

ಬೆಂಗಳೂರು: ಪವರ್ಸ್ಟಾರ್ ಪುನೀತ್ ರಾಜಕುಮಾರ್ ಎಲ್ಲರನ್ನೂ ಅಗಲಿ ಇನ್ನೇನು ಒಂದು ವರ್ಷ ಆಗುತ್ತ ಬಂದಿದ್ದು, ಅವರ ಮಹತ್ವಾಕಾಂಕ್ಷೆಯ ಪ್ರಾಜೆಕ್ಟ್, ದೊಡ್ಡ ಕನಸೇ ಆಗಿರುವ 'ಗಂಧದಗುಡಿ' ಇದೇ 28ರಂದು ಅದ್ಧೂರಿಯಾಗಿ ಬಿಡುಗಡೆ ಆಗಲಿದೆ. ಈ ಹಿನ್ನೆಲೆಯಲ್ಲಿ 'ಗಂಧದಗುಡಿ' ಪ್ರಿ-ರಿಲೀಸ್ ಇವೆಂಟ್ ಆಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಪುನೀತ ಪರ್ವ ಎಂಬ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.
ಚಂದನವನ ಮಾತ್ರವಲ್ಲದೆ ದಕ್ಷಿಣಭಾರತದ ಸಿನಿಮಾರಂಗದ ದಿಗ್ಗಜರು, ವಿವಿಧ ಕ್ಷೇತ್ರಗಳ ಗಣ್ಯರ ಸಮ್ಮುಖದಲ್ಲಿ ಈ ಸಮಾರಂಭ ನಡೆಯುತ್ತಿದ್ದು, ಅಪ್ಪು ಕುರಿತು ಸಹೋದರ ಶಿವರಾಜ್ಕುಮಾರ್ ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡಿದ್ದಾರೆ. ಈ ಸಮಾರಂಭದಲ್ಲಿ ಮಾತನಾಡುವುದು ಬಹಳ ಕಷ್ಟ ಇದೆ ಎನ್ನುತ್ತಲೇ ಅವರು ತಮ್ಮ ಭಾವನೆಗಳನ್ನು ವ್ಯಕ್ತಪಡಿಸಿದ್ದಾರೆ.
ಅಪ್ಪು ನಮ್ಮನ್ನೆಲ್ಲ ಅಗಲಿ ಒಂದು ವರ್ಷವಾಯ್ತು, ಆದರೂ ನೋವು ಸಂಕಟ ಕಡಿಮೆಯಾಗಿಲ್ಲ. ನಮಗಷ್ಟೇ ಅಲ್ಲ ಇಡೀ ಕರ್ನಾಟಕದ ಜನತೆಗೂ ಆ ನೋವಿದೆ ಎನ್ನುತ್ತ ಸಹೋದರನನ್ನು ಸ್ಮರಿಸಿಕೊಂಡು ಭಾವನೆಗಳನ್ನು ಹಂಚಿಕೊಂಡ ಶಿವರಾಜ್ಕುಮಾರ್ ಗದ್ಗದಿತರಾದರು.
'ಗಂಧದಗುಡಿ' ಎಂದಾಗ ನೆನಪಾಗುವುದು ಅಪ್ಪಾಜಿ-ವಿಷ್ಣುವರ್ಧನ್ ಅವರ ಸಿನಿಮಾ. ಆಮೇಲೆ ನಾನು 'ಗಂಧದಗುಡಿ' ಸಿನಿಮಾ ಮಾಡಿದ್ದೆ. ಅಪ್ಪಾಜಿ ಕ್ಲೈಮ್ಯಾಕ್ಸ್ನಲ್ಲಿ ಬಂದಿದ್ದರು. ಅದೇ ಗಂಧದಗುಡಿ ಅಪ್ಪು ಅಪ್ಪುವಾಗಿ ಮಾಡಿದ್ದಾನೆ ಎಂದು ಶಿವಣ್ಣ, ಈ ಹೊಸ ಗಂಧದಗುಡಿ ಕುರಿತು ಅನಿಸಿಕೆಗಳನ್ನು ಹೇಳಿಕೊಂಡರು.