ಬೀಗಿದವನಲ್ಲ, ಬಾಗಿದವನೇ ಬಾಳೋದು!

Grass
Published on
| ಡಾ.ಕೆ.ಪಿ.ಪುತ್ತೂರಾಯ

ಒಮ್ಮೆ ಒಂದು ನದಿ, ವಿಪರೀತವಾದ ಜಲಧಾರೆಯಿಂದ ತುಂಬಿ ಹರಿಯತೊಡಗಿತು. ತುಂಬಿ ಹರಿಯುತ್ತಿದ್ದಂತೆ ಅದಕ್ಕೊಂದಿಷ್ಟು ಜಂಭ ಬರಲಾರಂಭಿಸಿತು. ರಭಸವಾಗಿ ಹರಿಯುತ್ತಿರುವ ತನ್ನ ಬಲದಿಂದ ತನಗೆದುರಾಗುವ ಗಿಡ-ಮರ, ಮನೆಮಠ ಪ್ರಾಣಿ ಪಕ್ಷಿಗಳನ್ನೆಲ್ಲಾ ಕೊಚ್ಚಿಕೊಂಡು ಹೋಗುವಷ್ಟು ಶಕ್ತಿ ತನಗೀಗ ಇದೆ ಎಂಬ ಅಹಂಕಾರ ಆವರಿಸಿತು. ಅಂತೆಯೇ ತಾನು ಹರಿದು ಸೇರಲಿರುವ ಸಾಗರವನ್ನು ಕೇಳಿತು. ‘ಎಲೈ ಸಾಗರವೇ ಹೇಳು ನಿನಗೀಗ ನಾನು ಏನನ್ನು ತಂದು ಕೊಡಲಿ? ವೃಕ್ಷಗಳನ್ನೇ-ಕಟ್ಟಡಗಳನ್ನೇ-ಸೇತುವೆಗನ್ನೇ?

ನೀನು ಕೇಳಿದುದನ್ನೆಲ್ಲಾ ಬುಡಕಿತ್ತು ನಿನಗೊಪ್ಪಿಸುವ ಶಕ್ತಿ ಸಾಮರ್ಥ್ಯ ನನ್ನಲ್ಲಿ ಇದೆ. ಕೇಳು. ತಂದೊಪ್ಪಿಸುವೆ’. ನದಿಯ ಸೊಕ್ಕನ್ನು ಅರಿತ ಸಾಗರ ನಸುನಕ್ಕು ಹೇಳಿತು: ‘ನನಗೆ ಅವೆಲ್ಲ ಬೇಕಿಲ್ಲ. ಒಂದಷ್ಟು ಹುಲ್ಲನ್ನು ಅದರ ಬೇರು ಸಹಿತ ಕಿತ್ತು ತಂದುಕೊಡು ಅಷ್ಟೇ ಸಾಕು’. ಅದೇನು ಮಹಾ ದೊಡ್ಡ ಕೆಲಸ! ತಕ್ಷಣ ತಂದುಕೊಡುವೆ ಎನ್ನುತ್ತಾ ಬೆಟ್ಟ ಬಯಲುಗಳ ಮೇಲೆ ಹರಡಿ ಹಬ್ಬಿರುವ ಹುಲ್ಲ ರಾಶಿಯತ್ತ ಧಾವಿಸಿ, ಹರಿಯತೊಡಗಿತು. ಆದರೆ ಎಷ್ಟೇ ರಭಸವಾಗಿ ಹರಿದರೂ ಹುಲ್ಲನ್ನು ಕಿತ್ತು ತರಲು ಸಾಧ್ಯವಾಗಲಿಲ್ಲ. ಕಾರಣ ಹರಿದು ಬರುತ್ತಿದ್ದ ನೀರಿಗೆ ಹುಲ್ಲು ಬಾಗಿಬಿಟ್ಟಿತ್ತು. ಎಷ್ಟೇ ಪ್ರಯತ್ನಿಸಿದರೂ ಹುಲ್ಲು ಸಿಗಲೇ ಇಲ್ಲ. ಬರಿ ಕೈಯ್ಯಲ್ಲಿ ಬಂದ ನದಿಯನ್ನು ನೋಡಿ ಸಾಗರ ಹೇಳಿತು. ‘ಎಲೈ ನದಿಯೇ, ನಿನ್ನ ರಭಸಕ್ಕೆ ಸೆಟೆದು ನಿಂತ ಮರ ಕಟ್ಟಡಗಳು ಉರುಳಿ ನಿನ್ನ ವಶವಾದವೇನೋ ನಿಜ, ಆದರೆ ವಿನಮ್ರತೆಯಿಂದ ಬಾಗಿ ಬಿಟ್ಟ ಹುಲ್ಲುಗಳಿಗೆ ನೀನೇನೂ ಮಾಡ ಲಾಗಲಿಲ್ಲ. ಅವು ಬದುಕಿ ಉಳಿದವು. ಅರಿವಾಯಿತೇ ನಿನ್ನ ಶಕ್ತಿ ಸಾಮರ್ಥ್ಯ? ಜಂಭಪಡದಿರು!’

ತಾತ್ಪರ್ಯ ಇಷ್ಟೆ: ಜೀವನದಲ್ಲಿ ಬಿಗುಮಾನದಿಂದ ಬೀಗಿದವನಲ್ಲ; ಬಾಗಿದವನೇ ಬದುಕಿ ಉಳಿಯುವುದು. ಅದು ಪ್ರಕೃತಿ ನಿಯಮವೂ ಹೌದು. ಆದುದರಿಂದಲೇ ತೆನೆಬಿಟ್ಟ ಪೈರು ಬಾಗುತ್ತದೆ; ಗೊನೆಬಿಟ್ಟ ಬಾಳೆ ಬಾಗುತ್ತದೆ; ಫಲ ಕೊಟ್ಟ ಗಿಡ ಬಾಗುತ್ತದೆ, ಆದರೆ ಏನನ್ನೂ ಕೊಡದ ಮಾನವ ಮಾತ್ರ ಬಿಗುಮಾನದಿಂದ ಬೀಗುತ್ತಾನೆ. ಹೂವ ತರುವರ ಮನೆಗೆ ಹುಲ್ಲ ತರುವ, ಅವ ಲಕುಮಿ ರಮಣ, ಅವಗಿಲ್ಲ ಗರುವ ಅಂದ ಮೇಲೆ ನಮ್ಮಂತಹ ಹುಲು ಮಾನವರಿಗೇಕೆ ಈ ಒಣಜಂಭ! ಅಹಂಕಾರವೆನ್ನುವುದು ಕಣ್ಣಿನೊಳಗೆ ಬಿದ್ದ ಧೂಳಿನಂತೆ. ಆ ಧೂಳನ್ನು ತೆಗೆಯದೆ ಹೋದರೆ ಯಾವುದೂ ಸ್ಪಷ್ಟವಾಗಿ ಕಾಣದು.

ಒಲಿಂಪಿಕ್ಸ್​ನಲ್ಲಿ ಚಿನ್ನದ ಪದಕ ವಿಜೇತನೂ, ತನ್ನ ಕತ್ತನ್ನು ಬಗ್ಗಿಸಿದರೆ ಮಾತ್ರ ಆ ಪದಕ ಅವನದಾಗುತ್ತದೆ. ನಾನೇ ಎಲ್ಲ ಎಂಬ ಮೇಲರಿಮೆಯೂ ಸಲ್ಲ, ನಾನು ಏನೂ ಅಲ್ಲ ಎಂಬ ಕೀಳರಿಮೆಯೂ ಬೇಡ. ನಾವೇನು, ನಮ್ಮ ಶಕ್ತಿ ಸಾಮರ್ಥ್ಯವೆಷ್ಟು ಎಂಬುದರ ಪರಿಚಯ ಮೊದಲು ನಮಗಿರಲಿ. ಸಾಧಿಸಿದುದು ಕೈ ಅಗಲ, ಸಾಧಿಸಬೇಕಾದುದು ಜಗದಗಲ ಎಂಬ ಅರಿವು ಇದ್ದವನು ಮಾತ್ರ ಪ್ರಗತಿ ಹೊಂದಲು ಸಾಧ್ಯ. ಈ ಸತ್ಯವನ್ನೇ ದಾರ್ಶನಿಕರು ಹೇಳಿದರು. ಈ ಸತ್ಯವನ್ನೇ ಸರ್ವಜ್ಞನೂ ಒಪ್ಪಿಕೊಂಡ. ಸೂರ್ಯನ ಬೆಳಕು ಜಂಭದಿಂದ ಹೇಳಿತಂತೆ - ಈ ಜಗತ್ತಿನಲ್ಲಿ ನಾನು ನೋಡದ ವಸ್ತುವೇ ಇಲ್ಲ, ತಕ್ಷಣ ಕತ್ತಲೆ ಕೇಳಿತಂತೆ - ಓ ಬೆಳಕೇ ನೀನು ನನ್ನನ್ನು ಎಂದಾದರೂ ನೋಡಿರುವೆಯಾ? ಕತ್ತಲೆಯ ಈ ಮಾತಿಗೆ ಸೂರ್ಯನಲ್ಲೂ ಉತ್ತರ ಇಲ್ಲವಾಯಿತು. ಕೆಲವರಿಗಂತೂ ಒಂದಿಷ್ಟು ಅಧಿಕಾರ, ಅಂತಸ್ತು, ಸೊತ್ತು, ಸಂಪತ್ತು ಬಂದರೆ ಎಲ್ಲಿಲ್ಲದ ಜಂಭ. ಅದಕ್ಕೇ ನೋಡಿ ಯೌವನದಲ್ಲಿ ಮಾಂಸಖಂಡಗಳು ಉಕ್ಕು, ಆಗ ನಮಗೆ ಏನೋ ಸೊಕ್ಕು! ಆದರೆ ವೃದ್ಧಾಪ್ಯ ಬರುತ್ತಿದ್ದಂತೆ ಮೈಯೆಲ್ಲಾ ಸುಕ್ಕು. ನೋಡಿ ಸಹಿಸಿಕೊಳ್ಳಬೇಕು ಎಲ್ಲವನ್ನೂ ನಕ್ಕು. ಆಗಂತುಕನೊಬ್ಬ ಬುದ್ಧನನ್ನು ಕೇಳಿದ: ಇಷ್ಟು ದೊಡ್ಡ ವ್ಯಕ್ತಿಯಾಗಿದ್ದರೂ ನೀವು ಏಕೆ ಯಾವಾಗಲೂ ಕೆಳಗೆ ಕೂರುತ್ತೀರಿ? ಬುದ್ಧನ ಮಾರ್ವಿುಕ ಉತ್ತರ: ಕೆಳಗೆ ಕೂತ ವ್ಯಕ್ತಿ ಎಂದಿಗೂ ಬೀಳೋದಿಲ್ಲ! ಆದುದರಿಂದ ನಾವು ಸಮರ್ಥರಾಗಿ ಇರುವುದರ ಜತೆ ನಿಗರ್ವಿಗಳೂ ಆಗಿರಬೇಕು. ನಾನು ಮಾತ್ರ ಈ ಕೆಲಸವನ್ನು ಮಾಡಬಲ್ಲೆ ಎಂಬ ಅಹಂಕಾರದ ಬದಲು ನಾನು ಮಾಡುವುದನ್ನು ಯಾರು ಬೇಕಾದರೂ ಮಾಡಬಲ್ಲರು ಎಂಬ ವಿನಮ್ರತಾ ಭಾವವಿರಲಿ. ಇಂತಹ ವಿನಯವಿದ್ದರೆ ವಿಜಯವೂ ನಮ್ಮದೇ. ಚಹಾ ತುಂಬಿದ ಲೋಟದೊಳಗೆ ಇನ್ನಷ್ಟು ಚಹಾ ತುಂಬಲು ಹೇಗೆ ಸಾಧ್ಯವಿಲ್ಲವೋ ಅದೇ ರೀತಿ ಅಹಂಕಾರ ತುಂಬಿದ ಮನಸ್ಸು ಮತ್ತೇನನ್ನೂ ಕಲಿಯದು. ಮೇಲಾಗಿ ಅಹಂಕಾರ ಕ್ಷಮೆಯನ್ನು ನಿರೀಕ್ಷಿಸುತ್ತದೆ. ಆದರೆ ವಿನಯ ಕ್ಷಮೆಯನ್ನು ನೀಡುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net