ಆರೋಗ್ಯ ತತ್ತ್ವ ಬಿತ್ತಿದ ಮಂಕುತಿಮ್ಮನ ಕಗ್ಗ

Mankuthimmana Kagga
Published on
ಭಾರತೀಯ ಸಾಹಿತ್ಯ ಕ್ಷೇತ್ರದಲ್ಲೊಂದು ವಿಶೇಷತೆಯಿದೆ. ನಮ್ಮ ದೇಶವನ್ನಾಳಿದ ವಿದೇಶೀಯರ ನೇರ ಪ್ರಭಾವದ ಹೊರತಾಗಿಯೂ ದೇಶೀಯ ವೈದ್ಯ ವಿಜ್ಞಾನದ ವಿಚಾರಗಳನ್ನು ಸಾಹಿತ್ಯದಲ್ಲೂ ಅಳವಡಿಸಿಕೊಂಡು ಹೆಜ್ಜೆ ಹಾಕುತ್ತಾ ಸಾಗಿದೆ. ರಸಗಳು ನಾಲ್ಕು ಎಂದು ವಿದೇಶೀ ಜ್ಞಾನವಾಹಿನಿ ಹೇಳುತ್ತಿದ್ದರೂ ಭಾರತೀಯ ಸಾಹಿತ್ಯದಲ್ಲಿ ಷಡ್ರಸ ಎಂಬ ಪದ ಪ್ರಯೋಗವೇ ಇದೆ. ಭಾರತೀಯ ಜನಪದಕ್ಕೆ ಅರಿತಿರುವ ಆಯುರ್ವೆದ ವಿಚಾರಧಾರೆಯನ್ನೂ ಸಾಹಿತ್ಯ ಕೃತಿಗಳಲ್ಲಿ ವಿಫುಲವಾಗಿ ಬಳಸಿರುವುದು ಕಾಣಸಿಗುತ್ತದೆ. ಈ ದೃಷ್ಟಿಕೋನದಿಂದ ನೋಡುವುದಾದರೆ ಚರಕ ಸಂಹಿತೆ, ಸುಶ್ರುತ ಸಂಹಿತೆ ಮೊದಲಾದ ಗ್ರಂಥಗಳಷ್ಟೇ ಅಲ್ಲದೆ, ಪ್ರತ್ಯಕ್ಷವಾಗಿ, ಪರೋಕ್ಷವಾಗಿ ಭಾರತೀಯ ಸಾಹಿತ್ಯ ಕ್ಷೇತ್ರವೂ ಆಯುರ್ವೆದ ವಿಚಾರಗಳನ್ನು ಜನರೊಂದಿಗೆ ಹಂಚಿಕೊಂಡಿವೆ.

ಭಾರತೀಯ ಸಂಸ್ಕೃತಿ, ಪರಂಪರೆ, ಜೀವನ ಉನ್ನತಿಯ ದಾರಿ, ಸಮಾಜದ ವಿವಿಧ ಆಯಾಮಗಳನ್ನು ಅಸದೃಶ ರೀತಿಯಲ್ಲಿ ಪ್ರಸ್ತುತಗೊಳಿಸಿದ ಡಿ.ವಿ.ಜಿ. ಯವರ ‘ಮಂಕುತಿಮ್ಮನ ಕಗ್ಗ’ದಲ್ಲೂ ಆರೊಗ್ಯಕ್ಕೆ ಸಂಬಂಧಿಸಿದ ಹಲವು ವಿಚಾರಗಳು ಹಾಸು ಹೊಕ್ಕಾಗಿವೆ. ಹಾಗೆ ನೋಡಿದರೆ ಕನ್ನಡದ ಭಗವದ್ಗೀತೆಯೆಂದೇ ಪ್ರಸಿದ್ಧಿ ಪಡೆದ ಕಗ್ಗದ ಪ್ರತಿ ಪದ್ಯದಲ್ಲೂ ಸ್ವಂತ ಸ್ವಾಸ್ಥ್ಯ, ಸಮಾಜದ ಸ್ವಾಸ್ಥ್ಯ ಎರಡೂ ಅಡಗಿದೆ. ‘ಮೆಣಸು ಹಿಪ್ಪಲಿ ಶುಂಠಿ ಜೀರಿಗೆಗಳೆಲ್ಲ ಸರಿ ಅನುವಪ್ಪುದೊಂದೊಂದು ರೋಗ ಕೊಂದೊಂದು ನಿನಗಮಂತೆಯೆ ನೂರು ನೀತಿ ಸೂತ್ರಗಳಿರಲು ಅನುವನರಿವುದೆ ಜಾಣು ಮಂಕುತಿಮ್ಮ||’ ಎಂಬ ಕಗ್ಗದಲ್ಲಿ ಸಾಂಬಾರ ಪದಾರ್ಥಗಳು ಔಷಧೀಯ ಗುಣಧರ್ಮ ಗಳಿಂದ ಕೂಡಿವೆ. ಪ್ರತಿಯೊಂದೂ ಬೇರೆಬೇರೆ ರೋಗಗಳನ್ನು ಗುಣಪಡಿಸಬಲ್ಲದು. ಶರೀರದ ದೋಷನಾಶಕ್ಕೆ ಸೂಕ್ತವಾಗಿ ಬಳಸಿದರೆ ರೋಗಮುಕ್ತಿಯಾಗುವುದು. ಅದೇರೀತಿ ನಾನಾ ವಿಧವಾದ ಜೀವನ ದೋಷಗಳನ್ನು ಸರಿಪಡಿಸಲು ನೂರಾರು ನೀತಿಸೂತ್ರಗಳಿವೆ. ಸಮರ್ಪಕ ಹೊಂದಾಣಿಕೆ ಮಾಡುವುದರಲ್ಲಿ ಜಾಣತನವಿದೆ ಎಂದು ಮಾರ್ವಿುಕವಾಗಿ ಹೇಳಲಾಗಿದೆ. ‘ವನಜಂತುಗಳ ಸಸ್ಯಮೂಲಿಕಾಹಾರದಿಂ ಗುಣವನರಿತವರಾದಿ ವೈದ್ಯರೌಷಧದೊಳ್...’ ಎಂಬ ಪದ್ಯದಲ್ಲಿ ಆಯುರ್ವೆದದ ಹುಟ್ಟಿನ ಸೂಕ್ಷ್ಮವನ್ನೇ ಬಣ್ಣಿಸಲಾಗಿದೆ.

ಅರಣ್ಯದಲ್ಲಿರುವ ಪ್ರಾಣಿಪಕ್ಷಿಗಳಿಗೆ ಔಷಧವನ್ನು ನೀಡಲು ವೈದ್ಯರು ಯಾರಿದ್ದಾರೆ? ಅವು ಕಾಡಿನಲ್ಲಿರುವ ಮರಗಿಡಗಳನ್ನು ಹಾಗೂ ಗಡ್ಡೆಗೆಣಸುಗಳನ್ನೇ ಆಹಾರವಾಗಿ ಸೇವಿಸುತ್ತಾ ತಮ್ಮ ಆರೋಗ್ಯಪಾಲನೆಯನ್ನು ಮಾಡಿಕೊಳ್ಳುತ್ತವೆ. ಈ ವಿದ್ಯಮಾನವನ್ನು ಕೂಲಂಕಷವಾಗಿ ಅವಲೋಕಿಸಿದ ಪ್ರಾಚೀನ ವೈದ್ಯರು ಗಿಡಮೂಲಿಕೆಗಳ ಔಷಧೀಯ ಗುಣಗಳನ್ನು ಸಮಗ್ರವಾಗಿ ತಿಳಿದುಕೊಂಡರು. ಸಸ್ಯಾಧಾರಿತ ಆಯುರ್ವೆದ ಚಿಕಿತ್ಸೆಯ ಮೂಲವಿರುವುದೇ ಇಲ್ಲಿ! ನೀರಸವಾದ ಚರ್ಚೆಗಳಿಂದ ಪ್ರಯೋಜನವಿಲ್ಲ. ವಿವಿಧ ರಸಗಳ ಅನುಭವದಿಂದ ಜೀವನಕ್ಕೆ ಅನೇಕ ಪಾಠಗಳು ಸಿಗುತ್ತವೆ. ದೇಹಕ್ಕೆ ಸಸ್ಯರಾಶಿ ಔಷಧವಾಗಿ ಒದಗುವಂತೆ ಬದುಕಿನ ರೋಗಗಳಿಗೆ ರಸಾನುಭವವೇ ದಿವ್ಯೌಷಧಿ. ‘ಉಪ್ಪಿಷ್ಟು ಹುಳಿಯಿಷ್ಟು ಕಾರ ಸಿಹಿಯಷ್ಟಿಷ್ಟು’ ಎಂಬ ಕಗ್ಗದಲ್ಲಿ ಆಹಾರ ಪದಾರ್ಥಗಳು ಎಲ್ಲಾ ರುಚಿಗಳಿಂದ ಕೂಡಿರಬೇಕು. ಕೆಲವು ಹೆಚ್ಚು, ಕೆಲವು ಕಡಿಮೆ. ಆಗಲೇ ರುಚಿಯಾದ ಭೋಜ್ಯ ತಯಾರಾಗುತ್ತದೆ. ಬದುಕಿನಲ್ಲೂ ಅಷ್ಟೇ. ತಪ್ಪು ಗುಣ, ಒಳ್ಳೆಯ ಗುಣ, ಕುಂದು-ಕೊರತೆ ಎರಡೂ ಸೇರಿರುತ್ತದೆ. ಹಾಗಿದ್ದರೆ ಮಾತ್ರ ಜೀವನ ರುಚಿಕರವಾಗಿ ಇರುತ್ತದೆ ಎನ್ನುತ್ತಾ ಆಹಾರ ರಸಗಳ ಮೂಲಕ ಬದುಕಿನ ಚಿತ್ರಣವನ್ನೇ ನೀಡಲಾಗಿದೆ. ಬದುಕಿನಲ್ಲಿ ಬರುವ ಸುಖಗಳೂ, ಅದನ್ನು ಅನುಭವಿಸುವ ಪರಿಯೂ ಯಾವ ತೆರನಾಗಿ ಇರುತ್ತದೆ ಎಂದು ಮಿಡಿಚೇಪೆ ಕಾಯಿಗಳ ಪದ್ಯದಲ್ಲಿ ವರ್ಣಿಸಲಾಗಿದೆ. ‘ಅಡಿಜಾರಿ ಬೀಳುವುದು’ ಎಂಬ ಕಗ್ಗದಲ್ಲಿ, ರುಚಿಯಾಗಿರುವ ಕಡುಬನ್ನು ಹೊಟ್ಟೆತುಂಬ ತಿಂದು ಹೊಟ್ಟೆ ಉಬ್ಬರಿಸಿದಾಗ ಕಹಿಮದ್ದು ಕುಡಿದು ಸರಿಪಡಿಸಿಕೊಳ್ಳುತ್ತೇವೆ; ಅಜಾಗರೂಕತೆಯಿಂದ ತಪ್ಪೆಸಗಿದಾಗ ಅದನ್ನು ಒಪ್ಪಿಕೊಳ್ಳದೆ ಇರುವುದು ಜನರ ಸ್ವಭಾವ ಎಂದು ಬದುಕಿಗೆ ಕನ್ನಡಿ ಹಿಡಿಯಲಾಗಿದೆ. ‘ರುಚಿಯೊಪ್ಪೆ ರಸನೆಗದು’ ಪದ್ಯದಲ್ಲಿ ನಾಲಿಗೆಗೆ ರುಚಿಕರ ಆಗಿರುವುದು ಹೊಟ್ಟೆಗೆ ನೋವು ನೀಡುತ್ತದೆ. ಚರ್ಮಕ್ಕೆ ಹಿತವೆನಿಸುವ ತಂಗಾಳಿಯಿಂದ ಎದೆಗೆ ಬೇನೆಯಾಗುವುದು. ದೇಹದೊಳಗೆ ಇಂತಹ ವೈಪರೀತ್ಯಗಳಿವೆ. ಹಾಗಾಗಿ ನಮಗೆ ಯಾವುದು ಉಚಿತ, ಯಾವುದು ಅನುಚಿತ ಎಂಬ ನಿರ್ಧಾರವನ್ನು ಅವರವರೇ ಮಾಡಿಕೊಳ್ಳಬೇಕು ಎಂಬ ಮಾರ್ಗದರ್ಶನವಿದೆ.

ನಮ್ಮ ಶರೀರ ಪ್ರಕೃತಿಗೆ ಹಾಗೂ ಕಾಲಕ್ಕನುಗುಣವಾಗಿ ಆಹಾರವನ್ನು ಯೋಜಿಸಬೇಕು ಎಂದು ಆಯುರ್ವೆದ ಹೇಳುತ್ತದೆ. ಆಹಾರವು ದೇಹಕ್ಕೂ ಮನಸ್ಸಿಗೂ ಹಿತವಾಗಿರಬೇಕು. ಶರೀರದ ಆರೋಗ್ಯದಲ್ಲಿ ತುಸು ಏರುಪೇರುಗಳಾದಾಗ, ರೋಗರುಜಿನಗಳು ಬಾಧಿಸುತ್ತಿರುವಾಗ ಆಹಾರದ ಪರಾಮರ್ಶೆ ಮಾಡಿ ಯೋಗ್ಯವಾದುದನ್ನು ಸೇವಿಸಬೇಕು. ಅದನ್ನೇ ಇಲ್ಲಿ ಮನಸ್ಸಿಗೆ ನಾಟುವಂತೆ ಎರಡು ಸಾಲುಗಳಲ್ಲಿ ಹೇಳಲಾಗಿದೆ. ಇಂತಹ ಹಲವಾರು ಕಗ್ಗಗಳು ಸ್ವಾಸ್ಥ್ಯದ ಕುರಿತು ಬೆಳಕು ಚೆಲ್ಲುತ್ತವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net