ಮನೋಲ್ಲಾಸ| ಭರವಸೆಯ ಸೋಪಾನ

manollasa 1
Published on

ಸ್ವಾತಿ ಹೆಗಡೆ

ಆ ವ್ಯಕ್ತಿ ಇಂಜಿನಿಯರಿಂಗ್ ಮುಗಿಸಿ ಕೆಲಸ ಸಿಗದೆ ನಿರಾಸೆಯಿಂದ ಮನೆಗೆ ಹಿಂತಿರುಗಿದ್ದ. ಈ ಬೇಸರದಿಂದ ಏನೂ ಮಾಡದೆ ಯಾವಾಗಲೂ ಮನೆಯಲ್ಲಿ ಹಿತ್ತಲಬದಿ ಮುಖಮಾಡಿ ಕುಳಿತುಕೊಳ್ಳುತ್ತಿದ್ದ. ಯುವಕನ ತಾಯಿ ಒಂದು ಮಳೆಗಾಲದ ಸಂಜೆ, ಮನೆಯ ಬದಿಯ ಮಣ್ಣಿನ ಕಿಟಕಿಯ ಮೇಲಿದ್ದ ಅವರೆಬೀಜದ ಪೊಟ್ಟಣದಿಂದ ಬೀಜ ತೆಗೆದು ಹಿತ್ತಲಲ್ಲಿ ಬಿತ್ತಿದಳು. ಆದರೆ ಆಕೆಯ ಕಣ್ತಪ್ಪಿ ಕೆಲ ಬೀಜಗಳು ಕಿಟಕಿಯ ಸಂದಿಯಲ್ಲಿಯೇ ಉಳಿದಿದ್ದವು. ಈ ಅವರೆ ಪ್ರವರವನ್ನು ಕುತೂಹಲದಿಂದ ವೀಕ್ಷಿಸುವುದನ್ನೇ ಆತ ನಿತ್ಯದ ಕೆಲಸವಾಗಿಸಿಕೊಂಡ.

ಹಿತ್ತಲಲ್ಲಿ ಬಿತ್ತಿದ ಬೀಜಗಳು ಒಳ್ಳೆಯ ಆರೈಕೆಯ ಫಲವಾಗಿ ಕೆಲವೇ ದಿನಗಳಲ್ಲಿ ಮೊಳಕೆಯೊಡೆದು ಸಸಿಯಾದವು. ಅವಕ್ಕೆ ನೀರು, ಸೂರ್ಯನ ಕಿರಣ ಎಲ್ಲವೂ ಸಿಗುತ್ತಿದ್ದುದರಿಂದ ಚೆನ್ನಾಗಿ ಬೆಳೆಯತೊಡಗಿದವು. ಇತ್ತ, ಕಿಟಕಿಯ ಮೂಲೆಯಲ್ಲಿ ಇದ್ದ ಬೀಜಗಳು ಮನೆಯ ಮಾಡಿನಿಂದ ಬೀಳುವಾಗ ಸಿಡಿದ ಮಳೆಹನಿಗಳಿಂದ ತೇವಗೊಂಡು ಮೊಳಕೆಯೊಡೆದಿದ್ದವು. ಆದರೆ ಅವಕ್ಕೆ ಸೂರ್ಯನ ಕಿರಣವಿಲ್ಲದೇ ಬೆಳೆಯಲು ಒದ್ದಾಡುತ್ತಿದ್ದವು. ಆದರೆ ಅದು ಕೆಲ ದಿನ ಮಾತ್ರ. ತಾವೂ ಬೆಳೆಯಬೇಕೆಂಬ ಹೆಬ್ಬಯಕೆ ಅವನ್ನು ಆವರಿಸಿತು. ಮೊಳಕೆಯನ್ನು ಹೇಗೋ ಕಿಟಕಿಯ ಸಂದಿಯಲ್ಲಿ ನೂಕಿಸಿ ಸೂರ್ಯನಿರುವ ಕಡೆಗೆ ಮುಖಮಾಡಿದವು; ಬೆಳಕು ಬೀಳುತ್ತಿದ್ದಂತೆ ಅವುಗಳ ಬದುಕು ಪ್ರಕಾಶಮಾನವಾಯಿತು. ಅವು ತಮಗೆ ಬೇಕಾದುದನ್ನು ತಾವೇ ಅರಸಿದವು; ಕ್ರಮೇಣ ಸಸಿಯಾಗಿ ನಿಂತವು. ಈ ಪ್ರಕ್ರಿಯೆಯನ್ನು ನಿರಂತರವಾಗಿ ಗಮನಿಸುತ್ತಿದ್ದ ಆ ವ್ಯಕ್ತಿ ಇದರಿಂದ ದೊಡ್ಡ ಜೀವನಪಾಠವನ್ನು ಕಲಿತ.

ಆಗ ಅವನಿಗೆ ತನ್ನ ತಪ್ಪಿನ ಅರಿವಾಯಿತು. ‘ನನ್ನ ಸ್ನೇಹಿತರು ಈಗಾಗಲೇ ಕೆಲಸದಲ್ಲಿದ್ದರೇನಂತೆ... ಅವರಂತೆ ಒಳ್ಳೆಯ ಜೀವನ ಕಟ್ಟಿಕೊಳ್ಳಲು ನನ್ನಿಂದಲೂ ಸಾಧ್ಯವಿದೆ. ಆದರೆ ಜೀವನದಲ್ಲಿ ನನಗೆ ಏನು ಬೇಕು ಎನ್ನುವುದನ್ನು ನಾನೇ ಹುಡುಕಿಕೊಂಡು ಹೋಗಬೇಕು. ಅವರೆಬೀಜ ತಾನಾಗಿ ಬೆಳಕನ್ನು ಅರಸಿರುವಾಗ ನನಗೇಕೆ ಸಾಧ್ಯವಿಲ್ಲ?’ ಎಂದು ನಿಶ್ಚಯಿಸಿಕೊಂಡ. ಈ ಸತ್ಯ ತಿಳಿದುಕೊಂಡು, ಆತ್ಮವಿಶ್ವಾಸದೊಂದಿಗೆ ಜೀವನದ ಗುರಿಯಿಟ್ಟುಕೊಂಡು ತನ್ನದೇ ದಾರಿಯಲ್ಲಿ ಮುಂದುವರಿದು ಯಶಸ್ವಿ ವ್ಯಕ್ತಿಯೆಂದು ಮನ್ನಣೆಗಳಿಸಿದ.

ಬಹುತೇಕರ ಜೀವನದಲ್ಲೂ ಇಷ್ಟೆ. ಕೆಲವರಿಗೆ ಮಾತ್ರ ಎಲ್ಲ ಅನುಕೂಲಗಳೂ ಸುಲಭದಲ್ಲಿಯೇ ದೊರೆತು ಅಲ್ಪ ಸಮಯದಲ್ಲೇ ಸಸಿಯಾಗಿ ಬೆಳೆದುಬಿಡುತ್ತಾರೆ. ಹಲವರಿಗೆ ಎಲ್ಲವನ್ನೂ ತಾವೇ ಹುಡುಕಿಕೊಂಡು, ತಮಗೆ ಬೇಕಾದುದನ್ನು ಪಡೆಯಬೇಕಾದ ಪರಿಸ್ಥಿತಿ. ಕೆಲವರು ಬೇಗ ದಡ ಸೇರುತ್ತಾರೆ. ಇನ್ನೂ ಕೆಲವರು ದಡ ಸೇರಲು ಹೆಣಗಾಡಬೇಕಾಗುತ್ತದೆ. ದಡಮುಟ್ಟುವುದು ತಡವಾಯಿತೆಂದರೆ ಜೀವನದಲ್ಲಿ ಸೋತಂತಲ್ಲ. ದೊಡ್ಡ ಸಾಧನೆ ಮಾಡಿದವರನೇಕರು ಕೂಡ ಕಷ್ಟಪರಂಪರೆ ಹಾದು ಬಂದವರೇ; ಆಗೀಗ ನಿರಾಸೆ ಅನುಭವಿಸಿದವರೇ. ದಾಖಲೆಗೈದ ಓಟಗಾರ, ಆವಿಷ್ಕಾರ ಮಾಡಿದ ವಿಜ್ಞಾನಿ... ಇವರದೆಲ್ಲ ಮುಳ್ಳಿನಹಾದಿಯೇ. ಆತ್ಮವಿಶ್ವಾಸದ ಜೊತೆಗೆ ಛಲಬಿಡದ ಪ್ರಯತ್ನ ಮತ್ತು ಅವಕಾಶವನ್ನು ಏಣಿಯಾಗಿಸಿಕೊಳ್ಳುವ ಜಾಣ್ಮೆ ನಮ್ಮನ್ನು ಕತ್ತಲೆಯಿಂದ ಬೆಳಕಿನೆಡೆಗೆ ಕೊಂಡೊಯ್ಯುತ್ತದೆ. ಈ ಭರವಸೆಯ ಹುಡುಕಾಟವೇ ಜೀವನ.

(ಲೇಖಕಿ ಕಾನೂನು ವಿದ್ಯಾರ್ಥಿನಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net