

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಅವರ ಮಹತ್ವಾಕಾಂಕ್ಷೆಯ 'ಗಂಧದಗುಡಿ' ಚಿತ್ರ ಅ. 28ರಂದು ಭರ್ಜರಿ ಬಿಡುಗಡೆ ಕಾಣುತ್ತಿರುವ ಹಿನ್ನೆಲೆಯಲ್ಲಿ ಪ್ರಿ-ರಿಲೀಸ್ ಇವೆಂಟ್ ಆಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಎಂಬ ಅದ್ಧೂರಿ ಕಾರ್ಯಕ್ರಮ ನಡೆಯುತ್ತಿದೆ.
ವಿವಿಧ ಸಿನಿಮಾ ಕ್ಷೇತ್ರದ ತಾರೆಯರು, ಸಿನಿರಂಗದ ದಿಗ್ಗಜರು ಮತ್ತು ನಾನಾ ಕ್ಷೇತ್ರಗಳ ಗಣ್ಯರ ಉಪಸ್ಥಿತಿಯಲ್ಲಿ ಕಂಗೊಳಿಸುತ್ತಿರುವ ಈ ವಿಶೇಷ ಹಾಗೂ ಅದ್ಧೂರಿಯಾದ ಸಮಾರಂಭದಲ್ಲಿ ಎಲ್ಲರ ಬಾಯಲ್ಲೂ ಅಪ್ಪು ಕುರಿತ ಮಾತುಗಳೇ. ವೇದಿಕೆ ಏರಿದ ಪ್ರತಿಯೊಬ್ಬರೂ ಪವರ್ಸ್ಟಾರ್ ಪುನೀತ್ ರಾಜಕುಮಾರ್ ಕುರಿತು ತಮ್ಮ ಅನಿಸಿಕೆ, ಅವರೊಂದಿಗಿನ ಒಡನಾಟ, ಕಳೆದ ಕ್ಷಣಗಳನ್ನು ನೆನಪುಗಳನ್ನು ಹಂಚಿಕೊಳ್ಳುತ್ತಿದ್ದಾರೆ.
ಈ ಸಮಾರಂಭದಲ್ಲಿ ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಮಾತನಾಡಿ, ಪುನೀತ್ ರಾಜಕುಮಾರ್ ‘ಗಂಧದ ಗುಡಿ’ಯನ್ನು ಹೀರೋ ಆಗಿ ಮಾಡಿಲ್ಲ. ಅದು ಅವರು ಒಬ್ಬ ಜವಾಬ್ದಾರಿ ವ್ಯಕ್ತಿಯಾಗಿ ಮಾಡಿದ ಸಿನಿಮಾ. ಹೀರೋ ಯಾರು ಬೇಕಾದರೂ ಆಗಬಹುದು. ಆದರೆ ಮನುಷ್ಯನಾಗುವುದು ಅದಕ್ಕಿಂತ ಮುಖ್ಯ ಎನ್ನುವ ದೊಡ್ಡ ಪಾಠವನ್ನು ಪುನೀತ್ ನಮಗೆ ಕಲಿಸಿ ಹೋಗಿದ್ದಾರೆ. ಅದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡರೆ, ಅದೇ ನಾವು ಅವರಿಗೆ ಕೊಡುವ ದೊಡ್ಡ ಗೌರವ ಎಂದು ಹೇಳಿದ್ದಾರೆ.
ಪುನೀತ್ ರಾಜಕುಮಾರ್ ಅವರನ್ನು ಕನ್ನಡಿಗರು ಎಂದಿಗೂ ಮರೆಯಲಾರರು. ಅವರು ಯಾವಾಗಲೂ ಒಳ್ಳೆಯ ಕೆಲಸಕ್ಕೆ ಸ್ಫೂರ್ತಿ ಆಗಿರುತ್ತಾರೆ. ನಿಸರ್ಗ, ಪರಿಸರ ಸಂರಕ್ಷಣೆಯ ಮಹತ್ವವನ್ನು ಇಟ್ಟುಕೊಂಡು ಮಾಡಲಾಗಿರುವ ‘ಗಂಧದ ಗುಡಿ’ ಪುನೀತ್ ರಾಜಕುಮಾರ್ ಅವರಂತೆಯೇ ಒಂದು ದಂತಕಥೆ ಆಗಲಿದೆ. ಇದೇ ನ.1ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವದಂದು ಅವರಿಗೆ ರಾಜ್ಯದ ಜನತೆಯ ಪರವಾಗಿ ‘ಕರ್ನಾಟಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಗುವುದು. | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ
ಇನ್ಫೊಸಿಸ್ನ ನಾರಾಯಣಮೂರ್ತಿ ಅವರ ಪತ್ನಿ ಸುಧಾ ಮೂರ್ತಿ ಅವರು ಕೂಡ ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದು, ಅಪ್ಪು ಜತೆಗಿನ ಕ್ಷಣಗಳ ಕುರಿತು ಮಾತನಾಡಿದರು. ಪುನೀತ್ ವೈಯಕ್ತಿಕವಾಗಿ ಗೊತ್ತು ಎಂದು ಸುಧಾ ಮೂರ್ತಿ, ಅಪ್ಪು-ಪುನೀತ್ ಎನ್ನುವ ಬದಲು ಲೋಹಿತ್ ಎಂದೇ ಕರೆಯುತ್ತಿದ್ದೆ ಎಂದು ಸ್ಮರಿಸಿಕೊಂಡರು.
ಅವರದ್ದು ಸರಳ ಸಜ್ಜನಿಕೆಯ ನಗು, ಆ ನಗು ನೆನಪಾಗುತ್ತಿದೆ. ಅವರು ಯಾವತ್ತೂ ಸ್ಟಾರ್ ಅನ್ನೋ ರೀತಿ ವರ್ತಿಸಿಲ್ಲ ಎಂಬುದಾಗಿ ನಟ ಅಚ್ಯುತ್ ಕುಮಾರ್ ಹೇಳಿದರು.
ಪರಭಾಷಾ ನಟ ಶರತ್ ಕುಮಾರ್ ಮಾತನಾಡಿ, ಇಲ್ಲಿ ಸೇರಿರುವ ಜನಸ್ತೋಮವನ್ನು ನೋಡಿದರೆ ಅಪ್ಪು ಈಗಲೂ ಇದ್ದಾರೆ. ರಾಜಕುಮಾರ ಸಿನಿಮಾದಲ್ಲಿ ತಂದೆಯ ಪಾತ್ರದಲ್ಲಿ ಮಾಡಬೇಕು ಎಂದರು, ಮಾಡಿದೆ, ಅದು ದೊಡ್ಡ ಹಿಟ್ ಆಯ್ತು. ಅಪ್ಪ ಹೃದಯದಲ್ಲೇ ಇದ್ದಾರೆ ಎಂದರು.
ನಿರ್ದೇಶಕ ರಾಜ್ ಬಿ. ಶೆಟ್ಟಿ ಮಾತನಾಡಿ, ಪರ್ವ ಎಂದರೆ ಹಬ್ಬ, ನನ್ನ ಸಿನಿಮಾ ಜೀವನವೇ ಅವರಿಗೆ ಅರ್ಪಣೆ, ಅವರ ಬದುಕನ್ನು ಪಾಲಿಸೋಣ, ಅಳವಡಿಸಿಕೊಳ್ಳೋಣ ಎಂದರು.
ಇದೊಂದು ಎಮೋಷನಲ್ ಮೊಮೆಂಟ್. ನನಗೆ ಡ್ಯಾನ್ಸ್ ಬರಲ್ಲ, ಅಪ್ಪು ಜತೆ ಮಾಡುವಾಗ ಅವರೇ ಹೇಳಿಕೊಡುತ್ತಿದ್ದರು. ಕಷ್ಟ ಆದ್ರೆ ಚೇಂಜ್ ಮಾಡಿಸುತ್ತಿದ್ದರು. ತುಂಬಾ ಸಪೋರ್ಟ್ ಮಾಡುತ್ತಿದ್ದರು, ಇಂದು ನಾನು ಇಲ್ಲಿ ನಿಂತಿದ್ದರೆ ಅದಕ್ಕೆ ಕಾರಣ ರಾಜಕುಮಾರ್ ಅವರ ಕುಟುಂಬ ಎಂದು ನಟಿ ರಮ್ಯಾ ಹೇಳಿದರು.
ಧ್ರುವ ಸರ್ಜಾ, ಯಶ್, ರಕ್ಷಿತ್ ಶೆಟ್ಟಿ, ರಾಣಾ ದಗ್ಗುಬಾಟಿ, ಅಖಿಲ್ ನಾಗಾರ್ಜುನ, ರಂಗಾಯಣ ರಘು, ದುನಿಯಾ ವಿಜಯ್ ಸೇರಿ ಹಲವರು ಈ ಸಮಾರಂಭದಲ್ಲಿ ಪಾಲ್ಗೊಂಡಿದ್ದಾರೆ.