ಸೌಂದರ್ಯ ಯಾವುದರಲ್ಲಿದೆ?: ಮನೋಲ್ಲಾಸ

God
Published on
| ಚಿದಂಬರ ಮುನವಳ್ಳಿ 
ಉಪನ್ಯಾಸಕರೊಬ್ಬರು ಕಾರ್ಯಕ್ರಮ ನೀಡಲು ಆಫ್ರಿಕಾ ಖಂಡದಲ್ಲಿರುವ ತಾಂಝಾನಿಯಾ ದೇಶದ ರಾಜಧಾನಿ ದಾರ್ ಏ ಸಲಾಂಗೆ ತೆರಳಿದ್ದರು. ಅಲ್ಲಿಯ ಆಯೋಜಕರು ಅವರನ್ನು ವಿಮಾನನಿಲ್ದಾಣದಲ್ಲಿ ಸ್ವಾಗತಿಸಿ ಅವರು ತಂಗುವ ವ್ಯವಸ್ಥೆ ಮಾಡಿದ್ದ ಹೋಟೆಲ್​ಗೆ ಕಾರಿನಲ್ಲಿ ಕರೆದುಕೊಂಡು ಹೋಗುತ್ತಿರುವಾಗ ರಸ್ತೆಯ ಇಕ್ಕೆಲಗಳಲ್ಲಿ ಯುವತಿಯೊಬ್ಬಳ ಬ್ಯಾನರ್ ಹಾಕಿದ್ದು ಕಾಣಿಸಿತು. ಯಾವುದೋ ಚುನಾವಣೆ ಪ್ರಚಾರವೋ, ಸಮಾಜದಲ್ಲಿ ಸಾಧನೆ ಮಾಡಿದವರದೋ ಇರಬಹುದೆಂದು ಅವರು ಅದರ ಬಗ್ಗೆ ವಿಶೇಷ ಲಕ್ಷ್ಯ ಕೊಡದೆ ಕೋಣೆಗೆ ಹೋಗಿ ವಿಶ್ರಾಂತಿ ಪಡೆದರು.

ಮರುದಿನ ಬೆಳಗ್ಗೆ ಆಯೋಜಕರು ಇವರ ಕಾರ್ಯಕ್ರಮವಿರುವ ಸುದ್ದಿ ಬಂದಿರುವುದನ್ನು ಅವರಿಗೆ ತೋರಿಸಲು ಸಮಾಚಾರ ಪತ್ರಿಕೆ ತಂದಿದ್ದರು. ಅದನ್ನು ತೆರೆದು ನೋಡಿದರೆ ಮುಖಪುಟದಲ್ಲಿ ನಿನ್ನೆ ನೋಡಿದ ಯುವತಿಯ ದೊಡ್ಡ ಫೋಟೋ ಇತ್ತು . ಅದರ ಕೆಳಗೆ, ‘ಹತ್ತು ಸುಂದರಿಯರ ನಡುವೆ ಆಯ್ಕೆಯಾದ ಈ ದೇಶದ ಅತ್ಯಂತ ಸುಂದರಿ ಮಿಸ್ ತಾಂಝಾನಿಯಾ’ ಎಂದು ಬರೆದಿತ್ತು. ಇದನ್ನು ನೋಡಿ ಅವರಿಗೆ ಆಶ್ಚರ್ಯ. ವಿಚಿತ್ರ ಮುಖಚರ್ಯು, ಕಪ್ಪುಬಣ್ಣ, ಜೊತೆಗೆ ಸೌಂದರ್ಯವತಿ ಎನ್ನಿಸಿಕೊಳ್ಳಬೇಕಾದ ಯಾವ ಲಕ್ಷಣಗಳೂ ಇಲ್ಲದ ಅವಳನ್ನು ಅದ್ಹೇಗೆ ಆರಿಸಿರಬಹುದು? ಆಯೋಜಕರು ಹೇಳಿದರು- ‘ನಿನ್ನೆ ಅವಳನ್ನು ನೋಡಲು ಎಷ್ಟೊಂದು ಜನಜಂಗುಳಿ ಇತ್ತೆಂದರೆ ಇಲ್ಲಿ ಕಾಲಿಡಲು ಸ್ಥಳವಿರಲಿಲ್ಲ. ಅವಳೇನಾದರೂ ರಸ್ತೆಯಲ್ಲಿ ಹೊರಟರೆ ಇಲ್ಲಿಯ ಜನರು ಹುಚ್ಚರಾಗಿ ಅವಳ ಹಿಂದೆ ಬೆನ್ನುಹತ್ತಿ ಓಡುವರು’. ‘ಹೌದಾ! ನಮ್ಮ ದೇಶದಲ್ಲಿ ಆಗಿದ್ದರೆ ಬಹುಷಃ ಯಾವ ಹುಚ್ಚನೂ ಇವಳ ಕಡೆಗೆ ತಿರುಗಿ ನೋಡುತ್ತಿರಲಿಲ್ಲವೇನೋ’ ಎಂದು ಇವರಿಂದ ಉದ್ಘಾರ ಬಂತು. ಅಲ್ಲಿಯ ಜನರ ಸೌಂದರ್ಯದ ಪರಿಕಲ್ಪನೆಯೇ ಬೇರೆ. ನಮ್ಮದೇ ಬೇರೆ.

ಲಂಕೆಯ ಮೇಲೆ ವಿಜಯ ಸಾಧಿಸಿ ಶ್ರೀರಾಮನು ಸೀತಾಮಾತೆಯನ್ನು ಕರೆದುಕೊಂಡು ಬರುವಾಗ ಅವಳನ್ನು ನೋಡುವ ಕುತೂಹಲದಿಂದ ಕಪಿಸೈನ್ಯದ ಹೆಂಡಂದಿರು ಒಂದು ಕಡೆ ಸಭೆ ಸೇರಿದ್ದರು. ಸೀತಾಮಾತೆ ಬರುತ್ತಲೇ ಒಂದು ಹೆಣ್ಣು ಮಂಗವು ನುಡಿಯಿತು. ‘ಗೌರೀತನುರ್ ನಯನ ಮಾಯತ ಉನ್ನತಾಚ, ನಾಸಾ ಕೃತಾ ಕಟೀತಟೀಚ ಪತೀ ವಿಚಿತ್ರಾ, ಅಂಗಾನಿ ಲೋಮ ರಹಿತಾನಿ , ಹಿತಾಯ ಭರ್ತಹು. ಪುಚ್ಛಮ್ ನ ತುಚ್ಛಮಪಿ ಕುತ್ರ ಸಮಸ್ತ ವಸ್ತು’ ‘ಶರೀರದ ತುಂಬ ಸಮೃದ್ಧವಾದ ಕೂದಲುಗಳಿಲ್ಲದ, ಬರೇ ಬಿಳಿಚರ್ಮ, ದೊಡ್ಡದಾದ ಕಣ್ಣುಗಳು, ಚೂಪುಮೂಗು, ಕೃಶವಾದ ದೇಹ, ಮೈಮೇಲೆ ವಸ್ತ್ರ ಧರಿಸಿದ, ಸ್ವಲ್ಪ ಕೂಡ ಬಾಲವಿಲ್ಲದ ಇವಳೆಂಥ ಸುಂದರಿ? ನಾವೇ ನಿಜವಾದ ಸುಂದರಿಯರು’ ಎಂದಿತು. ಸೌಂದರ್ಯವು ವ್ಯಕ್ತಿ ಅಥವಾ ವಸ್ತುವಿನಲ್ಲಿ ಇರುವುದಿಲ್ಲ. ಅದು ನೋಡುವವನ ಕಣ್ಣುಗಳಲ್ಲಿರುತ್ತದೆ. ವ್ಯಕ್ತಿ ಅಥವಾ ಒಂದು ಗುಂಪಿನ ಜನರಿಂದ ಆ ಅಸ್ತಿತ್ವದ ಮೇಲೆ ಸೌಂದರ್ಯವನ್ನು ಹೊದಿಸಲಾಗುತ್ತದೆ. ಜಗತ್ತಿನ ಜನರು ವಿವಿಧ ಕಲ್ಪನಾ ಸೌಂದರ್ಯಗಳ ಕಡೆಗೆ ಓಡುವ ವಿನೋದವನ್ನು ನೋಡುತ್ತ ಕುಳಿತಿರುವ ಆ ಜಗನ್ನಿಯಾಮಕನು ಮಾತ್ರ ಸರ್ವಕಾಲಿಕ ಸುಂದರವಾಗಿರಬಹುದಲ್ಲವೇ?

(ಲೇಖಕರು ನಿವೃತ್ತ ಬ್ಯಾಂಕ್ ಅಧಿಕಾರಿ)

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net