ಎಪ್ಪತ್ತು ತಾಸು ಕೆಲಸದ ವಕಾಲತ್ತು ಮತ್ತು ಮೋದಿ ತಾಕತ್ತು!

Modi
Published on
ಕೆಲಸದ ಅವಧಿಯ ಬಗ್ಗೆ ಇಷ್ಟೆಲ್ಲ ವಾದವಿವಾದ ನಡೆಯುತ್ತಿರುವಾಗಲೇ, ನಮ್ಮ ಎಷ್ಟೋ ತಾಯಂದಿರು, ಗೃಹಿಣಿಯರು ಬೆಳಗಿನಿಂದ ರಾತ್ರಿಯವರೆಗೆ ಇಡೀ ದಿನ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತಾರಲ್ಲ. ಅವರದು ದಿನಕ್ಕೆ ಅಥವಾ ವಾರಕ್ಕೆ ಎಷ್ಟು ತಾಸು ಕೆಲಸವಾಗಬಹುದು ಎಂಬ ವಿಚಾರ ಮನದಲ್ಲಿ ಹಾದುಹೋಗುತ್ತದೆ.

ನಲವತ್ತೆರಡು ವರ್ಷಗಳ ಹಿಂದೆ, ಅಂದರೆ 1981ರಲ್ಲಿ ಪುಣೆಯಲ್ಲಿ ಮೊಳಕೆಯೊಡೆದು, 1983ರಲ್ಲಿ ಬೆಂಗಳೂರಿಗೆ ಸ್ಥಳಾಂತರಗೊಂಡು, ನಂತರದ ವರ್ಷಗಳಲ್ಲಿ ಅಗಾಧವಾಗಿ ಬೆಳೆದ ಇನ್ಪೋಸಿಸ್ ಕಂಪನಿ ಭಾರತದ ಕಾಪೋರೇಟ್ ಯಶೋಗಾಥೆಯಲ್ಲಿ ಒಂದು ಮೈಲಿಗಲ್ಲು. ಐಟಿ ಕ್ಷೇತ್ರ ಕಾಲೂರುತ್ತಿರುವ ಹೊತ್ತಿಗೆ ಲಯ ಕಂಡುಕೊಂಡ ಈ ಸಂಸ್ಥೆ ಯಶಸ್ಸಿನ ಹಾದಿಯಲ್ಲಿ ಸಾಗಿದ್ದು ಇತಿಹಾಸ. ಈ ಕಂಪನಿಯ ಸಾಧನೆಯಲ್ಲಿ ಸಂಸ್ಥಾಪಕರಾದ ಎನ್.ಆರ್. ನಾರಾಯಣಮೂರ್ತಿ ಮತ್ತು ಅವರ ತಂಡದ ಕೊಡುಗೆ ದೊಡ್ಡದು. ಒಂದು ಸಣ್ಣ ರೂಮಿನಲ್ಲಿ ಕುಳಿತು ದೊಡ್ಡ ಕನಸು ಕಂಡು, ಅದನ್ನು ನನಸು ಮಾಡಲು ಈ ತಂಡ ಹಾಕಿದ ಶ್ರಮ ಮತ್ತು ಬದ್ಧತೆ ಇದೆಯಲ್ಲ ಅದು ಪ್ರೇರಣಾದಾಯಿ ಹಾದಿ. ಹೀಗೆಂದೇ, ನಾರಾಯಣಮೂರ್ತಿಯಂತಹವರ ಮಾತನ್ನು ಉದ್ಯಮ ಜಗತ್ತು ಮಾತ್ರವಲ್ಲ, ಸಾರ್ವಜನಿಕ ಬದುಕಿನಲ್ಲಿ ಸಹ ಕುತೂಹಲದಿಂದ ಕೇಳಲಾಗುತ್ತದೆ; ಆ ಬಗ್ಗೆ ಚರ್ಚೆ-ಅಭಿಪ್ರಾಯ ವಿನಿಮಯಗಳು ನಡೆಯುತ್ತವೆ.

ಶ್ರಮಸಂಸ್ಕೃತಿಯನ್ನು ಎತ್ತಿಹಿಡಿಯುವ ಧಾಟಿಯಲ್ಲಿ ಅನಿಸಿಕೆಗಳನ್ನು ವ್ಯಕ್ತಪಡಿಸುವ ಅವರು, ಭಾರತದ ಶಕ್ತಿ ಹಾಗೂ ದೌರ್ಬಲ್ಯಗಳ ಬಗ್ಗೆಯೂ ಮಾತನಾಡಿದ್ದಾರೆ. ಎನ್​ಆರ್​ಎನ್ ಅವರು ಈಚೆಗೆ ಆಡಿದ ಮಾತೊಂದರ ಬಗ್ಗೆ ಕೂಡ ಚರ್ಚೆ, ಪರ-ವಿರೋಧ ಅನಿಸಿಕೆಗಳು ವ್ಯಕ್ತವಾಗುತ್ತಿವೆ. ‘ಭಾರತವು ಉದಯೋನ್ಮುಖ ಆರ್ಥಿಕತೆಗಳ ಜತೆಗೆ ಸ್ಪರ್ಧಿಸಬೇಕೆಂದಾದಲ್ಲಿ ಯುವಜನರು ವಾರಕ್ಕೆ 70 ತಾಸು ಕೆಲಸ ಮಾಡಬೇಕು’ ಎನ್ನುವ ಸಲಹೆಯನ್ನು ಅವರು ನೀಡಿದ್ದಾರೆ. ಅವರ ಮಾತಿನ ಅರ್ಥ- ಯುವಜನರು ವೇಗದಿಂದ, ದಿನಕ್ಕೆ ಸ್ವಲ್ಪ ಹೆಚ್ಚು ಸಮಯ ಕೆಲಸ ಮಾಡಿದರೆ ಬೇಗಬೇಗನೆ ಪ್ರಗತಿ ಸಾಧ್ಯವಾಗುತ್ತದೆ ಎಂಬುದು. ಮೇಲ್ನೋಟಕ್ಕೆ ಇದು ಒಪ್ಪತಕ್ಕ ಮಾತೇ. ಏಕೆಂದರೆ, ಯುವಜನರಲ್ಲಿ ಹೆಚ್ಚು ಸಮಯ ಕೆಲಸ ಮಾಡುವ ಕ್ಷಮತೆ ಹಾಗೂ ಉತ್ಸಾಹ ಇರುತ್ತದೆ. ಭಾರತದ ಉದ್ಯಮ ರಂಗದ ಅನೇಕ ಮುಂದಾಳುಗಳು ನಾರಾಯಣಮೂರ್ತಿಯವರ ಮಾತನ್ನು ಸ್ವಾಗತಿಸಿ ಬೆಂಬಲಿಸಿದ್ದಾರೆ. ಓಲಾ ಸಿಇಒ ಭವಿಶ್ ಅಗರವಾಲ್ ಅವರು, ‘ಮೂರ್ತಿ ಮಾತಿಗೆ ನನ್ನ ಸಂಪೂರ್ಣ ಸಹಮತವಿದೆ. ಇತರ ಹಲವು ದೇಶಗಳು ಅನೇಕ ಪೀಳಿಗೆಗಳ ಶ್ರಮದಿಂದ ಸಾಧಿಸಿದ್ದನ್ನು ನಾವು ಒಂದು ಪೀಳಿಗೆಯಲ್ಲಿ ಸಾಧಿಸುವ ಗುರಿಯಿರಿಸಿಕೊಂಡು ಕೆಲಸ ಮಾಡಬೇಕಿದೆ’ಎಂದಿದ್ದಾರೆ. ‘ನಮ್ಮ ಪ್ರಧಾನಿ ನರೇಂದ್ರ ಮೋದಿ ಅವರು ದಿನಕ್ಕೆ 14-16 ತಾಸು ಕೆಲಸ ಮಾಡುತ್ತಾರೆ. ನನ್ನ ತಂದೆ ವಾರದ ಏಳೂ ದಿನ ದಿನಕ್ಕೆ 12-14 ತಾಸು ಕಾರ್ಯನಿರ್ವಹಿಸುತ್ತಿದ್ದರು. ನಾನು ಸಹ ದಿನಕ್ಕೆ 10-12 ತಾಸು ಕೆಲಸ ಮಾಡುತ್ತೇನೆ. ಕ್ಷಿಪ್ರವಾಗಿ ಬೆಳವಣಿಗೆ ಹೊಂದುತ್ತಿರುವ ಭಾರತದಂತಹ ಆರ್ಥಿಕತೆಗೆ ವಾರಕ್ಕೆ ಐದು ದಿನದ ಕೆಲಸದ ಸಂಸ್ಕೃತಿ ಹೊಂದುವಂಥದ್ದಲ್ಲ’ ಎನ್ನುವ ಮೂಲಕ, ಜಿಂದಾಲ್ ಸಮೂಹದ ಮುಖ್ಯಸ್ಥ ಸಜ್ಜನ್ ಜಿಂದಾಲ್ ಸಹ ಮೂರ್ತಿ ಮಾತಿಗೆ ಸೈ ಎಂದಿದ್ದಾರೆ.

ಜಿಂದಾಲ್ ಹೇಳಿದಂತೆ, ಮೋದಿ ದುಡಿತದ ತಾಕತ್ತಿಗೆ ನಮೋ ಎನ್ನಲೇಬೇಕು. ಚುನಾವಣಾ ಸಮಯದಲ್ಲಂತೂ ಕಾಲಿಗೆ ಚಕ್ರ ಕಟ್ಟಿಕೊಂಡೇ ಇರುವ ಅವರು ದಿನಕ್ಕೆ ಎರಡು ಮೂರು ತಾಸಾದರೂ ವಿಶ್ರಾಂತಿ ತೆಗೆದುಕೊಳ್ಳುತ್ತಾರೋ ಇಲ್ಲವೋ ಅನಿಸಿಬಿಡುತ್ತದೆ. ವರ್ಷಗಳಿಂದ ಅಳವಡಿಸಿಕೊಂಡಿರುವ ಯೋಗಾಭ್ಯಾಸ, ಸಂಕಲ್ಪಶಕ್ತಿ, ಕಟ್ಟುನಿಟ್ಟು ಆಹಾರ ಪದ್ಧತಿ - ಮುಂತಾದವು ಮೋದಿ ಸಾಮರ್ಥ್ಯದ ಹಿಂದಿನ ರಹಸ್ಯವಿದ್ದಿರಬೇಕು.

ಮಹಾರಾಷ್ಟ್ರ ಬಿಜೆಪಿ ಅಧ್ಯಕ್ಷ ಚಂದ್ರಕಾಂತ ಪಾಟೀಲ್ ಅವರು, 2022ರ ಮಾರ್ಚ್​ನಲ್ಲಿ ಕೊಲ್ಲಾಪುರ ಉತ್ತರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಸಂದರ್ಭದಲ್ಲಿ ಪಕ್ಷದ ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತ, ‘ಮೋದಿಯವರು ದಿನಕ್ಕೆ ಕೇವಲ ಎರಡು ತಾಸು ನಿದ್ರಿಸುತ್ತಾರೆ. ಉಳಿದ 22 ತಾಸು ಕೆಲಸ ಮಾಡುತ್ತಾರೆ. ದಿನದ ಪ್ರತಿಕ್ಷಣವನ್ನೂ ದೇಶಕಾರ್ಯಕ್ಕಾಗಿ ಮುಡಿಪಾಗಿಡಬೇಕು ಎಂಬುದು ಅವರ ಸಂಕಲ್ಪ’ ಎಂದು ಹೇಳಿದ್ದರು. ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು, ಮೋದಿ ಕಾರ್ಯಶೈಲಿಯನ್ನು ಉಲ್ಲೇಖಿಸಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಕಾಲೆಳೆಯುವುದೂ ಇದೆ. ‘ಮೋದಿ ಕಳೆದ 20 ವರ್ಷದಿಂದ ಒಂದು ರಜೆಯನ್ನೂ ಪಡೆಯದೆ, ದಿನಕ್ಕೆ 18 ತಾಸು ಕೆಲಸ ಮಾಡುತ್ತಿದ್ದಾರೆ. ಆದರೆ ರಾಹುಲ್ ಅವರು ಎರಡು ತಿಂಗಳಿಗೊಮ್ಮೆ ಬ್ರೇಕ್ ಪಡೆಯುತ್ತಾರೆ. ತಾನು ಎಲ್ಲಿದ್ದೇನೆಂದು ತಾಯಿಗೂ ತಿಳಿಸುವುದಿಲ್ಲ’ ಎಂದು ಷಾ ಟೀಕಿಸುವುದಿದೆ.

ಕ್ಯೂರ್​ಫಿಟ್ ಸಂಸ್ಥಾಪಕ ಮುಕೇಶ್ ಬನ್ಸಾಲ್ ಅವರದು ಈ ವಿಷಯವಾಗಿ ತುಸು ಸಂಯಮದ ನಿಲುವು ಎನ್ನಲಡ್ಡಿಯಿಲ್ಲ. ‘ಎಷ್ಟು ಸಮಯ ಕೆಲಸ ಮಾಡಬೇಕು ಎಂಬುದು ಅವರವರ ವಿವೇಚನೆಗೆ ಬಿಟ್ಟಿದ್ದು. ಆರೋಗ್ಯ, ಕುಟುಂಬ, ವೃತ್ತಿಭವಿಷ್ಯ ಎಲ್ಲವೂ ಮುಖ್ಯವಾದುದೇ. ಹಾಗೇ ಮನಶ್ಶಾಂತಿ ಸಹ ಮುಖ್ಯವಾದುದು. ಎಷ್ಟು ಆದ್ಯತೆಯ ಮೇಲೆ ಯಾವ ಕೆಲಸ ಮಾಡಬೇಕು ಎಂಬುದನ್ನು ಆಯಾ ವ್ಯಕ್ತಿಗಳೇ ನಿರ್ಧರಿಸಿಕೊಳ್ಳಬೇಕು’ ಎನ್ನುವ ಮೂಲಕ, ಮನೆ-ಆಫೀಸ್ ಸಮತೋಲನದ ಅಗತ್ಯವನ್ನು ಅವರು ತೆರೆದಿಡುತ್ತಾರೆ. ಹಾಗಂತ ಎಲ್ಲ ಉದ್ಯಮಿಗಳೂ ನಾರಾಯಣಮೂರ್ತಿ ವಾದವನ್ನು ಬೆಂಬಲಿಸಿದ್ದಾರೆ ಅಂತೇನಿಲ್ಲ. ‘ವಾರಕ್ಕೆ 70 ತಾಸು ಕೆಲಸ ಮಾಡಿದರೆ ಉದ್ಯೋಗಿಯ ಮೇಲೆ ಅನೇಕ ರೀತಿಯ ನಕಾರಾತ್ಮಕ ಪರಿಣಾಮಗಳು ಆಗಬಹುದು. ಮುಖ್ಯವಾಗಿ ದೈಹಿಕ ಮತ್ತು ಮಾನಸಿಕ ಆರೋಗ್ಯ. ಕೆಲವು ತಾಸು ಕೆಲಸ ಮಾಡಿದ ನಂತರ ಉತ್ಪಾದಕತೆ ಇಳಿಮುಖವಾಗುತ್ತದೆ. ಉದ್ಯೋಗಿಯ ಕೆಲಸದ ದಕ್ಷತೆ ತಗ್ಗಿ, ಹೆಚ್ಚೆಚ್ಚು ತಪು್ಪಗಳನ್ನು ಮಾಡುತ್ತಾನೆ. ಒಂದು ಹಂತ ಮೀರಿದ ನಂತರ ಉದ್ಯೋಗಿಯ ಸೃಜನಶೀಲತೆ ಮೇಲೂ ಕೆಟ್ಟ ಪರಿಣಾಮವಾಗುತ್ತದೆ’ಎನ್ನುತ್ತಾರೆ, ಸರಾಫ್ ಫರ್ನಿಚರ್ ಸಂಸ್ಥೆಯ ಸಂಸ್ಥಾಪಕ ರಘುನಂದನ ಸರಾಫ್.

ಇಷ್ಟೆಲ್ಲ ಸಮಯ ಕೆಲಸ ಕೆಲಸ ಎಂದು ಹೇಳುತ್ತಿದ್ದರೆ ಅವರ ಆರೋಗ್ಯ ಏನಾಗಬೇಕು? ಕೌಟುಂಬಿಕ ಪರಿಸ್ಥಿತಿ ಕತೆ ಏನು? ಎಂದು ಸಾರ್ವಜನಿಕ ವಲಯದಲ್ಲಿ ಸಹ ಕೆಲವರು ಪ್ರಶ್ನೆ, ತಕರಾರು ಎತ್ತಿದ್ದಾರೆ. ಕೆಲಸ ಮತ್ತು ಕುಟುಂಬದ ನಡುವೆ ಸಮತೋಲನ ಕಾಯ್ದುಕೊಳ್ಳುವುದು ಅಗತ್ಯ ಎಂದು ಇವರು ಹೇಳುತ್ತಾರೆ. ಈ ಮಾತಿಗೆ ಸಮರ್ಥನೆಯಾಗಿ ಅವರು ಮಾಹಿತಿ ತಂತ್ರಜ್ಞಾನ ಮತ್ತಿತರ ರಂಗಗಳಲ್ಲಿ ಕೆಲಸ ಮಾಡುವವರನ್ನು ಉದಾಹರಣೆಯಾಗಿ ನೀಡುತ್ತಾರೆ. ಐಟಿ ತಂತ್ರಜ್ಞರಿಗೆ ಉತ್ತಮ ಪಗಾರಿದೆ ನಿಜ. ಆದರೆ ಅವರನ್ನು ಅಷ್ಟೇ ದುಡಿಸಲಾಗುತ್ತದೆ. ಹೀಗಾಗಿ ಅವರಲ್ಲಿ ಖಿನ್ನತೆ, ಒತ್ತಡ ಮತ್ತಿತರ ಸಮಸ್ಯೆಗಳು ಮಾಮೂಲು ಎಂಬುದರತ್ತ ಇವರು ಗಮನ ಸೆಳೆಯುತ್ತಾರೆ. ಇನ್ನು ಕೆಲವರು, ವಾರಕ್ಕೆ 70 ತಾಸು ಕೆಲಸದ ವಿಷಯದಲ್ಲಿ ಇರುವ ಕಾನೂನಾತ್ಮಕ ತೊಡಕಿನ ಬಗ್ಗೆ ಗಮನ ಸೆಳೆಯುತ್ತಾರೆ. ‘ಇದು ಅಂತಾರಾಷ್ಟ್ರೀಯ ಕಾರ್ವಿುಕ ಪ್ರಮಾಣಬದ್ಧತೆ (International Labour Standerds-ILS)ಯನ್ನು ಉಲ್ಲಂಘಿಸುತ್ತದೆ. ಪುರುಷರು ಹಾಗೂ ಮಹಿಳೆಯರು ನ್ಯಾಯಯುತ ಹಾಗೂ ಉತ್ಪಾದಕತೆಯ ಕೆಲಸ ಮಾಡುವ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆಯು (ILO) ಕೆಲಸದ ಅವಧಿ ಎಷ್ಟಿರಬೇಕೆಂದು ಸೂತ್ರ ಹಾಕಿಕೊಟ್ಟಿದೆ. ಮುಂದುವರಿದ ದೇಶಗಳಲ್ಲಿ ಮಾರುಕಟ್ಟೆ ಪ್ರವೇಶಾವಕಾಶ ಪಡೆಯಲು ಮತ್ತು ಕಂಪನಿಗಳು ಪೂರೈಕೆ ಸರಪಳಿ (supply chain)ಯಲ್ಲಿ ಭಾಗೀದಾರರಾಗಲು ಅಂತಾರಾಷ್ಟ್ರೀಯ ಕಾರ್ವಿುಕ ಪ್ರಮಾಣಬದ್ಧತೆಯು (ಐಎಲ್​ಎಸ್) ಒಂದು ಪೂರ್ವಾರ್ಹತೆಯ ರೀತಿಯಲ್ಲಿ ಪರಿಗಣಿತವಾಗುತ್ತಿದೆ. ಹೀಗಾಗಿ ವಾರಕ್ಕೆ 70 ತಾಸು ಕೆಲಸದ ವಿಷಯಕ್ಕೆ ಜೋತುಬಿದ್ದರೆ, ಐಎಲ್​ಎಸ್ ಸೂತ್ರಕ್ಕೆ ವಿರುದ್ಧವಾಗಿ, ನಮ್ಮ ದೇಶದ ಉದ್ಯಮಗಳು ಅನ್ಯ ದೇಶಗಳಲ್ಲಿ ಕಾರ್ಯವಿಸ್ತರಿಸಲು ದೊಡ್ಡ ಅಡಚಣೆಯಾಗಬಹುದು ಎಂದು ಇವರು ಎಚ್ಚರಿಸುತ್ತಾರೆ. ‘ಕೆಲಸದ ಅವಧಿ ಹಾಗೂ ವಿಶ್ರಾಂತಿ ಅವಧಿಯು ಉದ್ಯೋಗಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಇದಲ್ಲದೆ, ಕೆಲಸದ ಅವಧಿಯು ಒಟ್ಟಾರೆ ಆರ್ಥಿಕತೆಯ ಆರೋಗ್ಯದ ಮೇಲೆ ಸಹ ಪರಿಣಾಮ ಉಂಟುಮಾಡುತ್ತದೆ’ ಎಂದು ಅಂತಾರಾಷ್ಟ್ರೀಯ ಕಾರ್ವಿುಕ ಸಂಸ್ಥೆಯ ವರದಿಯೊಂದರಲ್ಲಿ ಉಲ್ಲೇಖಿಸಲಾಗಿದೆ. ನಮ್ಮದೇಶದಲ್ಲಿ ಅನುಸರಿಸಲಾಗುವ ನೀತಿನಿಯಮಗಳು ಜಾಗತಿಕ ಮಟ್ಟದ ಸೂತ್ರಗಳಿಗೆ ಹೊಂದಿಕೆಯಾಗುವಂತಿರಬೇಕು; ಇಲ್ಲವಾದಲ್ಲಿ ನಮ್ಮ ಉದ್ಯಮಗಳಿಗೆ ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ತೊಂದರೆಯಾಗುತ್ತದೆ ಎಂಬುದು ಇವರ ಪ್ರತಿಪಾದನೆ.

ಕೆಲಸದ ಅವಧಿಯ ಬಗ್ಗೆ ಇಷ್ಟೆಲ್ಲ ವಾದವಿವಾದ ನಡೆಯುತ್ತಿರುವಾಗಲೇ, ನಮ್ಮ ಎಷ್ಟೋ ತಾಯಂದಿರು, ಗೃಹಿಣಿಯರು ಬೆಳಗಿನಿಂದ ರಾತ್ರಿಯವರೆಗೆ ಇಡೀ ದಿನ ಒಂದಲ್ಲ ಒಂದು ಕೆಲಸ ಮಾಡುತ್ತಲೇ ಇರುತ್ತಾರಲ್ಲ. ಅವರದು ದಿನಕ್ಕೆ ಅಥವಾ ವಾರಕ್ಕೆ ಎಷ್ಟು ತಾಸು ಕೆಲಸವಾಗಬಹುದು ಎಂಬ ವಿಚಾರ ಮನದಲ್ಲಿ ಹಾದುಹೋಗುತ್ತದೆ. ಈಗೇನೋ ಮನೆಯಲ್ಲಿ ಒಬ್ಬರು ಅಥವಾ ಇಬ್ಬರು ಮಕ್ಕಳಿದ್ದರೆ ಹೆಚ್ಚು. ಹಿಂದೆ ಹಾಗಲ್ಲ, ಮನೆತುಂಬ ಮಕ್ಕಳ ಕಲರವ ಕೇಳಿಬರುತ್ತಿತ್ತು. ಇವರನ್ನೆಲ್ಲ ಸಂಭಾಳಿಸುವುದು ಸುಲಭವಾ? ಈಗಿನ ಹಾಗೆ ಅಂಗನವಾಡಿ ಅಥವಾ ಮಾಂಟೆಸರಿಯೇನೂ ಇರುತ್ತಿರಲಿಲ್ಲವಲ್ಲ. ಹೀಗಿದ್ದರೂ ಆ ತಾಯಂದಿರು ತೋರಿದ ಸಹನೆಗೆ ಒಂದು ಸೆಲ್ಯೂಟ್ ಸಲ್ಲಲೇಬೇಕು. ಮನೆಗೆಲಸದ ಜತೆಗೆ ಹಳ್ಳಿಗಳಲ್ಲಿ ಹೊಲ ಕೆಲಸಕ್ಕೂ ಹೋಗಬೇಕಿತ್ತು. ಅವರ ದುಡಿತ ಎಷ್ಟು ತಾಸಾಗುತ್ತಿತ್ತು ಎಂದು ಲೆಕ್ಕ ಇಟ್ಟವರಾರು? ಈ ಹೆಗ್ಗಳಿಕೆಯ ನಡುವೆಯೇ, ಈಗೀಗ ಹಳ್ಳಿಗಳಲ್ಲಿ ಸಹ ಶ್ರಮಸಂಸ್ಕೃತಿ ಕಡಿಮೆಯಾಗಿದೆ ಎಂಬ ಆತಂಕ ಒಡಮೂಡಿದೆ.

ನಗರಗಳಲ್ಲಿ ಉದ್ಯೋಗಸ್ಥ ಮಹಿಳೆಯರ ದುಡಿತ ಏನೂ ಕಡಿಮೆಯಲ್ಲ. ಬೆಳಗ್ಗೆ ಮನೆಗೆಲಸ ಮುಗಿಸಿ, ಆಫೀಸಿಗೆ ಓಡೋಡುತ್ತಲೇ ಹೋಗಬೇಕು. ಸಂಜೆ ಸುಸ್ತಾಗಿ ಬಂದರೂ ಮನೆಗೆಲಸ ಮಾಡದಿದ್ದರೆ ವಿಧಿಯಿಲ್ಲ. ಮರುದಿನ ಬೆಳಗ್ಗೆ ಮತ್ತದೇ ಓಟ, ಧಾವಂತ. ಉದ್ಯೋಗಸ್ಥ ಮಹಿಳೆಯರು ಸಮಯದ ಅಭಾವದಿಂದಾಗಿ, ಬಸ್ಸಿನಲ್ಲಿ ಹೋಗುತ್ತಲೋ, ಆಟೋದಲ್ಲಿ ಹೋಗುತ್ತಲೋ ತಿಂಡಿ ತಿನ್ನುವುದು ನಗರಗಳಲ್ಲಿ ಮಾಮೂಲು ದೃಶ್ಯ. ಇನ್ನು, ವರ್ಕ್ ಫ್ರಮ್ ಹೋಮ್ ಮಾಡುವ ಎಷ್ಟೋ ಮಹಿಳೆಯರು, ಮನೆಗೆಲಸವನ್ನೂ ಸರಿದೂಗಿಸುತ್ತ 10- 12 ತಾಸು ದುಡಿಯುವುದು ಸಹ ಮಾಮೂಲೇ.

ನಟ-ರಾಜಕಾರಣಿ ಕಮಲ್ ಹಾಸನ್ ಅವರು 2020ರಲ್ಲಿ ತಮಿಳುನಾಡು ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಪಕ್ಷದ ಪ್ರಣಾಳಿಕೆಯಲ್ಲಿ, ಗೃಹಿಣಿಯರಿಗೆ ವೇತನ ನೀಡುವ ಪ್ರಸ್ತಾಪ ಮಾಡಿದ್ದರು. ಅವರ ಪಕ್ಷ ಸೋತಿದ್ದರಿಂದಾಗಿ ಈ ವಿಷಯ ಹೆಚ್ಚು ಚರ್ಚೆಯಾಗಲಿಲ್ಲವೆನ್ನಿ. ಆದರೆ, ಗೃಹಿಣಿಗೂ ವೇತನ ನೀಡಬೇಕು ಅಥವಾ ಆಕೆಯ ಕೆಲಸದ ಮೌಲ್ಯವೆಷ್ಟು ಎಂಬುದರ ಲೆಕ್ಕವಾಗಬೇಕು ಎಂಬ ಚರ್ಚೆ ಹಳೆಯದೇ. ಆದರೆ ಈ ವಿಷಯ ಒಂದು ರ್ತಾಕ ಅಂತ್ಯಕ್ಕೆ ಬಂದಿಲ್ಲ. ಅಂದಹಾಗೆ, ಕಳೆದ ವರ್ಷ ಪ್ರಕರಣವೊಂದರ ವಿಚಾರಣೆ ಹೊತ್ತಿಗೆ, ಸವೋಚ್ಚ ನ್ಯಾಯಾಲಯ ಹೇಳಿದ್ದು ಗಮನಾರ್ಹ. ಉದ್ಯೋಗಸ್ಥ ಗಂಡನ ಹಾಗೆ ಗೃಹಿಣಿಯ ಮನೆ ಕೆಲಸವನ್ನೂ ಸಮಾನವಾಗಿ ಪರಿಗಣಿಸಬೇಕು. ಗೃಹಿಣಿ ಮನೆಯ ಆರ್ಥಿಕತೆಗೆ ಕೊಡುಗೆ ನೀಡುವ ಮೂಲಕ ದೇಶದ ಆರ್ಥಿಕತೆಗೂ ತನ್ನದೇ ರೀತಿಯಲ್ಲಿ ಕೊಡುಗೆ ನೀಡುತ್ತಾಳೆ ಎಂದು ಕೋರ್ಟ್ ಹೇಳಿತ್ತು. ಗೃಹಿಣಿ ದಿನಕ್ಕೆ ಸರಾಸರಿ ಏಳು ತಾಸು ಮನೆಗೆಲಸ ಹಾಗೂ ಇತರರ ಕಾಳಜಿ ಮತ್ತಿತರ ಕೆಲಸಗಳನ್ನು ಮಾಡುತ್ತಾಳೆ ಎಂದು ರಾಷ್ಟ್ರೀಯ ಸಂಖ್ಯಾ ಕಚೇರಿಯು (ಎನ್​ಎಸ್​ಒ) ತನ್ನ ಒಂದು ವರದಿಯಲ್ಲಿ ಉಲ್ಲೇಖಿಸಿತ್ತು. ಇಷ್ಟೆಲ್ಲ ಇದ್ದರೂ, ಈಗಲೂ ಕೆಲವೆಡೆ, ಗೃಹಿಣಿ ಪೇಟೆಗೋ ಅಥವಾ ಮತ್ತೆಲ್ಲಿಗೋ ಹೊರಟರೆ ಗಂಡ ಅಥವಾ ಮಕ್ಕಳ ಬಳಿ ಹಣ ಕೇಳಿ ಪಡೆಯಬೇಕು!

ದಿನಕ್ಕೆ ಎಷ್ಟು ತಾಸು ಕೆಲಸ ಮಾಡಬೇಕು ಅಥವಾ ಮಾಡಬಾರದು ಎಂಬುದು ಆಯಾ ವ್ಯಕ್ತಿಯ ಧೋರಣೆ, ಶಕ್ತಿಸಾಮರ್ಥ್ಯ, ಕ್ಷಮತೆಯನ್ನು ಆಧರಿಸಿರುವಂಥದ್ದು. ಕೆಲವರಿಗೆ ಇಡೀ ದಿನ, ವಾರವಿಡೀ ಕೆಲಸ ಮಾಡಿದರೂ ಸುಸ್ತು ಸನಿಹ ಸುಳಿಯದು, ಮುಖದಲ್ಲಿ ನಗು ಮಾಸದು. ಕೆಲವರು ಸ್ವಲ್ಪ ಹೊತ್ತಿಗೇ ಉಸ್ಸಪ್ಪಾ ಎನ್ನುತ್ತಾರೆ, ಮುಖ ಬಸವಳಿಯುತ್ತದೆ. ಹೀಗೆಂದೇ, ವರ್ಷಗಟ್ಟಲೆ ರಜೆ ಪಡೆಯದೆಯೇ ಕೆಲಸ ಮಾಡಿದವರ ಸುದ್ದಿ ಮಾಧ್ಯಮಗಳಲ್ಲಿ ಬಂದಾಗ ಇಂಥವರು ಅಚ್ಚರಿಯಿಂದ ಕಣ್ಣರಳಿಸುತ್ತಾರೆ.

ಕೊನೇ ಮಾತು: ತನಗೆ ಕೆಲಸಕ್ಕೆ ತಕ್ಕ ವೇತನ ಹಾಗೂ OT ನೀಡಬೇಕು ಎಂದು ಮನೆಯ ಗೃಹಿಣಿಯೇನಾದರೂ ಪಟ್ಟು ಹಿಡಿದರೆ, ಯಜಮಾನ OT ಮಾಡಿ ಕುಟುಂಬದ ಬಜೆಟ್ ಹೊಂದಿಸಬೇಕಾಗಬಹುದು!

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net