

ನವದೆಹಲಿ: ಖಾಸಗಿ ವಾಹಿನಿ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಭಾರತೀಯ ಕ್ರಿಕೆಟ್ ಆಯ್ಕೆ ಸಮಿತಿಯ ಮುಖ್ಯ ಆಯ್ಕೆಗಾರ ಚೇತನ್ ಶರ್ಮ ಅನೇಕ ಸಂಗತಿಗಳನ್ನು ಹೊರಹಾಕಿದ್ದಾರೆ. ಗಾಯಗಳನ್ನು ಮುಚ್ಚಿಡಲು ಆಟಗಾರರು ಇಂಜೆಕ್ಷನ್ ತೆಗೆದುಕೊಳ್ಳುವ ಆಘಾತಕಾರಿ ಸಂಗತಿ ಹಾಗೂ ಸೌರವ್ ಗಂಗೂಲಿ ವರ್ಸಸ್ ವಿರಾಟ್ ಕೊಹ್ಲಿ ವಿವಾದದಲ್ಲಿ ನಿಜವಾಗಿ ನಡೆದಿದ್ದೇನು ಎಂಬ ಬಗ್ಗೆ ಚೇತನ್ ಶರ್ಮ ಮಾತನಾಡಿದ್ದಾರೆ ಎನ್ನಲಾಗಿದೆ.
ವಿರಾಟ್ ಕೊಹ್ಲಿ ನಾಯಕತ್ವವನ್ನು ತೊರೆದ ಸಂದರ್ಭದಲ್ಲಿ ಆಗಿನ ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ವಿರುದ್ಧ ಸುಳ್ಳು ಹೇಳಿದ ಆರೋಪ ಮಾಡಿದ್ದರು. ಈ ಬಗ್ಗೆಯೂ ಕುಟುಕು ಕಾರ್ಯಾಚರಣೆಯಲ್ಲಿ ಚೇತನ್ ಶರ್ಮ ಸ್ಫೋಟಕ ಮಾಹಿತಿ ಹೊರಹಾಕಿದ್ದಾರೆ. 2021ರಲ್ಲಿ ದುಬೈನಲ್ಲಿ ನಡೆದ ಟಿ20 ವಿಶ್ವಕಪ್ಗೆ ಮುನ್ನವೇ ಕೊಹ್ಲಿ ಟೂರ್ನಿಯ ಬಳಿಕ ಟಿ20 ನಾಯಕತ್ವ ತೊರೆಯುವುದಾಗಿ ಘೋಷಿಸಿದ್ದರು. ಆ ಸಂದರ್ಭದಲ್ಲಿ "ನಾಯಕತ್ವ ತೊರೆಯಬೇಡಿ, ಇನ್ನೊಮ್ಮೆ ಯೋಚಿಸಿ' ಎಂದು ಬಿಸಿಸಿಐ ಅಧ್ಯಕ್ಷರಾಗಿದ್ದ ಸೌರವ್ ಗಂಗೂಲಿ ಕೊಹ್ಲಿಗೆ ಸೂಚಿಸಿದ್ದರು ಎಂದು ಚೇತನ್ ಶರ್ಮ ಬಹಿರಂಗ ಪಡಿಸಿದ್ದಾರೆ.
ಟೀಮ್ ಇಂಡಿಯಾದ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕೆಳಗಿಳಿಸುವ ನಿರ್ಧಾರವನ್ನು ಮುಖ್ಯ ಆಯ್ಕೆಗಾರನಾಗಿ ನಾನು ತೆಗೆದುಕೊಂಡಿದ್ದೇನೆ. ಟೆಸ್ಟ್ ಮತ್ತು ಏಕದಿನ ತಂಡಗಳಿಗೆ ಪ್ರತ್ಯೇಕ ನಾಯಕರನ್ನು ನೇಮಿಸಬೇಕು ಎಂಬ ಉದ್ದೇಶವೇ ಕಾರಣ. ಕೊಹ್ಲಿಯನ್ನು ನಾಯಕತ್ವದಿಂದ ಕೆಳಗಿಳಿಸಲು ಗಂಗೂಲಿ ಕಾರಣರಲ್ಲ, ಅವರು ಯಾವತ್ತೂ ಅದನ್ನು ಬಯಸಿರಲಿಲ್ಲ ಎಂದು ಚೇತನ್ ಸ್ಪಷ್ಟಪಡಿಸಿದ್ದಾರೆ.
ಟೀಮ್ ಇಂಡಿಯಾದ ಅನೇಕ ಆಟಗಾರರು ಗಾಯಗಳನ್ನು ಮುಚ್ಚಿಡಲು ಚುಚ್ಚುಮದ್ದು ತೆಗೆದುಕೊಳ್ಳುತ್ತಾರೆ. ಗಾಯದ ಕಾರಣಕ್ಕೆ ತಂಡದಲ್ಲಿ ಸ್ಥಾನ ತಪ್ಪಿಹೋದರೆ, ಮತ್ತೆ ಮರಳುವುದು ಕಷ್ಟ ಎಂಬ ಕಾರಣಕ್ಕೆ ಆಟಗಾರರು ಪೂರ್ಣ ಫಿಟ್ನೆಸ್ ಇಲ್ಲದಿದ್ದರೂ ನೋವು ನಿವಾರಕ ಇಂಜೆಕ್ಷನ್ಗಳನ್ನು ತೆಗೆದುಕೊಂಡು ತಂಡದಲ್ಲಿ ಆಡುತ್ತಾರೆ ಎಂದು ಚೇತನ್ ಶರ್ಮ ಹೇಳಿದ್ದಾರೆ.
ಕುಟುಕು ಕಾರ್ಯಾಚರಣೆಯಲ್ಲಿ ಹಲವು ಸ್ಫೋಟಕ ವಿಚಾರಗಳನ್ನು ಬಹಿರಂಗ ಪಡಿಸಿರುವ ಚೇತನ್ ಶರ್ಮ, ಬಾಂಗ್ಲಾ ದೇಶ ವಿರುದ್ಧ ಇಶಾನ್ ಕಿಶನ್ ಬಾರಿಸಿದ ಭರ್ಜರಿ ದ್ವಿಶತಕದ ಕಾರಣದಿಂದ ಏಕದಿನ ತಂಡದಲ್ಲಿ ಶಿಖರ್ ಧವನ್ ಮತ್ತು ಸಂಜು ಸ್ಯಾಮ್ಸನ್ ಸ್ಥಾನ ಕಳೆದುಕೊಂಡಿದ್ದಾರೆ. ಕೆ.ಎಲ್. ರಾಹುಲ್ ಮೇಲೆ ಕೂಡ ಒತ್ತಡ ಹೆಚ್ಚಿದೆ. ಇದೇ ಕಾರಣಕ್ಕೆ ಯಾವುದೇ ಆಟಗಾರರು ಫಿಟ್ನೆಸ್ ಕಾರಣಕ್ಕೆ ತಂಡದಿಂದ ಹೊರಗುಳಿಯಲು ಬಯಸುವುದಿಲ್ಲ ಎಂದಿದ್ದಾರೆ.
ಆಸ್ಟ್ರೆಲಿಯಾದಲ್ಲಿ ನಡೆದ ಟಿ20 ವಿಶ್ವಕಪ್ ಸಂದರ್ಭದಲ್ಲಿ ವೇಗಿ ಜಸ್ಪ್ರೀತ್ ಬುಮ್ರಾ ಫಿಟ್ನೆಸ್ ಹೊಂದಿರಲಿಲ್ಲ. ಆದರೂ, ಒತ್ತಡಕ್ಕೆ ಸಿಲುಕಿ ಅವರನ್ನು ತಂಡಕ್ಕೆ ಆಯ್ಕೆ ಮಾಡಬೇಕಾಯಿತು. ಆದರೆ, ಒಂದು ಪಂದ್ಯ ಆಡಿದ ಬಳಿಕ ಅವರು ಗಾಯ ಉಲ್ಬಣಗೊಂಡು ತಂಡದಿಂದ ಹೊರಬಿದ್ದರು. ವಿಶ್ವಕಪ್ಗೆ ಬುಮ್ರಾ ಫಿಟ್ನೆಸ್ ಹೊಂದಿಲ್ಲದಿದ್ದರೂ ಆಯ್ಕೆ ಮಾಡಬೇಕಾಯಿತು. ಇತ್ತೀಚಿನ ಶ್ರೀಲಂಕಾ ವಿರುದ್ಧದ ಸರಣಿಗೂ ಆರಂಭದಲ್ಲಿ ಬುಮ್ರಾ ತಂಡದಲ್ಲಿ ಸ್ಥಾನ ಪಡೆದಿದ್ದರು. ಆದರೆ, ಗಾಯ ಪೂರ್ಣ ಗುಣವಾದ ಕಾರಣ ಹೊರಗುಳಿದರು. ಈ ರೀತಿ ಸ್ಟಾರ್ ಆಟಗಾರರು ಫಿಟ್ನೆಸ್ ಹೊಂದಿಲ್ಲದಿದ್ದರೂ ತಂಡದಲ್ಲಿರುತ್ತಾರೆ. ಬಿಸಿಸಿಐ ಕೂಡ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ. ಆಯ್ಕೆಗಾರರಿಗೆ ಈ ಮಾಹಿತಿ ಇದ್ದರೂ ಅವರು ಅಸಹಾಯಕರು ಎಂದು ಚೇತನ್ ಶರ್ಮ ಹೇಳಿದ್ದಾಗಿ ಖಾಸಗಿ ವಾಹಿನಿ ವರದಿ ಮಾಡಿದೆ.