ಎಂಟರ್​ಟೇನ್​ಮೆಂಟಲ್ಲ ಎನ್​ಲೈಟನ್​ಮೆಂಟ್​; ರಾಜಕೀಯ ಇಲ್ಲದ ಸಿನಿಮಾಗಳೇ ಇಲ್ಲ

Kasaravalli
Published on
ಗಿರೀಶ್ ಕಾಸರವಳ್ಳಿ ದೇಶದ ಶ್ರೇಷ್ಠ ಚಲನಚಿತ್ರ ನಿರ್ದೇಶಕರಲ್ಲೊಬ್ಬರು. ಜಗತ್ತಿನಾದ್ಯಂತ ನಿರ್ಮಾಣವಾಗುವ ಸಿನಿಮಾಗಳನ್ನು ಇಂದಿಗೂ ಕುತೂಹಲದಿಂದ ಗಮನಿಸುವ ಕಾಸರವಳ್ಳಿ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಕನ್ನಡ ಸಿನಿಮಾಗಳು ಎಲ್ಲೆಲ್ಲಿ ಸದ್ದು ಮಾಡುತ್ತಿವೆ ಎಂಬುದನ್ನೂ ಸದ್ದಿಲ್ಲದೆಯೇ ಗಮನಿಸುತ್ತಿರುತ್ತಾರೆ. ಆದರೆ, ಅಂತಹ ಸಿನಿಮಾಗಳು ತಮಗೇ ನೋಡಲು ಸಿಗುವುದಿಲ್ಲ ಎಂಬುದು ಅವರ ಬೇಸರ. ಈ ಸಮಸ್ಯೆಗೆ ಪರಿಹಾರವೇನು? ಪ್ರಶಸ್ತಿ ವಿಜೇತ ಸಿನಿಮಾಗಳು ಮತ್ತು ಪ್ರೇಕ್ಷಕರ ನಡುವೆ ಇರುವ ಅಂತರಕ್ಕೆ ಕಾರಣವಾದ ‘ರಾಜಕೀಯ’ ಯಾವುದು? ಸಿನಿಮಾದ ಉದ್ದೇಶ ಏನಾಗಬೇಕು? ಗಂಭೀರ ಸಿನಿಮಾಗಳ ಬಗ್ಗೆ ಇಷ್ಟೊಂದು ಅಸಡ್ಡೆ, ಕುತ್ಸಿತ ಮನೋಭಾವಗಳ ಕುರಿತು ಬೇಸರ ಇದ್ದೂ ತಾನೇಕೆ ಕನ್ನಡದಲ್ಲೇ ಸಿನಿಮಾ ಮಾಡಿದೆ? ಈ ಎಲ್ಲ ಪ್ರಶ್ನೆಗಳಿಗೆ ಕಾಸರವಳ್ಳಿ ಇಲ್ಲಿ ಉತ್ತರಿಸಿದ್ದಾರೆ. ಇದೊಂದು ಅಪರೂಪದ ಸಂದರ್ಶನ.
| ಕುಸುಮಾ ಆಯರಹಳ್ಳಿ
* ಕೆಲವು ನಿರ್ದೇಶಕರು ಸ್ಕ್ರಿಪ್ಟ್ ಹಂತದಲ್ಲೇ ಸಂಪೂರ್ಣ ತಯಾರಿಯೊಂದಿಗೆ ಹೋಗ್ತಾರೆ. ಮತ್ತೆ ಕೆಲವರು ಶೂಟಿಂಗ್ ಹಂತದಲ್ಲಿ ಸತತ ಬದಲಿಸುತ್ತಲೇ ಇರ್ತಾರೆ. ಈ ಎರಡೂ ಸ್ಟೈಲ್​ಗಳ ಬಗ್ಗೆ ಹೇಳೋದಾದ್ರೆ?

ನಾನು ಪುಣೆ ಇನ್​ಸ್ಟಿಟ್ಯೂಟ್​ನಲ್ಲಿ ಕಲಿತೆ. ಅದು ಒಂದು ರೀತಿಯ ಶಿಸ್ತು ಕಲಿಸಿತು. ಆಗ ಕೊಟ್ಟಷ್ಟೇ ರೀಲಲ್ಲಿ ಸಿನಿಮಾ ತಯಾರಿಸಬೇಕಿತ್ತು. ಪಕ್ಕಾ ತಯಾರಿ ಮಾಡ್ಕೊಬೇಕಿತ್ತು. ಅಲ್ಲಿ ಹೋಗಿ ತಡಕಾಡುವಂತಿರಲಿಲ್ಲ. ನಂತರ ವೃತ್ತಿಜೀವನಕ್ಕೆ ಬಂದ ಮೇಲೂ ನಾನು ಮಾಡಿದ್ದೆಲ್ಲ ಕಡಿಮೆ ಬಜೆಟ್ ಸಿನಿಮಾಗಳಾದ್ದರಿಂದ ಸ್ವಲ್ಪ ಕರಾರುವಾಕ್ಕಾಗಿ ಇರಲೇಬೇಕಿತ್ತು. ಅಲ್ಲದೆ, ಸಿನಿಮಾ ಯಾವತ್ತಿಗೂ ಟೀಂ ವರ್ಕ್. ನಟರು, ಕ್ಯಾಮರಾಮನ್ ಎಲ್ಲರಿಗೂ ಡೀಟೇಲ್ ಇದ್ದಷ್ಟೂ ಪಕ್ಕಾ ಗೊತ್ತಿರುತ್ತೆ. ಇದು ನನ್ನ ಕ್ರಮ. ಇದೇ ಸರಿ ಅನ್ನುವುದಿಲ್ಲ. ಆಶುನಿರ್ದೇಶಕರೂ ಇರಬಹುದು.

  • ಸಿನಿಮಾದ ಯಾವುದೇ ವಿಭಾಗದಲ್ಲಿ ಕೆಲಸ ಮಾಡಲು, ಸಿನಿಮಾ ಸ್ಕೂಲ್​ಗಳ ಟ್ರೖೆನಿಂಗ್ ಮುಖ್ಯ ಆಗುತ್ತಾ? ಇಲ್ಲದಿದ್ರೂ ನಡೆಯುತ್ತಾ?

-ಇನ್ನೊಬ್ಬರ ಪರವಾಗಿ ಮಾತಾಡಲಾರೆ. ನನ್ನ ಬಗ್ಗೆ ಮಾತಾಡ್ತೀನಿ. ನನಗೆ ಪುಣೆ ಇನ್​​ಸ್ಟಿಟ್ಯೂಟ್​ ಬಹಳ ಕಲಿಸ್ತು. ನಾನೊಬ್ಬ ಸೈನ್ಸ್ ವಿದ್ಯಾರ್ಥಿ. ಸಿನಿಮಾಗೆ ಬಂದೆ. ಅಲ್ಲಿ ಶಿಸ್ತು ಮಾತ್ರ ಅಲ್ಲ, ಕಲೆಯ ಉದ್ದೇಶ, ಸ್ಟ್ರಕ್ಚರ್, ಏಸ್ತೆಟಿಕ್, ಸಿನಿಮಾ ಫಿಲಾಸಫಿ ಎಲ್ಲಾ ಕಲಿತೆ. ನನಗೆ ಎಷ್ಟೋ ಸಲ ಅನಿಸೋದು, ಸ್ವಲ್ಪ ಟ್ರೖೆನಿಂಗ್ ಇದ್ದಿದ್ರೆ ನಮ್ಮ ಕನ್ನಡದ ಎಷ್ಟೋ ನಿರ್ದೇಶಕರ ಸಿನಿಮಾಗಳು ಇನ್ನಷ್ಟು ಚೆನ್ನಾಗಾಗ್ತಿದ್ವೇನೋ ಅಂತ. ಬಹಳ ಜನರಿಗೆ ಸಿನಿಮಾದ ಟೆಕ್ನಿಕ್ ಗೊತ್ತಿರತ್ತೆ. ಫಿಲಾಸಫಿ ಅಲ್ಲ. ಟೆಕ್ನಿಕ್ ಕ್ಯಾಮೆರಾಮನ್​ಗೂ ಗೊತ್ತಿರುತ್ತೆ. ನಿರ್ದೇಶಕನಿಗೆ ವಿಜನ್ ಇರಬೇಕು. ಫಿಲಾಸಫಿ ಗೊತ್ತಿರ್ಬೆಕು. ಏಸ್ತೆಟಿಕ್ಸ್ ಬೇಕಾ ಅನ್ನೋರಿದ್ದಾರೆ. ಸಿನಿಮಾದ ಗ್ರಾಮರ್ ಗೊತ್ತಿದ್ದು ಅದನ್ನು ಮುರಿಯೋದಕ್ಕೂ, ಗೊತ್ತಿಲ್ಲದೇ ಮುರಿಯೋದಕ್ಕೂ ವ್ಯತ್ಯಾಸ ಇದೆ.

  • ಎಲ್ಲ ಸಿನಿಮಾ ನೋಡುಗರೂ ಅಂತಹ ಇಂಟಲೆಕ್ಚುವಲ್ ಆಗಿರ್ಬೆಕು ಅಂತ ಹೇಗೆ ನಿರೀಕ್ಷಿಸ್ತೀರಿ? ಇಷ್ಟಕ್ಕೂ ಸಿನಿಮಾದಿಂದ ಕ್ರಾಂತಿಯಾಗುತ್ತಾ?

-ಕ್ರಾಂತಿ ಖಂಡಿತಾ ಆಗಲ್ಲ. ಕಲೆ ಕ್ರಾಂತಿ ಮಾಡಿಸುವುದಿಲ್ಲ, ನಿಮ್ಮ ಅರಿವನ್ನು ಹೆಚ್ಚಿಸುತ್ತೆ. ಒಂದ್ಯಾವುದೋ ಉದ್ವೇಗಕಾರಿ ಭಾಷಣ ಸಮೂಹವೆಲ್ಲ ಒಟ್ಟಿಗೇ ಜೈ ಅಂದು ಒಂದೇ ತರ ಯೋಚಿಸುವ ಹಾಗೆ ಮಾಡಬಹುದು. ಕಲೆ ಹಾಗಲ್ಲ, ಒಂದೊಳ್ಳೆಯ ಕತೆ, ಒಂದೊಳ್ಳೆಯ ಸಿನಿಮಾ ಪ್ರತಿಯೊಬ್ಬರನ್ನೂ ಸ್ವತಂತ್ರವಾಗಿ ಯೋಚಿಸೋ ಹಾಗೆ ಮಾಡುತ್ತೆ. ‘ತಬರನ ಕತೆ’ಯಲ್ಲಿ ಅವನು ಕ್ರಾಂತಿ ಮಾಡಲ್ಲ. ಅಸಹಾಯಕತೆ ನಮ್ಮನ್ನು ಯೋಚಿಸೋ ಹಾಗೆ ಮಾಡುತ್ತೆ. ಅಲ್ಲದೆ, ನಾವೇ ನೋಡೋರನ್ನು ಬಹಳ ಅಂಡರ್​ಎಸ್ಟಿಮೇಟ್ ಮಾಡ್ತೀವಿ. ಅರ್ಥವಾಗಲ್ಲ ಅಂತ. ನನ್ ಸಿನಿಮಾ ಹಳ್ಳಿ ಹಳ್ಳಿಲಿ ತೋರ್ಸಿದೀನಿ. ಜನ ಮೆಚ್ಚಿದಾರೆ. ಸಮಸ್ಯೆ ಸಿನಿಮಾದ್ದೂ ಅಲ್ಲ, ನೋಡೋರದೂ ಅಲ್ಲ, ಇಬ್ಬರ ನಡುವೆ ಪ್ರದರ್ಶನದ ಕೊಂಡಿ ಇಲ್ಲದಿರೋದು. ಗಂಭೀರ ವಿಷಯಗಳು ಯಾರಿಗೂ ಬೇಕಾಗಿಲ್ಲ. ವ್ಯಾವಹಾರಿಕ ಜಗತ್ತು ಸಂಖ್ಯಾಬಲದ ಬಗ್ಗೆ ಯೋಚಿಸುತ್ತೆ.

  • ವ್ಯಾಪಾರಿ ಸಂಖ್ಯಾಬಲ ಯೋಚಿಸೋದು ಸಹಜ ಅಲ್ವ ಸರ್? ತಪ್ಪೇನಿದೆ?

-ತಪ್ಪಿಲ್ಲ. ಬಹುಶಃ ಅದು ಯಾವಾಗಲೂ ಹಾಗೇ, ಇಲ್ಲಿ ಮಾತ್ರ ಅಲ್ಲ, ಜಗತ್ತಿನಾದ್ಯಂತ ಇರುವುದೇ ಹೀಗೆ. ಯಾವ ಕಾಲಕ್ಕೂ ಒಬ್ಬ ರಾಜಕಾರಣಿಗೋ ಮತ್ಯಾರ ಮಾತಿಗೋ ಇರೋ ಸಂಖ್ಯಾಬಲ ಒಬ್ಬ ಫಿಲಾಸಫರ್​ಗೆ ಇರಲ್ಲ. ಕೆ.ವಿ. ಸುಬ್ಬಣ್ಣನವರು ಹೇಳ್ತಿದ್ದ ಹಾಗೆ ಯಾವತ್ತಿಗೂ ಪ್ರವಾಹದ ವಿರುದ್ಧ ಈಜುವವರನ್ನು ಜಗತ್ತು ನೆನಪಿಟ್ಕೊಳ್ಳತ್ತೆ. ಇದು ಈ ತರಹದ ಸಿನಿಮಾಗಳಿಂದಾನೇ ಆಗುತ್ತೆ ಅಂತಲ್ಲ, ಎಲ್ಲಾ ಒಳ್ಳೆ ಸಿನಿಮಾದಿಂದ್ಲೂ ಆಗುತ್ತೆ. ನಾವು ಪ್ಯಾಪುಲರ್ ಸಿನಿಮಾ ಮಾಡ್ತೀವಿ. ಪೊಲಿಟಿಕಲ್ ಅಲ್ಲ ಅಂತಾರಲ್ಲಾ, ಪಾಲಿಟಿಕ್ಸ್ ಇಲ್ಲದ ಸಿನಿಮಾನೇ ಇಲ್ಲ.

  • ಅದ್ ಹೇಗೆ ಸರ್?

-ಉದಾಹರಣೆಗೆ, ಒಬ್ಬ ಮಗ, ಒಬ್ಬ ಹೆಂಡತಿ, ಸೊಸೆ ಹೀಗೇ ವರ್ತಿಸಬೇಕು ಅನ್ನೋ ಆಲೋಚನಾ ಪರಂಪರೆಯನ್ನು ಸಿನಿಮಾದಲ್ಲಿ ತರ್ತೀವಿ. ಅಲ್ಲಿ ಕಲ್ಚರಲ್ ಪಾಲಿಟಿಕ್ಸ್, ಜೆಂಡರ್ ಪಾಲಿಟಿಕ್ಸ್ ಇರುತ್ತೆ. ನಗರದವನು ಜಾಣ, ಹಳ್ಳಿಯವನು ಪೆದ್ದ ಅಂತ ತೋರಿಸೋದ್ರಲ್ಲೂ, ತೀರ್ಥ, ಪ್ರಸಾದ ಕೊಡೋನು ಜನಿವಾರ ಹಾಕಿರಲೇಬೇಕು ಅಂತ ತೋರಿಸೋದ್ರಲ್ಲೂ ಒಂಥರಾ ರಾಜಕೀಯತೆ ಇದೆ. ಬಹಳ ಸಲ ಅದು ಮಾಡಿದವರಿಗೆ ಉದ್ದೇಶ ಇಲ್ದೇ ಅವರಿಗೇ ಈ ರಾಜಕೀಯತೆ ಅರ್ಥ ಆಗದೆಯೂ ಮಾಡಿರ್ತಾರೆ.

  • ಎಪ್ಪತ್ತರ ದಶಕ ಗೋಲ್ಡನ್ ಪೀರಿಯಡ್ ಅಂತಾರೆ ನಿಜಾನಾ ಸರ್?

-ಹಾಗೇನಿಲ್ಲ, ಇವತ್ತಿಗೆ ಸಣ್ಣ ಸಣ್ಣ ರಾಜ್ಯ, ಭಾಷೆಗಳಿಂದ ಕೂಡ ಒಳ್ಳೊಳ್ಳೆ ಸಿನಿಮಾಗಳು ಬರ್ತಿವೆ. ಅಲ್ಲದೆ, ಕನ್ನಡದಲ್ಲಿ ಎಷ್ಟೆಲ್ಲ ಒಳ್ಳೆ ಸಿನಿಮಾ ಬರ್ತಿವೆ. ಯಾವ್ಯಾವೋ ದೇಶಗಳಲ್ಲಿ ಜನ ಅವನ್ನು ನೋಡ್ತಿದ್ದಾರೆ. ಆದರೆ, ಅವು ನನಗೇ ನೋಡೋಕೆ ಸಿಕ್ಕಿರಲ್ಲ, ಆ ನಿರ್ದೇಶಕರು ಕಂಡಾಗ ಯಾವಾಗ ತೋರಿಸ್ತೀರಿ ಅಂತ ನಾನೇ ಕೇಳ್ತೀನಿ.

  • ನಮಗೇ ನೋಡೋಕೆ ಸಿಕ್ತಿಲ್ಲಾಂದ್ರೆ ಜನರಿಗೆ ಸಿಗೋದು ಇನ್ನೂ ಕಷ್ಟ. ಈ ಸಮಸ್ಯೆಗೆ ಪರಿಹಾರ ಏನು ಸರ್?

-ಫಿಲ್ಮ್ ಸೊಸೈಟಿ ಅಂತ ಇತ್ತು. ಆಗ ಇದು ಆಗ್ತಾ ಇತ್ತು. ಡಿಸ್ಟ್ರಿಬ್ಯೂಷನ್ ನೆಟ್​ವರ್ಕ್​ಗೆ ಪರ್ಯಾಯವಾಗಿ ಅದು ಇತ್ತು. ಈಗ ಅದಿಲ್ಲ. ಅಮೆರಿಕದಲ್ಲಿರೋ ಹಾಗೆ ಯೂನಿವರ್ಸಿಟಿ ಸರ್ಕ್ಯೂಟ್ ಸಹ ಇಲ್ಲ. ಆದರೆ, ಸರ್ಕಾರಿ ವಾಹಿನಿಯಲ್ಲಿ ಪ್ರತಿ ವಾರ ಇಂತಹ ಸಿನಿಮಾಗಳು ಬರ್ತಿದ್ವು, ಅದೂ ಇಲ್ಲ. ಫಿಲ್ಮ್ ಫೆಸ್ಟಿವಲ್ ಒಂದು ಇದೆ ಈಗ.

  • ಯೂಟ್ಯೂಬ್, ಒಟಿಟಿಗಳು ಈ ಅವಕಾಶ ಸೃಷ್ಟಿಸಿಲ್ಲವಾ ಸರ್?

-ಅದೂ ವ್ಯಾಪಾರವೇ ಆದ್ದರಿಂದ ಅಲ್ಲಿಯೂ ಪಾಪ್ಯುಲರ್ ಸಿನಿಮಾಗಳೇ ಹೆಚ್ಚು. ಆದರೆ, ಜಗತ್ತಿನ ಯಾವ್ಯಾವೋ ಅಪರೂಪದ ಕೆಲ ಸಿನಿಮಾಗಳು ಯೂಟ್ಯೂಬ್ ಮೂಲಕ ಸಿಕ್ತವೆ, ಅಷ್ಟು ಅನುಕೂಲ ಆಗಿದೆ. ಇದು ಸಿನಿಮಾಗೆ ಮಾತ್ರವಲ್ಲ, ಎಲ್ಲ ರಂಗಗಳಲ್ಲೂ ಇದೆ. ಹತ್ತಾರು ಪ್ರಕಟಣೆಗಳು ಕಂಡ ಎಷ್ಟೋ ಪುಸ್ತಕಗಳು, ಒಳ್ಳೆಯ ಕೃತಿಗಳು ಅಂತ ಹೇಳೋಕಾಗಲ್ಲ. ಆದರೆ, ಡಿಜಿ ಟಲ್ ಲಭ್ಯತೆಯಿಂದಾಗಿ ಹಳೆಯ ಮೌಲಿಕ ಕೃತಿಗಳನ್ನು ಹುಡುಕಿ ನೋಡೋರಿಗೆ ಅನುಕೂಲ ಆಗ್ತಿದೆ.

  • ನೀವು ಬೇರೆಯವ್ರ ಹತ್ರ ಕತೆ, ಸಂಭಾಷಣೆ ಬರೆಸ್ತೀರಿ. ಆದ್ರೆ ಅದನ್ನ ಪೂರ್ಣ ಬದಲಿಸಿರ್ತೀರಿ. ನೀವೇ ಬರ್ಕೆಳ್ಳಲ್ಲ ಯಾಕೆ?

-ಬೇರೆಯವ್ರು ಬರೆದಾಗ ಹೊಸ ಹೊಳಹು ಸಿಗುತ್ತೆ ನನಗೆ. ನನ್ನ ಸಿನಿಮಾಗಳಲ್ಲಿ ಕಾದಂಬರಿಗಳನ್ನು ಸಾಕಷ್ಟು ಬದಲಿಸಿದೀನಿ. ಆದರೆ, ಕನ್ನಡ ಸಾಹಿತಿಗಳ ಔದಾರ್ಯ ದೊಡ್ಡದು. ಭೈರಪ್ಪ, ಅನಂತಮೂರ್ತಿ ಎಲ್ರೂ ಸಿನಿಮಾ ಆಗಿ ಅದರ ಇಂಟರ್​ಪ್ರಿಟೇಷನ್ ಭಿನ್ನವಾಗಿದೆ ಅನ್ನೋದನ್ನ ಒಪ್ಪಿದ್ರು. ತಕರಾರು ಮಾಡಲಿಲ್ಲ. ಸಾಹಿತ್ಯ ಹೇಳಿದ್ದನ್ನೇ ಸಿನಿಮಾ ಮಾಡೋದಾದ್ರೆ ಸಿನಿಮಾ ಯಾಕೆ ಮಾಡಬೇಕು? ರಿಕ್ರಿಯೇಷನ್ ಅಲ್ಲ, ರಿ-ಇಂಟರ್​ಪ್ರಿಟೇಷನ್ ಆಗಬೇಕು. ಕುರೋಸೋವಾ ಶೇಕ್ಸ್​ಪಿಯರನ್ನೇ ಬದಲಿಸಿದ್ದಾನೆ.

  • ಇಷ್ಟೆಲ್ಲ ಸಿನಿಮಾ ಜ್ಞಾನ ಇರೋ ಕಾಸರವಳ್ಳಿ ಅವ್ರು ತನ್ನದೇ ಶಿಷ್ಯವರ್ಗ ಯಾಕೆ ಕಟ್ಟಲಿಲ್ಲ?

-ಯಾಕಂದ್ರೆ ನಾನು ಮಠ ಕಟ್ಟೋನಲ್ಲ... ಹಹ್ಹಹ್ಹ, ಹಾಗೇನಿಲ್ಲ, ಮುಖ್ಯವಾಗಿ ಗಂಭೀರ ಸಿನಿಮಾಗಳ ಬಗ್ಗೆ ಒಟ್ಟಾರೆ ಅಸಡ್ಡೆ, ಅವಜ್ಞೆ, ಕುತ್ಸಿತ ಮನೋಭಾವದಿಂದ ಮಾತಾಡೋದಿದೆ. ನಾನಾಗಿ ಏನೂ ಹೇಳಲ್ಲ, ಯಾರಾದರೂ ಬಂದರೆ ಖಂಡಿತವಾಗಿ ಹೇಳಿಕೊಡ್ತೀನಿ. ಎಷ್ಟೋ ಸಿನಿಮಾ ಶಾಲೆಗಳಲ್ಲಿ ಕರೆದಾಗೆಲ್ಲ ಹೋಗಿ ಪಾಠ ಮಾಡ್ತೀನಿ.

  • ಇಲ್ಲಿ ಅಸಡ್ಡೆ, ಅವಜ್ಞೆಗಳಿದ್ದರೂ ನೀವು ಕನ್ನಡದಲ್ಲೇ ಸಿನಿಮಾ ಮಾಡಿದ್ರಿ. ಬೇರೆ ಭಾಷೇಲಿ ಮಾಡಲಿಲ್ಲ ಯಾಕೆ?

-ಅಂತಹ ಅವಕಾಶ ನನಗೆ ವಿದ್ಯಾರ್ಥಿಯಾಗಿದ್ದಾಗಲೇ ಬಂದಿತ್ತು. ಬೇರೆ ರಾಜ್ಯ, ದೇಶಗಳಿಂದ ಬಂತು. ಆದರೆ, ನನಗೆ ಗೊತ್ತಿರದ ಭಾಷೆ, ನೆಲದಲ್ಲಿ ಕತೆ ದೃಶ್ಯಗಳಿಗೆ ಬೇಕಾದ ಕಲ್ಚರಲ್ ಡೀಟೇಲಿಂಗ್ ನಿರ್ವಹಿಸೋದು ಸಾಧ್ಯವಿಲ್ಲ. ಇಲ್ಲಿಯೇ ಎಷ್ಟೋ ವಿವರಗಳು ನಮಗೆ ಗೊತ್ತಿರಲ್ಲ.

  • ಎಷ್ಟೋ ನಟರು, ನಿರ್ದೇಶಕರು ತಮ್ಮ ನಿಲುವುಗಳ ಕುರಿತು ನೇರ ಹೇಳಿಕೆ ಕೊಡ್ತಾರೆ. ಕಲೆಯ ಮೂಲಕವೂ ರಿಯಾಕ್ಟ್ ಮಾಡುವ ಮಾರ್ಗ ಅವರಿಗೆ ಇತ್ತಲ್ವ?

-ಒಬ್ಬ ಪ್ರಜೆಯಾಗಿ ಹಾಗೆ ನೇರ ಹೇಳಿಕೆ ಕೊಡೋ ನಟರು, ಸಾಹಿತಿಗಳ ಬಗ್ಗೆ ನನಗೆ ಗೌರವ ಇದೆ. ಅದೇ ಕೃತಿಯಲ್ಲಿ ಬಂದಾಗ ಪರ-ವಿರೋಧ ಎರಡನ್ನೂ ಅವರೇ ನಿರ್ವಹಿಸಬೇಕಾಗುತ್ತೆ. ಆಗ ಅದು ಬೇರೆಯಾಗುತ್ತೆ. ವೈಯಕ್ತಿಕ ಧ್ಯೇಯಗಳ ಜತೆ ಪಾತ್ರಕ್ಕೊಂದು ಧೋರಣೆ ಇರುತ್ತಲ್ಲ?

  • ಆ ಹೇಳಿಕೆಯನ್ನು ಸಮರ್ಥಿಸೋ ಸಲುವಾಗಿಯೇ ಮಾಡಿದ ಕೃತಿಯಾದರೆ?

-ಅದು ಒಳ್ಳೆಯ ಕೃತಿಯಲ್ಲ, ಒಳ್ಳೆ ಸಿನಿಮಾ ಅಲ್ಲ.

  • ನಿಮ್ಮ ಏಸ್ತೆಟಿಕ್, ಫಿಲಾಸಫಿ ಎಲ್ಲ ನಮಗರ್ಥವೇ ಆಗಲ್ಲ, ಬದುಕಿನ ಜಂಜಡಗಳಿಂದ ತಪ್ಪಿಸಿಕೊಳ್ಳೋ ಮನರಂಜನೆಯ ಉದ್ದೇಶಕ್ಕೆ ಸಿನಿಮಾ ನೋಡ್ತೀವಿ’ ಅನ್ನೋ ವರ್ಗವೂ ಇದೆಯಲ್ಲ?

-ಸಿನಿಮಾದ ಉದ್ದೇಶ ಎಂಟರ್​ಟೇನ್​ವೆುಂಟ್ ಅನ್ನೋದನ್ನೇ ನಾನು ಒಪ್ಪಲ್ಲ. ಸಿನಿಮಾ ನೋಡಬೇಕಾದ್ದು ಬದುಕಿನ ಜಂಜಾಟದಿಂದ ತಪ್ಪಿಸ್ಕೊಂಡು ಓಡಿ ಹೋಗೋಕಲ್ಲ, ಬದುಕನ್ನು ಅರ್ಥ ಮಾಡ್ಕೋಳೋಕೆ. ಅದು ಎಂಟರ್​ಟೇನ್​ಮೆಂಟಲ್ಲ, ಎನ್​ಲೈಟನ್​ಮೆಂಟ್​ (ಜ್ಞಾನೋದಯ) ಆಗಬೇಕು. ಇದು ಒಂದು ರೀತಿ ಹೇರಲಾದ ಗ್ರಹಿಕೆ. ಅನೇಕ ದೇಶಗಳಲ್ಲಿ ಪ್ರಭುತ್ವವನ್ನು ಪ್ರಶ್ನೆ ಮಾಡದಿರುವಂತೆ ಮಾಡಲು ಹೀಗೆ ಮಾಡಲಾಗಿರುತ್ತೆ. ಸಕಲ ಸಮೃದ್ಧಿ ಇದೆ. ಆದರೆ, ಸರ್ಕಾರದ ವಿರುದ್ಧ ಮಾತಾಡುವ ಹಾಗಿರಲ್ಲ.

  • ನಿಮ್ಮ ಶಿಸ್ತಿನ ಸಿನಿಮಾ ತಯಾರಿ ಆಚೆ, ಶೂಟಿಂಗ್ ಜಾಗದಲ್ಲಿ ಕೆಲವು ಫಜೀತಿಗಳೂ ಆಗಿರ್ತವೆ. ಅಂಥದ್ದು ನೆನಪಿಸಿಕೊಳ್ಳೋದಾದ್ರೆ...

-ನಾನು ಸಿನಿಮಾಗೆ ಅಂತ ಒಂದು ಮನೆ ನೋಡಿಬಂದಿದ್ದೆ. ಶೂಟಿಂಗ್ ದಿನ ಹೋಗಿ ನೋಡಿದರೆ ಅವರು ಖುಷಿಗೆ ಸುಣ್ಣ ಬಣ್ಣ ಹೊಡೆಸಿ ಚೆನ್ನಾಗಿ ಮಾಡಿಟ್ಟಿದ್ರು. ಇದೇ ಮನೇನಾ ಅನ್ನೋ ಹಾಗಾಗಿತ್ತು. ಕಡೆಗೆ ವಾಪಸ್ ಬಂದ್ವಿ, ಅವರಿಗೆ ಸ್ವಲ್ಪ ಬೇಜಾರಾಯ್ತು. ಗುಲಾಬಿ ಟಾಕೀಸ್ ಮಾಡುವಾಗ ಸಮುದ್ರ ತೀರದಲ್ಲಿ ಗುಡಿಸಲು ಕಟ್ಟೋಕೆ ಒಂದ್ ಜಾಗ ನೋಡ್ತಾ ಇದ್ವಿ. ಯಾರೋ ಬಂದು ‘ಸರ್ ಎಲ್ರೂ ಶೂಟಿಂಗ್ ಮಾಡೋದು ಬೆಟ್ಟದಲ್ಲಿ, ಇಲ್ಲಲ್ಲ. ಅಲ್ಲಿ ಚೆನ್ನಾಗಿದೆ ಹೋಗಿ’ ಅಂದ್ರು. ಆಮೇಲೆ ನಾವು ‘ನಮಗಿದೇ ಜಾಗ ಬೇಕಪ್ಪ’ ಅಂದ್ವಿ. ಇನ್ನು ನನ್ನನ್ನು ನಾನು ಅಂತ ಬಿಟ್ಟು ಬೇರೆಲ್ಲಾ ಆಗಿ ಗುರುತಿಸ್ತಾರೆ. ಅನಂತಮೂರ್ತಿ, ನಾಗತಿಹಳ್ಳಿ, ಟಿ.ಎನ್. ಸೀತಾರಾಮ್ ಅಂತ ಗುರುತಿಸ್ತಾರೆ. ವೈಶಾಲಿ ಕಾಸರವಳ್ಳಿ ಗಂಡ ಅನ್ನೋರೂ ಇದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net