

ಒಂದು ಸುಂದರ ತೋಟವಿತ್ತು. ತೋಟದಲ್ಲಿ ಆಗತಾನೇ ಬಣ್ಣಬಣ್ಣದ ಹೂಗಳು ಅರಳಿ ಮಕರಂದವನ್ನು ಎಲ್ಲೆಡೆ ಹರಡಿ ಸಂತಸದಿಂದಿದ್ದವು. ಹೂಗಳ ಮಕರಂದ ಹೀರಲು ದುಂಬಿಗಳು ಸುಮಧುರ ಸಂಗೀತದ ನಾದದಿಂದ ಆ ತೋಟಕ್ಕೆ ನವಕಳೆ ನೀಡಿದ್ದವು. ಹೂಗಳು ದುಂಬಿಯನ್ನು, ದುಂಬಿಗಳು ಹೂವನ್ನು, ಪರಸ್ಪರ ಆಶ್ರಯಿಸಿ ಸಾಮರಸ್ಯದ ಬದುಕನ್ನು ಕಂಡುಕೊಂಡಿದ್ದವು. ಇವೆಲ್ಲವುಗಳೊಂದಿಗೆ ಹಕ್ಕಿಗಳ ಕಲರವ ಮೇಳೈಸಿ ತೋಟಕ್ಕೆ ಸಗ್ಗದ ಸಿರಿಯೇ ಭುವಿಗಿಳಿದಂತೆ ಭಾಸವಾಗುತಲಿತ್ತು. ಜೀವಸಂಕುಲಗಳ ಸಾಂಗತ್ಯದ ಜೀವನ ನೋಡಲು ಕಣ್ಮನ ಅರಳದೇ ಇರಲಿಲ್ಲ. ಒಂದಿಷ್ಟು ದಿನಗಳು ಕಳೆದವು. ಕಾಲ ಬದಲಾದಂತೆ ತಾನೇ ಶ್ರೇಷ್ಠ ಎಂಬ ಭಾವ ಹೂ ಮತ್ತು ದುಂಬಿಗಳಲ್ಲಿ ಬರತೊಡಗಿತು. ನನ್ನಿಂದಲೇ ಪ್ರಕೃತಿ ಸುಂದರತೆ, ನಾನಿಲ್ಲದಿದ್ದರೆ ಏನೂ ಇಲ್ಲ ಎಂದು ಹೂವು ದುಂಬಿಗೆ ಹೇಳಿತು. ದುಂಬಿಯೂ ತಾನೇನೂ ಕಡಿಮೆಯಿಲ್ಲ ನನ್ನಿಂದಲೇ ನೀನು ಮತ್ತು ಎಲ್ಲವೂ ಎಂದು ವಾದಿಸಿತು. ಶ್ರೇಷ್ಠತೆಯ ವಿಚಾರದಲ್ಲಿ ಎರಡರ ನಡುವೆ ವಿರಸ ತಾರಕಕ್ಕೇರಿತು.
ಪರಸ್ಪರ ಹತ್ತಿರ ಸುಳಿಯದಂತೆ ಜಗಳವಾಡಿಕೊಂಡವು. ಕಾಲಕ್ರಮೇಣ ಹೂಗಳು ದುಂಬಿಗಳಿಗೆ ಮಕರಂದದ ಪೋಷಕ ಹರಡುವುದನ್ನು ನಿಲ್ಲಿಸಿದವು. ಇದರಿಂದ ದುಂಬಿಗಳಿಗೆ ಅಲೆದಾಡುವ ಪರಿಸ್ಥಿತಿ ಉಂಟಾಯಿತು. ದುಂಬಿಗಳು ಬಾರದ್ದರಿಂದ ಹೂಗಳ ಪರಾಗಸ್ಪರ್ಶ ಕ್ರಿಯೆ ನಡೆಯಲಿಲ್ಲ. ಪರಾಗ ವರ್ಗಾವಣೆಯಾಗದೇ ಫಲವಾಗಲಿಲ್ಲ. ಅವುಗಳ ಸಂತತಿಯು ಅವನತಿಯತ್ತ ಹೊರಟಿತು. ಅಲ್ಲಿದ್ದ ಹೂಗಳು ಬಾಡತೊಡಗಿದವು. ಅತ್ತ ದುಂಬಿಗಳು ಅಲೆದಾಡಿ ಮಕರಂದ ಸಿಗದೇ ಅವುಗಳ ಸಂತತಿಯೂ ನಾಶವಾಗತೊಡಗಿತು. ತೋಟದ ಕಳೆ, ಫಲ, ಮರೆಯಾದಂತೆ ಹಕ್ಕಿಗಳೂ ವಲಸೆ ಹೋದವು. ಕಾಲ ಗತಿಸಿದಂತೆ ಇವುಗಳ ವಿರಸದಿಂದ ಮೊದಲಿದ್ದ ಸಂಭ್ರಮ ಮರೆಯಾಗಿ ಸುಂದರವಾದ ತೋಟವು ಸ್ಮಶಾನವಾಯಿತು. ಹೂ ಮತ್ತು ದುಂಬಿಗಳಿಗೆ ತಮ್ಮ ತಪ್ಪಿನ ಅರಿವಾಗತೊಡಗಿತು. ಅವುಗಳ ಅಹಂಕಾರ ಕ್ರಮೇಣ ನಾಶವಾಯಿತು.
ಕೆಲವು ಸಂದರ್ಭಗಳಲ್ಲಿ ತಾತ್ಕಾಲಿಕ ಭ್ರಮೆಗೊಳಗಾಗಿ ಸೌಹಾರ್ದತೆಯ ಸುಂದರ ಜೀವನವನ್ನು ಹಾಳು ಮಾಡಿಕೊಳ್ಳುತ್ತೇವೆ. ನಾವೆಲ್ಲರೂ ಪರಿಸರದ ಒಂದು ಭಾಗ, ಪರಸ್ಪರ ಅವಲಂಬನೆಯಲ್ಲಿದ್ದೇವೆ ಎಂಬುದನ್ನು ಮರೆಯುತ್ತೇವೆ. ನನ್ನಿಂದಲೇ ಎಲ್ಲವೂ, ನಾನಿದ್ದರೆ ಎಲ್ಲವೂ ಎನ್ನುವುದು ಭ್ರಮಾ ನಿಲುವಾಗಿದೆ. ಅಲ್ಲದೆ, ಸಣ್ಣ ಸಣ್ಣ ವಿಷಯಗಳಿಗೆ ಅವಿಭಕ್ತ ಕುಟುಂಬಗಳಲ್ಲಿ ಬಿರುಕು ಉಂಟಾಗಿ ಸುಂದರ ಸೌಹಾರ್ದಯುತ ಬಾಳು ಮರೆಯಾಗಿದೆ. ಇದರಿಂದ ಕೆಲವು ಸಲ ಮನಸ್ತಾಪವಾಗುವುದು ಸಹಜ. ಆದರೆ, ಅದು ಎಲ್ಲೆ ಮೀರಬಾರದು. ಪರಸ್ಪರ ಅರ್ಥೈಸಿಕೊಳ್ಳುವುದು ಜೀವನದ ಅತ್ಯಮೂಲ್ಯ ಭಾಗವಾಗಬೇಕು. ಮಾಡಿದೆನೆಂಬುದು ಮನದಲ್ಲಿ ಹೊಳೆದರೆ ಓಡಿಸಿ ಕಾಡಿತ್ತು ಶಿವನ ಡಂಗುರ ಎಂಬ ಬಸವಣ್ಣನವರ ನುಡಿಮುತ್ತಿನ ಸಾರ ಅರಿಯಬೇಕು. ಜಗತ್ತಿಗೆ ಯಾರೂ ಅನಿವಾರ್ಯವಲ್ಲ ಎಂಬುದು ಸರ್ವಕಾಲಿಕ ಸತ್ಯ. ಅದನ್ನರಿತು ನಡೆಯಬೇಕು. ರಸವೇ ಜನನ, ವಿರಸವೇ ಮರಣ, ಸಮರಸವೇ ಜೀವನ ಎಂಬ ಬೇಂದ್ರೆಯವರ ಕವಿವಾಣಿಯನ್ನು ಎಲ್ಲರೂ ಎದೆಯಲ್ಲಿ ಬಿತ್ತಿಕೊಳ್ಳಬೇಕಿದೆ. ಸಾಂಗತ್ಯದ ಸಾಮೀಪ್ಯದಲ್ಲಿ ಸುಂದರ ಬಾಳನ್ನು ಸವಿಯೋಣ. ಬದುಕನ್ನು ಸುಂದರಗೊಳಿಸೋಣ.
(ಲೇಖಕರು ಅಧ್ಯಾಪಕರು, ಹವ್ಯಾಸಿ ಬರಹಗಾರರು)