತು ಎಂದು ನಂಬಲಾಗಿದೆ. ಸಿಂಧೂ ನಾಗರಿಕತೆಯ ಕಾಲದಲ್ಲಿ ಚಿಕ್ಕ ಗಾಡಿಗಳು, ಹಕ್ಕಿಗಳು, ಆಟಿಕೆಯ ಮಂಗ ಇವುಗಳು ಕಾಣಸಿಗುತ್ತಿದ್ದವು ಎಂದು ಉತ್ಖನನಗಳು ಸಾಕ್ಷೀಕರಿಸಿವೆ. ಪುರಾತನ ಗ್ರೀಕ್, ರೋಮ್ ಈಜಿಪ್ಶಿಯನ್ ನಾಗರಿಕತೆಗಳಲ್ಲೂ ಮಕ್ಕಳು ಮೇಣ, ಟೆರಾಕೋಟಾ, ಕಡ್ಡಿಗಳಿಂದ ಮಾಡಿದ ಗೊಂಬೆಗಳಲ್ಲಿ ಆಟವಾಡುತ್ತಿದ್ದರು ಎಂದು ತಿಳಿದುಬರುತ್ತದೆ.

ಮಕ್ಕಳ ಬೆಳವಣಿಗೆಯಲ್ಲೂ ಸಹಕಾರಿ: ಗೊಂಬೆಗಳ ಜೊತೆಗೆ ಆಡುವುದರಿಂದ ಮಕ್ಕಳ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಸಹಾಯವಾಗುತ್ತದೆ. ಪುಟ್ಟ ಮಕ್ಕಳು ಗೊಂಬೆಗೆ ಕೀ ಕೊಡುವುದು, ಅದರ ಉಡುಪು ಬದಲಾಯಿಸುವುದು, ತಲೆಬಾಚುವುದು, ಸ್ನಾನ ಮಾಡಿಸುವುದು ಇಂತಹ ಚಟುವಟಿಕೆಗಳನ್ನು ಮಾಡುತ್ತ ಆಟವಾಡುವುದರಿಂದ ಕೈಗಳ ಚಲನೆ ಮತ್ತು ಮಿದುಳಿನ ಸಂಬಂಧ ಉತ್ತಮಗೊಳ್ಳುತ್ತದೆ. ಸ್ವಯಂ ಶಿಸ್ತು ಮತ್ತು ಸ್ವಚ್ಚತಾ ಅಭ್ಯಾಸ ರೂಢಿಗತವಾಗುತ್ತದೆ. ಮುರಿದ ಗೊಂಬೆಯ ಕೈಕಾಲುಗಳನ್ನು ಜೋಡಿಸುವುದು, ಗೊಂಬೆಗಳ ರೂಪ, ಆಕಾರಗಳನ್ನು ತುಲನೆ ಮಾಡುವುದರಿಂದ ರ್ತಾಕ ಶಕ್ತಿ, ಸೃಜನಶೀಲತೆ ಬೆಳೆಯುತ್ತದೆ.

ಕಲಿಕೆಗೆ ಆಸಕ್ತಿ ತುಂಬುವ ಗೊಂಬೆಗಳು: ತರಗತಿ ಪಾಠದ ಏಕತಾನತೆಯು ಮಕ್ಕಳ ಆಸಕ್ತಿಯನ್ನು ಕಡಿಮೆ ಮಾಡುತ್ತದೆ. ಭಾಷೆ, ಗಣಿತ, ವಿಜ್ಞಾನ ಹೀಗೆ ಆಯಾ ವಿಷಯಗಳಿಗೆ ಪೂರಕವಾದ ತರಹೇವಾರಿ ಗೊಂಬೆಗಳನ್ನು ಕಲಿಕಾ ಸಾಮಗ್ರಿಗಳಾಗಿ ಬಳಸಿಕೊಂಡು ಮಕ್ಕಳನ್ನು ಕಲಿಕೆಯಲ್ಲಿ ತೊಡಗಿಸಿದರೆ ಕಲಿಕೆ ಹೆಚ್ಚು ಆಸಕ್ತಿದಾಯಕ ವಾಗಿರುತ್ತದೆ. ಪುಟಾಣಿಗಳಿಗೆ ಇಷ್ಟವಾಗುವ ಪ್ರಾಣಿ, ಪಕ್ಷಿ, ಮಾನವ ಗೊಂಬೆಗಳ ಪಪೆಟ್​ಗಳನ್ನು ತಯಾರಿಸಿ, ಕಥೆಗಳನ್ನು ಪಾತ್ರಾಧಾರಿತ ಸಂಭಾಷಣೆ ರೂಪದಲ್ಲಿ ಹೇಳುವುದನ್ನು ಕರ್ನಾಟಕದ ಸರ್ಕಾರಿ ಶಾಲೆಗಳ ನಲಿ-ಕಲಿ ಶಿಕ್ಷಣದಲ್ಲಿ ಅಳವಡಿಸಲಾಗಿದೆ.

ಮಕ್ಕಳಿಗೆ ವಿಜ್ಞಾನವನ್ನು ಅರ್ಥೈಸಲು ಮತ್ತು ಅವರಲ್ಲಿನ ಸುಪ್ತಶಕ್ತಿಯನ್ನು ಅನಾವರಣಗೊಳಿಸಲು ಗೊಂಬೆಯಾಟ ನನಗೆ ಆಕರ್ಷಣೀಯವೆನಿಸಿದೆ. ಪರಿಣಾಮಕಾರಿ ಮತ್ತು ಗುಣಾತ್ಮಕ ಕಲಿಕೆಗೆ ಗೊಂಬೆಗಳು ತುಂಬಾ ಸಹಾಯಕವಾಗಿವೆ. ಕೆಲವು ಪ್ರಕಾರದ ಗೊಂಬೆಗಳನ್ನು ನಾನೇ ತಯಾರಿಸಿದ್ದೇನೆ. ಇನ್ನೂ ಕೆಲವೊಂದಿಷ್ಟು ಗೊಂಬೆಗಳನ್ನು ಮಕ್ಕಳೇ ತಯಾರಿಸಿ ಅವರೇ ಪ್ರದರ್ಶಿಸುತ್ತಾರೆ. | ಸಿದ್ದು ಬಿರಾದಾರ ವಿಜ್ಞಾನ ಶಿಕ್ಷಕ, ಸರಕಾರಿ ಪ್ರೌಢಶಾಲೆ ಚಿಬ್ಬಲಗೇರಿ, ಹಳಿಯಾಳ

ಚನ್ನಪಟ್ಟಣದ ಚೆಂದದ ಗೊಂಬೆಗಳು: ವಿಶಿಷ್ಟ ಕೆತ್ತನೆ, ಆಕರ್ಷಕ ಬಣ್ಣ, ವಿನ್ಯಾಸಗಳಿಂದ ಮರದಿಂದ ತಯಾರಿಸಲಾದ ಚಂದದ ಗೊಂಬೆಗಳೇ ಚನ್ನಪಟ್ಟಣದ ಗೊಂಬೆಗಳು. ಇಲ್ಲಿನ ಗೊಂಬೆಗಳಿಗೆ ಸುಮಾರು ಮೂರು ಶತಮಾನಗಳ ಇತಿಹಾಸವಿದೆ. ಮೊದಲು ಕೈಯಂತ್ರಗಳಿಂದ ತಯಾರಾಗುತ್ತಿದ್ದ ಈ ಗೊಂಬೆಗಳು ಈಗ ಅತ್ಯಾಧುನಿಕ ಲೇತ್, ಟರ್ನರ್​ಗಳಲ್ಲಿ ತಯಾರಾಗುತ್ತಿವೆ. ಇಲ್ಲಿನ ಗೊಂಬೆಗಳು ನಿಸರ್ಗ ಸ್ನೇಹಿಗಳಾಗಿವೆ. ಮಕ್ಕಳು ಆಟವಾಡುವಾಗ ಬಾಯಿಗಿಟ್ಟರೂ ಅದರಿಂದ ತೊಂದರೆಯಾಗದು. ಆಲೆ ಮರದಿಂದ ತಯಾರಾಗುವ ಈ ಗೊಂಬೆಗಳಿಗೆ ತಾಳೆಗರಿ, ಅರಗು, ತರಕಾರಿಗಳ ನೈಸರ್ಗಿಕ ಬಣ್ಣಗಳನ್ನು ಹಾಕಲಾಗುತ್ತದೆ.

ಕಿನ್ನಾಳ ಆಟಿಕೆಗಳು: ಕೊಪ್ಪಳ ಜಿಲ್ಲೆಯಲ್ಲಿರುವ ಕಿನ್ನಾಳದ ಗೊಂಬೆಗಳು ಕೂಡ ಗೊಂಬೆ ಆಟಿಕೆಗಳಿಗೆ ಪ್ರಸಿದ್ಧವಾಗಿವೆ. ಕಚ್ಚಾವಸ್ತುಗಳನ್ನು ಬಳಸಿ ಆಟಿಕೆಗಳಿಗೆ ವಾಸ್ತವಿಕ ವಿನ್ಯಾಸ ನೀಡಿ ಕರಕುಶಲ ಸ್ಪರ್ಶ ನೀಡುವ ಕಲೆಯೇ ಕಿನ್ನಾಳ ಕಲೆ.

ವಿವಿಧ ಗೊಂಬೆಯಾಟಗಳು: ಸೂತ್ರದ ಗೊಂಬೆ, ತೊಗಲು ಗೊಂಬೆ, ಸಲಾಕೆ ಗೊಂಬೆ, ಕೀಲು ಗೊಂಬೆ, ಯಕ್ಷಗಾನ ಗೊಂಬೆ ಇತ್ಯಾದಿ ಹಿಂದಿನಿಂದಲೂ ರೂಢಿಯಲ್ಲಿದ್ದ ಗೊಂಬೆಯಾಟಗಳಾಗಿವೆ.

ಆಧುನಿಕ ಗೊಂಬೆಗಳು: 1959 ರಲ್ಲಿ ನ್ಯೂಯಾರ್ಕ್ ನಗರದಲ್ಲಿ ನಡೆದ ಅಮೆರಿಕನ್ ಇಂಟರ್​ನ್ಯಾಷನಲ್ ಟಾಯ್ ಫೇರ್​ನಲ್ಲಿ ಮೊದಲ ಬಾರಿಗೆ ಪ್ರವೇಶ ಮಾಡಿ ಪ್ರದರ್ಶನಗೊಂಡ ಬಾರ್ಬಿ ಗೊಂಬೆಗಳು ಈಗಲೂ ಮಕ್ಕಳ ಜನಪ್ರಿಯ ಆಟಿಕೆಯಾಗಿದೆ. ಅಂತೆಯೇ ಧ್ವನಿ ಮಾಯೆ ಕಲೆಯೊಂದಿಗೆ ಮಾತನಾಡುವ, ಮಾತನಾಡುವ ಗೊಂಬೆಗಳು ನೋಡುಗರ ಕಣ್ಮನ ಸೆಳೆಯುತ್ತವೆ. 20ನೇ ಶತಮಾನದ ಆರಂಭದಲ್ಲಿ ಯುರೋಪ್ ಮತ್ತು ಅಮೆರಿಕಗಳಲ್ಲಿ ತಯಾರಾದ ಟೆಡ್ಡಿಬೇರ್​ಗಳು ಇಂದು ಜಗತ್ತಿನಾದ್ಯಂತ ಮಕ್ಕಳ ಪಾಲಿನ ಪ್ರೀತಿಯ ಸಂಗಾತಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net