

ಕೂಡಲೇ ಡಾ.ವಿಮಲಾ ರೋಗಿಯನ್ನು ಪರೀಕ್ಷಿಸಿದರು. ಭಾರಿ ರಕ್ತಸ್ರಾವವಾಗಿದ್ದು ಆಕೆ ನಿತ್ರಾಣಳಾಗಿದ್ದಳು. ಹೃದಯಬಡಿತ ಏರಿತ್ತು ಮತ್ತು ಬಿ.ಪಿ ಇಳಿದಿತ್ತು. ಅವಳಿಗೆ ಕೂಡಲೇ ಡ್ರಿಪ್ ಹಾಕಿ ಆಕ್ಸಿಜನ್ ಕೊಟ್ಟ ವಿಮಲಾ ರೋಗಿಯ ತಾಯಿಯನ್ನು ರೋಗಿಯ ಪರಿಸ್ಥಿತಿಗೆ ಕಾರಣವನ್ನು ಕೇಳಿದಾಗ, ‘ರಾಧಿಕಾಗೆ ಮದುವೆಯಾಗಿ ಇನ್ನೂ ಆರು ತಿಂಗಳೂ ಆಗಿಲ್ಲ. ಆಗಲೇ ಗರ್ಭಿಣಿಯಾದಳು. ಅವಳಿಗೆ ಮಗುವಾದರೆ ಜನರು ನಾನಾ ರೀತಿಯಲ್ಲಿ ಮಾತನಾಡುತ್ತಾರೆ ಎಂದು ಭಾವಿಸಿ ಅವಳನ್ನು ನಾಟಿ ವೈದ್ಯರೊಬ್ಬರ ಬಳಿ ಗರ್ಭಪಾತ ಮಾಡಿಸಲು ಕರೆದೊಯ್ದೆವು. ಅವರು ಕೆಲವು ಔಷಧ ನೀಡಿದರು. ಎರಡು ದಿನಗಳ ಹಿಂದೆ ಅವಳಿಗೆ ಗರ್ಭಪಾತವೇನೋ ಆಯಿತು, ಆದರೆ ರಕ್ತ ಸುರಿಯುವುದು ನಿಲ್ಲಲೇ ಇಲ್ಲ, ಹೀಗಾಗಿ ಇಲ್ಲಿಗೆ ಕರೆತಂದೆವು’ ಎಂದಳು.
ರಾಧಿಕಾಗೆ ಕೂಡಲೇ ಸರಿಯಾದ ರೀತಿಯಲ್ಲಿ ಗರ್ಭಪಾತ ಮಾಡದಿದ್ದರೆ ಆಕೆಯ ಜೀವಕ್ಕೆ ಅಪಾಯವಿದ್ದ ಕಾರಣ ಡಾ.ವಿಮಲಾ ಅವಳಿಗೆ ಗರ್ಭಪಾತ ಮಾಡಲು ನಿಶ್ಚಯಿಸಿದರು. ‘ನನಗೇನೂ ಮಾಡಬೇಡಿ ಡಾಕ್ಟರ್’ ಎಂದು ರಾಧಿಕಾ ಪದೇಪದೆ ಅರಚುತ್ತ ವೈದ್ಯರಿಗೆ ಯಾವುದೇ ಸಹಕಾರ ತೋರದಿದ್ದರೂ ಡಾ.ವಿಮಲಾ ಕೂಡಲೇ ಅವಳಿಗೆ ಗರ್ಭಪಾತ ಮಾಡಿ ವಾರ್ಡಿಗೆ ಹಾಕಿದರು. ಎರಡು ದಿನಗಳು ವಾರ್ಡಿನಲ್ಲಿದ್ದು ಚೇತರಿಸಿಕೊಂಡ ನಂತರ ರಾಧಿಕಾಳನ್ನು ಡಿಸ್ಚಾರ್ಜ್ ಮಾಡಲಾಯಿತು. ನರ್ಸಿಂಗ್ ಹೋಂನ ಬಿಲ್ ತುಂಬಿ ಎಲ್ಲರೂ ಹೊರಟುಹೋದರು.
2017ರ ಡಿಸೆಂಬರ್ 30ರಂದು ಕೇರಳದ ಇನ್ನೊಂದು ಜಿಲ್ಲೆಯ ಗ್ರಾಮೀಣ ಪೊಲೀಸ್ ಠಾಣೆಗೆ ಜಿಲ್ಲಾ ಮಕ್ಕಳ ಸಹಾಯವಾಣಿಯಿಂದ ಲಿಖಿತ ಪತ್ರ ಬಂದಿತು. ಆ ಪತ್ರದಲ್ಲಿ ಅದೇ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿರುವ ಶ್ರೀನಿವಾಸ ಎನ್ನುವವರ ಮಗಳಾದ ಕುಮಾರಿ (ನಿಜವಾದ ಹೆಸರಲ್ಲ) ಎನ್ನುವ 12 ವರ್ಷದ ಬಾಲಕಿ ಮೇಲೆ ಅವಳ ನೆರೆಮನೆಯ ರಮೇಶ್ ಲೈಂಗಿಕ ದೌರ್ಜನ್ಯ ನಡೆಸಿರುವುದಾಗಿ ತಮಗೆ ಮಾಹಿತಿ ಬಂದಿರುವ ಕಾರಣ ಮುಂದಿನ ಕ್ರಮ ಕೈಗೊಳ್ಳಲು ಕೋರಲಾಗಿತ್ತು. ಬಾಲಕಿಯ ವಿಳಾಸವನ್ನೂ ಅದೇ ಪತ್ರದಲ್ಲಿಯೇ ನೀಡಲಾಗಿತ್ತು.
ಠಾಣಾಧಿಕಾರಿ ತಮ್ಮೊಡನೆ ಮಹಿಳಾ ಪೊಲೀಸ್ ಅಧಿಕಾರಿ ಹಾಗೂ ಕಾನ್ಸ್ಟೇಬಲ್ಗಳನ್ನು ಕರೆದುಕೊಂಡು ಪತ್ರದಲ್ಲಿದ್ದ ವಿಳಾಸಕ್ಕೆ ಹೋಗಿ ವಿಚಾರಣೆ ನಡೆಸಿದರು. ಶ್ರೀನಿವಾಸ ಒಬ್ಬ ಬಡ ಕೂಲಿಕಾರ್ವಿುಕನಾಗಿದ್ದು ಕೆಲ ವರ್ಷಗಳ ಹಿಂದೆ ತೀರಿಕೊಂಡಿದ್ದ. ಕುಮಾರಿ ಒಂದು ಸಣ್ಣ ಷೆಡ್ನಲ್ಲಿ ತಾಯಿ ಮತ್ತು ಅಕ್ಕನೊಡನೆ ವಾಸಿಸುತ್ತಿದ್ದಳು. ಏಳನೆಯ ತರಗತಿಯಲ್ಲಿ ಓದುತ್ತಿದ್ದು, ಅವಳಿಗೆ ಹನ್ನೆರಡೂವರೆ ವರ್ಷವಾಗಿತ್ತೆಂದು ತಿಳಿಯಿತು.
ಮಹಿಳಾ ಪೊಲೀಸ್ ಅಧಿಕಾರಿ ಕುಮಾರಿಯನ್ನು ಪತ್ರದಲ್ಲಿದ್ದ ಮಾಹಿತಿ ಬಗ್ಗೆ ಏಕಾಂತದಲ್ಲಿ ವಿಚಾರಿಸಿದಾಗ ಆಕೆ ಹೀಗೆಂದಳು: ‘ರಜಾದಿನಗಳಂದು ಮನೆ ಸಮೀಪದಲ್ಲಿರುವ ರಮೇಶ್ ಮನೆಗೆ ಟಿ.ವಿ ನೋಡಲು ಹೋಗುತ್ತಿದ್ದೆ. ಒಂದು ವರ್ಷದ ಹಿಂದೆ ಕ್ರಿಸ್ವುಸ್ ರಜೆ ಸಮಯದಲ್ಲಿ ವಾಡಿಕೆಯಂತೆ ರಮೇಶಣ್ಣನ ಮನೆಗೆ ಹೋದಾಗ ಅಲ್ಲಿ ಯಾರೂ ಇರಲಿಲ್ಲ. ಅರ್ಧಗಂಟೆ ಟಿ.ವಿ ನೋಡಿದ ನಂತರ ಆತ ನನ್ನನ್ನು ಹತ್ತಿರದಲ್ಲಿಯೇ ಇರುವ ತನ್ನ ಸಂಬಂಧಿಕರ ಮನೆಗೆ ಕರೆದೊಯ್ದ. ಆ ಮನೆಗೆ ಬೀಗ ಹಾಕಿತ್ತು. ಅಲ್ಲಿ ಅವನು ನನಗೆ ತನ್ನ ಮೊಬೈಲಿನಲ್ಲಿ ಅಶ್ಲೀಲ ವಿಡಿಯೋ ತೋರಿಸಿದ. ಆನಂತರ ನನ್ನ ಮೇಲೆ ಅತ್ಯಾಚಾರ ಮಾಡಿದ. ಈ ವಿಷಯವನ್ನು ಯಾರಿಗಾದರೂ ಹೇಳಿದರೆ ನಿನ್ನ ವಿರುದ್ಧ ಪೊಲೀಸ್ ದೂರು ಕೊಡುತ್ತೇನೆ ಎಂದು ಹೆದರಿಸಿದ. ಭಯಭೀತಳಾಗಿ ಯಾರಿಗೂ ಈ ವಿಷಯ ತಿಳಿಸಲಿಲ್ಲ.
ಮುಂದೆಯೂ ಆತ ತನ್ನ ಮನೆಯಲ್ಲಿ ಯಾರೂ ಇಲ್ಲದಿದ್ದಾಗ ಎರಡು-ಮೂರು ಬಾರಿ ಅತ್ಯಾಚಾರ ಮಾಡಿದ. ಇದರ ಕಾರಣದಿಂದ ಇದೇ ಆಗಸ್ಟ್ ತಿಂಗಳಲ್ಲಿ ನನಗೆ ಮುಟ್ಟು ನಿಂತಿತು. ಗಾಬರಿಗೊಂಡ ನಾನು ಅದರ ಬಗ್ಗೆ ರಮೇಶಣ್ಣನಿಗೆ ತಿಳಿಸಿದೆ. ಅವನೇನೂ ತಲೆಕೆಡಿಸಿಕೊಳ್ಳಲಿಲ್ಲ. ಒಂದರೆಡು ತಿಂಗಳ ನಂತರ ನನಗೆ ವಾಂತಿಯಾಗಲು ಆರಂಭವಾಯಿತು. ಈ ವಿಷಯವನ್ನು ಆತನಿಗೆ ತಿಳಿಸಿದೆ. ಆಗಲೂ ಆತ ಮತ್ತೊಮ್ಮೆ ನನ್ನ ಮೇಲೆ ಅತ್ಯಾಚಾರ ಮಾಡಿದ. ಮುಂದೆ ನನ್ನ ಹೊಟ್ಟೆ ಊದತೊಡಗಿದಾಗ 2017ರ ಡಿಸೆಂಬರ್ ತಿಂಗಳ ಮೊದಲ ವಾರದಲ್ಲಿ ನನ್ನನ್ನು ಹತ್ತಿರದ ಪಟ್ಟಣಕ್ಕೆ ಕರೆದುಕೊಂಡು ಹೋಗಿ ವೈದ್ಯರಿಗೆ ತೋರಿಸಿದ. ಅವರು ನನ್ನ ಮೂತ್ರಪರೀಕ್ಷೆ ಮಾಡಿ ಗರ್ಭಿಣಿಯಾಗಿರುವೆನೆಂದು ತಿಳಿಸಿದರು.
ಊರಿಗೆ ಮರಳಿದ ರಾತ್ರಿ ರಮೇಶಣ್ಣ ಒಂದು ಮಾತ್ರೆಯನ್ನು ತಂದುಕೊಟ್ಟು ಅದನ್ನು ನುಂಗಿದರೆ ಅಬಾರ್ಷನ್ ಆಗುತ್ತದೆಂದ. ನಾನು ನುಂಗಿದೆ. ಆದರೆ ನನಗೇನೂ ಆಗಲಿಲ್ಲ. ಇದನ್ನು ರಮೇಶಣ್ಣನಿಗೆ ಹೇಳಿದೆ. ಆತ ಚಿಂತೆಗೀಡಾದ. ಮಾರನೆಯ ದಿನ ಶಾಲೆಯ ಬಳಿ ಬೇಟಿಯಾದ, ರಮೇಶಣ್ಣ ನೀನು ನನ್ನನ್ನು ಮದುವೆಯಾದಂತೆ ನಟಿಸಬೇಕು, ಇಲ್ಲದಿದ್ದರೆ ನನಗೆ ಸಮಸ್ಯೆಯಿದೆ ಎಂದ. ನಾನು ಒಪ್ಪಿದೆ. ಅದೇ ಸಂಜೆ ರಮೇಶಣ್ಣ ತನ್ನ ಗೆಳೆಯನೊಬ್ಬನ ಮನೆಗೆ ಕರೆದುಕೊಂಡು ಹೋದ. ಅಲ್ಲಿ ಅವನ ಗೆಳೆಯನ ತಾಯಿ ಸೀರೆ ಉಡಿಸಿ, ರವಿಕೆ ತೊಡಲು ಹೇಳಿ ಕೊರಳಿಗೆ ಧರಿಸಲು ತಾಳಿ ಕೊಟ್ಟರು. ನಾನು ತಯಾರಾದ ನಂತರ ರಮೇಶಣ್ಣ ಮದುಮಗನ ವೇಷದಲ್ಲಿ ನನ್ನ ಪಕ್ಕಕ್ಕೆ ಬಂದು ನಿಂತ. ರಮೇಶಣ್ಣನ ಗೆಳೆಯ ನಮ್ಮಿಬ್ಬರ ಹಲವಾರು ಫೋಟೋಗಳನ್ನು ತೆಗೆದುಕೊಂಡ.
ಶಾಲೆಗೆ ಕ್ರಿಸ್ಮಸ್ ರಜೆ ಬಂದಾಗ ನನಗೆ ತುಂಬ ರಕ್ತ ಹೋಗಲಾರಂಭಿಸಿತು. ಗಾಬರಿಯಾಗಿ ರಮೇಶಣ್ಣನಿಗೆ ಹೇಳಿದೆ. ಮಾರನೆಯ ದಿನ ಆತ ನನ್ನ ಮನೆಗೆ ತನ್ನ ತಾಯಿಯೊಂದಿಗೆ ಬಂದ. ನನ್ನನ್ನು ತಮ್ಮೊಡನೆ ಲಗ್ನವೊಂದಕ್ಕೆ ಬೇರೆ ಊರಿಗೆ ಕರೆದುಕೊಂಡು ಹೋಗಲು ನನ್ನ ತಾಯಿಯ ಒಪ್ಪಿಗೆಯನ್ನು ಕೇಳಿದ. ನನ್ನ ತಾಯಿ ಒಪ್ಪಿದಳು. ಅದೇ ರಾತ್ರಿ ನಾನು, ರಮೇಶಣ್ಣ, ಅವನ ತಾಯಿ, ಅವನ ಸೋದರಮಾವ ಮತ್ತು ಅವನ ಗೆಳೆಯ ಒಂದು ವ್ಯಾನಿನಲ್ಲಿ ಪಕ್ಕದ ಜಿಲ್ಲೆಗೆ ಹೊರಟೆವು, ಹಾದಿಯಲ್ಲಿಯೇ ನನಗೆ ತೀವ್ರ ರಕ್ತಸ್ರಾವವಾಗತೊಡಗಿತು. ಒಂದು ಗಂಟೆಯ ಪ್ರಯಾಣದ ನಂತರ ನಾವು ಪಟ್ಟಣವೊಂದನ್ನು ತಲುಪಿದೆವು. ಅಲ್ಲಿ ನನ್ನನ್ನು ಅವರು ಒಂದು ಆಸ್ಪತ್ರೆಗೆ ಕರೆದೊಯ್ದರು. ಅಲ್ಲಿನ ವೈದ್ಯರು ನನಗೆ ಏನು ಮಾಡಿದರೆಂಬುದು ತಿಳಿದಿಲ್ಲ. ತೀರಾ ನಿತ್ರಾಣಳಾಗಿದ್ದೆ. ಎಲ್ಲ ಮಂಪರುಮಂಪರಾಗಿತ್ತು. ಎರಡು ದಿನ ಆಸ್ಪತ್ರೆಯಲ್ಲಿ ಕಳೆದ ನಂತರ ನನ್ನನ್ನು ರಮೇಶಣ್ಣನ ತಾಯಿ ತಮ್ಮ ಜತೆಯಲ್ಲಿ ಬಸ್ಸಿನಲ್ಲಿ ನಮ್ಮೂರಿಗೆ ಕರೆದುಕೊಂಡು ಬಂದರು. ಆನಂತರ ನಮ್ಮ ಗ್ರಾಮದಲ್ಲಿ ರಮೇಶಣ್ಣ ನನ್ನನ್ನು ಗರ್ಭಿಣಿಯಾಗಿ ಮಾಡಿದ್ದ ಎಂದು ಗುಲ್ಲಾಯಿತು. ನಾವು ಹೆದರಿದೆವು. ಎರಡು-ಮೂರು ದಿನಗಳ ಬಳಿಕ ಯಾರೋ ಸಾಮಾಜಿಕ ಕಾರ್ಯಕರ್ತರು ನನ್ನ ಶಾಲೆಗೆ ಬಂದು ನಡೆದ ವಿಷಯವನ್ನು ಕೇಳಿದರು. ಅವರಿಗೆ ನಾನು ಸತ್ಯಸಂಗತಿ ತಿಳಿಸಿದೆ’.
ಈ ಹೇಳಿಕೆ ಮೇರೆಗೆ ಪೋಕ್ಸೋ ಕಾಯ್ದೆಯನ್ವಯ ರಮೇಶ್ ಮತ್ತಿತರರ ಮೇಲೆ ಪ್ರಕರಣ ದಾಖಲು ಮಾಡಲಾಯಿತು. ತನಿಖೆ ವೇಳೆ ಡಾ.ವಿಮಲಾರ ಆಸ್ಪತ್ರೆಗೆ ಹೋದ ಪೊಲೀಸರು, ಒಬ್ಬ ಅಪ್ರಾಪ್ತ ಬಾಲಕಿ ಗರ್ಭಿಣಿಯಾದದ್ದನ್ನು ಪೊಲೀಸರಿಗೆ ತಿಳಿಸದೆ ಆಕೆಗೆ ಗರ್ಭಪಾತ ಮಾಡಿದ ಆರೋಪದ ಮೇರೆಗೆ ಅವರನ್ನು ಪೋಕ್ಸೋ ಪ್ರಕರಣದಲ್ಲಿ ಆರೋಪಿಯನ್ನಾಗಿಸಿರುವುದಾಗಿ ತಿಳಿಸಿದರು. ದಿಗ್ಭಾ ›ಂತರಾದ ಡಾ.ವಿಮಲಾ, ‘ನನ್ನ ಬಳಿ ಬಂದವಳು 18 ವರ್ಷವಾಗಿದ್ದ ವಿವಾಹಿತ ಗೃಹಿಣಿ. ಅವಳ ಜೀವವನ್ನುಳಿಸಲು ಕೂಡಲೇ ಗರ್ಭಪಾತ ಮಾಡಲೇಬೇಕಾಯಿತು, ನನ್ನ ವೃತ್ತಿಧರ್ಮ ನಾನು ಪಾಲಿಸಿದ್ದೇನೆ’ ಎಂದರು. ‘ಡಾಕ್ಟರೇ, ಆ ಬಾಲಕಿಯ ಜೀವ ಉಳಿಸಿದ್ದು ಸರಿ. ಆದರೆ ಬಾಲಕಿಯನ್ನು ಅವಳ ವಯಸ್ಸೆಷ್ಟು ಎಂದು ಏಕೆ ಕೇಳಲಿಲ್ಲ? ಸ್ವಲ್ಪ ಅನುಮಾನವಿದ್ದರೂ ಸ್ಥಳೀಯ ಪೊಲೀಸ್ ಠಾಣೆಗೆ ತಿಳಿಸಬಹುದಿತ್ತಲ್ಲವೇ?’ ಎಂದು ಹೇಳಿ ಅವರನ್ನು ಬಂಧಿಸಿದರು.
ಡಾ.ವಿಮಲಾ ಹೈಕೊರ್ಟಿನ ಮೊರೆಹೊಕ್ಕು ಪ್ರಕರಣ ರದ್ದುಪಡಿಸಲು ಕೋರಿದರು. ‘ನಿಮ್ಮ ಬಳಿ ಬಂದವಳು 13 ವರ್ಷ ವಯಸ್ಸಿನ ಅಪ್ರಾಪ್ತ ಬಾಲಕಿಯೆಂದು ಇಷ್ಟು ವರ್ಷ ಸರ್ವೀಸಾಗಿರುವ ನಿಮ್ಮ ಅರಿವಿಗೆ ಬರಲಿಲ್ಲವೇ? ಆಕೆಯ ಜತೆಯಲ್ಲಿದ್ದವರು ಏನನ್ನೇ ಹೇಳಿದರೂ ಬಾಲಕಿಯನ್ನು ಸೂಕ್ತ ರೀತಿಯಲ್ಲಿ ವಿಚಾರಿಸಲಿಲ್ಲವೇಕೆ?’ ಎಂದು ಪ್ರಶ್ನಿಸಿದ ಹೈಕೋರ್ಟ್ ಅವರ ಮನವಿಯನ್ನು ವಜಾಮಾಡಿತು.
ಆನಂತರ ರಮೇಶ್, ಅವನ ತಾಯಿ, ಸೋದರಮಾವ ಮತ್ತು ಡಾ.ವಿಮಲಾರ ವಿರುದ್ಧ ಪೋಕ್ಸೋ ಕಾಯ್ದೆಯನ್ವಯ ನ್ಯಾಯಾಲಯದಲ್ಲಿ ಆರೋಪಪಟ್ಟಿ ಸಲ್ಲಿಸಲಾಯಿತು. ಸಾಮಾಜಿಕ ಕಾರ್ಯಕರ್ತರೊಬ್ಬರಿಂದ ಈ ಪ್ರಕರಣ ಬೆಳಕಿಗೆ ಬರದೇ ಹೋಗಿದ್ದರೆ ಅಮಾಯಕ ಬಾಲಕಿಗೆ ಘೊರ ಅನ್ಯಾಯವಾಗುತ್ತಿತ್ತು.
‘ಯಾವುದೇ ಕೆಲಸ ಮಾಡುವಾಗ ನಮ್ಮ ಅನುಭವಗಳನ್ನು ವಿವೇಚನೆಗೊಳಪಡಿಸಿ ಮಾಡಿದಾಗಲೇ ಸತ್ಯ ಗೋಚರಿಸುತ್ತದೆ’ ಎನ್ನುವ ಡಿ.ವಿ.ಜಿಯವರು ಹೀಗೆಂದಿದ್ದಾರೆ: ‘ಬುದ್ಧಿಪ್ರಕಾಶದಿಂದಂತರನುಭವಶೋಧೆ, ಸಿದ್ಧವಾ ಶೋಧೆಯಿಂ ಸತ್ಯಸಂವೀಕ್ಷೆ, ಶುದ್ಧ ಸತ್ಯದ ಜೀವಿತಪ್ರಶ್ನೆಗನ್ವಯಿಪ ಪದ್ಧತಿಯೆ ಧರ್ಮವೆಲೊ ಮಂಕುತಿಮ್ಮ’. ಹೀಗೆ ಮಾಡದ ಡಾ.ವಿಮಲಾ ತೊಂದರೆಗೆ ಸಿಲುಕಿದರು.
(ಲೇಖಕರು ನಿವೃತ್ತ ಪೊಲೀಸ್ ಅಧಿಕಾರಿ)