ಅಕ್ಕಿ ಮೇಲೆ ಅಕ್ಕರೆಯ ಅಕ್ಕರ!

Talent
Published on

ಲತೀಶ್ ಎಸ್. ಓಡಿಲ್ನಾಳ

ಒಂದೊಂದು ಅಕ್ಕಿಕಾಳಿನಲ್ಲೂ ತಿನ್ನೋರ ಹೆಸರು ಬರೆದಿರುವುದು ಎಂಬ ಮಾತಿದೆ. ಅದು ನಿಜವೋ-ಸುಳ್ಳೋ?! ಆದರೆ ಇಲ್ಲೊಬ್ಬರು ಅಕ್ಕಿಕಾಳಿನ ಮೇಲೆ ಬರೆಯುವ ಕಲೆಯನ್ನು ಸಿದ್ಧಿಸಿಕೊಂಡಿದ್ದಾರೆ. ಸಾಮಾನ್ಯವಾಗಿ ಅಕ್ಕಿಕಾಳಿನ ಮೇಲಿನ ಬರಹವನ್ನು ಬರಿಗಣ್ಣಿನಲ್ಲಿ ಓದುವುದೂ ಸುಲಭದ ಸಂಗತಿಯಲ್ಲ. ಅಂಥದ್ದರಲ್ಲಿ ಇವರು ಅದರ ಮೇಲೆ ಸ್ಪಷ್ಟವಾಗಿ ಬರೆಯುವ ಕೈಚಳಕವನ್ನು ಒಲಿಸಿಕೊಂಡಿದ್ದಾರೆ.

ಮೈಕ್ರೋ ಆರ್ಟ್ ಎಂಬ ಈ ಸೂಕ್ಷ್ಮ ಕಲೆ ಮೂಲಕವೇ ಗಮನ ಸೆಳೆಯುತ್ತಿರುವ ಈ ಸಾಧಕನ ಹೆಸರು ಪರಮೇಶ್ ಶಂಕ್ರಪ್ಪ ಬಂಡಿ. ಮೈಕ್ರೋ ಆರ್ಟ್ ಕಲೆ ಎಂಬುದು ಒಂದು ವಿಶೇಷವಾದ ಕಲೆ. ಅದು ತುಂಬಾ ಸುಲಭವಾಗಿ ದಕ್ಕುವಂಥದ್ದಲ್ಲ. ಅದಕ್ಕೆ ಕಠಿಣ ಶ್ರಮ, ಸತತ ಅಭ್ಯಾಸ, ಅಪಾರ ತಾಳ್ಮೆ, ಸುದೀರ್ಘ ಏಕಾಗ್ರತೆ ಎಲ್ಲವೂ ಅತಿ ಮುಖ್ಯವಾದುದು. ಅಕ್ಕಿಕಾಳುಗಳ ಮೇಲೆ ಅಕ್ಷರಗಳನ್ನು ಮೂಡಿಸುವ ಈ ಕಲೆಯನ್ನು ಕರಗತ ಮಾಡಿಕೊಳ್ಳುವುದು ಸುಲಭದ ಮಾತಲ್ಲ. ಅದರಲ್ಲೂ ಅಕ್ಕಿಕಾಳುಗಳ ಮೇಲೆ ನಾಡಗೀತೆಯನ್ನೇ ಬರೆಯುವುದು ಸಾಮಾನ್ಯ ಸಂಗತಿಯಲ್ಲ. ಆದರೆ ಅದನ್ನು ಈ ಪರಮೇಶ್ ಮಾಡುವ ಮೂಲಕ ಅಸಾಮಾನ್ಯ ಎನಿಸಿಕೊಂಡಿದ್ದಾರೆ. ಪರಮೇಶ್ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣವನ್ನು ತನ್ನ ಹುಟ್ಟೂರಾದ ಗುಡಿಸಲಕೊಪ್ಪದಲ್ಲಿ ಪೂರೈಸಿ, ನಂತರ ಹಾವೇರಿ ಮರೋಳ ಹಾಸ್ಟೆಲ್​ನಲ್ಲಿ ಇದ್ದುಕೊಂಡು ಪಿಯುಸಿ ವ್ಯಾಸಂಗ ಮುಗಿಸಿದರು. ಹಾವೇರಿ ತಾಲ್ಲೂಕು ಗುತ್ತಲದಲ್ಲಿ ವಿದ್ಯಾಭ್ಯಾಸ ಪೂರೈಸಿಕೊಂಡು ನಂತರ ಉದ್ಯೋಗವನ್ನು ಅರಸಿ ಬಂದಿದ್ದು ಸುಬ್ರಹ್ಮಣ್ಯಕ್ಕೆ. ಇಲ್ಲಿ ಇವರು ತನ್ನ ಉದ್ಯೋಗದ ಜೊತೆಜೊತೆಗೆ ತನ್ನ ಕಲೆಯನ್ನೂ ಮುಂದುವರಿಸಿಕೊಂಡು ಬರುತ್ತಿದ್ದಾರೆ.

80 ನಿಮಿಷ, 136 ಅಕ್ಕಿಕಾಳು, ನಾಡಗೀತೆ..

ಪರಮೇಶ್ ಅವರು ನಾಡಗೀತೆ ಮಾತ್ರವಲ್ಲ, ವಂದೇ ಮಾತರಂ ಗೀತೆಯನ್ನೂ ಅಕ್ಕಿಕಾಳುಗಳ ಮೇಲೆ ಮೂಡಿಸಿದ್ದಾರೆ. ನಾಡಗೀತೆಯನ್ನು ಬರೆಯಲು ಇವರು 136 ಅಕ್ಕಿಕಾಳುಗಳನ್ನು ಪಡೆದುಕೊಂಡಿದ್ದಲ್ಲದೆ, ಅದನ್ನು ಅತಿ ಕಡಿಮೆ ಅವಧಿಯಲ್ಲಿ ಮಾಡಿ ಮುಗಿಸಿದ್ದಾರೆ. ಅಂದರೆ ಇವರು ಕೇವಲ 80 ನಿಮಿಷಗಳಲ್ಲಿ ಅಕ್ಕಿಕಾಳುಗಳ ಮೇಲೆ ನಾಡಗೀತೆಯನ್ನು ಬರೆದಿದ್ದಾರೆ. ಹಾಗೆಯೇ ಅಷ್ಟೇ ಅವಧಿಯಲ್ಲಿ ಬರೀ 92 ಅಕ್ಕಿಕಾಳುಗಳನ್ನು ಬಳಸಿಕೊಂಡು ವಂದೇಮಾತರಂ ಗೀತೆಯನ್ನು ಮೂಡಿಸಿದ್ದಾರೆ. ಈ ವಿಶೇಷವಾದ ಸೂಕ್ಷ್ಮಕಲೆಯನ್ನು ಹಿಂದೂ ಜನಜಾಗೃತಿ ಸಮಾವೇಶದಲ್ಲಿ ಶ್ರೀರಾಮಸೇನೆಯ ರಾಷ್ಟ್ರೀಯ ಅಧ್ಯಕ್ಷ ಪ್ರಮೋದ್ ಮುತಾಲಿಕ್ ಅವರಿಗೆ ಉಡುಗೊರೆಯಾಗಿ ನೀಡಿ, ಅವರಿಂದ ಅಭಿನಂದನೆಗೂ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಾರ್ಥನಾ ಗೀತೆಯನ್ನು ಕೂಡ ಅಕ್ಕಿಕಾಳುಗಳ ಮೇಲೆ ಬರೆದಿರುವ ಇವರು ಅದನ್ನು ಮುಂದಿನ ದಿನಗಳಲ್ಲಿ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರಿಗೆ ಕೊಡಬೇಕು ಎಂಬ ಕನಸು ಹೊಂದಿದ್ದಾರೆ.

ಮೋದಿ ಜೀವನಚರಿತ್ರೆ

ಮೈಕ್ರೋ ಕಲೆ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಜೀವನಚರಿತ್ರೆಯನ್ನು ಅಕ್ಕಿಕಾಳುಗಳ ಮೇಲೆ ಬರೆಯಲು ಪರಮೇಶ್ ಆರಂಭಿಸಿದ್ದಾರೆ. ಈ ಮೂಲಕ ಅವರು ದೊಡ್ಡ ಸಾಹಸಕ್ಕೇ ಮುಂದಾಗಿದ್ದಾರೆ. ಇತ್ತೀಚೆಗೆ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ’ಅಮೃತಭಾರತಿಗೆ ಕನ್ನಡದ ಆರತಿ ಅಭಿಯಾನ’ದ ಅಂಗವಾಗಿ ಕೇವಲ 136 ಅಕ್ಕಿಕಾಳುಗಳಲ್ಲಿ ರಚಿಸಿದ ಕಲೆಯನ್ನು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನೀಲ್​ಕುಮಾರ್ ಅವರಿಗೆ ನೀಡಿದ್ದೆ, ಅದನ್ನು ಅವರ ಕಚೇರಿಯಲ್ಲಿ ಹಾಕಿರು ವುದರಿಂದ ಖುಷಿಯಾಗಿದೆ’ ಎನ್ನುತ್ತಾರೆ ಪರಮೇಶ್. ಗುರುಬಸವ್ವ ಮತ್ತು ಶಂಕ್ರಪ್ಪ ಬಂಡಿ ದಂಪತಿಯ ಪುತ್ರ ಪರಮೇಶ್ ಮೈಕ್ರೋ ಕಲೆಯಲ್ಲಿ ಇನ್ನಷ್ಟು ಬೆಳೆಯಲಿ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net