ವೃತ್ತಿಯಲ್ಲಿ ಬಿಎಂಟಿಸಿ ಕಂಡಕ್ಟರ್; ಪ್ರವೃತ್ತಿಯಲ್ಲಿ ಗಾಯಕ

BMTC
Published on

ಮಂಜುನಾಥ ಕೆ.
ಬೆಂಗಳೂರು: ಚಾಲಕ ಮತ್ತು ನಿರ್ವಾಹಕರದ್ದು ಒತ್ತಡದ ವೃತ್ತಿ. ಸಾರ್ವಜನಿಕರೊಂದಿಗೆ ಸದಾ ವ್ಯವಹರಿಸುವ ಕೆಲಸ. ಈ ಒತ್ತಡದಿಂದ ಹೊರಬರಲು ಸಿಬ್ಬಂದಿ ಬೇರೆ ಬೇರೆ ಹವ್ಯಾಸಗಳು ಹಾಗೂ ಮಾರ್ಗಗಳನ್ನು ಕಂಡುಕೊಳ್ಳುತ್ತಾರೆ. ಆದರೆ, ಇಲ್ಲೊಬ್ಬ ಬಿಎಂಟಿಸಿ ಕಂಡಕ್ಟರ್ ತಮ್ಮ ಬಿಡುವಿನ ವೇಳೆಯಲ್ಲಿ ಗಾಯನದ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಇವರ ಹೆಸರು ಎಚ್. ಎರ್ರಿಸ್ವಾಮಿ. ವೃತ್ತಿಯಲ್ಲಿ ನಿರ್ವಾಹಕರಾಗಿದ್ದು, ಪ್ರವೃತ್ತಿಯಲ್ಲಿ ಗಾಯಕರಾಗಿದ್ದಾರೆ. ಮೆಜೆಸ್ಟಿಕ್​ನಲ್ಲಿರುವ ಕೇಂದ್ರಿಯ ವಿಭಾಗದ ಘಟಕ-7ರಲ್ಲಿ ನಿರ್ವಾಹಕರಾಗಿರುವ ಇವರು, ಗಾಯಕ ಮಾತ್ರವಲ್ಲ, ರಂಗ ಕಲಾವಿದ, ಸಂಗೀತ ನಿರ್ದೇಶಕ. ಬಹುಮುಖ ಪ್ರತಿಭೆವುಳ್ಳ ಎರ್ರಿಸ್ವಾಮಿ ಎಲ್ಲ ಸಿಬ್ಬಂದಿಗೂ ಅಚ್ಚುಮೆಚ್ಚು. ಸಂಸ್ಥೆಯಲ್ಲಿ ಯಾವುದೇ ಕಾರ್ಯಕ್ರಮವಿದ್ದರೂ ಇವರು ಹಾಜರ್. ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಜ್ಞಾನವಿರುವ ಈ ಗಾಯನ, ಎಂಥವರನ್ನೂ ಮೋಡಿ ಮಾಡುತ್ತಾರೆ.

ಭಜನೆಯಿಂದ ಆರಂಭವಾದ ಸಂಗೀತ ಪ್ರೀತಿ: ಮೂಲತಃ ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕಿನ ದೊಡ್ಡಬೀರನಯಹಳ್ಳಿ ಗ್ರಾಮದವರಾದ ಎರ್ರಿಸ್ವಾಮಿ, ಬನ್ನೇರುಘಟ್ಟದ ಬಳಿ ಇರುವ ಜಿಗಣಿಯ ಒಡೆಯರಮಂಚನಹಳ್ಳಿಯ ಬಾಡಿಗೆ ಮನೆಯಲ್ಲಿ ಪತ್ನಿ ಮತ್ತು ಮೂವರು ಹೆಣ್ಣುಮಕ್ಕಳೊಂದಿಗೆ ವಾಸವಿದ್ದಾರೆ. ಪ್ರಾಥಮಿಕ ಮತ್ತು ಫ್ರೌಢಶಿಕ್ಷಣವನ್ನು ಬಳ್ಳಾರಿಯಲ್ಲಿ ಮತ್ತು ಚಿತ್ರದುರ್ಗದಲ್ಲಿ ಪಿಯು, ಪದವಿ ಪಡೆದ ಇವರು ಚಿಕ್ಕ ವಯಸ್ಸಿನಲ್ಲಿ ದೊಡ್ಡಪ್ಪ ದ್ಯಾಮಣ್ಣ ಅವರ ಭಜನೆ ಗೀತೆಗಳಿಂದ ಪ್ರೇರಣೆಯಿಂದ ಹಾಡುವ ಹವ್ಯಾಸ ಬೆಳೆಸಿಕೊಂರು. ಭಜನೆ ತಂಡ ಕಟ್ಟಿಕೊಂಡು ಸುತ್ತಮುತ್ತಲಿನ ಗ್ರಾಮಗಳಲ್ಲಿ ಸಂಗೀತ ಕಛೇರಿ ನೀಡಿ ಹಾಗೂ ಸಾಮಾಜಿಕ ನಾಟಕಗಳಲ್ಲಿ ಹಿನ್ನೆಲೆ ಗಾಯಕರಾಗಿ ಹಾಡಿ ಸೈ ಎನಿಸಿಕೊಂಡಿದ್ದರು. ಇವರ ಭಜನೆ ಹಾಡುವುದನ್ನು ಗಮನಿಸಿದ ನಾಟಕ ಮೇಷ್ಟ್ರು, ಹಿನ್ನೆಲೆ ಗಾಯನಕ್ಕೆ ಅವಕಾಶ ನೀಡಿದ್ದರು. ಆ ನಂತರ ಆರ್ಕೆಸ್ಟ್ರಾಕ್ಕೆ ಸೇರಿಕೊಂಡು ಹಾಡುಗಳನ್ನು ಹಾಡುತ್ತಿದ್ದರು.

ರಂಗಕಲಾವಿದ

‘ಕುರುಕ್ಷೇತ್ರ’ ಪೌರಾಣಿಕ ನಾಟಕದಲ್ಲಿ ಎರ್ರಿಸ್ವಾಮಿ ಕರ್ಣನ ಪಾತ್ರ ಮಾಡಿದ್ದಾರೆ. ‘ಪ್ರಚಂಡ ರಾವಣ’ದಲ್ಲಿ ವಿಭೀಷಣನ ಪಾತ್ರ ಮಾಡಿದ್ದಾರೆ. ತಮ್ಮ ಊರಿನಲ್ಲಿ ಸಾಮಾಜಿಕ ನಾಟಕಗಳಲ್ಲಿ ಅಭಿನಯಿಸಿದ್ದಾರೆ. 2 ಸಾಮಾಜಿಕ ನಾಟಕವನ್ನು ನಿರ್ದೇಶನ ಕೂಡ ಮಾಡಿದ್ದರು.

ಗಾನಸಿರಿ ಪ್ರಶಸ್ತಿ ಪುರಸ್ಕೃತರು

ರಾಜ್ಯಾದ್ಯಂತ ಹಲವಾರು ಸಭೆ ಸಮಾರಂಭ ಗಳಲ್ಲಿ ಸುಶ್ರಾವ್ಯವಾಗಿ ಹಾಡುವುದರೊಂದಿಗೆ ಗೌರವ ಸನ್ಮಾನಗಳನ್ನು ಪಡೆದ ಎರ್ರಿಸ್ವಾಮಿ ಅವರಿಗೆ 2014ರಲ್ಲಿ ರಾಜ್ಯ ಕನ್ನಡ ಕ್ರಿಯಾ ಸಮಿತಿ ‘ಗಾನಸಿರಿ’ ಪ್ರಶಸ್ತಿ ನೀಡಿ ಗೌರವಿಸಿದೆ. ವಿಶ್ವಮಾನವ ಸಾಂಸ್ಕೃತಿಕ ಪ್ರತಿಷ್ಠಾನವು ರಾಜ್ಯ ಮಟ್ಟದ ‘ಕಲಾರತ್ನ’ ಪ್ರಶಸ್ತಿ ಪ್ರದಾನ ಮಾಡಿದೆ.

2003ರಲ್ಲಿ ನಿರ್ವಾಹಕ ಹುದ್ದೆಗೆ ಸೇರ್ಪಡೆ

ಸುಮಾರು 10 ವರ್ಷಗಳ ಕಾಲ ಭಜನೆ ಮತ್ತು ನಾಟಕಗಳಲ್ಲಿ ಗಾಯನ ಮಾಡುತ್ತಿದ್ದ ಯರ್ರಿಸ್ವಾಮಿ, 2003ರಲ್ಲಿ ಬಿಎಂಟಿಸಿ ನಿರ್ವಾಹಕರಾಗಿ ಸೇವೆಗೆ ಸೇರಿಕೊಂಡು ಬೆಂಗಳೂರಿಗೆ ಬಂದರು. ಬೆಂಗಳೂರು ಹೊಸ ಸ್ಥಳವಾದ ಹಿನ್ನೆಲೆಯಲ್ಲಿ ಇಲ್ಲಿ ಭಜನೆ ಮತ್ತು ಗಾಯನ ಮಾಡಲು ಅವಕಾಶ ಸಿಗದೇ 3 ವರ್ಷ ಗಾಯನದಿಂದ ದೂರ ಉಳಿದಿದ್ದರು. ಕೆಲಸ ಕಾಯಂ ಆದ ಮೇಲೆ ಸ್ವಲ್ಪ ಸಮಯ ಸಿಕ್ಕಿದ್ದಾಗ ಸುಗಮ ಸಂಗೀತದ ಕಡೆ ಆಸಕ್ತಿ ಮೂಡಿತ್ತು. ಜಾನಪದ ಗೀತೆ, ಭಾವಗೀತೆ, ಭಕ್ತಿಗೀತೆಗಳನ್ನು ಹಾಡುವ ಮೂಲಕ ಗುರುತಿಸಿಕೊಂಡರು. ಸುಗಮ ಸಂಗೀತ ಗಾಯನ ಪಯಣವನ್ನು ಕಳೆದ 15 ವರ್ಷಗಳಿಂದ ನಡೆಸಿಕೊಂಡು ಬರುತ್ತಿದ್ದಾರೆ. 2016ರಲ್ಲಿ ‘ಮಂದಾರ ಗಾಯನ ಚೇತನ ಟ್ರಸ್ಟ್’ ಅನ್ನು ನಿರ್ವಿುಸಿ ತಮ್ಮದೇ ಆದ ತಂಡವೊಂದನ್ನು ಹುಟ್ಟುಹಾಕಿ ಆಸಕ್ತರಿಗೆ ಗಾಯನ ತರಬೇತಿ ನೀಡುತ್ತ ಬಂದಿದ್ದಾರೆ. ‘ನನ್ನ ಗಾಯನ ಮತ್ತು ನನ್ನ ಶೈಲಿಯನ್ನು ಗಮನಿಸಿದ ಕವಿ ಡಾ.ಕಾ.ವೆಂ. ಶ್ರೀನಿವಾಸಮೂರ್ತಿ ಅವರು, ಅವರ ಮೂರು ಆಲ್ಬಂಗಳಲ್ಲಿ ಹಾಡಲು ಅವಕಾಶ ಕಲ್ಪಿಸಿದ್ದರು. ಆ ನಂತರ ಖ್ಯಾತ ಗಾಯಕಿ ಸಂಗೀತಾ ಕಟ್ಟಿ ಕುಲಕರ್ಣಿ ಅವರ ಜತೆ ಪರಿಸರ ಗೀತೆ ಮತ್ತು ಜಾಗೃತಿ ಗೀತೆಯನ್ನು ಹಾಡಿದೆ. ಹಲವು ಧ್ವನಿಸಾಂದ್ರಿಕೆಗಳಲ್ಲಿ (‘ನಿತ್ಯಪೂಜೆ ನಿತ್ಯೋತ್ಸವ’, ‘ಭಾವದ ಬೆನ್ನೇರಿ’, ‘ಹೂಡಬೇಡ ಬಾಣ’) ಜಾಗೃತಿ ಗೀತೆಗಳಿಗೆ ಧ್ವನಿಯನ್ನು ನೀಡಿದ್ದು, ಇದೀಗ ಸಂಗೀತ ನಿರ್ದೇಶನಕ್ಕೂ ಕೈಹಾಕಿದ್ದಾರೆ.

ಫೆ.19ರಂದು ಸಂಗೀತ ಸ್ಪರ್ಧೆ

ಎರ್ರಿಸ್ವಾಮಿ ಅವರ ‘ಮಂದಾರ ಗಾಯನ ಚೇತನ ಟ್ರಸ್ಟ್’ ಮೂಲಕ ಫೆ.19ರಂದು ರವೀಂದ್ರ ಕಲಾಕ್ಷೇತ್ರದಲ್ಲಿ ಸಂಗೀತ ಸ್ಪರ್ಧೆ ಆಯೋಜನೆ ಮಾಡಲಾಗುತ್ತಿದೆ. ಸುಮಾರು ಜನ ಭಾಗವಹಿಸುವ ನಿರೀಕ್ಷೆ ಇದೆ. ಯುವಕರಿಗೆ ಸಂಗೀತ ತರಬೇತಿ ನೀಡಿ ಅವಕಾಶ ಕಲ್ಪಿಸಲಾಗುತ್ತದೆ.

ನಾನು ಸಂಗೀತದ ಕ್ಷೇತ್ರದಲ್ಲಿ ಮುಂದುವರಿಯಬೇಕು ಎಂಬ ಆಸೆ ಇತ್ತು. ಆದರೆ ಜೀವನ ಸಾಗಿಸಲು ನೌಕರಿ ಅನಿವಾರ್ಯವಾಗಿತ್ತು. ಬಿಎಂಟಿಸಿಗೆ ಕೆಲಸಕ್ಕೆ ಸೇರಿದ ಮೇಲೆ ಇಲ್ಲಿನ ಪ್ರತಿಯೊಬ್ಬ ಅಧಿಕಾರಿ ಮತ್ತು ಸಿಬ್ಬಂದಿ ನನ್ನ ಬೆನ್ನುತಟ್ಟಿ ಪ್ರೋತ್ಸಾಹ ನೀಡಿದ್ದಾರೆ. ಅವರೆಲ್ಲರ ಸಹಕಾರ ಪ್ರೋತ್ಸಾಹದಿಂದ ನನ್ನಲಿರುವ ಗಾಯನ ಪ್ರತಿಭೆ ಇಂದಿಗೂ ಮುಂದುವರಿದಿದೆ.

| ಎರ್ರಿಸ್ವಾಮಿ ನಿರ್ವಾಹಕ ಮತ್ತು ಗಾಯಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net