ಬಂಧವಿದೆ, ಬಾಂಧವ್ಯ?!: ಚಾಟ್ ಮಾತ್ರವಲ್ಲ ಮೀಟ್-ಟ್ರೀಟ್ ಕೂಡ ಮುಖ್ಯ

Social Bonding
Published on

ಸೋಷಿಯಲ್ ಮೀಡಿಯಾ-ಮೆಸೇಜಿಂಗ್ ಆಪ್​ಗಳಿಂದಾಗಿ ಸಂಪರ್ಕ-ಸಂವಹನ ಸುಲಭವಾಗಿದೆ. ಆದರೆ ಆತ್ಮೀಯತೆ ದುರ್ಬಲ-ದುರ್ಲಭವಾಗಿದೆ. ಸೋಷಿಯಲ್ ಮೀಡಿಯಾದ ಕಬಂಧ ಬಾಹುವಿನಿಂದಾಗಿ ಎಲ್ಲೆಲ್ಲೂ ಬಂಧವಿದೆ ಎಂಬಂತಾಗಿದ್ದರೂ ಬಾಂಧವ್ಯ ಎಲ್ಲಿದೆ ಎಂಬಂತೆಯೂ ಆಗಿದೆ. ಬಂಧವಿದ್ದರೂ ಬಾಂಧವ್ಯಕ್ಕಿರುವ ‘ಬರ’ದ ಕುರಿತು ಇದೊಂದು ಕಿರುಬರಹ.

| ಎನ್. ಗುರುನಾಗನಂದನ

ಈಗಂತೂ ಪ್ರತಿಯೊಬ್ಬರೂ ಸಾಮಾಜಿಕ ಜಾಲತಾಣದಲ್ಲಿ ಬಹಳ ಸಕ್ರಿಯ. ಯಾರು ಎಲ್ಲಿದ್ದಾರೆ, ಯಾರ ಜತೆಯಲ್ಲಿದ್ದಾರೆ, ಏನು ಮಾಡುತ್ತಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಜತೆಗೆ ನಾವು ಎಲ್ಲಿದ್ದೇವೆ, ಏನು ಮಾಡುತ್ತಿದ್ದೇವೆ ಎಂಬುದನ್ನು ಕೂಡ ಬೇರೆಯವರಿಗೂ ಸುಲಭವಾಗಿ ಜಗಜ್ಜಾಹೀರುಗೊಳಿಸಿಬಿಡಬಹುದು. ಇದರೊಂದಿಗೆ ನಮ್ಮ ಭಾವನೆಗಳನ್ನು ಹಂಚಿಕೊಳ್ಳಬಹುದು. ಆದರೆ ಆ ಭಾವನೆಗಳು ನಿಜವಾಗಿಯೂ ಗುರುತಿಸಲ್ಪಟ್ಟಿವೆಯಾ ಎಂಬುದು ಕಾಡುವಂಥ ಪ್ರಶ್ನೆ. ನಾವೆಲ್ಲರೂ ಸಾಮಾಜಿಕ ಜಾಲತಾಣದಲ್ಲಿ ಕನೆಕ್ಟ್ ಆಗಿದ್ದೇವೆ, ಆದರೆ ಭಾವನಾತ್ಮಕವಾಗಿ ಡಿಸ್​ಕನೆಕ್ಟ್ ಆಗಿದ್ದೇವೆ. ಬೇರೆಯವರಿಗೆ ಫೋಟೋ-ರೀಲ್ಸ್ ಶೇರ್ ಮಾಡುತ್ತೇವೆ. ಅದಾಗ್ಯೂ ಆ ವ್ಯಕ್ತಿ ಹೇಗಿದ್ದಾನೆ ಎಂದು ಕೇಳುವುದೇ ಇಲ್ಲ. ವಾಟ್ಸ್​ಆಪ್ ಸ್ಟೇಟಸ್, ಫೇಸ್ಬುಕ್/ಇನ್​ಸ್ಟಾಗ್ರಾಂ ಸ್ಟೋರಿ ನೋಡುತ್ತೇವೆ ಹೊರತು ಆ ವ್ಯಕ್ತಿಯ ಸ್ಟೋರಿ ಕೇಳುವ ಪ್ರಯತ್ನ ಮಾಡುವುದಿಲ್ಲ.

ಫ್ರೆಂಡ್ಸ್ ಪ್ರತಿನಿತ್ಯ ಗ್ರೂಪ್​ಗಳಲ್ಲಿ ಮೀಮ್ಸ್-ರೀಲ್ಸ್ ಶೇರ್ ಮಾಡುತ್ತಾರೆ. ಅದಕ್ಕೆ ಪ್ರತಿಕ್ರಿಯಿಸುತ್ತಿದ್ದಾರಾ ಇಲ್ಲವಾ, ಬೇರೆಯವರೇನು ಕಳಿಸುತ್ತಿದ್ದಾರೆ ಎನ್ನುವುದನ್ನೂ ನೋಡದೆ ಹತ್ತಾರು ಮೆಸೇಜ್​ಗಳನ್ನು ಕಳಿಸುತ್ತಾರೆ. ಮೀಮ್ಸ್​ನಿಂದ ತಮಾಷೆ ಶುರುವಾಗಿ ಮಾತಿಗೆ ಕಾರಣವಾಗಬೇಕು. ‘ನಿಮ್ಮ ಸ್ನೇಹಿತರನ್ನು ಟ್ಯಾಗ್’ ಮಾಡಿ ಎಂಬುದರ ಉದ್ದೇಶವೇ ಸಲಿಗೆ ಹೆಚ್ಚಾಗಿ, ಮಾತು ಶುರುವಾಗಲೆಂದು. ಆದರೆ ಮಾತಿಲ್ಲದೆ ಕೇವಲ ಶೇರ್-ಲೈಕ್ ಮಾಡುವುದರಿಂದ ಏನು ಪ್ರಯೋಜನ? ಅವುಗಳು ನೆನಪಿನಲ್ಲೂ ಉಳಿಯುವುದಿಲ್ಲ ಮತ್ತು ಗೆಳೆತನವೂ ಬೆಳೆಯುವುದಿಲ್ಲ. ಕೇವಲ ಕಾಂಟ್ಯಾಕ್ಟ್ ನಲ್ಲಿದ್ದೇವೆ ಎಂದು ಹೇಳಿಕೊಳ್ಳಬಹುದಷ್ಟೇ. ಹೀಗಾಗಿ ಸ್ನೇಹಿತನ ಜೀವನದಲ್ಲಿ ಏನಾಗುತ್ತಿದೆ ಎಂಬುದರ ಅರಿವೇ ಇರುವುದಿಲ್ಲ. ಸಾಮಾಜಿಕ ಜಾಲತಾಣದಲ್ಲಿ ಅಟ್ಯಾಚ್ಡ್ ಆಗಿರುವವರು ನಿಜ ಜೀವನದಲ್ಲಿ ಡಿಟ್ಯಾಚ್ಡ್ ಆಗಿರುತ್ತೇವೆ ಎನ್ನುವುದಂತೂ ಸುಳ್ಳಲ್ಲ. ‘ಊರಿಗೆ ಬಂದಾಗ ಸಿಗು’ ಎಂದು ಚಾಟ್​ನಲ್ಲಿ ಹೇಳಿರುತ್ತಾರೆ. ಆದರೆ ನಿಜವಾಗಿಯೂ ಆತನ ಊರಿಗೆ ಹೋಗಿದ್ದಾಗ ಚಾಟ್ಸ್ ತಿನ್ನುತ್ತ ಹರಟೆಗೆ ಸಿಗುವುದು ಬಿಡಿ, ಒಂದು ಕಾಫಿ-ಟೀ ಜೊತೆಯಾಗಿ ಕುಡಿಯುವುದಕ್ಕೂ ಸಿಗುವುದಿಲ್ಲ. ಇದಕ್ಕೆ ಎಷ್ಟೋ ಸಲ ಸಮಯ- ಸಂದರ್ಭದ ಸಮಸ್ಯೆ ಇರಬಹುದು. ಆದರೆ ಅದರ ಹೊರತಾಗಿಯೂ ಎಷ್ಟು ಜನ ಮುಖತಃ ಸಿಗುತ್ತೇವೆ, ಹಾಗೆ ಸಿಗುವುದಕ್ಕೆ ಎಷ್ಟು ಆದ್ಯತೆ ಕೊಡುತ್ತೇವೆ ಎಂಬುದು ಎಲ್ಲರ ಆತ್ಮಸಾಕ್ಷಿಗೂ ಗೊತ್ತಿರುವಂಥದ್ದೇ.

ಸೋಷಿಯಲ್ ಮೀಡಿಯಾದ ಗೆಳೆತನ ಸುಳ್ಳಾ?

ಸೋಷಿಯಲ್ ಮೀಡಿಯಾದಲ್ಲಿನ ಸ್ನೇಹ ಸುಳ್ಳಲ್ಲ. ಇಲ್ಲಿ ನೆಟ್​ವರ್ಕ್ ಬೆಳಸಿಕೊಳ್ಳಲು ಸಾಕಷ್ಟು ಅವಕಾಶವಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ನಾವು ನಿಜವಾಗಿ ಹೇಗೆ ಬದುಕುತ್ತಿದ್ದೀವಿ ಎಂಬುದನ್ನು ತೋರಿಸುವುದಿಲ್ಲ. ಹಾಗಾಗಿ ಅಲ್ಲಿರುವ ಜನರು ನೋಡುವುದು ರಿಯಾಲಿಟಿಗೆ ದೂರವಾದದ್ದು, ಅವರಿಗೆ ನೈಜತೆಯ ದರ್ಶನ ವಾಗುವುದು ಅಪರೂಪ. ಇಂತಹ ಸಂದರ್ಭದಲ್ಲಿ ನಂಬಿಕೆ ಬೆಳೆದು ನಿಜವಾದ ಸ್ನೇಹ ಹುಟ್ಟುವುದು ಕಷ್ಟ. ಶುರುವಾದ ಸ್ನೇಹ ಉಳಿಯುವುದು ವಿರಳ. ಒಳ್ಳೆಯ ಸಂಬಂಧ ಹುಟ್ಟ ಬೇಕಾದರೆ ಮುಖಾಮುಖಿಯಾಗಿ ಮಾತಾಡುವುದು ಬಹಳ ಮುಖ್ಯ. ಮುಖತಃ ಭೇಟಿ ಮಾಡಿದಾಗ ಹಾವಭಾವ, ಮಾತನಾಡುವ ಶೈಲಿ, ಧ್ವನಿಯ ಪರಿಚಯವಾಗುತ್ತದೆ. ಅದರಿಂದ ನಂಬಿಕೆ ಹುಟ್ಟಿ ಭಾವನಾತ್ಮಕ ಸಂಬಂಧ ಗಟ್ಟಿಯಾಗುತ್ತದೆ. ಚಾಟಿಂಗ್​ನಲ್ಲಿ ವಿಷಯ ತಿಳಿಸಬಹುದು, ಆದರೆ ಭಾವನೆಗಳ ಸರಿಯಾದ ಅಭಿವ್ಯಕ್ತಿ ಕಷ್ಟ.

ಅವನೇ ಒಳ್ಳೆಯ ಸ್ನೇಹಿತ, ಆತನೇ ಎಂದಿಗೂ ಹಿತ

ಸೋಷಿಯಲ್ ಮೀಡಿಯಾದಲ್ಲಿ ಕನೆಕ್ಟ್ ಮತ್ತು ಸೋಷಿಯಲಿ ಕನೆಕ್ಟ್ ಆಗುವುದಕ್ಕೂ ಬಹಳ ವ್ಯತ್ಯಾಸವಿದೆ. ಸಾಕಷ್ಟು ಯುವಕರು ನನಗೆ ಸೋಷಿಯಲ್ ಮೀಡಿಯಾದಲ್ಲಿ ಸಾವಿರಾರು ಜನ ಫ್ರೆಂಡ್ಸ್ ಇದ್ದಾರೆ ಎಂದು ಬೀಗುತ್ತಾರೆ. ಆದರೆ ನಿಜ ಜೀವನದಲ್ಲಿ ಒಬ್ಬ ಗೆಳೆಯನೂ ಇಲ್ಲದೆ ಒಂಟಿತನದಿಂದ ಒದ್ದಾಡುತ್ತಿರುತ್ತಾರೆ. ಕಷ್ಟಗಳನ್ನು ಹಂಚಿಕೊಳ್ಳದೆ, ಮನಸ್ಸಿನಲ್ಲಿಯೇ ಇಟ್ಟುಕೊಂಡು ಡಿಪ್ರೆಶನ್ ಮತ್ತು ಇತರೆ ಮಾನಸಿಕ ತೊಂದರೆಗಳಿಂದ ಒದ್ದಾಡುತ್ತಿರುತ್ತಾರೆ. ಸೋಷಿಯಲ್ ಮೀಡಿಯಾದಲ್ಲಿ ಒಳ್ಳೆಯದನ್ನು ಹೆಚ್ಚಾಗಿ ಹಂಚಿಕೊಳ್ಳಬೇಕು ಎಂಬ ಕಲ್ಪನೆ ಇದೆ. ಇದರೊಂದಿಗೆ ಪರಿಚಯಸ್ಥರು ಮತ್ತು ಅಪರಿಚಿತರಿಬ್ಬರೂ ಗಮನಿಸುತ್ತಿರುತ್ತಾರೆ. ಆಗ ಎಲ್ಲಿ ಸೋಷಿಯಲ್ ಇಮೇಜ್ ಹಾಳಾಗಿ ಫ್ರೆಂಡ್ಸ್ ಅನ್​ಫ್ರೆಂಡ್ ಮಾಡುತ್ತಾರೋ ಎಂಬ ಭಯದಿಂದ ವಾಸ್ತವಾಂಶ ಮುಚ್ಚಿಡುತ್ತೇವೆ. ಆದರೆ ಸುಖ-ದುಃಖಗಳಲ್ಲಿ ಒಂದಾಗಿ ಧೈರ್ಯ ತುಂಬಿ, ಜತೆಯಲ್ಲಿರುವವನೇ ನಿಜವಾದ ಗೆಳೆಯ/ಗೆಳತಿ. ಹಂಚಿಕೊಳ್ಳಲು ಸಾಧ್ಯವಾಗದೆ ಹೋದರೂ ಮಾತನ್ನು ಕೇಳಿಸಿಕೊಂಡು ‘ನಿನ್ನ ಜತೆ ನಾನಿದ್ದೀನಿ’ ಎಂದು ಹೇಳುವವನೇ ಒಳ್ಳೆಯ ಸ್ನೇಹಿತ, ಆತನೇ ಎಂದಿಗೂ ಹಿತ. ನಮ್ಮಲ್ಲಿನ ದೌರ್ಬಲ್ಯ ನೋಡಿ ದೂರ ಹೋಗುವವರು ಎಂದಿಗೂ ನಿಜವಾದ ಗೆಳೆಯರಾಗಲು ಸಾಧ್ಯವಿಲ್ಲ.

ಅಂತಮುಖಿ ಆಗಿರುವುದಕ್ಕಿಂತ ಮುಖಾಮಖಿ ಆಗಿ

ಸಂಬಂಧ ಬೆಳೆಯಲು ಮತ್ತು ಉಳಿಯಲು ಸಾಮಾಜಿಕ ಜಾಲತಾಣದಲ್ಲಿನ ಸಂಪರ್ಕವೊಂದೇ ಸಾಲುವುದಿಲ್ಲ. ಪ್ರತಿದಿನದ ಬರೀ ಲೈಕ್-ಶೇರ್ ಮೂಲಕ ಸಂಬಂಧ ಗಟ್ಟಿಯಾಗಲು ಸಾಧ್ಯವಿಲ್ಲ. ಭೌತಿಕ ಸಂಪರ್ಕವೂ ಬಹಳ ಅಗತ್ಯ. ಕೇವಲ ಲೈಕ್, ಶೇರ್, ಚಾಟ್ ಮೂಲಕ ಸಂಬಂಧ ಉಳಿಸಿಕೊಳ್ಳಬಹುದು ಎನ್ನುವುದು ನಿಜವಲ್ಲ. ಚಾಟಿಂಗ್ ಒಂದು ಯಾಂತ್ರಿಕ ಕ್ರಿಯೆಯಾಗಿ ಹೋಗಿದೆ. ಪ್ರತಿದಿನ ಬೆಳಗ್ಗೆ ಗುಡ್ ಮಾರ್ನಿಂಗ್, ರಾತ್ರಿ ಗುಡ್ ನೈಟ್ ಮೆಸೇಜ್ ಹೊರತು ಪಡಿಸಿದರೆ ಬೇರೆ ಮಾತಿಲ್ಲ. ಇನ್ನು ಫೋನ್ ಮಾಡಿ ಮಾತಾಡುವುದು ದೂರ ಉಳಿಯಿತು. ಕೆಲವರು ಚಾಟಿಂಗ್​ನಲ್ಲಿ ಮುಕ್ತ ಸಂಭಾಷಣೆ ನಡೆಸುತ್ತಾರೆ. ಅದು ಎಷ್ಟರಮಟ್ಟಿಗೆ ಮನಸ್ಸಿಗೆ ಮುಟ್ಟುತ್ತದೆ ಎಂಬುದು ತಿಳಿಯದು. ‘ನಾನು ಚಾಟಿಂಗ್​ನಲ್ಲಿ ಎಷ್ಟಾದರೂ ಮಾತಾಡ್ತೀನಿ, ಆದರೆ ಎದುರಿಗೆ ಬಂದು ಮಾತಾಡುವುದು ಕಷ್ಟ’ ಎಂದು ಕೆಲವರು ಹೇಳುವುದನ್ನು ಕೇಳಿರುತ್ತೀವಿ. ಅಂಥವರು ಮಾತನಾಡುವ ಧೈರ್ಯವನ್ನೇ ಕಳೆದುಕೊಂಡಿರುತ್ತಾರೆ. ಆಗ ಆಲೋಚನೆಯನ್ನು ಇತರರಿಗೆ ತಿಳಿಸಲು ಆಗುವುದಿಲ್ಲ. ಅಂತಹವರಿಗೆ ಕೀಳರಿಮೆ ಕಾಡುತ್ತಿರುತ್ತದೆ. ಮಾತಿನ ಮೂಲಕ ಭಾವನೆ ವ್ಯಕ್ತಪಡಿಸುವ ಕೌಶಲ ಮಾಯವಾಗಿರುತ್ತದೆ. ಧೈರ್ಯದಿಂದ ಕಣ್ಣಲ್ಲಿ ಕಣ್ಣಿಟ್ಟು ಮಾತನಾಡಿದಾಗ ಮಾತ್ರ ಹೇಳಲು ಹೊರಟಿರುವ ವಿಷಯ ಸರಿಯಾದ ಭಾವನೆಯೊಂದಿಗೆ ತಲುಪುತ್ತದೆ.

ಇಮೋಜಿಯ ಗೋಜಿನಲ್ಲಿ..

ಕೆಲವರು ಇಮೋಜಿಗಳನ್ನು ಬಳಸಿ ಭಾವನೆಗಳನ್ನು ವ್ಯಕ್ತಪಡಿಸುವ ಅಭ್ಯಾಸ ರೂಢಿ ಮಾಡಿಕೊಂಡಿದ್ದಾರೆ. ಆದರೆ ಬಾಲ್ಯದ ಗೆಳೆಯನನ್ನು ಭೇಟಿಯಾಗಿ ಒಂದು ಅಪ್ಪುಗೆ ನೀಡಿ ಮಾತನಾಡುವಾಗ ಸಿಗುವ ಖುಷಿ, ಹಗ್ಗಿಂಗ್ ಇಮೋಜಿ ಕಳಿಸುವುದರಿಂದ ಸಿಗುವುದಿಲ್ಲ. ಹಾಗಾಗಿ ‘ಭಾವನೆಗಳನ್ನು ಇಮೋಜಿ ಎಷ್ಟರಮಟ್ಟಿಗೆ ಮನಸ್ಸಿಗೆ ಮುಟ್ಟಿಸುವ ಕೆಲಸ ಮಾಡುತ್ತಿದೆ?’ ಎಂಬ ಪ್ರಶ್ನೆ ನಾವು ನಮ್ಮನ್ನೇ ಕೇಳಿಕೊಳ್ಳಬೇಕು. ಇಮೋಜಿಗಳ ಸಹಾಯವಿಲ್ಲದೆ ಮಾತಿನಿಂದ ಭಾವನೆಗಳನ್ನು ಮನಸ್ಸಿಗೆ ತಾಕುವಂತೆ ಹಂಚಿಕೊಳ್ಳುವುದೇ ಮರೆತು ಹೋಗಿದೆ. ಚಾಟಿಂಗ್ ಮಾಡುವುದರಿಂದ ವ್ಯಕ್ತಿಯ ಜತೆ ಸಂಪರ್ಕದಲ್ಲಿರಬಹುದು. ಆದರೆ ಪೂರ್ಣವಾಗಿ ಅರ್ಥ ಮಾಡಿಕೊಳ್ಳಲು ಸಾಧ್ಯವಿಲ್ಲ. ಕಣ್ಣೀರು ಹಾಕುತ್ತಿರುವ ಹೊತ್ತಿನಲ್ಲೂ ನಗುತ್ತಿರುವ ಇಮೋಜಿ ಕಳಿಸಿ ನಾನು ಚೆನ್ನಾಗಿದ್ದೀನಿ ಎಂದು ಹೇಳಿ ನಂಬಿಸಿ ಬಿಡಬಹುದು. ಭಾವನೆಯನ್ನು ಫೇಕ್ ಮಾಡುವುದು ಬಹಳ ಸುಲಭ. ಇಂಥ ಸತ್ಯ-ಸುಳ್ಳು ಯಾವುದೆಂಬುದರ ಗೊಂದಲದಲ್ಲಿ ನಂಬಿಕೆ ಉಳಿಯುವುದು ಹೇಗೆ? ಯಾವುದೆ ಮುಚ್ಚುಮರೆ ಇಲ್ಲದೆ, ಸದಾ ಜತೆಗಿದ್ದ, ನಮ್ಮೆಲ್ಲ ಆಗುಹೋಗುಗಳನ್ನು ಹಂಚಿಕೊಳ್ಳುತ್ತಿದ್ದ ಹತ್ತಾರು ಸ್ನೇಹಿತರ ನಂಬರ್ ಕಾಂಟ್ಯಾಕ್ಟ್ ಲಿಸ್ಟ್​ನಲ್ಲಿ ಸೇವ್ ಆಗಿರುತ್ತದೆ. ಆದರೆ ಒಂದು ದಿನವೂ ಫೋನ್ ಮಾಡಿ ನೀನು ಹೇಗಿದಿಯಾ, ಏನ್ ಮಾಡ್ತಿದಿಯಾ? ಎಂದು ಕೇಳುವ ಗೋಜಿಗೆ ಹೋಗುವುದಿಲ್ಲ. ಯಾವಾಗಲೋ ಒಮ್ಮೆ ಒಂದು ಮೆಸೇಜ್ ಮಾಡುವುದು, ನಾವು ಮಾಡಿದ್ದ ಮೆಸೇಜ್​ಗೂ ಎಷ್ಟೋ ದಿನಗಳ ನಂತರ ಪ್ರತಿಕ್ರಿಯೆ ನೀಡುವುದು. ಹೀಗಾದಾಗ ನಾವು ಹೇಳಬೇಕಾದ ವಿಷಯವೇ ಮರೆತು ಹೋಗಿರುತ್ತದೆ. ಮತ್ತೆ ಸಂಭಾಷಣೆ ಬೆಳೆಸುವ ಪ್ರಯತ್ನ ಮಾಡುವುದೂ ಇಲ್ಲ. ಅದಾಗ್ಯೂ ಪ್ರತಿದಿನ ಫೇಸ್​ಬುಕ್/ಇನ್​ಸ್ಟಾಗ್ರಾಂ ಸ್ಟೋರಿಗಳಿಗೆ ಲೈಕ್-ರಿಯಾಕ್ಷನ್-ಕಮೆಂಟ್ಸ್ ಬರುತ್ತಿರುತ್ತದೆ. ಆದರೆ ಕೇವಲ ಲೈಕ್-ಶೇರ್ ಮಾಡುವುದರಿಂದ ಪ್ರಯೋಜನವಿಲ್ಲ, ಅದರಿಂದ ಸಂಪರ್ಕ ಉಳಿಯಬಹುದು, ಆದರೆ ಬಾಂಧವ್ಯ ಬೆಳೆಯುವುದಿಲ್ಲ. ಬರೀ ಲೈಕ್-ಕಮೆಂಟ್​ಗೆ ಸೀಮಿತವಾಗುವ ಬದಲು ಸಮಯ ಸಿಕ್ಕಾಗ ಭೇಟಿ ಮಾಡಿ ಅಥವಾ ಕರೆ ಮಾಡಿ ಕೆಲ ಹೊತ್ತು ಮಾತನಾಡಿ, ಲೈಫ್ ಅಪ್​ಡೇಟ್ಸ್ ನೀಡಿ, ಬದುಕಿನ ಬಗ್ಗೆ ತಿಳಿದು ಸುಖ-ದುಃಖ ಹಂಚಿಕೊಂಡಾಗ ನನ್ನ ಜತೆ ಒಬ್ಬರಿದ್ದಾರೆ ಎನ್ನುವ ನಂಬಿಕೆ-ಧೈರ್ಯ ಬರುತ್ತದೆ.

ಕಳೆದುಹೋಗದಿರಲಿ ಸಂಬಂಧದ ಸಾರ

ಸೋಷಿಯಲ್ ಮೀಡಿಯಾ ಬಹಳ ಆಕರ್ಷಕ. ಹಿಂದೆ ಸಾಮಾಜಿಕ ಜಾಲತಾಣದ ಸಹಾಯವಿಲ್ಲದೆ ಹೋದರೂ ಜೀವನದ ಆಗುಹೋಗುಗಳ ಸಂಪೂರ್ಣ ಮಾಹಿತಿ ಹಂಚಿಕೊಳ್ಳುತ್ತಿದ್ದರು. ಈಗ ಬೆರಳಿನ ತುದಿಯಲ್ಲಿ ಸಂಪರ್ಕ ಸಾಧಿಸುವ ಅವಕಾಶವಿದ್ದರೂ ಕಮ್ಯುನಿಕೇಷನ್ ಗ್ಯಾಪ್ ಇದೆ. ಈಗಿನ ಯುವಕರಲ್ಲಿ ಒಂಟಿತನದ ಸಮಸ್ಯೆ ಕಾಡುತ್ತಿದೆ. ಪ್ರತಿದಿನ ಮೆಸೇಜ್ ಮಾಡುತ್ತಾರೆ, ಆದರೆ ಹೇಳಬೇಕಾದ ವಿಷಯವನ್ನೇ ಹೇಳಿರುವುದಿಲ್ಲ. ಆತ್ಮೀಯ ಸಂಬಂಧದ ಕೊರತೆ ಇದ್ದು, ಭಾವನಾತ್ಮಕ ಬಂಧ ಕಡಿಮೆಯಾಗುತ್ತಿದೆ. ಸರಿಯಾದ ಸಂಪರ್ಕವಿಲ್ಲದೆ ಸಂಬಂಧಗಳ ಸಾರ ಕಳೆದು ಹೋಗಿ ಒಂಟಿತನಕ್ಕೆ ದಾರಿಯಾಗುತ್ತಿದೆ. ಒಂಟಿತನದಿಂದ ಮಾನಸಿಕ ಅಸ್ವಸ್ಥತೆ, ಡಯಾಬಿಟೀಸ್, ರಕ್ತದೊತ್ತಡ, ಥೈರಾಯ್ಡ್ ಸಮಸ್ಯೆಗಳು ಬರುತ್ತವೆ. ಇದನ್ನು ತಪ್ಪಿಸಲು ಸ್ನೇಹಿತರು-ಸಂಬಂಧಿಕರ ಜತೆ ನಿರಂತರವಾಗಿ ನೇರ ಸಂಪರ್ಕ ಇಟ್ಟುಕೊಂಡು ಸಾಮಾಜಿಕ ಜಾಲತಾಣವನ್ನು ಹಿತಮಿತವಾಗಿ ಬಳಸುವುದರಿಂದ ಸಂಪರ್ಕದ ಅಂತರವನ್ನು ನಿವಾರಿಸಿ, ಆರೋಗ್ಯಕರ ಜೀವನ ನಡೆಸಬಹುದು ಎನ್ನುತ್ತಾರೆ ಖ್ಯಾತ ಮನೋವೈದ್ಯ ಡಾ.ಸಿ.ಆರ್.ಚಂದ್ರಶೇಖರ್.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net