ಸೇನೆಯಲ್ಲಿ ಸಮಾನ ಪಾತ್ರಕ್ಕೆ ಮುನ್ನುಡಿ!; ಹೆಣ್ಣು 4 ಗೋಡೆಗೆ ಸೀಮಿತಳು ಎಂದು ಮೂದಲಿಸುವ ಕಾಲ ಇದಲ್ಲ..

Lalitha Lead
Published on

ಹೆಣ್ಣು 4 ಗೋಡೆಗೆ ಸೀಮಿತಳು ಎಂದು ಮೂದಲಿಸುವ ಕಾಲ ಇದಲ್ಲ. ಎಲ್ಲ ಕ್ಷೇತ್ರದಲ್ಲೂ ಸಮಾನ ಅವಕಾಶ ಪಡೆಯಲು ಒಂದು ಹೆಜ್ಜೆ ಮುಂದಿಡುವ ಮಹಿಳೆಯರು ಈಗ ಭಾರತೀಯ ಸೇನಾಪಡೆಯ ಉನ್ನತ ಹುದ್ದೆಗಳಲ್ಲಿ ಒಂದಾದ ಕರ್ನಲ್ ಹುದ್ದೆಗೆ ನೇಮಕಗೊಂಡು ಸೇನೆಯಲ್ಲೂ ಮುಂಬಡ್ತಿ ಪಡೆದಿದ್ದಾರೆ. ಐವರು ಮಹಿಳಾ ಅಧಿಕಾರಿಗಳ 26 ವರ್ಷಗಳ ಸೇವೆ ಪರಿಗಣಿಸಿ ಈ ಅವಕಾಶ ನೀಡಲಾಗಿದೆ. ಮಹಿಳೆಯರು ತಮ್ಮ ವೃತ್ತಿ ಅವಕಾಶಗಳನ್ನು ವಿಸ್ತರಿಸಿಕೊಳ್ಳುತ್ತಿದ್ದಾರೆ ಎನ್ನುವುದಕ್ಕೆ ಇದೊಂದು ಉದಾಹರಣೆ.

| ರಾಘವ ಶರ್ಮ ನಿಡ್ಲೆ ನವದೆಹಲಿ

ಜ.26, 2020ರ ಗಣರಾಜ್ಯೋತ್ಸವ ಪಥ ಸಂಚಲನದಲ್ಲಿ ಭಾರತೀಯ ಸೇನೆಯನ್ನು ಯುವ ಮಹಿಳಾಧಿಕಾರಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ ಮುನ್ನಡೆಸಿದ್ದು ಭಾರತೀಯ ಸೇನೆಗೆ ಮಾತ್ರವಲ್ಲ, ದೇಶಕ್ಕೆ ಹೆಮ್ಮೆಯ ವಿಷಯ. ಲಿಂಗ ಸಮಾನತೆ ದೃಷ್ಟಿಯಿಂದಲೂ ಇದು ಉತ್ತಮ ಸಂದೇಶ ರವಾನಿಸಿತ್ತು. ಸೇನೆಯಲ್ಲಿ ಲಿಂಗ ತಾರತಮ್ಯ ತೊಡೆದುಹಾಕಲೆಂದೇ ಕಳೆದ ವರ್ಷದ ಫೆಬ್ರವರಿಯಲ್ಲಿ ಐತಿಹಾಸಿಕ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್, ಭೂಸೇನೆಯಲ್ಲಿ ಅರ್ಹ ಮಹಿಳಾಧಿಕಾರಿಗಳಿಗೂ ನಿವೃತ್ತಿವರೆಗೆ ಸೇವೆ ಸಲ್ಲಿಸುವ ಅವಕಾಶವಿರ ಬೇಕು ಎಂದಿತ್ತು. ಜತೆಗೆ, ಭೂಸೇನೆಯ ಎಲ್ಲ ವಿಭಾಗದ ಮಹಿಳಾ ಅಧಿಕಾರಿಗಳನ್ನೂ ಸೇನೆಯ ಕಾಯಂ ಆಯೋಗಕ್ಕೆ ಪರಿಗಣಿಸಬೇಕು ಎಂದು ತೀರ್ಪು ಕೊಟ್ಟಿತ್ತು. 2010ರಲ್ಲಿ ದಿಲ್ಲಿ ಹೈಕೋರ್ಟ್ ತೀರ್ಪನ್ನು 10 ವರ್ಷಗಳ ಬಳಿಕ ಎತ್ತಿಹಿಡಿದಿದ್ದ ಸುಪ್ರೀಂ, ಮಹಿಳಾಧಿಕಾರಿಗಳ ಬಹು ವರ್ಷಗಳ ಕನಸು ನನಸು ಮಾಡಿತ್ತು. ಗಣರಾಜ್ಯೋತ್ಸವ ಪಥಸಂಚಲನದಲ್ಲಿ ಕ್ಯಾಪ್ಟನ್ ತಾನಿಯಾ ಶೆರ್ಗಿಲ್ ಸೇನೆ ಮುನ್ನಡೆಸಿದ್ದನ್ನು ಉಲ್ಲೇಖಿಸಿ ತೀರ್ಪನ್ನು ಸಮರ್ಥಿಸಿಕೊಂಡಿತ್ತು! ಈ ತೀರ್ಪಿನ ಪರಿಣಾಮವಾಗಿಯೇ ಈವರೆಗೆ ಭೂಸೇನೆಯ 424 ಮಹಿಳಾಧಿಕಾರಿಗಳಿಗೆ ಕಾಯಂ ಆಯೋಗದ ಮಾನ್ಯತೆ ಸಿಕ್ಕಿದೆ. ಇವೆಲ್ಲದರ ನಡುವೆ, ಭೂಸೇನೆಯಲ್ಲಿ 26 ವರ್ಷ ಸೇವೆ ಪೂರ್ಣಗೊಳಿಸಿರುವ ಐವರು ಹಿರಿಯ ಮಹಿಳಾ ಸೇನಾಧಿಕಾರಿಗಳಿಗೆ ಲೆಫ್ಟಿನೆಂಟ್ ಕರ್ನಲ್ ಶ್ರೇಣಿಯಿಂದ ಕರ್ನಲ್ ಶ್ರೇಣಿಗೆ ಬಡ್ತಿ ಸಿಕ್ಕಿದೆ. ಭೂಸೇನೆಯಲ್ಲಿ ಮೊದಲ ಬಾರಿಗೆ ಮಹಿಳಾಧಿಕಾರಿಗಳು ಕರ್ನಲ್ ಶ್ರೇಣಿಗೆ ಬಡ್ತಿ ಹೊಂದಿರುವುದರಿಂದ ಐತಿಹಾಸಿಕ ಬೆಳವಣಿಗೆ.

ಮಹತ್ವದ ಹೆಜ್ಜೆ: ಆ.15ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದಲ್ಲಿ ಪ್ರಧಾನಿ ಮೋದಿ, ಸೈನಿಕ ಶಾಲೆಗಳಲ್ಲಿ ಬಾಲಕಿಯರಿಗೆ ಪ್ರವೇಶಾತಿ ನೀಡುವುದಾಗಿ ಘೋಷಿಸಿದ್ದಾರೆ. ಸೇನೆಯಲ್ಲಿ ಪುರುಷ/ಮಹಿಳೆಯರ ಸಮಾನ ಪಾತ್ರ ಮತ್ತು ಸದೃಢ ಜೀವನಕ್ಕಾಗಿ ಯುವತಿ/ಮಹಿಳೆಯರನ್ನು ಸಿದ್ಧಪಡಿಸುವಲ್ಲಿ ಇದು ಮಹತ್ವದ ನಡೆ ಎನಿಸಿಕೊಳ್ಳಲಿದೆ.

ಅನುಪಮ ಸೇವೆಗೆ ಸಿಕ್ಕ ಫಲ: ಲೆಫ್ಟಿನೆಂಟ್ ಕರ್ನಲ್ ನವನೀತ್ ದುಗ್ಗಲ್ ಭೂಸೇನೆಗೆ ನೇಮಕಗೊಂಡಾಗ 21 ವರ್ಷ. ರಾಷ್ಟ್ರ ಮಟ್ಟದ ಶೂಟರ್ ಆಗಿಯೂ ಗಮನಸೆಳೆದಿದ್ದ ದುಗ್ಗಲ್, 2006ರ ವಿಶ್ವ ಮಿಲಿಟರಿ ಗೇಮ್್ಸ ನಲ್ಲಿ ಭಾರತೀಯ ಸೇನೆ ಪ್ರತಿನಿಧಿಸಿದ್ದರು. ಭಾರತದ ಈಶಾನ್ಯ ರಾಜ್ಯಗಳು, ಜಮ್ಮು-ಕಾಶ್ಮೀರ, ಪಶ್ಚಿಮದ ಕೆಲ ರಾಜ್ಯಗಳ ಸವಾಲೊಡ್ಡುವ ಭೂಪ್ರದೇಶಗಳಲ್ಲಿ ಸೇವೆ ಸಲ್ಲಿಸಿರುವ ದುಗ್ಗಲ್ ಕರ್ನಲ್ ಹುದ್ದೆಗೆ ಬಡ್ತಿ ಹೊಂದಿದ ಮಹಿಳಾಧಿಕಾರಿಗಳಲ್ಲಿ ಒಬ್ಬರು. ಭೂಸೇನೆಯ ಕಾರ್ಪ್ಸ್ ಆಫ್ ಎಲೆಕ್ಟ್ರಾನಿಕ್ಸ್ ಆಂಡ್ ಮೆಕ್ಯಾನಿಕಲ್ ಇಂಜಿನಿಯರ್ಸ್ ವಿಭಾಗದಲ್ಲಿ ದುಗ್ಗಲ್ ಜತೆಗೆ ಸೇವೆ ಸಲ್ಲಿಸಿರುವ ಲೆ.ಕ. ಸೋನಿಯಾ ಆನಂದ್, ಕೋರ್ ಆಫ್ ಸಿಗ್ನಲ್ಸ್ ವಿಭಾಗದ ಲೆ.ಕ. ಸಂಗೀತಾ ಸರ್ದಾನಾ, ಕೋರ್ ಆಫ್ ಇಂಜಿನಿಯರ್ಸ್ ವಿಭಾಗದ ಲೆ.ಕ. ರೀನು ಖನ್ನಾ ಮತ್ತು ಲೆ.ಕ. ರಿಚಾ ಸಾಗರ್ ಸೇರಿ ಐದು ಮಂದಿ ಭೂಸೇನೆಗೆ ಸಲ್ಲಿಸಿದ ಅನುಪಮ ಸೇವೆಯಿಂದಾಗಿಯೇ ಈ ಗೌರವಕ್ಕೆ ಭಾಜನರಾಗಿದ್ದಾರೆ.

ಅವಕಾಶ ಕಡಿಮೆ ಇತ್ತು: ಭೂಸೇನೆಯಲ್ಲಿ ಆಫೀಸರ್ ಕೇಡರ್​ನ 43 ಸಾವಿರ ಅಧಿಕಾರಿಗಳಿದ್ದರೂ, ಅವರಲ್ಲಿ ಮಹಿಳಾಧಿಕಾರಿಗಳ ಸಂಖ್ಯೆ ಅಂದಾಜು 1650 (ವೈದ್ಯಕೀಯ ವಿಭಾಗದ ಅಧಿಕಾರಿ ಹೊರತುಪಡಿಸಿ) ಮಾತ್ರ. ಇದುವರೆಗೆ, ಭೂಸೇನೆಯ ವೈದ್ಯಕೀಯ, ಕಾನೂನು ಮತ್ತು ಶೈಕ್ಷಣಿಕ ವಿಭಾಗದ ಹಿರಿಯ ಮಹಿಳಾ ಅಧಿಕಾರಿಗಳಿಗೆ ಮಾತ್ರ ಲೆಫ್ಟಿನೆಂಟ್ ಕರ್ನಲ್​ನಿಂದ ಕರ್ನಲ್ ಹುದ್ದೆಗೆ ಬಡ್ತಿ ಹೊಂದುವ ಅವಕಾಶವಿತ್ತು. ಆದರೆ, ಸುಪ್ರೀಂಕೋರ್ಟ್ ತೀರ್ಪಿನಿಂದ ಇಂಥದ್ದೊಂದು ಪರಂಪರೆ ಅಂತ್ಯ ಕಂಡಿದೆ. ಭೂಸೇನೆಯ ಸಿಗ್ನಲ್ಸ್, ಇಂಜಿನಿಯರ್ಸ್, ಆರ್ವಿು ಏವಿಯೇಷನ್, ಆರ್ವಿು ಏರ್ ಡಿಫೆನ್ಸ್, ಎಲೆಕ್ಟ್ರಾನಿಕ್ಸ್ ಆಂಡ್ ಮೆಕ್ಯಾನಿಕಲ್ ಇಂಜಿನಿಯರ್ಸ್, ಆರ್ವಿು ಸರ್ವಿಸ್ ಕೋರ್, ಆರ್ವಿು ಆರ್ಡಿನೆನ್ಸ್ ಕೋರ್ ಆಂಡ್ ಇಂಟೆಲಿಜೆನ್ಸ್ ಸೇರಿ ಒಟ್ಟು 8 ವಿಭಾಗಗಳನ್ನು ಈಗ ಹೊಸದಾಗಿ ಪರ್ಮನೆಂಟ್ ಕಮಿಷನ್ ವ್ಯಾಪ್ತಿಗೆ ತರಲಾಗಿದೆ.

ಅಭಿಪ್ರಾಯ ಸುಳ್ಳಾಯಿತು: ಭೂಸೇನೆಯ 2019ರ ನಿಯಮಾವಳಿ ಪ್ರಕಾರ, ಪರ್ಮನೆಂಟ್ ಕಮಿಷನ್​ನಲ್ಲಿ ಮಹಿಳಾ ಅಧಿಕಾರಿಗಳು ಸ್ಟಾಫ್ ಪೋಸ್ಟಿಂಗ್​ಗಳಿಗೆ ಸೀಮಿತವಾಗಿದ್ದರು. ಕಮಾಂಡ್ ಪೋಸ್ಟ್ ಗಳಲ್ಲಿ ಸೇವೆ ಸಲ್ಲಿಸುವ ಅವಕಾಶ ಇರಲಿಲ್ಲ. ಅಪಾರ ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಸಶಕ್ತತೆಯ ಅಗತ್ಯವಿರುವ ವಿಭಾಗಗಳಲ್ಲಿ (ಯುದ್ಧ) ಮಹಿಳೆಯರಿಗೆ ಅವಕಾಶ ನೀಡಲು ಅಸಾಧ್ಯ ಎಂದು ಸುಪ್ರೀಂಕೋರ್ಟ್ ಮುಂದೆ ವಾದಿಸಿದ್ದ ಕೇಂದ್ರ, ಅವರ ಸೀಮಿತ ದೈಹಿಕ ಸಾಮರ್ಥ್ಯ ಹಾಗೂ ಕೆಲವು ಕೌಟುಂಬಿಕ ವಿಷಯಗಳಿಂದಾಗಿ ಸೇನೆಯಲ್ಲಿನ ಕಠಿಣ ಸವಾಲು ಹಾಗೂ ಅಪಾಯ ಎದುರಿಸಲು ಕಷ್ಟವಾದೀತು ಎಂದು ಅಭಿಪ್ರಾಯಪಟ್ಟಿತ್ತು. ಅಲ್ಲದೆ, ಪುರುಷರಿಗೆ ಮುಖ್ಯವಾಗಿ ಗ್ರಾಮೀಣ ಭಾಗದಿಂದ ಬಂದ ಕೆಲ ಪುರುಷ ಸೇನಾನಿಗಳಿಗೆ ತಮ್ಮ ಯೂನಿಟ್​ಗಳನ್ನು ಮಹಿಳಾಧಿಕಾರಿ ಮುನ್ನಡೆಸುವುದನ್ನು ಒಪ್ಪಿಕೊಳ್ಳುವುದು ಸ್ವಲ್ಪಮಟ್ಟಿಗೆ ಕಷ್ಟವಾಗಬಹುದು ಎಂದಿತ್ತು. ಈ ವಾದ ತಳ್ಳಿಹಾಕಿದ್ದ ಸುಪ್ರೀಂಕೋರ್ಟ್, ಇಂಥದ್ದೊಂದು ಅವಕಾಶದಿಂದ ಮಹಿಳೆಯರನ್ನು ವಂಚಿತಗೊಳಿಸಿದ ನಿಮ್ಮ ವಾದ ಸಂವಿಧಾನದ ಆರ್ಟಿಕಲ್ 14 ಮತ್ತು 16ನ್ನು ಉಲ್ಲಂಘಿಸುತ್ತದೆ. ಮಹಿಳಾ ಅಧಿಕಾರಿಗಳು ಎಷ್ಟೇ ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಿರಲಿ, ಪುರುಷರಂತೆ ಅವರಿಗೂ ಪರ್ಮನೆಂಟ್ ಕಮಿಷನ್ ನಿಯಮ ಅನ್ವಯಿಸುತ್ತವೆ. ಕಮಾಂಡ್ ಹುದ್ದೆಗಳಿಂದ ಅವರನ್ನು ಹೊರಗಿಡುವಂತಿಲ್ಲ. ಸಮರ್ಥ ಮಹಿಳಾ ಅಧಿಕಾರಿಗಳನ್ನು ಗುರುತಿಸಿ ಆಯ್ಕೆ ಮಾಡಬೇಕು ಎಂದು ಒತ್ತಿಹೇಳಿದ್ದನ್ನಿಲ್ಲಿ ನೆನಪಿಸಿಕೊಳ್ಳಬಹುದು.

ಹೋರಾಟಕ್ಕೆ ಸಿಕ್ಕ ಫಲ: ಸೇನೆಯಲ್ಲಿ ಮಹಿಳೆಯರಿಗೆ ಸಮಾನ ಅವಕಾಶ ಒದಗಿಸಲು ಕಳೆದ ವಾರ ಮತ್ತೊಂದು ಗಮನಾರ್ಹ ಆದೇಶ ಪ್ರಕಟಿಸಿರುವ ಸುಪ್ರೀಂಕೋರ್ಟ್, ಮಹಿಳೆಯರಿಗೂ ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯ ಪ್ರವೇಶ ಪರೀಕ್ಷೆ ಬರೆಯುವ ಅವಕಾಶವಿರಬೇಕು ಎಂದು ಹೇಳಿದೆ. ಇದುವರೆಗೆ ಮಹಿಳೆಯರು ಭಾರತೀಯ ಸೇನಾ ಅಕಾಡೆಮಿ ಮತ್ತು ಅಧಿಕಾರಿಗಳ ತರಬೇತಿ ಅಕಾಡೆಮಿ ಮೂಲಕ ಸೇನೆಗೆ ಸೇರಬಹುದಾಗಿತ್ತು. ನ್ಯಾಷನಲ್ ಡಿಫೆನ್ಸ್ ಅಕಾಡೆಮಿಯಲ್ಲಿ ಪರೀಕ್ಷೆ ಬರೆಯಲು ಮಹಿಳೆಯರಿಗೆ ಅವಕಾಶವಿಲ್ಲದಿರುವುದು ಮತ್ತು ಸೇನೆಗೆ ಸೇರುವ ಮಹಿಳೆಯರಿಗೆ ಅವಕಾಶದ ಬಾಗಿಲನ್ನು ಮುಚ್ಚುವುದು ‘ಲಿಂಗ ತಾರತಮ್ಯ’ವಲ್ಲದೆ ಮತ್ತೇನು ಎಂದು ನ್ಯಾ. ಸಂಜಯ್ ಕಿಶನ್ ಕೌಲ್ ನೇತೃತ್ವದ ನ್ಯಾಯಪೀಠ ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದೆ. ನ್ಯಾಯಾಂಗವು ಸೇನೆ ಸೇರಬೇಕೆಂಬ ಮಹತ್ವಾಕಾಂಕ್ಷೆ ಹೊಂದಿರುವ ಯುವತಿಯರಿಗೆ ಅಡೆತಡೆ ನಿವಾರಿಸುವಲ್ಲಿ ನೆರವಾಗುತ್ತಿದೆ. ಒಟ್ಟಿನಲ್ಲಿ, ಸೇನೆಯಲ್ಲಿನ ಲಿಂಗ ತಾರತಮ್ಯದ ವಿರುದ್ಧದ ದೀರ್ಘಕಾಲದ ಹೋರಾಟಕ್ಕೆ ಈಗ ಫಲ ಸಿಗುತ್ತಿದೆ.

ಹಲವರಿಗೆ ಪ್ರೇರಣೆ: ಹಾಗೆ ನೋಡಿದರೆ, ಇದುವರೆಗಿನ ಕೇಂದ್ರ ಸರ್ಕಾರಗಳು ಸ್ವಯಂಪ್ರೇರಣೆಯಿಂದೇನೂ ಮಹಿಳಾಧಿಕಾರಿಗಳ ಪರ ನಿರ್ಧಾರ ಕೈಗೊಂಡಿದ್ದಲ್ಲ. ಇಲ್ಲಿಯೂ ಸುಪ್ರೀಂಕೋರ್ಟ್ ಮಧ್ಯಪ್ರವೇಶ ಮಾಡಬೇಕಾಗಿ ಬಂತು. ಅದರಿಂದಾಗಿ ಎಷ್ಟೋ ಮಹಿಳಾಧಿಕಾರಿಗಳ ಆಶಯ, ಹೋರಾಟ, ಕನಸಿಗೆ ಮನ್ನಣೆ ಸಿಕ್ಕಂತಾಗಿದೆ. ಮೇಲಾಗಿ, ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಬೇಕು ಮತ್ತು ಉನ್ನತ ಹುದ್ದೆಗಳಿಗೇರಿ ದೇಶ ಸೇವೆ ಮಾಡಬೇಕು ಎಂಬ ಕನಸು ಹೊತ್ತಿರುವ ಯುವತಿಯರಿಗೂ ಇದು ಪ್ರೇರಣೆಯಾಗಲಿದೆ. ಈ ಮಧ್ಯೆ, ನೌಕಾಸೇನೆ ಮತ್ತು ವಾಯುಸೇನೆಯಲ್ಲಿಯೂ ಮಹಿಳಾಧಿಕಾರಿಗಳು ಅಪಾಯಕಾರಿ ಪ್ರದೇಶಗಳಲ್ಲೂ ದಿಟ್ಟತನದಿಂದ ಸೇವೆ ಸಲ್ಲಿಸುತ್ತಿದ್ದರೂ, ಮಾನಸಿಕ-ದೈಹಿಕ ದೃಢತೆ, ಸಾಮರ್ಥ್ಯವೇ ಮುಖ್ಯವೆನಿಸಿರುವ ಭೂಸೇನೆಯ ಮಿಲಿಟರಿ ಕಾರ್ಯಾಚರಣೆಗಳಿಗೆ ಮಹಿಳಾ ಅಧಿಕಾರಿ/ಸೇನಾನಿಗಳನ್ನು ಇನ್ನೂ ಪರಿಗಣಿಸಲಾಗುತ್ತಿಲ್ಲ. ಭವಿಷ್ಯದಲ್ಲಿ ಇದು ನಿಜವಾಗುವ ಲಕ್ಷಣಗಳಂತೂ ಕಾಣುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net