ಅಲ್ಲಾ, ಆರ್ವಿು, ಅಮೆರಿಕ ಬಿಟ್ಟರೆ ಬೇರೇನಿಲ್ಲ!

Sharief Brothers
Published on
ಜಗದಗಲ
ಉಪಖಂಡದ ಮುಸ್ಲಿಮರಿಗಾಗಿ ಎಂದು 1947ರಲ್ಲಿ ಭಾರತವನ್ನು ವಿಭಜಿಸಿ ಸೃಷ್ಟಿಸಲ್ಪಟ್ಟ ಪಾಕಿಸ್ತಾನವನ್ನು ನಿಯಂತ್ರಿಸುವುದು ಮೂರು ‘ಅ’ಗಳು ಅಲ್ಲಾಹ್, ಆರ್ವಿು ಮತ್ತು ಅಮೆರಿಕ! ಎನ್ನುವ ಮಾತು ಜನಸಾಮಾನ್ಯರಲ್ಲೇ ಅಲ್ಲ, ವೈದ್ವಾಂಸಿಕ ವಲಯದಲ್ಲೂ ಕೇಳಿಬರುವುದು ಸಾಮಾನ್ಯ. ಇಂದು ಆ ದೇಶದ ಆರ್ಥಿಕ ಅಧೋಗತಿ, ರಾಜತಾಂತ್ರಿಕ ನಿಕೃಷ್ಟತೆ ಹಾಗೂ ಸುರಕ್ಷಾ ದ್ವಂದ್ವಗಳನ್ನು ನೋಡಿದರೆ ಆ ಇಸ್ಲಾಮಿಕ್ ರಿಪಬ್ಲಿಕ್ ಅನ್ನು ದೇವರು ಕೈಬಿಟ್ಟಂತೆ ಕಾಣುತ್ತದೆ. ಆದರೆ ಸೇನೆ ಮತ್ತು ಅಮೆರಿಕ ತಮ್ಮ ನಿಯಂತ್ರಣವನ್ನು ಇನ್ನಷ್ಟು ಬಲಪಡಿಸಿವೆ ಎನ್ನುವುದು ಇಂದಿನ ಬೆಳವಣಿಗೆಗಳನ್ನು ನೋಡಿದರೆ ಢಾಳಾಗಿ ಕಾಣುತ್ತದೆ. ಜುಲೈ 2023ರಲ್ಲಿ ನಡೆಯಬೇಕಾಗಿದ್ದ ಸಾರ್ವತ್ರಿಕ ಚುನಾವಣೆಗಳು ಮುಂದೆಮುಂದೆ ಸಾಗುತ್ತ ಬಂದು ಅಂತಿಮವಾಗಿ ಇದೇ ಫೆಬ್ರವರಿ 8ರಂದು ಜರುಗಿದವು, ಸರಿಸುಮಾರು ಒಂದು ತಿಂಗಳ ನಂತರ ಮಾರ್ಚ್ 4ರಂದು ಶೆಹ್​ಬಾಜ್ ಶರೀಫ್ ನೇತೃತ್ವದ ಪಾಕಿಸ್ತಾನ್ ಮುಸ್ಲಿಂ ಲೀಗ್-ಎನ್- ಪಾಕಿಸ್ತಾನ್ ಪೀಪಲ್ಸ್ ಪಾರ್ಟಿ (ಪಿಎಂಎಲ್-ಎನ್ -ಪಿಪಿಪಿ) ಸಂಮಿಶ್ರ ಸರ್ಕಾರ ಅಧಿಕಾರಕ್ಕೆ ಬಂತು, ಆರು ದಿನಗಳ ತರುವಾಯ ಮಾರ್ಚ್ 10ರಂದು ಪಿಪಿಪಿ ಸಹಅಧ್ಯಕ್ಷ ಆಸಿಫ್ ಆಲಿ ಜರ್ದಾರಿ ರಾಷ್ಟ್ರಾಧ್ಯಕ್ಷರಾಗಿ ಪ್ರಮಾಣವಚನ ಸ್ವೀಕರಿಸಿದರು. ಇದೆಲ್ಲವೂ ಆದದ್ದು ಪಾಕ್ ಸೇನೆಯ ಪೂರ್ಣ ನಿಯಂತ್ರಣದಲ್ಲಿ ಮತ್ತು ಅಮೆರಿಕದ ತೀವ್ರ ನಿಗಾದಲ್ಲಿ. ಇದರಲ್ಲಿ ಅಚ್ಚರಿಯೂ ಇಲ್ಲ ಹಾಗೂ ಇದು ಅಭೂತಪೂರ್ವವೇನಲ್ಲ.

ತನ್ನದೇ ಐತಿಹಾಸಿಕ ಆಸ್ಮಿತೆ ಇಲ್ಲದ, ಏಕ ಭೌಗೋಳಿಕ ಹಾಗೂ ಸಾಂಸ್ಕೃತಿಕ ರೂಪಗಳಿಲ್ಲದ ಪಾಕಿಸ್ತಾನಕ್ಕೆ ಹೊರಗಿನ ಮಹಾಶಕ್ತಿಯೊಂದರ ಊರುಗೋಲು ಅಗತ್ಯವಷ್ಟೇ ಅಲ್ಲ ಅನಿವಾರ್ಯ ಸಹ ಎಂದು ಆ ದೇಶದ ಸೃಷ್ಟಿಗೂ ಮೊದಲೇ ಮನಗಂಡಿದ್ದ, ಎರಡನೆಯ ಮಹಾಯುದ್ಧದಿಂದ ಜಝುರಿತಗೊಂಡಿದ್ದ ಬ್ರಿಟನ್ ಗಟ್ಟಿ ಊರುಗೋಲಾಗದೆಂದೂ ಅರಿತಿದ್ದ ಮಹಮದ್ ಆಲಿ ಜಿನ್ನಾ ಅಮೆರಿಕವನ್ನು ಸೆಳೆಯುವ ಹಾಗೂ ಅದಕ್ಕಾಗಿ ಆ ದೇಶಕ್ಕೆ ಬೇಕಾದ್ದು ಕೊಡುವ ಸ್ಪಷ್ಟ ಸೂಚನೆಯನ್ನು ಅಮೆರಿಕದ ಇಬ್ಬರು ರಾಜತಂತ್ರಜ್ಞರ ಮೂಲಕ ಮೇ 2, 1947ರಂದೇ ಹ್ಯಾರಿ ಟ್ರೂಮನ್ ಸರ್ಕಾರಕ್ಕೆ ತಲುಪಿಸಿದ್ದರು. ಅದೇ ಸಮಯದಲ್ಲಿ ಭಾರತದ ಮಧ್ಯಂತರ ಪ್ರಧಾನಮಂತ್ರಿ ‘ಭಾವಿ ಸ್ವತಂತ್ರ ಭಾರತ ಅಲಿಪ್ತ ವಿದೇಶಾಂಗ ನೀತಿಯನ್ನು ಅನುಸರಿಸುತ್ತದೆ’ ಎಂದು ಸಾರತೊಡಗಿದ್ದುದು ಪಾಕಿಸ್ತಾನದ ರೊಟ್ಟಿಯನ್ನು ತುಪ್ಪದಲ್ಲಿ ಬೀಳಿಸಿತು. ಕಮ್ಯೂನಿಸ್ಟ್ ಸೋವಿಯೆತ್ ಯೂನಿಯನ್ ವಿರುದ್ಧ ಅದಾಗಲೇ ಯೂರೋಪ್​ನಲ್ಲಿ ನ್ಯಾಟೋ ಸೇನಾ ಕೂಟವನ್ನು ಕಟ್ಟಲು ತಯಾರಿ ಆರಂಭಿಸಿದ್ದ ಅಮೆರಿಕ ಅಂತಹದೇ ಪ್ರಯತ್ನಗಳನ್ನು ಏಷ್ಯಾದಲ್ಲೂ ಆರಂಭಿಸುವ ಹಂಚಿಕೆಯಲ್ಲಿತ್ತು. ಅದಕ್ಕಾಗಿ ಅದಕ್ಕೆ ಬೇಕಿದ್ದುದು ನಂಬಿಗಸ್ತ ದೇಶಗಳು.

ಅಲಿಪ್ತ ಮಂತ್ರ ಜಪಿಸತೊಡಗಿದ ಭಾರತ ಹಾಗೂ 1949ರಲ್ಲಿ ಕಮ್ಯೂನಿಸ್ಟ್ ಆಡಳಿತಕ್ಕೊಳಪಟ್ಟು ಸೋವಿಯೆತ್ ಯೂನಿಯನ್ ಜತೆಗೇ ರಕ್ಷಣಾ ಒಪ್ಪಂದ ಮಾಡಿಕೊಂಡ ಚೀನಾ ಈ ವಲಯದಲ್ಲಿ ಅಮೆರಿಕದ ಆಯ್ಕೆಯನ್ನು ಸೀಮಿತಗೊಳಿಸಿಬಿಟ್ಟಿತು. ವಿಧಿಯಿಲ್ಲದೆ ‘ಮಧ್ಯಮ’ ರಾಷ್ಟ್ರಗಳ ಮೊರೆಹೋಗಬೇಕಾದ ಅಮೆರಿಕದ ಆಯ್ಕೆಯ ಪಟ್ಟಿಯಲ್ಲಿ ಪಾಕಿಸ್ತಾನ ಮೊದಲ ಸ್ಥಾನ ಗಳಿಸಿಕೊಂಡದ್ದು ಅಮೆರಿಕದ ಮುಂದೆ ಎದುರಾದ ಐತಿಹಾಸಿಕ ಅನಿವಾರ್ಯತೆ.

ಜಿನ್ನಾರ ನಿಧನದ ನಂತರ ವರ್ಚಸ್ವಿ ರಾಜಕೀಯ ನಾಯಕರಿಲ್ಲದ ಪಾಕಿಸ್ತಾನದಲ್ಲಿ ಸೇನಾಧಿಕಾರಿಗಳ ಕೈ ದಿನೇದಿನೇ ಮೇಲಾಗತೊಡಗಿತು. ಸೇನಾ ಮೂಲದಿಂದ ಬಂದವರೇ ಒಬ್ಬೊಬ್ಬರಾಗಿ ಗವರ್ನರ್ ಜನರಲ್ ಸ್ಥಾನವನ್ನೂ ಹಿಡಿದು ಕೂತದ್ದೂ ನಡೆಯಿತು. ಅಂತಿಮವಾಗಿ 1958ರಲ್ಲಿ ಜನರಲ್ ಅಯೂಬ್ ಖಾನ್ ಸೇನಾ ಕ್ರಾಂತಿಯೆಸಗಿ ಆಡಳಿತವನ್ನು ತನ್ನ ಕೈಗೆ ತೆಗೆದುಕೊಂಡಾಗ ಪಾಕಿಸ್ತಾನದ ರಾಜಕೀಯ ನಾಯಕತ್ವ ಹಾಗೂ ಸೇನಾ ನಾಯಕತ್ವದ ನಡುವಿನ ಗೆರೆ ಅಳಿಸಿಹೋಯಿತು. ಇನ್ನೊಂದು ವರ್ಷದಲ್ಲಿ ಅಯೂಬ್ ಖಾನ್ ರಾವಲ್​ಪಿಂಡಿಗೆ ಸನಿಹದಲ್ಲೇ ಹೊಸ ರಾಜಧಾನಿ ಇಸ್ಲಾಮಾಬಾದ್ ಅನ್ನು ನಿರ್ವಿುಸಿದಾಗ ರಾಜಕೀಯ ನಾಯಕತ್ವ ಹಾಗೂ ಸೇನಾ ನಾಯಕತ್ವ ಭೌಗೋಳಿಕವಾಗಿಯೂ ಹತ್ತಿರವಾಗಿಬಿಟ್ಟವು. ಹೀಗೆ ಪಾಕಿಸ್ತಾನದ ರಾಜಕಾರಣಿಗಳು ಮೂಲೆಗೆ ಸರಿದು ಆ ದೇಶವನ್ನು ಸೇನೆ ಮತ್ತು ಅಮೆರಿಕ ತಮ್ಮ ಪೂರ್ಣ ಹಿಡಿತದಲ್ಲಿ ತೆಗೆದುಕೊಳ್ಳುವುದಕ್ಕೆ ಯಾವ ತಡೆಯೂ ಉಳಿಯಲಿಲ್ಲ. ಇದಕ್ಕೊಂದು ಉದಾಹರಣೆ ಆ ದಿನಗಳಲ್ಲಿ ನಡೆದ ಒಂದು ಕುತೂಹಲಕರ ಪ್ರಕರಣ.

ಪೆಶಾವರ್ ಸಮೀಪದಲ್ಲಿ ಅಮೆರಿಕದ ವಾಯುಸೇನೆ (ಯುಎಸ್​ಎಎಫ್) ಹಾಗೂ ಗುಪ್ತಚರ ಇಲಾಖೆ (ಸಿಐಎ) ರಹಸ್ಯವಾಗಿ ನೆಲೆಯೊಂದನ್ನು ಹೊಂದಿವೆಯೆಂಬ ವಿಷಯವನ್ನು ಅರಿತು ಅಚ್ಚರಿಗೊಂಡ ವಿದೇಶ ಮಂತ್ರಿ ಝುುಲ್ಪಿಕಾರ್ ಆಲಿ ಭುಟ್ಟೋ ಅಲ್ಲಿಗೆ ಭೇಟಿ ನೀಡಲು ಮನಸ್ಸುಮಾಡಿದರು. ಆಗ ನೆಲೆಯ ಮುಖ್ಯಸ್ಥನಿಂದ ಅವರಿಗೆ ಬಂದ ಪ್ರತ್ಯುತ್ತರ ಹೀಗಿತ್ತು- ‘ಮಾನ್ಯ ಮಂತ್ರಿಗಳು ನೆಲೆಯ ಸ್ವಾಗತ ವಿಭಾಗಕ್ಕೆ ಬರಬಹುದು. ಅಲ್ಲಿ ಚಹಾ ಮತ್ತು ಬಿಸ್ಕೆಟ್​ಗಳನ್ನು ಸ್ವೀಕರಿಸಬಹುದು, ಅಲ್ಲಿಂದಾಚೆಗೆ ಅವರಿಗೆ ಪ್ರವೇಶವಿಲ್ಲ’. ಪಾಕ್ ಸೇನಾ ಸರ್ಕಾರದ ಅನುಮತಿಯೊಂದಿಗೆ ಪಾಕ್ ನೆಲದಲ್ಲಿ ಅಮೆರಿಕ ಸ್ಥಾಪಿಸಿದ್ದ ರಹಸ್ಯ ವಾಯು ಮತ್ತು ಗುಪ್ತಚರ ನೆಲೆಗೆ ಪಾಕ್ ವಿದೇಶಮಂತ್ರಿಗೇ ಪ್ರವೇಶವಿಲ್ಲ! ದಶಕದ ನಂತರ ಜನರಲ್ ಯಾಹ್ಯಾ ಖಾನ್ ನೇತೃತ್ವದ ಸೇನಾ ಸರ್ಕಾರ ಪೂರ್ವ ಪಾಕಿಸ್ತಾನದಲ್ಲಿ ಬಂಗಾಲಿಗರ ಮಾರಣಹೋಮವನ್ನು ಆರಂಭಿಸಿದಾಗ ಅಮೆರಿಕದ ರಿಚರ್ಡ್ ನಿಕ್ಸನ್ ಸರ್ಕಾರ ಅದನ್ನು ತೀರಾ ಸಹಜವೆಂಬಂತೆ ಸ್ವೀಕರಿಸಿತು. ಅಷ್ಟೇ ಅಲ್ಲ, ಬಂಗಾಲಿಗಳ ಪರವಾಗಿ ನಿಂತ ಪ್ರಜಾಪ್ರಭುತ್ವವಾದಿ ಭಾರತವನ್ನು ಬೆದರಿಸಲು ಅಣ್ವಸ್ತ್ರಗಳನ್ನು ಹೊಂದಿದ ಐವತ್ತಾರು ಯುದ್ಧನೌಕೆಗಳನ್ನು ಬಂಗಾಳ ಕೊಲ್ಲಿಗೆ ಕಳುಹಿಸಿತು! ಇನ್ನೊಂದು ದಶಕದ ನಂತರ ಅಫ್ಘಾನಿಸ್ತಾನದಿಂದ ಸೋವಿಯೆತ್ ಸೇನೆಯನ್ನು ಹೊರಗಟ್ಟುವ ತನ್ನ ಕಾರ್ಯಾಚರಣೆಯಲ್ಲಿ ಪಾಕಿಸ್ತಾನವನ್ನು ಮುಂಚೂಣಿ ರಾಷ್ಟ್ರ ಎಂದು ಅಮೆರಿಕ ಪರಿಗಣಿಸಿದಾಗ ಅಮೆರಿಕ ಮತ್ತು ಪಾಕ್ ಸೇನೆಯ ನಡುವಿನ ಸಂಬಂಧಗಳು ಇನ್ನೊಂದು ಮಜಲಿಗೇರಿದವು ಮತ್ತು ಅದು ಪಾಕ್ ರಾಜಕಾರಣವನ್ನೂ ಇನ್ನಷ್ಟು ಬಲವಾಗಿ ನಿಯಂತ್ರಿಸತೊಡಗಿತು. ಅದೇ ವಾಸ್ತವ ಈಗ ಇನ್ನಷ್ಟು ಗಾಢವಾಗಿದೆ. ಇದರಲ್ಲಿ ಅಮೆರಿಕ ಮತ್ತು ಪಾಕ್ ಸೇನೆಗೆ ಸಹಕಾರಿಯಾಗಿರುವುದು ಶೆಹ್​ಬಾಜ್ ಶರೀಫ್ ಮತ್ತು ಆಸಿಫ್ ಆಲಿ ಜರ್ದಾರಿ. ಹೀಗಾಗಿಯೇ ಅವು ಒಟ್ಟಿಗೆ ಸಂಚು ಹೂಡಿ, ಮತ್ತೆ ಪ್ರಧಾನಮಂತ್ರಿಯಾಗುವ ಕನಸು ಕಂಡಿದ್ದ ಇಮ್ರಾನ್ ಖಾನ್​ರನ್ನು ಚುನಾವಣೆಗಳಿಂದಲೇ ದೂರವಿಟ್ಟವು ಮತ್ತು ‘ಇನ್ನು ನನ್ನನ್ನು ತಡೆಯುವವರಾರು’ ಎಂದು ಬೀಗುತ್ತಿದ್ದ ನವಾಜ್ ಶರೀಫ್​ರನ್ನು ಉಪಾಯವಾಗಿ ಹಿಂದಕ್ಕೆಳೆದು ನಿಲ್ಲಿಸಿವೆ. ಒಟ್ಟಾರೆಯಾಗಿ ಕಳೆದ ಎರಡು ವರ್ಷಗಳಲ್ಲಿ ವಾಷಿಂಗ್​ಟನ್, ಇಸ್ಲಾಮಾಬಾದ್ ಮತ್ತು ರಾವಲ್​ಪಿಂಡಿಗಳಲ್ಲಿ ನಡೆದ ತಂತ್ರಕುತಂತ್ರಗಳು ಯಾವ ಕ್ರೖೆಂ ಥ್ರಿಲ್ಲರ್​ಗಳಿಗಿಂತಲೂ ಕಡಿಮೆಯಿಲ್ಲ.

ಶೀತಲಸಮರ ಕಾಲದಲ್ಲಿ ಅಮೆರಿಕಕ್ಕೆ ಪಾಕಿಸ್ತಾನದ ಅಗತ್ಯವಿದ್ದದ್ದು ಸೋವಿಯೆತ್ ಯೂನಿಯನ್ ವಿರುದ್ಧವಾಗಿ. ಇಂದು ಕಾಲ ಬದಲಾಗಿದೆ. ಅಮೆರಿಕಕ್ಕೆ ಪಾಕಿಸ್ತಾನ ಬೇಕಾಗಿರುವುದು ಚೀನಾದ ವಿರುದ್ಧ. ವಿಚಿತ್ರವೆಂದರೆ ಚೀನಾಗೆ ಪಾಕಿಸ್ತಾನ ಹತ್ತಿರವಾಗುವುದನ್ನು ಅಮೆರಿಕವೇ ಬಯಸಿತ್ತು ಹಾಗೂ ಒಳಗೊಳಗೇ ಪ್ರೋತ್ಸಾಹಿಸಿತ್ತು! ಅದೊಂದು ಆಸಕ್ತಿಕರ ಘಟನಾವಳಿ. ಕಮ್ಯೂನಿಸ್ಟ್ ಚೀನಾವನ್ನು ಅಮೆರಿಕ ಎಲ್ಲ ಬಗೆಯಲ್ಲೂ ವಿರೋಧಿಸಿದ್ದು 1950 ಮತ್ತು 1960ರ ದಶಕಗಳ ಶೀತಲಸಮರ ರಾಜಕಾರಣದ ವಾಸ್ತವ. ಆದಾಗ್ಯೂ, 1960ರ ದಶಕದ ಆರಂಭದಲ್ಲಿ ವಿದೇಶಮಂತ್ರಿ ಭೂಟ್ಟೋರ ಪ್ರಯತ್ನದಿಂದ ಅಯೂಬ್ ಖಾನ್ ಸರ್ಕಾರ ಚೀನಾ ಜತೆ ಸಂಬಂಧಗಳನ್ನು ಸ್ಥಾಪಿಸಿಕೊಳ್ಳಹೊರಟಿತಷ್ಟೇ. ಅದಕ್ಕಾಗಿ ಭುಟ್ಟೋರಿಗಿದ್ದ ಕಾರಣ ಭಾರತದ ವಿರುದ್ಧ ಪಾಕಿಸ್ತಾನದ ರಾಜತಾಂತ್ರಿಕ ಹಾಗೂ ಸೇನಾಶಕ್ತಿಗಳನ್ನು ವೃದ್ಧಿಸಿಕೊಳ್ಳುವುದಾಗಿತ್ತು. ಆದರೆ ಭುಟ್ಟೋ ಅಯೂಬ್ ಚೀನಾ-ಪ್ರೀತಿಗೆ ಅಮೆರಿಕ ಮೌನಸಮ್ಮತಿ ನೀಡಿದ್ದು ಇಂದಿಗೂ ಹಲವರಿಗೆ ಅಚ್ಚರಿಯ ವಿಷಯ.

ಚೀನಾವನ್ನು ಅದೆಷ್ಟೇ ವಿರೋಧಿಸಿದರೂ, ಆ ಕಮ್ಯೂನಿಸ್ಟ್ ದೇಶಕ್ಕೆ ಎಲ್ಲ ಬಾಗಿಲುಗಳನ್ನೂ ಮುಚ್ಚಿಬಿಟ್ಟರೂ, ಸಮಯ ಬಂದಾಗ ಇರಲೆಂದು ಒಂದು ಕಿಟಕಿಯನ್ನು ತೆರೆದಿಟ್ಟುಕೊಳ್ಳುವುದು ವಿಹಿತ ಎಂದು ಅಮೆರಿಕ ತಿಳಿದಿತ್ತು. ಅನಾ ಯಸವಾಗಿ ದೊರೆತ ಆ ಕಿಟಕಿ ಪಾಕಿಸ್ತಾನವಾಗಿತ್ತು! ಅಮೆರಿಕದ ಲೆಕ್ಕಾಚಾರ ಅದೆಷ್ಟು ಸರಿಯಾಗಿತ್ತು ಎನ್ನುವುದು ಸಾಬೀತಾದದ್ದು 1960ರ ದಶಕದ ಅಂತ್ಯದ ಹೊತ್ತಿಗೇ.

ವಿಯೆಟ್ನಾಂ ಕೆಸರಿನಲ್ಲಿ ಸಿಲುಕಿಕೊಂಡು ಹೊರಬರಲಾಗದೇ ಒಡ್ಡಾಡುತ್ತಿದ್ದ ಅಮೆರಿಕ ಯುದ್ಧದಲ್ಲಿ ಸೋಲದೇ ಗೌರವಯುತವಾಗಿ ಹೊರನಡೆಯಬೇಕೆಂದು ಬಯಸಿ ವಿಯೆಟ್ನಾಮಿಗಳ ಜತೆ ಸಂಧಾನ ಆರಂಭಿಸಿದಾಗ ಆ ಪುಟ್ಟ ಕಮ್ಯೂನಿಸ್ಟ್ ದೇಶದಿಂದ ಬಂದ ಸಂದೇಶ- ್ಕಚಛ ಠಿಟ ಏಚ್ಞಟಜಿ ್ಝಛಿಠ ಠಿಜ್ಟಟ್ಠಜಜ ಕಛಿkಜ್ಞಿಜ! ಅಂದರೆ ನಮ್ಮ ಜತೆ ಸ್ನೇಹ ಬೇಕಾದರೆ ಮೊದಲು ಚೀನಾ ಜತೆ ಸ್ನೇಹ ಸ್ಥಾಪಿಸಿಕೊಳ್ಳಿ ಎಂದು. ಆಗ ಚೀನಾದ ಜತೆ ಮಾತಾಡಲು ಜುಲೈ 1974ರಲ್ಲಿ ಪಾಕ್ ‘ಕಿಟಕಿ’ಯನ್ನು ಅಮೆರಿಕ ಬಳಸಿಕೊಂಡಿತು. ಹೀಗೆ ಅಮೆರಿಕ ಮತ್ತು ಚೀನಾಗಳ ನಡುವೆ ಸಂಬಂಧ ಸುಧಾರಿಸತೊಡಗಿದಂತೇ, ಯುದ್ಧವನ್ನು ನಿಲ್ಲಿಸುವ ಸಂಧಾನಕ್ಕೆ ಮುಂದಾಗುವಂತೆ ವಿಯೆಟ್ನಾಮಿಗಳಿಗೆ ಚೀನೀ ನಾಯಕತ್ವ ಸೂಚನೆ ನೀಡಿತು. ಮುಂದಾದದ್ದು ಇತಿಹಾಸ. ಅಮೆರಿಕ ಮತ್ತು ವಿಯೆಟ್ನಾಂಗಳ ನಡುವೆ ಜನವರಿ 1973ರಲ್ಲಿ ಒಪ್ಪಂದವಾಯಿತು, ಅಮೆರಿಕದ ಸೇನೆ ‘ಗೌರವಯುತವಾಗಿ’ ಹೊರನಡೆಯಿತು.

ಇದು ನಾಣ್ಯದ ಒಂದು ಮುಖ. ಇನ್ನೊಂದು ಮುಖ ಹೊಸ ಶತಮಾನದಲ್ಲಿ ಅನಾವರಣಗೊಳ್ಳತೊಡಗಿತು. ಚೀನೀ ಅಧ್ಯಕ್ಷ ಷಿ ಜಿನ್​ಪಿಂಗ್ ತಮ್ಮ ಸಾಲಸಂಕೋಲೆ ಯೋಜನೆ ‘ಬೆಲ್ಟ್ ಅಂಡ್ ರೋಡ್ ಇನಿಷಿಯೇಟಿವ್’ನಲ್ಲಿ ಪಾಕಿಸ್ತಾನವನ್ನು ದೊಡ್ಡದಾಗಿ ಸಿಲುಕಿಸಿಕೊಂಡು, ಆ ದೇಶದಿಂದ ಅಮೆರಿಕವನ್ನೇ ಹೊರಗಟ್ಟಲು ಪ್ರಯತ್ನಿಸತೊಡಗಿದಾಗ ಒಂದುಕಾಲದಲ್ಲಿ ಸೋವಿಯೆತ್ ಯೂನಿಯನ್​ನಿಂದ ಬರುತ್ತಿದ್ದ ಅಪಾಯವೇ ಈಗ ಚೀನಾದಿಂದ ಬರುತ್ತಿರುವುದನ್ನು ಮೊದಲಿಗೆ ಗುರುತಿಸಿದ್ದು ಡೊನಾಲ್ಡ್ ಟ್ರಂಪ್ ಸರ್ಕಾರ. ಆರ್ಥಿಕವಾಗಿ ಪಾಕಿಸ್ತಾನದ ಕೈ ತಿರುಚಿ ಅದನ್ನು ಚೀನಾದಿಂದ ವಿಮುಖಗೊಳಿಸಲು ಟ್ರಂಪ್ ನಡೆಸಿದ ಪ್ರಯತ್ನ ಪ್ರಧಾನಿ ನವಾಜ್ ಶರೀಫ್​ರ ಚೀನಾ-ಪರ ನೀತಿಗಳಿಂದಾಗಿ ಯಶಸ್ವಿಯಾಗಲಿಲ್ಲ. ಹೀಗಾಗಿ ಪಾಕ್ ಸೇನೆಯ ಜತೆಗೂಡಿ ಶರೀಫ್ ಮೇಲೆ ಭ್ರಷ್ಟಾಚಾರದ ಆರೋಪ (ಅದು ನಿಜವಾದದ್ದೇ) ಹೊರಿಸಿ ಅವರು ಅಧಿಕಾರ ತ್ಯಜಿಸುವಂತೆ ಮಾಡುವುದರಲ್ಲಿ ಟ್ರಂಪ್ ಸರ್ಕಾರವೇನೋ ಯಶಸ್ವಿಯಾಯಿತು. ಆದರೆ ಅಮೆರಿಕ ಮತ್ತೆ ಪಾಕ್ ಸೇನೆಗಳೆರಡೂ ತಮಗೆ ಅನುಕೂಲಕರ ಎಂದು ತಿಳಿದು ಗದ್ದುಗೆಗೇರಿಸಿದ ಇಮ್ರಾನ್ ಖಾನ್ ಚೀನಾವನ್ನು ವಿರೋಧಿಸಿದರೂ ರಷ್ಯಾಗೆ ಹತ್ತಿರವಾಗತೊಡಗಿದ್ದು ಹೊಸ ಬೈಡೆನ್ ಸರ್ಕಾರಕ್ಕೆ ಸಮ್ಮತವೆನಿಸಲಿಲ್ಲ. ಹಾಗೇ ತನಗೆ ಪ್ರಧಾನಿ ಪಟ್ಟ ಸಿಕ್ಕಿದ್ದೇ ಸೇನೆಯ ಕೃಪಾಕಟಾಕ್ಷದಿಂದಾಗಿ ಎನ್ನುವುದನ್ನು ಇಮ್ರಾನ್ ಖಾನ್ ಮರೆತು ದಂಡನಾಯಕ ಕಮರ್ ಜಾವೇದ್ ಬಾಜ್ವಾರ ವಿರುದ್ಧವಾಗಿ ಹೋಗಲೆತ್ನಿಸಿದ ಆ ಮಾಜಿ ಕ್ರಿಕೆಟಿಗ ಏಕಕಾಲದಲ್ಲಿ ಅಮೆರಿಕ ಮತ್ತು ಸೇನೆಗಳೆರಡಕ್ಕೂ ಬೇಡವಾದರು. ಅಲ್ಲಿಗೆ ಕಬ್ಬಿಣ ಸರಿಯಾಗಿ ಕಾದಂತಾಯಿತು. ಅವೆರಡೂ ಒಟ್ಟುಗೂಡಿ ಮಾರ್ಚ್- ಏಪ್ರಿಲ್ 2022ನಲ್ಲಿ ಖಾನ್ ವಿರುದ್ಧ ವಿರೋಧಪಕ್ಷಗಳನ್ನು ಎತ್ತಿಕಟ್ಟಿ ಅವರ ಸರ್ಕಾರವನ್ನು ಉರುಳಿಸಿದವು. ಆಗ ಜನರಲ್ ಬಾಜ್ವಾ ಪ್ರಧಾನಿ ಖಾನ್​ರ ನಿವಾಸಕ್ಕೆ ಹೊಗಿ ಅವರ ಕಪಾಳಕ್ಕೆ ಬಾರಿಸಿದರಂತೆ.

ಸೇನೆ ಮತ್ತು ಅಮೆರಿಕದ ಬೆಂಬಲದಿಂದ ಶೆಹ್​ಬಾಜ್ ಶರೀಫ್​ರೇನೋ ಪ್ರಧಾನಿಯಾದರು. ಅದರಿಂದಾಗಿ ಕನಸು ಕಾಣತೊಡಗಿದ್ದು ಅಣ್ಣ ನವಾಜ್ ಶರೀಫ್. ಭ್ರಷ್ಟಾಚಾರದಿಂದ ಪ್ರಧಾನಿ ಪಟ್ಟ ಕಳೆದುಕೊಂಡು ಜೈಲು ಸೇರಿ, ಅನಾರೋಗ್ಯದ ನೆಪವೊಡ್ಡಿ ಜಾಮೀನು ಪಡೆದುಕೊಂಡು ಲಂಡನ್​ಗೆ ಓಡಿಹೋಗಿದ್ದ ನವಾಜ್ ಶರೀಫ್ ಈಗ ತಮ್ಮ ಶೆಹ್​ಬಾಜ್ ಶರೀಫ್ ಪ್ರಧಾನಿಯಾದ ಮೇಲೆ ಇನ್ನು ತನಗ್ಯಾವ ತೊಂದರೆಯೂ ಇಲ್ಲವೆಂದು ಸ್ವದೇಶಕ್ಕೆ ಹಿಂತಿರುಗಿದ್ದಲ್ಲದೆ ಮತ್ತೆ ಪ್ರಧಾನಿಯಾಗುವ ಕನಸನ್ನೂ ಕಂಡರು. ಆದರೆ ಸೇನೆ ಮತ್ತು ಅಮೆರಿಕದ ಲೆಕ್ಕಾಚಾರವೇ ಬೇರೆಯಾಗಿತ್ತು. ಅವೆರಡಕ್ಕೂ ನವಾಜ್ ಕಂಡದ್ದು ಇಮ್ರಾನ್ ವಿರುದ್ಧ ಜನಾಭಿಪ್ರಾಯ ರೂಪಿಸಬಲ್ಲ ಒಂದು ದಾಳವಾಗಿ ಮಾತ್ರ. ಜತೆಗೆ, ಬದಲಾದ ಸನ್ನಿವೇಶದಲ್ಲಿ ಚೀನಾ-ಪರ ನವಾಜ್ ಪ್ರಧಾನಿಯಾಗುವುದಕ್ಕಿಂತಲೂ ಭಾರತದ ಬಗ್ಗೆ ಒಳ್ಳೆಯ ಮಾತಾಡಲು ‘ತಯಾರಾಗಿರುವ’ ಶೆಹ್​ಬಾಜ್ ಶರೀಫ್ ಮುಖ್ಯವೆನಿಸಿದ್ದಾರೆ. ಯಾಕೆಂದರೆ ಪಾಕಿಸ್ತಾನ ಮತ್ತು ಭಾರತಗಳ ನಡುವೆ ಸಂಬಂಧಗಳನ್ನು ಉತ್ತಮಗೊಳಿಸಿ ಅವೆರಡೂ ಒಟ್ಟಿಗೆ ದಕ್ಷಿಣ ಏಷ್ಯಾದಿಂದ ಚೀನಾವನ್ನು ಹೊರಗಟ್ಟಲು ಪ್ರಯತ್ನಿಸಿವುದು ಇಂದು ಅಮೆರಿಕದ ಸಾಮರಿಕ ಹಾಗೂ ಆರ್ಥಿಕ ನೀತಿಗಳಿಗೆ ಅನುಕೂಲಕರ. ಅಮೆರಿಕದ ಈ ನೀತಿಗೆ ಅಸ್ತು ಎನ್ನದೇ ಪಾಕ್ ಸೇನೆಗೆ ಬೇರೆ ದಾರಿಯಿಲ್ಲ. ಹೀಗಾಗಿಯೇ ಇಮ್ರಾನ್ ಖಾನ್​ರಿಗೆ ಚುನಾವಣೆಯ ಬಾಗಿಲೇ ಬಂದ್ ಆಯಿತು, ನಂತರ ನವಾಜ್ ಶರೀಫ್​ರಿಗೆ ಪ್ರಧಾನ ಮಂತ್ರಿ ಪದವಿಯ ಮೆಟ್ಟಲು ಏರಲಾರದ ಎತ್ತರವಾಗಿಬಿಟ್ಟವು. ಹೀಗೆ ಆರ್ವಿು ಮತ್ತು ಅಮೆರಿಕ ಎಂಬ ಎರಡು ‘ಅ’ಗಳು ಪಾಕಿಸ್ತಾನವನ್ನು ಎಂದಿನಂತೆ ನಿಯಂತ್ರಿಸತೊಡಗಿವೆ. ಇದು ಮೊದಲ ಹಾಗೂ ಮುಖ್ಯವಾದ ಅ ಅಲ್ಲಾಹ್​ಗೂ ಸಮ್ಮತವಾಗಿರುವಂತೇ ಕಾಣುತ್ತಿದೆ. ಯಾಕೆಂದರೆ ತಮ್ಮ ಹಿಂದಿನ ಅಧ್ಯಕ್ಷಾವಧಿಯಲ್ಲಿ ಪಾಕ್ ಭಯೋತ್ಪಾದನೆ ಬಗ್ಗೆ ಅಸಮ್ಮತಿ ಹೊಂದಿದ್ದ, ಆದರೆ ಆ ದಿನಗಳಲ್ಲಿನ ಬೇರೆಯೇ ವಾಸ್ತವಗಳಿಂದಾಗಿ ಭಾರತದೊಂದಿಗೆ ಸಂಬಂಧಗಳನ್ನು ಸುಧಾರಿಸಲು ಪರಿಣಾಮಕಾರಿ ಪ್ರಯತ್ನಗಳನ್ನು ಮಾಡಲಾಗದೇಹೋದ ಜರ್ದಾರಿಯವರೇ ಅಧ್ಯಕ್ಷ ಸ್ಥಾನಕ್ಕೆ ಸೂಕ್ತ ವ್ಯಕ್ತಿ ಎಂದು ಎಲ್ಲ ‘ನಿರ್ಣಾಯಕರೂ’ ಏಕಾಭಿಪ್ರಾಯ ಹೊಂದಿದ್ದಾರೆ. ಅಂದರೆ ಪಾಕಿಸ್ತಾನದಲ್ಲಿ ಹಿಂದಿನದೇ ಪಿಎಂಎಲ್​ಎನ್-ಪಿಪಿಪಿ ಸರ್ಕಾರವೇ ಮುಂದುವರಿದಂತೆ ಕಂಡರೂ ಭಾರತದ ‘ಅದೃಷ್ಟ’ ಬದಲಾಗುತ್ತಿರುವುದನ್ನು ಗುರುತಿಸಲಾಗದೇ ಇರಲಾಗದು. ಏಕಕಾಲದಲ್ಲಿ ಅಮೆರಿಕ, ಪಾಕ್ ಸೇನೆ, ಪ್ರದಾನ ಮಂತ್ರಿ, ಅಧ್ಯಕ್ಷ ಎಲ್ಲರೂ ಭಾರತವನ್ನು ಓಲೈಸುವ ಅಭೂಪೂರ್ವ ಕಾಲ ಆರಂಭವಾಗಿದೆ. ಇದು ಭಾರತದ ರಕ್ಷಣಾ ಸ್ಥಿತಿ ಮತ್ತು ಆ ಕುರಿತಾಗಿ ಬಿಜೆಪಿ ಸರ್ಕಾರದ ಆಶೋತ್ತರಗಳನ್ನು ಹೇಗೆ ಪ್ರಭಾವಿಸಬಹುದು? ಅದು ಬೇರೇಯೇ ಚರ್ಚೆಯ ವಸ್ತುವಿಷಯ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net