

ರಾಜ್ಯದಲ್ಲಿ ಅದಿರು ನಿಕ್ಷೇಪ ಇರುವುದನ್ನು ಗುರುತಿಸಿದ ರಾಜನೊಬ್ಬ ಗಣಿಗಾರಿಕೆ ಆರಂಭಿಸಿದ. ಆ ಕೆಲಸ ಸಮರ್ಪಕವಾಗಿ ನಡೆಯಲು ಮೇಲ್ವಿಚಾರಕನನ್ನು ನೇಮಿಸಿ, ಎಲ್ಲ ಜವಾಬ್ದಾರಿಗಳನ್ನು ಆತನಿಗೆ ವಹಿಸಿದ. ನಾಯಕನ ಸಮರ್ಥ ಮೇಲ್ವಿಚಾರಣೆಯಲ್ಲಿ ಕೆಲಸ ಸರಾಗವಾಗಿ ಸಾಗುತ್ತಿತ್ತು. ಒಂದು ದಿನ ಒಬ್ಬ ಕೆಲಸಗಾರ ಬಂದು ‘ನನಗೆ ಇವತ್ತು ರಜೆ ಬೇಕು’ ಎಂದು ಕೇಳಿಕೊಂಡಾಗ, ನಾಯಕ ‘ಅರ್ಧ ದಿನ ಕೆಲಸ ಮಾಡಿ ಹೋಗಬಹುದು’ ಎಂದನು. ಈ ಸೂಚನೆಯಿಂದ ಬೇಸರಗೊಂಡ ಕೆಲಸಗಾರ, ನಾಯಕನನ್ನು ಶಪಿಸುತ್ತಾ ಮನೆಗೆ ಹೋದ. ಅಂದು ಹಗಲು ಕಳೆದು ಕತ್ತಲಾದರೂ ಉಳಿದ ಕೆಲಸಗಾರರು ಮನೆಗೆ ಬರದೇ ಇದ್ದಿದ್ದನ್ನು ನೋಡಿ ಅಚ್ಚರಿಗೊಂಡ. ಮಧ್ಯರಾತ್ರಿ ಮನೆ ಸೇರಿದ ಪಕ್ಕದ ಮನೆಯವರ ಬಳಿ ‘ಏಕೆ ತಡವಾಯಿತು..?’ ಎಂದು ಪ್ರಶ್ನಿಸಿದಾಗ, ‘ನಾಳೆಯಿಂದ ಜೋರು ಮಳೆಯಂತೆ, ಆಗ ಕೆಲಸ ಮಾಡುವುದು ನಮ್ಮ ಜೀವಕ್ಕೆ ಅಪಾಯ ತರಬಹುದೆಂದು ನಮ್ಮ ಮೇಲ್ವಿಚಾರಕರು, ಹೆಚ್ಚಿನ ಸಮಯ ಕೆಲಸ ಮಾಡಿ, ನಾಳೆ ರಜೆ ನೀಡುತ್ತೇನೆ ಎಂದು ವಿನಂತಿಸಿಕೊಂಡರು.
ಅವರ ಮಾತಿಗೆ ಒಪ್ಪಿ ನಾವು ಇವತ್ತು ತಡರಾತ್ರಿಯವರೆಗೆ ಕೆಲಸ ಮಾಡಿದೆವು. ನಮ್ಮ ಜೀವದ ಮೇಲೆ ಕಾಳಜಿ ತೋರುವ ನಮ್ಮ ಮೇಲ್ವಿಚಾರಕರು ಎಷ್ಟು ಒಳ್ಳೆಯವರು..’ ಎಂದು ಹೊಗಳಿದರು. ಆಗ ಅಚ್ಚರಿಗೊಂಡ ಕೆಲಸಗಾರ ‘ಇಂತಹ ತುರ್ತು ಸಂದರ್ಭದಲ್ಲಿ ನನಗೆ ಕಾರಣ ಕೇಳದೆ ಹೇಗೆ ಅರ್ಧ ದಿನ ರಜೆ ನೀಡಿದರು’ ಎಂದು ಅಚ್ಚರಿಗೊಂಡ. ಬೆಳಗ್ಗೆ ಮೇಲ್ವಿಚಾರಕನನ್ನು ಭೇಟಿಯಾಗಿ ಕೇಳಿದಾಗ, ‘ರಾಜರು ಯಾರಿಗೂ ರಜೆ ನೀಡದೇ ವೇಗವಾಗಿ ಕೆಲಸ ಮುಗಿಸಿ ಎಂದು ಅದೇಶಿಸಿದ್ದರು. ಜೊತೆಗೆ ಅಕಾಲಿಕ ಮಳೆಯಿಂದ ಇಷ್ಟು ದಿನದ ಪರಿಶ್ರಮ ವ್ಯರ್ಥವಾಗಬಾರದು ಎನ್ನುವ ಉದ್ದೇಶ ನಮ್ಮದಾಗಿತ್ತು. ಆದರೆ, ನಿತ್ಯವೂ ಪ್ರಾಮಾಣಿಕವಾಗಿ ಕೆಲಸ ಮಾಡುವ ನೀನು ಅಪರೂಪಕ್ಕೆ ರಜೆ ಕೇಳಿದಾಗ ಅರ್ಧ ದಿನವಾದರೂ ನೀಡಲೇಬೇಕು ಎಂದೆನ್ನಿಸಿತು’ ಎಂದನು. ಆಗ ಆ ಕೆಲಸಗಾರನಿಗೆ ತನ್ನ ನಾಯಕನ ಕುರಿತಾಗಿ ಮೊದಲು ಇದ್ದ ಅಸಮಾಧಾನ, ಕೋಪ ಕರಗಿ ಗೌರವ ಹೆಚ್ಚಾಯಿತು.
ಎಷ್ಟೋ ಸಲ ನಮ್ಮ ಹಿತೈಷಿಗಳೇ ನಮಗೆ ಕೆಟ್ಟವರಾಗಿ ಕಾಣುವಂತಹ ಸನ್ನಿವೇಶಗಳು ಎದುರಾಗುತ್ತವೆ. ಎಷ್ಟೇ ಆಪ್ತತೆ ಇದ್ದರೂ ನಡುವೆ ಅನುಮಾನದ ಹೊಗೆ ಎದ್ದು ಮನಸ್ಸು ಕುಪಿತಗೊಳ್ಳುತ್ತದೆ. ಆದರೆ, ಅದೇ ಸನ್ನಿವೇಶವನ್ನು ವಿವಿಧ ದೃಷ್ಟಿಯಿಂದ ನೋಡಿದಾಗ ಅಲ್ಲೊಂದು ಸಮಾಧಾನದ ಗಾಳಿ ಖಂಡಿತ ಬೀಸುತ್ತದೆ. ಪ್ರತ್ಯಕ್ಷ ಕಂಡರೂ ಪ್ರಮಾಣಿಸಿ ನೋಡು ಎಂಬಂತೆ ಸಹ್ಯವಲ್ಲದ ಸಾದೃಶ್ಯ ಕಣ್ಣೆದುರಿಗಿದ್ದರೂ ಅದಕ್ಕೆ ಕೊಂಡಿಯಾಗಿದ್ದ ಅದೃಶ್ಯ ಸಂಗತಿಗಳ ಕುರಿತಾಗಿ ವಿವೇಚಿಸಿಸುವ ಮನೋಭಾವ ಬೆಳೆಸಿಕೊಂಡರೆ ಲೇಸು.
ಮನವೇ ದುಡುಕಿ ನೋಯದಿರು
ಸತ್ಯಶೋಧನೆಯ ಮರೆಯದಿರು
ವಿವೇಚನೆಯಿಂದ ಶಾಶ್ವತವು ನೆಮ್ಮದಿ
ಶಮನವಾಗ ಎದೆಯ ಒಳಗುದಿ
(ಲೇಖಕರು ಶಿಕ್ಷಕರು, ಹವ್ಯಾಸಿ ಬರಹಗಾರರು)