

ಶಾಲೆ ಫಲಿತಾಂಶದ ಪಟ್ಟಿಯಲ್ಲಿ ಮಗ ಗಗನ್ನ ಹೆಸರು ಆರನೆಯ ಸ್ಥಾನದಲ್ಲಿ ಬಂದಿದ್ದು ನೋಡಿ ಕೆಂಡಾಮಂಡಲವಾದ ಹರಿಣಿ ಅವನನ್ನು ಕೈ ಹಿಡಿದು ದರದರನೆ ಎಳೆಯುತ್ತ ಪ್ರಾಂಶುಪಾಲರ ಕೊಠಡಿಯತ್ತ ಹೊರಟಳು. ಒಂದು ಸಲವಾದರೂ ಮಗ ಮೊದಲನೆಯ ಸ್ಥಾನದಲ್ಲಿ ಬರಬೇಕೆಂದು ನಿತ್ಯ ಚಡಪಡಿಸುತ್ತಿದ್ದವಳು ಇಂದಿನ ಫೈನಲ್ ಫಲಿತಾಂಶದಲ್ಲಿಯೂ ಅವನು ಆರನೆಯ ಸ್ಥಾನ ಬಂದಿದ್ದಕ್ಕೆ ಅವಳ ಕೋಪ ನೆತ್ತಿಗೇರಿತ್ತು.
‘ಬನ್ನಿ ಅಮ್ಮ, ಏನು ಬೇಕಾಗಿತ್ತು? ನಿಮ್ಮ ಮಗ ಆರನೆಯ ಸ್ಥಾನ ಬಂದಿದ್ದಕ್ಕೆ ನಿಮಗೂ, ಮಗನಿಗೂ ಅಭಿನಂದನೆಗಳು’ ಎಂದು ನಯವಾಗಿಯೇ ಪ್ರಾಂಶುಪಾಲರು ಅಭಿನಂದಿಸಿದರು.
‘ಅಲ್ಲ, ಸರ್ ಶಾಲೆಗೆ ಸೇರಿಸಿದಾಗಿನಿಂದಲೂ ನೋಡುತ್ತಿದ್ದೇನೆ. ಯಾವಾಗಲೂ ಇವನ ಕ್ಲಾಸ್ನಲ್ಲಿ ಭುವನ್ ಮೊದಲನೆಯ ಸ್ಥಾನದಲ್ಲಿಯೇ ಬರುತ್ತಾನೆ. ಒಂದು ಸಲವೂ ನನ್ನ ಮಗ ಮೊದಲನೆಯ ಸ್ಥಾನಕ್ಕೆ ಬರಲೇ ಇಲ್ಲ, ಅಲ್ಲಿಗೆ ಭುವನ್ಗೆ ಮಾಡುವ ಪಾಠ ನನ್ನ ಮಗನಿಗೆ ಮಾಡುತ್ತಿಲ್ಲ ಎಂದಾಯಿತು, ಮಕ್ಕಳಲ್ಲಿ ಯಾಕೆ ಇಷ್ಟೊಂದು ತಾರತಮ್ಯ ಮಾಡುತ್ತೀರಿ? ಒಂದು ಸಲವಾದರೂ ಮೊದಲನೆಯ ಸ್ಥಾನಕ್ಕೆ ಬರುವ ಯೋಗ್ಯತೆಯೇ ನನ್ನ ಮಗನಿಗಿಲ್ಲವೇ? ಅಥವಾ ನಿಮ್ಮ ಶಿಕ್ಷಕರಿಗೆ ಇವನನ್ನು ಕಂಡರೆ ದ್ವೇಷವೋ?’ ಎಂದು ಒಂದೇ ಸಮನೇ ಬಡಬಡಿಸಿದಳು ಹರಿಣಿ.
‘ಇದರಲ್ಲಿ ಶಿಕ್ಷಕರದ್ದೇನೂ ತಪ್ಪಿಲ್ಲವಲ್ಲಮ್ಮ, ಎಲ್ಲರಿಗೂ ಒಂದೇ ತೆರನಾಗಿ ಪಾಠಮಾಡುತ್ತಾರೆ. ಅವರವರ ಕಲಿಕಾ ಸಾಮರ್ಥ್ಯಕ್ಕೆ ಅನುಗುಣವಾಗಿ ವಿದ್ಯೆಯನ್ನು ಅವರವರು ಸಂಪಾದಿಸುತ್ತಾರೆ, ಅದರಲ್ಲೇನಿದೆ ವಿಶೇಷ?’ ಪ್ರಾಂಶುಪಾಲರು ನಗುತ್ತಲೇ ಕೇಳಿದರು. ಮುಂದುವರಿದು, ‘ನೋಡಿಯಮ್ಮ, ಸೂರ್ಯ ಪ್ರಖರವಾದ ಕಿರಣಗಳ ಮೂಲಕ ಬೆಳಕನ್ನು ಈ ಭೂಮಿಯ ಮೇಲಿನ ಎಲ್ಲ ವಸ್ತುಗಳಿಗೆ ಸಮಾನವಾಗಿ ಹಾಯಿಸುತ್ತಾನೆ. ಆದರೆ ವ್ಯತ್ಯಾಸ ಗಮನಿಸಿ, ಮಣ್ಣಿನ ಮೇಲೆ ಕಿರಣ ಬಿದ್ದರೆ ಮಣ್ಣು ಸ್ವಲ್ಪ ಬಿಸಿಯಾಗುತ್ತದೆ ಅಷ್ಟೇ, ಆದರೆ ಅದೇ ಕಿರಣ ಕಲ್ಲಿನ ಮೇಲೆ ಬಿದ್ದರೆ? ಮುಟ್ಟಲಾರದಷ್ಟು ಬಿಸಿಯಾಗುತ್ತದೆ. ಅಕಸ್ಮಾತ್ ಆ ಕಿರಣಗಳು ಕನ್ನಡಿಯ ಗಾಜಿನ ಮೇಲೆ ಬಿದ್ದರೆ ಎಂತಹ ಪ್ರತಿಫಲನವಾಗುತ್ತದಲ್ಲವೇ? ಇನ್ನು ವಜ್ರದ ಮೇಲೆ ಬಿದ್ದರಂತೂ ಅಲ್ಲಿ ನಡೆಯುವ ಪವಾಡವೇ ಬೇರೆ. ಕಿರಣಗಳಲ್ಲಿರುವ ಶಕ್ತಿ ಸಮಾನವಾಗಿದ್ದರೂ ಸ್ವೀಕರಿಸುವ, ಪ್ರತಿಕ್ರಿಯೆ ನೀಡುವ ವಸ್ತುಗಳು ಭಿನ್ನವಲ್ಲವೇ? ಅವುಗಳಿಗಿರುವ ಸಾಮರ್ಥ್ಯಕ್ಕೆ ಅನುಗುಣವಾಗಿ ಅವು ಸ್ವೀಕರಿಸುತ್ತವೆ.
ಗುರುವು ಸೂರ್ಯನಿದ್ದಂತೆ. ಆತನ ಉಪದೇಶ ಎಲ್ಲ ಮಕ್ಕಳ ಮೇಲೂ ಸಮಾನವಾಗಿ ಇರುತ್ತದೆ. ಆದರೆ ಯಾವ ವಿದ್ಯಾರ್ಥಿ ಅದನ್ನು ಎಷ್ಟು ಬೇಗ ಗ್ರಹಿಸುತ್ತಾನೆ ಎಂಬುದು ಮುಖ್ಯ. ನಿಮ್ಮ ಮಗುವಿನ ಕಲಿಕಾ ಸಾಮರ್ಥ್ಯ ಹೆಚ್ಚಿಸಬೇಕಾಗಿದ್ದದು ನಿಮ್ಮ ಕರ್ತವ್ಯ. ಇನ್ನು ಮುಂದೆ ಹೀಗಾಗದಂತೆ ನೋಡಿಕೊಳ್ಳಿ’ ಎಂದು ತಿಳಿಹೇಳಿದರು. ಇದನ್ನು ಪ್ರತಿಯೊಬ್ಬ ತಂದೆ-ತಾಯಿಯರೂ ಅರ್ಥಮಾಡಿಕೊಳ್ಳಬೇಕಿದೆ. ಮಗುವಿನ ಕಲಿಕಾ ಸಾಮರ್ಥ್ಯ ಇರುವುದು ಗುರುವಿನ ಬೋಧನೆಯಲ್ಲಲ್ಲ, ಸ್ವತಃ ಮಗುವಿನ ಕಲಿಕೆಯಲ್ಲಿ. ಆದ್ದರಿಂದ ಪರಿಸ್ಥಿತಿಯನ್ನು ದೂರದೆ ಸಮಸ್ಯೆಗಳಿದ್ದಲ್ಲಿ ಪರಿಹರಿಸಿಕೊಳ್ಳುವ ವಿಚಾರ ಮಾಡಬೇಕಷ್ಟೇ.
(ಲೇಖಕರು ಸಂಸ್ಕೃತ ಉಪನ್ಯಾಸಕರು)