ಕಾಯಕದಲ್ಲುಂಟು ದೈವ ಸ್ಮರಣೆ: ಮನೋಲ್ಲಾಸ

Manollasa (4)
Published on
| ದೀಪಶ್ರೀ ಎಸ್. ಕೂಡ್ಲಿಗಿ 
ಅಂದೊಮ್ಮೆ ನಾರದರು ವಿಷ್ಣುವನ್ನು ಭೇಟಿಯಾದ ಸಂದರ್ಭ. ಭಗವಂತ ವಿಷ್ಣು ಹೇಳಿದ, ನಾರದ ನೀನು ನನಗೆ ಪ್ರೀತಿಯ ಭಕ್ತ. ನಾರದ ಅತಿಯಾದ ಆತ್ಮವಿಶ್ವಾಸದಿಂದ, ಹಾಗಾದರೆ ನಾನೊಬ್ಬನೇ ನಿನ್ನ ಶ್ರೇಷ್ಠ ಭಕ್ತ ಎಂದು ಮರು ನುಡಿದ. ವಿಷ್ಣು ನಗುತ್ತಾ ಇಲ್ಲ ಎಂದ. ಹಾಗಿದ್ದರೆ ನನಗಿಂತ ಶ್ರೇಷ್ಠ ಭಕ್ತ ಇದ್ದಾನೆಯೇ? ನನಗೆ ತಿಳಿಸಿ. ನಾನು ಓರೆಗೆ ಹಚ್ಚುತ್ತೇನೆ ಎಂದ ನಾರದ.

ಮುಂಜಾವು ಆವರಿಸಿತ್ತು, ನಾರದನನ್ನು ಶ್ರೀ ವಿಷ್ಣು ಒಂದು ಗುಡಿಸಲಿಗೆ ಕರೆ ತಂದ. ಆಗ ತಾನೇ ನಿದ್ದೆಯಿಂದೆದ್ದ ರೈತ ಎರಡು ಕೈ ಜೋಡಿಸಿ ನಾರಾಯಣ ಎಂದು ಒಂದು ಬಾರಿ ಉಚ್ಚರಿಸಿದ. ದಿನಪೂರ್ತಿ ಈ ರೈತ ಭಕ್ತನನ್ನು ಅವಲೋಕಿಸಿ ನನ್ನನ್ನು ಸಂಧಿಸು ಎಂದು ಹೇಳಿ ವಿಷ್ಣು ಹೊರಟ. ಹೊಲಕ್ಕೆ ಹೊರಟ ರೈತನನ್ನು ಬೆಂಬತ್ತಿದ ನಾರದ. ರೈತ ದಿನವೆಲ್ಲ ಬಿಸಿಲಿನಲ್ಲಿ ಹೊಲವನ್ನು ಉಳುಮೆ ಮಾಡಿದರೂ, ನಾರಾಯಣ ಎಂದು ಜಪಿಸಲಿಲ್ಲ ಮಧ್ಯಾಹ್ನದ ಊಟಕ್ಕೆ ಬಿಡುವು ಮಾಡಿಕೊಂಡ ರೈತ, ನಾರಾಯಣ ಎಂದು ಜಪಿಸಿ ಕೆಲಸ ಮುಂದುವರಿಸಿದ.

ಘಟನೆ ನಂತರ ನಾರದ ವಿಷ್ಣುವನ್ನು ಭೇಟಿ ಮಾಡಿದ. ನಾರದ ನಿನಗೀಗ ತಿಳಿಯಿತಾ, ಆ ರೈತ ನನ್ನ ಶ್ರೇಷ್ಠ ಭಕ್ತ ಎಂದು. ನಾರದನಿಗಿದು ಬೇಸರದ ಸಂಗತಿ. ಪರಮಾತ್ಮ, ರೈತ ದಿನವೆಲ್ಲ ಕಾಯಕ ಮಾಡಿ ನಿನ್ನ ನಾಮಸ್ಮರಣೆಯನ್ನು ಬೆಳಗ್ಗೆ, ಮಧ್ಯಾಹ್ನ ಹಾಗೂ ರಾತ್ರಿ ಕೇವಲ ಮೂರು ಬಾರಿ ಪಠಿಸಿದ. ನಾನು ನಿನ್ನ ನಾಮಸ್ಮರಣೆಯನ್ನು ಅನುಕ್ಷಣ, ಅನುದಿನ ಮಾಡುತ್ತೇನೆ. ನಾನು ನಿನ್ನ ಶ್ರೇಷ್ಠ ಭಕ್ತನಲ್ಲವೇ? ಪ್ರಭು ಎಂದ.

ನಿನ್ನ ಪ್ರಶ್ನೆಗೆ ಉತ್ತರಿಸುವ ಮುನ್ನ ಬಾಯಾರಿಕೆಯಾಗಿದೆ, ಕುಡಿಯಲು ನೀರು ತರುವೆಯಾ? ಇದೋ ಈ ಬೆಟ್ಟದ ಮೇಲೊಂದು ಸರೋವರವಿದ್ದು, ಅಲ್ಲಿಗೆ ತೆರಳಿ ಒಂದು ಮಡಕೆಯಲ್ಲಿ ನೀರನ್ನು ತಾ. ಆದರೆ, ಮಡಕೆಯಲ್ಲಿನ ಒಂದು ಹನಿ ನೀರೂ ಭೂಮಿಗೆ ಬೀಳುವಂತಿಲ್ಲ. ತನ್ನೊಡೆಯನ ಆಜ್ಞೆಯನ್ನು ಶಿರಸಾವಹಿಸಿ ಪಾಲಿಸಿದ ನಾರದ. ಬೆಟ್ಟಕ್ಕೆ ತೆರಳಿ ಮಡಕೆಯಲ್ಲಿ ನೀರನ್ನು ತುಂಬಿ ತಲೆಯ ಮೇಲೆ ಹೊತ್ತು ನಾರಾಯಣ, ನಾರಾಯಣ ಎಂದು ಜಪಿಸಿದ . ನಾಮಸ್ಮರಣೆಯನ್ನು ಕ್ಷಣಕಾಲ ನಿಲ್ಲಿಸಿ, ಹನಿ ನೀರನ್ನು ಚೆಲುವಂತಿಲ್ಲ ಎಂಬ ವಿಷ್ಣುವಿನ ಮಾತನ್ನು ನೆನಪಿಸಿಕೊಂಡು, ನಿಧಾನವಾಗಿ ಮುಂದಡಿಯಿಡುತ್ತಾ ವಿಷ್ಣುವನ್ನು ತಲುಪಿದ.

ಸ್ವಾಮಿ ಒಂದು ಹನಿ ನೀರನ್ನೂ ಚೆಲ್ಲಲಿಲ್ಲ ಎಂದ ನಾರದ. ಒಳ್ಳೆಯದು ನಾರದ. ಈಗ ನನ್ನ ನಾಮ ಎಷ್ಟು ಬಾರಿ ಪಠಿಸಿದೆ ಎಂದ ವಿಷ್ಣು. ಪ್ರಭು, ನನ್ನ ಗಮನ ನೀರಿನ ಮೇಲೆ ಇತ್ತು ಕೇವಲ ಎರಡು ಬಾರಿ ಪಠಿಸಿದೆ ಎಂದ ನಾರದ.

ವಿಷ್ಣು ಹೇಳಿದ, ರೈತ ದಿನಕ್ಕೆ ಮೂರು ಬಾರಿ ಹಾಗೂ ನೀನು ದಿನಕ್ಕೆ ಎರಡು ಬಾರಿ ನನ್ನ ನಾಮ ಜಪಿಸಿರುವೆ .ಈಗ ನೀನೇ ಹೇಳು ನಿನಗಿಂತ ರೈತ ತಾನೇ ಶ್ರೇಷ್ಠ ಎಂದಾಗ , ನಾರದ ವಿಷ್ಣುವಿನ ಪಾದಕ್ಕೆರಗಿದನು. ಕಾಯಕವೇ ದೇವರು. ವೃತ್ತಿಯಲ್ಲಿ ಶ್ರದ್ಧೆ ಭಕ್ತಿ ತೋರಿದರೆ ದೈವ ಸ್ಮರಣೆ ಮಾಡಿದಂತೆಯೇ ಅರ್ಥ. ಅದಕ್ಕೆ ಬಸವಣ್ಣ ಹೇಳಿರುವುದು, ಕಾಯಕವೇ ಕೈಲಾಸ . ಕಾಯಕವನ್ನು ಸದ್ಭಕ್ತಿಯಿಂದ ಮಾಡಿ ದೇವರನ್ನು ಒಮ್ಮೆ ಸ್ಮರಿಸಿದರೆ ಸಾಕು ದೇವರ ಸಂಪ್ರೀತನಾಗುತ್ತಾನೆ.

(ಲೇಖಕರು ಹವ್ಯಾಸಿ ಬರಹಗಾರ್ತಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net