ಹಳೆಯ ಕೃತ್ರಿಮ ಅಖಾಡದಲ್ಲಿ ಹೊಸ ಕಪಟ ಆಟಗಾರರು

Man with Arms
Published on
ಹಮಾಸ್ ಅಂದರೆ ಪ್ಯಾಲೆಸ್ತೈನೂ ಅಲ್ಲ, ಅರಬ್ಬರೂ ಅಲ್ಲ, ಮುಸ್ಲಿಮರೂ ಅಲ್ಲ; ಅದೊಂದು ಶಾಂತಿಕಂಟಕ ಭಯೋತ್ಪಾದಕ ಸಂಘಟನೆ, ಅದು ಮೊದಲಿಗೆ ಪ್ಯಾಲೆಸ್ತೀನಿಯನ್ನರ ವಿರೋಧಿ, ನಂತರ ಇಸ್ರೇಲ್​ನ ವಿರೋಧಿ ಎಂಬ ವಾಸ್ತವ ಧರ್ಮ ಹಾಗೂ ಸಿದ್ಧಾಂತಗಳ ಸಿಕ್ಕುಗಳಿಂದ ಬಿಡಿಸಿಕೊಂಡು ಜಾಗತಿಕವಾಗಿ ಮಾನ್ಯವಾಗಬೇಕು.

ರಷ್ಯಾ ಮತ್ತು ಯೂಕ್ರೇನ್ ನಡುವಿನ ಯುದ್ಧ ಆರಂಭವಾಗಿ ಇಪ್ಪತ್ತೊಂದು ತಿಂಗಳುಗಳಾಗುತ್ತಿವೆ. ಅದರಿಂದಾಗಿ ಜಾಗತಿಕ ಅರ್ಥವ್ಯವಸ್ಥೆ ಬಹುಮಟ್ಟಿಗೆ ಹಾನಿಗೊಳಗಾಗಿದೆ. ತನ್ನ ಅಗತ್ಯದ ಶೇಕಡ 35 ನೈಸರ್ಗಿಕ ಅನಿಲವನ್ನು ರಷ್ಯಾದಿಂದ ಪಡೆದುಕೊಳ್ಳುತ್ತಿದ್ದ ಯೂರೋಪಿಯನ್ ಯೂನಿಯನ್ ಇಂದು ಆ ಅತ್ಯಗತ್ಯ ಇಂಧನವಿಲ್ಲದೆ ಎರಡನೆಯ ಚಳಿಗಾಲಕ್ಕೆ ಕಾಲಿಟ್ಟಿದೆ. ಪೂರ್ಣ ಪ್ರಮಾಣದಲ್ಲಿ ಬದಲಿ ಮೂಲಗಳು ಕಾಣದ ಕಾರಣದಿಂದಾಗಿ ಈ ಚಳಿಗಾಲವೂ ಯೂರೋಪಿಯನ್ನರಿಗೆ ದುರ್ಭರವಾಗಲಿದೆ. ಮೊದಲೇ ಕೋವಿಡ್-19 ಹೊಡೆತಕ್ಕೆ ಸಿಕ್ಕಿ ಇಳಿಜಾರಿಗಿಳಿದ್ದ ಹಲವಾರು ಪಶ್ಚಿಮ ಯೂರೋಪಿಯನ್ ದೇಶಗಳ ಅರ್ಥವ್ಯವಸ್ಥೆಗಳು ಕಳೆದ ಒಂದೂವರೆ ವರ್ಷಗಳಲ್ಲಿ ತೈಲ ಮತ್ತು ನೈಸರ್ಗಿಕ ಅನಿಲದ ಪೂರೈಕೆಯಲ್ಲಾದ ಏರುಪೇರು ಮತ್ತು ಬೆಲೆಯೇರಿಕೆಯಿಂದಾಗಿ ಆರ್ಥಿಕ ಹಿಂಜರಿತದ ದುರವಸ್ಥೆಗಿಳಿಯುತ್ತಿವೆ. ಇದಕ್ಕಿಂತಲೂ ದೊಡ್ಡ ಸಮಸ್ಯೆಯೆಂದರೆ ಆಹಾರ ಸಾಮಗ್ರಿಗಳ ಪೂರೈಕೆಗೆ ಬಿದ್ದ ಹೊಡೆತ. ಜಾಗತಿಕವಾಗಿ ಎರಡು ಬೃಹತ್ ಗೋಧಿ ಪೂರೈಕೆದಾರರಾದ ರಷ್ಯಾ ಮತ್ತು ಯೂಕ್ರೇನ್​ಗಳ ಯುದ್ಧದಿಂದಾಗಿ ಆಫ್ರಿಕಾ ಮತ್ತು ಏಷ್ಯಾದಲ್ಲಿ ಗೋಧಿ ಪೂರೈಕೆ ಅಸ್ತವ್ಯಸ್ತಗೊಂಡು ಹಲವಾರು ದೇಶಗಳಲ್ಲಿ ಆಹಾರದ ತೀವ್ರ ಕೊರತೆ ಉಂಟಾಗಿದೆ. ಇತರ ಪೂರೈಕೆದಾರ ದೇಶಗಳು ಗೋಧಿ, ಸೂರ್ಯಕಾಂತಿ ಎಣ್ಣೆ ಮುಂತಾದ ಅಗತ್ಯ ವಸ್ತುಗಳ ಬೆಲೆ ಏರಿಸಿದ್ದರಿಂದಾಗಿ ಕೆಲವು ದೇಶಗಳಂತೂ ತೀವ್ರ ಬೆಲೆಯೇರಿಕೆ ಮತ್ತದರ ಮುಂದಿನ ರೂಪವಾದ ಹಣದುಬ್ಬರಕ್ಕೆ ಸಿಲುಕಿ ನರಳುತ್ತಿವೆ. ಜಾಗತಿಕ ಹಸಿವು ಪ್ರಮಾಣ ಏರುತ್ತಿದೆ. ಇಷ್ಟಾಗಿಯೂ, ಆ ಯುದ್ಧವನ್ನು ನಿಲುಗಡೆಗೆ ತರುವ ಗಂಭೀರ ಹಾಗೂ ಪ್ರಾಮಾಣಿಕ ಪ್ರಯತ್ನಗಳು ನಡೆಯುತ್ತಿಲ್ಲ. ಬದಲಾಗಿ ಪಶ್ಚಿಮದ ದೇಶಗಳು ಯೂಕ್ರೇನ್​ಗೆ ಬೃಹತ್ ಪ್ರಮಾಣದಲ್ಲಿ ಹಣವನ್ನೂ, ಶಸ್ತ್ರಾಸ್ತ್ರಗಳನ್ನೂ ಪೂರೈಸಿ ಆ ದೇಶದ ಯುದ್ಧೋತ್ಸಾಹವನ್ನು ಹೆಚ್ಚಿಸಿ, ಆ ಮೂಲಕ ರಷ್ಯಾವನ್ನೂ ಮತ್ತೆಮತ್ತೆ ಕೆರಳಿಸಿ ಈ ವಿನಾಶಕಾರಿ ಯುದ್ಧ ಮುಂದುವರಿಯುವಂತೆ ನೋಡಿಕೊಳ್ಳುತ್ತಿವೆ.

ಇದಕ್ಕೆ ವಿರುದ್ಧವಾಗಿ ಕಳೆದ ಆರೂವರೆ ವಾರಗಳಿಂದಷ್ಟೇ ನಡೆಯುತ್ತಿರುವ ಇಸ್ರೇಲ್-ಹಮಾಸ್ ಸಂಘರ್ಷದಲ್ಲಿ ಅವೆರಡರ ಹೊರತಾಗಿ ಇನ್ನಾರಿಗೂ ಹಾನಿ ತಟ್ಟಿಲ್ಲ. ಇಸ್ರೇಲ್​ನ ಭೌಗೋಳಿಕ ವಾಸ್ತವಗಳಿಂದಾಗಿ ಜಾಗತಿಕ ಅಗತ್ಯವಸ್ತುಗಳ ಪೂರೈಕೆಗೆ ಆ ದೇಶದ ಕೊಡುಗೆ ನಗಣ್ಯ. ಇನ್ನು ಭಯೋತ್ಪಾದಕ ಸಂಘಟನೆ ಹಮಾಸ್​ನಿಂದ ಏನು ತಾನೆ ಒಳ್ಳೆಯದು ಹೊರಜಗತ್ತಿಗೆ ಸಿಗಲು ಸಾಧ್ಯ? ಅವೆರಡೂ ಅದೆಷ್ಟು ಕಾಲ ಕಾದಾಡಿದರೂ ಅವೆರಡರ ಹೊರತಾಗಿ ಬೇರಾರಿಗೂ ಯಾವ ಹಾನಿಯೂ ಇಲ್ಲ. ಆದಾಗ್ಯೂ ಈ ಸಂಘರ್ಷದ ತಕ್ಷಣದ ನಿಲುಗಡೆಗೆ ಎಲ್ಲರೂ ನಾ ಮುಂದು ತಾ ಮುಂದು ಎಂದು ಕರೆನೀಡುತ್ತಿದ್ದಾರೆ. ಇದೇಕೆ ಹೀಗೆ? ಆಫ್ರಿಕಾ, ಏಷ್ಯಾಗಳ ಬಡಜನರ ಹೊಟ್ಟೆಪಾಡಿಗಿಂತಲೂ ಶ್ರೀಮಂತ ಅರಬ್ ರಾಷ್ಟ್ರಗಳ ಒಣಪ್ರತಿಷ್ಠೆ ಜಗತ್ತಿಗೆ ಮುಖ್ಯವಾಗಿಬಿಟ್ಟಿದೆಯೇ?

ಮತ್ತೊಂದು ಅಚ್ಚರಿಯ ವಿಷಯವೆಂದರೆ ಜಾಗತಿಕ ಇತಿಹಾಸದಲ್ಲಿ ಗಿನೆಸ್ ದಾಖಲೆಗೆ ಸೇರಬಹುದಾದ ಪ್ರಮಾಣದ ಕ್ಷಿಪಣಿಗಳನ್ನು ಅತಿ ಕಡಿಮೆ ಅವಧಿಯಲ್ಲಿ ಉಡಾಯಿಸಿ ಎದುರಾಳಿ ರಾಷ್ಟ್ರವನ್ನು ಸಂಪೂರ್ಣವಾಗಿ ನಾಶ ಮಾಡಿಬಿಡುವ ಇರಾದೆ ಹೊರಹಾಕಿದ ಹಾಗೂ ಎದುರಾಳಿ ರಾಷ್ಟ್ರದ ನಾಗರಿಕರನ್ನು ಬರ್ಬರ ಬಗೆಯಲ್ಲಿ ಕೊಂದು ಹಲವರನ್ನು ಬಂಧಿಗಳನ್ನಾಗಿ ಮಾಡಿಕೊಂಡ ಹಮಾಸ್ ಅನ್ನು ಜಾಗತಿಕ ಬುದ್ಧಿಜೀವಿ, ಅಧ್ಯಾಪಕ, ಕೆಲ ಮಾಧ್ಯಮ ವರ್ಗ ಖಂಡಿಸುತ್ತಲೇ ಇಲ್ಲ. ಅನಾಗರಿಕ ಭಯೋತ್ಪಾದಕ ಸಂಘಟನೆ ಹಮಾಸ್ ಮೊದಲು ಹಾನಿಯೆಸಗಿದ್ದು ಪ್ಯಾಲೆಸ್ತೀನಿಯನ್ನರ ಮೇಲೇ. 2006ರ ಚುನಾವಣೆಗಳಲ್ಲಿ ಗಾಝಾದಲ್ಲಿ ಬಹುಮತ ದಕ್ಕಿದೊಡನೆ ಅದು ಮೊದಲು ಮುಗಿಬಿದ್ದದ್ದು ಪ್ಯಾಲೆಸ್ತೀನಿಯನ್ ಜನತೆಯ ಅಧಿಕೃತ ರಾಜಕೀಯ ಪ್ರತಿನಿಧಿ ಎಂದು ಜಾಗತಿಕವಾಗಿ ಮಾನ್ಯತೆ ಪಡೆದ ಫತಾ ಅಥವಾ ಪ್ಯಾಲೆಸ್ತೀನಿಯನ್ ಅಥಾರಿಟಿ (ಪಿಎ) ಮೇಲೆ. ಹಲವಾರು ಪಿಎ ನಾಯಕರು ಮತ್ತು ಕಾರ್ಯಕರ್ತರನ್ನು ಹಮಾಸ್ ನಿರ್ದಯವಾಗಿ ಕೊಂದು, ಇತರರು ಗಾಝಾದಿಂದ ಓಡಿಹೋಗುವಂತೆ ಮಾಡಿ ಇಡೀ ಪ್ರದೇಶದ ಮೇಲೆ ತನ್ನ ಸರ್ವಾಧಿಕಾರ ಸ್ಥಾಪಿಸಿತು. ಅಧಿಕೃತ ರಾಜಕೀಯ ನಾಯಕರನ್ನು ಭಯೋತ್ಪಾದಕ ಸಂಘಟನೆಯೊಂದು ಕೊಂದು ಅಥವಾ ಹೊರಗಟ್ಟಿ ತನ್ನ ನಿರಂಕುಶಾಧಿಕಾರ ಸ್ಥಾಪಿಸಿಕೊಂಡದ್ದನ್ನು ಖಂಡಿಸಿದವರು ಕಡಿಮೆ. ಅಲ್ಲಿಂದೀಚೆಗೆ ಕೇವಲ 361 ಚದರ ಕಿಲೋಮೀಟರ್ ವಿಸ್ತೀರ್ಣದ ಪ್ರದೇಶದಲ್ಲಿ 500 ಕಿಲೋಮೀಟರ್​ಗಳಷ್ಟು ದೀರ್ಘವಾದ ಸುರಂಗಗಳನ್ನು ನಿರ್ವಿುಸಿ ಅವುಗಳಲ್ಲಿ ಜಗತ್ತಿನ ಕಣ್ಣಿಗೆ ಕಾಣದಂತೆ ಮಾರಕಾಸ್ತ್ರಗಳನ್ನು ತುಂಬಿಕೊಂಡ ಹಮಾಸ್​ನ ಶಾಂತಿಕಂಟಕ ಪ್ರವೃತ್ತಿಯನ್ನು ಕಂಡವರೂ ಕಡಿಮೆಯೇ, ಕಂಡು ಖಂಡಿಸಿದವರು ಇನ್ನೂ ಕಡಿಮೆ.

ಇಂದು ಇಸ್ರೇಲ್ ದಾಳಿಯಿಂದ ತಪ್ಪಿಸಿಕೊಳ್ಳಲು ಹಮಾಸ್ ಬಳಸುತ್ತಿರುವುದೂ ಹದಿನಾರು ವರ್ಷಗಳ ಹಿಂದೆ ತನಗೆ ಮತ ನೀಡಿ ಅಧಿಕಾರ ಕೈಗಿತ್ತ ಪ್ಯಾಲೆಸ್ತೀನಿಯನ್ ನಾಗರಿಕರನ್ನೇ. ಹೀಗೆ ಅಮಾಯಕ ನಾಗರಿಕರ ಹಿಂದೆ ಅವಿತು ಅವರನ್ನು ಗುರಾಣಿಯಂತೆ ಬಳಸುತ್ತ, ಇಸ್ರೇಲ್ ದಾಳಿಗೆ ಮೊದಲು ಅವರು ಬಲಿಯಾಗುವಂತೆ ಮಾಡುತ್ತಿರುವ ಹಮಾಸ್ ತಪ್ಪು ಮಾಡುತ್ತಿದೆ ಎಂದು ಹೇಳುವವರನ್ನು ವಿಶ್ವವಿದ್ಯಾಲಯಗಳಲ್ಲಿ, ‘ಮಾನವ ಹಕ್ಕುಗಳ (?) ಸಂಘಟನೆ’ಗಳಲ್ಲಿ ಪತ್ರಿಕಾ ಕಚೇರಿಗಳಲ್ಲಿ ಭೂತಗನ್ನಡಿ ಇಟ್ಟುಕೊಂಡು ಹುಡುಕುವಂತಾಗಿದೆ. ಹೀಗೆ ತನ್ನ ಉದ್ದೇಶಗಳಿಗಾಗಿ ಪ್ಯಾಲೆಸ್ತೀನಿಯನ್ನರನ್ನೇ ಬಲಿಗೊಡುತ್ತಿರುವ ಹಮಾಸ್ ಪರವಾಗಿ ನಿಂತು, ಇಸ್ರೇಲ್-ಹಮಾಸ್ ಸಂಘರ್ಷವನ್ನು ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷ ಎಂದು ಬಿಂಬಿಸುವ ಪ್ರಯತ್ನಗಳು ಅಕ್ಟೋಬರ್ 8ರಂದೇ ನ್ಯೂಯಾರ್ಕ್​ನ ಟೈಮ್ ಸ್ಕೆ ್ವರ್​ನಲ್ಲಿ ಆರಂಭವಾದವು. ಅಲ್ಲಿಂದೀಚೆಗೆ ಅವು ಹಾರ್ವರ್ಡ್, ಸ್ಟಾ್ಯನ್​ಫರ್ಡ್, ಆಲಿಘರ್ ಸೇರಿ ಹಲವಾರು ಕಡೆ ಕಾಣಿಸಿಕೊಂಡಿವೆ.

ಹಾಗೆ ನೋಡಿದರೆ ಇಸ್ರೇಲ್-ಪ್ಯಾಲೆಸೆôನ್ ಸಂಘರ್ಷವನ್ನು ಮೊದಲಿಗೆ ಇಸ್ರೇಲ್-ಅರಬ್ ಸಂಘರ್ಷ ಎಂದು ಕರೆದ ಮರುಗಳಿಗೆಯೇ ಅದನ್ನು ಯೆಹೂದಿ-ಮುಸ್ಲಿಂ ಸಂಘರ್ಷ ಎಂದು ಜಾಗತಿಕವಾಗಿ ಬಿಂಬಿಸುವ ಪ್ರಯತ್ನ ಮುಕ್ಕಾಲು ಶತಮಾನದ ಹಿಂದೆಯೇ ಆರಂಭವಾಯಿತು. ಒಂದು ಹಂತಕ್ಕೆ ಅದನ್ನು ಒಪ್ಪಿಕೊಳ್ಳಲೂಬಹುದೇನೋ. ಆದರೆ ಭಯೋತ್ಪಾದಕ ಹಮಾಸ್ ಮತ್ತು ಇಸ್ರೇಲ್ ನಡುವಿನ ಈ ದಿನಗಳ ಸಂಘರ್ಷವನ್ನು ಇಸ್ರೇಲ್-ಪ್ಯಾಲೆಸೆôನ್ ಸಂಘರ್ಷ ಎಂದು ಕರೆಯುವುದಂತೂ ಸತ್ಯಕ್ಕೆ ಎಸಗುವ ಅಪಚಾರವೇ ಸರಿ. ವಾಸ್ತವವನ್ನು ತಿರುಚುವ ಈ ಹುನ್ನಾರ ಪುನರಾವರ್ತನೆಗೊಂಡು ಭಯೋತ್ಪಾದಕ ಹಮಾಸ್ ಅಂದರೆ ಪ್ಯಾಲೆಸೆ ôನ್ ಎಂದು ಬಿಂಬಿತವಾಗುವ ಪ್ರಕ್ರಿಯೆ ಹಮಾಸ್ ಅಂದರೆ ಅರಬ್ಬರು, ಎನ್ನುವಲ್ಲಿ ಮುಂದುವರಿದು, ಹಮಾಸ್ ಅಂದರೆ ಮುಸ್ಲಿಮರು ಎಂಬಲ್ಲಿಗೆ ತಲುಪಿದರೆ ಅದು ಜಾಗತಿಕವಾಗಿ ಮುಸ್ಲಿಮರು ತಮಗೆ ತಾವೇ ಮಾಡಿಕೊಳ್ಳುವ ಅನ್ಯಾಯವಾಗುತ್ತದೆ. ಹಮಾಸ್ ಅಂದರೆ ಪ್ಯಾಲೆಸೆôನೂ ಅಲ್ಲ, ಅರಬ್ಬರೂ ಅಲ್ಲ, ಮುಸ್ಲಿಮರೂ ಅಲ್ಲ; ಅದೊಂದು ಶಾಂತಿಕಂಟಕ ಭಯೋತ್ಪಾದಕ ಸಂಘಟನೆ, ಅದು ಮೊದಲಿಗೆ ಪ್ಯಾಲೆಸ್ತೀನಿಯನ್ನರ ವಿರೋಧಿ, ನಂತರ ಇಸ್ರೇಲ್​ನ ವಿರೋಧಿ ಎಂಬ ವಾಸ್ತವ ಧರ್ಮ ಹಾಗೂ ಸಿದ್ಧಾಂತಗಳ ಸಿಕ್ಕುಗಳಿಂದ ಬಿಡಿಸಿಕೊಂಡು ಜಾಗತಿಕವಾಗಿ ಮಾನ್ಯವಾಗಬೇಕು. ಆಗ ಮಾತ್ರ ಧರ್ಮ ತನ್ನ ಪಾವಿತ್ರ್ಯವನ್ನೂ, ಸಿದ್ಧಾಂತ ತನ್ನ ಮೌಲ್ಯವನ್ನೂ ಉಳಿಸಿಕೊಳ್ಳುತ್ತದೆ, ನಿಜವಾದ ಶಾಂತಿಯ ಮಾರ್ಗ ತೆರೆದುಕೊಳ್ಳುತ್ತದೆ.

ಆದರೆ ಜಗತ್ತು ಈ ಹಾದಿಯತ್ತ ಬೆನ್ನು ತಿರುಗಿಸಿದೆ ಎನ್ನುವ ಸೂಚನೆಗಳೇ ಕಾಣುತ್ತಿವೆ. ಹಮಾಸ್ ಅನ್ನು ಮುಸ್ಲಿಮರ ಪ್ರತಿನಿಧಿ ಎಂದು ಬಿಂಬಿಸಲು ಯೆಮೆನ್​ನ ಹೂತಿ ದಂಗೆಕೋರರೂ, ಚೀನೀ ಕಮ್ಯೂನಿಸ್ಟ್ ಸರ್ಕಾರವೂ ತೊಡಗಿವೆ. ಅವುಗಳ ಪ್ರಯತ್ನ ಪ್ಯಾಲೆಸ್ತೀನಿಯನ್ನರ ಹಿತಕ್ಕಿಂತಲೂ ತಮ್ಮ ಸಾಮರಿಕ ಹಿತವನ್ನು ವೃದ್ಧಿಸಿಕೊಳ್ಳುವ ಪ್ರಯತ್ನವೇ ಆಗಿದೆ.

ಮೊದಲಿಗೆ ಹೂತಿಗಳ ಸಂಚನ್ನು ನೋಡೋಣ. ಅರೇಬಿಯನ್ ಪರ್ಯಾಯದ್ವೀಪದ ನೈರುತ್ಯ ಭಾಗದಲ್ಲಿರುವ ಯೆಮೆನ್ ಕಳೆದೊಂದು ದಶಕದಿಂದಲೂ ಅಂತರ್ಯುದ್ಧದಲ್ಲಿ ಬೇಯುತ್ತಿದೆ. ಅದರಲ್ಲಿ ಪ್ರಮುಖ ಪಾತ್ರಧಾರಿ ಹೂತಿ ದಂಗೆಕೋರರು. ಹೂತಿಗಳು ಶಿಯಾಗಳಾದ ಕಾರಣ ಅವರಿಗೆ ಇರಾನ್​ನ ಬೆಂಬಲ ಮತ್ತು ಸಹಕಾರವಿದೆ. ಅರಬ್ ಜಗತ್ತಿನಲ್ಲಿ ರಾಜಪ್ರಭುತ್ವಗಳನ್ನು ಕಿತ್ತುಹಾಕಿ, ಇರಾನ್​ನಲ್ಲಿರುವಂತೇ ಮೂಲಭೂತವಾದಿ ಧಾರ್ವಿುಕ ನಾಯಕರ ಆಡಳಿತವನ್ನು ಸೃಷ್ಟಿಸುವುದು ಹೂತಿಗಳ ಘೊಷಿತ ನೀತಿ. ಹೀಗಾಗಿಯೇ ಹೂತಿಗಳು ಸುನ್ನಿ ಸೌದಿ ಅರೇಬಿಯಾ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್​ಗಳಿಗೂ ತಲೆನೋವಾಗಿದ್ದಾರೆ. ಆ ಎರಡು ದೇಶಗಳ ಮೇಲೂ ಹೂತಿಗಳು ಅಡಿಗಡಿಗೆ ರಾಕೆಟ್ ದಾಳಿ ನಡೆಸುವುದುಂಟು. ಹೀಗಾಗಿ ಮೊದಲೇ ಬಡದೇಶವಾದ ಯೆಮೆನ್​ಗೆ ಶ್ರೀಮಂತ ಅರಬ್ ದೇಶಗಳ ಸಹಾಯ ಬತ್ತಿಹೋಗಿದೆ. ಇರಾನ್​ನಿಂದ ಶಸ್ತ್ರಾಸ್ತ್ರಗಳು ಸಿಗಬಹುದು, ಅನ್ನವಲ್ಲ. ಹೂತಿಗಳಿಂದಾಗಿ ಯೆಮೆನ್​ನ ಜನಜೀವನ ಹಾಗೂ ಅರ್ಥವ್ಯವಸ್ಥೆ ಪೂರ್ಣವಾಗಿ ಹದಗೆಟ್ಟುಹೋಗಿದೆ. ಹೂತಿಗಳ ಕಾಟದಿಂದಾಗಿ ಬೇಸತ್ತ ಜನತೆ ಅವರಿಗೆ ಹಿಂದಿನಂತೆ ಬೆಂಬಲ ನೀಡುತ್ತಿಲ್ಲ.

ಅಕ್ಟೋಬರ್ 7ರಂದು ಆರಂಭವಾದ ಹಮಾಸ್-ಇಸ್ರೇಲ್ ಸಂಘರ್ಷ, ಕುಗ್ಗುತ್ತಿರುವ ಜನಬೆಂಬಲವನ್ನು ಮತ್ತೆ ಗಳಿಸಿಕೊಳ್ಳಲು ತನಗೆ ಒದಗಿಬಂದ ಸುವರ್ಣಾವಕಾಶ ಎಂದು ಹೂತಿಗಳು ತಿಳಿದರು. ಈ ‘ಜ್ಞಾನೋದಯ’ ಅವರಿಗೆ ಲಭಿಸಿದ್ದು ಪೋಷಕ ಇರಾನ್​ನಿಂದಲೇ ಇರಬೇಕು. ಪ್ಯಾಲೆಸ್ತೀನಿಯನ್ನರ ಪರವಾಗಿ, ಇಸ್ರೇಲ್​ನ ವಿರುದ್ಧವಾಗಿ ದೊಡ್ಡದಾಗಿ ದನಿಯೆತ್ತುವುದರಿಂದ ತಾನು ಜಾಗತಿಕ ಮುಸ್ಲಿಂ ಸಮುದಾಯದ ಪ್ರೀತಿ, ವಿಶ್ವಾಸ ಗಳಿಸಿ ಮುಸ್ಲಿಂ ಜಗತ್ತಿನ ನಾಯಕತ್ವವನ್ನು ಸೌದಿ ಅರೆಬಿಯಾದಿಂದ ಕಿತ್ತುಕೊಳ್ಳಬಹುದೆಂದು ತೆಹರಾನ್​ನ ಮೂಲಭೂತವಾದಿ ಸರ್ಕಾರ ದಶಕಗಳ ಹಿಂದೆಯೇ ಪ್ರಯತ್ನ ನಡೆಸಿದ ಇತಿಹಾಸವಿದೆ. ಅದನ್ನೇ ಅನುಕರಿಸಿದಂತೆ ಹೂತಿಗಳೂ ಪ್ರಸಕ್ತ ಸನ್ನಿವೇಶದಲ್ಲಿ ಇಸ್ರೇಲ್​ಗೆ ವಿರುದ್ಧವಾಗಿ ನಿಲ್ಲುವ ಮೂಲಕ ಸ್ಥಳೀಯ ಜನರ ಬೆಂಬಲವನ್ನು ಗಳಿಸಿಕೊಳ್ಳಬಹುದು ಮತ್ತು ಜಾಗತಿಕ ಮುಸ್ಲಿಂ ಸಮುದಾಯದಿಂದ ಹಣವನ್ನೂ ಪಡೆಯಬಹುದು ಎಂದು ತಿಳಿದು ಇಸ್ರೇಲ್ ಅನ್ನು ಭಯೋತ್ಪಾದಕ ರಾಷ್ಟ್ರ ಎಂದು ಕರೆದು, ಆ ದೇಶದ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿ ಎಸಗಲು ನೋಡಿತು. ತನ್ನ ಕ್ಷಿಪಣಿಗಳು ಮತ್ತು ಡ್ರೋನ್​ಗಳು ಇಸ್ರೇಲ್ ತಲುಪಲು ಕೆಂಪು ಸಮುದ್ರ ಅಥವಾ ಸೌದಿ ವಾಯುಮಾರ್ಗದ ಮೂಲಕ ಸಂಚರಿಸಬೇಕಾದ್ದು ಹೂತಿಗಳಿಗಿದ್ದ ಅಡಚಣೆ. ನಿರೀಕ್ಷಿಸಿದಂತೆ ಹೂತಿ ಕ್ಷಿಪಣಿಗಳನ್ನು ಸೌದಿ ಅರೇಬಿಯಾವೂ, ಡ್ರೋಣ್​ಗಳನ್ನು ಕೆಂಪು ಸಮುದ್ರದಲ್ಲಿರುವ ಅಮೆರಿಕದ ಯುದ್ಧನೌಕೆಯೂ ನಾಶಪಡಿಸಿವೆ. ಹತಾಶೆಗೊಂಡ ಹೂತಿಗಳು ಇದೇ ವವೆಂಬರ್ 19ರಂದು ಕೆಂಪು ಸಮುದ್ರದ ಮಾರ್ಗವಾಗಿ ತುರ್ಕಿಯಿಂದ ಭಾರತಕ್ಕೆ ಬರುತ್ತಿದ್ದ ವಾಣಿಜ್ಯ ನೌಕೆಯೊಂದನ್ನು ಅಪಹರಿಸಿ ಯೆಮೆನ್​ನ ಪೋರ್ಟ್ ಅಲ್ ಸಲ್ಮಾನ್ ಬಂದರಿಗೆ ಕೊಂಡೊಯ್ದಿದ್ದಾರೆ. ಅದು ಇಸ್ರೇಲಿ ಹಡಗಾದ್ದರಿಂದ ತಾವದನ್ನು ಅಪಹರಿಸಿದ್ದೇವೆ, ಆದಾಗ್ಯೂ ನೌಕೆಯಲ್ಲಿದ್ದ ಇಪ್ಪತೆôದು ನಾವಿಕರನ್ನು ಇಸ್ಲಾಮಿಕ್ ತತ್ತ್ವಗಳು ಮತ್ತು ಮೌಲ್ಯಗನುಗುಣವಾಗಿ ನೋಡಿಕೊಳ್ಳುತ್ತಿದ್ದೇವೆ ಎಂದು ಹೂತಿ ಸೇನೆ ಹೇಳಿದೆ. ಆದರೆ ಗೆಲಾಕ್ಷಿ ಲೀಡರ್ ಎಂಬ ಆ ನೌಕೆ ತನ್ನದಲ್ಲ ಎಂದು ಅದೇ ಸಂಜೆ ಇಸ್ರೇಲ್ ಸ್ಪಷ್ಟಪಡಿಸಿದೆ. ಸ್ವತಂತ್ರ ಮೂಲಗಳೂ ಅದನ್ನೇ ಹೇಳುತ್ತಿವೆ.

ವರದಿಗಳ ಪ್ರಕಾರ ಬ್ರಿಟಿಷ್ ಕಂಪನಿಯೊಂದಕ್ಕೆ ಸೇರಿದ್ದು, ಜಪಾನಿ ಕಂಪನಿಯೊಂದರಿಂದ ನಡೆಸಲ್ಪಡುತ್ತಿರುವ ಆ ಹಡಗು ರಿಜಿಸ್ಟರ್ ಆಗಿರುವುದು ಬಹಾಮಾಸ್​ನಲ್ಲಿ! ಜಗತ್ತಿನ ಸಮುದ್ರಗಳಲ್ಲಿ ಸಂಚರಿಸುವ ಹೆಚ್ಚಿನ ವಾಣಿಜ್ಯ ಹಡಗುಗಳ ಹಣೆಬರಹವೇ ಹೀಗೆ. ಮಾಲಿಕರು ಯಾರೋ, ನಡೆಸುವವರು ಯಾರೋ, ರಿಜಿಸ್ಟರ್ ಅಗಿರುವುದು ಎಲ್ಲೋ, ಹೋಗುತ್ತಿರುವುದು ಎಲ್ಲಿಂದ ಎಲ್ಲಿಗೋ.

ಜಾಗತಿಕ ವ್ಯಾಪಾರದ ಶೇಕಡ ಹತ್ತರಷ್ಟು ಸಾಗುವುದು ಕೆಂಪು ಸಮುದ್ರದಲ್ಲಿ. ಅಲ್ಲಿ ಹೀಗೆ ವಾಣಿಜ್ಯ ನೌಕೆಗಳು ಅಸುರಕ್ಷೆಯಾದಲ್ಲಿ ಅಷ್ಟರ ಮಟ್ಟಿಗೆ ಜಾಗತಿಕ ವಾಣಿಜ್ಯ ಮತ್ತು ಯೂರೋಪ್-ಏಷ್ಯಾ ವ್ಯಾಪಾರ ಗಂಭೀರವಾಗಿ ಅಸ್ತವ್ಯಸ್ತಗೊಳ್ಳುತ್ತದೆ. ಮತಿಗೇಡಿ ಹೂತಿಗಳು ಮತ್ತವರ ಪೋಷಕ ಇರಾನ್ ಅರಿಯಬೇಕಾದ ಸತ್ಯವಿದು. ಅವರು ತಾವಾಗಿ ಅರಿಯದಿದ್ದಲ್ಲಿ ಜಾಗತಿಕ ಸಮುದ್ರಮಾರ್ಗಗಳ ಸುರಕ್ಷೆಗಾಗಿ ಜವಾಬ್ದಾರಿಯುತ ರಾಷ್ಟ್ರಗಳು ಕ್ರಮ ಕೈಗೊಳ್ಳಬೇಕಾಗುತ್ತದೆ.

ಈ ನಡುವೆ ಅಮೆರಿಕದ ವಿರುದ್ಧ ರಾಜತಾಂತ್ರಿಕ ಮುನ್ನಡೆ ಸಾಧಿಸುವ ಹುನ್ನಾರದಿಂದ ಚೀನಾ ಇದೇ ನವೆಂಬರ್ 20-21ರಂದು ತನ್ನ ರಾಜಧಾನಿಯಲ್ಲಿ ಮುಸ್ಲಿಂ ರಾಷ್ಟ್ರಗಳ ಸಭೆ ಕರೆದಿದೆ. ಸೌದಿ ಅರೇಬಿಯಾ, ಈಜಿಪ್ಟ್, ಜೋರ್ಡಾನ್, ಇಂಡೋನೇಷ್ಯಾ ಸೇರಿ ಹಲವು ಇಸ್ಲಾಮಿಕ್ ರಾಷ್ಟ್ರಗಳು ಮತ್ತು ಆರ್ಗನೈಜೇಷನ್ ಆಫ್ ಇಸ್ಲಾಮಿಕ್ ಕಂಟ್ರೀಸ್ (ಓಐಸಿ) ಭಾಗವಹಿಸುತ್ತಿರುವ ಈ ಸಭೆಯಲ್ಲಿ ಮೊದಲ ದಿನ ಕದನವಿರಾಮದ ಕುರಿತಾಗಿ ಚರ್ಚೆಯಾಯಿತು. ಇಸ್ರೇಲ್ ವಿರುದ್ಧ ಹರಿಹಾಯುವಿಕೆಯೂ ದೊಡ್ಡದಾಗಿಯೇ ಆಯಿತು. ಪ್ಯಾಲೆಸ್ತೀನಿಯನ್ನರ ಪರವಾಗಿ ಬಂದ ಹೇಳಿಕೆಗಳು ವಾಸ್ತವವಾಗಿ ಹಮಾಸ್ ಪರವಾಗಿ ಎನ್ನುವುದೇನೂ ಸತ್ಯದೂರವಲ್ಲ. ಈ ಲೇಖನ ಸಿದ್ಧವಾಗುತ್ತಿರುವಾಗ ಸಭೆಯ ಎರಡನೆಯ ದಿನದ ಕಾರ್ಯಕಲಾಪಗಳು ಆರಂಭವಾಗಿವೆ. ಮೊದಲ ದಿನ ನಡೆದದ್ದರ ಹಿನ್ನೆಲೆಯಲ್ಲಿ ಎರಡನೆಯ ದಿನ ಮಹತ್ತರವಾದ ವಸ್ತುನಿಷ್ಠ ಚರ್ಚೆ ನಡೆಯುತ್ತದೆಂದು ನಿರೀಕ್ಷಿಸುವುದು ಹಾಸ್ಯಾಸ್ಪದ ನಿರೀಕ್ಷೆಯಾಗುತ್ತದೆ.

ಅಕ್ಟೋಬರ್ 7ರಂದು ಕೆಲವೇ ತಾಸುಗಳಲ್ಲಿ ತನ್ನ ಸುಮಾರು 700 ನಾಗರಿಕರನ್ನು ಬರ್ಬರ ಬಗೆಯಲ್ಲಿ ಕಳೆದುಕೊಂಡದ್ದಲ್ಲದೆ ತನ್ನ ಅಸ್ತಿತ್ವಕ್ಕೇ ಧಕ್ಕೆಯನ್ನು ಕಂಡ ಇಸ್ರೇಲ್ ಬಗ್ಗೆ ಒಂದಾದರೂ ಸಾಂತ್ವನದ ಮಾತಿಲ್ಲದ ಇಂತಹ ಚರ್ಚೆಗಳಿಂದ ಶಾಂತಿಸ್ಥಾಪನೆಯಾಗುವುದೂ ಇಲ್ಲ, ಪ್ಯಾಲೆಸ್ತೀನಿಯನ್ನರ ಉದ್ದಾರವೂ ಆಗುವುದಿಲ್ಲ. ಮಧ್ಯಪ್ರಾಚ್ಯದಲ್ಲಿ ಅಮೆರಿಕವನ್ನು ಓಡಿಸಿ ತಾನು ಶಾಂತಿಸ್ಥಾಪಕನಾಗಿದ್ದೇನೆ ಎಂದು ಚೀನಾ ಬೀಗಬಹುದಷ್ಟೇ. ಅದೂ ತಾತ್ಕಾಲಿಕವಷ್ಟೇ.

(ಲೇಖಕರು ರಾಜಕೀಯ ವಿಶ್ಲೇಷಕರು, ಕನ್ನಡ ಕತೆಗಾರರು)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net