

| ಕೋಟಮಾರನಹಳ್ಳಿ ತಿಮ್ಮೇಗೌಡ ಶಿಕ್ಷಕರು, ಬೆಂಗಳೂರು
ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸರಳವಾಗಿ ಕನ್ನಡಿಗರಿಗೆ ತಲುಪಿಸುವ ಪೋರ್ಟಲ್ ಇಜ್ಞಾನ. ಈ ಪೋರ್ಟಲ್ಗೆ (www.ejnana.com) ಈಗ 15ರ ಸಂಭ್ರಮ. ವಿಜ್ಞಾನ, ತಂತ್ರಜ್ಞಾನ, ಕನ್ನಡ ಮತ್ತು ಸಂಸ್ಕೃತಿ ಕುರಿತ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿರುವ ಬೆಂಗಳೂರಿನ ಸ್ವಯಂಸೇವಾ ಸಂಸ್ಥೆ ಇಜ್ಞಾನ ಟ್ರಸ್ಟ್ ಸದ್ಯ ಈ ಜಾಲತಾಣವನ್ನು ನಿರ್ವಹಿಸುತ್ತಿದೆ. ಟಿ. ಜಿ. ಶ್ರೀನಿಧಿ ಅವರ ವೈಯಕ್ತಿಕ ಪ್ರಯತ್ನವಾಗಿ 2007ರಲ್ಲಿ ಆರಂಭವಾದ ಈ ತಾಣ ಲೇಖನ, ಸಂದರ್ಶನ, ಸುದ್ದಿ, ವೀಡಿಯೋ, ಗ್ಯಾಜೆಟ್ ಹಾಗೂ ಪುಸ್ತಕ ಪರಿಚಯಗಳನ್ನು ನಿರಂತರವಾಗಿ ಪ್ರಕಟಿಸುತ್ತಿದೆ.
2017ರ ಇಂಡಿಯನ್ ಬ್ಲಾಗರ್ ಅವಾರ್ಡ್ಸ್ನಲ್ಲಿ ಅತ್ಯುತ್ತಮ ಕನ್ನಡ ಬ್ಲಾಗ್ ಎಂಬ ಗೌರವ ಇಜ್ಞಾನದ ಗರಿಮೆ ಆಗಿತ್ತು. ವಿಜ್ಞಾನ ಮತ್ತು ತಂತ್ರಜ್ಞಾನದ ಒಲವುಳ್ಳ ವಿದ್ಯಾರ್ಥಿ ಯುವ ಜನರು ಈ ತಾಣದ ನಿಯತ ಓದುಗರು. ಗ್ಯಾಜೆಟ್ ವಿಜ್ಞಾನ, ವೈವಿಧ್ಯ, ಟೆಕ್ಲೋಕ, ಪ್ರಶ್ನೆ-ಉತ್ತರ, ವಿಜ್ಞಾನ ಪರಿಸರ, ವಿಶೇಷ ಸರಣಿ ಮುಂತಾದ ಕೆಟಗರಿಗಳಲ್ಲಿ ನಾನಾ ರೀತಿಯ ಕುತೂಹಲಕಾರಿ ವಿಜ್ಞಾನ, ತಂತ್ರಜ್ಞಾನ, ಆರೋಗ್ಯ ವಿಚಾರಗಳನ್ನು ಕನ್ನಡಿಗರಿಗೆ ಅರ್ಥವಾಗುವಂತೆ ಪ್ರಸ್ತುತಪಡಿಸಲಾಗುತ್ತಿದೆ. ವಿಜ್ಞಾನ ಮತ್ತು ತಂತ್ರಜ್ಞಾನಕ್ಕೆ ಸಂಬಂಧಿಸಿದ ವಿಚಾರಗಳು ಕನ್ನಡದಲ್ಲಿ ಒಂದೆಡೆ ಕನ್ನಡಿಗರಿಗೆ ಲಭ್ಯವಾಗಬೇಕು ಎಂದು ಆರಂಭಿಸಿದ ತಾಣ ಇದು. ವಿದ್ಯಾರ್ಥಿ ಯುವಜನರಿಗೆ ಇದು ಬಹಳಷ್ಟು ಪ್ರಯೋಜನಕಾರಿ ಆಗುತ್ತಿದೆ ಎಂದು ಖುಷಿ ವ್ಯಕ್ತಪಡಿಸುತ್ತಾರೆ ಟಿ.ಜಿ.ಶ್ರೀನಿಧಿ. ಸಮಕಾಲೀನ ವಿಜ್ಞಾನ-ತಂತ್ರಜ್ಞಾನ ವಿಷಯಗಳ ಲೇಖನಗಳು, ಪ್ರಶ್ನೋತ್ತರಗಳು ಈ ತಾಣದಲ್ಲಿ ನಿಯತವಾಗಿ ಅಪ್ಡೇಟ್ ಆಗುತ್ತಿದ್ದು, ವಿದ್ಯಾರ್ಥಿ ಯುವ ಜನರಿಗೆ ಹೆಚ್ಚಿನ ತಿಳಿವಳಿಕೆ, ಮಾಹಿತಿಯನ್ನು ಒದಗಿಸುತ್ತಿದೆ. ಇತ್ತೀಚಿನ ಲೇಖನ ಕೃತಕ ಬುದ್ಧಿಮತ್ತೆ ಮತ್ತು ಕಾನೂನು ಎಂಬ ಶೀರ್ಷಿಕೆಯದ್ದು. ಹಲವು ಲೇಖನಗಳು ನಾಡಿನ ವಿವಿಧ ದೈನಿಕ, ನಿಯತಕಾಲಿಕಗಳಲ್ಲಿ ಪ್ರಕಟವಾದವು.
ಹೀಗೆ ಒಂದೆಡೆ ವಿಜ್ಞಾನ ತಂತ್ರಜ್ಞಾನ ಲೇಖನಗಳು ಲಭ್ಯವಾಗುವ ವೇದಿಕೆ ಇದು. ಎಲ್ಲದಕ್ಕೂ ಮಿಗಲಾಗಿ ಈ ತಾಣ ಲಾಭೋದ್ದೇಶ ರಹಿತವಾಗಿ ಲೇಖನಗಳನ್ನು ಮತ್ತು ಮಾಹಿತಿಗಳನ್ನು ಒದಗಿಸುತ್ತ ಬಂದಿದೆ. ವಿಜ್ಞಾನ ಪ್ರಚಾರಕ್ಕೆ ಕೊಡುಗೆ ನೀಡಿದ ಮೈಸೂರು ವಿಶ್ವವಿದ್ಯಾಲಯದ ’ಪ್ರಚಾರ ಪುಸ್ತಕಮಾಲೆ’, ವಿಜ್ಞಾನಯುಗದ ’ಕಲಾವಿಜ್ಞಾನಿ’ ಪೊ›. ಜಿ. ವೆಂಕಟಸುಬ್ಬಯ್ಯ, ಕಲಬುರಗಿಯ ಡಾ. ಪಿ. ಎಸ್. ಶಂಕರ ಪ್ರತಿಷ್ಠಾನದ ವಿಶಿಷ್ಟ ಪ್ರಯೋಗ - ದಿನದರ್ಶಿಕೆಯಲ್ಲೂ ವಿಜ್ಞಾನ ಸಂವಹನ ಮುಂತಾದ ಲೇಖನಗಳು ಗಮನಸೆಳೆಯುತ್ತವೆ. ನೂರು ವರ್ಷಗಳಿಗೂ ಮುನ್ನವೇ ವಿಜ್ಞಾನದ ಹಲವಾರು ಪಠ್ಯಪುಸ್ತಕಗಳು ಕನ್ನಡದಲ್ಲಿ ಪ್ರಕಟವಾಗಿದ್ದವು. ಸುಮ್ಮನೆ ಪ್ರಕಟವಾಗಿದ್ದಷ್ಟೇ ಅಲ್ಲ, ಇಂದಿನ ಪಠ್ಯಪುಸ್ತಕಗಳು ಹೇಗಿರಬಹುದು ಎನ್ನುವುದಕ್ಕೂ ಅವು ಮಾದರಿಯಾಗಿದ್ದವು ಎಂಬುದನ್ನು ವಿವರಿಸುವ ಕನ್ನಡ ವಿಜ್ಞಾನ ಪಠ್ಯಪುಸ್ತಕಗಳ ಶತಮಾನದ ಇತಿಹಾಸ ಕುರಿತ ಲೇಖನ ಗಮನಾರ್ಹ.